ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಡಿಸೆಂಬರ್ 26, 2014

ನೈಜ ರಸಿಕರಾಗೋಣ!


      ರಸಿಕರಾಗೋಣ!
      ಈ ಮಾತು ಹೇಳಿದರೆ ಈ ವಯಸ್ಸಿನಲ್ಲಿ ಇದೇನು ಹೇಳುತ್ತಿದ್ದಾನೆ ಎಂದು ಅನ್ನಿಸಬಹುದು. ಅಲ್ಲದೆ ಈಗ ಎಲ್ಲೆಲ್ಲೂ ಅತ್ಯಾಚಾರದ ಸುದ್ದಿಗಳೇ ಕೇಳಿಬರುತ್ತಿರುವಾಗ ಹೀಗೆ ಅನ್ನಿಸುವುದು ಸಹಜವೇ ಸರಿ. ಏಕೆಂದರೆ ರಸಿಕತೆ ಎಂದರೆ ವಿಲಾಸಪ್ರಿಯತೆ, ಸರಸವಾಗಿರುವಿಕೆ ಎಂಬ ಅರ್ಥವಿದೆ. ರಸಿಕನೆಂದರೆ ವಿಷಯಲಂಪಟನೆಂದೇ ತಿಳಿಯುವವರು ಹೆಚ್ಚು.  ೯೦ ವರ್ಷದ ಮುದುಕ ೧೮ ವರ್ಷದ ಹುಡುಗಿಯನ್ನು ಮದುವೆಯಾಗುವ ಸುದ್ದಿ, ಕಪಟ ಸಂನ್ಯಾಸಿಗಳ ಕುರಿತು ಅಗತ್ಯಕ್ಕಿಂತ ಹೆಚ್ಚು ಅಬ್ಬರದ ಕುಪ್ರಚಾರ, ಅನ್ಶೆತಿಕ ಸಂಬಂಧಗಳ ವರ್ಣರಂಜಿತ, ವೈಭವೀಕರಿಸಿದ ಸುದ್ದಿಗಳು ದೃಷ್ಯಮಾಧ್ಯಮಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತವೆ. ವಿಷಯಲಂಪಟತೆಯನ್ನು ಕೃಷ್ಣಲೀಲೆ ಎನ್ನುವುದು, ವಿಷಯಲಂಪಟರನ್ನು 'ಕೃಷ್ಣಪರಮಾತ್ಮ' ಎಂದು ವ್ಯಂಗ್ಯವಾಗಿ ಹೋಲಿಸುವುದು, ಇತ್ಯಾದಿಗಳು 'ರಸಿಕತೆ' ಎಂಬ ಪದ ಈಗ ಯಾವ ಅರ್ಥ ಪಡೆದುಕೊಂಡಿದೆಯೆಂಬುದರ ದ್ಯೋತಕ. ಧನಾತ್ಮಕ ವಿಷಯಗಳಿಗೆ, ಸುಕೃತಿಗಳಿಗೆ ಪ್ರಾಧಾನ್ಯತೆ ಸಿಗದಿರುವುದು, ಕೇವಲ ಋಣಾತ್ಮಕ ಸಂಗತಿಗಳಿಗೆ, ವಿಕೃತಿಗಳಿಗೆ ಸಿಗಬೇಕಾದಕ್ಕಿಂತ ಹೆಚ್ಚು ಪ್ರಾಧಾನ್ಯತೆ ಸಿಗುತ್ತಿರುವುದರಿಂದ 'ರಸಿಕತೆ'ಯ ನಿಜವಾದ ಅರ್ಥ ಕಣ್ಮರೆಯಾಗಿದೆಯೇನೋ ಎಂದು ಭಾಸವಾಗುತ್ತಿದೆ. ಈ ಕಾರಣದಿಂದ ರಸಿಕತೆಯ ಕೆಲವು ಮಗ್ಗಲುಗಳನ್ನು ವಿವೇಚಿಸುವುದು ಈ ಬರಹದ ಉದ್ದೇಶ.
     ರಸವೆಂದರೆ 'ಸಾರ', ರಸಿಕನೆಂದರೆ ರಸಾಸ್ವಾದ ಮಾಡುವವನು ಎಂದಷ್ಟೇ ಅರ್ಥ. ರಸಿಕತೆಯೆಂದರೆ ಅದರಲ್ಲಿ ನಿಜವಾದ ಸುಖ, ಸಂತೋಷ ಸಿಗುವಂತಿರಬೇಕು. ಇಲ್ಲದಿದ್ದರೆ ಅದು ನ್ಶೆಜ ರಸಿಕತೆಯೆನಿಸಲಾರದು. ಚಾಕೊಲೇಟು, ಪೆಪ್ಪರಮೆಂಟುಗಳನ್ನು ಸವಿಯುವ ಮಕ್ಕಳನ್ನು ಗಮನಿಸಿದ್ದೀರಾ? ಎಲ್ಲಿ ಚಾಕೊಲೇಟು ಬೇಗ ಮುಗಿದು ಹೋಗುವುದೋ ಎಂದು ನಿಧಾನವಾಗಿ ರಸವನ್ನು ಚಪ್ಪರಿಸುತ್ತಾ ಆಗಾಗ್ಗೆ ಅದನ್ನು ಬಾಯಿಂದ ಹೊರತೆಗೆದು ನೋಡಿ ಖುಷಿಪಡುವ ಮಕ್ಕಳನ್ನು 'ಕೈ, ಬಾಯಿ ಎಲ್ಲವನ್ನೂ ಅಂಟು ಮಾಡಿಕೊಳ್ಳಬೇಡ'ವೆಂದು ದೊಡ್ಡವರು ಗದರಿಸುತ್ತಾರಲ್ಲವೇ? ಆದರೆ, ಯಾವುದನ್ನೂ ಲೆಕ್ಕಿಸದ ಮಗು ತನ್ನ ಪಾಡಿಗೆ ತಾನು ರಸಾಸ್ವಾದ ಮಾಡುತ್ತಿರುತ್ತದೆ, ಆನಂದಿಸುತ್ತಿರುತ್ತದೆ. ತನಗೆ ಖುಷಿ ಕೊಡುವ ಚಾಕೋಲೇಟನ್ನು ತೆಗೆತೆಗದು ನೋಡಿ ಕಣ್ತುಂಬಿಕೊಳ್ಳುತ್ತಿರುತ್ತದೆ. ಅದು ರಸಿಕತೆ! ಎಳೆಯ ಕಂದಮ್ಮಗಳನ್ನು ಆಡಿಸಿದಾಗ ಅವು ಬೊಚ್ಚುಬಾಯಿ ಬಿಟ್ಟು ಕೇಕೆ ಹಾಕಿ ನಗುವುದರಲ್ಲಿ ರಸಿಕತೆಯಿದೆ, ಏಕೆಂದರೆ ಅಲ್ಲಿ ಕೃತಕತೆಯ ಸೋಂಕಿಲ್ಲ. ನಾವೂ ಅಷ್ಟೆ, ರುಚಿರುಚಿಯಾದ ಪದಾರ್ಥಗಳನ್ನು ಗಬಗಬನೆ ತಿನ್ನುವುದಿಲ್ಲ, ಕುಡಿಯುವುದಿಲ್ಲ. ಅದರ ಸವಿಯನ್ನು ಅನುಭವಿಸುತ್ತಾ ಸ್ವಲ್ಪ ಸ್ವಲ್ಪವಾಗಿ ತಿನ್ನುತ್ತೇವಲ್ಲಾ, ಕುಡಿಯುತ್ತೇವಲ್ಲಾ, ಅದರಲ್ಲಿ ರಸಿಕತೆಯಿದೆ. ಟಿವಿಯನ್ನು ನೋಡುತ್ತಾ ರುಚಿಯನ್ನು ಅನುಭವಿಸದೆ ತಿಂದು, ಕುಡಿದು ಮಾಡುವವರು ನೈಜಸ್ವಾದವನ್ನು ಅನುಭವಿಸಲಾರರು. ನ್ಶೆಜಸವಿಯನ್ನು ಸವಿಯೋಣ, ನಿಜರಸಿಕರಾಗೋಣ.
     ರಸಿಕತೆಯಲ್ಲಿ ತನ್ಮಯತೆಯಿದೆ. ಧಾರ್ಮಿಕ ಸಮಾರಂಭದಲ್ಲಿ, ದೇವಸ್ಥಾನಗಳಲ್ಲಿ ಸಾಮೂಹಿಕ ಭಜನೆ ನಡೆಯುವ ಸಂದರ್ಭದಲ್ಲಿ ಕೆಲವರು ತಮ್ಮನ್ನೇ ಮರೆತು ತನ್ಮಯರಾಗಿ ಭಾವಪರವಶತೆಯಿಂದ, ಆನಂದಾನುಭವ ಹೊಂದುವುದನ್ನು  ಗಮನಿಸಿರಬಹುದು, ಆನಂದಾನುಭವ ನೀಡುವ ಆ ತನ್ಮಯತೆಯೇ ರಸಿಕತೆ! ಮನಸ್ಸಿಗೆ ಹಿತವಾಗುವ ಸಂಗೀತ, ಕಾರ್ಯಕ್ರಮಗಳೂ ಸಹ ಇಂತಹ ರಸಾನುಭೂತಿಗೆ ನೆರವಾಗುತ್ತವೆ. ಒಬ್ಬ ಚಿತ್ರಕಾರ, ಒಬ್ಬ ಬರಹಗಾರ, ಒಬ್ಬ ಶಿಲ್ಪಿ ತಮ್ಮ ಕೃತಿಯನ್ನು ಶ್ರದ್ಧೆಯಿಂದ ಪೂರ್ಣಗೊಳಿಸಿದ ನಂತರ ಅದನ್ನು ಮತ್ತೆ ಮತ್ತೆ ನೋಡಿ ಕಣ್ತುಂಬಿಕೊಳ್ಳುತ್ತಾರಲ್ಲಾ, ಆನಂದಿಸುತ್ತಾರಲ್ಲಾ, ಅದು ರಸಿಕತೆ! ಹೊಟ್ಟೆಪಾಡಿಗೆ ಮಾಡುವ ಕೆಲಸದಲ್ಲೂ ಆನಂದ ಕಾಣುವ ರಸಿಕರಿದ್ದಾರೆ. ಅಂತಹ ರಸಿಕರೇ ತಾವು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ, ಚೊಕ್ಕವಾಗಿ ಮಾಡುವವರೆಂದರೆ ಅದರಲ್ಲಿ ಅತಿಶಯೋಕ್ತಿಲ್ಲ. ಇಂತಹವರಿಂದಲೇ ಏನನ್ನಾದರೂ ಸಾಧಿಸಲು ಸಾಧ್ಯ. ಸ್ವಾಮಿ ವಿವೇಕಾನಂದರ ಈ ಮಾತು ಮನನೀಯ: "ಒಂದು ವಿಚಾರವನ್ನು ತೆಗೆದುಕೊಳ್ಳಿ. ಆ ವಿಚಾರವನ್ನು ನಿಮ್ಮ ಜೀವನವನ್ನಾಗಿಸಿಕೊಳ್ಳಿ, ಅದರ ಬಗ್ಗೆ ಕನಸು ಕಾಣಿ, ಅದರಲ್ಲೇ ಜೀವಿಸಿ. ನಿಮ್ಮ ಮೆದುಳು, ಸ್ನಾಯು, ನರಮಂಡಲ ಮತ್ತು ದೇಹದ ಎಲ್ಲಾ ಭಾಗಗಳೂ ಆ ವಿಚಾರದಲ್ಲೇ ಮುಳುಗಿರಲಿ. ಇತರ ಎಲ್ಲಾ ವಿಚಾರಗಳನ್ನೂ ಬದಿಗೆ ಸರಿಸಿ. ಅದು ಯಶಸ್ಸಿಗೆ ದಾರಿ. ದೊಡ್ಡ ಸಾಧಕರುಗಳು ಸಿದ್ಧಗೊಳ್ಳುವುದು ಹೀಗೆಯೇ." ಶ್ರದ್ಧಾಪೂರ್ವಕವಾಗಿ ಮನವೊಪ್ಪುವ ಕೆಲಸಗಳಲ್ಲಿ ತೊಡಗಿಕೊಂಡು, ಅದರಿಂದ ಸಿಗುವ ಹಿತಾನಂದವನ್ನು ಅನುಭವಿಸುವ ರಸಿಕರಾಗೋಣ.
ದೇಹ ದೇಹದ ಬೆಸುಗೆಯೆನಿಸುವುದು ಕಾಮ
ಹೃದಯಗಳ ಮಿಲನದಿಂದರಳುವುದು ಪ್ರೇಮ |
ಆತ್ಮ ಆತ್ಮಗಳೊಂದಾಗೆ ಆತ್ಮಾಮೃತಾನಂದ
ಅಂತರಂಗದ ಸುಖವೆ ಸುಖವು ಮೂಢ ||
     ರಸಿಕತೆಯೆಂದರೆ ಪ್ರೀತಿಸುವುದು, ಅದರಲ್ಲಿ ಪೂರ್ಣ ಸಂತೋಷ ಪಡೆಯುವುದು. ಕಳ್ಳತನದ ಕಾಮದಾಟವನ್ನು ರಸಿಕತೆಯೆನ್ನುವುದಾದರೆ ಅದು ಆ ಪದಕ್ಕೆ ಮಾಡುವ ಅಪಚಾರವೇ ಸರಿ. ಏಕೆಂದರೆ ಅಂತಹ ಕ್ರಿಯೆಯಲ್ಲಿ ಪೂರ್ಣ ಸಂತೋಷ ಸಿಗುವುದೆಂಬುದು ಭ್ರಮೆ. ಅಂತಹ ಕ್ರಿಯೆಯಲ್ಲಿ ಅಳುಕಿದೆ, ಆತಂಕವಿದೆ, ಭಯವಿದೆ. ಇನ್ನು ಆನಂದಕ್ಕೆ ಅರ್ಥವೆಲ್ಲಿ? ಯಾವ ಕ್ರಿಯೆಯಿಂದ ಅಳುಕಿಲ್ಲದ, ಆತಂಕವಿಲ್ಲದ ಆನಂದ ದೊರೆಯುವುದೋ ಅದನ್ನು ಮಾತ್ರ ರಸಿಕತೆಯೆನ್ನಬಹುದು. ನಿಜವಾದ ರಸಿಕ ಬಲವಂತ ಮಾಡಲಾರ. ರಾವಣ ಸಹ ಸಮಾಗಮಕ್ಕಾಗಿ ಸೀತೆಯ ಒಪ್ಪಿಗೆ ಪಡೆಯಲು ಪ್ರಯತ್ನಿಸಿದನೇ ಹೊರತು ಬಲಾತ್ಕಾರ ಮಾಡಲಿಲ್ಲ. ಪ್ರೀತಿಯೆಂದರೆ ಕೇವಲ ಗಂಡು-ಹೆಣ್ಣಿನ ಮಿಲನಕ್ಕೆ ಸೀಮಿತವಾಗಿರದೆ, ಅದಕ್ಕೂ ಮೀರಿರಬೇಕು.  ಗಂಡು-ಹೆಣ್ಣಿನ ಮಿಲನ ಸಹ ಪ್ರೀತಿಪೂರ್ವಕವಾಗಿರಬೇಕು. ಇಲ್ಲದಿದ್ದರೆ ಅದನ್ನು ಕಾಮವೆಂದು ಮಾತ್ರ ಹೇಳಬಹುದು. ಪಾಶ್ಚಾತ್ಯರಲ್ಲಿ ಕಂಡು ಬರುವ ಮುಕ್ತಕಾಮವನ್ನು, ಗುತ್ತಿಗೆಯ ಪ್ರೇಮದಾಟಗಳು, ಕರಾರಿನ ವಿವಾಹಗಳು, ಇತ್ಯಾದಿಗಳನ್ನು  ಸ್ವೇಚ್ಛಾಚಾರದ ಸಾಲಿಗೆ ಸೇರಿಸಬಹುದೇ ಹೊರತು ರಸಿಕತೆಯೆನ್ನಲಾಗದು. ಅಲ್ಲಿ ದೈಹಿಕ ಕಾಮನೆಗಳನ್ನು ತೀರಿಸಿಕೊಳ್ಳುವ ಕ್ರಿಯೆಯಿದೆಯೇ ಹೊರತು ಪ್ರೀತಿಯ ಅಂಶ ಕಾಣಲಾಗದು. ನಿಜರಸಿಕರಾಗೋಣ.
     ತಾಯಿ-ಮಕ್ಕಳ ಪ್ರೀತಿ, ಮಕ್ಕಳನ್ನು ಮುದ್ದು ಮಾಡುವ ಹಿರಿಯರ ಪ್ರೀತಿ, ಮಕ್ಕಳು ದೊಡ್ಡವರನ್ನು ಪ್ರೀತಿಸುವ, ಗೌರವಿಸುವ ರೀತಿಯೂ ರಸಿಕತೆಯೇ! ನಾನು ಹೇಗಿದ್ದೇನೆ, ನನ್ನ ಆಕಾರ ಈಗ ಹೇಗಿದೆಯೆಂದು ನನಗೆ ಗೊತ್ತು. ಒಂದಾನೊಂದು ಕಾಲದಲ್ಲಿ ಸುಂದರನಾಗಿದ್ದೆನೇನೋ! ಆದರೂ ನನ್ನ ಮೊಮ್ಮಗಳು 'ಮೈ ತಾತಾ ಈಸ್ ವೆರಿ ವೆರಿ ಕ್ಯೂಟ್" ಅನ್ನುತ್ತಾಳೆ! ಸುಂದರತೆ ಅನ್ನುವುದು ಹೊರರೂಪದಲ್ಲಿ ಕಾಣುವುದಾಗಿದ್ದರೆ ಅವಳು ನನ್ನನ್ನು ಕ್ಯೂಟ್ ಅನ್ನಲು ಸಾಧ್ಯವಿರಲಿಲ್ಲ. ನಾನು ಅವಳನ್ನು ತುಂಬಾ ಹಚ್ಚಿಕೊಂಡಿದ್ದೇನೆ, ಮುದ್ದಿಸುತ್ತೇನೆ, ಪ್ರೀತಿಸುತ್ತೇನೆ, ಅದಕ್ಕೇ ಹಾಗೆ ಹೇಳಿರಬಹುದು. ನಿಷ್ಕಳಂಕವಾಗಿ ಪ್ರೀತಿಸುವ ಮತ್ತು ಆ ಮೂಲಕ ಸಿಗುವ ಅದ್ಭುತ ಆನಂದವನ್ನು ಪಡೆಯುವಂತಹ ರಸಿಕರಾಗೋಣ.
ಸುಖವನಾಳೆ ಭೋಗಿ ಮನವನಾಳೆ ಯೋಗಿ 
ಸುಖವನುಂಡೂ ದುಃಖಪಡುವವನೆ ರೋಗಿ |
ಸುಖವಿಮುಖಿಯಾದರೂ ಸದಾಸುಖಿ ಯೋಗಿ
ನಿಜರಸಿಕನವನೆ ತಿಳಿಯೊ ನೀ ಮೂಢ ||
      ನಿಜವಾದ ರಸಿಕರೆಂದರೆ ವಿರಾಗಿಗಳೇ! ಆಶ್ಚರ್ಯಪಡಬೇಡಿ. ಕಪಟಿ ಸನ್ಯಾಸಿಗಳನ್ನೂ ನೆನಪಿಸಿಕೊಳ್ಳಬೇಡಿ! ವಿರಾಗಿಗಳು, ಸನ್ಯಾಸಿಗಳು ಬಯಕೆಗಳನ್ನು, ಆಸೆಗಳನ್ನು ಬಿಟ್ಟವರು ಎಂದು ಹೇಳಲಾಗದು. ಅವರು ಸಾಮಾನ್ಯರು ಬಯಸುವಂತಹ ಸಂಗತಿಗಳು, ಆಸೆಗಳನ್ನು ಬಯಸುವವರಲ್ಲ. ಅವರದು ಅತ್ಯುನ್ನತ ಬಯಕೆ, ಆಸೆ. ಅವರು ಅತ್ಯುನ್ನತ ಬಯಕೆಯಾದ ಆತ್ಮವನ್ನು  ಅರಿಯುವ, ಆ ಮೂಲಕ ಪರಮಾತ್ಮನನ್ನು ಅರಿಯುವ ಹಾಗೂ ಅದರಿಂದ ಅತ್ಯುನ್ನತ ಆನಂದಸ್ಥಿತಿಯಾದ ಸಚ್ಚಿದಾನಂದಭಾವವನ್ನು ಹೊಂದುವ ಹೆಬ್ಬಯಕೆ ಹೊಂದಿದವರು. ಧ್ಯಾನದಿಂದ ಇಂತಹ ಸ್ಥಿತಿಯನ್ನು ತಲುಪಬಹುದೆನ್ನುತ್ತಾರೆ. ಹಿತವಾದ ಆನಂದಾನುಭವ ನೀಡುವ ಇದನ್ನೇ ಭಾವಸಮಾಧಿ ಅನ್ನುತ್ತಾರೆ. ಇದು ರಸಿಕತೆಯ ಉತ್ಕಟ ಸ್ಥಿತಿ. ಇಂತಹ ಸ್ಥಿತಿಯಲ್ಲಿ ಆನಂದಾನುಭವ ಹೊರತುಪಡಿಸಿ ಬೇರೆ ಏನೂ ಬೇಕೆನ್ನಿಸುವುದಿಲ್ಲ. ಆ ಸಂದರ್ಭದಲ್ಲಿ ಏನೇ ಆದರೂ ಪರವಾಗಿಲ್ಲವೆಂಬ ಸ್ಥಿತಿ ತಲುಪಿರುತ್ತಾರೆ, ದೇಹದ ಪರಿವೆಯೂ ಇರುವುದಿಲ್ಲ. ದೈವಿಕ ಆನಂದದ ಸ್ಥಿತಿಯಲ್ಲಿ ತತ್ತ ಬೇಕಿರುವುದಿಲ್ಲ, ಸಿದ್ಧಾಂತಗಳ ಅಗತ್ಯವಿರುವುದಿಲ್ಲ, ಮುಕ್ತಿ, ಮೋಕ್ಷ ಇತ್ಯಾದಿಗಳೂ ಬೇಕೆನ್ನಿಸುವುದಿಲ್ಲ. ಇದು ರಸಿಕತೆಯ ಮಹತ್ವ. ರಸಿಕರಾಗಲು ಪ್ರಯತ್ನಿಸೋಣ, ರಸಿಕರಾಗೋಣ!


-ಕ.ವೆಂ.ನಾಗರಾಜ್.
**************
24.12.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಡಿಸೆಂಬರ್ 23, 2014

ಹುಟ್ಟಿದವರು ಸತ್ತಿರಲೇ ಇಲ್ಲ!

ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ |
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟುಸಾವುಗಳೆರಡು ಮಾಯೆ ಮೂಢ ||

