ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಡಿಸೆಂಬರ್ 3, 2014

ವಾನಪ್ರಸ್ಥವೆಂದರೆ . . . 1


      'ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ' ಅನ್ನುವ ಮಾತನ್ನು ವಯಸ್ಸಾದವರು ಹೇಳುವುದನ್ನು ಕೇಳುತ್ತಿರುತ್ತೇವೆ. ಆದರೆ ಹೋಗು ಎಂದರೂ ಹೋಗಲೊಲ್ಲದವರೇ ಹೆಚ್ಚು. ಅಷ್ಟಕ್ಕೂ ಒಂದು ವೇಳೆ ಹೋಗಬೇಕೆಂದರೂ ಈಗ ಕಾಡಾದರೂ ಎಲ್ಲಿದೆ? ಇರುವ ಕಾಡುಗಳನ್ನೆಲ್ಲಾ ಮನುಷ್ಯನೇ ಆಕ್ರಮಿಸಿಕೊಂಡು ಕಾಡಿನ ಪ್ರಾಣಿಗಳಿಗೇ ಇರಲು ಜಾಗವಿಲ್ಲದಾಗಿದೆ. ವಿಧಿಯಿಲ್ಲದೆ ನಾಡಿಗೆ ಬರುತ್ತಿರುವ ಆ ಕಾಡುಪ್ರಾಣಿಗಳೂ ಈಗ ನಾಶದ ಅಂಚಿಗೆ ಬರುತ್ತಿವೆ. ಏಕೋ ಏನೋ ಇತ್ತೀಚೆಗೆ ನನ್ನ ಮನಸ್ಸು ವಾನಪ್ರಸ್ಥದ ಕುರಿತು ತಲೆ ಕೆಡಿಸಿಕೊಂಡಿದೆ. ಪ್ರಾಯಶಃ ವಯೋಸಹಜವಿರಬಹುದು. ನನ್ನ 6 ವರ್ಷದ ಮೊಮ್ಮಗಳೊಡನೆ ಆಟವಾಡುತ್ತಾ ನನ್ನಷ್ಟಕ್ಕೆ ನಾನೇ ಸ್ವಗತವೆಂಬಂತೆ ಮಾತನಾಡಿಕೊಳ್ಳುತ್ತಾ, 'ನನಗೆ ಸಾಕಾಗಿದೆ ಕಣಮ್ಮಾ, ವಾನಪ್ರಸ್ಥಕ್ಕೆ ಹೋಗಿಬಿಡ್ತೀನಿ' ಅಂದಿದ್ದೆ. ಪಾಪ, ಅವಳಿಗೆ ವಾನಪ್ರಸ್ಥ ಅಂದರೆ ಏನು ಅರ್ಥವಾದೀತು? ಅವಳು ಆಟ ಆಡುವುದನ್ನು ನಿಲ್ಲಿಸಿ, "ತಾತಾ, ಪ್ಲೀಸ್, ವಾನಾಸ್ಪತ್ರೆಗೆ ಹೋಗಬೇಡ, ಪ್ಲೀಸ್, ಪ್ಲೀಸ್" ಎಂದು ಗೋಗರೆದಿದ್ದಳು. ವಾನಪ್ರಸ್ಥ ಅವಳ ಬಾಯಲ್ಲಿ ವಾನಾಸ್ಪತ್ರೆ ಆಗಿತ್ತು. 'ಹೂಂ, ಆಯಿತು, ಹೋಗಲ್ಲ' ಅಂದ ಮೇಲೆಯೇ ನಮ್ಮ ಆಟ ಮುಂದುವರೆದಿದ್ದು.   