ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ಈ ರಾಮನವಮಿಗೆ (೮-೦೪-೨೦೧೪) ೧೧೭ ವಸಂತಗಳನ್ನು ಕಂಡು ೧೧೮ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ಣರಾವ್ ಮತ್ತು ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ ೧೮೯೭ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದಿದ್ದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು. ನಾನು ಹಾಸನದವನೆಂದು ತಿಳಿದಾಗ, ಪಂಡಿತರು ತಮ್ಮ ತಂದೆ ಹಾಸನದ ಶಿಕ್ಷಣ ಇಲಾಖೆಯಲ್ಲೂ ಕೆಲಸ ನಿರ್ವಹಿಸಿದ್ದು ತಾವು ೬-೭ ವರ್ಷದವರಾಗಿದ್ದಾಗ -ಅಂದರೆ ಸುಮಾರು ೧೧೦ ವರ್ಷಗಳ ಹಿಂದೆ- ಹಾಸನದ ದೇವಿಗೆರೆ ಸಮೀಪದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕೆಲವು ಸಮಯ ಇದ್ದೆವೆಂದು ನೆನಪಿಸಿಕೊಂಡಿದ್ದರು. ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವ9ತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು. ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು.
ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಗಾಂಧೀಜಿಯವರ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು. ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದ ಅವರು ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತರಾಗಿದ್ದವರ ನೂರಾರು ಶವಗಳ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - 'ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ, ಆತ್ಮಗೌರವದಿಂದ ಬಾಳೋಣ' ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಸುಮಾರು ೧೫ ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ ಇತಿಹಾಸದ ನೈಜ ಜೀವಂತ ಪ್ರತಿನಿಧಿ.
ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. 'ವೇದೋಕ್ತ ಜೀವನ ಪಥ'ವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. 'ಅರವತ್ತಕ್ಕೆ ಅರಳು-ಮರಳು' ಎಂಬ ಪ್ರಚಲಿತ ಗಾದೆ ಮಾತಿಗೆ ವಿರುದ್ಧವಾಗಿ ಇಂದಿಗೂ ಪಂಡಿತರ ವೈಚಾರಿಕ ಪ್ರಖರತೆಯ ಹೊಳಪು ಮಾಸಿಲ್ಲ, ನೆನಪು ಕುಂದಿಲ್ಲ. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಎರಡು ವರ್ಷಗಳ ಹಿಂದೆ ಕನ್ನಡ ರಾಜ್ಯೋತ್ಸವದಂದು ರಾಜ್ಯಸರ್ಕಾರ ಇವರನ್ನು ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಬೆಂಗಳೂರಿನ ಜಯನಗರದ ೫ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. ೨೮೬/ಸಿಯಲ್ಲಿ ವಾಸವಿರುವ ಇವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ೫-೩೦ಕ್ಕೆ ಸರಿಯಾಗಿ ಸತ್ಸಂಗ ನಡೆಯುತ್ತಿದ್ದು, ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ.
ವೇದದ ಬೆಳಕಿನಲ್ಲಿ ಸತ್ಯ ವಿಚಾರಗಳನ್ನು ಪ್ರಸರಿಸುವ ಧ್ಯೇಯದಲ್ಲಿ ಅವಿರತ ತೊಡಗಿರುವ ಮಹಾನ್ ವ್ಯಕ್ತಿಯ ಮಾರ್ಗದರ್ಶನ ಹೀಗೆಯೇ ಮುಂದುವರೆಯುತ್ತಿರಲಿ ಎಂದು ಪ್ರಾರ್ಥಿಸೋಣ. ಕರ್ಮಯೋಗಿ ಸಾಧಕರಿಗೆ ಸಾಷ್ಟಾಂಗ ಪ್ರಣಾಮಗಳು.
-ಕ.ವೆಂ.ನಾಗರಾಜ್.
[8-04-2014ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ ಲೇಖನ]
ಪಂಡಿತರೊಡನೆ:
ಮಾಹಿತಿಗೆ: ಎರಡು ವರ್ಷಗಳ ಹಿಂದಿನ ಫೋಟೋಗಳಿವು.