     "ಶ್ರೀ. . . . . . . . . . . . ರವರು ಅತ್ಯಂತ ಜನಾನುರಾಗಿಯಾಗಿದ್ದು, ನಮಗೆಲ್ಲಾ ತುಂಬಾ ಬೇಕಾದವರಾಗಿದ್ದರು. ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವರ ಅಗಲಿಕೆಯ ದುಃಖವನ್ನು ಸಹಿಸುವುದು ನಮಗೇ ಇಷ್ಟು ಕಷ್ಟವಾಗಿರುವಾಗ ಅವರ ಕುಟುಂಬದವರಿಗೆ ಇನ್ನು ಹೇಗಾಗಿರಬೇಕು? ಅವರ ಕುಟುಂಬದವರೆಲ್ಲರಿಗೂ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದಯಾಮಯನಾದ ಭಗವಂತ ಕೊಡಲಿ ಎಂದು ಪ್ರಾರ್ಥಿಸೋಣ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ನಾವೆಲ್ಲರೂ ಎದ್ದುನಿಂತು ಎರಡು ನಿಮಿಷ ಮೌನ ಶ್ರದ್ಧಾಂಜಲಿ ಸಲ್ಲಿಸೋಣ" - ಗಣ್ಯರೊಬ್ಬರ ನಿಧನದ ಸಂದರ್ಭದಲ್ಲಿ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ವೇದಿಕೆಯಲ್ಲಿದ್ದವರೊಬ್ಬರು ಈ ರೀತಿಯಲ್ಲಿ ಕರೆ ಕೊಡುತ್ತಿದ್ದರು. ಮೃತ ಗಣ್ಯರ ಅಂತ್ಯಸಂಸ್ಕಾರ ಅದಾಗಲೇ ಆಗಿಹೋಗಿತ್ತು. ಅಗ್ನಿಯಲ್ಲಿ ಅರ್ಪಿತವಾದ ಶರೀರ ಪಂಚಭೂತಗಳಲ್ಲಿ ಲೀನವಾಗಿತ್ತು. ಹಾಗಾದರೆ ಆ ಶರೀರದೊಂದಿಗೆ ಗುರುತಿಸಿಕೊಂಡಿದ್ದ ಆತ್ಮ ಇನ್ನೂ ಇತ್ತೇ? ಶರೀರ ಹೋದರೂ ಆತ್ಮ ಇರುತ್ತದೆಯೇ? ಸದ್ಗತಿ ಸಿಗುವುದು ಅಂದರೆ ಏನು? . . ಇತ್ಯಾದಿ ಪ್ರಶ್ನೆಗಳು ಕಾಡತೊಡಗಿದವು. ಶರೀರಕ್ಕೆ ಹೊರತಾದ ಆತ್ಮ ಒಂದು ಇದೆ ಅನ್ನುವುದನ್ನು ಒಪ್ಪಿ, ಅದಕ್ಕೆ ಸದ್ಗತಿ ಬಯಸಿ ಮಾಡುವ ಕ್ರಿಯೆಯೇ ಉತ್ತರಕ್ರಿಯಾದಿ ಸಂಸ್ಕಾರಗಳು. ಶರೀರವನ್ನು ಹೂಳುವುದಿರಬಹುದು, ಸುಡುವುದಿರಬಹುದು, ಪಾರ್ಸಿಗಳು ಮಾಡುವಂತೆ ರಣಹದ್ದುಗಳಿಗೆ ದೇಹವನ್ನು ಆಹಾರವಾಗಿ ಉಣಿಸುವುದಿರಬಹುದು, ಏನಾದರೂ ಇರಬಹುದು. ಇಂತಹ ಕ್ರಿಯೆಗಳಿಂದ ಮೃತಶರೀರ ಪಂಚಭೂತಗಳಲ್ಲಿ ವಿಲೀನವಾಗಲು ಸಹಕಾರಿಯಾಗುತ್ತದೆ.
     'ಜೀವಾತ್ಮ ಅನ್ನುವ ವಸ್ತು ಇರುವುದಿಲ್ಲ. ಅದು ಶರೀರದೊಂದಿಗೆ ಸಹಜವಾಗಿ ಉಂಟಾಗುವ ಚೈತನ್ಯವಿಶೇಷ. ಶರೀರ ನಷ್ಟವಾದೊಡನೆ ಅದೂ ನಾಶವಾಗುತ್ತದೆ' ಎಂಬ ವಾದವೂ ಇದೆ. ವಿಚಾರ ಮಾಡೋಣ. ಈ ಶರೀರ ಅನ್ನುವುದು ಜಡವಸ್ತುಗಳಿಂದ ಕೂಡಿದ ಒಂದು ಸುಂದರ ನಿರ್ಮಾಣ. ಪರಮಾತ್ಮ ನಿರ್ಮಿಸಿದ ನವರಸದ ಅರಮನೆ. ಅದಕ್ಕೆ ಚೈತನ್ಯ ಬಂದಿರುವುದು ಅದರೊಳಗಿರುವ ಪ್ರಾಣ/ಚೈತನ್ಯ/ಜೀವಾತ್ಮ/ಯಾವುದೋ ಶಕ್ತಿಯಿಂದ ಎಂದು ಒಪ್ಪಬಹುದಲ್ಲವೇ? ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಯಾವುದೇ ಮೂಲವಸ್ತುವಿಗೆ ನಾಶವಿರುವುದಿಲ್ಲ. ಅದು ರೂಪಾಂತರ ಹೊಂದಿದರೂ ಒಂದಲ್ಲಾ ಒಂದು ರೂಪದಲ್ಲಿ ಅಸ್ತಿತ್ವದಲ್ಲಿರುತ್ತದೆ. ಮೃತ ಶರೀರವನ್ನು ಸುಟ್ಟಾಗ ಅಥವ ಯಾವುದೇ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದಾಗ ಅದು ಬೂದಿಯಾಗಿಯೋ, ಆವಿಯಾಗಿಯೋ, ಮಣ್ಣಾಗಿಯೋ, ನೀರಾಗಿಯೋ ರೂಪಾಂತರ ಹೊಂದುತ್ತದೆ. ಆ ಶರೀರದೊಳಗಿದ್ದ ಜೀವ ಚೈತನ್ಯ ಏನಾಗುತ್ತದೆ? ನಾಶವಾಗುತ್ತದೆ ಎಂದರೆ ಅದು ಇನ್ನೂ ಯಾವುದೋ ರೀತಿಯಲ್ಲಿ ಇರಲೇಬೇಕಲ್ಲವೇ? ಮೊದಲು ಅದು ಯಾವ ರೂಪದಲ್ಲಿತ್ತು? ಅಂತ್ಯ ಸಂಸ್ಕಾರದ ನಂತರ ಯಾವ ರೂಪ ಹೊಂದುತ್ತದೆ ಎಂಬುದು ಯಾರಿಗೆ ಗೊತ್ತಿದೆ? ಶರೀರದೊಂದಿಗೆ ಸಹಜವಾಗಿ ಉಂಟಾಗುವ ಜೀವ ಚೈತನ್ಯವೆಂದರೆ ಅದನ್ನು ಸ್ಟೃಸಿದವರು ಯಾರು? ಜಡವಸ್ತು ತನ್ನಿಂದ ತಾನೇ ಏನಾದರೂ ಸ್ಟೃಸಲು ಸಾಧ್ಯವಿದೆಯೇ? ಇಲ್ಲ ಅನ್ನುತ್ತದೆ ವಿಜ್ಞಾನ. ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲಾರದು. ಒಂದು ವೇಳೆ ಜಡವಸ್ತು ಏನಾದರೂ ಸೃಷ್ಟಿಸಲು ಸಾಧ್ಯ ಎಂದು ವಾದಕ್ಕೋಸ್ಕರವಾಗಿ ಒಪ್ಪಿಕೊಂಡರೂ ಅದರಿಂದ ಮತ್ತೊಂದು ಜಡವಸ್ತು ನಿರ್ಮಾಣ ಸಾಧ್ಯವೇ ಹೊರತು ಚೈತನ್ಯದಿಂದ ಕೂಡಿದ ವಸ್ತು ನಿರ್ಮಾಣ ಆಗಲಾರದು. ಇರುವ ವಸ್ತುಗಳಿಂದ ಇಲ್ಲದ ವಸ್ತುವಿನ ಸೃಷ್ಟಿ ಹೇಗೆ ಸಾಧ್ಯ? ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಶರೀರದೊಳಗೆ ಜೀವ ಚೈತನ್ಯ ಸೇರಿದೆಯೇ ಹೊರತು, ಶರೀರದಿಂದ ಚೈತನ್ಯ ಉಂಟಾಗಿಲ್ಲ ಅನ್ನುವುದು ಹೆಚ್ಚು ತಾರ್ಕಿಕ. ಹೀಗೆಯೇ ಮುಂದುವರೆಸೋಣ. ಆ ಚೈತನ್ಯ ಮೊದಲು ಶರೀರದೊಳಗಿದ್ದಾಗ ವ್ಯಕ್ತಿ ಜೀವಂತನಾಗಿದ್ದ, ಇಲ್ಲದಾದಾಗ ಮೃತನಾದ ಅನ್ನಬಹುದು. ಹೊರಗಿನಿಂದ ವ್ಯಕ್ತಿಯ ಶರೀರದೊಳಗೆ ಬಂದು ಸೇರಿದ್ದ ಆ ಚೈತನ್ಯ ವ್ಯಕ್ತಿಯ ಮರಣಾನಂತರ ಶರೀರದ ಹೊರಗೆ ಇರುತ್ತದೆ. ಬದುಕಿದ್ದಾಗ ಒಂದು ರೂಪದಲ್ಲಿ, ಸತ್ತಾಗ ಇನ್ನೊಂದು ರೂಪದಲ್ಲಿ ಇರುತ್ತದೆ ಎಂದಾದರೆ ಯಾವ ರೂಪದಲ್ಲಿ ಇದ್ದೀತು ಅನ್ನುವುದು ಯಾರಿಗೆ ತಿಳಿದಿದೆ? ಇಂತಹ ವಿಶಿಷ್ಟ ಚೈತನ್ಯವನ್ನೇ ಜ್ಞಾನಿಗಳು ಜೀವಾತ್ಮ ಎನ್ನುತ್ತಾರೆ. ಜೀವಾತ್ಮಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ ಅನ್ನುವುದು ಈ ಅರ್ಥದಲ್ಲೇ ಇರಬೇಕು. 
     'ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ' - ಶ್ರೀ ಶಂಕರಾಚಾರ್ಯರ ಈ ಉಕ್ತಿ ಪುನರ್ಜನ್ಮವನ್ನು ಸಮರ್ಥಿಸುವುದರೊಂದಿಗೆ ಜೀವಚೈತನ್ಯದ ಅಮರತ್ವವನ್ನೂ ಸಾರುತ್ತಿದೆ. ಭಾರತೀಯ ವೈಚಾರಿಕರು ಪುನರ್ಜನ್ಮವನ್ನು ನಂಬುತ್ತಾರೆ. ಭಾರತೀಯ ಧರ್ಮಶಾಸ್ತ್ರಗಳೂ ಪುನರ್ಜನ್ಮ ಸಿದ್ಧಾಂತವನ್ನು ಎತ್ತಿ ಹಿಡಿದಿವೆ. ಪುನರ್ಜನ್ಮವಿದ್ದಲ್ಲಿ ಹಳೆಯ ಶರೀರ ನಷ್ಟವಾದ ಮೇಲೆ, ಅದು ಪಂಚಭೂತಗಳಲ್ಲಿ ಸೇರಿಹೋದಮೇಲೆ ಹಿಂದಿನ ಶರೀರದಲ್ಲಿದ್ದ ಜೀವಚೈತನ್ಯ ಬೇರೆ ಶರೀರದ ಮೂಲಕವೇ ಪ್ರಕಟಗೊಳ್ಳಬೇಕು/ಪುನರ್ಜನ್ಮ ಹೊಂದಬೇಕು.
     ಸಕಲ ಜೀವಿಗಳನ್ನು ಸೃಷ್ಟಿಸಿದವನು ಭಗವಂತ ಎಂದೂ ಸಹ ವಾದವಿದೆ. ಯಾವುದರಿಂದ ಸೃಷ್ಟಿಸಿದ? ಶೂನ್ಯದಿಂದಂತೂ ಆಗಿರಲಾರದು. ಶೂನ್ಯದಿಂದ ಸೃಷ್ಟಿ ಅನ್ನುವುದನ್ನು ವಿಜ್ಞಾನ ಸಹ ಒಪ್ಪುವುದಿಲ್ಲ. ಎಲ್ಲಾ ಜೀವಿಗಳೂ ಪರಮಾತ್ಮನ ಅಂಶಗಳೇ ಅಂದರೆ, ಇಷ್ಟೊಂದು ಜೀವಜಂತುಗಳು ಇರುವಾಗ ಅವೆಲ್ಲವನ್ನೂ ಪರಮಾತ್ಮ ತನ್ನ ಅಂಶದಿಂದಲೇ ಸೃಷ್ಟಿಸಿದ ಅಂದರೆ, ಸೃಷ್ಟಿಯ ನಂತರ ಅವನು  ಪರಿಪೂರ್ಣ ಎಂದೆನಿಸಿಕೊಳ್ಳಲಾರನು. ಭಗವಂತ ಸೃಷ್ಟಿಸಿದ ಅಂದರೆ ಏಕೆ  ಸೃಷ್ಟಿಸಿದ ಎಂಬ ಪ್ರಶ್ನೆ ಬರುತ್ತದೆ. ಅವನಿಗೆ ಬೇಕಾಗಿತ್ತು, ಅದಕ್ಕಾಗಿ  ಸೃಷ್ಟಿಸಿದ ಅಂದರೆ 'ಬೇಕು' ಅನ್ನುವ ಭಾವನೆ ಬಂದ ತಕ್ಷಣ ಪರಮಾತ್ಮನಿಗೆ ಏನೂ ಬೇಕಿಲ್ಲದಾಗ, ಯಾವುದರ ಅಗತ್ಯವೂ ಇಲ್ಲದಿರುವಾಗ, ಇಂತಹ ಸೃಷ್ಟಿಗೆ ಅರ್ಥವೇ ಉಳಿಯುವುದಿಲ್ಲ, ಅಲ್ಲದೆ ಪರಮಾತ್ಮ ಪರಿಪೂರ್ಣ ಎಂಬ ಗುಣವಿಶೇಷತೆಗೆ ಧಕ್ಕೆ ಬರುತ್ತದೆ. ಸೂಕ್ತವಾದ ವಾದವೆಂದರೆ ಎಷ್ಟು ಜೀವಜಂತುಗಳಿವೆಯೋ ಅಷ್ಟು ಜೀವಾತ್ಮಗಳಿವೆ ಅನ್ನುವುದು, ಆ ಜೀವಾತ್ಮಗಳೂ ಪರಮಾತ್ಮನಂತೆ ಹುಟ್ಟು-ಸಾವುಗಳಿಲ್ಲದವು, ಪರಮಾತ್ಮನ ಪ್ರಜೆಗಳು ಅನ್ನುವುದು! ಶರೀರದೊಡನೆ ಇದ್ದಾಗ ಆತ್ಮಗಳು ಮಾಡುವ ಕರ್ಮವನ್ನನುಸರಿಸಿ ಹೊಸ ಜನ್ಮ ಪಡೆಯುವುವು. ಆ ಜನ್ಮ ಮಾನವಜನ್ಮವೇ ಆಗಬೇಕೆಂದಿಲ್ಲ, ಇಂತಹ ಲಿಂಗವೇ ಆಗಬೇಕೆಂದಿಲ್ಲ. ಅಥರ್ವವೇದ ಹೇಳುತ್ತದೆ: 
ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ |
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ ||  ಅಥರ್ವ: ೧೦.೮.೨೭)
     ಇದರ ಅರ್ಥ ಜೀವಾತ್ಮನೇ, ನೀನು ಸ್ತ್ರೀ, ನೀನು ಪುರುಷ, ನೀನು ಕುಮಾರ ಮತ್ತು ನೀನು ಕುಮಾರಿ. ವೃದ್ಧನಾಗಿ, ನಂತರ ಮತ್ತೆ ಜನಿಸಿ ಎಲ್ಲೆಡೆಯೂ ಮುಖ ಮಾಡುವೆ. ಭಗವಂತನಂತೆ ಜೀವಾತ್ಮನೂ ಲಿಂಗರಹಿತನಾಗಿದ್ದು ಧರಿಸಿದ ಶರೀರವನ್ನು ಅವಲಂಬಿಸಿ ಹೆಣ್ಣು, ಗಂಡು ಅನ್ನಿಸಿಕೊಳ್ಳುವುದು.
     ಮೃತ ಶರೀರವನ್ನು 'ವ್ಯಕ್ತಿಯ ಹೆಣ', 'ವ್ಯಕ್ತಿಯ ದೇಹ(ಬಾಡಿ)' ಅನ್ನುತ್ತೇವೆಯೇ ಹೊರತು 'ವ್ಯಕ್ತಿ' ಅನ್ನುವುದಿಲ್ಲ. ಅಂದರೆ ಕೇವಲ ಶರೀರ ವ್ಯಕ್ತಿಯೆನಿಸುವುದಿಲ್ಲ. ಶರೀರದೊಳಗೆ ಜೀವಾತ್ಮನಿದ್ದಾಗ ಅದು ನಾಗರಾಜ, ಶ್ರೀಧರ, ಅಬ್ದುಲ್, ಡಿಸೋಜಾ, ಊರ್ಮಿಳಾ, ಇತ್ಯಾದಿಗಳಿಂದ ಗುರುತಿಸಲ್ಪಡುತ್ತದೆ. ಎಂತಹ ಚೋದ್ಯ! ಶರೀರಕ್ಕೆ ಸಾವಿದೆ, ಚೈತನ್ಯಕ್ಕಿಲ್ಲ. ಮಾಯೆಯೆಂದರೆ, ಶರೀರದೊಳಗಿನ ಚೈತನ್ಯವೂ ತನ್ನನ್ನು ಶರೀರದೊಂದಿಗೇ ಗುರುತಿಸಿಕೊಳ್ಳುತ್ತದೆ, ತಾನೇ ವ್ಯಕ್ತಿಯೆಂದು ಭಾವಿಸುತ್ತದೆ, ಚಿಂತನ-ಮಂಥನ ಮಾಡುತ್ತದೆ, ಸಕಲ ಸುಖವೂ ತನಗೇ ಬೇಕೆನ್ನುತ್ತದೆ, ಶರೀರ ಸಾಯುವವರೆಗೂ ಆ ಶರೀರ ನಾಶವಾಗುವುದನ್ನು ಬಯಸುವುದೇ ಇಲ್ಲ! ಆ ಶರೀರ ಮನುಷ್ಯನದಾಗಿರಬಹುದು ಅಥವ ಮನುಷ್ಯ ತಿಂದು ತೇಗುವ ಕೋಳಿ, ಹಂದಿಯದಾಗಿರಬಹುದು, ಬೇರೆ ಯಾವುದೇ ಜೀವಜಂತುವಾಗಿರಬಹುದು! ಇದೆಂತಹ ಸೃಷ್ಟಿ ರಹಸ್ಯ!
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು?|
ನಿನಗರ್ಥ ನೀಡಿರುವ ಜೀವಾತ್ಮನೇ ನೀನು 
ನೀನಲ್ಲ ತನುವೆಂಬುದರಿಯೋ ಮೂಢ|| 

ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ
ಈಗಿರುವ ದೇಹಕರ್ಥ ಬಂದುದು ಹೇಗೆ|
ಶುದ್ಧ ಬುದ್ಧಿಯಲಿ ನೋಡೆ ತಿಳಿದೀತು ನಿನಗೆ
ಅಂತರಾತ್ಮನ ಕರೆಯು ಕೇಳಿಪುದು ಮೂಢ|| 

ಕಾಣದದು ನಯನ ಕಿವಿಗೆ ಕೇಳಿಸದು
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೇ ಮೂಢ? || 

ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ || 

-ಕ.ವೆಂ.ನಾಗರಾಜ್.
**************
[17-12-2014ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ]

ಮಂಗಳವಾರ, ಡಿಸೆಂಬರ್ 16, 2014

ಬೇಡದಿರು ಮನವೆ ಬೇಡದಿಹ ಸಾವ!


ಇತ್ತಿಹನು ಭಗವಂತ ಬದುಕಲೀ ಬದುಕು
ಬದುಕುವ ಮುನ್ನ ಸಾಯುವುದೆ ಕೆಡುಕು |
ಸಾಯುವುದು ಸುಲಭ ಬದುಕುವುದು ಕಷ್ಟ
ಸುಲಭದ ಸಾವ ಬಯಸದಿರು ಮೂಢ ||
     ಒಂದು ಲೇಖನದಲ್ಲಿ ಪ್ರಾಸಂಗಿಕವಾಗಿ ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ಬಂದಿದ್ದ ಸಂದಿಗ್ಧ ಸಂದರ್ಭದಲ್ಲಿ ಪರಿಹಾರಕ್ಕಾಗಿ ಧ್ಯಾನದ ಮೊರೆ ಹೋಗಿ ಸಾಂತ್ವನ ಕಂಡುಕೊಂಡ ಬಗ್ಗೆ ಬರೆದಿದ್ದೆ. ಅದಕ್ಕೆ ಪ್ರತಿಕ್ರಿಯೆಯಾಗಿ ಮಿತ್ರರೊಬ್ಬರು "ಅಂತಹ ಸಂದರ್ಭದಲ್ಲಿ ಧ್ಯಾನದ ಅಗತ್ಯವೇ ಇಲ್ಲ, ಬೇರೆ ವಿಷಯದ ಎಡೆಗೆ ಆಸಕ್ತರಾದಾಗ ಆತ್ಮಹತ್ಯೆ ಯೋಚನೆ ತನ್ನಿಂದ ತಾನೇ ದೂರವಾಗುತ್ತದೆ" ಎಂದಿದ್ದರು. ಆ ಮಿತ್ರರ ಪ್ರತಿಕ್ರಿಯೆ ನನ್ನ ಈ ಲೇಖನಕ್ಕೆ ಪ್ರೇರಣೆಯಾಗಿದೆ. ನೀರಿನಲ್ಲಿ ಮುಳುಗುತ್ತಿರುವ ಈಜು ಬಾರದ ವ್ಯಕ್ತಿಯೊಬ್ಬ ಬದುಕಿ ಉಳಿಯಲು ತನ್ನ ಕೈಲಾದ ಎಲ್ಲಾ ಪ್ರಯತ್ನ ಮಾಡುತ್ತಾನೆ, ಕೈಗೆ ಸಿಕ್ಕುವ ಎಂತಹದನ್ನಾದರೂ ಹಿಡಿದು ಮೇಲೆ ಬರಲು ಪ್ರಯತ್ನಿಸುತ್ತಾನೆ. ಸಹಾಯಕ್ಕಾಗಿ ಆರ್ತನಾದ ಮಾಡುತ್ತಾನೆ. ಯಾವುದೇ ಸಹಾಯ ಸಿಗದಿದ್ದಾಗ ಅನಿವಾರ್ಯವಾಗಿ ಸಾವಿಗೆ ಶರಣಾಗುತ್ತಾನೆ. ಆತ್ಮಹತ್ಯೆ ಮಾಡಿಕೊಳ್ಳುವವನ ಸ್ಥಿತಿ ಸಹ ಒಂದು ರೀತಿಯಲ್ಲಿ ಹಾಗೆಯೇ ಇರುತ್ತದೆ. ಸಮಸ್ಯೆಯ ಸುಳಿಯಿಂದ ಪಾರಾಗಲು ಇನ್ನಿಲ್ಲದ ಪ್ರಯತ್ನ ಮಾಡುವ ಅವನಿಗೆ ಸಹಾಯದ ಎಲ್ಲಾ ದಾರಿಗಳೂ ಮುಚ್ಚಲ್ಪಟ್ಟಾಗ ಉಳಿಯುವುದು ದೇವರ ಮೊರೆ ಹೋಗುವುದು ಅರ್ಥಾತ್ ಧ್ಯಾನಿಸುವುದು ಮತ್ತು ಅವ್ಯಕ್ತ ಸಹಾಯಕ್ಕಾಗಿ ಹಂಬಲಿಸುವುದು ಮಾತ್ರ. ಅಲ್ಲೂ ಅವನಿಗೆ ನಿರಾಶೆಯಾದರೆ . . . .? ಅಂತಹ ಸಂದರ್ಭಗಳಲ್ಲಿ ಮನಸ್ಸು ಬೇರೆ ವಿಚಾರಗಳ ಕುರಿತು ಯೋಚಿಸುವ ವ್ಯವಧಾನ ಕಳೆದುಕೊಂಡಿರುತ್ತದೆ. ಅವನ ಪರಿಸ್ಥಿತಿಯ ಅರಿವಿರುವ ಸ್ನೇಹಿತರು, ಬಂಧುಗಳು ದೇವರ ರೂಪದಲ್ಲಿ ಅವನಿಗೆ ಸಹಾಯಕ್ಕೆ ಒದಗಿದರೆ ಮಾತ್ರ ಅವನನ್ನು ಉಳಿಸಬಹುದು. 
     ಆತ್ಮಹತ್ಯೆ, ಅರ್ಥಾತ್ ತನ್ನನ್ನು ತಾನೇ ಕೊನೆಗೊಳಿಸಿಕೊಳ್ಳುವುದು, ಒಂದು ಹತಾಶೆಯ ನಡವಳಿಕೆ. ಖಿನ್ನತೆ, ಮಾನಸಿಕ ಕಾಯಿಲೆಗಳು, ದೈಹಿಕ ಅನಾರೋಗ್ಯ, ಮಾದಕ ದ್ರವ್ಯಗಳ ಸೇವನೆ, ಒತ್ತಡಗಳು, ಆರ್ಥಿಕ ಹಿನ್ನಡೆ, ಧಾರ್ಮಿಕ/ಸಾಮಾಜಿಕ ಸಂಗತಿಗಳು, ವಿಫಲತೆ, ಅವಮಾನ ಮುಂತಾದವು ಆತ್ಮಹತ್ಯೆಯನ್ನು ಪ್ರೇರಿಸುವಂತಹವು. ನೇಣು ಹಾಕಿಕೊಳ್ಳುವುದು, ವಿಷ ಸೇವನೆ, ನೀರಿನಲ್ಲಿ ಮುಳುಗುವುದು, ಇತ್ಯಾದಿಗಳು ಆತ್ಮಹತ್ಯೆ ಮಾಡಿಕೊಳ್ಳುವವರು ಆರಿಸಿಕೊಳ್ಳುವ ರೀತಿಗಳು. ಆತ್ಮಹತ್ಯೆ ಮಾಡಕೊಳ್ಳುವವರಲ್ಲಿ ಹೆಚ್ಚಿನವರು ಮಧ್ಯ ವಯಸ್ಕರು ಮತ್ತು ವೃದ್ಧರು ಎಂದು ಅಂಕಿ-ಅಂಶಗಳು ಹೇಳುತ್ತವೆ. ಅವರುಗಳಲ್ಲಿ ಹೆಂಗಸರಿಗಿಂತ ಗಂಡಸರ ಸಂಖ್ಯೆಯೇ ಅಧಿಕವಾಗಿರುವುದು ಕುತೂಹಲಕಾರಿಯಾಗಿದೆ. ಅಂತರ್ಜಾಲದಲ್ಲಿ ತಡಕಾಡಿದರೆ ಹಲವಾರು ರೋಚಕ ವಿಷಯಗಳು ತಿಳಿಯುತ್ತವೆ. ಕೆಲವು ಕುತೂಹಲಕಾರಿ ವಿಷಯಗಳನ್ನು ಪ್ರಾಸಂಗಿಕವಾಗಿ ತಿಳಿಸಿ ಲೇಖನದ ಮುಖ್ಯ ಉದ್ದೇಶಕ್ಕೆ ಬರುವೆ. ಪ್ರಪಂಚದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವವರು ಚೀನೀಯರು. ವರ್ಷದಲ್ಲಿ ಸುಮಾರು ೨.೫ ಲಕ್ಷದಿಂದ ೩ ಲಕ್ಷ ಜನರು ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ.  ಸಿಗ್ಮಂಡ್ ಫ್ರಾಯ್ಡ್, ಕ್ಲಿಯೋಪಾತ್ರ, ಮಾರ್ಕ್ ಅಂಟೊನಿ, ಬ್ರೂಟಸ್, ಅಡಾಲ್ಫ್ ಹಿಟ್ಲರ್, ಅರ್ನೆಸ್ಟ್ ಹೆಮಿಂಗ್ ವೇ, ಮರ್ಲಿನ್ ಮನ್ರೋ, ಮುಂತಾದ ಖ್ಯಾತನಾಮರು ತಮ್ಮ ಜೀವನ ಕೊನೆಗೊಳಿಸಿಕೊಂಡದ್ದು ಆತ್ಮಹತ್ಯೆಯಿಂದಲೇ. ಕನ್ನಡದ ಚಲನಚಿತ್ರ ನಟಿಯರಾದ ಕಲ್ಪನಾ, ಮಂಜುಳಾರವರ ಅಂತ್ಯವೂ ಆತ್ಮಹತ್ಯೆಯಿಂದಲೇ ಆದದ್ದು. ಹಿಂದೆ ಶತ್ರುಗಳಿಂದ ಬಂಧನಕ್ಕೊಳಗಾಗಿ ಚಿತ್ರಹಿಂಸೆ ಅನುಭವಿಸುವುದಕ್ಕಿಂತ ಸಾಯುವುದೆ ಮೇಲು ಎಂದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದವರೂ ಇದ್ದರು. ಮುಸ್ಲಿಮ್ ದಾಳಿಕೋರರಿಂದ ಅವಮಾನಿತರಾಗುವುದನ್ನು ತಪ್ಪಿಸಿಕೊಳ್ಳಲು ರಜಪೂತ ಸ್ತ್ರೀಯರು ಸ್ವತಃ ಚಿತೆಗೆ ಹಾರಿ (ಅದನ್ನು ಜೌಹರ್ ಎನ್ನುತ್ತಿದ್ದರು) ಪ್ರಾಣ ಬಿಟ್ಟ ಬಗ್ಗೆ ಇತಿಹಾಸದ ಪುಟಗಳಲ್ಲಿ ದಾಖಲೆಗಳಿವೆ. ಗಂಡ ಸತ್ತಾಗ ಹೆಂಡತಿಯೂ ಚಿತೆಯೇರಿ ಸಹಗಮನ ಮಾಡುತ್ತಿದ್ದುದೂ ಹಿಂದೆ ಪ್ರಚಲಿತವಿತ್ತು. ಮೆಚ್ಚಿನ ನಾಯಕರುಗಳು ನಿಧನರಾದಾಗ ಶೋಕ ತಡೆಯಲಾರದೆ ಹಲವಾರು ಜನ ಪ್ರಾಣ ಕಳೆದುಕೊಂಡದ್ದೂ ಇದೆ. ಇತ್ತೀಚೆಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಂಧನದಿಂದ ಕಂಗೆಟ್ಟ ೨೪ಕ್ಕಿಂತಲೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡ ವಿಷಯ ಹಸಿರಾಗಿದೆ. ಸಮೂಹ ಸನ್ನಿಯ ಅತಿರೇಕವಿದು. ಸೆಪ್ಟೆಂಬರ್ ೧೦ನೆಯ ದಿನವನ್ನು ಪ್ರಪಂಚದ ಆತ್ಮಹತ್ಯೆ ತಡೆಯುವ ದಿನವಾಗಿ ಆಚರಿಸಲಾಗುತ್ತಿದೆ. ಇರಲಿ, ಆತ್ಮಹತ್ಯೆ ಹೇಗೆ ಮಾಡಿಕೊಳ್ಳುತ್ತಾರೆ, ಇತ್ಯಾದಿ ವಿವರಗಳನ್ನು ಇಲ್ಲಿ ವಿವರವಾಗಿ ಚರ್ಚಿಸುವುದು ಸೂಕ್ತವಲ್ಲ. ಆತ್ಮಹತ್ಯೆಯ ವಿವರಗಳನ್ನು ದೃಷ್ಯ ಮಾಧ್ಯಮಗಳಲ್ಲಿ ಪದೇ ಪದೇ ಬಿತ್ತರಿಸಿ, ವೈಭವೀಕರಿಸಿ, ರೋಚಕವಾಗಿ ಪ್ರಸ್ತಾಪಿಸುವುದರಿಂದ ಋಣಾತ್ಮಕ ಪರಿಣಾಮ ಬೀರುವುದನ್ನು ಗಮನಿಸಬೇಕಿದೆ. 
     ಆತ್ಮಹತ್ಯೆ ಅನ್ನುವುದು ಬಯಸಿ ಮಾಡಿಕೊಳ್ಳುವ ಸಂಗತಿಯಲ್ಲ; ಅದು ನೋವನ್ನು ಉಪಶಮನಗೊಳಿಸುವ ಎಲ್ಲಾ ಮಾರ್ಗಗಳೂ ವಿಫಲವಾಗಿ ನೋವು ಅಸಹನೀಯವೆನಿಸಿದಾಗ ನಡೆಯುವ ಸಂಗತಿ. ಇದನ್ನು ನಡೆಯದಂತೆ ಮಾಡುವುದು ಹೇಗೆ? ಎರಡು ಅವಕಾಶಗಳಿವೆ: ಒಂದು- ನೋವನ್ನು ಕಡಿಮೆ ಮಾಡಿಕೊಳ್ಳಲು ದಾರಿ ಹುಡುಕುವುದು; ಎರಡು: ನೋವು ಕಡಿಮೆ ಮಾಡಬಹುದಾದ ಹೊಸ ಮಾರ್ಗೋಪಾಯಗಳನ್ನು ಅರಸುವುದು. ನಿಜವಾಗಿ ಯಾರೂ ಸಾಯಬಯಸುವುದಿಲ್ಲ. ಆತ್ಮಹತ್ಯೆ ಮಾಡಿಕೊಂಡವರಿಗೆ ಮರಳಿ ಜೀವ ಬರಿಸಿ, ಅವರು ಸಾಯಬಯಸುತ್ತಾರೋ ಅಥವ ಬದುಕಬಯಸುತ್ತಾರೋ ಎಂದು ಕೇಳಿದರೆ ಅವರುಗಳು ಬದುಕುವುದನ್ನೇ ಆರಿಸಿಕೊಳ್ಳುತ್ತಾರೆ. ಏಕೆಂದರೆ ದುಡುಕಿನ ವಿಷಘಳಿಗೆ ಅದಾಗಲೇ ಕಳೆದುಹೋಗಿರುತ್ತದೆ. ಉತ್ಕಟ ಸನ್ನಿವೇಶದಲ್ಲಿ ದುಡುಕಿ ಕೈಗೊಳ್ಳುವ ಆತ್ಮಹತ್ಯೆಯತ್ನದಲ್ಲಿ ತಕ್ಷಣಕ್ಕೆ ಸಾವು ಸಂಭವಿಸದೇ ಇದ್ದಾಗ ಜೀವ ಮರಳಿ ಬದುಕಲು ಚಡಪಡಿಸುತ್ತಿರುತ್ತದೆ. ಕೆಲವು ಪ್ರಸಂಗಗಳಲ್ಲಿ ಆತ್ಮಹತ್ಯೆಗೆ ಯತ್ನಿಸಿ ಸಾಯದೇ ಬದುಕುಳಿದವರು ಜೀವಚ್ಛವಗಳಂತೆ ಆಗಿ ಇನ್ನೊಬ್ಬರ ಆಶ್ರಯದಲ್ಲಿ ಇರಬೇಕಾಗಿ ಬಂದುದನ್ನೂ ಕಂಡಿದ್ದೇವೆ. ಕೆಲವು ದಶಕಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದ್ದ ಒಬ್ಬರು ಕತೆಗಾರ್ತಿ, ಅವರ ಹೆಸರು ಗಂಗಾಪಾದೇಕಲ್ ಇರಬಹುದು, ತಾವೇ ತಮ್ಮ ಅನುಭವವನ್ನು ಹೇಳಿಕೊಂಡಿದ್ದನ್ನು ಓದಿದ್ದೆ. ಅವರು ಯಾವ ಕಾರಣಕ್ಕೋ ಬೇಸರಗೊಂಡು ಮನೆಯ ಅಟ್ಟದ ಮೇಲಿನ ಕೊಠಡಿಯ ಬಾಗಿಲು ಹಾಕಿಕೊಂಡು ವಿಷಸೇವನೆ ಮಾಡಿದ್ದರು. ನಂತರ ಸಂಕಟದಿಂದ ಒದ್ದಾಡುವಾಗ ಅವರಿಗೆ ಬದುಕುವ ಇಚ್ಛೆ ಪ್ರಬಲವಾಗಿ ಮನೆಯವರನ್ನು ಕೂಗಿ ಕರೆಯಲು ನೋಡಿದರೆ ಸ್ವರವೇ ಹೊರಡದೆ ಕೂಗಲಾಗಿರಲಿಲ್ಲ. ಎದ್ದು ಕೊಠಡಿಯ ಬಾಗಿಲು ತೆರೆಯುವ ಶಕ್ತಿಯೂ ಉಡುಗಿಹೋಗಿ ತೇಲುಗಣ್ಣು ಮಾಡುತ್ತಿದ್ದರು. ಅಕಸ್ಮಾತ್ತಾಗಿ ಅವರ ತಾಯಿ ಮಗಳನ್ನು ಕರೆದರೂ ಉತ್ತರ ಬರದಿದ್ದರಿಂದ ಅಟ್ಟ ಹತ್ತಿ ನೋಡಿದರೆ ಬಾಗಿಲು ಹಾಕಿದ ಕೊಠಡಿಯ ಒಳಗಿಂದ ಗೊರಗೊರ ಶಬ್ದ ಬರುತ್ತಿದ್ದುದನ್ನು ಕಂಡು ಆತಂಕಿತರಾಗಿ ಇತರ ಸದಸ್ಯರ ಸಹಾಯದಿಂದ ಕೊಠಡಿಯ ಬಾಗಿಲು ಒಡೆದು ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದರು. ದೇವರ ಕರುಣೆಯಿಂದ ಆಕೆ ಬದುಕಿ ಉಳಿದರು. ನಂತರದಲ್ಲಿ ಆಕೆ ಇತರರಿಗೆ ಆತ್ಮಹತ್ಯೆ ಮಾಡಿಕೊಳ್ಳದಿರಲು ಪ್ರೇರಣೆ ಕೊಡುವ ಲೇಖನ ಬರೆದಿದ್ದರು. ತಾಲ್ಲೂಕು ದಂಡಾಧಿಕಾರಿಯಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ನೂರಾರು ಶವಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೆ. ಸಂಬಂಧಿಕರ ವಿಚಾರಣೆ, ಹೇಳಿಕೆಗಳನ್ನೂ ದಾಖಲಿಸಿದ್ದೆ. ಬಹುತೇಕ ಸಂದರ್ಭಗಳಲ್ಲಿ ಕಂಡುಬಂದಿದ್ದೇನೆಂದರೆ ಸಂಬಂಧಿಕರು ಸಕಾಲದಲ್ಲಿ ಮೃತರ ಸಹಾಯಕ್ಕೆ ಒದಗಿದ್ದಿದ್ದರೆ ಅವರುಗಳು ಬದುಕಿ ಉಳಿಯುವ ಅವಕಾಶಗಳಿದ್ದವು ಎಂಬುದು! 
ಬಯಸಿದರು ಸಾವೆ ಬಯಸದಿದ್ದರು ಸಾವೆ
ಬೇಡವೆಂದರೆ ನೀನು ಬರದಿಹುದೆ ಸಾವು |
ಬೇಡದಿರು ಮನವೆ ಬೇಡದಿಹ ಸಾವ
ಅಡ್ಡದಾರಿಯಲಿ ನುಗ್ಗದಿರು ಮೂಢ ||
     ಈ ಸಾವಿಗೆ ನಾಚಿಕೆಯಿಲ್ಲ; ಕರೆದರೂ ಬರುತ್ತದೆ, ಕರೆಯದಿದ್ದರೂ ಬರುತ್ತದೆ. ಹಾಗಿರುವಾಗ ಆ ನಿರ್ಲಜ್ಜ ಸಾವನ್ನು ಬಯಸಿ ಏಕೆ ಕರೆಯಬೇಕು? ಅದು ಬರುವವರೆಗೂ ಬದುಕಿರೋಣ. ಅದು ತಾನಾಗಿ ಬಂದಾಗ ಸಂತೋಷದಿಂದ ಹೋಗೋಣ. ನಗುತ್ತಾ ಸಾವನ್ನು ಅದು ಬರುವಾಗ ಮಿತ್ರನಂತೆ ಬರಮಾಡಿಕೊಳ್ಳೋಣ. ೮೪ ಲಕ್ಷ ವಿವಿಧ ಜೀವಿಗಳ ಪೈಕಿ ವಿರಳವಾದ ಮಾನವಜನ್ಮ ಹೊಂದುವುದು ಆ ಪರಮಾತ್ಮನ ಕರುಣೆಯಲ್ಲವೇ? ವೇದಗಳ ಪ್ರಕಾರ ಮತ್ತು ಭಾರತೀಯರ ನಂಬಿಕೆಯಂತೆ ಹುಟ್ಟು-ಸಾವುಗಳ ಚಕ್ರ ಸದಾ ತಿರುಗುತ್ತಿದ್ದು ಜೀವಿಗಳು ಹುಟ್ಟುತ್ತಾ, ಸಾಯುತ್ತಾ ಇದ್ದರೂ ಈ ಜೀವಿಗಳಿಗೆ ಚೈತನ್ಯದಾಯಕವಾದ ಆತ್ಮ ಮಾತ್ರ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ; ಅದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಆದರೆ, ಇಲ್ಲಿ ಒಂದು ವಿಶೇಷ ಅಂಶವಿದೆ. ಮುಂದೆ ಪಡೆಯುವ ಜನ್ಮ ಈ ಜನ್ಮದಲ್ಲಿ ಮಾಡಿದ ಕರ್ಮಗಳ ಸಂಚಿತಾರ್ಜಿತಫಲವೆಂದು ವೇದ ಸಾರಿದೆ. 
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ || (ಅಥರ್ವ.೧೨.೩.೪೮.)
     ಪರಮಾತ್ಮನ ನ್ಯಾಯವಿಧಾನದಲ್ಲಿ ಒಡಕಾಗಲೀ, ದೋಷವಾಗಲೀ ಇಲ್ಲ. ಅವನು ಜೀವಿಗಳಲ್ಲಿ ಇಟ್ಟಿರುವ ಗೂಢವಾದ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಅಡುಗೆಯನ್ನು (ಕರ್ಮಫಲವಿಪಾಕ) ತಯಾರು ಮಾಡಿದವರೇ ಉಣ್ಣಬೇಕಿದೆ. ಇತರರ ಸಹಾಯದಿಂದ, ಅಡ್ಡಮಾರ್ಗದಿಂದ ಇದನ್ನು ತಪ್ಪಿಸಿಕೊಳ್ಳಬಹುದೆಂಬ ಅವಕಾಶ ಇಲ್ಲಿಲ್ಲ ಎಂಬುದು ಇದರ ಅರ್ಥ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಹೀಗಿರುವಾಗ ಪುಣ್ಯವಶಾತ್ ಪಡೆದಿರುವ ಮಾನವ ಜನ್ಮವನ್ನು ಇರುವವರೆಗೂ ಸಾರ್ಥಕ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.
     ಸಾಯುವುದು ಸುಲಭ, ಬದುಕುವುದು ಕಷ್ಟ. ಸುಲಭವೆಂದು ಸಾಯಬೇಕೆ? ಕಷ್ಟವಾದರೂ ಬದುಕಬೇಕು. ಬದುಕಬೇಕೆಂಬ ಅದ್ಭುತ ಇಚ್ಛಾಶಕ್ತಿಗೆ ದುರ್ಯೋಧನನ ಉದಾಹರಣೆ ಕೊಡಬಹುದು. ಅವನ ಕಣ್ಣೆದುರಿಗೇ ಭೀಷ್ಮ, ದ್ರೋಣ ಮೊದಲಾದ ಅತಿರಥ, ಮಹಾರಥರು ಹೋದರು. ಕರ್ಣ ಹೋದ, ಸೋದರರು ಹೋದರು, ಆದರೆ ಅವನಿಗೆ ಇನ್ನೂ ವಿಶ್ವಾಸವಿತ್ತು. ಶಲ್ಯ ಇದ್ದಾನೆ, ತಾನೂ ಇದ್ದೇನೆ. ಯುದ್ಧದಲ್ಲಿ ಗೆಲ್ಲುತ್ತೇನೆ, ಬದುಕುತ್ತೇನೆ ಎಂಬ ವಿಶ್ವಾಸ ಅವನಿಗೆ ಸಾಯುವವರೆಗೂ ಇತ್ತು. ಅವನ ಆತ್ಮವಿಶ್ವಾಸ ಮೆಚ್ಚುವಂತಹದು. ಮನುಷ್ಯ ಕನಸು ಕಾಣುವುದನ್ನು ನಿಲ್ಲಿಸಿದಾಗ ಸಾಯತೊಡಗುತ್ತಾನೆ.  ಮಹರ್ಷಿ ದಯಾನಂದ ಸರಸ್ವತಿಯವರ ಶಿಷ್ಯರಾದ ಸ್ವಾಮಿ ಶ್ರದ್ಧಾನಂದರು ಹೇಳುತ್ತಿದ್ದಂತೆ, "ಆಶಾವಾದವೇ ಜೀವನ, ನಿರಾಶಾವಾದವೇ ಮರಣ". ಪರಮಾತ್ಮ ಯಾವ ಜೀವಿ ಎಷ್ಟು ಬದುಕಬೇಕು, ಎಷ್ಟು ಬಾಳಬೇಕು ಎಂಬುದನ್ನು ನಿರ್ಧರಿಸಿರುತ್ತಾನೆ. ಅದಕ್ಕೆ ಮೊದಲು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ. ಸಾಯಲು ಬಯಸುವ ದುರಾಸೆ ಜೀವಿಯ ಇಚ್ಛಾಶಕ್ತಿಯನ್ನೇ ಹಾಳುಮಾಡುತ್ತದೆ.
     ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಗೆ ತಲುಪಿದವರಲ್ಲಿ ಹಲವರು ಕೊನೆಯ ಬಾರಿಗೆ ತಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡಬಯಸುತ್ತಾರೆ, ಅವರುಗಳು ಸುಖವಾಗಿರಲೆಂದು ಹಾರೈಸುತ್ತಾರೆ. ಅಂತಹ ಹತ್ತಿರದವರು ಸೂಕ್ಷ್ಮಮತಿಗಳಾಗಿದ್ದರೆ ಅವರ ನೆರವಿಗೆ ಬರುತ್ತಾರೆ ಮತ್ತು ಜೀವಗಳು ಉಳಿಯುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವವರ ಬಗ್ಗೆ ತಿಳಿದರೆ ಅವರನ್ನು ಒಲಿಸಿ, ಓಲೈಸಿ ಮನ ಪರಿವರ್ತನೆ ಮಾಡಲು ಕೆಲವು ಸಮಾಜಸೇವಾಸಕ್ತ ಸಂಸ್ಥೆಗಳು ನಗರಗಳಲ್ಲಿ ಕಾರ್ಯಪ್ರವೃತ್ತವಾಗಿರುತ್ತವೆ. ಆದರೆ, ತುರ್ತು ಮತ್ತು ಸಕಾಲಿಕ ನೆರವು ಒದಗಿಸುವವರು ಕುಟುಂಬದ ಸದಸ್ಯರೇ ಆದರೆ ಪರಿಣಾಮಕಾರಿ. ಸೂಕ್ಷ್ಮ ಮನಸ್ಸಿನವರು ಒಂದು ವಿಷಯ ಮನದಟ್ಟು ಮಾಡಿಕೊಳ್ಳಬೇಕು. ಅದೆಂದರೆ, ದೇವರು ಈ ಜನ್ಮದಲ್ಲಿ ಕೊಟ್ಟಿರುವ ಜೀವಕ್ಕೆ ಆಗಿಹೋಗಿರುವ ಸಂಗತಿಗಳನ್ನು ಅಳಿಸಿ ಬೇರೆಯದನ್ನು ಬರೆಯಲು ಅವಕಾಶವಿಲ್ಲ. ಆದರೆ, ಉಳಿದ ಶೇಷ ಜೀವನವನ್ನು ಅದರ ಆಧಾರದಲ್ಲಿ ಸೂಕ್ತ ರೀತಿಯಲ್ಲಿ ಮಾರ್ಪಡಿಸಿ ಬಾಳಲು ಅವಕಾಶವಿದೆ. ಈ ಜಗತ್ತಿನಲ್ಲಿ ಬಲಿಷ್ಠರಿಗೆ ಅವಕಾಶವಿದೆ. ದೇವರೂ ಸಹ ದುರ್ಬಲರನ್ನು ಘಾತಿಸುತ್ತಾನೆ ಎಂಬ ನಾಣ್ನುಡಿಯೇ ಇದೆ. ಆದ್ದರಿಂದ ಮಾನಸಿಕವಾಗಿ ಗಟ್ಟಿಗೊಳ್ಳುವುದು ಅತಿ ಅವಶ್ಯಕವಾಗಿದೆ. ನಾವು ಒಂಟಿ, ನಮಗೆ ಏನೂ ಮಾಡಲಾಗುವುದಿಲ್ಲವೆಂದು ಅಸಹಾಯಕತೆಯಿಂದ ಕುಗ್ಗಿದರೆ ಹಾನಿ ನಿಶ್ಚಿತ. ಏನೇ ಬರಲಿ, ಒಂದು ಕೈ ನೋಡೇಬಿಡೋಣ ಎಂದು ಮುನ್ನಡೆದರೆ ಯಶಸ್ಸಿನ ಬಾಗಿಲು ತೆರೆದುಕೊಳ್ಳುತ್ತದೆ. ಪರಿಹಾರವಿಲ್ಲದ ಸಮಸ್ಯೆಗಳಿಲ್ಲ ಎಂಬುದನ್ನು ಮನಗಂಡು ಮುನ್ನಡೆದರೆ ಮನಸ್ಸು ವಿಹ್ವಲಗೊಳ್ಳುವ ಸಂಭವ ಕಡಿಮೆ. ಬದುಕೋಣ, ಸಾಯುವವರೆಗೂ ಬದುಕೋಣ, ಸಾಯುತ್ತಾ ಬದುಕದಿರೋಣ, ಬದುಕಿ ಸಾಯೋಣ. 
ಒಂಟಿಯೆಂದೆನುತ ಕೊರಗದಿರು ಮರುಳೆ
ಕೊರಗಿ ಮುದುಡಿದರೆ ಜೊತೆಗಾರು ಸಿಗರು |
ಮೈಕೊಡವಿ ಮೇಲೆದ್ದು ಮುಂದಡಿಯನಿಡಲು
ಎಲ್ಲರೂ ನಿನ್ನವರೆ ತಿಳಿಯೊ ಮೂಢ ||
-ಕ.ವೆಂ.ನಾಗರಾಜ್.
**************
8.12.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಶುಕ್ರವಾರ, ಡಿಸೆಂಬರ್ 12, 2014

