ಓದುಗರ ಮಾಹಿತಿಗೆ:
ಈಗ ಪುನರ್ ಪ್ರಕಟಣೆ ಮಾಡಿರುವ ಈ ಲೇಖನ ಈ ತಾಣದಲ್ಲಿ ಅಲ್ಲದೆ 'ವೇದಸುಧೆ' , 'ಸಂಪದ' ಮತ್ತು 'ನಿಲುಮೆ' ತಾಣಗಳಲ್ಲೂ ಪ್ರಕಟವಾಗಿ, ಹೆಚ್ಚಿನ ವೀಕ್ಷಣೆ ಕಂಡ ಜನಪ್ರಿಯ ಬರಹವಾಗಿದೆ. ಇದು 'ಗಲ್ಫ್ ಕನ್ನಡಿಗ' ಪತ್ರಿಕೆಯಲ್ಲೂ ಪ್ರಕಟವಾಗಿದೆ. ಅಲ್ಲಿ ಪ್ರಕಟಗೊಳ್ಳಲು ಗಲ್ಫ್ ಕನ್ನಡಿಗ ಶ್ರೀ ಪಿ. ರಾಮಚಂದ್ರ ಮತ್ತು ವರದಿಗಾರರಾದ ಶ್ರೀಮತಿ ಅಶ್ವಿನಿ ಕಾರಣರು. ಅವರಿಗೂ ಎಲ್ಲಾ ಓದುಗರಿಗೂ ಹೃತ್ಪೂರ್ವಕ ವಂದನೆಗಳು. 'ಗಲ್ಫ್ ಕನ್ನಡಿಗ' ಪತ್ರಿಕೆಯ ವರದಿಗೆ ಲಿಂಕ್ ಇದು: http://www.gulfkannadiga.com/news-61774.html
-ಕ.ವೆಂ.ನಾಗರಾಜ್.
-0-0-0-0-0-0-0-0-0-0-0-
ಸುಮಾರು ಮೂರು ವರ್ಷಗಳ ಹಿಂದಿನ ಘಟನೆ. ಅವನ ಹೆಸರು ಸುನಿಲ, ಓರ್ವ ಸ್ಫುರದ್ರೂಪಿ ಹಿಂದೂ ತರುಣ, ಹಾಸನ ಮೂಲದವನು. ಅವಳು ಒಲಿವಿಯ, ಮನಮೋಹಕ ಚೆಲುವಿನ ಕ್ರಿಶ್ಚಿಯನ್ ನವಯುವತಿ, ಮಂಗಳೂರಿನ ಕಡೆಯವಳು. ಇಬ್ಬರಿಗೂ ಪರಿಚಯವಾಯಿತು, ಮಾತುಕಥೆಗಳಾದವು, ಪ್ರೇಮಾಂಕುರವಾಯಿತು. ಮದುವೆಯಾಗಲು ನಿರ್ಧರಿಸಿದರು. ಜಾತಿ ಬೇರೆಯಾದ್ದರಿಂದ ಎರಡೂ ಮನೆಯವರು ಪ್ರಾರಂಭದಲ್ಲಿ ಒಪ್ಪದಿದ್ದರೂ ಅವರ ಧೃಢ ನಿರ್ಧಾರದಿಂದಾಗಿ ಒಪ್ಪಿಗೆ ಸಿಕ್ಕಿತು. ಸುನಿಲನ ಇಚ್ಛೆಯಂತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಒಲಿವಿಯ ಸಮ್ಮತಿಸಿದಳು.
