ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ನವೆಂಬರ್ 11, 2013

ಭಕ್ತಿಯೆಂಬ ಭಾವ

ಭಕ್ತಿಯೆಂಬುದು ಕೇಳು ಒಳಗಿರುವ ಭಾವ 
ಅಂತರಂಗದೊಳಿರುವ ಪ್ರೇಮಪ್ರವಾಹ |
ಮನವ ಮುದಗೊಳಿಪ ಆನಂದಭಾವ
ಭಕ್ತಿಯಲೆ ಆನಂದ ಭಕ್ತನಿಗೆ ಮೂಢ ||
     'ಸಂಕಟ ಬಂದಾಗ ವೆಂಕಟರಮಣ!' ಮನುಷ್ಯನಿಗೆ ಕಷ್ಟಗಳು, ದುಃಖಗಳು ಬಾರದಿದ್ದರೆ ಅವನು ದೇವರನ್ನು ಸ್ಮರಿಸುತ್ತಿದ್ದನೋ ಇಲ್ಲವೋ ಎಂಬುದು ಯೋಚಿಸಬೇಕಾದ ವಿಷಯವೇ. ಇರಲಿ ಬಿಡಿ, ಸದ್ಯಕ್ಕೆ ಇದನ್ನು ಒಂದು ಪಕ್ಕಕ್ಕೆ ಇಟ್ಟುಬಿಡೋಣ. ಭಕ್ತಿಯ ಕುರಿತು ಚರ್ಚಿಸುವ ಪೂರ್ವದಲ್ಲಿ ಪೂರಕವಾದ ಮೂಲ ಸಂಗತಿಗಳ ಬಗ್ಗೆ ಗಮನಹರಿಸಲೇಬೇಕು. ಜ್ಞಾನ, ಕರ್ಮ ಮತ್ತು ಉಪಾಸನೆಗಳು ನಾಗರಿಕ ಮಾನವಧರ್ಮದ ಮೂರು ಅಭಿನ್ನ ಅಂಗಗಳೆಂದು ಹೇಳುತ್ತಾರೆ. ಈ ಮೂರೂ ಒಂದಕ್ಕೊಂದು ಪೂರಕವಾಗಿವೆ. ಮಾನವನಿಗೂ ಇನ್ನಿತರ ಪಶು, ಪಕ್ಷಿ, ಕ್ರಿಮಿ, ಕೀಟಗಳಿಗೂ ಇರುವ ಎದ್ದು ಕಾಣುವ ವ್ಯತ್ಯಾಸವೆಂದರೆ ಮಾನವನಿಗೆ ವಿವೇಚನೆ ಮಾಡುವ ಶಕ್ತಿಯಿದೆ. ಆತ ತನಗನ್ನಿಸಿದ್ದನ್ನು ಮಾಡಬಲ್ಲ, ಮಾಡದಿರಲೂ ಬಲ್ಲ, ಇನ್ನೇನನ್ನೋ ಮಾಡಬಲ್ಲ. ಏನು, ಏಕೆ, ಹೇಗೆ ಇತ್ಯಾದಿಗಳನ್ನು ಕೇಳುವ, ತಿಳಿದುಕೊಳ್ಳುವ ಶಕ್ತಿ ಅವನಿಗೆ ಇದ್ದು, ತನ್ನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಜ್ಞಾನಸಂಪತ್ತು ಹೆಚ್ಚಿಸಿಕೊಳ್ಳುವ ಸೌಭಾಗ್ಯ ಅವನಿಗೆ ಇದೆ. ಇಂತಹ ಆಸಕ್ತಿ ಇಲ್ಲದವರ ಮಾನಸಿಕ ಬೆಳವಣಿಗೆ ಕುಂಠಿತವಾಗಿ ಆಕಾರದಲ್ಲಿ ಮಾತ್ರ ಮಾನವರಾಗಿರುವರೂ ಇರುತ್ತಾರೆ. ಅಜ್ಞಾನದ ಅಂಧಕಾರವನ್ನು ಕಳೆದುಕೊಳ್ಳಲು, ದುರಾಚಾರದಿಂದ ಸದಾಚಾರಕ್ಕೆ ಬದಲಾಗಲು, ಇರುವ ಸ್ಥಿತಿಗಿಂತ ಮೇಲಕ್ಕೇರಲು ಜ್ಷಾನ ನೆರವಾಗುತ್ತದೆ.