ನೂರ್ಕಾಲ ಬಾಳೋಣ


ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರುತಿಹುದು ಸಾವು |
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ ||
     ಸಾವಿಲ್ಲದ ಜೀವಿಗಳು ಯಾವುದಾದರೂ ಇವೆಯೇ? ಜೀವಿಗಳಿಗೆಲ್ಲಾ ಸಾವು ಖಚಿತವೆಂಬ ಸರಳ ಸತ್ಯವನ್ನು ತಿಳಿಯದವರು, ಒಪ್ಪದವರು ಯಾರಾದರೂ ಇದ್ದಾರೆಯೇ? ಯಾವುದೇ ಸಿದ್ಧಾಂತ, ತತ್ವ, ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದೀತು, ಆದರೆ ಎಲ್ಲರೂ ಸಾಯುತ್ತಾರೆ ಎಂಬ ಬಗ್ಗೆ ಭಿನ್ನಾಭಿಪ್ರಾಯವಿರಲಾರದು. ಸಾಯುವುದು ಗೊತ್ತಿದ್ದರೂ ಮನುಷ್ಯರು ಚಿರಂಜೀವಿಗಳಂತೆ ವರ್ತಿಸಿ, ಎಲ್ಲವೂ ಬೇಕು, ತಮಗೊಬ್ಬರಿಗೇ ಬೇಕು ಎಂದು ಏಕೆ ಹಪಹಪಿಸುತ್ತಾರೆಂಬುದು ಚೋದ್ಯವೇ ಸರಿ. ಆಳವಾಗಿ ತರ್ಕಿಸುತ್ತಾ ಹೋದರೆ 'ಬೇಕು' ಎಂಬುದು ಪ್ರತಿ ಜೀವಿಯ ಅಂತರ್ಗತ ಸ್ವಭಾವವೆಂಬುದನ್ನು ಒಪ್ಪಲೇಬೇಕು. ಈಗ ಇರುವ ಸ್ಥಿತಿಗಿಂತ ಮೇಲೇರಬೇಕು ಎಂಬ ಪ್ರಬಲ ಇಚ್ಛೆ ಎಲ್ಲರಿಗೂ ಸಹಜ. ಈ 'ಬೇಕು' ಅನ್ನುವುದು ಯಾವ ಹಂತದಲ್ಲೇ ಆಗಲಿ, 'ಸಾಕು' ಎಂಬ ಭಾವನೆ ಮೂಡಲು ಬಿಡುವುದಿಲ್ಲ. ಅಂದುಕೊಂಡಿದ್ದಂತೆ ಬಯಸಿದ್ದು ಸಿಕ್ಕಿದ ತಕ್ಷಣದಲ್ಲೇ ಅದಕ್ಕಿಂತ ಮೇಲಿನ 'ಬೇಕು' ಧುತ್ತೆಂದು ಆ ಸ್ಥಾನವನ್ನು ಆಕ್ರಮಿಸಿಬಿಡುತ್ತದೆ. ಮನುಷ್ಯೇತರ ಜೀವಿಗಳಿಗಿಂತ ವಿವೇಚನೆ ಮಾಡುವ ಶಕ್ತಿ ಹೊಂದಿರುವ ಮಾನವಜೀವಿಗಳಲ್ಲಿ ಈ 'ಬೇಕು'ವಿನ ಪ್ರಮಾಣ ಜಾಸ್ತಿ. ಈ 'ಬೇಕು'ವಿನಿಂದಲೇ ಜೀವಚಕ್ರ ತಿರುಗುತ್ತಿರುವುದು ಎನ್ನಬಹುದು. 'ಬೇಕು'ಗಳನ್ನು ಮೀರಿ ಯಾವುದೂ ಬೇಡವೆಂದು ವಿರಾಗಿಗಳಾದವರಿಗೂ ಮೋಕ್ಷ ಸಾಧಿಸಬೇಕೆಂಬ ದೊಡ್ಡ 'ಬೇಕು' ಇರುತ್ತದೆ. ಈ 'ಬೇಕು'ವಿಗಾಗಿಯೇ ಅವರು ಇತರ ಪ್ರಾಪಂಚಿಕ 'ಬೇಕು'ಗಳನ್ನು ದೂರಮಾಡಿರುತ್ತಾರೆ! 
     ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರು ಒಂದು ಸತ್ಸಂಗದಲ್ಲಿ ಹೇಳಿದ ಪ್ರಸಂಗವಿದು: ಅವರು ಒಮ್ಮೆ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಕ್ಕೆ ರೋಗಿಗಳನ್ನು ಸಂತಯಿಸುವ ಸಲುವಾಗಿ ಹೋಗಿದ್ದಾಗ ರೋಗದಿಂದ ನರಳುತ್ತಿದ್ದ ಮುದುಕಿಯೊಬ್ಬಳು, "ಯಪ್ಪಾ, ನನಗೆ ನರಳಿ ನರಳಿ ಸಾಕಾಗಿ ಹೋಗಿದೆ. ಜೀವನ ಸಾಕು ಅನ್ನಿಸಿಬಿಟ್ಟಿದೆ. ದಯವಿಟ್ಟು ನನ್ನ ತಲೆಯ ಮೇಲೆ ಕೈಯಿಟ್ಟು ನನ್ನನ್ನು ಬೇಗ ಕರೆಸಿಕೊಳ್ಳಲು ದೇವರಲ್ಲಿ ಹೇಳಪ್ಪಾ" ಅಂದಳಂತೆ. ಆಕೆಯನ್ನು ಸಂತೈಸಿ ಮುಂದೆ ಹೋಗುತ್ತಿದ್ದಾಗ ಆಕೆ ಹಿಂದೆಯೇ ಧಾವಿಸಿ ಬಂದು, "ಯಪ್ಪಾ, ನಿಮಗೆ ದೊಡ್ಡ ಡಾಕ್ಟರು ತುಂಬಾ ಪರಿಚಯ ಅಂತೆ. ಅವರಿಗೆ ಹೇಳಿ ಒಳ್ಳೆಯ ಔಷಧಿ ಕೊಡಲು ಹೇಳಪ್ಪಾ" ಅಂದಳಂತೆ! ಇಲ್ಲಿ ಕಾಣುವುದೇನೆಂದರೆ ಸಾವನ್ನು ಮೀರಿ ಬದುಕಬೇಕೆಂಬ ಆಸೆ. ಇದು ಸಹಜ. ಜೀವ ಹೋಗಲು ಈಗಲೋ ಆಗಲೋ ಎನ್ನುತ್ತಿರುವಾಗಲೂ ಆ ಜೀವ ಬದುಕಲು ತುಡಿಯುತ್ತಿರುತ್ತದೆ. ಇಷ್ಟಾದರೂ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರೂ ಇರುತ್ತಾರೆ. ಬಹುಷಃ ಅದಕ್ಕೆ ಕಾರಣ ಈ ಜನ್ಮದಲ್ಲಿ ಸಿಗದಿದ್ದುದು ಮುಂದಿನ ಜನ್ಮದಲ್ಲಾದರೂ ಸಿಗಲಿ ಎಂಬ ಭಾವವೂ ಇದ್ದಿರಬಹುದು. ಬಡತನ, ಸಾಂಸಾರಿಕ ಸಮಸ್ಯೆಗಳು, ಇತ್ಯಾದಿಗಳಿಂದ ರೋಸಿಹೋದವರು, ಭಗ್ನಪ್ರೇಮಿಗಳು, ಮುಂತಾದವರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ತಡೆದು, ಸಾಯುವುದರಿಂದ ಸಮಸ್ಯೆ ಪರಿಹಾರವಾಗುವುದೇ ಎಂದು ವಿಚಾರಿಸಿದರೆ ಅವರು ಬಹುಷಃ ಸಾಮಾನ್ಯವಾಗಿ ಏನು ಹೇಳಬಹುದೆಂದರೆ ಅವರು ಬಯಸಿದ್ದುದು ಈ ಜನ್ಮದಲ್ಲಿ ಸಿಗುವುದೇ ಇಲ್ಲವೆಂಬ ಭಾವದಿಂದ, ಅದು ಇಲ್ಲದೇ ಜೀವನ ವ್ಯರ್ಥವೆಂಬ ಕಾರಣದಿಂದ, ತಮ್ಮ ಸಮಸ್ಯೆಗೆ ಈ ಜನ್ಮದಲ್ಲಿ ಪರಿಹಾರ ಸಿಕ್ಕುವುದೇ ಇಲ್ಲವೆಂಬ, ಇತ್ಯಾದಿ ಕಾರಣಗಳನ್ನು ಕೊಟ್ಟಾರು. ಗಮನಿಸಬೇಕಾದುದೇನೆಂದರೆ, ಅವರ 'ಬೇಕು'ಗಳಿಗಾಗಿಯೇ ಅವರು ಸಾಯುತ್ತಾರೆ. ಏಕೆಂದರೆ ಅದು ಅವರಿಗೆ 'ಬೇಕಾಗಿದೆ'. ಇದು ಏನು ಸೂಚಿಸುತ್ತದೆ? ತಮಗೆ ಬೇಕೆನಿಸಿದಂತೆ ಬದುಕುವುದು ಅವರಿಗೆ ಬೇಕಿದೆ. 
ಬಯಸಿದರು ಸಾವೆ ಬಯಸದಿದ್ದರು ಸಾವೆ
ಬೇಡವೆಂದರೆ ನೀನು ಬರದಿಹುದೆ ಸಾವು |
ಬೇಡದಿರು ಮನವೆ ಬೇಡದಿಹ ಸಾವ
ಅಡ್ಡದಾರಿಯಲಿ ನುಗ್ಗದಿರು ಮೂಢ ||
     ಈ ಸಾವಿಗೆ ನಾಚಿಕೆಯಿಲ್ಲ; ಕರೆದರೂ ಬರುತ್ತದೆ, ಕರೆಯದಿದ್ದರೂ ಬರುತ್ತದೆ. ಹಾಗಿರುವಾಗ ಬಯಸಿ ಏಕೆ ಕರೆಯಬೇಕು? ಅದು ಬರುವವರೆಗೂ ಬದುಕಿರೋಣ. ಅದು ತಾನಾಗಿ ಬಂದಾಗ ಸಂತೋಷದಿಂದ ಹೋಗೋಣ. ನಗುತ್ತಾ ಸಾವನ್ನು ಅದು ಬರುವಾಗ ಮಿತ್ರನಂತೆ ಬರಮಾಡಿಕೊಳ್ಳೋಣ. ೮೪ ಲಕ್ಷ ವಿವಿಧ ಜೀವಿಗಳ ಪೈಕಿ ವಿರಳವಾದ ಮಾನವಜನ್ಮ ಹೊಂದುವುದು ಆ ಪರಮಾತ್ಮನ ಕರುಣೆಯಲ್ಲವೇ? ವೇದಗಳ ಪ್ರಕಾರ ಮತ್ತು ಭಾರತೀಯರ ನಂಬಿಕೆಯಂತೆ ಹುಟ್ಟು-ಸಾವುಗಳ ಚಕ್ರ ಸದಾ ತಿರುಗುತ್ತಿದ್ದು ಜೀವಿಗಳು ಹುಟ್ಟುತ್ತಾ, ಸಾಯುತ್ತಾ ಇದ್ದರೂ ಈ ಜೀವಿಗಳಿಗೆ ಚೈತನ್ಯದಾಯಕವಾದ ಆತ್ಮ ಮಾತ್ರ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ; ಅದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಆದರೆ, ಇಲ್ಲಿ ಒಂದು ವಿಶೇಷ ಅಂಶವಿದೆ. ಮುಂದೆ ಪಡೆಯುವ ಜನ್ಮ ಈ ಜನ್ಮದಲ್ಲಿ ಮಾಡಿದ ಕರ್ಮಗಳ ಸಂಚಿತಾರ್ಜಿತಫಲವೆಂದು ವೇದ ಸಾರಿದೆ. 
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮.)
     ಪರಮಾತ್ಮನ ನ್ಯಾಯವಿಧಾನದಲ್ಲಿ ಒಡಕಾಗಲೀ, ದೋಷವಾಗಲೀ ಇಲ್ಲ. ಅವನು ಜೀವಿಗಳಲ್ಲಿ ಇಟ್ಟಿರುವ ಗೂಢವಾದ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಅಡುಗೆಯನ್ನು (ಕರ್ಮಫಲವಿಪಾಕ) ತಯಾರು ಮಾಡಿದವರೇ ಉಣ್ಣಬೇಕಿದೆ. ಇತರರ ಸಹಾಯದಿಂದ, ಅಡ್ಡಮಾರ್ಗದಿಂದ ಇದನ್ನು ತಪ್ಪಿಸಿಕೊಳ್ಳಬಹುದೆಂಬ ಅವಕಾಶ ಇಲ್ಲಿಲ್ಲ ಎಂಬುದು ಇದರ ಅರ್ಥ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಹೀಗಿರುವಾಗ ಪುಣ್ಯವಶಾತ್ ಪಡೆದಿರುವ ಮಾನವ ಜನ್ಮವನ್ನು ಇರುವವರೆಗೂ ಸಾರ್ಥಕ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.
     ಸಾಯುವುದು ಸುಲಭ, ಬದುಕುವುದು ಕಷ್ಟ. ಸುಲಭವೆಂದು ಸಾಯಲಾಗುವುದೇ? ಕಷ್ಟವಾದರೂ ಬದುಕಬೇಕು. ಬದುಕಬೇಕೆಂಬ ಅದ್ಭುತ ಇಚ್ಛಾಶಕ್ತಿಗೆ ದುರ್ಯೋಧನನ ಉದಾಹರಣೆ ಕೊಡಬಹುದು. ಅವನ ಕಣ್ಣೆದುರಿಗೇ ಭೀಷ್ಮ, ದ್ರೋಣ ಮೊದಲಾದ ಅತಿರಥ, ಮಹಾರಥರು ಹೋದರು. ಕರ್ಣ ಹೋದ, ಸೋದರರು ಹೋದರು, ಆದರೆ ಅವನಿಗೆ ಇನ್ನೂ ವಿಶ್ವಾಸವಿತ್ತು. ಶಲ್ಯ ಇದ್ದಾನೆ, ತಾನೂ ಇದ್ದೇನೆ. ಯುದ್ಧದಲ್ಲಿ ಗೆಲ್ಲುತ್ತೇನೆ, ಬದುಕುತ್ತೇನೆ ಎಂಬ ವಿಶ್ವಾಸ ಅವನಿಗೆ ಸಾಯುವವರೆಗೂ ಇತ್ತು. ಅವನ ಆತ್ಮವಿಶ್ವಾಸ ಮೆಚ್ಚುವಂತಹದು. ಮನುಷ್ಯ ಕನಸು ಕಾಣುವುದನ್ನು ನಿಲ್ಲಿಸಿದಾಗ ಸಾಯತೊಡಗುತ್ತಾನೆ.  ಮಹರ್ಷಿ ದಯಾನಂದ ಸರಸ್ವತಿಯವರ ಶಿಷ್ಯರಾದ ಸ್ವಾಮಿ ಶ್ರದ್ಧಾನಂದರು ಹೇಳುತ್ತಿದ್ದಂತೆ, "ಆಶಾವಾದವೇ ಜೀವನ, ನಿರಾಶಾವಾದವೇ ಮರಣ". ಪರಮಾತ್ಮ ಯಾವ ಜೀವಿ ಎಷ್ಟು ಬದುಕಬೇಕು, ಎಷ್ಟು ಬಾಳಬೇಕು ಎಂಬುದನ್ನು ನಿರ್ಧರಿಸಿರುತ್ತಾನೆ. ಅದಕ್ಕೆ ಮೊದಲು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ. ಸಾಯಲು ಬಯಸುವ ದುರಾಸೆ ಜೀವಿಯ ಇಚ್ಛಾಶಕ್ತಿಯನ್ನೇ ಹಾಳುಮಾಡುತ್ತದೆ. ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕಿರುವವರ ಬಹಳಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ರಷ್ಯಾ, ಜಪಾನ್ ಮುಂತಾದ ದೇಶಗಳಲ್ಲಿ ೧೯೦ ವರ್ಷಗಳವರೆಗೂ ಜೀವಿಸಿದ್ದವರು ಇದ್ದರು. ಈಗಲೂ ನೂರು ವರ್ಷಗಳನ್ನು ಮೀರಿ ಜೀವಿಸಿರುವ ಹಲವರು ನಮ್ಮ ನಡುವೆ ಇದ್ದಾರೆ. ಸ್ವಾಮಿ ಶ್ರದ್ಧಾನಂದರ ಶಿಷ್ಯರಾದ, ಅದಮ್ಯ ಜೀವನೋತ್ಸಾಹದ ಚಿಲುಮೆ, ನಾಲ್ಕು ವೇದಗಳನ್ನು ಸಂಪೂರ್ಣ ಅಧ್ಯಯನ ಮಾಡಿ ಚತುರ್‍ವೇದಿ ಎಂಬ ಸಾರ್ಥಕ ಹೆಸರನ್ನು ಪಡೆದಿರುವ, ವೇದದ ಸಾರ ಮತ್ತು ಉದ್ದೇಶಗಳನ್ನು ಈಗಲೂ ಸಾರುತ್ತಿರುವ, ನಿಜಬದುಕು ಸಾಗಿಸುತ್ತಿರುವ ಬೆಂಗಳೂರಿನ ೧೧೭ ವರ್ಷಗಳ ಅನುಪಮ ಸಾಧಕ ಮಾರ್ಗದರ್ಶಿ ಪಂ. ಸುಧಾಕರ ಚತುರ್‍ವೇದಿಯವರು ಇಚ್ಛಾಶಕ್ತಿಗೆ ಜ್ವಲಂತ ಉದಾಹರಣೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾಗಿದ್ದ, ಅಲ್ಲಿ ಹುತಾತ್ಮರಾದವರ ಸಾಮೂಹಿಕ ಸಂಸ್ಕಾರಕಾರ್ಯದಲ್ಲಿ ಭಾಗಿಯಾಗಿದ್ದ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದು ಸುಮಾರು ೧೪ ವರ್ಷಗಳ ಕಾಲ ಸೆರೆವಾಸ ಕಂಡಿದ್ದ, ಈಗಲೂ ಸತ್ಸಂಗಗಳನ್ನು ನಡೆಸುತ್ತಾ, ನೂರಾರು ಅಂತರ್ಜಾತೀಯ ವಿವಾಹಗಳನ್ನು ಮಾಡಿಸಿರುವ, ರೂಢಿಗತ ಅಂಧ ಸಂಪ್ರದಾಯಗಳನ್ನು ವಿರೋಧಿಸಿ ವೇದದ ಬೆಳಕಿನಲ್ಲಿ ಸತ್ಯಾನ್ವೇಷಣೆಗೆ ಕರೆ ಕೊಡುತ್ತಿರುವ, ನಿಜವಾಗಿ ಬದುಕಲು ಪ್ರೇರಿಸುತ್ತಿರುವ ಅವರ ಬದುಕು ಅನುಸರಣೀಯ. 