ವೇದೋಕ್ತ ರೀತಿಯಲ್ಲಿ ಮದುವೆಯಾಗಲು ನಿರ್ಧರಿಸಿ ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರನ್ನು ಭೇಟಿಯಾದರು. ಅವರು ಒಲಿವಿಯಳನ್ನು ಆಕೆ ಇನ್ನುಮುಂದೆ ಸುನಿಲನಂತೆ ಸಸ್ಯಾಹಾರಿಯಾಗಿರಲು ಸಾಧ್ಯವೇ ಎಂದು ವಿಚಾರಿಸಿದರು. ಆಕೆಗೆ ತಕ್ಷಣಕ್ಕೆ ಉತ್ತರಿಸಲಾಗಲಿಲ್ಲ. ಶರ್ಮರು ಹೇಳಿದರು -"ಆಹಾರ ಪದ್ಧತಿ ಬದಲಾಯಿಸಲು ನನ್ನ ಒತ್ತಾಯವಿಲ್ಲ. ಆದರೆ ಸಸ್ಯಾಹಾರಿಯಾಗಲು ನಿರ್ಧರಿಸಿದರೆ ಮಾತ್ರ ನಾನು ಮದುವೆ ಮಾಡಿಸುವೆ. ಇಲ್ಲದಿದ್ದರೆ ಬೇರೆಯವರ ಮಾರ್ಗದರ್ಶನದಲ್ಲಿ ಮದುವೆಯಾಗಬಹುದು. ನಿರ್ಧಾರವನ್ನು ಈ ಕೂಡಲೇ ತೆಗೆದುಕೊಳ್ಳಬೇಕಿಲ್ಲ. ನಿಧಾನವಾಗಿ ಯೋಚಿಸಿದ ನಂತರದಲ್ಲಿ ತಿಳಿಸಿ". ನಂತರ ತಿಳಿಸುವುದಾಗಿ ಹೋದ ಅವರು ಕೆಲವು ದಿನಗಳ ನಂತರ ಮತ್ತೆ ಬಂದು ಶರ್ಮರನ್ನು ಭೇಟಿ ಮಾಡಿದರು. ಒಲಿವಿಯ ಇನ್ನುಮುಂದೆ ಸಸ್ಯಾಹಾರಿಯಾಗಿರಲು ನಿರ್ಧರಿಸಿದ್ದಳು.
ಹಾಸನದ ಸುವರ್ಣ ರೀಜೆನ್ಸಿ ಹೋಟೆಲಿನ ಪಾರ್ಟಿಹಾಲಿನಲ್ಲಿ ವೇದೋಕ್ತ ರೀತಿಯಲ್ಲಿ ಮದುವೆಗೆ ವೇದಿಕೆ ಸಜ್ಜಾಯಿತು. ಸಭಾಭವನ ಬಂಧು-ಮಿತ್ರರೊಂದಿಗೆ ತುಂಬಿತ್ತು. ನನಗೆ ಅವರ ಪರಿಚಯವಿಲ್ಲದಿದ್ದರೂ ಶ್ರೀ ಸುಧಾಕರ ಶರ್ಮರವರಿಂದ ವಿಷಯ ತಿಳಿದ ನಾನು ಅಂತರ್ಜಾತೀಯ ಹಾಗೂ ವೇದೋಕ್ತ ರೀತಿಯ ವಿವಾಹ ಹೇಗಿರುತ್ತದೆ ಎಂದು ತಿಳಿಯುವ ಕುತೂಹಲದಿಂದ ಆ ವಿವಾಹಕ್ಕೆ ನಾನೂ ಸಾಕ್ಷಿಯಾದೆ. ಮದುವೆ ಗಂಡು ಸುನಿಲ ಪಂಚೆ-ಶಲ್ಯ ಹೊದ್ದು ಸಿದ್ಧನಾಗಿದ್ದ. ಬಾಬ್ ಕಟ್ಟಿನ ಹುಡುಗಿ ಒಲಿವಿಯ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಳು. ಅವರ ಜೋಡಿ ಹೇಳಿ ಮಾಡಿಸಿದಂತಿತ್ತು.
