ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಡಿಸೆಂಬರ್ 8, 2014

ಸ್ಪಂದನಶೀಲತೆ

     ಹಲವು ವರ್ಷಗಳ ಹಿಂದೆ ನಡೆದ ಘಟನೆಯಿದು. ಆಗ ಹಿರಿಯ ಅಧಿಕಾರಿ ಶ್ರೀ ಮದನಗೋಪಾಲರು ಸಿ.ಇ.ಟಿ.ಯ ವೈಸ್ ಛೇರ್‍ಮನ್ ಆಗಿದ್ದರು. ಶಿಕ್ಷಣ ಮಂತ್ರಿ ಶ್ರೀ ಅರವಿಂದ ಲಿಂಬಾವಳಿಯವರು ಛೇರ್‍ಮನ್. ಒಂದು ದಿನ ಪ್ರೌಢ ಮಹಿಳೆಯೊಬ್ಬಳು ಮದನಗೋಪಾಲರ ಭೇಟಿ ಬಯಸಿ ಬಂದು ಅವರನ್ನು ಕೇಳಿದಳು, "ಸರ್, ನೀವು 'ತಾರೆ ಜಮೀನ್ ಪರ್' ನೋಡಿದ್ದೀರಾ?" "ನೋಡಿದ್ದೇನೆ" - ಮದನಗೋಪಾಲರ ಉತ್ತರ. ಬಂದ ಮಹಿಳೆ ಮುಂದುವರೆಸಿದಳು, "ಹಾಗಾದರೆ ನನ್ನ ಸಮಸ್ಯೆ ಅರ್ಧ ಹೇಳಿಕೊಂಡಂತಾಯಿತು. ನೋಡಿ, ನನ್ನ ಮಗನದೂ ಅದೇ ಸಮಸ್ಯೆ. ಅವನು ಡಿಸ್ಲೆಕ್ಸಿಯದಿಂದ ನರಳುತ್ತಿದ್ದಾನೆ. ಇಂಜನಿಯರಿಂಗ್, ಮೆಡಿಕಲ್ ಸೀಟುಗಳಲ್ಲಿ ಶೇಕಡ ೩ರಷ್ಟನ್ನು ಅಂಗವಿಕಲರಿಗೆ ಮೀಸಲಿಟ್ಟಿದ್ದೀರಿ. ಆದರೆ ಆ ಸೀಟುಗಳು ಬೇರೆ ರೀತಿಯ ಅಂಗವಿಕಲರ ಪಾಲಾಗುತ್ತವೆ. ನನ್ನ ಮಗನಂತಹವರಿಗೆ ಒಂದು ಸೀಟೂ ಸಿಕ್ಕುವುದಿಲ್ಲ. ನೀವು ಏನಾದರೂ ಸಹಾಯ ಮಾಡಬಹುದೇ?" ಆ ಮಹಿಳೆಗೆ ಏನಾದರೂ ಸಹಾಯವಾದೀತೆಂದು ನಂಬಿಕೆಯಿರಲಿಲ್ಲ, ಆದರೂ ಮಗನ ಮೇಲಿನ ಮಮತೆ ಮತ್ತು ಕಾಳಜಿಯಿಂದ ಆಕೆ ಬಂದಿದ್ದಳು. ಇದು ಮದನಗೋಪಾಲರ ಮನಕ್ಕೆ ತಟ್ಟಿತು. ಅವರು ವಿಚಾರಮಗ್ನರಾದರು. ಅವರ ಒಳಗಿನ ಸಂತ ಜಾಗೃತನಾದ. ಏನಾದರೂ ಮಾಡಬೇಕೆಂದು ಅಂದುಕೊಂಡರು. ಆ ಮಹಿಳೆಗೆ ತಮ್ಮ ಕೈಲಾದ ಸಹಾಯ ಮಾಡುವುದಾಗಿ ಹೇಳಿ ಬೀಳ್ಕೊಟ್ಟರು.