ಸೋಮಾರಿ ಸಾಯುವನು ಸ್ವಾರ್ಥಿ ಸಾಯುವನು
ಹೇಡಿ ಸಾಯುವನು ವೀರನೂ ಸಾಯುವನು |
ದೇವ ನಿಯಮವಿದು ಎಲ್ಲರೂ ಸಾಯುವರು
ಬದುಕಿ ಸಾಯುವರ ನೆನೆಯೋ ಮೂಢ ||
     ಎಲ್ಲರೂ ಸಾಯುತ್ತಾರೆ, ಆದರೆ ಎಲ್ಲರೂ ಬದುಕುತ್ತಾರೆಯೇ ಎಂಬುದು ಕೇಳಬೇಕಾದ ಪ್ರಶ್ನೆ. ಬದುಕುವ ರೀತಿಯಲ್ಲಿ ಬದುಕಿದವರು ಸತ್ತ ಮೇಲೂ ಬದುಕಿರುತ್ತಾರೆ. ನೂರಾರು ವರ್ಷಗಳ ನಂತರವೂ, ಇಂದಿಗೂ ನಾವು ನೆನಪಿಸಿಕೊಳ್ಳುವ, ಗೌರವಿಸುವ, ದೇವರಂತೆ ಕಾಣುವ ರಾಮ, ಕೃಷ್ಣ, ವ್ಯಾಸ, ವಾಲ್ಮೀಕಿ, ಶಂಕರಾಚಾರ್ಯ, ವಿವೇಕಾನಂದ, ಬುದ್ಧ, ಬಸವ, ಮುಂತಾದ ನೂರಾರು, ಸಾವಿರಾರು ಮಹಾನ್ ವ್ಯಕ್ತಿಗಳು ಈ ಮಾತಿಗೆ ಪುಷ್ಟಿ ಕೊಡುತ್ತಾರೆ. ಹೇಗೋ ಹುಟ್ಟಿ, ಹೇಗೋ ಬದುಕಿ, ಹೇಗೋ ಕಂತೆ ಒಗೆದು ಹೋಗುವ ಸಾಮಾನ್ಯರ ನೆನಪು ಅವರ ಮಕ್ಕಳು, ಮೊಮ್ಮಕ್ಕಳುಗಳಿಗೇ ಇರುವುದಿಲ್ಲ ಅಲ್ಲವೇ? ಮಸುಕಾಗಿ ಮರೆಯಾಗುವುದಕ್ಕಿಂತ ಜ್ಯೋತಿಯಾಗಿ ಉರಿದು ನೆನಪು ಉಳಿಸುವುದು ಉತ್ತಮ. ಯೋಗ್ಯವಾಗಿ ಬದುಕಬೇಕೆಂಬ ಮಾರ್ಗದರ್ಶನ ನೀಡುವುದೇ ಸಾವು ಎಂಬುದನ್ನು ಮರೆಯಬಾರದು. ಭಗತ್ ಸಿಂಗ್, ರಾಜಗುರು, ಸುಖದೇವರಂತೆ, ಚಂದ್ರಶೇಖರ ಆಜಾದರಂತೆ ಇನ್ನೊಬ್ಬರ ಬದುಕಿಗಾಗಿ, ಒಳಿತಿಗಾಗಿ ಸಾಯಲು ಸಿದ್ಧರಿರುವವರ, ಸಾಯುವವರ ಬದುಕುಗಳು ಬದುಕಬೇಕಾದ ರೀತಿಗೆ ಉದಾಹರಣೆಗಳು. ಯಜುರ್ವೇದದ ಈ ಮಂತ್ರ ಮಾನವರು ಬದುಕಬೇಕಾದ ರೀತಿಗೆ ಅದ್ಭುತ ಮಾರ್ಗದರ್ಶಿಯಾಗಿದೆ:
 "ಪಶ್ಶೇಮ ಶರದಃ ಶತಂ ಜೀವೇಮ ಶರದಃ ಶತಗ್ ಂ ಶೃಣುಯಾಮ ಶರದಃ ಶತಂ ಪ್ರ ಬ್ರವಾಮ ಶರದಃ ಶತಂ ಶತಮದೀನಾ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್ ||"
     ಅರ್ಥ: ಶುಭವ ನೋಡುತಲಿ, ಶುಭವ ಕೇಳುತಲಿ, ಶುಭವ ನುಡಿಯುತಲಿ ನೂರ್ಕಾಲ ಬಾಳೋಣ. ದೈನ್ಯತೆಯಿಲ್ಲದೆ ಸ್ವಾಭಿಮಾನದಿಂದ ಸ್ವತಂತ್ರರಾಗಿ ನೂರ್ಕಾಲ ಬಾಳೋಣ. ನೂರು ವರ್ಷಗಳಿಗಿಂತ ಹೆಚ್ಚಾಗಿಯೂ ಬಾಳಿಕೊಂಡಿರೋಣ.
-ಕ.ವೆಂ.ನಾಗರಾಜ್.
**************
26.11.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಡಿಸೆಂಬರ್ 10, 2014

ರಾಕ್ಷಸ ಸಂಹಾರ


     ರಾಕ್ಷಸ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ದೈತ್ಯಾಕಾರದ ದೇಹ, ಭೀಭತ್ಸ ರೂಪದ, ಡೊಳ್ಳು ಹೊಟ್ಟೆಯ, ಹೊರಚಾಚಿರುವ ಕೋರೆ ಹಲ್ಲುಗಳ, ತಲೆಯ ಮೇಲೆ ಕೊಂಬುಗಳಿರುವ, ಅಪಾಯಕಾರಿ ಆಯುಧಗಳನ್ನು ಹಿಡಿದುಕೊಂಡಿರುವ, ಮಾಯಾವಿಗಳಾಗಿ ತಮಗೆ ಬೇಕಾದ ರೂಪ ಧರಿಸುವ ಶಕ್ತಿ ಇರುವ, ರಕ್ತಪಿಪಾಸುಗಳಂತಿರುವ ಜೀವಿ ಎಂಬಂತೆ. ಪುರಾಣಗಳಲ್ಲಿ, ಜಾನಪದ ಕಥೆಗಳಲ್ಲಿ ಬರುವ ರಾಕ್ಷಸರ ಚಿತ್ರಣವೂ ಹೀಗೆಯೇ ಇರುತ್ತದೆ. ಆದರೆ ರಾಕ್ಷಸರು ನಿಜವಾಗಿಯೂ ಹೀಗಿರುತ್ತಾರೆಯೇ? ಅವರು ಹೇಗಾದರೂ ಇರಲಿ, ರಾಕ್ಷಸರು ಎಂದಾಕ್ಷಣ ಅವರು ಕೆಟ್ಟವರು ಎಂಬ ಭಾವವಂತೂ ಮೂಡಿಬಿಡುತ್ತದೆ. ಮೊದಲೇ ಹೇಳಿದಂತೆ ಪುರಾಣಗಳಲ್ಲಿ, ಜಾನಪದ ಕಥೆಗಳಲ್ಲಿ ಅವರನ್ನು ಚಿತ್ರಿಸಿರುವುದೂ ಹೀಗೆಯೇ. ಅವರು ಜನರಿಗೆ ಹಲವು ರೀತಿಗಳಲ್ಲಿ ತೊಂದರೆ ಕೊಡುವುದು, ಕಥಾನಾಯಕ/ನಾಯಕಿ ಪ್ರಯಾಸಪಟ್ಟು ಅವರನ್ನು ಸಂಹರಿಸುತ್ತಾರೆ, ಸುಖಾಂತ್ಯವಾಗಿ ಕಥೆ ಮುಗಿಯುತ್ತದೆ. ಇಂತಹ ರೂಪದ ರಾಕ್ಷಸರನ್ನು ನಾವು ಯಾರಾದರೂ ಕಂಡಿದ್ದೇವೆಯೇ? ಇಲ್ಲವೆಂದಾದಲ್ಲಿ ರಾಕ್ಷಸರು ಹಿಂದಿನ ಕಾಲದಲ್ಲಿ ಮಾತ್ರ ಇದ್ದರೇ? ಈಗ ರಾಕ್ಷಸರಿಲ್ಲವೇ? 
     ರಕ್ಷಃ ಅಥವ ರಕ್ಷಸ್ ಅಂದರೆ ಶತ್ರುಗಳು, ದುರ್ಭಾವನೆ, ದುರ್ವಿಚಾರ ಎಂದರ್ಥ. ಯಾರು ರಕ್ಷಸ್ಸುಗಳನ್ನು, ಅಂದರೆ ದುರ್ಭಾವನೆ ಹೊಂದಿರುತ್ತಾರೋ, ದುರ್ವಿಚಾರಗಳನ್ನು ಹೊಂದಿರುತ್ತಾರೋ, ಯಾರು ದುಷ್ಕಾರ್ಯಗಳನ್ನು ಮಾಡುತ್ತಾರೋ ಅವರು ರಾಕ್ಷಸರು, ಅಷ್ಟೆ. ರಾಕ್ಷಸತ್ವಕ್ಕೆ ಯಾವುದೇ ಜಾತಿಯ ಕಟ್ಟಿಲ್ಲ. ರಾಕ್ಷಸ ಎಂದು ಕರೆಯಲ್ಪಡುವ ರಾವಣ, ಕುಂಭಕರ್ಣ, ಶೂರ್ಪಣಖಿ ಇವರುಗಳ ತಂದೆ ವಿಶ್ರವಸು ಎಂಬ ಒಬ್ಬ ಮುನಿ, ವಿಪ್ರಕುಲಕ್ಕೆ ಸೇರಿದವನು. ಅವರುಗಳು ರಾಕ್ಷಸರೆನಿಸಲು ಪ್ರಮುಖ ಕಾರಣ ಅವರ ದುರ್ವಿಚಾರ, ದುರ್ಭಾವನೆ ಮತ್ತು ದುಷ್ಕಾರ್ಯಗಳು. ರಾಕ್ಷಸನೂ ಒಬ್ಬ ಮಾನವ ಜೀವಿಯೇ ಹೊರತು ಬೇರೆ ಪ್ರಕಾರದ ಜೀವಿಯಲ್ಲ. ಹೀಗಿರುವಾಗ ಒಬ್ಬ ಮಾನವ ರಾಕ್ಷಸನಾಗುವುದು ಅಥವ ಆದರ್ಶ ಮಾನವನಾಗುವುದು ಆತನ ನಡವಳಿಕೆಯಿಂದ ಎಂಬ ಪ್ರಾಥಮಿಕ ಸಂಗತಿಯನ್ನು ಗಮನದಲ್ಲಿಡಬೇಕು. 
     ಮಾನವ ರಾಕ್ಷಸನೆನಿಸಲು ಕಾರಣವಾದ ರಕ್ಷಸ್ಸುಗಳಾದರೂ ಯಾವುವು? ಈ ವೇದಮಂತ್ರವನ್ನು ನೋಡೋಣ:
ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಮುತ ಕೋಕಯಾತುಮ್ |
ಸುಪರ್ಣಯಾತುಮುತ ಗೃಧ್ರಯಾತುಂ ದೃಷದೇವ ಪ್ರ ಮೃಣ ರಕ್ಷ ಇಂದ್ರ || (ಋಕ್.೭.೧೦೪.೨೨)
     ಒಡೆಯನೇ, ರಕ್ಷಸ್ಸನ್ನು ತೊಡೆದುಹಾಕು. ಇಲ್ಲಿ ಇಂದ್ರ ಅಂದರೆ ಜೀವಾತ್ಮ ಎಂಬ ಅರ್ಥವನ್ನು ತೆಗೆದುಕೊಳ್ಳಬೇಕು. ನಮ್ಮ ಶರೀರ, ಇಂದ್ರಿಯಗಳಿಗೆ ಒಡೆಯನಾದ ಇಂದ್ರ ಜೀವಾತ್ಮನೇ ಹೊರತು ಬೇರೆ ಅಲ್ಲ. ಯಾವ ರಕ್ಷಸ್ಸುಗಳನ್ನು ತೊಡೆದುಹಾಕಬೇಕು? ಮೋಹದ ಪ್ರತೀಕವಾದ ಗೂಗೆಯ (ಉಲೂಕ) ನಡೆಯನ್ನು, ಕೋಪದ ಪ್ರತೀಕವಾದ ತೋಳದ (ಶುಶುಲೂಕ) ರೀತಿಯನ್ನು, ಮತ್ಸರರೂಪಿ ನಾಯಿಯ ನಡೆಯನ್ನು (ನಾಯಿಯನ್ನು ನಂಬಿಕೆಯ ಪ್ರತೀಕವಾಗಿ ಬಳಸುವುದನ್ನೂ ಕಾಣುತ್ತೇವೆ. ಅದರೆ ಅದು ತನ್ನದೇ ಜಾತಿಯ ಇನ್ನೊಂದು ನಾಯಿಯನ್ನು ಸಹಿಸುವುದೇ ಇಲ್ಲ, ಅದರ ಉತ್ಕರ್ಷವನ್ನು ಕಂಡು ಅಸಹನೆಯಿಂದ ಕುದಿಯುತ್ತದೆ), ಕಾಮದ ಸಂಕೇತವಾದ ಜಕ್ಕವಕ್ಕಿಯ ನಡೆಯನ್ನು, ಮದಕ್ಕೆ ಹೆಸರಾದ ಗರುಡನ ರೀತಿಯನ್ನು ಮತ್ತು ಲೋಭದ ಪ್ರತಿರೂಪವೆನಿಸಿದ ಹದ್ದಿನ ನಡೆಯನ್ನು ನಿಗ್ರಹಿಸು ಎಂಬ ಈ ಮಂತ್ರದ ಕರೆ ಅದೆಷ್ಟು ಅರ್ಥಗರ್ಭಿತ! ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹಗಳೇ ರಕ್ಷಸ್ಸುಗಳಾಗಿ ಕಾಡುತ್ತವೆ. ಅದಕ್ಕೆ ಬಲಿಯಾಗಿ ಕುಕೃತ್ಯಗಳನ್ನು ಎಸಗುವವರೇ ರಾಕ್ಷಸರು.
     ಧೃತರಾಷ್ಟ್ರನ ಪುತ್ರಮೋಹ ಅವನ ನೂರು ಮಕ್ಕಳನ್ನೂ ಅವನು ಬದುಕಿದ್ದಾಗಲೇ ಬಲಿ ತೆಗೆದುಕೊಂಡಿತು. ದೃಷ್ಟಿಹೀನನಾಗಿದ್ದ ಅವನು ದುರ್ಯೋಧನನ ಮೇಲಿನ ಅತಿಯಾದ ಮೋಹದಿಂದ ನ್ಯಾಯ, ನೀತಿ, ಧರ್ಮಗಳ ವಿಷಯದಲ್ಲೂ ಸಹ ಕುರುಡನಾಗಿಬಿಟ್ಟಿದ್ದ. ಮತಾಂಧರಾದವರು ಸಹಮಾನವರನ್ನೇ ಕಿಂಚಿತ್ತೂ ಕರುಣೆಯಿಲ್ಲದೆ ಹಿಂಸಾತ್ಮಕವಾಗಿ ಬಲಿ ತೆಗೆದುಕೊಳ್ಳುತ್ತಿರುವುದನ್ನೂ ಕಾಣುತ್ತಿದ್ದೇವೆ. ದೇವರು ತನ್ನದೇ ಸೃಷ್ಟಿಯಾದ ಜೀವಿಗಳ ಬಲಿಯನ್ನೇ ಕೇಳುತ್ತಾನೆಯೇ ಎಂಬ ತೃಣಮಾತ್ರದ ವಿವೇಕ ಆ ಮತಾಂಧರಲ್ಲಿ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಅಜ್ಞಾನದ ಪರಮಾವಧಿಯೆನ್ನಬಹುದಾದ ಈ ಮೋಹ ಮಾನವನನ್ನು ದಾನವನನ್ನಾಗಿ ಮಾಡುತ್ತದೆ. ತಾನು ನಂಬಿರುವುದೇ ಸತ್ಯ, ತಾನು ಮಾಡಿದ್ದೇ ಸರಿ ಎನ್ನುವ ಈ ಮೋಹ ಜಗತ್ತಿನ ಎಲ್ಲಾ ವಿಪತ್ತುಗಳ ಮೂಲ. ಸಾಮಾಜಿಕ ಕ್ಷೇತ್ರ ಒಂದೇ ಅಲ್ಲ, ವೈಯಕ್ತಿಕ ಜೀವನದಲ್ಲೂ ಮೋಹಾಸುರನ ಉಪಟಳ ಅಷ್ಟಲ್ಲ.
     ಕೋಪದ ತಾಪವನ್ನು ತಿಳಿಯದವರು ಯಾರು? ಕೋಪದಿಂದಾಗಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ವಿವೇಚಿಸುವ ಶಕ್ತಿಯನ್ನು ಹೊಸಕಿಹಾಕಿ ಪಶುವಿನಂತೆ ವರ್ತಿಸುವ ವ್ಯಕ್ತಿಗೆ ಸ್ನೇಹಿತ-ವೈರಿ, ತನ್ನವರು-ಬೇರೆಯವರು, ಸೋದರರು-ಸೋದರಿಯರು, ಹಿರಿಯರು-ಕಿರಿಯರು ಮುಂತಾದ ಯಾವ ವ್ಯತ್ಯಾಸವೂ ಗೊತ್ತಾಗದು. ಗೊತ್ತಾಗುವಷ್ಟರಲ್ಲೇ ಅನಾಹುತ ಜರುಗಿಬಿಟ್ಟಿರುತ್ತದೆ. ಸಭ್ಯತೆ, ಸಂಸ್ಕೃತಿ, ಸ್ಥಾನ-ಮಾನಗಳ ಪರಿವೆಯೂ ಕ್ರೋಧಾಸುರನಿಗೆ ಇರುವುದೇ ಇಲ್ಲ. ಭಗವದ್ಗೀತೆಯಲ್ಲಿ ಹೇಳಿರುವಂತೆ, ಕ್ರೋಧದಿಂದ ಸಮ್ಮೋಹ, ಸಮ್ಮೋಹದಿಂದ ಸ್ಮೃತಿನಾಶ, ಸ್ಮೃತಿನಾಶದಿಂದ ಬುದ್ದಿ ನಷ್ಟ, ಬುದ್ಧಿನಾಶದಿಂದ ಸರ್ವಪತನವಾಗುತ್ತದೆ. ಕೋಪದ ಉಪಉತ್ಪತ್ತಿಯಾದ ದ್ವೇಷದಿಂದ ಬಿಡುವ ಬಾಣ ಎಲ್ಲಾ ಕಡೆಯೂ ಸುತ್ತಿ ಕೊನೆಗೆ ಮರಳಿ ಬಿಟ್ಟವರನ್ನೇ ಹೆಚ್ಚು ವೇಗದಿಂದ ತಲುಪುತ್ತದೆ. ಕೋಪವೆಂಬ ರಕ್ಕಸನಿಂದ ಎಲ್ಲೆಲ್ಲೂ ಅಪಕಾರವೇ, ಎಲ್ಲೆಲ್ಲೂ ಹಾಹಾಕಾರವೇ!
     ಮತ್ಸರಿಗರ ಕುರಿತು ಹೇಳಲೇಬೇಕಿಲ್ಲ. ಪೃಥ್ವೀರಾಜನ ಏಳಿಗೆ ಸಹಿಸದ ಜಯಚಂದ್ರನ ಮತ್ಸರ ಭಾರತವನ್ನು ಶತಮಾನಗಳ ಕಾಲ ದಾಸ್ಯಕ್ಕೆ ದೂಡಿತು. ದಾಯಾದಿ ಮತ್ಸರ ಮಹಾಭಾರತಕ್ಕೆ ನಾಂದಿ ಹಾಡಿತು. ತನ್ನ ಮಗನಿಗೆ ರಾಜ್ಯ ಸಿಗಲೆಂದು ಕೈಕೇಯಿ ರಾಮನನ್ನು ಕಾಡಿಗೆ ಹೋಗುವಂತೆ ಮಾಡಿದಳು. ಕೋಪಿಷ್ಠರೊಡನೆ ಏಗಬಹುದು, ಮೂರ್ಖರೊಡನೆ ಸ್ನೇಹ ಮಾಡಬಹುದು, ಸಂಕೋಚ ಸ್ವಭಾವದವರೊಡನೆ ಮೌನವಾಗಿರಬಹುದು, ಆದರೆ ಮತ್ಸರಿಸುವವರ ಜೊತೆ ಬಾಂಧವ್ಯ ಹೊಂದಿರುವುದು, ಸರಸ ಸಂಭಾಷಣೆಗಳನ್ನು ಮಾಡುವುದೂ ಸಹ ಅಪಾಯಕಾರಿಯೇ ಎಂಬುದು ಅನುಭವಿಗಳ ಮಾತು. ಏಕೆಂದರೆ ಮೇಲೆ ಕಾಣುವಂತೆ, ತೋರಿಸಿಕೊಳ್ಳುವಂತೆ ಅವರು ಇರುವುದೇ ಇಲ್ಲ. ಒಳಗಿರುವ ವಿಷಸರ್ಪ ಯಾವಾಗ ಕಚ್ಚಲಿ ಎಂದು ಒಳಗೊಳಗೇ ಬುಸುಗುಡುತ್ತಿರುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮತ್ಸರವೆಂಬುದು ನಮ್ಮ ಒಳಗಿನ ಕಲ್ಮಶ. ಅದನ್ನು ನಿವಾರಿಸಿಕೊಂಡರೆ ನಾವು ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ. 
     ಇನ್ನು ಕಾಮದ ವಿಷಯ ಪ್ರಸ್ತಾಪಿಸಿದರೆ ಅದೊಂದು ದೀರ್ಘ ಲೇಖನವೇ ಆಗಿಬಿಡುತ್ತದೆ. ಒಂದು ಉದಾಹರಣೆ ಕೊಟ್ಟು ಸಂಕ್ಷಿಪ್ತಗೊಳಿಸುವೆ. ಆಕೆ ಒಬ್ಬ ಸ್ಫುರದ್ರೂಪಿ ತರುಣಿ, ಸಾಫ್ಟ್ ವೇರ್ ಇಂಜನಿಯರ್. ಇನ್ನೊಬ್ಬ ಶ್ರೀಮಂತ ಇಂಜನಿಯರನೊಂದಿಗೆ ಅವಳ ವಿವಾಹವೂ ಆಯಿತು. ಸ್ವಲ್ಪ ಸಮಯದಲ್ಲೇ ಅವಳೊಳಗಿದ್ದ ಕಾಮರಕ್ಕಸ ಜಾಗೃತನಾದ. ತನ್ನ ಪ್ರಿಯಕರನ ಸಹಾಯದಿಂದ ಪತಿಯನ್ನೇ ಕೊಲೆ ಮಾಡಿಸಿಬಿಟ್ಟಳು. ತನಿಖೆಯಿಂದ ವಿಷಯ ಹೊರಬಿದ್ದು ಅವಳೂ, ಅವಳ ಪ್ರಿಯಕರನೂ ಜೈಲುಪಾಲಾದರು. ಟಿವಿ ಚಾನೆಲ್ಲುಗಳ ಕ್ರೈಮ್ ಸ್ಟೋರಿಗೆ ಆಹಾರವಾದಳು. "ಇಂದ್ರಿಯಾಣಿ ಪುರಾ ಜಿತ್ವಾ ಜಿತಂ ತ್ರಿಭುವನಂ ತ್ವಯಾ| ಸ್ಮರದ್ಧಿರಿವ ತದ್ವೈರಮಿಂದ್ರಿಯೈರೇವ ನಿರ್ಜಿತ:||" (ವಾ.ರಾ.ಯು.ಕಾಂ.೧೧೪.೧೮)- ರಾವಣನ ಮರಣದ ಕಾರಣವನ್ನು ಮಂಡೋದರಿ ವರ್ಣಿಸಿದ ಪರಿಯಿದು: 'ನೀನು ಮೊದಲು ಇಂದ್ರಿಯಗಳನ್ನು ಜಯಿಸಿ ಮೂಲೋಕಗಳಿಗೆ ಒಡೆಯನಾದೆ. ಆ ಇಂದ್ರಿಯಗಳು ಅದನ್ನು ನೆನಪಿನಲ್ಲಿಟ್ಟುಕೊಂಡಿದ್ದವೋ ಎಂಬಂತೆ ನಿನ್ನ ಮೇಲೆ ದ್ವೇಷ ಸಾಧಿಸಿ ನಿನ್ನನ್ನು ಗೆದ್ದವು.' ಜೀವನಕ್ಕೆ ಬೇಕಾದ ಅಮೂಲ್ಯ ಪಾಠ ಈ ಮಾತುಗಳಲ್ಲಿದೆ. ಕಾಮ ನಮ್ಮ ಹಿಡಿತದಲ್ಲಿದ್ದರೆ ಅದರಿಂದ ಏನು ಬೇಕಾದರೂ ಸಾಧಿಸಬಹುದು. ಅದರ ಹಿಡಿತಕ್ಕೆ ನಾವು ಸಿಕ್ಕಿಬಿದ್ದರೆ ಮುಗಿದೇಹೋಯಿತು. ಅನೇಕ ವರ್ಷಗಳ ಸಾಧನೆಯನ್ನು ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯುವ ಸಾಮರ್ಥ್ಯ ಕಾಮಕ್ಕಿದೆ. ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಿರುವವರು, ಜನನಾಯಕರೆನಿಸಿಕೊಂಡವರು, ಸಮಾಜದಲ್ಲಿ ಉನ್ನತ ಸ್ಥಾನ-ಮಾನಗಳನ್ನು ಹೊಂದಿದವರು ಹಲವರು ಕ್ಷಣಿಕ ದೌರ್ಬಲ್ಯದ ಸುಳಿಗೆ ಸಿಕ್ಕಿ ಅಧಃಪತನ ಹೊಂದಿದ, ಮತ್ತೆ ಮೇಲಕ್ಕೇರಲು ಸಾಧ್ಯವೆನಿಸದ ಸ್ಥಿತಿಯಲ್ಲಿರುವ ಅನೇಕರನ್ನು ನಾವು ಕಂಡಿದ್ದೇವೆ, ಕಾಣುತ್ತಿದ್ದೇವೆ. ಈ ಸುಳಿಗೆ ಸಿಕ್ಕಿದವರ ಸಂಸಾರಗಳು ಹಾಳಾಗಿರುವ, ನೆಮ್ಮದಿ ಕಳೆದುಕೊಂಡಿರುವ, ಪ್ರಾಣ ಕಳೆದಿರುವ ಮತ್ತು ಕಳೆದುಕೊಂಡಿರುವವರ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಅಪಕ್ವ ಮತ್ತು ದುರ್ಬಲ ಮನಸ್ಕರು ಕಾಮದ ಈ ಮುಖದ ಬಲಿಪಶುಗಳಾಗುತ್ತಾರೆ. ಇಂತಹ ಕಾಮಿಗಳ ಬುದ್ಧಿಗೆ ಮಂಕು ಕವಿದಿರುತ್ತದೆ, ಲಜ್ಜೆ, ಮಾನ-ಅಪಮಾನಗಳ ಅರಿವು ಇರುವುದಿಲ್ಲ. 'ಕಾಮಾತುರಾಣಾಂ ನ ಭಯಂ ನ ಲಜ್ಜಾ' ಎಂಬ ನುಡಿಯಂತೆ ಕೆಲವು ಅವಿವೇಕಿಗಳು ತಮ್ಮ ಮಕ್ಕಳು, ಸಂಬಂಧಿಕರು, ಆಶ್ರಿತರು, ಮುಂತಾದವರ ದುರ್ಬಲತೆಯ ದುರ್ಲಾಭ ಪಡೆದು ಅವರನ್ನೂ ಬಲಿಪಶುಗಳನ್ನಾಗಿಸಿರುವ ಪ್ರಸಂಗಗಳ ಬಗ್ಗೆ ತಿಳಿದಾಗ ಹೇಸಿಗೆಯೆನ್ನಿಸುತ್ತದೆ. ಕ್ಷಣಿಕ ಆನಂದದ ಉನ್ಮಾದ ಜೀವನದ ದಿಕ್ಕನ್ನೇ ತಿರುಗಿಸಬಲ್ಲದು ಎಂಬುದರ ಅರಿವು ಮೂಡುವಷ್ಟರಲ್ಲಿ ಪ್ರಮಾದ ಘಟಿಸಿಬಿಟ್ಟಿರುತ್ತದೆ. ಏನೂ ಅರಿಯದ ಕಂದಮ್ಮಗಳ ಮೇಲೂ ಅತ್ಯಾಚಾರದ ಸುದ್ದಿಗಳು ಕೇಳಿಬರುತ್ತಿರುವುದು ಈ ಕಾಮಾಸುರನ ಅಟ್ಟಹಾಸವೇ ಸರಿ.
     ಮದ ಸೊಕ್ಕಿ ಮೆರೆಯುವವರನ್ನು ಯಾರು ಇಷ್ಟಪಡುತ್ತಾರೆ? ಮದಕ್ಕೆ ನಾನಾ ರೂಪಗಳಿವೆ- ಸಂಪತ್ತಿನ ಮದ, ಅಧಿಕಾರ ಮದ, ರೂಪ ಮದ, ಯೌವನದ ಮದ, ತಿಳಿದವನೆಂಬ ಮದ, ಇತ್ಯಾದಿ, ಇತ್ಯಾದಿ. ಮನೆಯಲ್ಲಿ, ಸುತ್ತಮುತ್ತಲಿನಲ್ಲಿ ಸಿಗಬೇಕಾದ ಸಂಸ್ಕಾರ ಸಿಗದಿದ್ದಾಗ ಮದದ ಠೇಂಕಾರಕ್ಕೆ ಮಿತಿ ಇರುವುದಿಲ್ಲ. ಮನೆಗೆ ಯಾವುದೋ ಕಾರ್ಯಾರ್ಥವಾಗಿ ಹಿರಿಯರು ಅಥವ ಅತಿಥಿಗಳು ಬಂದಾಗ ಅವರನ್ನು ಸ್ವಾಗತಿಸುವ ಸೌಜನ್ಯ ಇಲ್ಲದಿದ್ದಾಗ ಬಂದವರಿಗೆ ಅಲ್ಲಿಗೆ ಏಕಾದರೂ ಹೋದೆವೋ ಅನ್ನಿಸದಿರದು. ಹಿರಿಯರು ಇದ್ದಾಗ ಕಿರಿಯರು ಅವರ ಎದುರಿಗೆ ಕಾಲು ಚಾಚಿ ಕೂಡುವುದು, ಅವರನ್ನು ಲೆಕ್ಕಕ್ಕೆ ಇಟ್ಟುಕೊಳ್ಳದಂತೆ ಅವರಿಗೆ ಘಾಸಿಯಾಗುವಂತೆ ಮಾತನಾಡುವುದು, ಇತ್ಯಾದಿಗಳೂ ಮದದ ಕಾಯಿಲೆಯಿಂದ ನರಳುತ್ತಿರುವವರು ಮಾಡುವ ಕೆಲಸವೇ. ಇಂತಹವರಿಂದ ದೂರವಿರುವುದೇ ಕ್ಷೇಮ.
     ಲೋಭಿಗಳಿಗೆ ಯಾವುದೇ ನೀತಿ, ನಿಯಮಗಳು, ಸಿದ್ಧಾಂತಗಳು ಪಥ್ಯವಾಗುವುದಿಲ್ಲ. ಅವರ ಒಂದೇ ಗುರಿ ಎಲ್ಲವೂ ತಮಗಿರಲಿ ಎಂಬುದಷ್ಟೇ. ಇದರಿಂದಾಗಿ ಆಸ್ತಿಕತೆ, ಧಾರ್ಮಿಕತೆ, ಒಳ್ಳೆಯ ವಿಚಾರಗಳು, ನಡೆಗಳು, ಒಟ್ಟಾರೆಯಾಗಿ ಸತ್ಪ್ರವೃತ್ತಿಗಳು ಮರೆಯಾಗುತ್ತವೆ. ಕ್ರೂರ ಪಶುಗಳಿಗೂ ಅವರಿಗೂ ವ್ಯತ್ಯಾಸ ಇರದೆ, ಸಮಾಜ ದುಸ್ಥಿತಿಗೆ ಜಾರುತ್ತದೆ. ಲೋಭಿಗಳಲ್ಲಿ ಸಂಪತ್ತು ಕ್ರೋಢೀಕೃತವಾದರೆ, ಉಳಿದವರು ಸಹಜವಾಗಿ ಸಿಡಿಯುತ್ತಾರೆ ಮತ್ತು ಅವರಲ್ಲಿನ ದುರ್ಭಾವನೆಗಳೂ ಜಾಗೃತವಾಗುತ್ತವೆ. ಹೀಗಾಗಿ ಲೋಭಿ ತಾನು ಕೆಡುವುದಲ್ಲದೆ, ಸಮಾಜವನ್ನೂ ಕೆಡಿಸುತ್ತಾನೆ. ಲೋಭಿಯಾದವರು ಯಾವ ಮಾರ್ಗದಲ್ಲೇ ಆಗಲಿ, ತನಗೆ ಹಣ ಬಂದರಾಯಿತು ಎಂಬ ಮನೋಭಾವದವನಾಗಿದ್ದು, ಈ ಕಾರಣದಿಂದಲೇ ಕಪ್ಪು ಹಣ, ಭ್ರಷ್ಠಾಚಾರ, ಕಾಳಸಂತೆ, ಜೂಜು, ಬೆಟ್ಟಿಂಗ್ ವ್ಯವಹಾರ, ಅಕ್ರಮ ಶೇಖರಣೆ, ಕಲಬೆರಕೆ, ಮಾದಕ ದ್ರವ್ಯಗಳ ವ್ಯಾಪಾರ. ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆ, ದೇಶದ್ರೋಹದ ಚಟುವಟಿಕೆಗಳು, ಪ್ರಾಣಹಾನಿ, ಮಾನಹಾನಿ, ಭಯೋತ್ಪಾದಕತೆ, ಮುಂತಾದವುಗಳು ವಿಜೃಂಭಿಸುತ್ತವೆ ಎಂಬುದು ನಿಧಾನವಾಗಿ ಆಲೋಚಿಸಿದರೆ ಅರ್ಥವಾಗುತ್ತದೆ.
     ಮೇಲೆ ವಿವರಿಸಿರುವ ಮಾನವನ ಅಂತಃಶತ್ರುಗಳಾದ ಆರು ಪ್ರಧಾನ ರಕ್ಷಸ್ಸುಗಳಿಂದ ಕೂಡಿದ ರಾಕ್ಷಸರು ಸಮಾಜದ ಹಿತಕ್ಕೆ ಮಾರಕರಾಗಿದ್ದಾರೆ. ರಾಕ್ಷಸರೆಂದರೆ ಹೊರಗಿನ ಯಾರೋ ಅಲ್ಲ. ಅವರುಗಳು ನಮ್ಮೊಳಗೇ ಇದ್ದಾರೆ. ಅವರನ್ನು ಹತ್ತಿಕ್ಕಬೇಕಾದವರು ಬೇರೆ ಯಾರೂ ಅಲ್ಲ, ನಾವುಗಳೇ! ಅವಿವೇಕದ ರಕ್ಕಸನನ್ನು ಹತ್ತಿಕ್ಕಲು ವಿವೇಕದ ಪರಮಾತ್ಮನೇ ಬರಬೇಕು. ವಿವೇಚಿಸಿ ಮುಂದಡಿಯಿಡುವುದು, ಸತ್ಸಂಗ, ಸಜ್ಜನ ಸಹವಾಸ, ಸಾತ್ವಿಕ ಆಹಾರ, ಸಂಸ್ಕಾರಯುತ ಗೃಹ, ಉತ್ತಮ ಮಾರ್ಗದರ್ಶನ ನೀಡುವ ಗುರುವಿನ ಆಶ್ರಯ, ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಿಕ್ಷಣ- ಇವುಗಳು ನಮ್ಮೊಳಗಿನ ರಾಕ್ಷಸರನ್ನು ಹತ್ತಿಕ್ಕಲು ನಮಗಿರುವ ಪರಿಣಾಮಕಾರಿ ಆಯುಧಗಳಾದರೆ, ಹೊರಗಿನ ರಾಕ್ಷಸರನ್ನು ನಿಯಂತ್ರಿಸಲು ಉಪಯೋಗಿಸಬಹುದಾದ ಆಯುಧಗಳೆಂದರೆ ಸಾಮ, ದಾನ, ಭೇದ ಮತ್ತು ದಂಡ. ಇವುಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಒಬ್ಬ ದುರ್ಜನನನ್ನು ಮನ ಪರಿವರ್ತಿಸಿ, ಯೋಗ್ಯ ತಿಳುವಳಿಕೆ ನೀಡಿ ಸಜ್ಜನನನ್ನಾಗಿಸಿದರೆ, ಒಬ್ಬ ರಾಕ್ಷಸ ಕಡಿಮೆಯಾಗುವುದರ ಜೊತೆಗೆ ಒಬ್ಬ ಸಜ್ಜನನ ಸಂಖ್ಯೆ ಹೆಚ್ಚಾಗುತ್ತದೆ. ಮನ ಪರಿವರ್ತನೆ ಸಾಧ್ಯವೇ ಇಲ್ಲ, ಅವನಿಂದ ಸಮಾಜಕ್ಕೆ ಹಾನಿ ತಪ್ಪಿದ್ದಲ್ಲ ಅನ್ನಿಸಿದರೆ ಮತ್ತು ಸಾಮ, ದಾನ, ಭೇದದ ಪ್ರಯೋಗಗಳು ಪ್ರಯೋಜನಕಾರಿ ಆಗದಿದ್ದಾಗ ಅನಿವಾರ್ಯವಾಗಿ ದಂಡ ಉಪಯೋಗಿಸುವುದು ಸಮಾಜದ ದೃಷ್ಟಿಯಿಂದ ಅನಿವಾರ್ಯವಾಗುತ್ತದೆ. ಮೌಲ್ಯಯುತ ಆಡಳಿತ ಬಂದರೆ ಇದೂ ಸಹ ಸಾಧ್ಯವಿದೆ.
-ಕ.ವೆಂ.ನಾಗರಾಜ್.
**************
17.11.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಸೋಮವಾರ, ಡಿಸೆಂಬರ್ 8, 2014