ಪ್ರಾರಂಭದಲ್ಲಿ ಶ್ರೀ ಶರ್ಮರು ದೇವರು ಮತ್ತು ಜಾತಿ ಕುರಿತು ನೀಡಿದ ವಿವರಣೆ ಮನ ಮುಟ್ಟುವಂತಿತ್ತು. ದೇವರು ಎಲ್ಲಾ ಜೀವಿಗಳಿಗೂ ಒಬ್ಬನೇ, ಬೇರೆ ಬೇರೆ ಜಾತಿಗಳವರಿಗೆ ಬೇರೆ ಬೇರೆ ದೇವರಿಲ್ಲ, ಅಲ್ಲದೆ ಮನುಷ್ಯರಿಗೆ, ಪ್ರಾಣಿಗಳಿಗೆ, ಗಿಡ-ಮರಗಳಿಗೆ ಪ್ರತ್ಯೇಕ ದೇವರುಗಳಿಲ್ಲವೆಂದ ಅವರು ಜಾತಿಗಳ ಸೃಷ್ಟಿ ಮನುಷ್ಯರು ಮಾಡಿಕೊಂಡದ್ದು ಎಂದರು. ಮದುವೆಯ ನಿಜವಾದ ಅರ್ಥವನ್ನು ವಿವರಿಸಿದ ಅವರು ಮದುವೆ ಅನ್ನುವುದು ಸುಖದಾಂಪತ್ಯ ನಡೆಸಲು ಬೇಕಾದ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಂಸ್ಕಾರ, ಮಾರ್ಗದರ್ಶನ ನೀಡುವ ಸರಳ ಸಮಾರಂಭ ಎಂದರು. ವೇದೋಕ್ತ ರೀತಿಯ ವಿವಾಹ ವಿಧಿಯಲ್ಲಿ ಭಗವಂತನ ಪ್ರಾರ್ಥನೆ, ಪಾಣಿಗ್ರಹಣ, ಯಜ್ಞ, ಪ್ರತಿಜ್ಞಾಮಂತ್ರ ಪಠಣ, ಲಾಜಾಹೋಮ. ಸಪ್ತಪದಿ ಮತ್ತು ಆಶೀರ್ವಾದಗಳು ಒಳಗೊಂಡಿರುತ್ತವೆ ಎಂದರು. ಬೆಂಗಳೂರಿನ ಕೃಷ್ಣಮೂರ್ತಿಯವರು ಪುರೋಹಿತರಾಗಿ ಕಾರ್ಯ ನಿರ್ವಹಿಸಿದರು. ಆ ಪುರೋಹಿತರು ಇತರ ಪುರೋಹಿತರಂತೆ ಇರದೆ, ಪಂಚೆ, ಜುಬ್ಬಾ ಮತ್ತು ಹೆಗಲ ಮೇಲೆ ಒಂದು ವಸ್ತ್ರ ಹಾಕಿಕೊಂಡಿದ್ದರು. ನಾವು ಸಾಮಾನ್ಯವಾಗಿ ನೋಡುವ ಮದುವೆಗಳಲ್ಲಿ ಪುರೋಹಿತರು ಅವರ ಪಾಡಿಗೆ ಅವರು ಮಂತ್ರಗಳನ್ನು ಹೇಳುತ್ತಿದ್ದರೆ ಅದನ್ನು ಬೇರೆಯವರು ಇರಲಿ, ಮದುವೆಯಾಗುವ ಗಂಡೂ-ಹೆಣ್ಣೂ ಸಹ ಅದನ್ನು ಕೇಳುವುದಿಲ್ಲ, ಮಂತ್ರದ ಅರ್ಥವೂ ಅವರಿಗೆ ಗೊತ್ತಿರುವುದಿಲ್ಲ, ಹೇಳುವ ಪುರೋಹಿತರಿಗೂ ತಿಳಿದಿರುತ್ತೋ ಇಲ್ಲವೋ!