ವಾನಪ್ರಸ್ಥ(ವನಪ್ರಸ್ಥ)ವೆಂದರೆ ಕಾಡಿನೆಡೆಗೆ ತೆರಳುವುದು ಎಂಬ ಅರ್ಥವೂ ಇದೆ. ಕಾಡುಗಳು ನಾಶವಾಗಿರುವ, ಆಗುತ್ತಿರುವ ಇಂದಿನ ದಿನಗಳಲ್ಲಿ ಇದು ಅರ್ಥ ಕಳೆದುಕೊಂಡಿದೆ. ಮಾನವಸಹಜ ಆಸೆ, ಆಕಾಂಕ್ಷೆಗಳಿಗೆ ಕಡಿವಾಣ ಹಾಕಿಕೊಂಡು ಪ್ರಾಪಂಚಿಕತೆಯಿಂದ ಕ್ರಮೇಣ ದೂರ ಸರಿಯುವ, ಲೋಕಹಿತ ಬಯಸುವ ಎಡೆಗೆ ಕಾಲಿಡುವುದು ವಾನಪ್ರಸ್ಥದ ಆರಂಭಿಕ ನಡೆರಬಹುದು. ಗೃಹಸ್ಥರಿಗೆ ಈ ಕಾಲ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಿದ ನಂತರ ಬರುತ್ತದೆ. ಚತುರಾಶ್ರಮಗಳಲ್ಲಿ ಎರಡನೆಯದಾದ ಬ್ರಹ್ಮಚರ್ಯದ ನಂತರವೂ ನೇರವಾಗಿ ಈ ಆಶ್ರಮಕ್ಕೆ ಸಾಗಬಹುದಾಗಿದೆ, ಸಾಗಿದವರಿದ್ದಾರೆ. 
     ಮಾನವನ ಆಯಸ್ಸನ್ನು ಒಂದು ನೂರು ವರ್ಷಗಳು ಎಂದಿಟ್ಟುಕೊಂಡರೆ ಮೊದಲ 25 ವರ್ಷಗಳು ಬ್ರಹ್ಮಚರ್ಯ, ನಂತರದ 25 ವರ್ಷಗಳನ್ನು ಗೃಹಸ್ಥರಾಗಿ ಕಳೆದು, ನಂತರದ 51 ರಿಂದ 75 ವರ್ಷಗಳು ವಾನಪ್ರಸ್ಥದ ಕಾಲ. ಅದರ ನಂತರ ಸಂನ್ಯಾಸಾಶ್ರಮ. ಇರುವ ಬಂಧಗಳು, ಬಂಧನಗಳನ್ನು ಕಳೆದುಕೊಂಡು ಜೀವಿಸಲು ಅತಿ ಅಗತ್ಯವಾದಷ್ಟನ್ನು ಮಾತ್ರ ಹೊಂದಿ ಆಧ್ಯಾತ್ಮಿಕ ಸಾಧನೆಗೆ ತೊಡಗುವ ಕಾಲವೇ ವಾನಪ್ರಸ್ಥವೆನಿಸುವುದು. ಇದು ಪರಿವರ್ತನಾ ಕಾಲ. 
     ಗೃಹಸ್ಥನಿಗೆ ವಯಸ್ಸಾದ ನಂತರ ಅವನ ಚರ್ಮ ಸುಕ್ಕುಗಟ್ಟುತ್ತದೆ, ತಲೆಯ ಕೂದಲು ಬೆಳ್ಳಗಾಗುತ್ತದೆ ಅಥವ ಉದುರಿ ಬೋಳಾಗುತ್ತದೆ. ಮೊಮ್ಮಕ್ಕಳು ಜನಿಸಿರುತ್ತಾರೆ. ಆಗ ವಾನಪ್ರಸ್ಥಕ್ಕೆ ತೆರಳಲು ಸಮಯ ಪ್ರಶಸ್ತವಾಗಿರುತ್ತದೆ. ಕೌಟುಂಬಿಕ ಬಂಧನಗಳನ್ನು ಕಳಚಿಕೊಂಡು ಈ ಹಾದಿಯಲ್ಲಿ ಕ್ರಮಿಸುವ ಸಮಯದಲ್ಲಿ ಪತ್ನಿ ಬಯಸಿದರೆ ಅವನ ಜೊತೆಗೆ ಹೋಗಬಹುದು, ಆದರೆ ಸಹಚಾರಿಣಿಯಾಗಿ ಮತ್ತು ಸಹಸಾಧಕಿಯಾಗಿ ಮಾತ್ರ. ಹಾಗೆ ಹೊರಡುವಾಗ ಮನಸ್ಸು ಶಾಂತವಿರಬೇಕು. ಅತಿ ಕಡಿಮೆ ವಸ್ತ್ರಗಳನ್ನು ಧರಿಸುವುದು, ಕಾಡಿನಲ್ಲಿ ದೊರೆಯುವ ಸೊಪ್ಪು-ಸದೆಗಳು, ಗೆಡ್ಡೆ-ಗೆಣಸುಗಳನ್ನು  ಜೀವಾಧಾರಕ್ಕೆ ಸೇವಿಸುವುದು, ದೈಹಿಕ ಕಾಮನೆಗಳಿಂದ ದೂರವಿರುವುದು ಹಿಂದೆ ವಾನಪ್ರಸ್ಥಿಗಳು ಅನುಸರಿಸುತ್ತಿದ್ದ ಕ್ರಮವೆಂದು ಕೇಳಿದ್ದೇವೆ. ಪುಣ್ಯಕ್ಷೇತ್ರಗಳಿಗೆ ಪ್ರವಾಸವನ್ನೂ ಸಹ ಸಾಧನೆಯ ಅಂಗವಾಗಿ ಮಾಡುತ್ತಾರೆಂದು ಹೇಳುತ್ತಾರೆ. ಈಗಲೂ ಹಿಮಾಲಯದ ತಪ್ಪಲಿನಲ್ಲಿ ಇಂತಹವರು ಸಿಗಬಹುದು. ಆತ್ಮಾನುಸಂಧಾನ, ಆತ್ಮಚಿಂತನೆಗಳನ್ನು ನಡೆಸುತ್ತಾ ಕೊನೆಗೊಮ್ಮೆ ಅವರು ಸಂನ್ಯಾಸಿಯ ಅರ್ಹತೆ ಪಡೆಯುವರು. 
     ವಾನಪ್ರಸ್ಥಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಕೆಲವು ನಿಬಂಧನೆಗಳೂ ಇವೆಯೆನ್ನುತ್ತಾರೆ. ಭೂಮಿಯನ್ನು ಉತ್ತಿ. ಬಿತ್ತಿ ಬೆಳೆದ ಧಾನ್ಯಗಳು, ಪೂರ್ಣ ಕಳಿಯದ ಹಣ್ಣುಗಳು ಮತ್ತು ಬೇಯಿಸಿದ ಪದಾರ್ಥಗಳನ್ನು ಅವರು ಸೇವಿಸಬಾರದೆನ್ನುತ್ತಾರೆ. ತಿನ್ನುವ ಪದಾರ್ಥಗಳನ್ನು ಸಂಗ್ರಹಿಸಿಡಬಾರದು. ಸಮಯ, ಸ್ಥಳ ಮತ್ತು ತನ್ನ ಶಕ್ತಿ ಅನುಸರಿಸಿ ಜೀವಾಧಾರಕ್ಕೆ ಅವಶ್ಯಕ ಸಂಗತಿಗಳನ್ನು ಮಾತ್ರ ಪಡೆಯಬೇಕು. ಯಾವ ಕಾರಣಕ್ಕೂ ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಳ್ಳಬಾರದು. ಬಿಸಿಲಿನಲ್ಲಿ ಪೂರ್ಣವಾಗಿ ಮಾಗಿದ ಫಲಗಳನ್ನು ಮಾತ್ರ ಸೇವಿಸಬೇಕು. ಒಂದು ಗುಡಿಸಲು ನಿರ್ಮಿಸಿಕೊಂಡು ಅಲ್ಲಿ ಅಥವ ಬೆಟ್ಟದ ಗುಹೆಯಲ್ಲಿ ವಾಸವಿದ್ದು ಪವಿತ್ರಾಗ್ನಿಯನ್ನು ರಕ್ಷಿಸಬೇಕು. ಗಾಳಿ, ಬೆಂಕಿ, ಮಳೆ, ಬಿಸಿಲು, ಹಿಮ, ಇತ್ಯಾದಿಗಳನ್ನು ಸಹಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸುಡುಬೇಸಿಗೆಯಲ್ಲಿ ಸುತ್ತಲೂ ಬೆಂಕಿ ಉರಿಸಿ ಮಧ್ಯದಲ್ಲಿ ಕುಳಿತು ಧ್ಯಾನ(ತಪಸ್ಸು) ಮಾಡಬೇಕು. ಮಳೆಗಾಲದಲ್ಲಿ ಸುರಿಯುವ ಮಳೆಯಲ್ಲಿ ಅದರ ಆರ್ಭಟವನ್ನು ಸಹಿಸಿ ಹೊರಗೆ ಇದ್ದು, ಚಳಿಗಾಲದಲ್ಲಿ ಕೊರೆಯುವ ಹೆಪ್ಪುಗಟ್ಟಿದ ನೀರಿನಲ್ಲಿ ಕತ್ತಿನವರೆಗೆ ನೀರಿನಲ್ಲಿ ಮುಳುಗಿದ್ದು ಧ್ಯಾನಸ್ಥರಾಗಬೇಕು. ಕೂದಲು, ಮೀಸೆ, ಉಗುರುಗಳನ್ನು ಕತ್ತರಿಸಬಾರದು, ಜಟೆಗಟ್ಟಿದ ಕೂದಲನ್ನು ತಲೆಯ ಮೇಲೆ ಎತ್ತಿಕಟ್ಟಬೇಕು. ಅಕಾಲಿಕವಾಗಿ ಮಲ, ಮೂತ್ರ ವಿಸರ್ಜಿಸಬಾರದು. ಮಲಿನವಾದ ಶರೀರದ ಶುದ್ಧತೆ ಬಗ್ಗೆ ಚಿಂತಿಸಬಾರದು. ದಿನಕ್ಕೆ 3 ಸಲ ಸ್ನಾನ ಮಾಡುವುದರಿಂದ ತೃಪ್ತನಾಗಬೇಕು. ನೆಲದ ಮೇಲೆ ಮಲಗಬೇಕು. ಒಂದು ಕುಡಿಯುವ ನೀರಿನ ಮಡಿಕೆ ಮತ್ತು ಒಂದು ದಂಡ ಹಿಡಿದಿರಬೇಕು. ವಾನಪ್ರಸ್ಥಿ 12 ವರ್ಷಗಳು ಅಥವ 8 ವರ್ಷಗಳು ಅಥವ 4 ವರ್ಷಗಳು ಅಥವ 2 ವರ್ಷಗಳು ಅಥವ ಕನಿಷ್ಠ 1 ವರ್ಷವಾದರೂ ಕಾಡಿನಲ್ಲಿ ವಾಸಿಸಬೇಕೆನ್ನುತ್ತಾರೆ. ಅತಿ ಸರಳವಾಗಿ ತೋರಿದರೂ ಕಠಿಣವಾದ ನಿಯಮಗಳಿಂದ ವಿಚಲಿತನಾಗಬಾರದು. ಸಾಮಯಿಕವಾಗಿ ಅಕ್ಕಿ ಅಥವ ಕಾಡಿನಲ್ಲಿ ದೊರೆತ ಧಾನ್ಯಗಳನ್ನು ಅರ್ಪಿಸಿ ಹೋಮ, ಹವನ, ಅಗ್ನಿಹೋತ್ರ ಮಾಡಬೇಕು. ಯಾವ ಕಾರಣಕ್ಕೂ ಪ್ರಾಣಿಬಲಿ ಕೊಡಬಾರದು.  