ಸ್ಪಂದನಶೀಲತೆ

     ಹಲವು ವರ್ಷಗಳ ಹಿಂದೆ ನಡೆದ ಘಟನೆಯಿದು. ಆಗ ಹಿರಿಯ ಅಧಿಕಾರಿ ಶ್ರೀ ಮದನಗೋಪಾಲರು ಸಿ.ಇ.ಟಿ.ಯ ವೈಸ್ ಛೇರ್‍ಮನ್ ಆಗಿದ್ದರು. ಶಿಕ್ಷಣ ಮಂತ್ರಿ ಶ್ರೀ ಅರವಿಂದ ಲಿಂಬಾವಳಿಯವರು ಛೇರ್‍ಮನ್. ಒಂದು ದಿನ ಪ್ರೌಢ ಮಹಿಳೆಯೊಬ್ಬಳು ಮದನಗೋಪಾಲರ ಭೇಟಿ ಬಯಸಿ ಬಂದು ಅವರನ್ನು ಕೇಳಿದಳು, "ಸರ್, ನೀವು 'ತಾರೆ ಜಮೀನ್ ಪರ್' ನೋಡಿದ್ದೀರಾ?" "ನೋಡಿದ್ದೇನೆ" - ಮದನಗೋಪಾಲರ ಉತ್ತರ. ಬಂದ ಮಹಿಳೆ ಮುಂದುವರೆಸಿದಳು, "ಹಾಗಾದರೆ ನನ್ನ ಸಮಸ್ಯೆ ಅರ್ಧ ಹೇಳಿಕೊಂಡಂತಾಯಿತು. ನೋಡಿ, ನನ್ನ ಮಗನದೂ ಅದೇ ಸಮಸ್ಯೆ. ಅವನು ಡಿಸ್ಲೆಕ್ಸಿಯದಿಂದ ನರಳುತ್ತಿದ್ದಾನೆ. ಇಂಜನಿಯರಿಂಗ್, ಮೆಡಿಕಲ್ ಸೀಟುಗಳಲ್ಲಿ ಶೇಕಡ ೩ರಷ್ಟನ್ನು ಅಂಗವಿಕಲರಿಗೆ ಮೀಸಲಿಟ್ಟಿದ್ದೀರಿ. ಆದರೆ ಆ ಸೀಟುಗಳು ಬೇರೆ ರೀತಿಯ ಅಂಗವಿಕಲರ ಪಾಲಾಗುತ್ತವೆ. ನನ್ನ ಮಗನಂತಹವರಿಗೆ ಒಂದು ಸೀಟೂ ಸಿಕ್ಕುವುದಿಲ್ಲ. ನೀವು ಏನಾದರೂ ಸಹಾಯ ಮಾಡಬಹುದೇ?" ಆ ಮಹಿಳೆಗೆ ಏನಾದರೂ ಸಹಾಯವಾದೀತೆಂದು ನಂಬಿಕೆಯಿರಲಿಲ್ಲ, ಆದರೂ ಮಗನ ಮೇಲಿನ ಮಮತೆ ಮತ್ತು ಕಾಳಜಿಯಿಂದ ಆಕೆ ಬಂದಿದ್ದಳು. ಇದು ಮದನಗೋಪಾಲರ ಮನಕ್ಕೆ ತಟ್ಟಿತು. ಅವರು ವಿಚಾರಮಗ್ನರಾದರು. ಅವರ ಒಳಗಿನ ಸಂತ ಜಾಗೃತನಾದ. ಏನಾದರೂ ಮಾಡಬೇಕೆಂದು ಅಂದುಕೊಂಡರು. ಆ ಮಹಿಳೆಗೆ ತಮ್ಮ ಕೈಲಾದ ಸಹಾಯ ಮಾಡುವುದಾಗಿ ಹೇಳಿ ಬೀಳ್ಕೊಟ್ಟರು.
     ಡಿಸ್ಲೆಕ್ಸಿಯದಂತಹ ಕಾಯಿಲೆಗಳಿಂದ ಬಳಲುವವರಿಗೆ ಉನ್ನತ ಶಿಕ್ಷಣ ಪಡೆಯಲು ಹೇಗೆ ಅವಕಾಶಗಳನ್ನು ಕಲ್ಪಿಸಬಹುದೆಂದು ಲೆಕ್ಕ ಹಾಕುತ್ತಲೇ ಮದನಗೋಪಾಲರು ಶಿಕ್ಷಣ ಸಚಿವ ಅರವಿಂದ ಲಿಂಬಾವಳಿಯವರಿಗೆ ಮಹಿಳೆಯೊಡನೆ ನಡೆದ ಮಾತುಕತೆಗಳನ್ನು ವಿವರಿಸಿದರು. ಅವರಿಗೂ ವಿಚಾರ ಮನಸ್ಸಿಗೆ ತಟ್ಟಿ ಹೇಳಿದರು, "ನೀವು ಏನು ಮಾಡಬಹುದೋ ಮಾಡಿರಿ. ಅದಕ್ಕೆ ನನ್ನ ಒಪ್ಪಿಗೆಯಿದೆ." ಪ್ರವೇಶಾತಿ  ನಿಯಮಕ್ಕೆ ವಿಶೇಷ ತಿದ್ದುಪಡಿ ಸಿದ್ಧಪಡಿಸಿ ವೈದ್ಯಕೀಯವಾಗಿ ಮಾನಸಿಕ ಕಾಯಿಲೆ ಕಾರಣದ ದೌರ್ಬಲ್ಯದವರಿಗೆ ಶೇ. ಅರ್ಧದಷ್ಟು ಸೀಟುಗಳನ್ನು ಮೀಸಲಿರಿಸಲು ಅಳವಡಿಸಿ ಮಂಡಿಸಲಾಯಿತು. ಒಂದೇ ವಾರದಲ್ಲಿ ಆ ತಿದ್ದಪಡಿಗೆ ಅಂಗೀಕಾರ ಪಡೆಯಲಾಯಿತು. ಪ್ರಾರಂಭದಲ್ಲಿ ವಿಶೇಷ ವರ್ಗದವರ ಕೌನ್ಸೆಲಿಂಗ್ ಆಗುತ್ತದೆ. ಮದನಗೋಪಾಲರನ್ನು ಭೇಟಿ ಮಾಡಿದ್ದ ಮಹಿಳೆಯೂ ತನ್ನ ಮಗನೊಂದಿಗೆ ಬಂದಿದ್ದಳು. ನಂಬುವುದಕ್ಕೇ ಆಗದಂತೆ ಆಕೆಯ ಮಗನಿಗೆ ಸೀಟು ಸಿಕ್ಕಿಬಿಟ್ಟಿತು! ಆನಂದಾತಿರೇಕದಿಂದ ಆ ಮಹಿಳೆ ಅತ್ತುಬಿಟ್ಟಳು. ಇಡೀ ದೇಶದಲ್ಲಿ ಅದೇ ಮೊದಲು ಡಿಸ್ಲೆಕ್ಸಿಯದಿಂದ ನರಳುತ್ತಿದ್ದವರಿಗೆ ಸೀಟು ಸಿಕ್ಕಿದ್ದು! ಭಾವಪರವಶಳಾಗಿ ಆಕೆ ಕೃತಜ್ಞತೆ ಸಲ್ಲಿಸಿದ್ದಳು.
     ಮೇಲಿನ ಘಟನೆಯಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಏನಾದರೂ ಜನಪರವಾಗಿ, ಜನೋಪಯೋಗಿಯಾಗಿ ಮಾಡಬೇಕೆಂದು ಹಿರಿಯ ಅಧಿಕಾರಿಗಳು ಮನಸ್ಸು ಮಾಡಿದರೆ ಮಾಡಲು ಸಾಧ್ಯವಿದೆ ಎಂಬುದೇ ಅದು. ಇಂತಹ ಅಧಿಕಾರಿಗಳ ಸಂಖ್ಯೆ ಬೆರಳೆಣಿಕೆಯ್ಟದ್ದರೂ, ಇಂತಹವರಿಗೆ ಪ್ರೋತ್ಸಾಹ, ಮಾನ್ಯತೆ ಸಿಕ್ಕಾಗ ಅವರು ಇತರರಿಗೂ ಮಾದರಿಯಾಗುತ್ತಾರೆ. ಇನ್ನೊಂದು ಸಂಗತಿಯನ್ನೂ ಗಮನಿಸಬಹುದು. ಅದೆಂದರೆ ರಾಜಕಾರಣಿಗಳ ಬಗ್ಗೆ ಏನನ್ನಾದರೂ ಮಾತನಾಡಬಹುದು. ಆದರೆ ಅವರಿಗೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿದರೆ ಇಂತಹ ಉತ್ತಮ ಕೆಲಸಗಳು ಸಾಧ್ಯ. ಈ ಅನುಭವ ನನ್ನ ಸ್ವಂತದ್ದೂ ಕೂಡಾ ಆಗಿದೆ. ಶ್ರೀ ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದಾಗ ಮತ್ತು ಮುಖ್ಯಮಂತ್ರಿಯಾಗಿದ್ದಾಗ ನಾನು ಅವರ ಕ್ಷೇತ್ರವಾದ ಶಿಕಾರಿಪುರದಲ್ಲೇ ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ್ದೆ. ಜನರು ಅಹವಾಲು ಸಲ್ಲಿಸಿದ ಸಂದರ್ಭದಲ್ಲಿ ಅಥವ ಹಿತೈಷಿಗಳು ಅಥವ ಇತರ ರಾಜಕೀಯ ಕಾರ್ಯಕರ್ತರುಗಳು ಹೇಳಿದ ಸಂಗತಿಗಳನ್ನು ಆಧರಿಸಿ ಕೆಲವು ಕೆಲಸಗಳನ್ನು ಮಾಡಲು ಸೂಚನೆ ಕೊಡುತ್ತಿದ್ದರು. ಪೂರ್ಣ ವಿವರ ತಿಳಿಯದೆ ಕೊಡುತ್ತಿದ್ದ ಅಂತಹ ಕೆಲವು ಸೂಚನೆಗಳು ಜಾರಿಗೆ ತರುವಂತಹದಾಗಿರುತ್ತಿರಲಿಲ್ಲ. ಅಂತಹ ಸನ್ನಿವೇಶಗಳಲ್ಲಿ, ಅವರು ಒಬ್ಬರೇ ಇದ್ದ ಸಂದರ್ಭವನ್ನು ಉಪಯೋಗಿಸಿಕೊಂಡು ಸಾಧಕ-ಬಾಧಕಗಳನ್ನು ತಿಳಿಸಿ, ಬದಲಿಯಾಗಿ ಏನು ಮಾಡಬಹುದೆಂದು ತಿಳಿಸಿದರೆ, ಅವರು ಒಪ್ಪಿಕೊಳ್ಳುತ್ತಿದ್ದರು. ಇಂತಹುದೇ ಪ್ರತಿಕ್ರಿಯೆ ಎಲ್ಲಾ ರಾಜಕಾರಣಿಗಳಿಂದ ನಿರೀಕ್ಷಿಸುವುದು ಕಷ್ಟ. ಸರಿಯೋ, ತಪ್ಪೋ ತಾವು ಹೇಳಿದಂತೆ ಮಾಡಬೇಕೆಂದು ಹಟ ಮಾಡುವ, ದರ್ಪ ತೋರಿಸುವ ರಾಜಕಾರಣಿಗಳೇ ಜಾಸ್ತಿ. ಅದರಿಂದಾಗಿ ಅಧಿಕಾರಿಗಳು ಕಷ್ಟಕ್ಕೆ ಸಿಲುಕುತ್ತಾರೆ.
     ನಿಜವಾಗಿ ಸರ್ಕಾರದ ಸಾಧನೆಗಳನ್ನು ಯಶಸ್ವಿಯಾಗಿ ಬಿಂಬಿಸಬಲ್ಲ ರಾಯಭಾರಿಗಳೆಂದರೆ ಮೇಲೆ ತಿಳಿಸಿದ ಮಹಿಳೆಯಂತಹ ಫಲಾನುಭವಿಗಳೇ! ಸಾಧನೆಗಳನ್ನು ತೋರಿಸಲು ದೊಡ್ಡ ಫ್ಲೆಕ್ಸ್‌ಗಳ, ಟಿವಿ ಮತ್ತು ಪತ್ರಿಕೆಗಳಲ್ಲಿ ಜಾಹೀರಾತುಗಳ ಅಗತ್ಯವಿಲ್ಲ. ಅದಕ್ಕಾಗಿ ಖರ್ಚು ಮಾಡುವ ಕೋಟ್ಯಾಂತರ ರೂ.ಗಳನ್ನು ಜನೋಪಯೋಗಿ ಕಾರ್ಯಗಳಿಗೆ ಬಳಸಬಹುದು. ಸರ್ಕಾರಿ ಅಧಿಕಾರಿಗಳಲ್ಲಿ ಮತ್ತು ಶಾಸಕಾಂಗದವರಲ್ಲಿ ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸುವ ಮನೋಭಾವ ಬಂದಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತದೆ. ಆದರೆ, ಭ್ರಷ್ಠಾಚಾರ ಇದಕ್ಕೆ ದೊಡ್ಡ ಕಂಟಕವಾಗಿದೆ. ಜನರನ್ನು ಗೋಳಾಡಿಸಿದರೆ, ಕಷ್ಟಕ್ಕೀಡು ಮಾಡಿದರೆ, ಜನರಿಗೆ ಕೊಡಬೇಕಾದ ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸದಿದ್ದರೆ ಮೇಲಿನ ಆದಾಯ ಸಲೀಸಾಗಿ ಬರುತ್ತದೆ ಎಂಬ ಮನೋಭಾವ ಸ್ಪಂದನಶೀಲತೆಯನ್ನು ಮರಗಟ್ಟಿಸುತ್ತದೆ. 
     ಜನರ ಕುಂದುಕೊರತೆಗಳನ್ನು ಆಲಿಸಲು, ಸಮಸ್ಯೆಗಳನ್ನು ಪರಿಹರಿಸಲು ಆಗಾಗ್ಯೆ ಜನಸಂಪರ್ಕ ಸಭೆಗಳನ್ನು ಏರ್ಪಡಿಸುವ ಪರಿಪಾಠ ಒಳ್ಳೆಯದೇ. ಆದರೆ ಇವು ವರ್ಷದ ಕೆಲವು ಅವಧಿಯಲ್ಲಿ ನಡೆದು ನಿಂತುಹೋಗಿಬಿಡುತ್ತದೆ. ಮಂತ್ರಿಗಳೂ ಸಹ ಆಗಾಗ್ಯೆ ಜನರಿಂದ ಅಹವಾಲುಗಳನ್ನು ಸ್ವೀಕರಿಸುವ 'ಜನತಾ ಅದಾಲತ್'ಗಳೂ ನಡೆಯುವುದನ್ನು ಕಾಣುತ್ತಿರುತ್ತೇವೆ. ಸಮಸ್ಯೆ ಪರಿಹರಿಸುವಲ್ಲಿ ಇವು ಸ್ವಲ್ಪ ಮಟ್ಟಿಗೆ ನೆರವಾಗುತ್ತವೆ. ಪೂರ್ಣ ಯಶಸ್ವಿಯೆನಿಸಬೇಕೆಂದರೆ ಸ್ವೀಕೃತವಾದ ಎಲ್ಲಾ ಮನವಿಗಳೂ ತಾರ್ಕಿಕ ಅಂತ್ಯ ಕಾಣುವವರೆಗೆ ಅದನ್ನು ಸಮರ್ಥವಾಗಿ ಪರಿಶೀಲಿಸುವ ಕೆಲಸವಾಗಬೇಕು. ಸ್ಪಂದನಶೀಲ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರೆ ಇವು ಪ್ರಯೋಜನಕಾರಿ. ಆದರೆ ಇಂದಿನ ಭ್ರಷ್ಠ ವ್ಯವಸ್ಥೆಯಲ್ಲಿ ಸ್ಪಂದನಶೀಲ ಅಧಿಕಾರಿಗಳಿಗಿಂತ ತಾವು ಹೇಳಿದಂತೆ ಕೇಳುವ, ತಮ್ಮ ಹಿಂಬಾಲಕರಂತೆ ವರ್ತಿಸುವ ಅಧಿಕಾರಿಗಳನ್ನು ತಮ್ಮ ಕ್ಷೇತ್ರಗಳಲ್ಲಿ ನೇಮಕವಾಗುವಂತೆ ನೋಡಿಕೊಳ್ಳುವ ಜನಪ್ರತಿನಿಧಿಗಳೇ ಜಾಸ್ತಿ. ಹೀಗಾದಾಗ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗಿಂತ ರಾಜಕಾರಣಿಗಳ ಬಳಿಗೇ ಹೋಗುತ್ತಾರೆ. ಅವರ ಆಣತಿಯಂತೆ ಕೆಲಸ ಆಗುವುದೋ, ಬಿಡುವುದೋ ನಿರ್ಧರಿತವಾಗುತ್ತದೆ. ಇದು ನಿಜಕ್ಕೂ ಒಳ್ಳೆಯ ಸ್ಥಿತಿಯಲ್ಲ. ಆಳುವ ಪಕ್ಷದ ರಾಜಕಾರಣಿಗಳ ಮಾತು ಕೇಳದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುತ್ತದೆ. ರಾಜಕಾರಣಿಗಳು ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ಮಾಡುವ ಮೊದಲ ಕೆಲಸವೆಂದರೆ ತಮಗೆ ಬೇಕಾದ ಮತ್ತು ನಿಷ್ಠರಾದ ಅಧಿಕಾರಿಗಳು ಮತ್ತು ನೌಕರರು ತಮ್ಮ ಕ್ಷೇತ್ರದಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಇರುವಂತೆ ನೋಡಿಕೊಳ್ಳುವುದು. ಹೀಗಾದಾಗ ರಾಜಕಾರಣಿಗಳನ್ನು ತಾತ್ವಿಕವಾಗಿ ವಿರೋಧಿಸುವ ಜನರ ಕೆಲಸಗಳು ಆಗುವುದೇ ಇಲ್ಲ. ಈ ವ್ಯವಸ್ಥೆ ಸರಿಯಾದರೆ ಮಾತ್ರ ಬದಲಾವಣೆ  ನಿರೀಕ್ಷಿಸಲು ಸಾಧ್ಯ. ಚುನಾವಣೆಯಲ್ಲಿ ಆ ರಾಜಕಾರಣಿ ಸೋತು ಹೋದರೆ ಅಧಿಕಾರಿಗಳು, ನೌಕರರೂ ಸಹ ವರ್ಗಾವಣೆ ಭೀತಿ ಎದುರಿಸುತ್ತಾರೆ. ಇಂತಹ ಕೆಟ್ಟ ವ್ಯವಸ್ಥೆಯಿಂದಾಗಿ ನೌಕರಶಾಹಿ ಕೂಡಾ ಗೆದ್ದೆತ್ತಿನ ಬಾಲ ಹಿಡಿಯುವ, ಅಧಿಕಾರಾರೂಢರನ್ನು ಓಲೈಸುವ ಅಭ್ಯಾಸ ಬೆಳೆಸಿಕೊಂಡಿರುವುದನ್ನೂ ಕಾಣುತ್ತಿದ್ದೇವೆ. ನಿಯತ್ತಿನ ಮತ್ತು ದಕ್ಷ ಅಧಿಕಾರಿಗಳು ಮಾತ್ರ ಬಲಿಪಶುಗಳಾಗುತ್ತಾರೆ. ವರ್ಗಾವಣೆ ಮಾಡಲು ನೀತಿ-ನಿಯಮಾವಳಿಗಳಿದ್ದರೂ ಅವೆಲ್ಲವನ್ನೂ ಗಾಳಿಗೆ ತೂರಲಾಗುತ್ತದೆ. ನನ್ನ ಸೇವಾವದಿಯಲ್ಲಿ ೨೬ ವರ್ಗಾವಣೆಗಳನ್ನು ನಾನು ಕಾಣಬೇಕಾಯಿತು. ಅವುಗಳಲ್ಲಿ ರಾಜಕಾರಣಿಗಳ ಕೈವಾಡದ ವರ್ಗಾವಣೆಗಳದೇ ಸಿಂಹಪಾಲು. ಅವಧಿ ಪೂರ್ವ ವರ್ಗಾವಣೆಗಳ ನಿಯಂತ್ರಣ ಮಾಡುವ ಇಚ್ಛಾಶಕ್ತಿ ಆಳುವವರಿಗೆ ಬರಬೇಕು. ಆಳುವವರನ್ನು ನಿಯಂತ್ರಿಸುವ ಕೆಲಸ ಜಾಗೃತ ಜನರು ಮಾಡಬೇಕು. ಅಲ್ಲಿಯವರೆಗೆ ಇದನ್ನು ಸಹಿಸಿಕೊಳ್ಳಬೇಕು.
     ಒಂದು ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ತಮ್ಮ ಇಲಾಖೆಯಿಂದ ಮಾಡಿದ ಕೆಲಸಗಳು, ಸಾಧನೆಗಳನ್ನು ವಿವರಿಸುತ್ತಾ, ತಾವು ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದೇವೆಂದು ಹೆಮ್ಮೆಯಿಂದ ಹೇಳುತ್ತಿದ್ದರು. ಆಗ ಒಬ್ಬ ವಯಸ್ಸಾದ ಮಹಿಳೆ ಎದ್ದು ನಿಂತು ತನಗೂ ಮಾತನಾಡಲು ಅವಕಾಶ ಕೊಡಬೇಕೆಂದು ಕೋರಿದಳು. ಧ್ವನಿವರ್ಧಕದ ಮುಂದೆ ನಿಂತ ಆ ಮಹಿಳೆ ಹೇಳಿದ್ದಿಷ್ಟು: "ನೀವು ಜಂಬ ಪಡಬೇಕಿಲ್ಲ. ನೀವೆಲ್ಲರೂ ಸಮಾಜದಿಂದ ಉಪಕಾರ ಪಡೆದವರು. ಸಮಾಜದಿಂದ ನೀವು ಸಾಲ ಪಡೆದಿದ್ದೀರಿ. ಸಮಾಜದ ಸಹಾಯದಿಂದಲೇ ನೀವು ಈ ಹುದ್ದೆಗಳಲ್ಲಿದ್ದೀರಿ. ನೀವು ಈಗ ಮಾಡುತ್ತಿರುವುದು ನೀವು ಪಡೆದಿರುವ ಸಾಲದ ಬಡ್ಡಿ ಕಟ್ಟುತ್ತಿರುವುದು ಅಷ್ಟೆ. ಅಸಲು ತೀರಿಸುವುದು ಇನ್ನೂ ಬಾಕಿ ಇದೆ." ಎಷ್ಟು ನಿಜ! ಅಧಿಕಾರಿಗಳು, ಆಳುವವರು ಈ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. 
-ಕ.ವೆಂ.ನಾಗರಾಜ್.
***************
10.11.2014ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ:



    