     ತಿಳಿವಳಿಕೆಯಿದೆ, ಆದರೆ ಅದು ಆಚರಣೆಗೆ ಬರುವುದಿಲ್ಲವೆಂದರೆ ಅದಕ್ಕೆ ಅರ್ಥವಿಲ್ಲ. ಹೀಗಾಗಿ ಕರ್ಮ ಮಾನವಧರ್ಮದ ಮತ್ತೊಂದು ಅಮೂಲ್ಯ ಭಾಗ. ಜ್ಞಾನ ಅನ್ನುವುದು ಮಾನವಧರ್ಮದ ತಲೆಯಿದ್ದಂತೆ ಅನ್ನುವುದಾದರೆ, ಕರ್ಮವನ್ನು ಅದರ ಕೈಕಾಲುಗಳು ಅನ್ನಬಹುದು. ಜ್ಞಾನ ಆಚರಣೆಗೆ ಬರದಿದ್ದರೆ ಅದೊಂದು ಸಿದ್ಧಾಂತ ಅಥವ ತತ್ವವಾಗಿಯೇ ಉಳಿಯುತ್ತದೆ. ಕರ್ಮವಿಲ್ಲದ ಧರ್ಮ ಕೈಕಾಲುಗಳಿಲ್ಲದ ಅಂಗವಿಕಲನಂತೆ ಅರ್ಥ ಕಳೆದುಕೊಳ್ಳುತ್ತದೆ. ಶರೀರ ಮತ್ತು ಆತ್ಮ ಒಟ್ಟಿಗೆ ಇರುವವರೆಗೆ ಆಹಾರ, ಬಟ್ಟೆ, ಆಶ್ರಯ ಇತ್ಯಾದಿಗಳಿಗಾಗಿ ಕೆಲಸ ಮಾಡಲೇಬೇಕು. ಇವನ್ನೆಲ್ಲಾ ಪಡೆಯಲು ಸುತ್ತಲಿನ ಸಮಾಜದ ಅವಲಂಬಿಗಳಾಗುತ್ತೇವಾದ್ದರಿಂದ, ಇವುಗಳನ್ನು ಕೊಡುವ ಸಮಾಜಕ್ಕೆ ಪ್ರತಿಯಾಗಿ ಏನೂ ಮಾಡದಿದ್ದರೆ ಪಾಪವಲ್ಲದೇ ಮತ್ತೇನು? ಕರ್ಮ ಮಾಡದವನು ಸಮಾಜದ ಋಣ ಉಳಿಸಿಕೊಂಡು ಸಮಾಜದ್ರೋಹಿಯಾಗುವುದಲ್ಲದೆ, ಆಧ್ಯಾತ್ಮಿಕ ಉನ್ನತಿ ಹೊಂದಲೂ ಅನರ್ಹನಾಗುತ್ತಾನೆಂದರೆ ತಪ್ಪಿಲ್ಲ. ಹೀಗಾಗಿ ಕರ್ಮ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ.
     ಈಗ ವಿಷಯಕ್ಕೆ ಬರೋಣ. ಮಾನವಧರ್ಮದ ಮೂರನೆಯ ಮಹತ್ತಾದ ಭಾಗ ಉಪಾಸನೆ. ಉಪಾಸನಾ ಪದದ ಅರ್ಥ ಉಪ+ಆಸನಾ, ಹತ್ತಿರ ಕುಳಿತುಕೊಳ್ಳುವುದು ಎಂದು. ಭಗವಂತನಿಗೆ ಹತ್ತಿರವಾಗಿರುವುದು ಎಂದರೆ ಭಗವಂತ ನಮ್ಮಿಂದ ದೂರದಲ್ಲಿದ್ದಾನೆಂದು ಅರ್ಥವಲ್ಲ. ಎಲ್ಲೆಲ್ಲೂ ಇರುವ ದೇವರು ನಮ್ಮಿಂದ ದೂರವಿರಲು ಹೇಗೆ ಸಾಧ್ಯ. ಆದರೆ ಹುಲುಮನುಜರಾದ ನಾವು ಮಾನಸಿಕವಾಗಿ ಅವನಿಂದ ದೂರವಿದ್ದೇವಷ್ಟೆ. ಈ ಜ್ಞಾನಸಂಬಂಧಿತ ದೂರವನ್ನು ಕಡಿಮೆ ಮಾಡಿಕೊಳ್ಳುವುದೇ ಉಪಾಸನೆಯ ಮೂಲ ಉದ್ದೇಶ. ದಿನದ ಕೆಲ ಸಮಯವಾದರೂ ಮನಸ್ಸನ್ನು ಧ್ಯಾನ, ಅರ್ಚನೆ, ಇತ್ಯಾದಿಗಳ ಮೂಲಕ ಮನಸ್ಸನ್ನು ಕೇಂದ್ರೀಕರಿಸಿ ದೇವರಿಗೆ ಮಾನಸಿಕವಾಗಿ ಹತ್ತಿರವಿರುವುದೇ ಇದರ ಗುರಿ. ಉಪಾಸನೆಯ ಅಗತ್ಯ ಕಾಣುವುದು ಇಲ್ಲಿಯೇ. ಈ ಉಪಾಸನೆಯನ್ನೇ ಭಕ್ತಿ, ಪೂಜೆ, ಅರ್ಚನೆ ಮುಂತಾದ ರೀತಿಯಲ್ಲೂ ಹೆಸರಿಸುತ್ತಾರೆ.  