     ಡಿಸ್ಲೆಕ್ಸಿಯದಂತಹ ಕಾಯಿಲೆಗಳಿಂದ ಬಳಲುವವರಿಗೆ ಉನ್ನತ ಶಿಕ್ಷಣ ಪಡೆಯಲು ಹೇಗೆ ಅವಕಾಶಗಳನ್ನು ಕಲ್ಪಿಸಬಹುದೆಂದು ಲೆಕ್ಕ ಹಾಕುತ್ತಲೇ ಮದನಗೋಪಾಲರು ಶಿಕ್ಷಣ ಸಚಿವ ಅರವಿಂದ ಲಿಂಬಾವಳಿಯವರಿಗೆ ಮಹಿಳೆಯೊಡನೆ ನಡೆದ ಮಾತುಕತೆಗಳನ್ನು ವಿವರಿಸಿದರು. ಅವರಿಗೂ ವಿಚಾರ ಮನಸ್ಸಿಗೆ ತಟ್ಟಿ ಹೇಳಿದರು, "ನೀವು ಏನು ಮಾಡಬಹುದೋ ಮಾಡಿರಿ. ಅದಕ್ಕೆ ನನ್ನ ಒಪ್ಪಿಗೆಯಿದೆ." ಪ್ರವೇಶಾತಿ  ನಿಯಮಕ್ಕೆ ವಿಶೇಷ ತಿದ್ದುಪಡಿ ಸಿದ್ಧಪಡಿಸಿ ವೈದ್ಯಕೀಯವಾಗಿ ಮಾನಸಿಕ ಕಾಯಿಲೆ ಕಾರಣದ ದೌರ್ಬಲ್ಯದವರಿಗೆ ಶೇ. ಅರ್ಧದಷ್ಟು ಸೀಟುಗಳನ್ನು ಮೀಸಲಿರಿಸಲು ಅಳವಡಿಸಿ ಮಂಡಿಸಲಾಯಿತು. ಒಂದೇ ವಾರದಲ್ಲಿ ಆ ತಿದ್ದಪಡಿಗೆ ಅಂಗೀಕಾರ ಪಡೆಯಲಾಯಿತು. ಪ್ರಾರಂಭದಲ್ಲಿ ವಿಶೇಷ ವರ್ಗದವರ ಕೌನ್ಸೆಲಿಂಗ್ ಆಗುತ್ತದೆ. ಮದನಗೋಪಾಲರನ್ನು ಭೇಟಿ ಮಾಡಿದ್ದ ಮಹಿಳೆಯೂ ತನ್ನ ಮಗನೊಂದಿಗೆ ಬಂದಿದ್ದಳು. ನಂಬುವುದಕ್ಕೇ ಆಗದಂತೆ ಆಕೆಯ ಮಗನಿಗೆ ಸೀಟು ಸಿಕ್ಕಿಬಿಟ್ಟಿತು! ಆನಂದಾತಿರೇಕದಿಂದ ಆ ಮಹಿಳೆ ಅತ್ತುಬಿಟ್ಟಳು. ಇಡೀ ದೇಶದಲ್ಲಿ ಅದೇ ಮೊದಲು ಡಿಸ್ಲೆಕ್ಸಿಯದಿಂದ ನರಳುತ್ತಿದ್ದವರಿಗೆ ಸೀಟು ಸಿಕ್ಕಿದ್ದು! ಭಾವಪರವಶಳಾಗಿ ಆಕೆ ಕೃತಜ್ಞತೆ ಸಲ್ಲಿಸಿದ್ದಳು.
     ಮೇಲಿನ ಘಟನೆಯಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಏನಾದರೂ ಜನಪರವಾಗಿ, ಜನೋಪಯೋಗಿಯಾಗಿ ಮಾಡಬೇಕೆಂದು ಹಿರಿಯ ಅಧಿಕಾರಿಗಳು ಮನಸ್ಸು ಮಾಡಿದರೆ ಮಾಡಲು ಸಾಧ್ಯವಿದೆ ಎಂಬುದೇ ಅದು. ಇಂತಹ ಅಧಿಕಾರಿಗಳ ಸಂಖ್ಯೆ ಬೆರಳೆಣಿಕೆಯ್ಟದ್ದರೂ, ಇಂತಹವರಿಗೆ ಪ್ರೋತ್ಸಾಹ, ಮಾನ್ಯತೆ ಸಿಕ್ಕಾಗ ಅವರು ಇತರರಿಗೂ ಮಾದರಿಯಾಗುತ್ತಾರೆ. ಇನ್ನೊಂದು ಸಂಗತಿಯನ್ನೂ ಗಮನಿಸಬಹುದು. ಅದೆಂದರೆ ರಾಜಕಾರಣಿಗಳ ಬಗ್ಗೆ ಏನನ್ನಾದರೂ ಮಾತನಾಡಬಹುದು. ಆದರೆ ಅವರಿಗೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿದರೆ ಇಂತಹ ಉತ್ತಮ ಕೆಲಸಗಳು ಸಾಧ್ಯ. ಈ ಅನುಭವ ನನ್ನ ಸ್ವಂತದ್ದೂ ಕೂಡಾ ಆಗಿದೆ. ಶ್ರೀ ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದಾಗ ಮತ್ತು ಮುಖ್ಯಮಂತ್ರಿಯಾಗಿದ್ದಾಗ ನಾನು ಅವರ ಕ್ಷೇತ್ರವಾದ ಶಿಕಾರಿಪುರದಲ್ಲೇ ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ್ದೆ. ಜನರು ಅಹವಾಲು ಸಲ್ಲಿಸಿದ ಸಂದರ್ಭದಲ್ಲಿ ಅಥವ ಹಿತೈಷಿಗಳು ಅಥವ ಇತರ ರಾಜಕೀಯ ಕಾರ್ಯಕರ್ತರುಗಳು ಹೇಳಿದ ಸಂಗತಿಗಳನ್ನು ಆಧರಿಸಿ ಕೆಲವು ಕೆಲಸಗಳನ್ನು ಮಾಡಲು ಸೂಚನೆ ಕೊಡುತ್ತಿದ್ದರು. ಪೂರ್ಣ ವಿವರ ತಿಳಿಯದೆ ಕೊಡುತ್ತಿದ್ದ ಅಂತಹ ಕೆಲವು ಸೂಚನೆಗಳು ಜಾರಿಗೆ ತರುವಂತಹದಾಗಿರುತ್ತಿರಲಿಲ್ಲ. ಅಂತಹ ಸನ್ನಿವೇಶಗಳಲ್ಲಿ, ಅವರು ಒಬ್ಬರೇ ಇದ್ದ ಸಂದರ್ಭವನ್ನು ಉಪಯೋಗಿಸಿಕೊಂಡು ಸಾಧಕ-ಬಾಧಕಗಳನ್ನು ತಿಳಿಸಿ, ಬದಲಿಯಾಗಿ ಏನು ಮಾಡಬಹುದೆಂದು ತಿಳಿಸಿದರೆ, ಅವರು ಒಪ್ಪಿಕೊಳ್ಳುತ್ತಿದ್ದರು. ಇಂತಹುದೇ ಪ್ರತಿಕ್ರಿಯೆ ಎಲ್ಲಾ ರಾಜಕಾರಣಿಗಳಿಂದ ನಿರೀಕ್ಷಿಸುವುದು ಕಷ್ಟ. ಸರಿಯೋ, ತಪ್ಪೋ ತಾವು ಹೇಳಿದಂತೆ ಮಾಡಬೇಕೆಂದು ಹಟ ಮಾಡುವ, ದರ್ಪ ತೋರಿಸುವ ರಾಜಕಾರಣಿಗಳೇ ಜಾಸ್ತಿ. ಅದರಿಂದಾಗಿ ಅಧಿಕಾರಿಗಳು ಕಷ್ಟಕ್ಕೆ ಸಿಲುಕುತ್ತಾರೆ.
     ನಿಜವಾಗಿ ಸರ್ಕಾರದ ಸಾಧನೆಗಳನ್ನು ಯಶಸ್ವಿಯಾಗಿ ಬಿಂಬಿಸಬಲ್ಲ ರಾಯಭಾರಿಗಳೆಂದರೆ ಮೇಲೆ ತಿಳಿಸಿದ ಮಹಿಳೆಯಂತಹ ಫಲಾನುಭವಿಗಳೇ! ಸಾಧನೆಗಳನ್ನು ತೋರಿಸಲು ದೊಡ್ಡ ಫ್ಲೆಕ್ಸ್‌ಗಳ, ಟಿವಿ ಮತ್ತು ಪತ್ರಿಕೆಗಳಲ್ಲಿ ಜಾಹೀರಾತುಗಳ ಅಗತ್ಯವಿಲ್ಲ. ಅದಕ್ಕಾಗಿ ಖರ್ಚು ಮಾಡುವ ಕೋಟ್ಯಾಂತರ ರೂ.ಗಳನ್ನು ಜನೋಪಯೋಗಿ ಕಾರ್ಯಗಳಿಗೆ ಬಳಸಬಹುದು. ಸರ್ಕಾರಿ ಅಧಿಕಾರಿಗಳಲ್ಲಿ ಮತ್ತು ಶಾಸಕಾಂಗದವರಲ್ಲಿ ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸುವ ಮನೋಭಾವ ಬಂದಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತದೆ. ಆದರೆ, ಭ್ರಷ್ಠಾಚಾರ ಇದಕ್ಕೆ ದೊಡ್ಡ ಕಂಟಕವಾಗಿದೆ. ಜನರನ್ನು ಗೋಳಾಡಿಸಿದರೆ, ಕಷ್ಟಕ್ಕೀಡು ಮಾಡಿದರೆ, ಜನರಿಗೆ ಕೊಡಬೇಕಾದ ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸದಿದ್ದರೆ ಮೇಲಿನ ಆದಾಯ ಸಲೀಸಾಗಿ ಬರುತ್ತದೆ ಎಂಬ ಮನೋಭಾವ ಸ್ಪಂದನಶೀಲತೆಯನ್ನು ಮರಗಟ್ಟಿಸುತ್ತದೆ. 
     ಜನರ ಕುಂದುಕೊರತೆಗಳನ್ನು ಆಲಿಸಲು, ಸಮಸ್ಯೆಗಳನ್ನು ಪರಿಹರಿಸಲು ಆಗಾಗ್ಯೆ ಜನಸಂಪರ್ಕ ಸಭೆಗಳನ್ನು ಏರ್ಪಡಿಸುವ ಪರಿಪಾಠ ಒಳ್ಳೆಯದೇ. ಆದರೆ ಇವು ವರ್ಷದ ಕೆಲವು ಅವಧಿಯಲ್ಲಿ ನಡೆದು ನಿಂತುಹೋಗಿಬಿಡುತ್ತದೆ. ಮಂತ್ರಿಗಳೂ ಸಹ ಆಗಾಗ್ಯೆ ಜನರಿಂದ ಅಹವಾಲುಗಳನ್ನು ಸ್ವೀಕರಿಸುವ 'ಜನತಾ ಅದಾಲತ್'ಗಳೂ ನಡೆಯುವುದನ್ನು ಕಾಣುತ್ತಿರುತ್ತೇವೆ. ಸಮಸ್ಯೆ ಪರಿಹರಿಸುವಲ್ಲಿ ಇವು ಸ್ವಲ್ಪ ಮಟ್ಟಿಗೆ ನೆರವಾಗುತ್ತವೆ. ಪೂರ್ಣ ಯಶಸ್ವಿಯೆನಿಸಬೇಕೆಂದರೆ ಸ್ವೀಕೃತವಾದ ಎಲ್ಲಾ ಮನವಿಗಳೂ ತಾರ್ಕಿಕ ಅಂತ್ಯ ಕಾಣುವವರೆಗೆ ಅದನ್ನು ಸಮರ್ಥವಾಗಿ ಪರಿಶೀಲಿಸುವ ಕೆಲಸವಾಗಬೇಕು. ಸ್ಪಂದನಶೀಲ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರೆ ಇವು ಪ್ರಯೋಜನಕಾರಿ. ಆದರೆ ಇಂದಿನ ಭ್ರಷ್ಠ ವ್ಯವಸ್ಥೆಯಲ್ಲಿ ಸ್ಪಂದನಶೀಲ ಅಧಿಕಾರಿಗಳಿಗಿಂತ ತಾವು ಹೇಳಿದಂತೆ ಕೇಳುವ, ತಮ್ಮ ಹಿಂಬಾಲಕರಂತೆ ವರ್ತಿಸುವ ಅಧಿಕಾರಿಗಳನ್ನು ತಮ್ಮ ಕ್ಷೇತ್ರಗಳಲ್ಲಿ ನೇಮಕವಾಗುವಂತೆ ನೋಡಿಕೊಳ್ಳುವ ಜನಪ್ರತಿನಿಧಿಗಳೇ ಜಾಸ್ತಿ. ಹೀಗಾದಾಗ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗಿಂತ ರಾಜಕಾರಣಿಗಳ ಬಳಿಗೇ ಹೋಗುತ್ತಾರೆ. ಅವರ ಆಣತಿಯಂತೆ ಕೆಲಸ ಆಗುವುದೋ, ಬಿಡುವುದೋ ನಿರ್ಧರಿತವಾಗುತ್ತದೆ. ಇದು ನಿಜಕ್ಕೂ ಒಳ್ಳೆಯ ಸ್ಥಿತಿಯಲ್ಲ. ಆಳುವ ಪಕ್ಷದ ರಾಜಕಾರಣಿಗಳ ಮಾತು ಕೇಳದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುತ್ತದೆ. ರಾಜಕಾರಣಿಗಳು ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ಮಾಡುವ ಮೊದಲ ಕೆಲಸವೆಂದರೆ ತಮಗೆ ಬೇಕಾದ ಮತ್ತು ನಿಷ್ಠರಾದ ಅಧಿಕಾರಿಗಳು ಮತ್ತು ನೌಕರರು ತಮ್ಮ ಕ್ಷೇತ್ರದಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಇರುವಂತೆ ನೋಡಿಕೊಳ್ಳುವುದು. ಹೀಗಾದಾಗ ರಾಜಕಾರಣಿಗಳನ್ನು ತಾತ್ವಿಕವಾಗಿ ವಿರೋಧಿಸುವ ಜನರ ಕೆಲಸಗಳು ಆಗುವುದೇ ಇಲ್ಲ. ಈ ವ್ಯವಸ್ಥೆ ಸರಿಯಾದರೆ ಮಾತ್ರ ಬದಲಾವಣೆ  ನಿರೀಕ್ಷಿಸಲು ಸಾಧ್ಯ. ಚುನಾವಣೆಯಲ್ಲಿ ಆ ರಾಜಕಾರಣಿ ಸೋತು ಹೋದರೆ ಅಧಿಕಾರಿಗಳು, ನೌಕರರೂ ಸಹ ವರ್ಗಾವಣೆ ಭೀತಿ ಎದುರಿಸುತ್ತಾರೆ. ಇಂತಹ ಕೆಟ್ಟ ವ್ಯವಸ್ಥೆಯಿಂದಾಗಿ ನೌಕರಶಾಹಿ ಕೂಡಾ ಗೆದ್ದೆತ್ತಿನ ಬಾಲ ಹಿಡಿಯುವ, ಅಧಿಕಾರಾರೂಢರನ್ನು ಓಲೈಸುವ ಅಭ್ಯಾಸ ಬೆಳೆಸಿಕೊಂಡಿರುವುದನ್ನೂ ಕಾಣುತ್ತಿದ್ದೇವೆ. ನಿಯತ್ತಿನ ಮತ್ತು ದಕ್ಷ ಅಧಿಕಾರಿಗಳು ಮಾತ್ರ ಬಲಿಪಶುಗಳಾಗುತ್ತಾರೆ. ವರ್ಗಾವಣೆ ಮಾಡಲು ನೀತಿ-ನಿಯಮಾವಳಿಗಳಿದ್ದರೂ ಅವೆಲ್ಲವನ್ನೂ ಗಾಳಿಗೆ ತೂರಲಾಗುತ್ತದೆ. ನನ್ನ ಸೇವಾವದಿಯಲ್ಲಿ ೨೬ ವರ್ಗಾವಣೆಗಳನ್ನು ನಾನು ಕಾಣಬೇಕಾಯಿತು. ಅವುಗಳಲ್ಲಿ ರಾಜಕಾರಣಿಗಳ ಕೈವಾಡದ ವರ್ಗಾವಣೆಗಳದೇ ಸಿಂಹಪಾಲು. ಅವಧಿ ಪೂರ್ವ ವರ್ಗಾವಣೆಗಳ ನಿಯಂತ್ರಣ ಮಾಡುವ ಇಚ್ಛಾಶಕ್ತಿ ಆಳುವವರಿಗೆ ಬರಬೇಕು. ಆಳುವವರನ್ನು ನಿಯಂತ್ರಿಸುವ ಕೆಲಸ ಜಾಗೃತ ಜನರು ಮಾಡಬೇಕು. ಅಲ್ಲಿಯವರೆಗೆ ಇದನ್ನು ಸಹಿಸಿಕೊಳ್ಳಬೇಕು.
     ಒಂದು ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ತಮ್ಮ ಇಲಾಖೆಯಿಂದ ಮಾಡಿದ ಕೆಲಸಗಳು, ಸಾಧನೆಗಳನ್ನು ವಿವರಿಸುತ್ತಾ, ತಾವು ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದೇವೆಂದು ಹೆಮ್ಮೆಯಿಂದ ಹೇಳುತ್ತಿದ್ದರು. ಆಗ ಒಬ್ಬ ವಯಸ್ಸಾದ ಮಹಿಳೆ ಎದ್ದು ನಿಂತು ತನಗೂ ಮಾತನಾಡಲು ಅವಕಾಶ ಕೊಡಬೇಕೆಂದು ಕೋರಿದಳು. ಧ್ವನಿವರ್ಧಕದ ಮುಂದೆ ನಿಂತ ಆ ಮಹಿಳೆ ಹೇಳಿದ್ದಿಷ್ಟು: "ನೀವು ಜಂಬ ಪಡಬೇಕಿಲ್ಲ. ನೀವೆಲ್ಲರೂ ಸಮಾಜದಿಂದ ಉಪಕಾರ ಪಡೆದವರು. ಸಮಾಜದಿಂದ ನೀವು ಸಾಲ ಪಡೆದಿದ್ದೀರಿ. ಸಮಾಜದ ಸಹಾಯದಿಂದಲೇ ನೀವು ಈ ಹುದ್ದೆಗಳಲ್ಲಿದ್ದೀರಿ. ನೀವು ಈಗ ಮಾಡುತ್ತಿರುವುದು ನೀವು ಪಡೆದಿರುವ ಸಾಲದ ಬಡ್ಡಿ ಕಟ್ಟುತ್ತಿರುವುದು ಅಷ್ಟೆ. ಅಸಲು ತೀರಿಸುವುದು ಇನ್ನೂ ಬಾಕಿ ಇದೆ." ಎಷ್ಟು ನಿಜ! ಅಧಿಕಾರಿಗಳು, ಆಳುವವರು ಈ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. 
-ಕ.ವೆಂ.ನಾಗರಾಜ್.
***************
10.11.2014ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ:



    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