ಶುಕ್ರವಾರ, ಡಿಸೆಂಬರ್ 5, 2014

ಸ್ನೇಹವೇ ಜೀವನದ ಅದ್ಭುತ ಉಡುಗೊರೆ


     "ನಮ್ಮನ್ನು ನಾವೇ ಪ್ರಾಮಾಣಿಕರಾಗಿ ನಮಗೆ ಯಾರು ಅತ್ಯಂತ ಪ್ರಿಯರು ಎಂದು ಪ್ರಶ್ನಿಸಿಕೊಂಡಾಗ ಸಮಸ್ಯೆಗಳಲ್ಲಿ ಸಿಲುಕಿ ತೊಳಲಾಡುತ್ತಿರುವ ಸಂದರ್ಭಗಳಲ್ಲಿ ನಮಗೆ ಸಾಮಾನ್ಯವಾಗಿ ಪುಕ್ಕಟೆ ಸಲಹೆ ಕೊಡುವವರು, ಹೊಗಳುವವರು, ಪರಿಹಾರ ಸೂಚಿಸುವವರು, ಶಪಿಸುವವರು, ದೂಷಿಸುವವರು, ಇತ್ಯಾದಿಯವರಿಗಿಂತ ನಮ್ಮ ಕಷ್ಟ, ನೋವುಗಳಿಗೆ ನಿಜವಾಗಿ ಸ್ಪಂದಿಸುವವರು ಮತ್ತು ಮೃದುವಾಗಿ ನಮ್ಮ ಗಾಯಗಳ ಮೇಲೆ ಕೈಯಾಡಿಸಿ ಸಾಂತ್ವನ ಹೇಳುವವರೇ ಹೆಚ್ಚು ಪ್ರಿಯರೆನಿಸುತ್ತಾರೆ ಅಲ್ಲವೇ? ಹೀಗೆ ಮಾಡುವವರೇ ನಿಜವಾದ ಸ್ನೇಹಿತರು! ಅಂತಹ ಸ್ನೇಹಿತರ ಸಂಖ್ಯೆ ಸಾವಿರವಾಗಲಿ, ಸ್ನೇಹ ಅಮರವಾಗಲಿ." 
     ಸ್ನೇಹ ಅನ್ನುವುದು ಇಬ್ಬರು ಅಥವ ಹೆಚ್ಚಿನ ಜನರೊಂದಿಗೆ ಪರಸ್ಪರ ಹೊಂದಿರುವ ಮಧುರ ಅನುಬಂಧ, ಭಾವಬಂಧ. ಜೀವಿಗಳು ಸ್ವಭಾವತಃ ಸಮಾಜಾವಲಂಬಿಯಾಗಿರುವುದರಿಂದ ಸ್ನೇಹಕ್ಕೆ ಮಹತ್ವ ಬರುತ್ತದೆ. ಸ್ನೇಹ ಅನೇಕ ಗುಣವಿಶೇಷಗಳನ್ನು ಹೊಂದಿದ್ದು ಅದರಲ್ಲಿ ಕರುಣೆ, ಅನುಕಂಪ, ಸತ್ಯ, ಸಮಾನಭಾವ, ಅವಲಂಬನೆ, ನಂಬಿಕೆ, ಸಹವಾಸದಲ್ಲಿ ಸಂತಸ, ಭದ್ರತೆಯ ಭಾವ, ಅಂಜಿಕೆ, ಅಳುಕುಗಳಿಲ್ಲದೆ ಭಾವನೆಗಳ ವಿನಿಮಯ, ಇತ್ಯಾದಿಗಳು ಒಳಗೊಳ್ಳುತ್ತವೆ. ಮೂರ್ಖತನವನ್ನು ನಿರ್ಭಿಡೆಯಿಂದ ತೋರಿಸಿಕೊಳ್ಳಲು ಸಂಕೋಚಿಸದಿರುವುದು ಸ್ನೇಹಿತರಲ್ಲಿ ಮಾತ್ರ ಸಾಧ್ಯ. ಗಾಢವಾದ ಸ್ನೇಹತ್ವ ಹೊಂದಿರುವವರು ಹೆಚ್ಚು ಸಂತೋಷಿಗಳಾಗಿರುತ್ತಾರೆಂಬುದು ಒಂದು ಸಂಶೋಧನೆಯಿಂದ ತಿಳಿದುಬಂದಿರುವ ಸತ್ಯ. ಸ್ನೇಹಕ್ಕೆ ಯಾವುದೇ ನಿಬಂಧನೆಗಳು, ನಿಯಮಗಳನ್ನು ಅನ್ವಯಿಸಲಾಗದಿದ್ದರೂ, ಸ್ನೇಹವನ್ನು ಸಾಮಾನ್ಯವಾಗಿ ಸಮಾನ ಹಿನ್ನೆಲೆ, ಪ್ರವೃತ್ತಿ, ವೃತ್ತಿ, ಆಸಕ್ತಿಗಳು ಮತ್ತು ಇಂತಹುದೇ ಸಾಮಾನ್ಯ ಸಂಗತಿಗಳು ನಿರ್ಧರಿಸುತ್ತವೆ.
     ಸ್ನೇಹ ಬಾಲ್ಯದಿಂದ ವೃದ್ಧಾಪ್ಯದವರೆಗೆ ವಿವಿಧ ರೀತಿಗಳಲ್ಲಿ ವ್ಯಕ್ತಗೊಳ್ಳುತ್ತವೆ. ಬಾಲ್ಯದಲ್ಲಿ ಆಟದ ವಸ್ತುಗಳನ್ನು, ತಿಂಡಿ ಪದಾರ್ಥಗಳನ್ನು ಹಂಚಿಕೊಳ್ಳುವುದರಿಂದ, ಒಟ್ಟಿಗೆ ಆಡುವುದರಿಂದ, ಆಟ-ಪಾಠಗಳನ್ನು ಮಾಡುವುದರಿಂದ ಸ್ನೇಹ ಚಿಗುರುತ್ತದೆ. ಈ ಚಿಕ್ಕ ವಯಸ್ಸಿನಲ್ಲಿ ಆಟದ ಸಾಮಾನುಗಳನ್ನು ಮಕ್ಕಳು ಇತರರೊಡನೆ ಹಂಚಿಕೊಳ್ಳಲು ಇಷ್ಟಪಡದಿದ್ದರೂ, ತಾವು ಇಷ್ಟಪಡುವ, ಸ್ನೇಹಿತರೆಂದು ಭಾವಿಸುವ ಓರಗೆಯವರೊಂದಿಗೆ ಹಂಚಿಕೊಳ್ಳುತ್ತವೆ. ಸ್ನೇಹಿತರೊಂದಿಗೆ ಮಾತ್ರ ಆಟವಾಡಲು, ಒಟ್ಟಿಗೆ ಇರಲು ಬಯಸುತ್ತವೆ. ಬಾಲ್ಯದಲ್ಲಿ ಉತ್ತಮ ಗೆಳೆಯರನ್ನು ಹೊಂದುವ ಮಕ್ಕಳು ಮುಂದೆ ಸಮಾಜದೊಡನೆ ಉತ್ತಮ ರೀತಿಯಲ್ಲಿ ಹೊಂದಿಕೊಳ್ಳಬಲ್ಲವು. ಬಾಲ್ಯದ ಗೆಳೆತನಗಳು ನಂತರದ ಗೆಳೆತನಗಳಿಗಿಂತ ಹೆಚ್ಚು ದೀರ್ಘವಾಗಿ ಬಾಳುತ್ತವೆ ಎಂಬುದು ಅನುಭವವೇದ್ಯ ಸಂಗತಿ. ಬೆಳೆಯುತ್ತಾ ಹೋದಂತೆ ಸ್ನೇಹ ಹೆಚ್ಚು ನಿರೀಕ್ಷೆಗಳನ್ನು ಹೊಂದುತ್ತಾ ಹೋಗುತ್ತದೆ. ಪ್ರಾರಂಭದಲ್ಲಿನ ಸರಳ ವಿಚಾರಗಳು, ಅಂದರೆ ಅಕ್ಕ-ಪಕ್ಕದವರು, ಸಮೀಪದವರೊಡನೆ ಹೊಂದುವ ಸ್ನೇಹ ನಂತರದಲ್ಲಿ ಒಬ್ಬರಲ್ಲಿ ಒಬ್ಬರ ವಿಶ್ವಾಸ, ನಂಬಿಕೆಗಳನ್ನು ಬಯಸುತ್ತದೆ. ಅದಕ್ಕೂ ನಂತರದಲ್ಲಿ, ಸಮಾನ ಅಭಿರುಚಿ, ಹವ್ಯಾಸಗಳು, ಆಸಕ್ತಿಗಳು ಗಣನೆಗೆ ಬರುತ್ತವೆ. ಸ್ನೇಹ ಶಾಲೆಯಲ್ಲಿ ಕಲಿಯುವಂತಹ ಸಂಗತಿಯಲ್ಲ. ಆದರೆ ಸ್ನೇಹದ ಅರ್ಥ ತಿಳಿಯದವರು ಏನನ್ನೂ ಕಲಿತಿಲ್ಲವೆಂದೇ ಅನ್ನಬೇಕಾಗುತ್ತದೆ. ಸ್ನೇಹಿತರನ್ನು ಪಡೆಯಲು ಇರಬೇಕಾದ ಅರ್ಹತೆಯೆಂದರೆ ಸ್ವತಃ ಸ್ನೇಹಿತರಾಗುವುದು!
     ಹರಯ ಬರುವ ಸಮಯದಲ್ಲಿ ಯುವಕ-ಯುವತಿಯರ ಸ್ವಭಾವ ನಿರ್ಧರಿಸುವಲ್ಲಿ ಸ್ನೇಹ ಪ್ರಧಾನ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಗಮನಿಸಬಹುದಾದ ಸಂಗತಿಯೆಂದರೆ ಯಾರು ಪಾಠ-ಪ್ರವಚನಗಳಲ್ಲಿ, ಶಾಲಾ ಚಟುವಟಿಕೆಗಳಲ್ಲಿ ಆಸಕ್ತಿ ತೋರುತ್ತಾರೋ ಅವರುಗಳು ಹಾದಿ ತಪ್ಪಲಾರರು ಮತ್ತು ಆರೋಗ್ಯವಂತರಾಗಿರುತ್ತಾರೆ. ತದ್ವಿರುದ್ಧವಾಗಿರುವವರಲ್ಲಿ ಹಲವರು ಹರಯದ ಉತ್ಸಾಹದಲ್ಲಿ ಕುಡಿಯುವುದು, ಧೂಮಪಾನ ಮಾಡುವುದು, ಅಡ್ಡದಾರಿ ಹಿಡಿಯುವುದು, ಇತ್ಯಾದಿಗಳಲ್ಲಿ ತೊಡಗುವುದನ್ನು ಕಾಣಬಹುದು. ವಿರುದ್ಧ ಲಿಂಗಿಗಳ ಬಗ್ಗೆ ಕಾಮಾಕರ್ಷಣೆಯೇ ಸ್ನೇಹವೆಂದು ಭಾವಿಸುವ ವಯಸ್ಸು ಇದು. ಹಾಗೆಂದು ಎಲ್ಲರೂ ಹಾಗಿರುತ್ತಾರೆ ಎನ್ನಲಾಗುವುದಿಲ್ಲ. ಪವಿತ್ರ ಪ್ರೇಮಿಗಳೂ ಇರುತ್ತಾರೆ. ಇಂತಹ ಸೆಳೆತಕ್ಕೆ ಒಳಗಾದವರು ಇದನ್ನೇ ಜೀವನದ ಪ್ರಥಮ ಆದ್ಯತೆಯೆಂದು ತಿಳಿದು ಅನಾಹುತಗಳನ್ನು ಮಾಡಿಕೊಂಡಿರುವುದೂ ಇದೆ.      ಹಣ್ಣು ಮಾಗಿದ ನಂತರ ರುಚಿ ಜಾಸ್ತಿ. ಹಾಗೆಯೇ, ಪ್ರೌಢರಾದಾಗ ಜೀವನದ ಅನುಭವಗಳ ಹಿನ್ನೆಲೆಯಲ್ಲಿ ಸ್ನೇಹಕ್ಕೆ ಮೆರುಗು ಬರುತ್ತದೆ. ನಿಜವಾದ ಸ್ನೇಹದ ಗುಣವೆಂದರೆ ಅರ್ಥ ಮಾಡಿಕೊಳ್ಳುವುದು ಮತ್ತು ಅರ್ಥವಾಗುವುದು ಎಂಬ ಅರಿವು ಆಗ ಮೂಡಿರುತ್ತದೆ. ಬೆಳಕಿನಲ್ಲಿ ಒಂಟಿಯಾಗಿ ನಡೆಯುವುದಕ್ಕಿಂತಲೂ ಕತ್ತಲೆಯಲ್ಲಿ ಸ್ನೇಹಿತರೊಡಗೂಡಿ ನಡೆಯುವುದು ಹಿತಕರವಾಗಿರುತ್ತದೆ. ಎಲ್ಲರೂ ತೊರೆದುಹೋದರೂ ನೈಜ ಸ್ನೇಹಿತ ಎಂತಹ ಸಂದರ್ಭದಲ್ಲೂ ಒಟ್ಟಿಗೆ ಇರಬಯಸುತ್ತಾನೆ. ಅವನು ಕಷ್ಟದಲ್ಲಿ ಸೂಕ್ತ ಸಲಹೆ ಕೊಡುತ್ತಾನೆ, ತಾಳ್ಮೆಯಿಂದ ಕೇಳುತ್ತಾನೆ, ಸಮಸ್ಯೆ ಬಂದಾಗ ಪಲಾಯನ ಮಾಡದೆ ಎದೆಗೊಡುತ್ತಾನೆ, ಧೈರ್ಯದಿಂದ ಸಮರ್ಥಿಸುತ್ತಾನೆ ಮತ್ತು ಬದಲಾಗದೆ ಇರುತ್ತಾನೆ. ಇಂತಹ ಒಬ್ಬ ಸ್ನೇಹಿತ ನೂರಾರು ಬಂಧುಗಳಿಗಿಂತಲೂ ಮಿಗಿಲಾಗಿರುತ್ತಾನೆ.
     ಎಲ್ಲಾ ಸ್ನೇಹಗಳೂ ಒಂದೇ ರೀತಿ ಇರುವುದಿಲ್ಲ, ಇದ್ದರೂ ಹಲವು ಕಾರಣಗಳಿಂದಾಗಿ ದೀರ್ಘಕಾಲ ಬಾಳಲಾರವು. ಸ್ನೇಹದ ತಾಳಿಕೆ, ಬಾಳಿಕೆ ಸಂಬಂಧಿಸಿದವರ ಮನೋಭಾವಗಳನ್ನು ಅವಲಂಬಿಸಿರುತ್ತದೆ. ಒಂದು ಉದಾಹರಣೆ ನೋಡೋಣ. ಅವರಿಬ್ಬರೂ ಬಾಲ್ಯದಿಂದಲೂ ಪರಿಚಿತರು. ರಾಜಕಾರಣದಲ್ಲಿ ಆಸಕ್ತಿ ಹೊಂದಿದವರು, ಒಂದೇ ಸಮುದಾಯಕ್ಕೆ ಸೇರಿದವರು. ಸಮಾನ ಆಸಕ್ತಿಗಳು ಅವರನ್ನು ಒಟ್ಟುಗೂಡಿಸಿದ್ದವು. ಇಬ್ಬರೂ ಪರಸ್ಪರ ಕೈಜೋಡಿಸಿ ಮೇಲೆ ಬಂದರು. ಒಬ್ಬರ ಉತ್ಕರ್ಷಕ್ಕೆ ಇನ್ನೊಬ್ಬರು ಸಹಕಾರಿಗಳಾಗಿದ್ದರು. ಕ್ರಮೇಣ ಅವರು ರಾಜ್ಯಮಟ್ಟದಲ್ಲೂ ಮಿಂಚಿದರು. ಆಗ ಅವರ ಸ್ನೇಹಕ್ಕೆ ಮುಳ್ಳಾಗಿದ್ದು ಅಸೂಯೆ. ಎಲ್ಲಿ ಅವರು ಬೆಳೆದರೆ ತಮ್ಮ ಏಳಿಗೆಗೆ ಧಕ್ಕೆಯಾಗುತ್ತದೋ, ಎಲ್ಲಿ ಅವರು ತಮಗಿಂತ ಹೆಚ್ಚು ಹೆಸರು, ಕೀರ್ತಿ ಗಳಿಸುತ್ತಾರೋ, ತಮ್ಮ ಮತ್ತು ತಮ್ಮವರ ಅಭಿವೃದ್ಧಿಗೆ ತೊಡಕಾಗುತ್ತಾರೋ ಎಂಬ ಭಾವನೆ ಬಲಿಯಲಾರಂಭಿಸಿತೋ, ಅಲ್ಲಿಗೆ ಅವರ ಸ್ನೇಹ ಬಲಿಯಾಯಿತು. ರಾಮ-ಲಕ್ಷ್ಮಣ, ಲವ-ಕಶ, ಎರಡು ದೇಹ-ಒಂದೇ ಆತ್ಮ, ಇತ್ಯಾದಿ ಕರೆಸಿಕೊಳ್ಳುತ್ತಿದ್ದವರು ಶತ್ರುಗಳಾಗಿ ಬದಲಾದರು. ಅವರ ಕಾಲು ಇವರು, ಇವರ ಕಾಲು ಅವರು ಎಳೆದರು. ಇಬ್ಬರೂ ಪತನ ಕಂಡರು. ಇಂತಹ ಅಸೂಯೆ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ, ಎಲ್ಲಾ ಕ್ಷೇತ್ರಗಳಲ್ಲೂ, ಅದು ಸಾಹಿತ್ಯವಿರಬಹುದು, ಕಲೆಯಿರಬಹುದು, ವೃತ್ತಿಯಿರಬಹುದು, ಸಮಾಜಸೇವೆ ಆಗಬಹುದು, ಧಾರ್ಮಿಕ ರಂಗವಿರಬಹುದು, ಯಾವುದೇ ಇರಬಹುದು, ಎಲ್ಲಾ ರಂಗಗಳಲ್ಲೂ ಅಸೂಯೆ ಮುಳ್ಳಾಗಿ ಆತ್ಮೀಯರೇ ಶತ್ರುಗಳಾಗುವಂತೆ ಮಾಡಿಬಿಡುತ್ತದೆ. 
ಸ್ನೇಹ ಪ್ರೀತಿಯಲು ಲಾಭವನೆ ಅರಸುವರು
ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು |
ವಿಶ್ವಾಸದಮೃತಕೆ ವಿಷವ ಬೆರೆಸುವರು
ಇಂಥವರ ಸಂಗದಿಂ ದೂರವಿರು ಮೂಢ ||
     ಸ್ನೇಹದಲ್ಲೂ ಅನೇಕ ವಿಧಗಳನ್ನು ಕಾಣಬಹುದು-ಸಾಂದರ್ಭಿಕ ಸ್ನೇಹ, ಕಪಟ ಸ್ನೇಹ, ಅನಿವಾರ್ಯ ಸ್ನೇಹ, ವೃತ್ತಿ/ವ್ಯವಹಾರ ನಿಮಿತ್ತದ ಸ್ನೇಹ, ಇತ್ಯಾದಿ ಪಟ್ಟಿ ಬೆಳೆಸುತ್ತಾ ಹೋಗಬಹುದು. ರೈಲು, ಬಸ್ಸುಗಳಲ್ಲಿ ಪ್ರಯಾಣಿಸುವಾಗ ಅಕ್ಕ-ಪಕ್ಕ ಇರುವವರೊಂದಿಗೆ ಸಹಜವಾಗಿ ಪ್ರಾರಂಭವಾಗುವ ಸಾಂದರ್ಭಿಕ ಮಾತುಗಳ ವಿನಿಮಯ ಪ್ರಯಾಣ ಮುಗಿಯುವ ವೇಳೆಗೆ ಆತ್ಮೀಯತೆಗೆ ತಿರುಗಬಹುದು. ಇಂತಹ ಸಾಂದರ್ಭಿಕ ಸ್ನೇಹ ಪ್ರಯಾಣದ ಅಯಾಸವನ್ನೂ ಮರೆಸಬಲ್ಲದು. ಇನ್ನು ಕಛೇರಿಗಳಲ್ಲಿ, ಅಂಗಡಿ-ಮುಂಗಟ್ಟುಗಳಲ್ಲಿ, ವ್ಯವಹಾರ ಕ್ಷೇತ್ರಗಳಲ್ಲಿ ಸಂಪರ್ಕಕ್ಕೆ ಬರುವವರೊಡನೆ ಸ್ನೇಹದಿಂದ ವರ್ತಿಸಲೇಬೇಕಾಗುತ್ತದೆ. ಅದು ವ್ಯವಹಾರದ ಯಶಸ್ಸಿಗೆ ಅಗತ್ಯವಾಗಿರುತ್ತದೆ. ಕಪಟ ಸ್ನೇಹಕ್ಕೆ ರಾಜಕಾರಣದ ಮಿತ್ರರುಗಳು ಉತ್ತಮ ಉದಾಹರಣೆಯಾಗುತ್ತಾರೆ. ಸಮಯ ಬಂದಾಗ ಕಾಲು ಹಿಡಿಯುವ, ಅಗತ್ಯ ಪೂರೈಸಿದೊಡನೆ ಕಾಲೆಳೆಯುವ ಜನರಿಗೇನೂ ಅಲ್ಲಿ ಕೊರತೆಯಿಲ್ಲ. ಅಲ್ಲಿ ಸ್ವಂತದ ಏಳಿಗೆ ಮಾತ್ರ ಪರಿಗಣಿತವಾಗಿರುತ್ತದೆ. ಇಷ್ಟವಿರಲಿ, ಇಲ್ಲದಿರಲಿ ನೇತಾರರುಗಳು ಹೇಳಿದ್ದಕ್ಕೆಲ್ಲಾ ಜೈ ಅನ್ನುವವರು, ಅವರೇ ಇಂದ್ರ, ಚಂದ್ರ, ದೇವೇಂದ್ರ ಅನ್ನುವವರು, ಹೊಗಳಿ ಅಟ್ಟಕ್ಕೇರಿಸುವವರು ಮತ್ತು ಆ ಮೂಲಕ ತಮ್ಮ ಸ್ವಾರ್ಥ ತೀರಿಸಿಕೊಳ್ಳುವವರ ಹಿಂಡೇ ಕಣ್ಣಿಗೆ ರಾಚುತ್ತಿರುತ್ತದೆ. ರಕ್ತ ಸಂಬಂಧ, ವೈವಾಹಿಕ ಸಂಬಂಧಗಳ ಮೂಲಕ ಮೂಡುವ ಸ್ನೇಹ ಗಟ್ಟಿಯಾಗಿರುತ್ತದಾದರೂ ಅಲ್ಲೂ ಸಹ ವೈಮನಸ್ಸುಗಳಿಂದಾಗಿ ಸ್ನೇಹಕ್ಕೆ ಧಕ್ಕೆ ಬಂದು, ಸಂಬಂಧಗಳು ಕಳಚಿಕೊಳ್ಳುವುದನ್ನೂ ಕಾಣುತ್ತಿರುತ್ತೇವೆ. ನೈಜ ಸ್ನೇಹ ಹೊರತುಪಡಿಸಿ ಉಳಿದೆಲ್ಲಾ ಸ್ನೇಹಗಳು ಸಾಮಾನ್ಯವಾಗಿ ಸ್ನೇಹದ ಮುಖವಾಡ ಧರಿಸಿರುತ್ತವೆ.
     ಒಂದಂತೂ ಸತ್ಯ. ಈ ಸ್ನೇಹ ಅನ್ನುವುದು ಎಲ್ಲರಿಗೂ ಅನಿವಾರ್ಯ ಮತ್ತು ಅಗತ್ಯ. ಅದು ಇಲ್ಲದಿದ್ದರೆ ಬದುಕು ನೀರಸವಾಗುತ್ತದೆ. ಅದು ಭಗವಂತ ನೀಡಿರುವ ಜೀವನದ ಅತ್ಯಮೂಲ್ಯ ಮತ್ತು ಅದ್ಭುತ ಉಡುಗೊರೆ. ಚಾಣಕ್ಯ ಹೇಳಿದಂತೆ ಪ್ರತಿ ಸ್ನೇಹದಲ್ಲೂ ಸ್ವಾರ್ಥ ಇದ್ದೇ ಇರುತ್ತದೆ. ಸ್ವಾರ್ಥವಿಲ್ಲದ ಸ್ನೇಹ ಇರಲಾರದು. ಅದು ಕಹಿ ಸತ್ಯ. ಆದರೆ ಅಂತಹ ಸ್ವಾರ್ಥವೂ ಪರಸ್ಪರರ ಏಳಿಗೆಗೆ ಪೂರಕವಾಗಿದ್ದರೆ ಸ್ನೇಹಕ್ಕೆ ಅರ್ಥ ಬರುತ್ತದೆ. ಸ್ನೇಹ ಕಳೆದುಹೋದಾಗ ಮಾತ್ರ ಅದರ ಬೆಲೆ ತಿಳಿದೀತು! ನಾವು ಬರುವಾಗ ಒಂಟಿ, ಹೋಗುವಾಗ ಒಂಟಿ, ಆದರೆ ಬಂದು ಹೋಗುವ ನಡುವಿನ ಅವಧಿಯಲ್ಲಿ ನಾವು ಒಂಟಿಯಲ್ಲ ಎಂಬ ಭಾವನೆ ಮೂಡಿಸುವುದೇ ಸ್ನೇಹದ ಅದ್ಭುತ ಚಮತ್ಕಾರ.
-ಕ.ವೆಂ.ನಾಗರಾಜ್.
**************
ಚಿತ್ರ ಕೃಪೆ:
https://blogger.googleusercontent.com/img/b/R29vZ2xl/AVvXsEjgV7kcyVsiNuIUfewA4xNB9quP8GWQ_E_6dwbQOVx6aZDeDAulE3iz7B9LyxE7yPJ-ne3fZyyr-J5oDz0Y1bqKkGFsN6dsQvAt-2sOMWcsm0b0a-Vy08bMqpYgpUohFkxGhF5jqQNUWtQ/s1600/missing-you-my-friend.jpg

3.11.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಡಿಸೆಂಬರ್ 3, 2014

ವಾನಪ್ರಸ್ಥವೆಂದರೆ . . . 2

ಹಿಂದಿನ ಲೇಖನಕ್ಕೆ ಲಿಂಕ್: ವಾನಪ್ರಸ್ಥವೆಂದರೆ . . . 1

     ಗೃಹಸ್ಥಾಶ್ರಮವು ಸಮಾಜದ ತಳಪಾಯವಿದ್ದಂತೆ. ಇತರ ಮೂರು ಆಶ್ರಮಗಳಿಗೆ ತಾಯಿಬೇರು ಇದೇ ಆಗಿದೆ. ಮಕ್ಕಳು ಬ್ರಹ್ಮಚಾರಿಗಳಾಗುತ್ತಾರೆ, ಪೋಷಕರು ವಾನಪ್ರಸ್ಥಕ್ಕೆ ಪ್ರವೇಶಿಸುತ್ತಾರೆ ಮತ್ತು ಅವರು ಲೋಕಹಿತ ಬಯಸುವ ಸಂನ್ಯಾಸಿಗಳಿಗೆ ಆಶ್ರಯ ಕೊಡುವವರೂ ಆಗಿರುತ್ತಾರೆ. ವಾನಪ್ರಸ್ಥದ ಅವಧಿಯಲ್ಲಿ ಮಕ್ಕಳು ಬೆಳೆದವರಾಗಿರುತ್ತಾರೆ ಮತ್ತು ಕೌಟುಂಬಿಕ ಜವಾಬ್ದಾರಿ ಕಡಿಮೆಯಾಗುತ್ತದೆ. ಸಾಮಾಜಿಕ ಹಿತದ ಕೆಲಸಗಳನ್ನು ಮಾಡಲು ಅವಕಾಶವಿರುತ್ತದೆ. ಈ ಅವದಿಯು ಕಿರಿಯರಿಗೆ, ಗೃಹಸ್ಥರಿಗೆ ಮತ್ತು ಸಂನ್ಯಾಸಿಗಳಿಗೆ ಬಲವಾದ ಆಧಾರರೂಪಿಯಾಗಿರಲು ಸೂಕ್ತವಾಗಿರುತ್ತದೆ. ಜ್ಞಾನವನ್ನು ಸಂಪಾದಿಸಿ ದೇಶಕ್ಕೆ, ಸಮಾಜಕ್ಕೆ ಉಪಕಾರಿಯಾಗಿರಬೇಕಾದ ಹಂತವಿದು. ಕೆಲವರು ನೇರವಾಗಿ ಸಂನ್ಯಾಸಾಶ್ರಮಕ್ಕೆ ಪ್ರವೇಶಿಸಿ ನಂತರದಲ್ಲಿ ಪ್ರಾಪಂಚಿಕ ಆಕರ್ಷಣೆಗಳಿಗೆ ಒಳಗಾಗಿ ಕೆಳಗೆ ಬಿದ್ದಿರುವುದನ್ನೂ ಕಂಡಿದ್ದೇವೆ. ಹಲವರು ಸಾಧು-ಸಂತರು, ಸ್ವಾ"ಗಳು, ಮಠಾಧೀಶರು ಪದತ್ಯಾಗ ಮಾಡಿ ಸಂಸಾರಿಗಳಾಗಿರುವುದನ್ನೂ ನೋಡಿದ್ದೇವೆ. ಇನ್ನು ಕೆಲವರು ಮರೆಯಲ್ಲಿ ಕಾಮವಾಂಛೆ ತೃಪ್ತಿಪಡಿಸಿಕೊಂಡವರು, ಗುಟ್ಟು ರಟ್ಟಾದಾಗ ಛೀಮಾರಿಗೆ ಒಳಗಾದವರನ್ನೂ ಕಂಡಿದ್ದೇವೆ. ಇಂತಹ ಸಂಯಮಿಗಳಲ್ಲದವರು ನೈಜ ವಾನಪ್ರಸ್ಥಿಗಳು, ಸಂನ್ಯಾಸಿಗಳಿಗೆ ಸಹ ಕೆಟ್ಟ ಹೆಸರು ಬರಲು ಮತ್ತು ಅವರುಗಳನ್ನು ಸಂಶಯದಿಂದ ನೋಡುವಂತೆ ಮಾಡಿರುವುದೂ ಸುಳ್ಳಲ್ಲ. ಹಾಗಾಗಿ ಗೃಹಸ್ಥ, ವಾನಪ್ರಸ್ಥದ ಅವಧಿಯನ್ನು ಪೂರ್ಣಗೊಳಿಸಿ ಪ್ರಾಪಂಚಿಕ ಆಕರ್ಷಣೆಗಳಿಂದ ಮುಕ್ತರಾದ ನಂತರವೇ ಸಂನ್ಯಾಸಿಗಳಾಗುವುದು ಸಮಾಜದ ಮತ್ತು ಸ್ವಂತದ ಹಿತದಿಂದ ಒಳ್ಳೆಯದು. ವಾನಪ್ರಸ್ಥಕ್ಕೆ ತೆರಳುವವರಿಂದ ಇನ್ನೊಂದು ಲಾಭವೂ ಇದೆ. ವೃದ್ಧರ ನಿವೃತ್ತಿಯಿಂದ ಯುವಕರಿಗೆ ಸಹಜವಾಗಿ ಅಧಿಕಾರ, ಸಾಧನ ಸೌಲಭ್ಯಗಳು ಸಿಗುತ್ತವೆ. ಅಥರ್ವ ವೇದದ ಈ ಮಂತ್ರ ಹೀಗೆ ಹೇಳುತ್ತದೆ:
ಆ ನಯೈತಮಾ ರಭಸ್ಯ ಸುಕೃತಾಂ ಲೋಕಮಪಿ ಗಚ್ಛತು ಪ್ರಜಾನನ್ |
ತೀರ್ತ್ವಾ ತಮಾಂಸಿ ಬಹುಧಾ ಮಹಾಂತ್ಯಜೋ ನಾಕಮಾ ಕ್ರಮತಾಂ ತೃತೀಯಮ್ || (ಅಥರ್ವ.೯.೫.೧.)
     ಅರ್ಥ: ಓ ಗೃಹಸ್ಥ! ಈ ನಿನ್ನ ಆತ್ಮನನ್ನು ಮುನ್ನಡೆಸು. ಸಾಧನೆಯನ್ನಾರಂಭಿಸು. ನಿನ್ನ ಆತ್ಮನು, ಚೆನ್ನಾಗಿ ಜ್ಞಾನ ಗಳಿಸಿ, ಪುಣ್ಯವಂತರ ಸ್ಥಿತಿಯನ್ನು ಮುಟ್ಟಲಿ. ಆಜನ್ಮನಾದ, ನಿತ್ಯನಾದ ನಿನ್ನ ಅತ್ಮನು ಅನ್ಯ ಸಾಧನೆಗಳಿಂದ, ಮಹಾ ಅಂಧಕಾರಗಳನ್ನು ದಾಟಿ, ಮೂರನೆಯದಾದ ವಾನಪ್ರಸ್ಥದ ಸುಖಮಯ ಆಶ್ರಮವನ್ನು ಆಕ್ರಮಿಸಲಿ.
ಸುಕ್ಕುಗಳು ಮೂಡಿಹವು ತಲೆಯು ನರೆತಿಹುದು
ಮುಪ್ಪು ಬಂದಡರಿ ಕೈಕಾಲು ನಡುಗಿಹುದು|
ರೋಗಗಳು ಮುತ್ತಿ ಬಳಲಿ ಬೆಂಡಾಗಿಹರು
ತೀರದಿಹ ಆಸೆಗೆ ಮುಪ್ಪಿಲ್ಲ್ಲವೋ ಮೂಢ|| 

     ಎಲ್ಲಾ ವಯೋವೃದ್ಧರಿಗೂ ಜೀವನದ ಅಂತಿಮ ದಿನಗಳನ್ನು ಪ್ರಾಪಂಚಿಕ ಆಕರ್ಷಣೆಗಳಿಂದ ದೂರವಾಗಿ ಕಳೆಯುವ ಮನಸ್ಸು ಬರಲಾರದು. ಒಂದು ಹಾಸ್ಯಪ್ರಸಂಗ ಇಲ್ಲಿ ನೆನಪಾಗುತ್ತಿದೆ. ಒಬ್ಬ ವ್ಯಾಪಾರಿ ಇನ್ನೇನು ಆಗಲೋ, ಈಗಲೋ ಎಂಬಂತೆ ಸಾಯುವ ಸ್ಥಿತಿಯಲ್ಲಿದ್ದಾಗ, ಅವನ ಹತ್ತಿರವಿರಲು ಮಗ ಮನೆಗೆ ಧಾವಿಸಿಬರುತ್ತಾನೆ. ಅವನಿಗೆ ಏನೋ ಹೇಳಬೇಕೆಂದು ಆ ವ್ಯಾಪಾರಿ ಬಯಸಿದರೂ ಗಂಟಲಿನಿಂದ ಸ್ವರ ಹೊರಡದೆ ಗೊರಗೊರ ಶಬ್ದ ಬರುತ್ತಿದೆ. ವೈದ್ಯರ ಶತಪ್ರಯತ್ನದಿಂದ ಕೊನೆಗೆ ಮಾತನಾಡಿದ ಅವನು ಮಗನಿಗೆ "ಇಷ್ಟು ಬೇಗ ಏಕೆ ಅಂಗಡಿ ಬಾಗಿಲು ಹಾಕಿದೆ?" ಎಂದು ಕೇಳಿದ್ದೇ ಅವನ ಜೀವನದ ಕೊನೆಯ ಮಾತಾಗಿತ್ತು! ಗೋಂದಾವಲೀ ಮಹಾರಾಜರು ಉಪನ್ಯಾಸವೊಂದರಲ್ಲಿ ಹೇಳಿದ ಪ್ರಸಂಗ (ಧ್ವನಿಮುದ್ರಿಕೆಯಲ್ಲಿ ಕೇಳಿದ್ದು) ಇಲ್ಲಿ ಉಲ್ಲೇಖಿಸಬಹುದು. ಒಬ್ಬ ಭಕ್ತರ ಮನೆಗೆ ಅವರು ಹೋಗಿದ್ದಾಗ ಆ ಮನೆಯಲ್ಲಿದ್ದ 90 ವರ್ಷ ದಾಟಿದ್ದ ವೃದ್ಧೆಯೊಬ್ಬರು ಅವರನ್ನು ಉದ್ದೇಶಿಸಿ, "ಸ್ವಾಮಿ, ನನಗೆ ಇನ್ನು ಯಾವ ಆಸೆಯೂ ಇಲ್ಲ. ನಿಮ್ಮ ಪಾದದ ಕೆಳಗೆ ತಲೆಯಿಟ್ಟು ಈ ಜೀವನ ಮುಗಿಸಬೇಕು ಎಂಬುದೊಂದೇ ಆಸೆ" ಎಂದಳು. ಅದಕ್ಕೆ ಅವರು, "ಆಗಲಿ, ಅದಕ್ಕೇನಂತೆ? ಹಾಗೇ ಮಾಡಿ" ಎಂದು ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತಾಗ ಗಾಬರಿಯಾದ ಆ ವೃದ್ಧೆ, "ಅಯ್ಯೋ, ಸ್ವಾಮಿ, ಈಗಲೇ ಅಲ್ಲ. ನನ್ನ ಮೊಮ್ಮಗಳ ಮದುವೆ ಆಗಬೇಕು. ಅವಳ ಮಗುವನ್ನು ಎತ್ತಿ ಮುದ್ದಾಡಬೇಕು. ನಾಮಕರಣ ಆಗಬೇಕು. ನಂತರ ನನ್ನ ಈ ಆಸೆ ಈಡೇರಿಸಿಕೊಳ್ಳುತ್ತೇನೆ" ಅಂದಳಂತೆ! ಸಾಯುವ ಕೊನೆಯ ಕ್ಷಣದವರೆಗೂ ರಾಜಕೀಯ ಮಾಡುತ್ತಾ ಅಧಿಕಾರಕ್ಕಾಗಿ ಹಪಹಪಿಸುವ ಇಂದಿನ ರಾಜಕಾರಣಿಗಳೂ ಇದೇ ವರ್ಗಕ್ಕೆ ಸೇರಿದವರು. ಹಾಗಾಗಿ ಏನು ಬದಲಾವಣೆ ನಿರೀಕ್ಷಿಸಲಾದೀತು? ಇರಲಿ ಬಿಡಿ, ವಾನಪ್ರಸ್ಥ ಬಯಸದವರ ಮಾತನ್ನು ಮುಂದುವರೆಸುವುದಿಲ್ಲ.
ವಿರಾಗದಲಿ ಮನೆಯ ತೊರೆಯಬೇಕಿಲ್ಲ
ತಪವನಾಚರಿಸೆ ವನವನರಸಬೇಕಿಲ್ಲ |
ನಿಷ್ಕಾಮಕರ್ಮದ ನಿಜಮರ್ಮವನರಿಯೆ
ಅದುವೆ ವಿರಾಗ ಅದುವೆ ತಪ ಮೂಢ || 