ಭಕ್ತಿಯೆಂಬುದು ಪ್ರೀತಿ ಭಕ್ತಿಯೆಂಬುದು ರೀತಿ
ಬೇಕೆಂಬುದು ಭಕ್ತಿ ಬೇಡದಿಹುದೂ ಭಕ್ತಿ |
ರಾಗ ದ್ವೇಷಗಳು ಭಕ್ತಿ ನವರಸಗಳೂ ಭಕ್ತಿ
ನಿಜ ಭಾವಾಭಿವ್ಯಕ್ತಿ ಭಕ್ತಿ ಮೂಢ ||
    ಪರಮಾತ್ಮನನ್ನು ಅರ್ಥ ಮಾಡಿಕೊಳ್ಳುವುದು ಗುರಿ ಎಂದಿಟ್ಟುಕೊಂಡರೆ, ಅದನ್ನು ತಲುಪಲು ಪಡೆದುಕೊಳ್ಳುವ ಸಹಾಯವನ್ನು ಸಾಧನ (ಶ್ರವಣ, ಮನನ, ಮಥನ, ಮಂಥನ, ಇತ್ಯಾದಿ) ಮತ್ತು ಗುರಿ ತಲುಪಿದರೆ ಸಾಧನೆ ಎನ್ನಬಹುದು. ಈ ಪ್ರಯತ್ನದಲ್ಲಿರುವವರು ಸಾಧಕರು. ಗುರಿ ತಲುಪಿದಾಗ ಆಗುವ ಆನಂದವನ್ನು ಮೋಕ್ಷ ಅನ್ನಬಹುದು, ಅಥವ ಬೇರೆ ಯಾವುದೇ ಪದದಿಂದ ಗುರುತಿಸಬಹುದು. ಇಂತಹ ಸಾಧ್ಯ(ಗುರಿ), ಸಾಧನೆ, ಸಾಧನ, ಸಾಧಕರ ಮಧ್ಯದಲ್ಲಿ ಉದ್ಭವವಾಗುವುದೇ ಭಕ್ತಿ! ಭಕ್ತಿ ಹಲವಾರು ರೀತಿಯಲ್ಲಿ ಅಭಿವ್ಯಕ್ತವಾಗುತ್ತದೆ. ಭಕ್ತಿಯಲ್ಲಿ ಕೃತಜ್ಞತೆ, ಪ್ರೀತಿ, ಭಯ, ಕೋಪ, ವಾತ್ಸಲ್ಯ, ಬೇಸರ, ಮಮತೆ, ರೋಷ, ಅನುನಯ, ಆನಂದ, ದುಃಖ, ಇತ್ಯಾದಿ ಭಾವಗಳನ್ನು ಕಾಣಬಹುದು. ಈ ಅಖಂಡ ಜಗತ್ತನ್ನು ಸೃಷ್ಟಿಸಿ ಅದನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟ ಭಗವಂತನನ್ನು ಕೃತಜ್ಞತಾ ಭಾವದಿಂದ ಸ್ಮರಿಸಬಹುದು. ಅವನ ಕರುಣೆಯನ್ನು ನೆನೆದು ಅವನನ್ನು ಪ್ರೀತಿಸಬಹುದು. ಇಷ್ಟೊಂದು ಅಗಾಧ ಶಕ್ತಿಯನ್ನು, ಸೃಷ್ಟಿಯ ಬೃಹತ್ತತೆಯನ್ನು ಕಂಡು ಬೆರಗಾಗಿ ಭಯ ಪಡಲೂಬಹುದು, ಇತರರಿಗೆ ಕೊಟ್ಟ ಅವಕಾಶವನ್ನು ತನಗೆ ಕೊಡದ ಬಗ್ಗೆ ಕೋಪಿಸಿಕೊಳ್ಳಲೂಬಹುದು, ಅವನನ್ನು ಓಲೈಸಿ ಒಳಿತನ್ನು ಬೇಡಲೂಬಹುದು,. . . . ., ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇಂತಹ ಭಾವಗಳು ಭಕ್ತರ ಮನೋಭಾವವನ್ನು ಅವಲಂಬಿಸಿರುತ್ತದೆ. 'ಅವರವವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಭಗವಂತ' ಎಂಬ ಕವಿವಾಣಿ ಅದಷ್ಟು ಸಮಂಜಸವಾಗಿ ತೋರುತ್ತದೆ! ದೇವಸ್ಥಾನಗಳಲ್ಲಿ ಪ್ರದರ್ಶಿಸುವ ದಾನಿಗಳ ಪಟ್ಟಿ, ಭಕ್ತರು ಮಾಡಿಸಿಕೊಡುವ ಬಂಗಾರ, ಬೆಳ್ಳಿ, ವಜ್ರದ ಆಭರಣಗಳು ಮುಂತಾದವನ್ನು ಭಕ್ತಿಯ ಯಾವ ಪ್ರಾಕಾರಕ್ಕೆ ಸೇರಿಸಬೇಕು ಅನ್ನುವುದನ್ನು ಓದುಗರೇ ನಿರ್ಧರಿಸಿಕೊಳ್ಳಲಿ. ದೇವರಂತೂ ಏನನ್ನೂ ಬಯಸಲಾರ, ಬಯಸಿದರೆ ಅವನು ದೇವರಾಗಲಾರ. ಆದರೂ ಭಕ್ತರು ತಮ್ಮ ಭಕ್ತಿಯನ್ನು ತೋರ್ಪಡಿಸಿಕೊಳ್ಳುವ ರೀತಿಗಳಲ್ಲಿ ಇವೂ ಒಂದಾಗಿವೆ. 
     ಮೇಲೆ ಹೇಳಿದಂತೆ ಭಕ್ತಿಯಲ್ಲಿ ರಾಗ-ದ್ವೇಷಗಳೂ ಇವೆ, ನವರಸಗಳೂ ಇವೆ. ಹಿರಣ್ಯಕಶಿಪು ಮುಂತಾದ ಅಸುರರನ್ನು ದ್ವೇಷಭಕ್ತಿಗೆ ಉದಾಹರಿಸಬಹುದಾದರೆ ಹನುಮಂತನನ್ನು ದಾಸಭಕ್ತಿಗೆ ಹೆಸರಿಸಬಹುದು. ಗ್ರಾಮಗಳ ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡಿ ಪ್ರಸಾದ ಕೇಳಿ ಕುಳಿತ ಭಕ್ತ/ಭಕ್ತೆಯರನ್ನು ಗಮನಿಸಿದ್ದೀರಾ? (ಮನದಲ್ಲೇ ನೆನಸಿಕೊಂಡು ದೇವರ ವಿಗ್ರಹವನ್ನೇ ನೋಡುತ್ತಾ ಹೂವಿನ ಪ್ರಸಾದ ಕೇಳುವ ಪದ್ಧತಿಯಿದೆ. ಬಲಗಡೆ ಹೂವು ಬಿದ್ದರೆ ಶುಭ, ಎಡಗಡೆ ಬಿದ್ದರೆ ಅಶುಭ ಎಂದುಕೊಳ್ಳುತ್ತಾರೆ. ಇದರ ವೈಜ್ಞಾನಿಕ ವಿಶ್ಲೇಷಣೆ ಇಲ್ಲಿ ಅಪ್ರಾಸಂಗಿಕ). ಕೆಲವರು "ಏಕಪ್ಪಾ/ ಏಕಮ್ಮಾ ಇಷ್ಟೊಂದು ಸತಾಯಿಸುತ್ತಿಯಾ? ಆಗುವುದಾದರೆ ಪ್ರಸಾದ ಕೊಡು, ಆಗಲ್ಲಾ ಅಂತಲಾದರೂ ಹೇಳಿಬಿಡು" ಅಂತ ವಿಗ್ರಹದೊಂದಿಗೆ ಸಂಭಾಷಣೆಯನ್ನೂ ಮಾಡುತ್ತಿರುತ್ತಾರೆ. ಬರಬಾರದ ಕಷ್ಟ-ನಷ್ಟಗಳಾದಾಗ, 'ಈ ದೇವರು ಅನ್ನುವವನು ಇದ್ದಿದ್ದರೆ ನನಗೆ ಹೀಗೆ ತೊಂದರೆ ಕೊಡುತ್ತಿರಲಿಲ್ಲ. ಇನ್ನು ಅವನನ್ನು ಪೂಜೆ ಮಾಡುವುದಿಲ್ಲ' ಎಂದು ಘೋಷಿಸುವವರನ್ನೂ ನಾವು ಕಾಣುತ್ತಿರುತ್ತೇವೆ. ನಾವು ಮಾಡುವ ಕರ್ಮಗಳಿಗೆ ನಾವೇ ಹೊಣೆ, ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ನಮ್ಮ ಕರ್ಮಫಲಗಳನ್ನು ನಾವೇ ಅನುಭವಿಸಬೇಕು ಎಂದು ತಿಳಿದು ನಡೆಯುವ ನಿರ್ಲಿಪ್ತ ಭಕ್ತರನ್ನೂ ಕಾಣುತ್ತೇವೆ. ಕೆಡುಕನ್ನು ಯಾರಿಗೂ ಬಯಸದೆ, ಸಾಧ್ಯವಾದಷ್ಟೂ ಎಲ್ಲರ ಹಿತ/ಒಳಿತನ್ನೇ ಬಯಸುವ, ಪ್ರತಿಫಲ ಬಯಸದ ಭಕ್ತರ ಭಕ್ತಿ ಶ್ರೇಷ್ಠವಾದುದು ಎಂಬುದರಲ್ಲಿ ಎರಡು ಮಾತಿರಲಿಕ್ಕಿಲ್ಲ. 
     ಪ್ರಾಸಂಗಿಕವಾಗಿ ನೀವು ಕೇಳಿರಬಹುದಾದ ಒಂದು ಕಥೆ ಹೇಳುವೆ. ಒಬ್ಬ ವಿಷ್ಣು ಭಕ್ತ ಪ್ರವಾಸ ಮಾಡುತ್ತಾ ಹೋಗುತ್ತಿದ್ದಾಗ ದಾರಿಯಲ್ಲಿ ಹರಿಹರನ ವಿಗ್ರಹವಿರುವ ಒಂದು ದೇವಸ್ಥಾನ ಕಂಡ. ವಿಷ್ಣು-ಶಿವರಿಬ್ಬರೂ ಇರುವ ವಿಗ್ರಹಕ್ಕೆ ಪೂಜೆ ಮಾಡಲು ಅವನ ಮನಸ್ಸು ಒಪ್ಪಲಿಲ್ಲ. ಸರಿ, ತಾನು ಮಾಡುವ ಪೂಜೆಯನ್ನು ಶಿವ ನೋಡಬಾರದೆಂದು ಅವನ ಕಣ್ಣನ್ನು ಮುಚ್ಚಿದ, ಧೂಪದ ವಾಸನೆಯನ್ನು ಶಿವನ ನಾಸಿಕ ಗ್ರಹಿಸಬಾರದೆಂದು ಆ ಮೂಗಿನ ಹೊಳ್ಳೆಗೆ ಹತ್ತಿಯಿಟ್ಟ, ನೈವೇದ್ಯ ಸಿಗದಿರಲೆಂದು ಶಿವನ ಬಾಯಿಯ ಭಾಗ ಮುಚ್ಚಿದ, ಶಿವನ ಕಿವಿ ತನ್ನ ಪೂಜಾ ಮಂತ್ರ ಕೇಳಬಾರದೆಂದು ಕಿವಿಗೂ ಹತ್ತಿ ತುರುಕಿದ. ಹೀಗೆಲ್ಲಾ ಮಾಡಿ ಪೂಜೆ ಮುಗಿಸಿದಾಗ ಭಕ್ತನ ಎದುರು ಶಿವ ಪ್ರತ್ಯಕ್ಷನಾದ. ಭಕ್ತ ಅವನನ್ನು ಕುರಿತು, "ನೀನೇಕೆ ಬಂದೆ? ನಾನು ಪ್ರಾರ್ಥಿಸಿದ್ದು ವಿಷ್ಣುವನ್ನು" ಅಂದ. ಶಿವ ಹೇಳಿದ, "ಭಕ್ತಾ, ನೀನು ನಿನ್ನ ಪೂಜೆಯುದ್ದಕ್ಕೂ ವಿಷ್ಣುವನ್ನು ನೆನೆಸಲೇ ಇಲ್ಲ. ಬದಲಾಗಿ ನನಗೆಲ್ಲಿ ನಿನ್ನ ಪೂಜೆ ತಲುಪೀತೋ ಅಂತಲೇ ನನ್ನನ್ನೇ ನೆನೆಸುತ್ತಿದ್ದೆ. ನನ್ನನ್ನೇ ನೀನು ನೆನೆಯುತ್ತಿದ್ದರಿಂದ ನಾನು ಬಂದೆ!"
     ಭಕ್ತರಲ್ಲಿ ನಾಲ್ಕು ರೀತಿಯ ಭಕ್ತರಿದ್ದಾರೆಂದು ಭಗವದ್ಗೀತೆ ಹೇಳುತ್ತದೆ: ಆರ್ತ, ಅರ್ಥಾರ್ಥಿ, ಜಿಜ್ಞಾಸು, ಜ್ಞಾನಿ. ತನಗೆ ಇರುವ ತೊಂದರೆಯನ್ನು ಪರಿಹರಿಸಲು ಪ್ರಾರ್ಥಿಸುವವನು ಆರ್ತ, ಸಂಪತ್ತು, ಐಶ್ವರ್ಯ, ಇತ್ಯಾದಿ ಅನುಕೂಲಗಳನ್ನು ಬಯಸುವವನು ಅರ್ಥಾರ್ಥಿ, ಜ್ಞಾನ ಬಯಸುವವನು ಜಿಜ್ಞಾಸು ಮತ್ತು ಪ್ರತಿಯಾಗಿ ಏನನ್ನೂ ಬಯಸದೆ, ಅವನನ್ನು ಹೊಂದುವ ಪ್ರಯತ್ನದಲ್ಲೇ ಆನಂದ ಕಾಣುವವನು ಜ್ಞಾನಿ. ನಾರದ ಭಕ್ತಿ ಸೂತ್ರದಲ್ಲಿ ಭಕ್ತಿಯ ವಿವಿಧ ಮಜಲುಗಳನ್ನು ಹೇಳಲಾಗಿದೆ. (ಭಗವಂತನ ವಿಚಾರಗಳ ಕುರಿತು) ಶ್ರವಣಾಸಕ್ತಿ, ಅವನನ್ನು ಭಜಿಸುವ ಕೀರ್ತನಾಸಕ್ತಿ, ರೂಪಾಸಕ್ತಿ, ಪೂಜಾಸಕ್ತಿ, ದಾಸ್ಯಾಸಕ್ತಿ, ಸಖ್ಯಾಸಕ್ತಿ, ಆತ್ಮನಿವೇದನೆ, ಸಖ್ಯಭಾವ, ವಾತ್ಸಲ್ಯಭಾವ, ತನ್ಮಯಭಾವ, ವಿರಹಭಾವ, ಇತ್ಯಾದಿಗಳನ್ನು ಅಲ್ಲಿ ವಿವರಿಸಿದೆ. ಇರಲಿ, ಇವುಗಳನ್ನೆಲ್ಲಾ ವಿವರಿಸುತ್ತಾ ಹೋದರೆ ದೀರ್ಘ ಬರಹವಾಗುವುದು. ಲೋಕದ ಕಣ್ಣಿನಲ್ಲಿ ಹುಚ್ಚರಂತೆ ಕಂಡು ಬರುವ ಕೆಲವು ಅವಧೂತರು, ಸಾಧು-ಸಂತರ ಭಕ್ತಿಯನ್ನು ವಿವರಿಸಲು ಸಾಧ್ಯವೇ? ರಾಮಕೃಷ್ಣ ಪರಮಹಂಸರನ್ನೂ ಹುಚ್ಚರೆಂದು ಜರಿದವರಿಗೇನೂ ಕಡಿಮೆಯಿರಲಿಲ್ಲ.
     ನಿಷ್ಕಾಮ ಪ್ರೀತಿಯೆಂದರೆ ಯಾವುದೇ ಪ್ರತಿಫಲ ಬಯಸದೆ ದೇವರನ್ನು ಪೂಜಿಸುವುದು. ವಿವೇಕಾನಂದರು ಹೀಗೆ ಹೇಳುತ್ತಿದ್ದರು: "ನನ್ನ ಸ್ವಭಾವ 'ಅವನನ್ನು' ಪ್ರೀತಿಸುವುದು. ಆದ್ದರಿಂದ 'ಅವನನ್ನು' ಪ್ರೀತಿಸುತ್ತೇನೆ. ನಾನು ಯಾವುದಕ್ಕಾಗಿಯೂ ಪ್ರಾರ್ಥಿಸುವುದಿಲ್ಲ. ನಾನು ಯಾವುದನ್ನೂ ಬೇಡುವುದಿಲ್ಲ. 'ಅವನು' ನನ್ನನ್ನು ಎಲ್ಲಿಡಬಯಸುವನೋ ಅಲ್ಲಿ ಇಡಲಿ. ನಾನು ;ಅವನನ್ನು' ಪ್ರೀತಿಯ ಸಲುವಾಗಿ ಪ್ರೀತಿಸುತ್ತೇನೆ. ನಾನು ಪ್ರೀತಿಯಲ್ಲಿ ವ್ಯವಹರಿಸಬಯಸುವುದಿಲ್ಲ". ದೇವರು ಮತ್ತು ಭಕ್ತರ ನಡುವಣ ನೈಜ, ನಿಷ್ಕಾಮ ಪ್ರೀತಿಯ ಬಂಧ ವಾಸ್ತವವಾಗಿ ಮನುಷ್ಯನನ್ನು ಪ್ರಾಪಂಚಿಕ ಬಂಧನಗಳಿಂದ ಬಿಡಿಸುತ್ತದೆ. 
ದೇವನನು ಬಯಸುವ ಉತ್ಕಟತೆ ಭಕ್ತಿ
ಪ್ರೀತಿಯಾಮೃತದ ರಸಧಾರೆ ಭಕ್ತಿ |
ಭಕ್ತಿಯದು ಸಾಧಿಸಲು ಬೇರೇನು ಬೇಕಿಲ್ಲ
ಒಳಗೊಳಗೆ ಆನಂದ ಚಂದ ಮೂಢ ||
     ಭಕ್ತಿ ದೇವರನ್ನು ಕಾಣುವ ಪ್ರಯತ್ನದಲ್ಲಿ ಅತ್ಯಂತ ಸಹಜವಾದ, ಸುಲಭವಾದ ಮತ್ತು ಪ್ರಯತ್ನದಲ್ಲೇ ಆನಂದವನ್ನು ಕಾಣಬಲ್ಲ ಸರಳವಾದ ಮಾರ್ಗ; ಆದರೆ ಭಕ್ತಿಯ ಕೆಳಹಂತದಲ್ಲಿರುವವರು ತಾವು ನಂಬಿದ ತತ್ವ, ಆದರ್ಶಗಳಿಗೆ ಕಟ್ಟುಬಿದ್ದು ಇತರರ ನಂಬಿಕೆಗಳನ್ನು ವಿರೋಧಿಸುವ ಪ್ರವೃತ್ತಿ ಬೆಳೆಸಿಕೊಳ್ಳುವ ಅಪಾಯವಿದೆ. ಪ್ರೀತಿಯ ವಸ್ತುವಿಗೆ ತೋರುವ ಅವರ ಏಕನಿಷ್ಠೆ ಹೆಚ್ಚಿನ ಸಂದರ್ಭಗಳಲ್ಲಿ ಇತರರನ್ನು ದ್ವೇಷಿಸುವಲ್ಲಿ, ಅನೇಕ ಹುಚ್ಚಾಟಗಳಿಗೆ ಇಳಿಯುವಲ್ಲಿ ಕೊನೆಗೊಳ್ಳುತ್ತದೆ. ಇಂತಹ ಹುಚ್ಚಾಟದ ಮತ್ತ್ಠು ಅಮಾಯಕರ ರಕ್ತ ಹರಿಸುವ ಭಯೋತ್ಪಾದನೆಯ ಚಟುವಟಿಕೆಗಳಲ್ಲಿ ತೊಡಗುವ ಮುಸ್ಲಿಮರು, ಹಿಂದೂಗಳು, ಕ್ರಿಶ್ಚಿಯನರು, ಇತರ ಮತೀಯರುಗಳು ಇಂತಹ ಭಕ್ತಿಯ ಕೆಳಸ್ತರದ ಹಂತದಿಂದ ಬಂದವರಾಗಿದ್ದಾರೆ. ದುರ್ಬಲ ಮತ್ತು ಅವಿಕಸಿತ ಮನಸ್ಸುಗಳವರು ತಮ್ಮ ನಂಬಿಕೆಯನ್ನು ಪ್ರೀತಿಸುವ ರೀತಿಯೆಂದರೆ, ಇತರ ಎಲ್ಲಾ ಆದರ್ಶಗಳನ್ನು ದ್ವೇಷಿಸುವುದು. ಇಂದು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹುಚ್ಚಾಟಗಳ, ಭಯೋತ್ಪಾದನೆಗಳ ಮೂಲಕಾರಣ ಇದೇ ಆಗಿದೆ.
     ನಿಜವಾಗಿ ಹೇಳಬೇಕೆಂದರೆ ದೇವಸ್ಥಾನಗಳು, ಚರ್ಚುಗಳು, ಮಸೀದಿಗಳು ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಸಹಕಾರಿ ಸಾಧನಗಳೇ ಹೊರತು ಅವೇ ಅಂತ್ಯವಲ್ಲ. ನಿಜವಾದ ಅರಿವು ಮೂಡಿದಾಗ, ನಿಜವಾದ ದೈವಿಕ ಆನಂದವನ್ನು ಸವಿಯುತ್ತಿರುವಾಗ ಅವುಗಳ ಯಾವುದರ ಆಸರೆಯೂ ಬೇಕೆನಿಸುವುದಿಲ್ಲ, ಯಾವ ಧರ್ಮಗ್ರಂಥಗಳೂ ಬೇಕಿರುವುದಿಲ್ಲ ಮತ್ತು ಯಾವ ಉಪದೇಶಗಳ ಅಗತ್ಯವೂ ಇರುವುದಿಲ್ಲ. ಆಗ ದೇವರು ಹೃದಯದಲ್ಲೇ ಇರುತ್ತಾನೆ. ಮತ್ತೆ ಬೇರೆ ಎಲ್ಲಿ ಅವನನ್ನು ಹುಡುಕಬೇಕು?
ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು
ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ |
ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ
ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ ||
                                                                        -ಕ.ವೆಂ.ನಾಗರಾಜ್.

1 ಕಾಮೆಂಟ್‌:

 1. nageshamysore on November 12, 2013 - 3:22am
  ಕವಿ ನಾಗರಾಜರೆ, ಭಕ್ತಿ ರಸಾಯನದ ಕುರಿತ ಸೊಗಸಾದ ಚಿಂತನೆ. ಕೆಲವು ಶಬ್ದ ಕೇಳುತ್ತಿದ್ದರೂ ಅದರರ್ಥ ಕುರಿತು ಚಿಂತಿಸಿರುವುದಿಲ್ಲ - ನೀವು ವಿವರಿಸಿದ 'ಉಪಾಸನ' ಪದದ ಹಾಗೆ. ಭಕ್ತರಲ್ಲಿ ಭಕ್ತಿಯು ಬಗೆಬಗೆಯಾಗಿ ತೆರೆದುಕೊಳ್ಳುವ ರೀತಿಯು ಅಷ್ಟೆ ಕುತೂಹಲಕರ - ಹೊಗಳಿಕೆಯಾಗೊ, ತೆಗಳಿಕೆಯಾಗೊ, ಒಟ್ಟಾರೆ ಯಾವುದೊ ರೂಪದ ನಾಮಸ್ಮರಣೆ ಭಕ್ತಿಯ ಅನಂತ ರೂಪದಲೊಂದೆನಲು ಅಡ್ಡಿಯಿಲ್ಲ. ಅದೆ ಭಕ್ತಿ ಪ್ರೇರಕ ಶಕ್ತಿಯೂ ಆಗಬಹುದು, ವಿಧ್ವಂಸಕವೂ ಆಗಬಹುದು - ಯಾರು ಅದನ್ನು ಹೇಗೆ ಬಳಸುವರೊ ಅದರನುಸಾರ. ಭಕ್ತಿಯ ಹಾಗೂ ಭಕ್ತರ ಸ್ವರೂಪಗಳೂ ಹಾಗೆ ವಿಭಿನ್ನ. ಇವೆಲ್ಲವನ್ನು ಚೆನ್ನಾಗಿ ಬಿಂಬಿಸಿದ ಲೇಖನ.
  .
  ಸಂಕಟಕೊ, ಸನ್ಮಾನಕೊ
  ಮೊರೆಯಿಡಲೊಂದು ಅಭಿವ್ಯಕ್ತಿ ಭಕ್ತಿ.
  ಕುಸಿದಾಗಲೊ, ಕುಸಿಯದಿರಲೆಂದೊ
  ಆಸರೆಯಾಗುವ ಒಳಶಕ್ತಿ ಭಕ್ತಿ.
  ಹೊಗಳಲೊ, ತೆಗಳಲೊ
  ಮನದಳಲ ಗುಡಿಸಿ ಹಗುರಾಗೊ ರೀತಿ.
  ಜ್ಞಾನಕೊ, ಅಜ್ಞಾನಕೊ
  ಮನದ ವಿಶ್ವರೂಪ ತಾನಾಗುವ ಕೀರ್ತಿ.
  kavinagaraj on November 12, 2013 - 4:14pm
  ಧನ್ಯವಾದ ನಾಗೇಶರೇ. ಭಕ್ತರ ಮತ್ತು ಭಕ್ತಿಯ ಅನಾವರಣ ಮಾಡುವ ಘಟನೆಯಿದು: ಒಮ್ಮೆ ಹುಟ್ಟು ಕುರುಡರಾದ ವಿರಜಾನಂದರು (ಮಹರ್ಷಿ ದಯಾನಂದ ಸರಸ್ವತಿಯವರ ಗುರುಗಳು) ಮಥುರಾದಲ್ಲಿ ಕೋಲೂರಿಕೊಂಡು ನಡೆಯುತ್ತಿದ್ದರು. ಬಿಸಿಲಿನ ಕಾರಣದಿಂದ ತಾವು ಎಳೆಯುತ್ತಿದ್ದ ಕೃಷ್ಣನ ವಿಗ್ರಹದ ರಥವನ್ನು ದಾರಿಯ ಮಧ್ಯದಲ್ಲಿ ನಿಲ್ಲಿಸಿ ಭಕ್ತರುಗಳು ಮರದ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ವಿರಜಾನಂದರು ರಥ ತಗುಲಿ ಮುಗ್ಗರಿಸಿಬಿದ್ದರು. ಆ ಭಕ್ತರು 'ಏಯ್ ಕುರುಡಾ, ದೇವರ ರಥ ಕಾಣಲಿಲ್ಲವೇನೋ?' ಎಂದು ಗದರಿಸಿದರು. ವಿರಜಾನಂದರು, "ನಾನು ಕುರುಡನೆಂದು ಲೋಕಕ್ಕೇ ಗೊತ್ತು. ಆ ನಿಮ್ಮ ದೇವರಿಗೆ ಗೊತ್ತಾಗಲಿಲ್ಲವೇ? ಪಾಪ, ಕುರುಡ ಎಡವಿಬಿದ್ದಾನು ಎಂದು ಪಕ್ಕಕ್ಕೆ ಸರಿಯಬಾರದಿತ್ತೇ?" ಎಂದು ಉತ್ತರಿಸಿದ್ದರು.

  ಪ್ರತ್ಯುತ್ತರಅಳಿಸಿ