ಪುರೋಹಿತರು ಮಂತ್ರಗಳನ್ನು ಹೇಳುತ್ತಿದ್ದರೆ ಅದರ ಅರ್ಥವನ್ನು ಕನ್ನಡದಲ್ಲಿ ಶರ್ಮರವರು ವಿವರಿಸಿ ಹೇಳುತ್ತಿದ್ದರು. ಮದುವೆಯ ವಿಧಿ-ವಿಧಾನಗಳ ನಿಜವಾದ ಪರಿಚಯ ಎಲ್ಲರಿಗೂ ಆದದ್ದು ವಿಶೇಷ. ಒಲಿವಿಯ ಸಸ್ಯಾಹಾರಿಯಾಗಿರಲು ನಿರ್ಧರಿಸಿದ ವಿಷಯ ಘೋಷಿಸಲಾಯಿತು. ವಧೂವರರು ಪೂರ್ಣ ಆಸಕ್ತಿಯಿಂದ ಕಲಾಪದಲ್ಲಿ ಭಾಗಿಯಾದರು, ನಾವೂ ಅಂತಹ ವಿಶೇಷವನ್ನು ಕಂಡು ಸಂತೋಷಿಸಿದೆವು. ವರನಿಂದ "ಜ್ಞಾನಪೂರ್ವಕವಾಗಿ ನಾನು ನಿನ್ನ ಕೈ ಹಿಡಿಯುತ್ತಿದ್ದೇನೆ, ನೀನೂ ಅಷ್ಟೆ. ನಾವಿಬ್ಬರೂ ಪ್ರಸನ್ನರಾಗಿ ಬಾಳೋಣ, ಉತ್ತಮ ಸಂತತಿಯನ್ನು ಪಡೆಯೋಣ. ಮುಪ್ಪಿನ ಕಾಲದವರೆಗೂ ಜೊತೆಯಾಗಿರೋಣ, ಪರಸ್ಪರ ಸುಪ್ರಸನ್ನರೂ, ಪರಸ್ಪರರಲ್ಲೇ ಆಸಕ್ತರೂ ಆಗಿ, ನೂರು ವರ್ಷಗಳ ಕಾಲ ಪ್ರೇಮದಿಂದ, ಆನಂದದಿಂದ, ಪ್ರಿಯವಚನಗಳನ್ನೇ ಆಡುತ್ತಾ ಬಾಳೋಣ" ಎಂಬ ಪ್ರತಿಜ್ಞಾ ವಚನ ಘೋಷಣೆ ಮಾಡಿಸಲಾಯಿತು. ಪ್ರತಿಯಾಗಿ ವಧುವೂ ಉತ್ತರವಾಗಿ ತನ್ನ ಬದ್ಧತೆಯನ್ನು ಘೋಷಿಸಿದಳು.
ಸಪ್ತಪದಿಯ ಮಹತ್ವ ತಿಳಿಸಿ ನೆರವೇರಿಸಲಾಯಿತು. ಅನ್ನಾಹಾರಗಳ, ಇಚ್ಛಾಶಕ್ತಿಗಳ ಸಲುವಾಗಿ ಮೊದಲ ಜೋಡಿಹೆಜ್ಜೆ, ಬಲ, ಆರೋಗ್ಯಗಳ ಸಲುವಾಗಿ ಎರಡನೆಯ ಜೋಡಿಹೆಜ್ಜೆ, ಸಾಧನ-ಸಂಪತ್ತಿನ ಸಲುವಾಗಿ ಮೂರನೆಯ ಜೋಡಿಹೆಜ್ಜೆ, ಸುಖ-ಆನಂದಗಳಿಗಾಗಿ ನಾಲ್ಕನೆಯ ಜೋಡಿಹೆಜ್ಜೆ, ಉತ್ತಮ ಸಂತಾನಕ್ಕಾಗಿ ಐದನೆಯ ಜೋಡಿಹೆಜ್ಜೆ, ನಿಯಮಿತ ಜೀವನಕ್ಕಾಗಿ ಆರನೆಯ ಜೋಡಿಹೆಜ್ಜೆ ಮತ್ತು ಸ್ನೇಹಕ್ಕಾಗಿ ಏಳನೆಯ ಜೋಡಿಹೆಜ್ಜೆಗಳನ್ನಿರಿಸಿದ ನಂತರ ವಧೂವರರು ದಂಪತಿಗಳೆನಿಸಿದರು. ಬಂದವರು ಮನಃಪೂರ್ವಕವಾಗಿ ದಂಪತಿಗಳಿಗೆ ಶುಭ ಹಾರೈಸಿದರು. ಈ ಸಮಾರಂಭ ವೀಕ್ಷಿಸಿದ ನನಗೆ ಎಲ್ಲರೂ ಈರೀತಿ ಅರ್ಥಪೂರ್ಣ ಸಂಸ್ಕಾರ ಪಡೆಯುವ ವಿವಾಹಗಳನ್ನು ನಡೆಸಿದರೆ ಎಷ್ಟು ಚೆನ್ನ ಎಂದು ಅನ್ನಿಸಿತು. ಆ ಸಂದರ್ಭದಲ್ಲಿ ತೆಗೆದಿದ್ದ ಕೆಲವು ಫೋಟೋಗಳನ್ನು ನೋಡುತ್ತಿದ್ದಾಗ ನೆನಪು ಮರುಕಳಿಸಿತು, ಈ ಲೇಖನವಾಗಿ ಹೊರಬಂದಿತು.
*************************
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