ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಜನವರಿ 6, 2014

ಹಣೆ ಬರಹಕ್ಕೆ ಹೊಣೆ ಯಾರು?

     'ಹಣೆ ಬರಹಕ್ಕೆ ಹೊಣೆ ಯಾರು? ಬಂದದ್ದನ್ನು ಅನುಭವಿಸಲೇಬೇಕು', 'ಎಲ್ಲಾ ವಿಧಿಲಿಖಿತ, ನಾವೇನು ಮಾಡೋಕಾಗುತ್ತೆ?' - ಇಂತಹ ಮಾತುಗಳನ್ನು ಸಾಮಾನ್ಯವಾಗಿ ಕೇಳುತ್ತಲೇ ಇರುತ್ತೇವಲ್ಲವೇ? ಇದಕ್ಕೆ ವಿಧಿ, ಅದೃಷ್ಟ, ಕರ್ಮ, ಕಿಸ್ಮತ್, ಮುಂತಾದ  ಹೆಸರುಗಳನ್ನೂ ಕೊಡುತ್ತೇವೆ.  ಯಾವುದೇ ವ್ಯಕ್ತಿ ಅನಿವಾರ್ಯವಾಗಿ ಎದುರಿಸಲೇಬೇಕಾಗುತ್ತದೆ, ಅದನ್ನು ಬದಲಾಯಿಸಲಾಗದು, ಅನುಭವಿಸಲೇಬೇಕು ಎಂಬ ಸಂಗತಿಯನ್ನು ವಿಧಿ, ಹಣೆಬರಹ ಎನ್ನಬಹುದು. ಅಂತಹ ಹಣೆಬರಹಗಳು ನಮ್ಮ ಜೀವನವನ್ನು ನಿರ್ದೇಶಿಸುತ್ತವೆ. ನಾವು ಹೇಗೆ ಜೀವಿಸಬೇಕೆಂಬುದನ್ನು ನಾವು ನಿರ್ಧರಿಸಬಲ್ಲೆವು, ಆದರೆ ಎಂದು ಹುಟ್ಟಬೇಕು, ಎಲ್ಲಿ ಹುಟ್ಟಬೇಕು ಎಂಬುದನ್ನು ನಿರ್ಧರಿಸಲಾರೆವು. ನಮ್ಮ ಅಪ್ಪ-ಅಮ್ಮ ಯಾರಾಗಬೇಕು ಎಂಬುದೂ ನಮ್ಮ ಕೈಯಲ್ಲಿಲ್ಲ. ನಮ್ಮ ಕುಟುಂಬದವರನ್ನು ನಾವು ಪ್ರೀತಿಸಬಹುದು ಅಥವ ದ್ವೇಷಿಸಬಹುದು, ಆದರೆ ನಮ್ಮ ಕುಟುಂಬವನ್ನು ಆರಿಸಿಕೊಳ್ಳಲಾರೆವು. ಎಂತಹ ವಿಚಿತ್ರ! ನಾವು ನಮ್ಮ ಸ್ನೇಹಿತರು, ಪ್ರೀತಿಪಾತ್ರರನ್ನು ಆಯ್ಕೆ ಮಾಡಿಕೊಳ್ಳಬಹುದು, ಅದರೆ ಅವರು ಅವರು ನಮ್ಮನ್ನು ಅರಿಸಿಕೊಳ್ಳುವಂತೆ ಬಲವಂತ ಮಾಡಲಾರೆವು. ಎಂತಹ ಚಿಕಿತ್ಸೆ ಬೇಕೆಂದು ಆರಿಸಿಕೊಳ್ಳಬಹುದು, ಎಂತಹ ಕಾಯಿಲೆ ಬೇಕೆಂದು ಆರಿಸಿಕೊಳ್ಳಬಹುದೇ? ನಾನು ಪ್ರಯಾಣ ಮಾಡುವ ರಸ್ತೆಯನ್ನು ಆರಿಸಿಕೊಳ್ಳಬಹುದು, ಆದರೆ ಆ ರಸ್ತೆ ಎಲ್ಲಿ ತಲುಪಬೇಕೆಂದು ನಿರ್ಧರಿಸಲಾಗದು. ಎಲ್ಲಾ ಬರೀ ಗೊಂದಲವೇ! ನಾವು ಎಂದೂ ಸಾಯಬಾರದು ಎಂದುಕೊಂಡರೆ ಸಾಧ್ಯವೇ? ಒಬ್ಬ ಅದೃಷ್ಟವಂತ ಒಂದೇ ಪ್ರಯತ್ನದಲ್ಲಿ ಅಸಾಧ್ಯವಾದುದನ್ನು ಸಾಧಿಸಿಬಿಡಬಹುದು; ಆದರೆ ದುರದೃಷ್ಟವಂತ ಅದೇ ಕೆಲಸವನ್ನು ನೂರು ಸಲ ನೂರು ವಿಧದಲ್ಲಿ ಮಾಡಲು ಪ್ರಯತ್ನಿಸಿ ವಿಫಲನಾಗಿಬಿಡಬಹುದು. ಹಾಗಾದರೆ ಇದನ್ನು ಹಣೆಬರಹ ಎನ್ನಬಹುದೇ? ಇಂತಹ ನೂರಾರು ಸಂದಿಗ್ಧಗಳು, ಸನ್ನಿವೇಶಗಳು ಮನುಷ್ಯನನ್ನು ಗೊಂದಲಕ್ಕೆ ಈಡು ಮಾಡುವುದಂತೂ ನಿರ್ವಿವಾದ. ಮೈಸೂರು ಸಂಸ್ಥಾನವನ್ನು ಕೈವಶ ಮಾಡಿಕೊಂಡು, ಕೆಳದಿ ಸಂಸ್ಥಾನವನ್ನೂ ನುಂಗಿ ನೀರು ಕುಡಿದಿದ್ದ ಹೈದರಾಲಿ ನಿರಕ್ಷರಕುಕ್ಷಿ. ಪತ್ರಗಳಿಗೆ ಸಹಿ ಮಾಡಬೇಕಾದಾಗ ಹೆಬ್ಬೆರಳಿನ ಗುರುತು ಹಾಕುತ್ತಿದ್ದ. ಆಗ ಅದನ್ನು ಆಶ್ಚರ್ಯದಿಂದ ನೋಡುತ್ತಿದ್ದವರಿಗೆ ಹೈದರಾಲಿ, "ಅಲ್ಲೇಕೆ ನೋಡುತ್ತೀರಿ? ಇಲ್ಲಿ ನೋಡಿ" ಎಂದು ತನ್ನ ಹಣೆ ಮುಟ್ಟಿ ತೋರಿಸುತ್ತಿದ್ದ.