ಸಂಪದಿಗ ಗಣೇಶರು ಒದಗಿಸಿದ ಮಾಹಿತಿ:
I have no desire for death: Pt Sudhakar Chaturvedi
BANGALORE: At the World Elders Day celebrations, Pandit Sudhakar Chaturvedi, who claims to be 121 years and wants to live to be 300 years, said he had no time for death.
"I have no desire for death. Marne ko fursat nahin (no time for death)," he said, adding, "For longevity, one has to practise celibacy (brahmacharya) and also eat less so that the stomach doesn't bend."
He went on: "Now you don't find brahmacharis — there are only brashtacharis (corrupt people)."
************
"I have no desire for death. Marne ko fursat nahin (no time for death)," he said, adding, "For longevity, one has to practise celibacy (brahmacharya) and also eat less so that the stomach doesn't bend."
He went on: "Now you don't find brahmacharis — there are only brashtacharis (corrupt people)."
************
ಪೂಜ್ಯರಿಗೆ ಸಾಷ್ಟಾಂಗ ಪ್ರಣಾಮಗಳು..
ಪ್ರತ್ಯುತ್ತರಅಳಿಸಿಧನ್ಯವಾದಗಳು.
ಅಳಿಸಿಶತಾಯು ಪಂಡಿತ ಸುಧಾಕರ ಚತುರ್ವೇದಿಯವರ ಧೀಮಂತ ವ್ಯಕ್ತಿತ್ವದ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಸರ್. ಆ ಮಹಾನ್ ಚೇತನಕ್ಕೆ ನನ್ನ ಅನೇಕ ನಮನಗಳು.
ಪ್ರತ್ಯುತ್ತರಅಳಿಸಿವಂದನೆಗಳು, ಪ್ರಭಾಮಣಿ ನಾಗರಾಜರೇ.
ಅಳಿಸಿGajanana Naik
ಅಳಿಸಿgreat man
Someswara Narappa
namOnnamaha............ Happy birthday.
Jayanth Ramachar on April 9, 2014 - 3:34pm
ಅಳಿಸಿಕವಿಗಳೇ, ಪಂಡಿತರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅಂಥಹ ಮಹಾನ್ ಚೇತನರನ್ನು ಭೇಟಿ ಮಾಡಿಸಿದ ತಮಗೆ ಅನಂತಾನಂತ ಧನ್ಯವಾದಗಳು.
ಈ ಪ್ರತಿಕ್ರಿಯೆಯಲ್ಲಿ ಇನ್ನೊಂದು ಸೇರಿಸಲು ಇಚ್ಚಿಸುತ್ತೇನೆ.
ನಿಮ್ಮ ಆದರ್ಶದ ಬೆನ್ನು ಹತ್ತಿ ಪುಸ್ತಕವನ್ನು ಓದುತ್ತಿದ್ದಾಗ ನನಗೆ ನನ್ನ ಜೀವನದ ಆದರ್ಶ ವ್ಯಕ್ತಿಗಳಾದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ಸುಭಾಷರ ನೆನಪಾಯಿತು.
kavinagaraj on April 10, 2014 - 9:38am
ವಂದನೆಗಳು, ಜಯಂತರೇ. ನನ್ನ ಪುಸ್ತಕ ಮೆಚ್ಚಿದ್ದಕ್ಕೂ ಧನ್ಯವಾದಗಳು.
gunashekara murthy on April 9, 2014 - 9:07pm
ನೆಚ್ಚಿನ ಸ್ನೇಹಿತರಾದ ಕವಿ ನಾಗರಾಜ್ ರವರೇ, ಪಂ ಚತುರ್ವೇದಿಗಳದು ಸುಂದರ ಜೀವನ ಎಲೆ ಮರೆಯ ಕಾಯಿಯಂತೆ ಕಾಣದ ಭಾರತ ರತ್ನಗಳಲ್ಲಿ ಒಂದು ಎಂದರೇ ತಪ್ಪಾಗಲಾರದು. ಈ ಹುಟ್ಟು ಹಬ್ಬಗಳು ಹೆಚ್ಚೆಚ್ಚು ಬಂದು ಇನ್ನೂ ಹೆಚ್ಚು ದೀರ್ಘಾಸ್ಸು ಆರೋಗ್ಯವನ್ನು ಕೊಟ್ಟು ಇನ್ನೂ ಜನಸೇವೆಗೆ ದುಡಿಯಲೆಂದು ಆಶಿಸುವ.
ಚಾರ್ವಾಕಪ್ರಿಯ
kavinagaraj on April 10, 2014 - 9:40am
ಧನ್ಯವಾದಗಳು, ಗುಣಶೇಖರಮೂರ್ತಿಯವರೇ. ನಿಜ, ಅವರು ಭಾರತರತ್ನರೇ ಸರಿ.
ಗಣೇಶ on April 10, 2014 - 12:06am
"ಪುರುಸೊತ್ತಿಲ್ಲವೇ?" ಎಂದು ಕೇಳಿದ ಕವಿನಾಗರಾಜರೆ,
"ಸಾಯಲು ಪುರುಸೊತ್ತಿಲ್ಲ!" ಎಂದ ಮಹಾನ್ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ೬೦ ವರ್ಷ ಆದಾಗಲೇ "ಇನ್ನೂ ಯಾಕೆ ದೇವರು ನನ್ನನ್ನು ಕರಕೊಂಡಿಲ್ಲ" ಎಂದು ಕೊರಗುವವರ ನಡುವೆ, "೩೦೦ ವರ್ಷ!" ( http://timesofindia.indiatimes.com/city/bangalore/I-have-no-desire-for-d... ) ಬದುಕುವ ಹುಮ್ಮಸ್ಸು ತೋರಿಸಿರುವ ಚತುರ್ವೇದಿಯವರಿಗೆ ನನ್ನದೂ ಪ್ರಣಾಮಗಳು.
kavinagaraj on April 10, 2014 - 9:39am
ವಂದನೆಗಳು, ಗಣೇಶರೇ. ನೀವು ಲಿಂಕ್ ಕೊಟ್ಟಿರುವ ಪತ್ರಿಕಾ ಸುದ್ದಿಯೂ ಚೆನ್ನಾಗಿದೆ.
partha1059 on April 10, 2014 - 6:58am
ಚತುರ್ವೇದಿರವರಿಗೆ ನನ್ನ ಪ್ರಣಾಮಗಳು
kavinagaraj on April 10, 2014 - 9:42am
ವಂದನೆಗಳು, ಪಾರ್ಥಸಾರಥಿಯವರೇ.
ಮೊದಲು ಪಾರ್ಥರೇ ಅಂತ ಬರೆಯುತ್ತಿದ್ದೆ. ಕೃಷ್ಣನನ್ನು ಅರ್ಜುನನ್ನಾಗಿ ಏಕೆ ಮಾಡಬೇಕೆಂದು ಪೂರ್ಣಹೆಸರು ಉಪಯೋಗಿಸುತ್ತಿರುವೆ. :)
naveengkn on April 14, 2014 - 11:10am
ಅಳಿಸಿಇತಿಹಾಸದ ನೈಜ ಪ್ರತಿನಿಧಿ,,,,,, ಅಬ್ಬಾ ಎಂತಹಾ ಬರಹ, ಇದು ಲೇಖನ ಅಲ್ಲ,,,,, ನಮ್ಮ ನಡುವಿನ ಸಾದಕನ ಜೀವಂತ ಜೀವನ,,,,ಛತುರ್ವೇದಿಯವರ ಬಧುಕಿಗೆ ತಲೆಬಾಗಿದ್ದೇನೆ, ಕವಿಗಳೇ ಜೀವಂತ ಬರಹಕ್ಕೆ ಧನ್ಯವಾದಗಳು,,,,
Submitted by kavinagaraj on April 14, 2014 - 1:08pm
ಧನ್ಯವಾದ, ನವೀನರೇ.
Nataraja Halebeedu Sreenivasamurthy
ಅಳಿಸಿGreat!!