     ಇಂದಿನ ಕಾಲಮಾನದ ಪರಿಸ್ಥಿತಿಯಲ್ಲಿ ವಾನಪ್ರಸ್ಥದ ಮೂಲ ಪರಿಕಲ್ಪನೆಯನ್ನು ಸೂಕ್ತವಾಗಿ ಪರಿವರ್ತಿಸಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. 45-50ರ ವಯಸ್ಸಿನಲ್ಲಿ ಇರುವವರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮುಂಚಿತವಾಗಿ ಯೋಜನೆ ಮಾಡಿಕೊಂಡು, ಮಾನಸಿಕವಾಗಿ ಸಿದ್ಧರಾಗಿದ್ದಲ್ಲಿ ನಿವೃತ್ತರಾದ ಕೂಡಲೇ ಉಂಟಾಗಬಹುದಾದ ಶೂನ್ಯಭಾವದಿಂದ ಹೊರಬರಬಹುದು. ನಿವೃತ್ತ ಜೀವನವನ್ನು ಒಳ್ಳೆಯ ರೀತಿಯಲ್ಲಿ ಕಳೆಯುವ ಸಾಧನವಾಗಿ ಮಾಡಿಕೊಳ್ಳುವುದನ್ನು ವಾನಪ್ರಸ್ಥವೆನ್ನೋಣ. ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ಒಳಿತನ್ನು ಕಾಣುವ ಮನೋಭಾವ ಬೆಳೆಸಿಕೊಂಡು, ಅಂತರಂಗ, ಬಹಿರಂಗಗಳಲ್ಲಿ ಸಾಮ್ಯತೆ ಸಾಧಿಸುವ ಕ್ರಿಯೆಯಲ್ಲಿ ತೊಡಗುವುದು ಕಡಿಮೆ ಸಾಧನೆಯಲ್ಲ. ಪ್ರಾಪಂಚಿಕ ಆಕರ್ಷಣೆಗಳಿಂದ ವಿಮುಕ್ತರಾಗಿ ಸರಳ ವಸ್ತ್ರಗಳನ್ನು ಧರಿಸಿ, ಸರಳ ಜೀವನವನ್ನು ನಡೆಸಿ ಆತ್ಮಚಿಂತನೆಯಲ್ಲಿ ತೊಡಗಬಹುದಾಗಿದೆ. ತನ್ನ ಚಿಂತನೆ, ಜ್ಞಾನಾಭಿವೃದ್ಧಿಗಳಿಗೆ ಪೂರಕವಾಗುವ ಸತ್ಸಂಗಗಳಲ್ಲಿ ಪಾಲುಗೊಳ್ಳುವುದು, ಅಂತಹ ಆದರ್ಶದ ಜೀವನ ಸಾಗಿಸುತ್ತಿರುವ ಧೀಮಂತರ ಮಾರ್ಗದರ್ಶನ ಪಡೆಯುವುದು ಸಹಕಾರಿಯಾಗುತ್ತದೆ. ಇಂತಹವರು ಸಹಜವಾಗಿ ದೇಶಾತೀತ, ಭಾಷಾತೀತ, ಜನಾಂಗಾತೀತ, ಮತಾತೀತ ಮಾನವರಾಗುತ್ತಾರೆ. ಕೌಟುಂಬಿಕ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಿ ನಿರ್ಲಿಪ್ತ, ನಿಶ್ಚಿಂತರಾಗುವುದು ಮೊದಲ ಕ್ರಮವಾಗಬೇಕು. ನಂತರದಲ್ಲಿ ಸಾಧ್ಯವಾದಷ್ಟು ಪ್ರಶಾಂತ ಕೊಠಡಿ ಅಥವ ಸ್ಥಳದಲ್ಲಿ ಇರಬೇಕು. ಕುಟುಂಬದವರು ಕೌಟುಂಬಿಕ ಸಮಸ್ಯೆ ಅಥವ ವಿಚಾರಗಳಿಗೆ ಸಲಹೆ, ಸಹಕಾರ ಬಯಸಿದಲ್ಲಿ ಕೊಡಬೇಕು. ಆದರೆ ಅವುಗಳಲ್ಲಿ ವ್ಯಸ್ತರಾಗಬಾರದು. ಕೌಟುಂಬಿಕ ಸಾಮರಸ್ಯ, ಬಂಧುಗಳ ಸಾಮರಸ್ಯ, ಜನಾಂಗದ ಸಾಮರಸ್ಯ, ಸಕಲ ಜೀವಕೋಟಿಯ ಸಾಮರಸ್ಯದ ಗುರಿಯಿರಬೇಕು. ಈ ದಿಸೆಯಲ್ಲಿ ಎಷ್ಟು ಸಾಧಿಸಲು ಸಾಧ್ಯ, ಸಾಧಿಸಿದೆವು ಎಂಬುದು ಮಹತ್ವದ್ದಲ್ಲ. ಒಂದು ಗಾದೆಯಿದೆ, ಸಾವಿರ ಮೈಲುಗಳ ಪಯಣ ಪ್ರಾರಂಭವಾಗುವುದು ಒಂದು ಹೆಜ್ಜೆ ಮುಂದಿಡುವುದರಿಂದ. ಸಣ್ಣ ಕೌಟುಂಬಿಕ ವ್ಯಾಪ್ತಿಯಿಂದ ಹೊರಬಂದು ವಿಶ್ವವೇ ಒಂದು ಕುಟುಂಬವಾಗಿದ್ದು ತಾನು ಅದರ ಭಾಗವೆಂದು ಭಾವಿಸುವ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಸರ್ವರ ಹಿತ ಬಯಸುವ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು, ಬೆಂಬಲಿಸಬೇಕು. ಮನೋವಿಕಾರಗಳನ್ನು ನಿಯಂತ್ರಿಸಲು ಸಾಧನೆ ನಡೆಸಬೇಕು. ದುಷ್ಟ ವಿಚಾರಗಳಿಂದ ದೂರವಿದ್ದು, ಸದ್ವಿಚಾರಗಳ ಅನುಸರಣೆ, ಪ್ರಸರಣೆಗೆ ಗಮನ ಕೊಡಬೇಕು. ಒಳಿತನ್ನು, ಒಳ್ಳೆಯ ಸಂಗತಿಗಳನ್ನು ಗುರುತಿಸಿ ಗೌರವಿಸಬೇಕು. ಸಾಧ್ಯವಾದಷ್ಟೂ ಇತರರಿಗೆ ಹೊರೆಯಾಗದಂತೆ ಬಾಳಬೇಕು.
ಫಲವ ಬಯಸದೆ ಮಾಡುವನು ಕರ್ಮ
ಸಮಚಿತ್ತದೆಸಗಿದ ಮಮರಹಿತ ಕರ್ಮ |
ರಾಗ ರೋಷಗಳ ಸೋಂಕಿರದ ಕರ್ಮ
ಕರ್ಮಯೋಗಿಯ ಮರ್ಮವಿದುವೆ ಮೂಢ || 
     ಸಾಮಾನ್ಯವಾಗಿ ಒಬ್ಬೊಬ್ಬರಿಗೆ ಒಂದೊಂದು ವೃತ್ತಿ, ಪ್ರವೃತ್ತಿ, ಹವ್ಯಾಸಗಳು ತೃಪ್ತಿ, ಸಂತೋಷ ಕೊಡುವ ಸಂಗತಿಯಾಗಿರುತ್ತದೆ. ನಿವೃತ್ತಿಯೆಂದರೆ ಅಂತಹ ಹವ್ಯಾಸಗಳನ್ನು ನಿಲ್ಲಿಸುವುದಲ್ಲ. ಬದಲಾಗಿ ಅವುಗಳನ್ನು ಇತರರ ಹಿತಕ್ಕಾಗಿ ಬಳಸುವುದು. ಆದರೆ ಅದು ಹಣಗಳಿಕೆಯ ಸಾಧನವಾಗಬಾರದಷ್ಟೆ. ಒಬ್ಬ ನಿವೃತ್ತ ಶಿಕ್ಷಕ ಬಡ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಬಹುದು, ಸಂಗೀತಗಾರ ತನ್ನ ಸಾಧನೆಯನ್ನು ಉತ್ತುಂಗಕ್ಕೇರಿಸುವುದರ ಜೊತೆಗೆ ಇತರರಿಗೆ ಸಂಗೀತ ಹೇಳಿಕೊಡಬಹುದು, ಬರಹಗಾರ ತನ್ನ ಅನುಭವದ ಸಾರಗಳನ್ನು ಬರಹದ ಮೂಲಕ ಅಭಿವ್ಯಕ್ತಿಸಬಹುದು ಮತ್ತು ಆ ಮೂಲಕ ಪರಿಣಾಮ ಬೀರಬಹುದು. ಇವೆಲ್ಲಾ ಉದಾಹರಣೆಗಳಷ್ಟೆ. ಕೇವಲ ಆತ್ಮತೃಪ್ತಿ ಮತ್ತು ಇತರರಿಗೆ ಮಾರ್ಗದರ್ಶಿಯಾಗಿರಲು ಮಾತ್ರ ಇವುಗಳ ಬಳಕೆಯಾಗಬೇಕು. ಪಡೆಯುವುದಕ್ಕಿಂತ ಕೊಡುವುದಕ್ಕೆ ಆದ್ಯತೆಯಿರಬೇಕು. ಅಷ್ಟಕ್ಕೂ ನಮ್ಮಲ್ಲಿರುವುದೆಲ್ಲಾ ನಾವು ಪಡೆದಿದ್ದೇ ಅಲ್ಲವೇ? ಬದುಕಿನ ಜಂಜಾಟದಲ್ಲಿ ತನ್ನತನಕ್ಕೆ ಅದುವರೆಗೆ ಸಿಕ್ಕದ ಆದ್ಯತೆಯನ್ನು ಜೀವನದ ಅಂತಿಮ ಘಟ್ಟದಲ್ಲಾದರೂ ಸಿಕ್ಕುವಂತೆ ನೋಡಿಕೊಂಡು 'ತಾನು ತಾನಾಗಿರಬೇಕು', ಅರ್ಥಾತ್ 'ತನಗಾಗಿ' ಬಾಳಬೇಕು. 'ತನಗಾಗಿ' ಬಾಳುವ ಈ ರೀತಿಯ ಬಾಳು"ಕೆಯಲ್ಲಿ ಸ್ವಾರ್ಥವಿರಲಾರದು. ಏಕೆಂದರೆ, ಅದು ಆತ್ಮತೃಪ್ತಿಯ, ಆತ್ಮ ಚಿಂತನೆಯ, ಆತ್ಮಾನುಸಂಧಾನದ ಮಾರ್ಗ. ಒಂದು ರೀತಿಯಲ್ಲಿ ಅದು ಹಿಂದೆ ಮಾಡಿರಬಹುದಾದ ತಪ್ಪುಗಳಿಗೆ ಪ್ರಾಯಶ್ಚಿತ್ತವೂ ಆದೀತು. ಇಂತಹ ಚಿಂತನೆಗಳನ್ನು ಹೊಂದಿದವರ ಭಾವನೆಯನ್ನು ಗೌರವಿಸಿ ಸಹಕರಿಸುವ ಕುಟುಂಬದ ಇತರ ಸದಸ್ಯರೂ ಅಭಿನಂದನಾರ್ಹರಾಗುತ್ತಾರೆ. ಇಂತಹ ಕ್ರಿಯೆಯಿಂದ ಯುವಕರಿಗೆ ಸಹಜವಾಗಿ ನಾಯಕತ್ವ ಸಿಗುವುದಲ್ಲದೇ, ಅವರಿಗೆ ಸುಯೋಗ್ಯ ಮಾರ್ಗದರ್ಶನ ಸಹ ನೀಡಿದಂತಾಗುತ್ತದೆ. 'ಯಾರಂತೆ ಅಂದರೆ ಊರಂತೆ' ಎಂದುಕೊಂಡು ಅದುವರೆಗೆ ಹೇಗೆ ಹೇಗೋ ಸಾಗಿಸಿದ ಜೀವನವನ್ನು ಮರೆತು, ಮೌಲ್ಯಗಳನ್ನು ಕಡೆಗಣಿಸಿ ಬಾಳಿದ ಹಿಂದಿನ ದಿನಗಳನ್ನು ಮರೆತು, ಕಷ್ಟವಾದರೂ ಸರಿ, ಜೀವನದ ಉಳಿದ ಕೊನೆಯ ದಿನಗಳಲ್ಲಿ ಮೌಲ್ಯಗಳಿಗೆ ಅಂಟಿಕೊಂಡು ಬಾಳಿದರೆ ಅದು ಜೀವಕೋಟಿಗೆ ನೀಡುವ, ಭಗವಂತ ಮೆಚ್ಚುವ ಅತಿ ದೊಡ್ಡ ಕಾಣಿಕೆಯಾಗುತ್ತದೆ.
-ಕ.ವೆಂ.ನಾಗರಾಜ್.
**************
29.10.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ವಾನಪ್ರಸ್ಥವೆಂದರೆ . . . 1


      'ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ' ಅನ್ನುವ ಮಾತನ್ನು ವಯಸ್ಸಾದವರು ಹೇಳುವುದನ್ನು ಕೇಳುತ್ತಿರುತ್ತೇವೆ. ಆದರೆ ಹೋಗು ಎಂದರೂ ಹೋಗಲೊಲ್ಲದವರೇ ಹೆಚ್ಚು. ಅಷ್ಟಕ್ಕೂ ಒಂದು ವೇಳೆ ಹೋಗಬೇಕೆಂದರೂ ಈಗ ಕಾಡಾದರೂ ಎಲ್ಲಿದೆ? ಇರುವ ಕಾಡುಗಳನ್ನೆಲ್ಲಾ ಮನುಷ್ಯನೇ ಆಕ್ರಮಿಸಿಕೊಂಡು ಕಾಡಿನ ಪ್ರಾಣಿಗಳಿಗೇ ಇರಲು ಜಾಗವಿಲ್ಲದಾಗಿದೆ. ವಿಧಿಯಿಲ್ಲದೆ ನಾಡಿಗೆ ಬರುತ್ತಿರುವ ಆ ಕಾಡುಪ್ರಾಣಿಗಳೂ ಈಗ ನಾಶದ ಅಂಚಿಗೆ ಬರುತ್ತಿವೆ. ಏಕೋ ಏನೋ ಇತ್ತೀಚೆಗೆ ನನ್ನ ಮನಸ್ಸು ವಾನಪ್ರಸ್ಥದ ಕುರಿತು ತಲೆ ಕೆಡಿಸಿಕೊಂಡಿದೆ. ಪ್ರಾಯಶಃ ವಯೋಸಹಜವಿರಬಹುದು. ನನ್ನ 6 ವರ್ಷದ ಮೊಮ್ಮಗಳೊಡನೆ ಆಟವಾಡುತ್ತಾ ನನ್ನಷ್ಟಕ್ಕೆ ನಾನೇ ಸ್ವಗತವೆಂಬಂತೆ ಮಾತನಾಡಿಕೊಳ್ಳುತ್ತಾ, 'ನನಗೆ ಸಾಕಾಗಿದೆ ಕಣಮ್ಮಾ, ವಾನಪ್ರಸ್ಥಕ್ಕೆ ಹೋಗಿಬಿಡ್ತೀನಿ' ಅಂದಿದ್ದೆ. ಪಾಪ, ಅವಳಿಗೆ ವಾನಪ್ರಸ್ಥ ಅಂದರೆ ಏನು ಅರ್ಥವಾದೀತು? ಅವಳು ಆಟ ಆಡುವುದನ್ನು ನಿಲ್ಲಿಸಿ, "ತಾತಾ, ಪ್ಲೀಸ್, ವಾನಾಸ್ಪತ್ರೆಗೆ ಹೋಗಬೇಡ, ಪ್ಲೀಸ್, ಪ್ಲೀಸ್" ಎಂದು ಗೋಗರೆದಿದ್ದಳು. ವಾನಪ್ರಸ್ಥ ಅವಳ ಬಾಯಲ್ಲಿ ವಾನಾಸ್ಪತ್ರೆ ಆಗಿತ್ತು. 'ಹೂಂ, ಆಯಿತು, ಹೋಗಲ್ಲ' ಅಂದ ಮೇಲೆಯೇ ನಮ್ಮ ಆಟ ಮುಂದುವರೆದಿದ್ದು.   ವಾನಪ್ರಸ್ಥ(ವನಪ್ರಸ್ಥ)ವೆಂದರೆ ಕಾಡಿನೆಡೆಗೆ ತೆರಳುವುದು ಎಂಬ ಅರ್ಥವೂ ಇದೆ. ಕಾಡುಗಳು ನಾಶವಾಗಿರುವ, ಆಗುತ್ತಿರುವ ಇಂದಿನ ದಿನಗಳಲ್ಲಿ ಇದು ಅರ್ಥ ಕಳೆದುಕೊಂಡಿದೆ. ಮಾನವಸಹಜ ಆಸೆ, ಆಕಾಂಕ್ಷೆಗಳಿಗೆ ಕಡಿವಾಣ ಹಾಕಿಕೊಂಡು ಪ್ರಾಪಂಚಿಕತೆಯಿಂದ ಕ್ರಮೇಣ ದೂರ ಸರಿಯುವ, ಲೋಕಹಿತ ಬಯಸುವ ಎಡೆಗೆ ಕಾಲಿಡುವುದು ವಾನಪ್ರಸ್ಥದ ಆರಂಭಿಕ ನಡೆರಬಹುದು. ಗೃಹಸ್ಥರಿಗೆ ಈ ಕಾಲ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಿದ ನಂತರ ಬರುತ್ತದೆ. ಚತುರಾಶ್ರಮಗಳಲ್ಲಿ ಎರಡನೆಯದಾದ ಬ್ರಹ್ಮಚರ್ಯದ ನಂತರವೂ ನೇರವಾಗಿ ಈ ಆಶ್ರಮಕ್ಕೆ ಸಾಗಬಹುದಾಗಿದೆ, ಸಾಗಿದವರಿದ್ದಾರೆ. 
     ಮಾನವನ ಆಯಸ್ಸನ್ನು ಒಂದು ನೂರು ವರ್ಷಗಳು ಎಂದಿಟ್ಟುಕೊಂಡರೆ ಮೊದಲ 25 ವರ್ಷಗಳು ಬ್ರಹ್ಮಚರ್ಯ, ನಂತರದ 25 ವರ್ಷಗಳನ್ನು ಗೃಹಸ್ಥರಾಗಿ ಕಳೆದು, ನಂತರದ 51 ರಿಂದ 75 ವರ್ಷಗಳು ವಾನಪ್ರಸ್ಥದ ಕಾಲ. ಅದರ ನಂತರ ಸಂನ್ಯಾಸಾಶ್ರಮ. ಇರುವ ಬಂಧಗಳು, ಬಂಧನಗಳನ್ನು ಕಳೆದುಕೊಂಡು ಜೀವಿಸಲು ಅತಿ ಅಗತ್ಯವಾದಷ್ಟನ್ನು ಮಾತ್ರ ಹೊಂದಿ ಆಧ್ಯಾತ್ಮಿಕ ಸಾಧನೆಗೆ ತೊಡಗುವ ಕಾಲವೇ ವಾನಪ್ರಸ್ಥವೆನಿಸುವುದು. ಇದು ಪರಿವರ್ತನಾ ಕಾಲ. 
     ಗೃಹಸ್ಥನಿಗೆ ವಯಸ್ಸಾದ ನಂತರ ಅವನ ಚರ್ಮ ಸುಕ್ಕುಗಟ್ಟುತ್ತದೆ, ತಲೆಯ ಕೂದಲು ಬೆಳ್ಳಗಾಗುತ್ತದೆ ಅಥವ ಉದುರಿ ಬೋಳಾಗುತ್ತದೆ. ಮೊಮ್ಮಕ್ಕಳು ಜನಿಸಿರುತ್ತಾರೆ. ಆಗ ವಾನಪ್ರಸ್ಥಕ್ಕೆ ತೆರಳಲು ಸಮಯ ಪ್ರಶಸ್ತವಾಗಿರುತ್ತದೆ. ಕೌಟುಂಬಿಕ ಬಂಧನಗಳನ್ನು ಕಳಚಿಕೊಂಡು ಈ ಹಾದಿಯಲ್ಲಿ ಕ್ರಮಿಸುವ ಸಮಯದಲ್ಲಿ ಪತ್ನಿ ಬಯಸಿದರೆ ಅವನ ಜೊತೆಗೆ ಹೋಗಬಹುದು, ಆದರೆ ಸಹಚಾರಿಣಿಯಾಗಿ ಮತ್ತು ಸಹಸಾಧಕಿಯಾಗಿ ಮಾತ್ರ. ಹಾಗೆ ಹೊರಡುವಾಗ ಮನಸ್ಸು ಶಾಂತವಿರಬೇಕು. ಅತಿ ಕಡಿಮೆ ವಸ್ತ್ರಗಳನ್ನು ಧರಿಸುವುದು, ಕಾಡಿನಲ್ಲಿ ದೊರೆಯುವ ಸೊಪ್ಪು-ಸದೆಗಳು, ಗೆಡ್ಡೆ-ಗೆಣಸುಗಳನ್ನು  ಜೀವಾಧಾರಕ್ಕೆ ಸೇವಿಸುವುದು, ದೈಹಿಕ ಕಾಮನೆಗಳಿಂದ ದೂರವಿರುವುದು ಹಿಂದೆ ವಾನಪ್ರಸ್ಥಿಗಳು ಅನುಸರಿಸುತ್ತಿದ್ದ ಕ್ರಮವೆಂದು ಕೇಳಿದ್ದೇವೆ. ಪುಣ್ಯಕ್ಷೇತ್ರಗಳಿಗೆ ಪ್ರವಾಸವನ್ನೂ ಸಹ ಸಾಧನೆಯ ಅಂಗವಾಗಿ ಮಾಡುತ್ತಾರೆಂದು ಹೇಳುತ್ತಾರೆ. ಈಗಲೂ ಹಿಮಾಲಯದ ತಪ್ಪಲಿನಲ್ಲಿ ಇಂತಹವರು ಸಿಗಬಹುದು. ಆತ್ಮಾನುಸಂಧಾನ, ಆತ್ಮಚಿಂತನೆಗಳನ್ನು ನಡೆಸುತ್ತಾ ಕೊನೆಗೊಮ್ಮೆ ಅವರು ಸಂನ್ಯಾಸಿಯ ಅರ್ಹತೆ ಪಡೆಯುವರು. 
     ವಾನಪ್ರಸ್ಥಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಕೆಲವು ನಿಬಂಧನೆಗಳೂ ಇವೆಯೆನ್ನುತ್ತಾರೆ. ಭೂಮಿಯನ್ನು ಉತ್ತಿ. ಬಿತ್ತಿ ಬೆಳೆದ ಧಾನ್ಯಗಳು, ಪೂರ್ಣ ಕಳಿಯದ ಹಣ್ಣುಗಳು ಮತ್ತು ಬೇಯಿಸಿದ ಪದಾರ್ಥಗಳನ್ನು ಅವರು ಸೇವಿಸಬಾರದೆನ್ನುತ್ತಾರೆ. ತಿನ್ನುವ ಪದಾರ್ಥಗಳನ್ನು ಸಂಗ್ರಹಿಸಿಡಬಾರದು. ಸಮಯ, ಸ್ಥಳ ಮತ್ತು ತನ್ನ ಶಕ್ತಿ ಅನುಸರಿಸಿ ಜೀವಾಧಾರಕ್ಕೆ ಅವಶ್ಯಕ ಸಂಗತಿಗಳನ್ನು ಮಾತ್ರ ಪಡೆಯಬೇಕು. ಯಾವ ಕಾರಣಕ್ಕೂ ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಳ್ಳಬಾರದು. ಬಿಸಿಲಿನಲ್ಲಿ ಪೂರ್ಣವಾಗಿ ಮಾಗಿದ ಫಲಗಳನ್ನು ಮಾತ್ರ ಸೇವಿಸಬೇಕು. ಒಂದು ಗುಡಿಸಲು ನಿರ್ಮಿಸಿಕೊಂಡು ಅಲ್ಲಿ ಅಥವ ಬೆಟ್ಟದ ಗುಹೆಯಲ್ಲಿ ವಾಸವಿದ್ದು ಪವಿತ್ರಾಗ್ನಿಯನ್ನು ರಕ್ಷಿಸಬೇಕು. ಗಾಳಿ, ಬೆಂಕಿ, ಮಳೆ, ಬಿಸಿಲು, ಹಿಮ, ಇತ್ಯಾದಿಗಳನ್ನು ಸಹಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸುಡುಬೇಸಿಗೆಯಲ್ಲಿ ಸುತ್ತಲೂ ಬೆಂಕಿ ಉರಿಸಿ ಮಧ್ಯದಲ್ಲಿ ಕುಳಿತು ಧ್ಯಾನ(ತಪಸ್ಸು) ಮಾಡಬೇಕು. ಮಳೆಗಾಲದಲ್ಲಿ ಸುರಿಯುವ ಮಳೆಯಲ್ಲಿ ಅದರ ಆರ್ಭಟವನ್ನು ಸಹಿಸಿ ಹೊರಗೆ ಇದ್ದು, ಚಳಿಗಾಲದಲ್ಲಿ ಕೊರೆಯುವ ಹೆಪ್ಪುಗಟ್ಟಿದ ನೀರಿನಲ್ಲಿ ಕತ್ತಿನವರೆಗೆ ನೀರಿನಲ್ಲಿ ಮುಳುಗಿದ್ದು ಧ್ಯಾನಸ್ಥರಾಗಬೇಕು. ಕೂದಲು, ಮೀಸೆ, ಉಗುರುಗಳನ್ನು ಕತ್ತರಿಸಬಾರದು, ಜಟೆಗಟ್ಟಿದ ಕೂದಲನ್ನು ತಲೆಯ ಮೇಲೆ ಎತ್ತಿಕಟ್ಟಬೇಕು. ಅಕಾಲಿಕವಾಗಿ ಮಲ, ಮೂತ್ರ ವಿಸರ್ಜಿಸಬಾರದು. ಮಲಿನವಾದ ಶರೀರದ ಶುದ್ಧತೆ ಬಗ್ಗೆ ಚಿಂತಿಸಬಾರದು. ದಿನಕ್ಕೆ 3 ಸಲ ಸ್ನಾನ ಮಾಡುವುದರಿಂದ ತೃಪ್ತನಾಗಬೇಕು. ನೆಲದ ಮೇಲೆ ಮಲಗಬೇಕು. ಒಂದು ಕುಡಿಯುವ ನೀರಿನ ಮಡಿಕೆ ಮತ್ತು ಒಂದು ದಂಡ ಹಿಡಿದಿರಬೇಕು. ವಾನಪ್ರಸ್ಥಿ 12 ವರ್ಷಗಳು ಅಥವ 8 ವರ್ಷಗಳು ಅಥವ 4 ವರ್ಷಗಳು ಅಥವ 2 ವರ್ಷಗಳು ಅಥವ ಕನಿಷ್ಠ 1 ವರ್ಷವಾದರೂ ಕಾಡಿನಲ್ಲಿ ವಾಸಿಸಬೇಕೆನ್ನುತ್ತಾರೆ. ಅತಿ ಸರಳವಾಗಿ ತೋರಿದರೂ ಕಠಿಣವಾದ ನಿಯಮಗಳಿಂದ ವಿಚಲಿತನಾಗಬಾರದು. ಸಾಮಯಿಕವಾಗಿ ಅಕ್ಕಿ ಅಥವ ಕಾಡಿನಲ್ಲಿ ದೊರೆತ ಧಾನ್ಯಗಳನ್ನು ಅರ್ಪಿಸಿ ಹೋಮ, ಹವನ, ಅಗ್ನಿಹೋತ್ರ ಮಾಡಬೇಕು. ಯಾವ ಕಾರಣಕ್ಕೂ ಪ್ರಾಣಿಬಲಿ ಕೊಡಬಾರದು.  
     ವಯಾಧಿಕ್ಯದಿಂದ ಅಥವ ಕಾಯಿಲೆಗಳಿಂದ ಅನುಷ್ಠಾನ ಕಷ್ಟವೆನಿಸಿದಾಗ ಆಹಾರ ಸೇವಿಸದೆ ಉಪವಾಸವಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಂತಹ ಸಂದರ್ಭದಲ್ಲಿ ನಡುಗುವ ಶರೀರದ ಕಾರಣದಿಂದ ಅನುಷ್ಠಾನ ಮಾಡಲಾಗದವರು, ಶರೀರಧಾರಣೆ ಕಷ್ಟವಾದಾಗ ಅಗ್ನಿಯನ್ನು ಧ್ಯಾನದ ಮೂಲಕ ಹೃದಯಸ್ಥ ಮಾಡಿಕೊಂಡು ಅದರೊಳಗೆ ಪ್ರವೇಶಿಸಿ ಶರೀರ ತ್ಯಾಗ ಮಾಡುವರು. ಕೆಲವು ಸಂತ ವಾನಪ್ರಸ್ಥಿಗಳು ಕಠಿಣ ವ್ರತಗಳನ್ನು ಆಚರಿಸುತ್ತಾ ಸೊರಗಿ ಕೇವಲ ಚರ್ಮ ಮತ್ತು ಮೂಳೆಗಳ ಹಂದರದಂತೆ ತೋರುತ್ತಾರೆ. ಇಂತಹ ಕಠಿಣ ಮತ್ತು ದೀರ್ಘವಾದ ಸಾಧನೆ ಮಾಡಿ ಮೋಕ್ಷಕ್ಕೆ ಹಂಬಲಿಸುವ ಬದಲು, ಪ್ರಾಪಂಚಿಕ ಸಂಗತಿಗಳನ್ನು ಪಡೆಯಲು ಹಂಬಲಿಸುವವರು ದೊಡ್ಡ ಮೂರ್ಖರೇ ಸರಿ. ಅಸುರರು ದೀರ್ಘ ತಪಸ್ಸು ಮಾಡಿ ಪಡೆದರೆಂದು ಹೇಳಲಾಗುವ ಅಸುರೀ ಸಾಧನೆಗಳನ್ನು ಈ ಸಾಲಿಗೆ ಸೇರಿಸಬಹುದು. ತಾನು ಯಾವುದಕ್ಕಾಗಿ ಸಾಧನೆ ಮಾಡುತ್ತಿದ್ದಾನೋ ಅದರ ಫಲವನ್ನೂ ಬಯಸದ ಸ್ಥಿತಿ ತಲುಪಿದಾಗ, ಅಂದರೆ ಮನಸ್ಸಿನ ಹಿಡಿತದಿಂದ ಪೂರ್ಣವಾಗಿ ಹೊರಬಂದಾಗ ಸಂನ್ಯಾಸಾಶ್ರಮಕ್ಕೆ ಕಾಲಿಡಬಹುದಾಗಿದೆ. ವಾನಪ್ರಸ್ಥಿ ತನ್ನತನದ ಹಿರಿಮೆಯಿಂದ ಹೊರಬಂದು ವಿನೀತಭಾವ ಹೊಂದಲು ಇತರರ ಕರುಣೆಯಿಂದ, ದೀನ ರೀತಿಯಲ್ಲಿ ಪಡೆದ ಧಾನ್ಯದಿಂದ ಜೀವಿಸುತ್ತಾನೆ. ವಾನಪ್ರಸ್ಥದ ಕುರಿತ ಈ ಕೆಲವು ವಿವರಗಳನ್ನು ಶ್ರೀಮದ್ಭಾಗವತದಲ್ಲಿ ಇರುವ ಅಂಶಗಳನ್ನು ಆಧರಿಸಿ ಬರೆದಿರುವೆ.
     ವೇದದ ನಾಲ್ಕು ಅಂಗಗಳಾದ ಬ್ರಾಹ್ಮಣ, ಸಂಹಿತಾ, ಅರಣ್ಯಕ ಮತ್ತು ಉಪನಿಷತ್ತುಗಳಲ್ಲಿ ಅರಣ್ಯಕವು ವಾನಪ್ರಸ್ಥಕ್ಕೆ ಸಂಬಂಧಿಸಿದೆ. ವಾನಪ್ರಸ್ಥ ಮತ್ತು ಸಂನ್ಯಾಸಗಳು ಎರಡೂ ವೈರಾಗ್ಯ ಪ್ರಾಧಾನ್ಯ ಆಶ್ರಮಗಳು. ವಾನಪ್ರಸ್ಥಿ ಸಮಾಜದ ಸೇವೆ ಮಾಡುತ್ತಾ ಮುಕ್ತಿ ಹೊಂದುವ ಸಿದ್ಧತೆ ಮಾಡಿಕೊಳ್ಳಬೇಕು. ಧರ್ಮ, ಅರ್ಥ, ಕಾಮ, ಮೋಕ್ಷಗಳು ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸಗಳಲ್ಲಿ ಹಾಸುಹೊಕ್ಕಾಗಿವೆ. ಸಂನ್ಯಾಸಿಯು ಬ್ರಹ್ಮಚಾರಿ, ಗೃಹಸ್ಥ ಅಥವ ವಾನಪ್ರಸ್ಥಿಯಿಂದ ಹೊರತಾದವನಲ್ಲ/ ಬೇರ್ಪಟ್ಟವನಲ್ಲ. ಬ್ರಹ್ಮಚರ್ಯವು ಬೀಜರೂಪವಾಗಿದ್ದು ಗೃಹಸ್ಥಾಶ್ರಮದ ವಾಸ್ತವಿಕ ಅನುಭವವಾಗಿ ಬೆಳೆಯುತ್ತದೆ ಮತ್ತು ಅದು ವಾನಪ್ರಸ್ಥದ ವೈರಾಗ್ಯವಾಗಿ ಮುಂದುವರೆಯುತ್ತದೆ. ಹಾಗೂ, ಅದು ಮುಂದುವರೆದು ಸಂನ್ಯಾಸದ ಸಾರವಾಗಿ ಫಲಿತಗೊಳ್ಳುತ್ತದೆ.
     ಸನಾತನ ಧರ್ಮದ ಮಹತ್ವ ಅರಿವಾಗುವುದು ಈ ಆಶ್ರಮಗಳ ಸರಿಯಾದ ಅನುಷ್ಠಾನದಿಂದ. ಬ್ರಹ್ಮಚರ್ಯದಲ್ಲಿ ಒಬ್ಬ ಬಾಲಕ/ಬಾಲಿಕೆ ಗುರುಕುಲಕ್ಕೆ ಸೇರಿ ತನಗೆ ಬೇಕೆನಿಸಿದ ಜ್ಞಾನದ ಅರಿವನ್ನು ತಾನು ಯಾವ ಸಮಾಜಕ್ಕೆ ಸೇರಿದ್ದಾನೋ ಆ ಸಮಾಜದ ಹಿತವನ್ನು ಗಮನದಲ್ಲಿರಿಸಿ ಪಡೆಯುತ್ತಾನೆ/ಳೆ. ಈ ಹಂತದಲ್ಲಿ ಪಡೆಯುವ ಜ್ಞಾನ ಮುಂದಿನ ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸಾಶ್ರಮಗಳಿಗೆ ತಳಹದಿಯಂತಿರುತ್ತದೆ. ವಾನಪ್ರಸ್ತವು ಪ್ರಾಪಂಚಿಕ ಆಕರ್ಷಣೆಗಳಿಂದ ದೂರವಿರಲು ಮಾಡುವ ಸಾಧನೆಯ ಅವಧಿಯೆನ್ನಬಹುದು. ಇದು ಸಾಮಾನ್ಯವಾದ ಸಾಧನೆಯಲ್ಲ. ಸಾಧಕರುಗಳಿಗೆ, ಸಂಸ್ಕಾರವಂತರಿಗೆ, ಮನೋನಿಗ್ರಹ ಶಕ್ತಿಯುಳ್ಳವರಿಗೆ ಮಾತ್ರ ಇದು ಸಾಧ್ಯ.
-ಕ.ವೆಂ.ನಾಗರಾಜ್.
**************
22.10.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಶನಿವಾರ, ನವೆಂಬರ್ 29, 2014