     ಹಣೆಬರಹ, ವಿಧಿಲಿಖಿತ ಮುಂತಾದುವಕ್ಕೆ ಅರ್ಥ ಬರಬೇಕೆಂದರೆ ಸನಾತನ ಧರ್ಮೀಯರು ನಂಬುವಂತೆ ಪುನರ್ಜನ್ಮ ಮತ್ತು ಕರ್ಮಫಲವಿರಬೇಕು ಅನ್ನಿಸುತ್ತದೆ. ಇಲ್ಲದಿದ್ದರೆ ಯಾವುದೇ ಒಂದು ಜೀವಿ ಬಡತನದ ಮನೆಯಲ್ಲಿ ಏಕೆ ಜನಿಸಬೇಕು, ಹದ್ದು, ಗೂಬೆಯಾಗಿ ಏಕೆ ಹುಟ್ಟಬೇಕು, ತನ್ನ ಯಾವುದೇ ತಪ್ಪಿಲ್ಲದೆ ಅಂಗವಿಕಲವಾಗಿ ಹುಟ್ಟಬೇಕು ಅಥವ ಶ್ರೀಮಂತರ ಮನೆಯಲ್ಲಿ ಬಾಳುವಂತಾಗಬೇಕು? ಕ್ರೈಸ್ತರು, ಮಹಮದೀಯರು ಪುನರ್ಜನ್ಮ ನಂಬುವುದಿಲ್ಲ. ಹಾಗಾದರೆ ಹುಟ್ಟುವಾಗಲೇ ಬರುವ ಇಂತಹ ವೈಪರೀತ್ಯಗಳಿಗೆ ಏನು ಕಾರಣ ಕೊಡಬೇಕು? ಸತ್ತ ಮೇಲೆ ಒಂದು ನಿಶ್ಚಿತ ದಿನದಂದು ಮಾತ್ರವೇ ತನ್ನ ಪಾಪ/ಪುಣ್ಯಗಳಿಗೆ ತಕ್ಕಂತೆ ಫಲ ಅನುಭವಿಸುವುದಾದರೆ, ಪುನರ್ಜನ್ಮವಿಲ್ಲವೆಂದಾದರೆ, ಹುಟ್ಟುತ್ತಲೇ ಈ ರೀತಿಯ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿಗೆ ವಿವರಣೆ ಕೊಡುವುದು ಕಷ್ಟವಾಗುತ್ತದೆ. ಯಾವುದೇ ಕಾರಣವಿಲ್ಲದೆ, ತಮ್ಮ ಯಾವುದೇ ತಪ್ಪಿಲ್ಲದೆ ಕೆಲವರನ್ನು ಸುಖಿಗಳನ್ನಾಗಿ, ಕೆಲವರನ್ನು ದುಃಖಿಗಳನ್ನಾಗಿ ಹುಟ್ಟಿಸಿದರೆ ದೇವರು ನಿಷ್ಕರುಣಿ ಅಥವ ಪಕ್ಷಪಾತಿ ಎನ್ನಬೇಕಾಗುತ್ತದೆ. ಅಲ್ಲದೆ ಅಂತಹ ಸಂದರ್ಭದಲ್ಲಿ ಜೀವಿಗಳು ಮಾಡುವ ಕೆಟ್ಟ ಮತ್ತು ಒಳ್ಳೆಯ ಕೆಲಸಗಳಿಗೆ ದೇವರೇ ಹೊಣೆಗಾರನಾಗಬೇಕಾಗುತ್ತದೆ. ಹಾಗೆ ಇರಲಾರದು! ಅಲ್ಲದಿದ್ದರೆ ಈ ಸ್ಥಿತಿಗೆ ಕಾರಣವೇನಿರಬಹುದು? ಇದಕ್ಕೆ ಕೊಡಬಹುದಾದ ಮತ್ತು ಒಪ್ಪಬಹುದಾದ ವಿವರಣೆಯೆಂದರೆ ಜೀವಿಯು ತಾನು ಮಾಡಿದ ಕರ್ಮಫಲವಾಗಿ ಈ ರೀತಿ ಆಗುತ್ತದೆಂಬುದು! ಒಬ್ಬರೇ ತಂದೆ-ತಾಯಿಗಳಿಗೆ ಹುಟ್ಟಿದ ಮಕ್ಕಳೆಲ್ಲರೂ ಒಂದೇ ಗುಣ, ಸ್ವಭಾವದವರು, ಸಾಮರ್ಥ್ಯ, ಅಭಿರುಚಿಯುಳ್ಳವರಾಗಿರುವುದಿಲ್ಲ ಅಲ್ಲವೇ? ಹಿಂದಿನ ಕುಸಂಸ್ಕಾರ, ಸುಸಂಸ್ಕಾರಗಳ ಫಲವಿರುವುದಿಲ್ಲ, ಪುನರ್ಜನ್ಮವಿಲ್ಲ ಎಂದಾಗಿದ್ದರೆ ಎಲ್ಲರೂ ಸಮಾನ ವ್ಯಕ್ತಿತ್ವ ಹೊಂದಿದವರಾಗಿರುತ್ತಿದ್ದರು.
ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲ
ಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |
ಹಿಂದಕೋ ಮುಂದಕೋ ಬಂಡಿ ಸಾಗುವುದು
ನಶಿಸಿದರೆ ಏರುವೆ ಹೊಸಬಂಡಿ ಮೂಢ ||
     ಪ್ರತಿ ಜೀವಿಯೂ ಹಿಂದೆ ಮಾಡಿದ ಒಳ್ಳೆಯ, ಕೆಟ್ಟ ಕೆಲಸಗಳಿಗನುಗುಣವಾಗಿ ಕಟ್ಟಿಕೊಂಡು ಬಂದ ಬುತ್ತಿಯ ಗಂಟನ್ನು ಹೊತ್ತುಕೊಂಡೇ ಬರುತ್ತಾರೆ ಎಂಬುದನ್ನು ಒಪ್ಪಿಕೊಂಡರೆ ಮಾತ್ರ ದೇವರು ಕ್ರೂರಿಯಲ್ಲ, ಪಕ್ಷಪಾತಿಯಲ್ಲ, ಅನ್ಯಾಯಗಾರನಲ್ಲ ಎನ್ನಬಹುದು. ಅಥರ್ವವೇದದ ಒಂದು ಮಂತ್ರ ಹೀಗೆ ಹೇಳುತ್ತದೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.೧೨.೩.೪೮)
     ಈ ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ, ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಸಹಕಾರಿಗಳ ಸಹಾಯದಿಂದ ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನ, ಕರ್ಮಫಲವಿಪಾಕ ಅದನ್ನು ಪಾಕ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಈ ಮಂತ್ರದ ಅರ್ಥ. 'ಮಾಡಿದ್ದುಣ್ಣೋ ಮಹರಾಯ'! ತಾನು ಮಾಡಿದ ಪಾಪವನ್ನು ಇತರರ ಹೆಗಲಿಗೆ ಹೊರಿಸಿ ಪಾರಾಗಬಹುದೆಂದಾಗಲೀ, ಯಾವುದೇ ಪೂಜಾರಿ, ಪಾದ್ರಿ, ಮೌಲ್ವಿಗಳ ಮಧ್ಯಸ್ತಿಕೆಂದ ಪುಣ್ಯ ಗಳಿಸಬಹುದೆಂದಾಗಲೀ, ಮುಕ್ತಿ ಹೊಂದಬಹುದೆಂಬುದಾಗಲೀ, ತಪ್ಪುಕಾಣಿಕೆ ಒಪ್ಪಿಸಿ ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಬಹುದೆಂದಾಗಲೀ ಇಲ್ಲವೇ ಇಲ್ಲ. ಮಾಡಿದ್ದನ್ನು ಅನುಭವಿಸಲೇಬೇಕು. ನಮ್ಮ ಹಣೆಬರಹಕ್ಕೆ ಹೊಣೆಗಾರರು ನಾವೇ!