     ವಯಾಧಿಕ್ಯದಿಂದ ಅಥವ ಕಾಯಿಲೆಗಳಿಂದ ಅನುಷ್ಠಾನ ಕಷ್ಟವೆನಿಸಿದಾಗ ಆಹಾರ ಸೇವಿಸದೆ ಉಪವಾಸವಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಂತಹ ಸಂದರ್ಭದಲ್ಲಿ ನಡುಗುವ ಶರೀರದ ಕಾರಣದಿಂದ ಅನುಷ್ಠಾನ ಮಾಡಲಾಗದವರು, ಶರೀರಧಾರಣೆ ಕಷ್ಟವಾದಾಗ ಅಗ್ನಿಯನ್ನು ಧ್ಯಾನದ ಮೂಲಕ ಹೃದಯಸ್ಥ ಮಾಡಿಕೊಂಡು ಅದರೊಳಗೆ ಪ್ರವೇಶಿಸಿ ಶರೀರ ತ್ಯಾಗ ಮಾಡುವರು. ಕೆಲವು ಸಂತ ವಾನಪ್ರಸ್ಥಿಗಳು ಕಠಿಣ ವ್ರತಗಳನ್ನು ಆಚರಿಸುತ್ತಾ ಸೊರಗಿ ಕೇವಲ ಚರ್ಮ ಮತ್ತು ಮೂಳೆಗಳ ಹಂದರದಂತೆ ತೋರುತ್ತಾರೆ. ಇಂತಹ ಕಠಿಣ ಮತ್ತು ದೀರ್ಘವಾದ ಸಾಧನೆ ಮಾಡಿ ಮೋಕ್ಷಕ್ಕೆ ಹಂಬಲಿಸುವ ಬದಲು, ಪ್ರಾಪಂಚಿಕ ಸಂಗತಿಗಳನ್ನು ಪಡೆಯಲು ಹಂಬಲಿಸುವವರು ದೊಡ್ಡ ಮೂರ್ಖರೇ ಸರಿ. ಅಸುರರು ದೀರ್ಘ ತಪಸ್ಸು ಮಾಡಿ ಪಡೆದರೆಂದು ಹೇಳಲಾಗುವ ಅಸುರೀ ಸಾಧನೆಗಳನ್ನು ಈ ಸಾಲಿಗೆ ಸೇರಿಸಬಹುದು. ತಾನು ಯಾವುದಕ್ಕಾಗಿ ಸಾಧನೆ ಮಾಡುತ್ತಿದ್ದಾನೋ ಅದರ ಫಲವನ್ನೂ ಬಯಸದ ಸ್ಥಿತಿ ತಲುಪಿದಾಗ, ಅಂದರೆ ಮನಸ್ಸಿನ ಹಿಡಿತದಿಂದ ಪೂರ್ಣವಾಗಿ ಹೊರಬಂದಾಗ ಸಂನ್ಯಾಸಾಶ್ರಮಕ್ಕೆ ಕಾಲಿಡಬಹುದಾಗಿದೆ. ವಾನಪ್ರಸ್ಥಿ ತನ್ನತನದ ಹಿರಿಮೆಯಿಂದ ಹೊರಬಂದು ವಿನೀತಭಾವ ಹೊಂದಲು ಇತರರ ಕರುಣೆಯಿಂದ, ದೀನ ರೀತಿಯಲ್ಲಿ ಪಡೆದ ಧಾನ್ಯದಿಂದ ಜೀವಿಸುತ್ತಾನೆ. ವಾನಪ್ರಸ್ಥದ ಕುರಿತ ಈ ಕೆಲವು ವಿವರಗಳನ್ನು ಶ್ರೀಮದ್ಭಾಗವತದಲ್ಲಿ ಇರುವ ಅಂಶಗಳನ್ನು ಆಧರಿಸಿ ಬರೆದಿರುವೆ.
     ವೇದದ ನಾಲ್ಕು ಅಂಗಗಳಾದ ಬ್ರಾಹ್ಮಣ, ಸಂಹಿತಾ, ಅರಣ್ಯಕ ಮತ್ತು ಉಪನಿಷತ್ತುಗಳಲ್ಲಿ ಅರಣ್ಯಕವು ವಾನಪ್ರಸ್ಥಕ್ಕೆ ಸಂಬಂಧಿಸಿದೆ. ವಾನಪ್ರಸ್ಥ ಮತ್ತು ಸಂನ್ಯಾಸಗಳು ಎರಡೂ ವೈರಾಗ್ಯ ಪ್ರಾಧಾನ್ಯ ಆಶ್ರಮಗಳು. ವಾನಪ್ರಸ್ಥಿ ಸಮಾಜದ ಸೇವೆ ಮಾಡುತ್ತಾ ಮುಕ್ತಿ ಹೊಂದುವ ಸಿದ್ಧತೆ ಮಾಡಿಕೊಳ್ಳಬೇಕು. ಧರ್ಮ, ಅರ್ಥ, ಕಾಮ, ಮೋಕ್ಷಗಳು ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸಗಳಲ್ಲಿ ಹಾಸುಹೊಕ್ಕಾಗಿವೆ. ಸಂನ್ಯಾಸಿಯು ಬ್ರಹ್ಮಚಾರಿ, ಗೃಹಸ್ಥ ಅಥವ ವಾನಪ್ರಸ್ಥಿಯಿಂದ ಹೊರತಾದವನಲ್ಲ/ ಬೇರ್ಪಟ್ಟವನಲ್ಲ. ಬ್ರಹ್ಮಚರ್ಯವು ಬೀಜರೂಪವಾಗಿದ್ದು ಗೃಹಸ್ಥಾಶ್ರಮದ ವಾಸ್ತವಿಕ ಅನುಭವವಾಗಿ ಬೆಳೆಯುತ್ತದೆ ಮತ್ತು ಅದು ವಾನಪ್ರಸ್ಥದ ವೈರಾಗ್ಯವಾಗಿ ಮುಂದುವರೆಯುತ್ತದೆ. ಹಾಗೂ, ಅದು ಮುಂದುವರೆದು ಸಂನ್ಯಾಸದ ಸಾರವಾಗಿ ಫಲಿತಗೊಳ್ಳುತ್ತದೆ.
     ಸನಾತನ ಧರ್ಮದ ಮಹತ್ವ ಅರಿವಾಗುವುದು ಈ ಆಶ್ರಮಗಳ ಸರಿಯಾದ ಅನುಷ್ಠಾನದಿಂದ. ಬ್ರಹ್ಮಚರ್ಯದಲ್ಲಿ ಒಬ್ಬ ಬಾಲಕ/ಬಾಲಿಕೆ ಗುರುಕುಲಕ್ಕೆ ಸೇರಿ ತನಗೆ ಬೇಕೆನಿಸಿದ ಜ್ಞಾನದ ಅರಿವನ್ನು ತಾನು ಯಾವ ಸಮಾಜಕ್ಕೆ ಸೇರಿದ್ದಾನೋ ಆ ಸಮಾಜದ ಹಿತವನ್ನು ಗಮನದಲ್ಲಿರಿಸಿ ಪಡೆಯುತ್ತಾನೆ/ಳೆ. ಈ ಹಂತದಲ್ಲಿ ಪಡೆಯುವ ಜ್ಞಾನ ಮುಂದಿನ ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸಾಶ್ರಮಗಳಿಗೆ ತಳಹದಿಯಂತಿರುತ್ತದೆ. ವಾನಪ್ರಸ್ತವು ಪ್ರಾಪಂಚಿಕ ಆಕರ್ಷಣೆಗಳಿಂದ ದೂರವಿರಲು ಮಾಡುವ ಸಾಧನೆಯ ಅವಧಿಯೆನ್ನಬಹುದು. ಇದು ಸಾಮಾನ್ಯವಾದ ಸಾಧನೆಯಲ್ಲ. ಸಾಧಕರುಗಳಿಗೆ, ಸಂಸ್ಕಾರವಂತರಿಗೆ, ಮನೋನಿಗ್ರಹ ಶಕ್ತಿಯುಳ್ಳವರಿಗೆ ಮಾತ್ರ ಇದು ಸಾಧ್ಯ.
-ಕ.ವೆಂ.ನಾಗರಾಜ್.
**************
22.10.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