ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಡಿಸೆಂಬರ್ 10, 2014

ರಾಕ್ಷಸ ಸಂಹಾರ


     ರಾಕ್ಷಸ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ದೈತ್ಯಾಕಾರದ ದೇಹ, ಭೀಭತ್ಸ ರೂಪದ, ಡೊಳ್ಳು ಹೊಟ್ಟೆಯ, ಹೊರಚಾಚಿರುವ ಕೋರೆ ಹಲ್ಲುಗಳ, ತಲೆಯ ಮೇಲೆ ಕೊಂಬುಗಳಿರುವ, ಅಪಾಯಕಾರಿ ಆಯುಧಗಳನ್ನು ಹಿಡಿದುಕೊಂಡಿರುವ, ಮಾಯಾವಿಗಳಾಗಿ ತಮಗೆ ಬೇಕಾದ ರೂಪ ಧರಿಸುವ ಶಕ್ತಿ ಇರುವ, ರಕ್ತಪಿಪಾಸುಗಳಂತಿರುವ ಜೀವಿ ಎಂಬಂತೆ. ಪುರಾಣಗಳಲ್ಲಿ, ಜಾನಪದ ಕಥೆಗಳಲ್ಲಿ ಬರುವ ರಾಕ್ಷಸರ ಚಿತ್ರಣವೂ ಹೀಗೆಯೇ ಇರುತ್ತದೆ. ಆದರೆ ರಾಕ್ಷಸರು ನಿಜವಾಗಿಯೂ ಹೀಗಿರುತ್ತಾರೆಯೇ? ಅವರು ಹೇಗಾದರೂ ಇರಲಿ, ರಾಕ್ಷಸರು ಎಂದಾಕ್ಷಣ ಅವರು ಕೆಟ್ಟವರು ಎಂಬ ಭಾವವಂತೂ ಮೂಡಿಬಿಡುತ್ತದೆ. ಮೊದಲೇ ಹೇಳಿದಂತೆ ಪುರಾಣಗಳಲ್ಲಿ, ಜಾನಪದ ಕಥೆಗಳಲ್ಲಿ ಅವರನ್ನು ಚಿತ್ರಿಸಿರುವುದೂ ಹೀಗೆಯೇ. ಅವರು ಜನರಿಗೆ ಹಲವು ರೀತಿಗಳಲ್ಲಿ ತೊಂದರೆ ಕೊಡುವುದು, ಕಥಾನಾಯಕ/ನಾಯಕಿ ಪ್ರಯಾಸಪಟ್ಟು ಅವರನ್ನು ಸಂಹರಿಸುತ್ತಾರೆ, ಸುಖಾಂತ್ಯವಾಗಿ ಕಥೆ ಮುಗಿಯುತ್ತದೆ. ಇಂತಹ ರೂಪದ ರಾಕ್ಷಸರನ್ನು ನಾವು ಯಾರಾದರೂ ಕಂಡಿದ್ದೇವೆಯೇ? ಇಲ್ಲವೆಂದಾದಲ್ಲಿ ರಾಕ್ಷಸರು ಹಿಂದಿನ ಕಾಲದಲ್ಲಿ ಮಾತ್ರ ಇದ್ದರೇ? ಈಗ ರಾಕ್ಷಸರಿಲ್ಲವೇ? 
     ರಕ್ಷಃ ಅಥವ ರಕ್ಷಸ್ ಅಂದರೆ ಶತ್ರುಗಳು, ದುರ್ಭಾವನೆ, ದುರ್ವಿಚಾರ ಎಂದರ್ಥ. ಯಾರು ರಕ್ಷಸ್ಸುಗಳನ್ನು, ಅಂದರೆ ದುರ್ಭಾವನೆ ಹೊಂದಿರುತ್ತಾರೋ, ದುರ್ವಿಚಾರಗಳನ್ನು ಹೊಂದಿರುತ್ತಾರೋ, ಯಾರು ದುಷ್ಕಾರ್ಯಗಳನ್ನು ಮಾಡುತ್ತಾರೋ ಅವರು ರಾಕ್ಷಸರು, ಅಷ್ಟೆ. ರಾಕ್ಷಸತ್ವಕ್ಕೆ ಯಾವುದೇ ಜಾತಿಯ ಕಟ್ಟಿಲ್ಲ. ರಾಕ್ಷಸ ಎಂದು ಕರೆಯಲ್ಪಡುವ ರಾವಣ, ಕುಂಭಕರ್ಣ, ಶೂರ್ಪಣಖಿ ಇವರುಗಳ ತಂದೆ ವಿಶ್ರವಸು ಎಂಬ ಒಬ್ಬ ಮುನಿ, ವಿಪ್ರಕುಲಕ್ಕೆ ಸೇರಿದವನು. ಅವರುಗಳು ರಾಕ್ಷಸರೆನಿಸಲು ಪ್ರಮುಖ ಕಾರಣ ಅವರ ದುರ್ವಿಚಾರ, ದುರ್ಭಾವನೆ ಮತ್ತು ದುಷ್ಕಾರ್ಯಗಳು. ರಾಕ್ಷಸನೂ ಒಬ್ಬ ಮಾನವ ಜೀವಿಯೇ ಹೊರತು ಬೇರೆ ಪ್ರಕಾರದ ಜೀವಿಯಲ್ಲ. ಹೀಗಿರುವಾಗ ಒಬ್ಬ ಮಾನವ ರಾಕ್ಷಸನಾಗುವುದು ಅಥವ ಆದರ್ಶ ಮಾನವನಾಗುವುದು ಆತನ ನಡವಳಿಕೆಯಿಂದ ಎಂಬ ಪ್ರಾಥಮಿಕ ಸಂಗತಿಯನ್ನು ಗಮನದಲ್ಲಿಡಬೇಕು. 
     ಮಾನವ ರಾಕ್ಷಸನೆನಿಸಲು ಕಾರಣವಾದ ರಕ್ಷಸ್ಸುಗಳಾದರೂ ಯಾವುವು? ಈ ವೇದಮಂತ್ರವನ್ನು ನೋಡೋಣ:
ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಮುತ ಕೋಕಯಾತುಮ್ |
ಸುಪರ್ಣಯಾತುಮುತ ಗೃಧ್ರಯಾತುಂ ದೃಷದೇವ ಪ್ರ ಮೃಣ ರಕ್ಷ ಇಂದ್ರ || (ಋಕ್.೭.೧೦೪.೨೨)
     ಒಡೆಯನೇ, ರಕ್ಷಸ್ಸನ್ನು ತೊಡೆದುಹಾಕು. ಇಲ್ಲಿ ಇಂದ್ರ ಅಂದರೆ ಜೀವಾತ್ಮ ಎಂಬ ಅರ್ಥವನ್ನು ತೆಗೆದುಕೊಳ್ಳಬೇಕು. ನಮ್ಮ ಶರೀರ, ಇಂದ್ರಿಯಗಳಿಗೆ ಒಡೆಯನಾದ ಇಂದ್ರ ಜೀವಾತ್ಮನೇ ಹೊರತು ಬೇರೆ ಅಲ್ಲ. ಯಾವ ರಕ್ಷಸ್ಸುಗಳನ್ನು ತೊಡೆದುಹಾಕಬೇಕು? ಮೋಹದ ಪ್ರತೀಕವಾದ ಗೂಗೆಯ (ಉಲೂಕ) ನಡೆಯನ್ನು, ಕೋಪದ ಪ್ರತೀಕವಾದ ತೋಳದ (ಶುಶುಲೂಕ) ರೀತಿಯನ್ನು, ಮತ್ಸರರೂಪಿ ನಾಯಿಯ ನಡೆಯನ್ನು (ನಾಯಿಯನ್ನು ನಂಬಿಕೆಯ ಪ್ರತೀಕವಾಗಿ ಬಳಸುವುದನ್ನೂ ಕಾಣುತ್ತೇವೆ. ಅದರೆ ಅದು ತನ್ನದೇ ಜಾತಿಯ ಇನ್ನೊಂದು ನಾಯಿಯನ್ನು ಸಹಿಸುವುದೇ ಇಲ್ಲ, ಅದರ ಉತ್ಕರ್ಷವನ್ನು ಕಂಡು ಅಸಹನೆಯಿಂದ ಕುದಿಯುತ್ತದೆ), ಕಾಮದ ಸಂಕೇತವಾದ ಜಕ್ಕವಕ್ಕಿಯ ನಡೆಯನ್ನು, ಮದಕ್ಕೆ ಹೆಸರಾದ ಗರುಡನ ರೀತಿಯನ್ನು ಮತ್ತು ಲೋಭದ ಪ್ರತಿರೂಪವೆನಿಸಿದ ಹದ್ದಿನ ನಡೆಯನ್ನು ನಿಗ್ರಹಿಸು ಎಂಬ ಈ ಮಂತ್ರದ ಕರೆ ಅದೆಷ್ಟು ಅರ್ಥಗರ್ಭಿತ! ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹಗಳೇ ರಕ್ಷಸ್ಸುಗಳಾಗಿ ಕಾಡುತ್ತವೆ. ಅದಕ್ಕೆ ಬಲಿಯಾಗಿ ಕುಕೃತ್ಯಗಳನ್ನು ಎಸಗುವವರೇ ರಾಕ್ಷಸರು.
     ಧೃತರಾಷ್ಟ್ರನ ಪುತ್ರಮೋಹ ಅವನ ನೂರು ಮಕ್ಕಳನ್ನೂ ಅವನು ಬದುಕಿದ್ದಾಗಲೇ ಬಲಿ ತೆಗೆದುಕೊಂಡಿತು. ದೃಷ್ಟಿಹೀನನಾಗಿದ್ದ ಅವನು ದುರ್ಯೋಧನನ ಮೇಲಿನ ಅತಿಯಾದ ಮೋಹದಿಂದ ನ್ಯಾಯ, ನೀತಿ, ಧರ್ಮಗಳ ವಿಷಯದಲ್ಲೂ ಸಹ ಕುರುಡನಾಗಿಬಿಟ್ಟಿದ್ದ. ಮತಾಂಧರಾದವರು ಸಹಮಾನವರನ್ನೇ ಕಿಂಚಿತ್ತೂ ಕರುಣೆಯಿಲ್ಲದೆ ಹಿಂಸಾತ್ಮಕವಾಗಿ ಬಲಿ ತೆಗೆದುಕೊಳ್ಳುತ್ತಿರುವುದನ್ನೂ ಕಾಣುತ್ತಿದ್ದೇವೆ. ದೇವರು ತನ್ನದೇ ಸೃಷ್ಟಿಯಾದ ಜೀವಿಗಳ ಬಲಿಯನ್ನೇ ಕೇಳುತ್ತಾನೆಯೇ ಎಂಬ ತೃಣಮಾತ್ರದ ವಿವೇಕ ಆ ಮತಾಂಧರಲ್ಲಿ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಅಜ್ಞಾನದ ಪರಮಾವಧಿಯೆನ್ನಬಹುದಾದ ಈ ಮೋಹ ಮಾನವನನ್ನು ದಾನವನನ್ನಾಗಿ ಮಾಡುತ್ತದೆ. ತಾನು ನಂಬಿರುವುದೇ ಸತ್ಯ, ತಾನು ಮಾಡಿದ್ದೇ ಸರಿ ಎನ್ನುವ ಈ ಮೋಹ ಜಗತ್ತಿನ ಎಲ್ಲಾ ವಿಪತ್ತುಗಳ ಮೂಲ. ಸಾಮಾಜಿಕ ಕ್ಷೇತ್ರ ಒಂದೇ ಅಲ್ಲ, ವೈಯಕ್ತಿಕ ಜೀವನದಲ್ಲೂ ಮೋಹಾಸುರನ ಉಪಟಳ ಅಷ್ಟಲ್ಲ.
     ಕೋಪದ ತಾಪವನ್ನು ತಿಳಿಯದವರು ಯಾರು? ಕೋಪದಿಂದಾಗಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ವಿವೇಚಿಸುವ ಶಕ್ತಿಯನ್ನು ಹೊಸಕಿಹಾಕಿ ಪಶುವಿನಂತೆ ವರ್ತಿಸುವ ವ್ಯಕ್ತಿಗೆ ಸ್ನೇಹಿತ-ವೈರಿ, ತನ್ನವರು-ಬೇರೆಯವರು, ಸೋದರರು-ಸೋದರಿಯರು, ಹಿರಿಯರು-ಕಿರಿಯರು ಮುಂತಾದ ಯಾವ ವ್ಯತ್ಯಾಸವೂ ಗೊತ್ತಾಗದು. ಗೊತ್ತಾಗುವಷ್ಟರಲ್ಲೇ ಅನಾಹುತ ಜರುಗಿಬಿಟ್ಟಿರುತ್ತದೆ. ಸಭ್ಯತೆ, ಸಂಸ್ಕೃತಿ, ಸ್ಥಾನ-ಮಾನಗಳ ಪರಿವೆಯೂ ಕ್ರೋಧಾಸುರನಿಗೆ ಇರುವುದೇ ಇಲ್ಲ. ಭಗವದ್ಗೀತೆಯಲ್ಲಿ ಹೇಳಿರುವಂತೆ, ಕ್ರೋಧದಿಂದ ಸಮ್ಮೋಹ, ಸಮ್ಮೋಹದಿಂದ ಸ್ಮೃತಿನಾಶ, ಸ್ಮೃತಿನಾಶದಿಂದ ಬುದ್ದಿ ನಷ್ಟ, ಬುದ್ಧಿನಾಶದಿಂದ ಸರ್ವಪತನವಾಗುತ್ತದೆ. ಕೋಪದ ಉಪಉತ್ಪತ್ತಿಯಾದ ದ್ವೇಷದಿಂದ ಬಿಡುವ ಬಾಣ ಎಲ್ಲಾ ಕಡೆಯೂ ಸುತ್ತಿ ಕೊನೆಗೆ ಮರಳಿ ಬಿಟ್ಟವರನ್ನೇ ಹೆಚ್ಚು ವೇಗದಿಂದ ತಲುಪುತ್ತದೆ. ಕೋಪವೆಂಬ ರಕ್ಕಸನಿಂದ ಎಲ್ಲೆಲ್ಲೂ ಅಪಕಾರವೇ, ಎಲ್ಲೆಲ್ಲೂ ಹಾಹಾಕಾರವೇ!
     ಮತ್ಸರಿಗರ ಕುರಿತು ಹೇಳಲೇಬೇಕಿಲ್ಲ. ಪೃಥ್ವೀರಾಜನ ಏಳಿಗೆ ಸಹಿಸದ ಜಯಚಂದ್ರನ ಮತ್ಸರ ಭಾರತವನ್ನು ಶತಮಾನಗಳ ಕಾಲ ದಾಸ್ಯಕ್ಕೆ ದೂಡಿತು. ದಾಯಾದಿ ಮತ್ಸರ ಮಹಾಭಾರತಕ್ಕೆ ನಾಂದಿ ಹಾಡಿತು. ತನ್ನ ಮಗನಿಗೆ ರಾಜ್ಯ ಸಿಗಲೆಂದು ಕೈಕೇಯಿ ರಾಮನನ್ನು ಕಾಡಿಗೆ ಹೋಗುವಂತೆ ಮಾಡಿದಳು. ಕೋಪಿಷ್ಠರೊಡನೆ ಏಗಬಹುದು, ಮೂರ್ಖರೊಡನೆ ಸ್ನೇಹ ಮಾಡಬಹುದು, ಸಂಕೋಚ ಸ್ವಭಾವದವರೊಡನೆ ಮೌನವಾಗಿರಬಹುದು, ಆದರೆ ಮತ್ಸರಿಸುವವರ ಜೊತೆ ಬಾಂಧವ್ಯ ಹೊಂದಿರುವುದು, ಸರಸ ಸಂಭಾಷಣೆಗಳನ್ನು ಮಾಡುವುದೂ ಸಹ ಅಪಾಯಕಾರಿಯೇ ಎಂಬುದು ಅನುಭವಿಗಳ ಮಾತು. ಏಕೆಂದರೆ ಮೇಲೆ ಕಾಣುವಂತೆ, ತೋರಿಸಿಕೊಳ್ಳುವಂತೆ ಅವರು ಇರುವುದೇ ಇಲ್ಲ. ಒಳಗಿರುವ ವಿಷಸರ್ಪ ಯಾವಾಗ ಕಚ್ಚಲಿ ಎಂದು ಒಳಗೊಳಗೇ ಬುಸುಗುಡುತ್ತಿರುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮತ್ಸರವೆಂಬುದು ನಮ್ಮ ಒಳಗಿನ ಕಲ್ಮಶ. ಅದನ್ನು ನಿವಾರಿಸಿಕೊಂಡರೆ ನಾವು ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ. 
     ಇನ್ನು ಕಾಮದ ವಿಷಯ ಪ್ರಸ್ತಾಪಿಸಿದರೆ ಅದೊಂದು ದೀರ್ಘ ಲೇಖನವೇ ಆಗಿಬಿಡುತ್ತದೆ. ಒಂದು ಉದಾಹರಣೆ ಕೊಟ್ಟು ಸಂಕ್ಷಿಪ್ತಗೊಳಿಸುವೆ. ಆಕೆ ಒಬ್ಬ ಸ್ಫುರದ್ರೂಪಿ ತರುಣಿ, ಸಾಫ್ಟ್ ವೇರ್ ಇಂಜನಿಯರ್. ಇನ್ನೊಬ್ಬ ಶ್ರೀಮಂತ ಇಂಜನಿಯರನೊಂದಿಗೆ ಅವಳ ವಿವಾಹವೂ ಆಯಿತು. ಸ್ವಲ್ಪ ಸಮಯದಲ್ಲೇ ಅವಳೊಳಗಿದ್ದ ಕಾಮರಕ್ಕಸ ಜಾಗೃತನಾದ. ತನ್ನ ಪ್ರಿಯಕರನ ಸಹಾಯದಿಂದ ಪತಿಯನ್ನೇ ಕೊಲೆ ಮಾಡಿಸಿಬಿಟ್ಟಳು. ತನಿಖೆಯಿಂದ ವಿಷಯ ಹೊರಬಿದ್ದು ಅವಳೂ, ಅವಳ ಪ್ರಿಯಕರನೂ ಜೈಲುಪಾಲಾದರು. ಟಿವಿ ಚಾನೆಲ್ಲುಗಳ ಕ್ರೈಮ್ ಸ್ಟೋರಿಗೆ ಆಹಾರವಾದಳು. "ಇಂದ್ರಿಯಾಣಿ ಪುರಾ ಜಿತ್ವಾ ಜಿತಂ ತ್ರಿಭುವನಂ ತ್ವಯಾ| ಸ್ಮರದ್ಧಿರಿವ ತದ್ವೈರಮಿಂದ್ರಿಯೈರೇವ ನಿರ್ಜಿತ:||" (ವಾ.ರಾ.ಯು.ಕಾಂ.೧೧೪.೧೮)- ರಾವಣನ ಮರಣದ ಕಾರಣವನ್ನು ಮಂಡೋದರಿ ವರ್ಣಿಸಿದ ಪರಿಯಿದು: 'ನೀನು ಮೊದಲು ಇಂದ್ರಿಯಗಳನ್ನು ಜಯಿಸಿ ಮೂಲೋಕಗಳಿಗೆ ಒಡೆಯನಾದೆ. ಆ ಇಂದ್ರಿಯಗಳು ಅದನ್ನು ನೆನಪಿನಲ್ಲಿಟ್ಟುಕೊಂಡಿದ್ದವೋ ಎಂಬಂತೆ ನಿನ್ನ ಮೇಲೆ ದ್ವೇಷ ಸಾಧಿಸಿ ನಿನ್ನನ್ನು ಗೆದ್ದವು.' ಜೀವನಕ್ಕೆ ಬೇಕಾದ ಅಮೂಲ್ಯ ಪಾಠ ಈ ಮಾತುಗಳಲ್ಲಿದೆ. ಕಾಮ ನಮ್ಮ ಹಿಡಿತದಲ್ಲಿದ್ದರೆ ಅದರಿಂದ ಏನು ಬೇಕಾದರೂ ಸಾಧಿಸಬಹುದು. ಅದರ ಹಿಡಿತಕ್ಕೆ ನಾವು ಸಿಕ್ಕಿಬಿದ್ದರೆ ಮುಗಿದೇಹೋಯಿತು. ಅನೇಕ ವರ್ಷಗಳ ಸಾಧನೆಯನ್ನು ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯುವ ಸಾಮರ್ಥ್ಯ ಕಾಮಕ್ಕಿದೆ. ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಿರುವವರು, ಜನನಾಯಕರೆನಿಸಿಕೊಂಡವರು, ಸಮಾಜದಲ್ಲಿ ಉನ್ನತ ಸ್ಥಾನ-ಮಾನಗಳನ್ನು ಹೊಂದಿದವರು ಹಲವರು ಕ್ಷಣಿಕ ದೌರ್ಬಲ್ಯದ ಸುಳಿಗೆ ಸಿಕ್ಕಿ ಅಧಃಪತನ ಹೊಂದಿದ, ಮತ್ತೆ ಮೇಲಕ್ಕೇರಲು ಸಾಧ್ಯವೆನಿಸದ ಸ್ಥಿತಿಯಲ್ಲಿರುವ ಅನೇಕರನ್ನು ನಾವು ಕಂಡಿದ್ದೇವೆ, ಕಾಣುತ್ತಿದ್ದೇವೆ. ಈ ಸುಳಿಗೆ ಸಿಕ್ಕಿದವರ ಸಂಸಾರಗಳು ಹಾಳಾಗಿರುವ, ನೆಮ್ಮದಿ ಕಳೆದುಕೊಂಡಿರುವ, ಪ್ರಾಣ ಕಳೆದಿರುವ ಮತ್ತು ಕಳೆದುಕೊಂಡಿರುವವರ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಅಪಕ್ವ ಮತ್ತು ದುರ್ಬಲ ಮನಸ್ಕರು ಕಾಮದ ಈ ಮುಖದ ಬಲಿಪಶುಗಳಾಗುತ್ತಾರೆ. ಇಂತಹ ಕಾಮಿಗಳ ಬುದ್ಧಿಗೆ ಮಂಕು ಕವಿದಿರುತ್ತದೆ, ಲಜ್ಜೆ, ಮಾನ-ಅಪಮಾನಗಳ ಅರಿವು ಇರುವುದಿಲ್ಲ. 'ಕಾಮಾತುರಾಣಾಂ ನ ಭಯಂ ನ ಲಜ್ಜಾ' ಎಂಬ ನುಡಿಯಂತೆ ಕೆಲವು ಅವಿವೇಕಿಗಳು ತಮ್ಮ ಮಕ್ಕಳು, ಸಂಬಂಧಿಕರು, ಆಶ್ರಿತರು, ಮುಂತಾದವರ ದುರ್ಬಲತೆಯ ದುರ್ಲಾಭ ಪಡೆದು ಅವರನ್ನೂ ಬಲಿಪಶುಗಳನ್ನಾಗಿಸಿರುವ ಪ್ರಸಂಗಗಳ ಬಗ್ಗೆ ತಿಳಿದಾಗ ಹೇಸಿಗೆಯೆನ್ನಿಸುತ್ತದೆ. ಕ್ಷಣಿಕ ಆನಂದದ ಉನ್ಮಾದ ಜೀವನದ ದಿಕ್ಕನ್ನೇ ತಿರುಗಿಸಬಲ್ಲದು ಎಂಬುದರ ಅರಿವು ಮೂಡುವಷ್ಟರಲ್ಲಿ ಪ್ರಮಾದ ಘಟಿಸಿಬಿಟ್ಟಿರುತ್ತದೆ. ಏನೂ ಅರಿಯದ ಕಂದಮ್ಮಗಳ ಮೇಲೂ ಅತ್ಯಾಚಾರದ ಸುದ್ದಿಗಳು ಕೇಳಿಬರುತ್ತಿರುವುದು ಈ ಕಾಮಾಸುರನ ಅಟ್ಟಹಾಸವೇ ಸರಿ.
     ಮದ ಸೊಕ್ಕಿ ಮೆರೆಯುವವರನ್ನು ಯಾರು ಇಷ್ಟಪಡುತ್ತಾರೆ? ಮದಕ್ಕೆ ನಾನಾ ರೂಪಗಳಿವೆ- ಸಂಪತ್ತಿನ ಮದ, ಅಧಿಕಾರ ಮದ, ರೂಪ ಮದ, ಯೌವನದ ಮದ, ತಿಳಿದವನೆಂಬ ಮದ, ಇತ್ಯಾದಿ, ಇತ್ಯಾದಿ. ಮನೆಯಲ್ಲಿ, ಸುತ್ತಮುತ್ತಲಿನಲ್ಲಿ ಸಿಗಬೇಕಾದ ಸಂಸ್ಕಾರ ಸಿಗದಿದ್ದಾಗ ಮದದ ಠೇಂಕಾರಕ್ಕೆ ಮಿತಿ ಇರುವುದಿಲ್ಲ. ಮನೆಗೆ ಯಾವುದೋ ಕಾರ್ಯಾರ್ಥವಾಗಿ ಹಿರಿಯರು ಅಥವ ಅತಿಥಿಗಳು ಬಂದಾಗ ಅವರನ್ನು ಸ್ವಾಗತಿಸುವ ಸೌಜನ್ಯ ಇಲ್ಲದಿದ್ದಾಗ ಬಂದವರಿಗೆ ಅಲ್ಲಿಗೆ ಏಕಾದರೂ ಹೋದೆವೋ ಅನ್ನಿಸದಿರದು. ಹಿರಿಯರು ಇದ್ದಾಗ ಕಿರಿಯರು ಅವರ ಎದುರಿಗೆ ಕಾಲು ಚಾಚಿ ಕೂಡುವುದು, ಅವರನ್ನು ಲೆಕ್ಕಕ್ಕೆ ಇಟ್ಟುಕೊಳ್ಳದಂತೆ ಅವರಿಗೆ ಘಾಸಿಯಾಗುವಂತೆ ಮಾತನಾಡುವುದು, ಇತ್ಯಾದಿಗಳೂ ಮದದ ಕಾಯಿಲೆಯಿಂದ ನರಳುತ್ತಿರುವವರು ಮಾಡುವ ಕೆಲಸವೇ. ಇಂತಹವರಿಂದ ದೂರವಿರುವುದೇ ಕ್ಷೇಮ.
     ಲೋಭಿಗಳಿಗೆ ಯಾವುದೇ ನೀತಿ, ನಿಯಮಗಳು, ಸಿದ್ಧಾಂತಗಳು ಪಥ್ಯವಾಗುವುದಿಲ್ಲ. ಅವರ ಒಂದೇ ಗುರಿ ಎಲ್ಲವೂ ತಮಗಿರಲಿ ಎಂಬುದಷ್ಟೇ. ಇದರಿಂದಾಗಿ ಆಸ್ತಿಕತೆ, ಧಾರ್ಮಿಕತೆ, ಒಳ್ಳೆಯ ವಿಚಾರಗಳು, ನಡೆಗಳು, ಒಟ್ಟಾರೆಯಾಗಿ ಸತ್ಪ್ರವೃತ್ತಿಗಳು ಮರೆಯಾಗುತ್ತವೆ. ಕ್ರೂರ ಪಶುಗಳಿಗೂ ಅವರಿಗೂ ವ್ಯತ್ಯಾಸ ಇರದೆ, ಸಮಾಜ ದುಸ್ಥಿತಿಗೆ ಜಾರುತ್ತದೆ. ಲೋಭಿಗಳಲ್ಲಿ ಸಂಪತ್ತು ಕ್ರೋಢೀಕೃತವಾದರೆ, ಉಳಿದವರು ಸಹಜವಾಗಿ ಸಿಡಿಯುತ್ತಾರೆ ಮತ್ತು ಅವರಲ್ಲಿನ ದುರ್ಭಾವನೆಗಳೂ ಜಾಗೃತವಾಗುತ್ತವೆ. ಹೀಗಾಗಿ ಲೋಭಿ ತಾನು ಕೆಡುವುದಲ್ಲದೆ, ಸಮಾಜವನ್ನೂ ಕೆಡಿಸುತ್ತಾನೆ. ಲೋಭಿಯಾದವರು ಯಾವ ಮಾರ್ಗದಲ್ಲೇ ಆಗಲಿ, ತನಗೆ ಹಣ ಬಂದರಾಯಿತು ಎಂಬ ಮನೋಭಾವದವನಾಗಿದ್ದು, ಈ ಕಾರಣದಿಂದಲೇ ಕಪ್ಪು ಹಣ, ಭ್ರಷ್ಠಾಚಾರ, ಕಾಳಸಂತೆ, ಜೂಜು, ಬೆಟ್ಟಿಂಗ್ ವ್ಯವಹಾರ, ಅಕ್ರಮ ಶೇಖರಣೆ, ಕಲಬೆರಕೆ, ಮಾದಕ ದ್ರವ್ಯಗಳ ವ್ಯಾಪಾರ. ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆ, ದೇಶದ್ರೋಹದ ಚಟುವಟಿಕೆಗಳು, ಪ್ರಾಣಹಾನಿ, ಮಾನಹಾನಿ, ಭಯೋತ್ಪಾದಕತೆ, ಮುಂತಾದವುಗಳು ವಿಜೃಂಭಿಸುತ್ತವೆ ಎಂಬುದು ನಿಧಾನವಾಗಿ ಆಲೋಚಿಸಿದರೆ ಅರ್ಥವಾಗುತ್ತದೆ.
     ಮೇಲೆ ವಿವರಿಸಿರುವ ಮಾನವನ ಅಂತಃಶತ್ರುಗಳಾದ ಆರು ಪ್ರಧಾನ ರಕ್ಷಸ್ಸುಗಳಿಂದ ಕೂಡಿದ ರಾಕ್ಷಸರು ಸಮಾಜದ ಹಿತಕ್ಕೆ ಮಾರಕರಾಗಿದ್ದಾರೆ. ರಾಕ್ಷಸರೆಂದರೆ ಹೊರಗಿನ ಯಾರೋ ಅಲ್ಲ. ಅವರುಗಳು ನಮ್ಮೊಳಗೇ ಇದ್ದಾರೆ. ಅವರನ್ನು ಹತ್ತಿಕ್ಕಬೇಕಾದವರು ಬೇರೆ ಯಾರೂ ಅಲ್ಲ, ನಾವುಗಳೇ! ಅವಿವೇಕದ ರಕ್ಕಸನನ್ನು ಹತ್ತಿಕ್ಕಲು ವಿವೇಕದ ಪರಮಾತ್ಮನೇ ಬರಬೇಕು. ವಿವೇಚಿಸಿ ಮುಂದಡಿಯಿಡುವುದು, ಸತ್ಸಂಗ, ಸಜ್ಜನ ಸಹವಾಸ, ಸಾತ್ವಿಕ ಆಹಾರ, ಸಂಸ್ಕಾರಯುತ ಗೃಹ, ಉತ್ತಮ ಮಾರ್ಗದರ್ಶನ ನೀಡುವ ಗುರುವಿನ ಆಶ್ರಯ, ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಿಕ್ಷಣ- ಇವುಗಳು ನಮ್ಮೊಳಗಿನ ರಾಕ್ಷಸರನ್ನು ಹತ್ತಿಕ್ಕಲು ನಮಗಿರುವ ಪರಿಣಾಮಕಾರಿ ಆಯುಧಗಳಾದರೆ, ಹೊರಗಿನ ರಾಕ್ಷಸರನ್ನು ನಿಯಂತ್ರಿಸಲು ಉಪಯೋಗಿಸಬಹುದಾದ ಆಯುಧಗಳೆಂದರೆ ಸಾಮ, ದಾನ, ಭೇದ ಮತ್ತು ದಂಡ. ಇವುಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಒಬ್ಬ ದುರ್ಜನನನ್ನು ಮನ ಪರಿವರ್ತಿಸಿ, ಯೋಗ್ಯ ತಿಳುವಳಿಕೆ ನೀಡಿ ಸಜ್ಜನನನ್ನಾಗಿಸಿದರೆ, ಒಬ್ಬ ರಾಕ್ಷಸ ಕಡಿಮೆಯಾಗುವುದರ ಜೊತೆಗೆ ಒಬ್ಬ ಸಜ್ಜನನ ಸಂಖ್ಯೆ ಹೆಚ್ಚಾಗುತ್ತದೆ. ಮನ ಪರಿವರ್ತನೆ ಸಾಧ್ಯವೇ ಇಲ್ಲ, ಅವನಿಂದ ಸಮಾಜಕ್ಕೆ ಹಾನಿ ತಪ್ಪಿದ್ದಲ್ಲ ಅನ್ನಿಸಿದರೆ ಮತ್ತು ಸಾಮ, ದಾನ, ಭೇದದ ಪ್ರಯೋಗಗಳು ಪ್ರಯೋಜನಕಾರಿ ಆಗದಿದ್ದಾಗ ಅನಿವಾರ್ಯವಾಗಿ ದಂಡ ಉಪಯೋಗಿಸುವುದು ಸಮಾಜದ ದೃಷ್ಟಿಯಿಂದ ಅನಿವಾರ್ಯವಾಗುತ್ತದೆ. ಮೌಲ್ಯಯುತ ಆಡಳಿತ ಬಂದರೆ ಇದೂ ಸಹ ಸಾಧ್ಯವಿದೆ.
-ಕ.ವೆಂ.ನಾಗರಾಜ್.
**************
17.11.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


2 ಕಾಮೆಂಟ್‌ಗಳು:

 1. ಪ್ರತ್ಯುತ್ತರಗಳು
  1. ಗಣೇಶ
   ಎಲ್ಲಾ ಸಂಭಾವಿತರಂತೇ ಕಾಣಿಸುವರು. ಯಾವಾಗ "ರಾಕ್ಷಸ"ರಾಗುವರೋ ಗೊತ್ತಾಗುವುದಿಲ್ಲ. ಮಕ್ಕಳಿಗೆ ಆಟ-ಪಾಠದ ಜತೆ ಈ ವಿಷಯವನ್ನೂ ತಿಳಿಸಬೇಕು. ಕವಿನಾಗರಾಜರೆ ಎಂದಿನಂತೆ ಉತ್ತಮ ಲೇಖನ.

   kavinagaraj
   :) ಧನ್ಯವಾದ ಗಣೇಶರೇ. ರಾಮರು, ರಾವಣರು ಯಾವಾಗ ಆಗುತ್ತಾರೆ ಎಂಬುದನ್ನು ಗುರುತಿಸುವ ಕನ್ನಡಕ ಇದ್ದರೆ ಚೆನ್ನಿರುತ್ತಿತ್ತು! ಎಚ್ಚರಿಕೆಯಿಂದಿರಲು ಅನುಕೂಲವಾಗುತ್ತಿತ್ತು. ಮುಂದೊಮ್ಮೆ ಬರಬಹುದೇನೋ!!

   ಅಳಿಸಿ