     ಭಗವದ್ಗೀತೆಯ ಒಂದು ಅಧ್ಯಾಯವೇ ಕರ್ಮಯೋಗಕ್ಕೆ ಮೀಸಲಾಗಿದೆ. ಯಾರೂ ಕರ್ಮ ಮಾಡದೇ ಇರಲಾರರು, ಸದ್ವಿಚಾರಗಳಿಂದ ಒಡಗೂಡಿದ ಕರ್ಮವೇ ಮೋಕ್ಷಕ್ಕೊಯ್ಯಬಲ್ಲದು ಎಂಬುದು ಇದರ ಸಾರ. ಒಳ್ಳೆಯ ಕೆಲಸಗಳಿಂದ ಒಳ್ಳೆಯದಾಗುತ್ತದೆ ಎಂಬುದು ಇದರ ನೀತಿ. ನಾವು ಬದುಕಬೇಕೆಂದರೆ ಅದಕ್ಕಾಗಿ ಪ್ರತಿ ಕ್ಷಣವೂ ಸಾಯಬೇಕು. ನಾವು ಬಿಡುವ ಪ್ರತಿ ಉಸಿರೂ ನಮ್ಮನ್ನು ಸಾವಿನ ಸಮೀಪಕ್ಕೆ ಒಯ್ಯುತ್ತಿರುತ್ತದೆ. ಬದುಕು ಮತ್ತು ಸಾವು ಎನ್ನುವುದು ಒಂದೇ ವಸ್ತುವಿನ ಬೇರೆ ಬೇರೆ ಮುಖಗಳಷ್ಟೆ. ಸಮುದ್ರದ ಅಲೆಗಳಂತೆ ಒಮ್ಮೆ ಮೇಲೆ ಏಳುತ್ತದೆ, ಒಮ್ಮೆ ಕೆಳಗೆ ಬೀಳುತ್ತದೆ. ಬದುಕು ಮತ್ತು ಸಾವು ಎರಡೂ ಸೇರಿದರೆ ಮಾತ್ರ ಒಂದು ಪೂರ್ಣವಾದ ಸಂಗತಿ, ಇಲ್ಲದಿದ್ದರೆ ಅದು ಅಪೂರ್ಣ.
ತಪ್ಪಿಗಿರಬಹುದು ಕಾರಣವು ನೂರು
ಪರರು ಕಾರಣರಲ್ಲ ಹೊರಿಸದಿರು ದೂರು |
ಹುಂಬತನ ಭಂಡತನ ಮೊಂಡುತನ ಬೇಡ
ಅಡಿಗಡಿಗೆ ಅಳುಕುವ ಪಾಡೇಕೆ ಮೂಢ ||
     ನಾವು ಈಗ ಏನಾಗಿದ್ದೇವೋ ಅದಕ್ಕೆ ನಾವೇ ಕಾರಣರು ಎಂದಾದಾಗ ದೇವರನ್ನಾಗಲೀ, ಇತರರನ್ನಾಗಲೀ ಏಕೆ ದೂಷಿಸಬೇಕು? ಸಾವಧಾನದಿಂದ, ಪೂರ್ವಾಗ್ರಹ ಪೀಡಿತರಾಗದೆ ಯೋಚಿಸಿದರೆ ಈ ಸತ್ಯದ ಅರಿವು ಆಗಲು ಸಾಧ್ಯ. ನಮ್ಮ ತಪ್ಪುಗಳಿಗೆ ಹೊಣೆಗಾರರು ನಾವೇ ಎಂಬುದು ನಾವು ಕಲಿಯಬೇಕಾದ ಮೊದಲ ಪಾಠ. ಯಾರನ್ನೂ ಹೊಗಳುವಂತಿಲ್ಲ, ಯಾರನ್ನೂ ತೆಗಳುವಂತಿಲ್ಲ. ತಿಳಿಯೋಣ, ಕೆಲವೊಮ್ಮೆ ನಮ್ಮ ದುರದೃಷ್ಟ ಮತ್ತು ಸೋಲುಗಳೇ ನಾವು ಉನ್ನತವಾದುದನ್ನು ಸಾಧಿಸಬೇಕೆಂಬ ಛಲ ಮೂಡಿಸುತ್ತದೆ. ಹಿಂದೆ ಮಾಡಿದ ಕೆಲಸಗಳ ಫಲವೇ ಇಂದು ನಾವು ಏನಾಗಿದ್ದೇವೆಯೋ ಅದು ಎನ್ನುವುದಾದರೆ, ಮುಂದೆ ನಾವು ಏನಾಗಬೇಕು ಎಂದು ನಿರ್ಧರಿಸಿ ಅದರಂತೆ ನಮ್ಮ ಈಗಿನ ಕೆಲಸಗಳಿಂದ ಸಾಧಿಸಬಹುದು ಎಂಬುದನ್ನೂ ಒಪ್ಪಬೇಕು. ಮಾಡಬೇಕಿರುವುದೆಂದರೆ ಅದನ್ನು ಹೇಗೆ ಸಾಧಿಸಬೇಕು ಎಂಬುದನ್ನು ಅರಿತು ಮುಂದುವರೆಯುವುದಷ್ಟೆ. ನಮ್ಮ ಭವಿಷ್ಯದ ಶಿಲ್ಪಿಗಳು ನಾವೇ ಆಗಿದ್ದು, ಯಶಸ್ಸಿಗೆ ಬೇಕಾದ ಎಲ್ಲಾ ಸಲಕರಣೆಗಳೂ ನಮ್ಮೊಳಗೇ ಇವೆ. 'ಇದು ನನ್ನ ಹಣೆಯ ಬರಹ ಎಂದು ಹೇಳುವವನು ಹೇಡಿ ಮತ್ತು ಮೂರ್ಖ' ಎಂದು ಸಂಸ್ಕೃತದ ಒಂದು ಗಾದೆ ಹೇಳುತ್ತದೆ. ಬಲಶಾಲಿ ವ್ಯಕ್ತಿ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುತ್ತಾನೆ. ಸಾಮಾನ್ಯವಾಗಿ ದುರ್ಬಲ ಮನಸ್ಕರು, ಅಶಕ್ತರು ಮಾತ್ರ ತಮ್ಮ ಹಣೆಯಬರಹದ ಬಗ್ಗೆ ಚಿಂತಿಸಿ ಜ್ಯೋತಿಷಿಗಳ ಮೊರೆ ಹೋಗುವುದನ್ನು ಕಾಣುತ್ತೇವೆ. ಅಂತಹವರು ತಮ್ಮ ಹಣೆಬರಹವನ್ನು ಇತರರಿಂದ ಬರೆಸಿಕೊಳ್ಳುವ ಬಲಿಪಶುಗಳಾಗುತ್ತಾರೆಂದರೆ ಕಠಿಣವಾದ ಮಾತಾಗಬಹುದು. ಹಣೆಬರಹ, ವಿಧಿಲಿಖಿತ ಮುಂತಾದ ಪದಗಳು ತಮ್ಮ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಂಗತಿಯ ಜರುಗುವಿಕೆಗೆ ತಾವೇ ಕಾರಣರೆಂಬುದನ್ನು ಅರಗಿಸಿಕೊಳ್ಳಲಾಗದವರು ಹೇಳಬಹುದಾದ ಪದಗಳು! ನಾವು ಏನನ್ನು ಬಿತ್ತುತ್ತೇವೋ ಅದನ್ನೇ ಬೆಳೆಯುತ್ತೇವೆ, ಇದೇ ಸತ್ಯ. ನಮ್ಮ ಹಣೆಯಬರಹವನ್ನು ಬರೆಯುವವರು, ನಿರ್ಧರಿಸುವವರು ನಾವೇ ಎಂಬುದನ್ನು ಅರಿತಾಗ ಮಾತ್ರ ನಾವು ಸರಿಯಾದ ದಾರಿಯಲ್ಲಿ ನಡೆಯುವ ಮನಸ್ಸು ಮಾಡುತ್ತೇವೆ.
ನಿನಗೆ ನೀನೆ ಬಂಧು ನಿನಗೆ ನೀನೆ ಶತ್ರು
ಪರರು ಮಾಡುವುದೇನು ನಿನದೆ ತಪ್ಪಿರಲು |
ಉನ್ನತಿಗೆ ಹಂಬಲಿಸು ಅವನತಿಯ ಕಾಣದಿರು
ನಿನ್ನುದ್ಧಾರ ನಿನ್ನಿಂದಲೇ ಮೂಢ ||
     ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾರಣವಿರುತ್ತದೆ. ಅದರಲ್ಲಿನ ಸತ್ಯ, ವಾಸ್ತವತೆ ಅರಿತು ತಪ್ಪು ತಿದ್ದಿಕೊಂಡು ಮುನ್ನಡೆದರೆ ಹಣೆಬರಹವನ್ನು ಬದಲಾಯಿಸಬಹುದು. ತಮಾಷೆಯ ವಿಷಯವೆಂದರೆ ಗೆದ್ದವರು ತಮ್ಮ ಗೆಲುವಿಗೆ ಹಣೆಬರಹ ಕಾರಣವೆನ್ನುವುದಿಲ್ಲ, ಸೋತವರು ಮಾತ್ರ ಸೋಲಿಗೆ ನೆಪವಾಗಿ ಹಣೆಬರಹವೆಂದುಬಿಡುತ್ತಾರೆ. ಬಲಶಾಲಿಗಳನ್ನು ಹಣೆಬರಹ ಇಷ್ಟಪಡುತ್ತದೆ.
-ಕ.ವೆಂ.ನಾಗರಾಜ್

ಶುಕ್ರವಾರ, ಜನವರಿ 3, 2014

ಹೀಗೊಂದು ವೇದೋಕ್ತ ವಿವಾಹ


ಓದುಗರ ಮಾಹಿತಿಗೆ:
     ಈಗ ಪುನರ್ ಪ್ರಕಟಣೆ ಮಾಡಿರುವ ಈ ಲೇಖನ ಈ ತಾಣದಲ್ಲಿ ಅಲ್ಲದೆ 'ವೇದಸುಧೆ' , 'ಸಂಪದ' ಮತ್ತು 'ನಿಲುಮೆ' ತಾಣಗಳಲ್ಲೂ ಪ್ರಕಟವಾಗಿ, ಹೆಚ್ಚಿನ ವೀಕ್ಷಣೆ ಕಂಡ ಜನಪ್ರಿಯ ಬರಹವಾಗಿದೆ. ಇದು  'ಗಲ್ಫ್ ಕನ್ನಡಿಗ' ಪತ್ರಿಕೆಯಲ್ಲೂ ಪ್ರಕಟವಾಗಿದೆ. ಅಲ್ಲಿ ಪ್ರಕಟಗೊಳ್ಳಲು ಗಲ್ಫ್ ಕನ್ನಡಿಗ ಶ್ರೀ ಪಿ. ರಾಮಚಂದ್ರ ಮತ್ತು ವರದಿಗಾರರಾದ ಶ್ರೀಮತಿ ಅಶ್ವಿನಿ ಕಾರಣರು. ಅವರಿಗೂ ಎಲ್ಲಾ ಓದುಗರಿಗೂ ಹೃತ್ಪೂರ್ವಕ ವಂದನೆಗಳು. 'ಗಲ್ಫ್ ಕನ್ನಡಿಗ' ಪತ್ರಿಕೆಯ ವರದಿಗೆ ಲಿಂಕ್ ಇದು:  http://www.gulfkannadiga.com/news-61774.html
-ಕ.ವೆಂ.ನಾಗರಾಜ್.
-0-0-0-0-0-0-0-0-0-0-0-
     ಸುಮಾರು ಮೂರು ವರ್ಷಗಳ ಹಿಂದಿನ ಘಟನೆ. ಅವನ ಹೆಸರು ಸುನಿಲ, ಓರ್ವ ಸ್ಫುರದ್ರೂಪಿ ಹಿಂದೂ ತರುಣ, ಹಾಸನ ಮೂಲದವನು. ಅವಳು ಒಲಿವಿಯ, ಮನಮೋಹಕ ಚೆಲುವಿನ ಕ್ರಿಶ್ಚಿಯನ್ ನವಯುವತಿ, ಮಂಗಳೂರಿನ ಕಡೆಯವಳು. ಇಬ್ಬರಿಗೂ ಪರಿಚಯವಾಯಿತು, ಮಾತುಕಥೆಗಳಾದವು, ಪ್ರೇಮಾಂಕುರವಾಯಿತು. ಮದುವೆಯಾಗಲು ನಿರ್ಧರಿಸಿದರು. ಜಾತಿ ಬೇರೆಯಾದ್ದರಿಂದ ಎರಡೂ ಮನೆಯವರು ಪ್ರಾರಂಭದಲ್ಲಿ ಒಪ್ಪದಿದ್ದರೂ ಅವರ ಧೃಢ ನಿರ್ಧಾರದಿಂದಾಗಿ ಒಪ್ಪಿಗೆ ಸಿಕ್ಕಿತು. ಸುನಿಲನ ಇಚ್ಛೆಯಂತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಒಲಿವಿಯ ಸಮ್ಮತಿಸಿದಳು.



     ವೇದೋಕ್ತ ರೀತಿಯಲ್ಲಿ ಮದುವೆಯಾಗಲು ನಿರ್ಧರಿಸಿ ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರನ್ನು ಭೇಟಿಯಾದರು. ಅವರು ಒಲಿವಿಯಳನ್ನು ಆಕೆ ಇನ್ನುಮುಂದೆ ಸುನಿಲನಂತೆ ಸಸ್ಯಾಹಾರಿಯಾಗಿರಲು ಸಾಧ್ಯವೇ ಎಂದು ವಿಚಾರಿಸಿದರು. ಆಕೆಗೆ ತಕ್ಷಣಕ್ಕೆ ಉತ್ತರಿಸಲಾಗಲಿಲ್ಲ. ಶರ್ಮರು ಹೇಳಿದರು -"ಆಹಾರ ಪದ್ಧತಿ ಬದಲಾಯಿಸಲು ನನ್ನ ಒತ್ತಾಯವಿಲ್ಲ. ಆದರೆ ಸಸ್ಯಾಹಾರಿಯಾಗಲು ನಿರ್ಧರಿಸಿದರೆ ಮಾತ್ರ ನಾನು ಮದುವೆ ಮಾಡಿಸುವೆ. ಇಲ್ಲದಿದ್ದರೆ ಬೇರೆಯವರ ಮಾರ್ಗದರ್ಶನದಲ್ಲಿ ಮದುವೆಯಾಗಬಹುದು. ನಿರ್ಧಾರವನ್ನು ಈ ಕೂಡಲೇ ತೆಗೆದುಕೊಳ್ಳಬೇಕಿಲ್ಲ. ನಿಧಾನವಾಗಿ ಯೋಚಿಸಿದ ನಂತರದಲ್ಲಿ ತಿಳಿಸಿ". ನಂತರ ತಿಳಿಸುವುದಾಗಿ ಹೋದ ಅವರು ಕೆಲವು ದಿನಗಳ ನಂತರ ಮತ್ತೆ ಬಂದು ಶರ್ಮರನ್ನು ಭೇಟಿ ಮಾಡಿದರು. ಒಲಿವಿಯ ಇನ್ನುಮುಂದೆ ಸಸ್ಯಾಹಾರಿಯಾಗಿರಲು ನಿರ್ಧರಿಸಿದ್ದಳು.

     ಹಾಸನದ ಸುವರ್ಣ ರೀಜೆನ್ಸಿ ಹೋಟೆಲಿನ ಪಾರ್ಟಿಹಾಲಿನಲ್ಲಿ ವೇದೋಕ್ತ ರೀತಿಯಲ್ಲಿ ಮದುವೆಗೆ ವೇದಿಕೆ ಸಜ್ಜಾಯಿತು. ಸಭಾಭವನ ಬಂಧು-ಮಿತ್ರರೊಂದಿಗೆ ತುಂಬಿತ್ತು. ನನಗೆ ಅವರ ಪರಿಚಯವಿಲ್ಲದಿದ್ದರೂ ಶ್ರೀ ಸುಧಾಕರ ಶರ್ಮರವರಿಂದ ವಿಷಯ ತಿಳಿದ ನಾನು ಅಂತರ್ಜಾತೀಯ ಹಾಗೂ ವೇದೋಕ್ತ ರೀತಿಯ ವಿವಾಹ ಹೇಗಿರುತ್ತದೆ ಎಂದು ತಿಳಿಯುವ ಕುತೂಹಲದಿಂದ ಆ ವಿವಾಹಕ್ಕೆ ನಾನೂ ಸಾಕ್ಷಿಯಾದೆ. ಮದುವೆ ಗಂಡು ಸುನಿಲ ಪಂಚೆ-ಶಲ್ಯ ಹೊದ್ದು ಸಿದ್ಧನಾಗಿದ್ದ. ಬಾಬ್ ಕಟ್ಟಿನ ಹುಡುಗಿ ಒಲಿವಿಯ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಳು. ಅವರ ಜೋಡಿ ಹೇಳಿ ಮಾಡಿಸಿದಂತಿತ್ತು.

     ಪ್ರಾರಂಭದಲ್ಲಿ ಶ್ರೀ ಶರ್ಮರು ದೇವರು ಮತ್ತು ಜಾತಿ ಕುರಿತು ನೀಡಿದ ವಿವರಣೆ ಮನ ಮುಟ್ಟುವಂತಿತ್ತು. ದೇವರು ಎಲ್ಲಾ ಜೀವಿಗಳಿಗೂ ಒಬ್ಬನೇ, ಬೇರೆ ಬೇರೆ ಜಾತಿಗಳವರಿಗೆ ಬೇರೆ ಬೇರೆ ದೇವರಿಲ್ಲ, ಅಲ್ಲದೆ ಮನುಷ್ಯರಿಗೆ, ಪ್ರಾಣಿಗಳಿಗೆ, ಗಿಡ-ಮರಗಳಿಗೆ ಪ್ರತ್ಯೇಕ ದೇವರುಗಳಿಲ್ಲವೆಂದ ಅವರು ಜಾತಿಗಳ ಸೃಷ್ಟಿ ಮನುಷ್ಯರು ಮಾಡಿಕೊಂಡದ್ದು ಎಂದರು. ಮದುವೆಯ ನಿಜವಾದ ಅರ್ಥವನ್ನು ವಿವರಿಸಿದ ಅವರು ಮದುವೆ ಅನ್ನುವುದು ಸುಖದಾಂಪತ್ಯ ನಡೆಸಲು ಬೇಕಾದ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಂಸ್ಕಾರ, ಮಾರ್ಗದರ್ಶನ ನೀಡುವ ಸರಳ ಸಮಾರಂಭ ಎಂದರು. ವೇದೋಕ್ತ ರೀತಿಯ ವಿವಾಹ ವಿಧಿಯಲ್ಲಿ ಭಗವಂತನ ಪ್ರಾರ್ಥನೆ, ಪಾಣಿಗ್ರಹಣ, ಯಜ್ಞ, ಪ್ರತಿಜ್ಞಾಮಂತ್ರ ಪಠಣ, ಲಾಜಾಹೋಮ. ಸಪ್ತಪದಿ ಮತ್ತು ಆಶೀರ್ವಾದಗಳು ಒಳಗೊಂಡಿರುತ್ತವೆ ಎಂದರು. ಬೆಂಗಳೂರಿನ ಕೃಷ್ಣಮೂರ್ತಿಯವರು ಪುರೋಹಿತರಾಗಿ ಕಾರ್ಯ ನಿರ್ವಹಿಸಿದರು. ಆ ಪುರೋಹಿತರು ಇತರ ಪುರೋಹಿತರಂತೆ ಇರದೆ, ಪಂಚೆ, ಜುಬ್ಬಾ ಮತ್ತು ಹೆಗಲ ಮೇಲೆ ಒಂದು ವಸ್ತ್ರ ಹಾಕಿಕೊಂಡಿದ್ದರು. ನಾವು ಸಾಮಾನ್ಯವಾಗಿ ನೋಡುವ ಮದುವೆಗಳಲ್ಲಿ ಪುರೋಹಿತರು ಅವರ ಪಾಡಿಗೆ ಅವರು ಮಂತ್ರಗಳನ್ನು ಹೇಳುತ್ತಿದ್ದರೆ ಅದನ್ನು ಬೇರೆಯವರು ಇರಲಿ, ಮದುವೆಯಾಗುವ ಗಂಡೂ-ಹೆಣ್ಣೂ ಸಹ ಅದನ್ನು ಕೇಳುವುದಿಲ್ಲ, ಮಂತ್ರದ ಅರ್ಥವೂ ಅವರಿಗೆ ಗೊತ್ತಿರುವುದಿಲ್ಲ, ಹೇಳುವ ಪುರೋಹಿತರಿಗೂ ತಿಳಿದಿರುತ್ತೋ ಇಲ್ಲವೋ!

    
     ಪುರೋಹಿತರು ಮಂತ್ರಗಳನ್ನು ಹೇಳುತ್ತಿದ್ದರೆ ಅದರ ಅರ್ಥವನ್ನು ಕನ್ನಡದಲ್ಲಿ ಶರ್ಮರವರು ವಿವರಿಸಿ ಹೇಳುತ್ತಿದ್ದರು. ಮದುವೆಯ ವಿಧಿ-ವಿಧಾನಗಳ ನಿಜವಾದ ಪರಿಚಯ ಎಲ್ಲರಿಗೂ ಆದದ್ದು ವಿಶೇಷ. ಒಲಿವಿಯ ಸಸ್ಯಾಹಾರಿಯಾಗಿರಲು ನಿರ್ಧರಿಸಿದ ವಿಷಯ ಘೋಷಿಸಲಾಯಿತು. ವಧೂವರರು ಪೂರ್ಣ ಆಸಕ್ತಿಯಿಂದ ಕಲಾಪದಲ್ಲಿ ಭಾಗಿಯಾದರು, ನಾವೂ ಅಂತಹ ವಿಶೇಷವನ್ನು ಕಂಡು ಸಂತೋಷಿಸಿದೆವು. ವರನಿಂದ "ಜ್ಞಾನಪೂರ್ವಕವಾಗಿ ನಾನು ನಿನ್ನ ಕೈ ಹಿಡಿಯುತ್ತಿದ್ದೇನೆ, ನೀನೂ ಅಷ್ಟೆ. ನಾವಿಬ್ಬರೂ ಪ್ರಸನ್ನರಾಗಿ ಬಾಳೋಣ, ಉತ್ತಮ ಸಂತತಿಯನ್ನು ಪಡೆಯೋಣ. ಮುಪ್ಪಿನ ಕಾಲದವರೆಗೂ ಜೊತೆಯಾಗಿರೋಣ, ಪರಸ್ಪರ ಸುಪ್ರಸನ್ನರೂ, ಪರಸ್ಪರರಲ್ಲೇ ಆಸಕ್ತರೂ ಆಗಿ, ನೂರು ವರ್ಷಗಳ ಕಾಲ ಪ್ರೇಮದಿಂದ, ಆನಂದದಿಂದ, ಪ್ರಿಯವಚನಗಳನ್ನೇ ಆಡುತ್ತಾ ಬಾಳೋಣ" ಎಂಬ ಪ್ರತಿಜ್ಞಾ ವಚನ ಘೋಷಣೆ ಮಾಡಿಸಲಾಯಿತು. ಪ್ರತಿಯಾಗಿ ವಧುವೂ ಉತ್ತರವಾಗಿ ತನ್ನ ಬದ್ಧತೆಯನ್ನು ಘೋಷಿಸಿದಳು.
      ಸಪ್ತಪದಿಯ ಮಹತ್ವ ತಿಳಿಸಿ ನೆರವೇರಿಸಲಾಯಿತು. ಅನ್ನಾಹಾರಗಳ, ಇಚ್ಛಾಶಕ್ತಿಗಳ ಸಲುವಾಗಿ ಮೊದಲ ಜೋಡಿಹೆಜ್ಜೆ, ಬಲ, ಆರೋಗ್ಯಗಳ ಸಲುವಾಗಿ ಎರಡನೆಯ ಜೋಡಿಹೆಜ್ಜೆ, ಸಾಧನ-ಸಂಪತ್ತಿನ ಸಲುವಾಗಿ ಮೂರನೆಯ ಜೋಡಿಹೆಜ್ಜೆ, ಸುಖ-ಆನಂದಗಳಿಗಾಗಿ ನಾಲ್ಕನೆಯ ಜೋಡಿಹೆಜ್ಜೆ, ಉತ್ತಮ ಸಂತಾನಕ್ಕಾಗಿ ಐದನೆಯ ಜೋಡಿಹೆಜ್ಜೆ, ನಿಯಮಿತ ಜೀವನಕ್ಕಾಗಿ ಆರನೆಯ ಜೋಡಿಹೆಜ್ಜೆ ಮತ್ತು ಸ್ನೇಹಕ್ಕಾಗಿ ಏಳನೆಯ ಜೋಡಿಹೆಜ್ಜೆಗಳನ್ನಿರಿಸಿದ ನಂತರ ವಧೂವರರು ದಂಪತಿಗಳೆನಿಸಿದರು. ಬಂದವರು ಮನಃಪೂರ್ವಕವಾಗಿ ದಂಪತಿಗಳಿಗೆ ಶುಭ ಹಾರೈಸಿದರು. ಈ ಸಮಾರಂಭ ವೀಕ್ಷಿಸಿದ ನನಗೆ ಎಲ್ಲರೂ ಈರೀತಿ ಅರ್ಥಪೂರ್ಣ ಸಂಸ್ಕಾರ ಪಡೆಯುವ ವಿವಾಹಗಳನ್ನು ನಡೆಸಿದರೆ ಎಷ್ಟು ಚೆನ್ನ ಎಂದು ಅನ್ನಿಸಿತು. ಆ ಸಂದರ್ಭದಲ್ಲಿ ತೆಗೆದಿದ್ದ ಕೆಲವು ಫೋಟೋಗಳನ್ನು ನೋಡುತ್ತಿದ್ದಾಗ ನೆನಪು ಮರುಕಳಿಸಿತು, ಈ ಲೇಖನವಾಗಿ ಹೊರಬಂದಿತು.
*************************
-ಕ.ವೆಂ.ನಾಗರಾಜ್.