ಸಹನೆಯ ಮಿತಿ

     "ಬೇಡಾ, ಕೆಣಕಬೇಡ, ತಲೆ ಕೆಟ್ಟರೆ ನಾನು ಮನುಷ್ಯ ಆಗಿರಲ್ಲ", "ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಪರಿಣಾಮ ನೆಟ್ಟಗಿರಲ್ಲ" -  ಇಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ಈ ಮಾತುಗಳ ಅಂತರಾರ್ಥ 'ಇದುವರೆಗೆ ಸಹಿಸಿಕೊಂಡಿದ್ದೇನೆ, ಇನ್ನು ಸಹಿಸಿಕೊಳ್ಳಲಾಗುವುದಿಲ್ಲ' ಎಂಬುದೇ ಆಗಿದೆ. ಸಹನೆಯ ಮಹತ್ವ ಕಾಣಬರುವುದು ಇಲ್ಲಿಯೇ! ಸಹನೆಯೆಂದರೆ ಪ್ರಚೋದನೆ, ಕಿರಿಕಿರಿ, ದುರಾದೃಷ್ಟ, ನೋವು, ಕ್ಲಿಷ್ಟಕರ ಸನ್ನಿವೇಶಗಳು, ಇತ್ಯಾದಿಗಳನ್ನು ತಾಳ್ಮೆ ಕಳೆದುಕೊಳ್ಳದೆ, ಸಿಟ್ಟು ಮಾಡಿಕೊಳ್ಳದೆ, ಭಾವನೆಗಳನ್ನು ಹೊರತೋರ್ಪಡಿಸದೇ ಸ್ಥಿತಪ್ರಜ್ಞತೆಯಿಂದ, ನಿರ್ಭಾವುಕತೆಯಿಂದ ಸಹಿಸಿಕೊಳ್ಳುವ ಒಂದು ಅದ್ಭುತ ಗುಣ. ಜನನಾಯಕರು, ಸಾಧು-ಸಂತರು, ಹಿರಿಯರುಗಳಲ್ಲಿ, ಸಾಧಕರಲ್ಲಿ ಈ ಗುಣ ಕಾಣಬಹುದು. ಇದೊಂದು ದೈವಿಕ ಗುಣ. ಸಹನಾಶೀಲರು ಸಾಮಾನ್ಯವಾಗಿ ಜನಾನುರಾಗಿಗಳಾಗಿರುತ್ತಾರೆ, ಜನರು ಇಷ್ಟಪಡುವವರಾಗಿರುತ್ತಾರೆ. ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಕೆಲವೊಮ್ಮೆ ಸಹಜವಾಗಿ, ಕೆಲವೊಮ್ಮೆ ತನ್ನ ಸಂತೋಷಕ್ಕಾಗಿ, ಕೆಲವೊಮ್ಮೆ ಇತರರ ಸಂತೋಷಕ್ಕಾಗಿ, ಕೆಲವೊಮ್ಮೆ ಅನಿವಾರ್ಯವಾಗಿ ಅನೇಕ ರೀತಿಯ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಮುಖವಾಡವೆಂದರೆ ತನಗೆ ಇಷ್ಟವಿರಲಿ, ಇಲ್ಲದಿರಲಿ ತನ್ನ ಮನಸ್ಸಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗಿ ಬರುವುದು, ಸರಳವಾಗಿ ಹೇಳಬೇಕೆಂದರೆ 'ಒಳಗಿರುವುದೇ ಒಂದು, ಹೊರಗೆ ತೋರುವುದೇ ಮತ್ತೊಂದು'! ಅವುಗಳ ಪೈಕಿ ಸಹನೆ ಅಥವ ತಾಳ್ಮೆ ಎಂಬುದು ಅತ್ಯಂತ ಸುಂದರವಾದ ಮುಖವಾಡ.
ಅತ್ತ ಮುಖ ಇತ್ತ ಮುಖ ಎತ್ತೆತ್ತಲೋ ಮುಖ
ಏಕಮುಖ ಬಹುಮುಖ ಸುಮುಖ ಕುಮುಖ|
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ||
   
     ಸಹನೆಯ ಮಹತ್ವವನ್ನು ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ದಾರ್ಶನಿಕವಾಗಿ ಅನೇಕ ಮಗ್ಗಲುಗಳಲ್ಲಿ ವಿಶ್ಲೇಷಿಸಬಹುದು. ವಿಜ್ಞಾನದ ಆವಿಷ್ಕಾರಗಳು ವಿಜ್ಞಾನಿಗಳ ಸಹನಾಸಹಿತವಾದ ಶ್ರಮದ ಫಲವೇ ಆಗಿದೆ. ಪ್ರಯೋಗಗಳನ್ನು ಮಾಡುತ್ತಾ ಮಾಡುತ್ತಾ, ವಿಫಲರಾದರೂ ಪ್ರಯತ್ನ ಮುಂದುವರೆಸಿ ಯಶಸ್ವಿಯಾದವರ ಪಟ್ಟಿ ದೊಡ್ಡದಿದೆ. ಥಾಮಸ್ ಆಲ್ವಾ ಎಡಿಸನ್ ಹೇಳಿದ್ದಂತೆ ಒಂದು ಸಾವಿರ ಪ್ರಯೋಗಗಳು ವಿಫಲವಾದರೂ, ಆ ಒಂದು ಸಾವಿರ ವಿಫಲ ಪ್ರಯೋಗಗಳಿಂದ ಆ ರೀತಿ ಮಾಡಿದರೆ ಪ್ರಯೋಜನವಾಗುವುದಿಲ್ಲ ಎಂಬ ಸಂಗತಿ ಗೊತ್ತಾಗುವುದೂ ದೊಡ್ಡ ಸಂಗತಿಯೇ ಅಲ್ಲವೇ? ಛಲ ಬಿಡದ ತ್ರಿವಿಕ್ರಮರೆನಿಸಿಕೊಳ್ಳಲು ಸಹನೆ ಇರಲೇಬೇಕು. ಒಂದು ಕಾಗದವನ್ನೋ, ವಸ್ತುವನ್ನೋ ಇಟ್ಟುಕೊಂಡು ಅದರಲ್ಲಿ ಏನೋ ಮಾಡಬೇಕೆಂದು ಪ್ರಯತ್ನಿಸುವ ಪುಟ್ಟ ಮಗುವನ್ನು ಗಮನಿಸಿ. ಅದು ತದೇಕಚಿತ್ತದಿಂದ ಏನನ್ನೋ ಮಾಡುತ್ತಿರುತ್ತದೆ. ತನ್ನ ಮನಸ್ಸಿನಂತೆ ಆಗದಿದ್ದರೆ ಸಿಟ್ಟು ಮಾಡಿಕೊಂಡು ಅದನ್ನು ಎಸೆಯುತ್ತದೆ. ಆದರೆ ಅಲ್ಲಿಗೇ ನಿಲ್ಲಿಸುವುದಿಲ್ಲ, ಮತ್ತೆ ಅದನ್ನು ತೆಗೆದುಕೊಂಡು ಪ್ರಯತ್ನ ಮುಂದುವರೆಸುತ್ತದೆ. ಯಾರಾದರೂ ಹಿರಿಯರು ಅದಕ್ಕೆ ಸಹಾಯ ಮಾಡುತ್ತಾ, ಹೇಳಿಕೊಡುತ್ತಾ ಇದ್ದು, ಮಗು ತನ್ನ ಪ್ರಯತ್ನದಲ್ಲಿ ಯಶಸ್ವಿಯಾದರೆ ಆಗ ಅದು ಪಡುವ ಸಂತೋಷವನ್ನು ಕಂಡವರಿಗೂ ಸಂತೋಷವಾಗುತ್ತದೆ. ಹೀಗೆ ಸಹನೆ ಮೊಳಕೆಯೊಡೆಯುತ್ತದೆ. ಯಾವುದೇ ಸಾಧನೆಗೆ ಸಹನೆ ಬೇಕೇಬೇಕು. ಅಟ್ಟ ಹತ್ತಲಾಗದವನು ಬೆಟ್ಟ ಹತ್ತಲಾರ. ಯಾವುದೇ ದೊಡ್ಡ ಸಾಧನೆ ಕಾರ್ಯರೂಪಕ್ಕೆ ಬರುವುದು ಯಾರೂ ಗಮನಿಸದ ಒಂದು ಮೊದಲಿನ ಸಣ್ಣ ಹೆಜ್ಜೆಯಿಂದಲೇ ಎಂಬುದನ್ನು ನೆನಪಿಡೋಣ.
     ಧಾರ್ಮಿಕವಾಗಿಯೂ ಸಹನೆ ಅತ್ಯಂತ ಪ್ರಧಾನವಾಗಿ ಬೋಧಿಸಲ್ಪಟ್ಟ ವಿಷಯವಾಗಿದೆ. ದೇವರಿಗೆ ಹತ್ತಿರವಾಗಲು ಇರಬೇಕಾದ ರೀತಿ ನೀತಿಗಳನ್ನು ಸ್ಪಷ್ಟಪಡಿಸುವ ಧಾರ್ಮಿಕ ಸಂಪ್ರದಾಯಗಳು, ಕಟ್ಟಳೆಗಳು ಸಹನೆಗೆ ಪ್ರಾಧಾನ್ಯತೆ ನೀಡಿವೆಯೆಂದರೆ ತಪ್ಪಲ್ಲ. ಸನಾತನ ಕಾಲದಲ್ಲಿ ಮೋಕ್ಷ ಸಂಪಾದನೆಗಾಗಿ ತಪಸ್ಸು, ಧ್ಯಾನಗಳಲ್ಲಿ ತೊಡಗಿರುತ್ತಿದ್ದ ಸಾಧು-ಸಂತ-ಸಂನ್ಯಾಸಿಗಳು ಸಹನೆಯ ಪ್ರತೀಕರಾಗಿದ್ದರು. 'ನೀನೂ ಜೀವಿಸು, ಇತರರನ್ನೂ ಜೀವಿಸಲು ಬಿಡು' ಎಂಬ ಮಹಾವೀರನ ಬೋಧನೆಯಲ್ಲಿ ಕಾಣುವುದೂ ಸಹನೆಯ ನೀತಿಪಾಠವೇ. ಏಸುಕ್ರಿಸ್ತ ತನ್ನವರಿಗಾಗಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಸಹಿಸಿದ್ದವನು. 'ತಾಳ್ಮೆಯಿಂದಿರುವ ವ್ಯಕ್ತಿ ಯೋಧನಿಗಿಂತಲೂ ಶ್ರೇಷ್ಠ, ರಾಜ್ಯವನ್ನು ಗೆದ್ದವನಿಗಿಂತ ತನ್ನ ಭಾವನೆಗಳನ್ನು ನಿಯಂತ್ರಿಸಿ ಗೆದ್ದವನೇ ಶ್ರೇಷ್ಠ' ಎಂದು ಹೀಬ್ರೂ ಗಾದೆಯಿದೆ. ಒಬ್ಬ ಶ್ರೇಷ್ಠ ಮಹಮದೀಯ ಅಲ್ಲಾಹುವಿಗೆ ಸಮೀಪನಾಗಿರಬೇಕೆಂದರೆ ಶ್ರೇಷ್ಠ ರೀತಿಯಲ್ಲಿ ಜೀವಿಸಬೇಕು, ಅರ್ಥಾತ್ ಸಹನಾಮುಯಾಗಿರಬೇಕು. ಪರಿಪೂರ್ಣತೆಯ ಸಾಧನೆಗೆ ತಾಳ್ಮೆ ಅತ್ಯಂತ ಅಗತ್ಯವೆಂದು ಬೌದ್ಧ ಧರ್ಮ ಪ್ರತಿಪಾದಿಸುತ್ತದೆ.
     ಸನಾತನ ಧರ್ಮವಂತೂ ಸಹಿಷ್ಣುತೆಗ ಪ್ರಾಧಾನ್ಯತೆ ನೀಡಿದ ಧರ್ಮವಾಗಿದೆ. ಇದರಲ್ಲಿ ಸಹಿಷ್ಣುತೆಗೆ ೧೦ ಪರೀಕ್ಷೆಗಳಿವೆ. ಅವೆಂದರೆ:
೧. ಅಹಿಂಸೆ (ಯಾರನ್ನೂ ದೈಹಿಕವಾಗಿ, ಮಾನಸಿಕವಾಗಿ, ಬರವಣಿಗೆಯ ಮೂಲಕವಾಗಲೀ, ಮಾತಿನ ಮೂಲಕವಾಗಲೀ, ಇನ್ನು ಯಾವುದೇ ರೀತಿಯಲ್ಲಾಗಲೀ ನೋಯಿಸದಿರುವುದು.)
೨. ಸತ್ಯ,
೩. ಅಸ್ತೇಯ (ಇತರರ ವಸ್ತುಗಳನ್ನು ಭೌತಿಕವಾಗಿಯಾಗಲೀ, ಮಾನಸಿಕವಾಗಿಯಾಗಲಿ ಕದಿಯದಿರುವುದು),
೪. ಬ್ರಹ್ಮಚರ್ಯ (ಮದುವೆಯಾಗದೆ ಇರುವುದು ಎಂಬ ಅರ್ಥ ಮಾತ್ರವಲ್ಲದೆ, ಬ್ರಹ್ಮ=ಆಧ್ಯಾತ್ಮಿಕ ವಿಚಾರದಲ್ಲಿ ಸಂಚರಿಸುವುದು ಎಂಬ ಅರ್ಥವೂ ಇದೆ)
೫. ದಯೆ,
೬. ಮೋಸ ಮಾಡದಿರುವುದು,
೭. ಕ್ಷಮಾಗುಣ,
೮. ಧೃತಿ (ಯಾವುದೇ ಸಂದರ್ಭದಲ್ಲಿ, ಹಾನಿ, ನಷ್ಟ, ಅವಮಾನ, ಇತ್ಯಾದಿ ಸಂದರ್ಭಗಳಲ್ಲಿ ಧೃಢಚಿತ್ತತೆ)
೯. ಮಿತಾಹಾರ (ಅಗತ್ಯವಿರುವಷ್ಟೇ ಆಹಾರ ಸೇವನೆ) ಮತ್ತು
೧೦. ಶೌಚ (ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧವಾಗಿರುವುದು).
     ಮೇಲಿನ ೧೦ ಸಂಗತಿಗಳನ್ನು ಪಾಲಿಸುವವರಿಗೆ ಸಹನಾಶಕ್ತಿ ತಾನಾಗಿ ಒಲಿದು ಬರದೇ ಇರಲಾರದು.
     ಇಷ್ಟಾದರೂ ಮತೀಯ, ಧಾರ್ಮಿಕ ಅಸಹನೆಗಳು ಇಂದು ವಿಶ್ವದ ಬೃಹತ್ ಸಮಸ್ಯೆಯಾಗಿರುವುದಕ್ಕೆ ಕಾರಣ ಧರ್ಮಗಳದ್ದಲ್ಲ, ಅದನ್ನು ತಪ್ಪಾಗಿ ತಿಳಿದು ಅನುಸರಿಸುವ ಮತಾಂಧ ಅನುಯಾಯಿಗಳದು. ಎಲ್ಲಾ ಧರ್ಮಗಳ ಹಿರಿಯರೆನಿಸಿಕೊಂಡವರು ವಿಶ್ವಶಾಂತಿಯ ದೃಷ್ಟಿಯಿಂದ ಪರಸ್ಪರ ಸಮಾಲೋಚಿಸಿ ತಮ್ಮ ಅನುಯಾಯಿಗಳಿಗೆ ಸುಯೋಗ್ಯ ಮಾರ್ಗದರ್ಶನ ನೀಡದಿದ್ದರೆ ವಿನಾಶದ ಹಾದಿ ಖಂಡಿತವೆಂದರೆ ಅತಿಶಯೋಕ್ತಿಯಲ್ಲ. ಸಹನೆಯಿದ್ದಲ್ಲಿ ಸಮಸ್ಯೆಗಳಿಗೆ ಸ್ಥಳವಿರುವುದಿಲ್ಲ.
     ಸಹನೆ ಅನ್ನುವುದು ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿ ಇಡುವಂತಹ ನಿಯಂತ್ರಕ ಶಕ್ತಿ ಎಂಬುದನ್ನು ಅರಿತೆವು. ಸಹನೆ ಸಜ್ಜನರ ಆಸ್ತಿಯಾಗಿದ್ದು, ಉತ್ತಮ ಫಲಗಳನ್ನು ಕೊಡುತ್ತದೆ ಎಂಬುದೂ ಅನುಭವದ ಮಾತು. ಸಹನೆಯ ವಿರುದ್ಧ ಗುಣವಾದ ಅಸಹನೆಗೂ ಹಲವು ಮಗ್ಗಲುಗಳಿವೆ. ಸಹನೆಯ ಕಟ್ಟೆ ಒಡೆದಾಗ ಉಂಟಾಗುವ ಅಸಹನೆಯ ಪರಿಣಾಮ ಮಾತ್ರ ಘೋರವಾಗಿರುತ್ತದೆ. ಮಿತಿಯಾಗಿದ್ದಾಗ ವಿಷವೂ ಅಮೃತವಾಗಬಹುದು, ಅತಿಯಾದರೆ ಅಮೃತವೂ ವಿಷವಾಗಬಹುದು. ಅವರು ಮುಂದಿದ್ದಾರೆ, ನಾವು ಹಿಂದಿದ್ದೇವೆ ಎಂಬ ಕಾರಣದಿಂದ ಉಂಟಾಗುವ ಅಸಹನೆ ಹತೋಟಿಯಲ್ಲಿದ್ದರೆ ನಾವೂ ಮುಂದುವರೆಯಲು ಅದು ಪ್ರೇರಿಸಬಹುದು. ಮಿತಿ ಮೀರಿದರೆ ಅದು ಮುಂದಿರುವವರ ವಿರುದ್ಧದ ದ್ವೇಷವಾಗಿಯೂ ಪರಿವರ್ತಿತವಾಗಬಹುದು. ಇದು ಬಂಧು-ಬಳಗಗಳಲ್ಲಿ, ವೃತ್ತಿ ವಲಯಗಳಲ್ಲಿ, ಜಾತಿ-ಜಾತಿಗಳ ನಡುವೆ ಸಾಮಾನ್ಯವಾಗಿ ಕಾಣಬರುವಂತಹದು. ಸಂಘರ್ಷವಲ್ಲ, ವೈಚಾರಿಕ ಜಾಗೃತಿ ಮಾತ್ರ ಇದಕ್ಕೆ ಪರಿಹಾರ ಕೊಡಬಲ್ಲದು.
     ನಿರಂತರವಾದ ಕಿರುಕುಳ, ಯಾವುದೋ ಒಂದು ಕಾರಣದಿಂದಾದ ವೈಮನಸ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸತತವಾಗಿ ಮಾಡುವ ದ್ವೇಷ, ಇತ್ಯಾದಿಗಳು ಸಹನೆಯ ಕಟ್ಟೆ ಒಡೆಯಲು ಸಾಕಾಗುತ್ತದೆ. ಎಲಾಸ್ಟಿಕ್ಕಿನ ಎಳೆಯನ್ನು ಒಂದು ಹಂತದವರೆವಿಗೂ ತುಂಡಾಗದಂತೆ ಎಳೆಯಬಹುದು. ಆದರೆ ಅದರ ಧಾರಣಾಶಕ್ತಿ ಮೀರಿ ಎಳೆದರೆ ತುಂಡಾಗುತ್ತದೆ. ಮನುಷ್ಯರ ನಡುವಣ ವ್ಯವಹಾರವೂ ಹೀಗೆಯೇ. ಒಂದು ಹಂತದವರೆಗೆ ಸಹಿಸುತ್ತಾರೆ. ಇನ್ನು ಸಹಿಸಲು ಸಾಧ್ಯವೇ ಇಲ್ಲವೆಂದಾದಾಗ ಸ್ಫೋಟಕ ವಾತಾವರಣ ಉಂಟಾಗುತ್ತದೆ. ಆಗ ಮನಸ್ಸಿನ ನಿಯಂತ್ರಣ ಮೀರಿ ಸಹನೆಯ ಮುಖವಾಡ ಕಳಚುತ್ತದೆ, ಕ್ರೋಧಾಸುರ ಆವಾಹನೆಗೊಳ್ಳುತ್ತಾನೆ. ವಿವೇಕರಹಿತವಾದ ಆ ಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು, ಕೊಲೆ ಆಗಬಹುದು, ಆತ್ಮಹತ್ಯೆ ಮಾಡಿಕೊಳ್ಳಬಹುದು, ದೀರ್ಘಕಾಲದ ಸಂಬಂಧಗಳ ಇತಿಶ್ರೀ ಆಗಬಹುದು. ಏನೇ ಆದರೂ ಪರಿಣಾಮ ಮಾತ್ರ ಸಂಬಂಧಿಸಿದ ಯಾರಿಗೂ ಹಿತವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಸಿಟ್ಟಿಗೊಳಗಾದ ವ್ಯಕ್ತಿ ರಾಕ್ಷಸನಂತೆಯೇ ವರ್ತಿಸುತ್ತಾನೆ. ಅವನ ಸ್ಥಿತಿ ಹೇಗಿರುತ್ತದೆಂದರೆ:

ಕೆಂಡ ಕಾರುವ ಕಣ್ಣು ಗಂಟಿಕ್ಕಿದ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು |
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||

ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ ಕ್ರೂರತ್ವ ತಾನೆರಗಿ|
ತಡೆಯಬಂದವರ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||
     ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತರಾದಾಗ ಬರುವುದಿಲ್ಲ ಎಂಬುದು ಸಹನೆಯ ಕಟ್ಟೆ ಒಡೆದವರಿಗೆ ತಿಳಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಅಸಹನೆಯ ಮುದ್ದು ಕೂಸುಗಳಾದ ಕೋಪ, ಮತ್ಸರ ಮತ್ತು ದ್ವೇಷಗಳು ವಿವೇಚನೆ ಮಾಡುವ ಶಕ್ತಿಯನ್ನು ನುಂಗಿಬಿಡುತ್ತವೆ.  ವಿವೇಚನಾಶಕ್ತಿ ನಾಶವಾಗಿರುವ ಆ ಸ್ಥಿತಿಯಲ್ಲಿ ಅನಾಹುತ ನಡೆದುಹೋಗುತ್ತದೆ. ಅದರ ದೀರ್ಘಕಾಲದ ಪರಿಣಾಮವನ್ನು ಸಂಬಂಧಿಸಿದವರಲ್ಲದೆ ಅವರ ಕುಟುಂಬದವರೂ ಎದುರಿಸಬೇಕಾಗುತ್ತದೆ.
     ಸಾಮೂಹಿಕವಾಗಿ ಉಂಟಾಗುವ ಅಸಹನೆ ಅರಾಜಕತೆ, ಅಶಾಂತಿಗೆ ಕಾರಣವಾಗುತ್ತದೆ. ಸಾಮೂಹಿಕ ಅಸಹನೆ, ಅಶಾಂತಿಗೆ ಇಂದಿನ ರಾಜಕೀಯ ವ್ಯವಸ್ಥೆ, ವಿವಿಧ ಮಾಧ್ಯಮಗಳು ಗಣನೀಯ ಪಾಲು ನೀಡುತ್ತಿವೆ. ಇದಕ್ಕೆ ಪರಿಹಾರವಿಲ್ಲವೇ ಅಂದರೆ ಖಂಡಿತಾ ಇದೆ. ಕಾಯಿಲೆ ಬಂದ ಮೇಲಿನ ಚಿಕಿತ್ಸೆಗಿಂತ ಕಾಯಿಲೆ ಬರದಂತೆ ನೋಡಿಕೊಳ್ಳುವುದೇ ಅತ್ಯುತ್ತಮವಾದ ಪರಿಹಾರ. ಸಹನೆ ಕಾಯ್ದುಕೊಳ್ಳಲು ಪೂರಕವಾದ ವಾತಾವರಣವನ್ನು ನಾವೇ ನಿರ್ಮಿಸಿಕೊಳ್ಳಬೇಕು. ನಮ್ಮ ಸ್ನೇಹಿತರು, ಪರಿಸರಗಳ ವಿಚಾರದಲ್ಲಿ ಜಾಗೃತರಾಗಿರಬೇಕು. ಹುಳುಕು ಹುಡುಕುವವರು ವಿಷ ಕಕ್ಕುತ್ತಾರೆ, ಒಳಿತು ಕಾಣುವವರು ಅಮೃತ ಸುರಿಸುತ್ತಾರೆ ಎಂಬುದು ಅನುಭವಿಗಳ ನುಡಿ. ಎಲ್ಲೆಲ್ಲೂ ಕೆಟ್ಟದನ್ನು ಕಾಣುವ ದೃಷ್ಟಿಕೋನ ಬದಲಾಯಿಸಿಕೊಂಡು ಒಳಿತನ್ನು ಅರಸುವ ಮನೋಭಾವ ಮೂಡಿದರೆ, ಲೇಖನದಲ್ಲಿ ತಿಳಿಸಿರುವ ಸಹಿಷ್ಣುತೆಗೆ ಪೂರಕವಾದ ೧೦ ಅಂಶಗಳ ಪಾಲನೆ ಮಾಡುವ ಪ್ರವೃತ್ತಿ ರೂಢಿಸಿಕೊಂಡರೆ ನಾವು ಖಂಡಿತಾ ಸಹನಶೀಲರಾಗುತ್ತೇವೆ. ಸಮಯಕ್ಕೆ ತನ್ನದೇ ಆದ ರಹಸ್ಯಗಳಿರುತ್ತವೆ. ಅದು ತನ್ನ ರಹಸ್ಯಗಳನ್ನು ಬಿಟ್ಟುಕೊಡುವವರೆಗೆ ಕಾಯುವುದೇ ಸಹನೆ! ತಾಳ್ಮೆ ಕಹಿಯಾಗಿರುತ್ತದೆ, ಆದರೆ ಅದರ ಫಲ ಸಿಹಿಯಾಗಿರುತ್ತದೆ. ಸಹನೆ ಎಂದಿಗೂ ದುರ್ಬಲರ ಅನಿವಾರ್ಯತೆಯಲ್ಲ, ಅದು ಬಲಶಾಲಿಗಳ ಆಯುಧ. ಸಹನೆ ಸಹಬಾಳ್ವೆಗೆ ಒತ್ತು ಕೊಡುತ್ತದೆ. ಅಸಹನೆಯ ಮೂಲ ಸ್ವಾರ್ಥಪರ ಚಿಂತನೆ. ಕೇವಲ ಸ್ವಕೇಂದ್ರಿತ ಚಿಂತನೆ ಮತ್ತು ವಿಚಾರಗಳು ಇತರರನ್ನು ದ್ವೇಷಿಸುವಂತೆ, ಸಹಿಸಿಕೊಳ್ಳದಿರುವಂತೆ ಮಾಡುತ್ತವೆ. ಸಹನೆ ಗುಣವಲ್ಲ, ಅದೊಂದು ಸಾಧನೆ. ಸಹನೆ ನಮ್ಮ ಸಂಪತ್ತೆನಿಸಲು ಅಸಹನೆಯ ಮೊಳಕೆ ನಮ್ಮೊಳಗೆ ಚಿಗುರದಂತೆ ಎಚ್ಚರವಿರಬೇಕು.
ನಿಜವೈರಿ ಹೊರಗಿಲ್ಲ ನಮ್ಮೊಳಗೆ ಇಹನು
ಉಸಿರು ನಿಲ್ಲುವವರೆಗೆ ಕಾಡುವವನಿವನು |
ಧೃಢಚಿತ್ತ ಸಮಚಿತ್ತಗಳಾಯುಧವ ಮಾಡಿ
ಒಳವೈರಿಯನು ಅಟ್ಟಿಬಿಡು ಮೂಢ ||
      "ಸಹನೆ ಚಾರಿತ್ರ್ಯವನ್ನು ನಿರ್ಮಿಸುತ್ತದೆ; ಚಾರಿತ್ರ್ಯವಂತರು ಚರಿತ್ರೆಯ ವಿಷಯವಾಗುತ್ತಾರೆ, ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ."
-ಕ.ವೆಂ.ನಾಗರಾಜ್.
**************
15.10.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: