ಚತುರ್ವರ್ಣ
ಕಾಲಿಗೆ ಮುಳ್ಳು ಚುಚ್ಚಿಕೊಂಡರೆ 'ಹಾ' ಅಂತ ಬ್ರಾಹ್ಮಣ ಕಿರುಚಿಕೊಳ್ಳುತ್ತಾನೆ, ಕ್ಷತ್ರಿಯ (ಕೈ) ಮುಳ್ಳನ್ನು ಕೀಳಲು ಬರುತ್ತಾನೆ, ವೈಶ್ಯ(ಮುಂಡ) ಅವನಿಗೆ ಬೇಕಾದ ಸಹಾಯ ಒದಗಿಸುತ್ತಾನೆ. ಹೀಗೆ ಈ ಶರೀರದಲ್ಲೇ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ನಾಲ್ವರೂ ಇದ್ದಾರೆ. ಪಾದ ನೀಚ, ತಲೆ ಉತ್ಕೃಷ್ಟ ಅಂತ ಹೇಳೋ ಪಕ್ಷದಲ್ಲಿ ಒಂದು ದೊಡ್ಡ ಪ್ರಶ್ನೆ ಬರುತ್ತೆ, ನಾನು ಗುರು, ಯಾರದೋ ಮನೆಗೆ ಹೋಗ್ತೀನಿ, ಆಗ ನನ್ನ ಕಾಲಿಗೆ ನೀರು ಕೊಡ್ತಾರೆಯೇ ಹೊರತು ತಲೆಗೆ ನೀರು ಹಾಕಲ್ಲ. ತಲೆಗೆ ನೀರು ಹಾಕಿದರೆ ನನ್ನ ಪರಿಸ್ಥಿತಿ ಕೇಳೋರು ಯಾರು? ಕಾಲಿಗೇ ಬೇಕಾಗಿರೋದು ನೀರು, ತಲೆಗೆ ಬೇಕಾಗಿಲ್ಲ, ಈ ತರಹ ಆಲೋಚನೆ ಮಾಡಿ. ಈ ಚತುರ್ವರ್ಣ ವ್ಯವಸ್ಥೆ ಇದೆಯಲ್ಲಾ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಅಂತ, ಇವು ಸರಿ ಹೋಗದಿದ್ದರೆ, ಇಂಟಲೆಕ್ಷುಯಲ್, ಮಾರ‍್ಶಿಯಲ್, ಕಮರ್ಶಿಯಲ್ ಮತ್ತು ಮಾನ್ಯುಯಲ್ ಎಂಬ ಈ ನಾಲ್ಕು ಶಬ್ದಗಳನ್ನು ಇಟ್ಟುಕೊಳ್ಳಿ. ನನ್ನ ಕಾಲು ಹಾಳಾದರೆ ಹಾಳಾಗಲಿ, ನನ್ನ ತಲೆ ಮಾತ್ರ ಚೆನ್ನಾಗಿದ್ದರೆ ಸಾಕು ಅಂತ ಹೇಳಿದರೆ ನಾನು ಮೂರ್ಖ ಅಲ್ಲವಾ? ಕಾಲೂ ಚೆನ್ನಾಗಿರಬೇಕು, ತಲೆಯೂ ಚೆನ್ನಾಗಿರಬೇಕು, ಶರೀರದ ಪ್ರತಿಯೊಂದು ಅಂಗಾಂಗವೂ ಚೆನ್ನಾಗಿರಬೇಕು. ಹಾಗಿರುವವನೇ ನಿಜವಾದ ಪುರುಷ. ಕುರುಡ, ಕುಂಟ, ಕಿವುಡ ಇಂತಹವರೆಲ್ಲಾ ಪೂರ್ಣ ಪುರುಷರಲ್ಲ, ಅವರ ಕೆಲವು ಅಂಗಗಳು ಊನವಾಗಿವೆ. ಪೂರ್ತಿ ಇಂದ್ರಿಯ ಸರಿಯಾಗಿರಬೇಕು.
ಪ್ರಜ್ಞಾಚಕ್ಷು ವಿರಜಾನಂದರು
ದಯಾನಂದರಂತಹ ಪುರುಷ ಸಿಂಹನನ್ನು ಜಗತ್ತಿಗೆ ಧಾರೆಯೆರೆದು ಕೊಟ್ಟ ವಿರಜಾನಂದರು ಕುರುಡರು, ಕಣ್ಣಿಲ್ಲ. ಆದರೆ ಪ್ರಜ್ಞಾಚಕ್ಷು ಅಂತ ಅವರನ್ನ ಕರೀತಿದ್ದರು. ಆ ಪ್ರಜ್ಞೆ ಎಷ್ಟು ಸೂಕ್ಷ್ಮ ಇತ್ತು ಅಂದರೆ ಅವರು ಎಂಟು ವರ್ಷದ ಹುಡುಗನಾಗಿದ್ದಾಗ ಅವರ ಅತ್ತೆ, ಅಣ್ಣ 'ಈ ಕುರುಡ ಹುಡುಗನನ್ನು ಏಕೆ ನಮ್ಮ ತಲೆಗೆ ಕಟ್ಟಿಹೋದರೋ ಅಪ್ಪ, ಅಮ್ಮ, ಈ ಶನಿ ಎತ್ತಲಾದರೂ ಹೋಗಬಾರದೇ' ಅಂತ ಬಯ್ಯಲು ಶುರು ಮಾಡಿದ್ದರು. ಎಂಟು ವರ್ಷದ ಹುಡುಗ, ಒಂದು ಕೈಯಲ್ಲಿ ಲಾಠಿ ಹಿಡಕೊಂಡ, ಕರ್ತಾರಪುರ ಪಂಜಾಬಿನಲ್ಲಿರೋದು, ಅಲ್ಲಿಂದ ಹೊರಟು ಹರಿದ್ವಾರ, ಸುಮಾರು ೨೦೦೦ ಮೈಲಿ ದೂರ ಆಗುತ್ತೆ, ಅಲ್ಲಿವರೆಗೆ ಕೋಲೂರಿಕೊಂಡು ಬಂದ. ಮತ್ತೆ ಆಗ ಈಗಿನ ಕಾಲದಲ್ಲಿದ್ದಂತೆ ರಸ್ತೆಗಳು ಇರಲಿಲ್ಲ. ಕಾಡುರಸ್ತೆಗಳೇ. ಆ ರಸ್ತೆಗಳಲ್ಲೇ ಕೋಲೂರಿಕೊಂಡು ಕಷ್ಟಪಟ್ಟು ಬಂದ. ಅದೇ ದೊಡ್ಡ ಕೆಲಸ, ಸಾಧನೆ ಅಲ್ಲಿಗೇ ನಿಲ್ಲಲಿಲ್ಲ. ಬುದ್ಧಿ ಎಷ್ಟು ತೀಕ್ಷ್ಣ ಅಂದರೆ, ಕೃಷ್ಣಶಾಸ್ತ್ರಿ ಅನ್ನುವವರು ಗಂಗಾನದಿಯಲ್ಲಿ ನಿಂತುಕೊಂಡು ಋಗ್ವೇದ ಹೇಳುತ್ತಿದ್ದುದನ್ನು ಕೇಳುತ್ತಾ ನಿಂತಿದ್ದ ಅವರು ಕೇಳಿದರು, 'ಶಾಸ್ತ್ರಿಗಳೇ, ಇನ್ನೊಂದು ಒಂದು ಸಲ ಹೇಳಿ'. ಅವರು ಹೇಳಿದರು. ಇವರು ಸ್ವಲ್ಪವೂ ಮರೆಯದೆ ಕಲಿತರು. ಹೀಗೇನೇ ಆ ಪುಣ್ಯಾತ್ಮ ನಾಲ್ಕೂ ವೇದಗಳನ್ನು ಕಲಿತುಬಿಟ್ಟರು. ಬೇರೆಯವರು ಪುಸ್ತಕ ತೆಗೆದು ಇಂಥ ಅಧ್ಯಾಯ, ಇಷ್ಟನೇ ಮಂತ್ರ ಅಂತ ಹೇಳುತ್ತಿದ್ದರೆ, ಕಣ್ಣಿಲ್ಲದಿದ್ದರೂ, ಇಂಥ ವೇದದ, ಇಷ್ಟನೇ ಅಧ್ಯಾಯದ, ಇಷ್ಟನೇ ಮಂತ್ರ ಅಂತ ಹೇಳೇಬಿಡೋರು.
ಅಷ್ಟು ಕಷ್ಟದಲ್ಲಿದ್ದರೂ ವಿರಜಾನಂದರು ವಿನೋದ ಮಾಡುತ್ತಿದ್ದರು. ಒಮ್ಮೆ ಮಥುರಾ ನಗರದಲ್ಲಿ ನಡುಬೇಸಿಗೆಯ ಮಧ್ಯಾಹ್ನದಲ್ಲಿ ಕೋಲೂರಿಕೊಂಡು ಹೋಗ್ತಾ ಇದ್ದರು. ಅದೇ ಸಮಯದಲ್ಲಿ ಒಂದು ಚಿಕ್ಕ ರಥದ ಮೇಲೆ ದೇವರನ್ನು ಕೂರಿಸಿಕೊಂಡು ಭಕ್ತಾದಿಗಳು ಬರುತ್ತಿದ್ದರು. ಬಿಸಿಲು ಜೋರಾಗಿದ್ದರಿಂದ ರಥವನ್ನು ನಡುರಸ್ತೆಯಲ್ಲೇ ಬಿಟ್ಟು ಮರದ ನೆರಳಿನಲ್ಲಿ ಭಕ್ತರು ಸುಧಾರಿಸಿಕೊಳ್ಳುತ್ತಿದ್ದರು. ಈ ಪುಣ್ಯಾತ್ಮ ಕೋಲೂರಿಕೊಂಡು ಹೋಗ್ತಾ ಹೋಗ್ತಾ ಆ ರಥದ ಮೇಲೇ ಬಿದ್ದುಬಿಟ್ಟರು. ಭಕ್ತರು ಕಿರುಚಿದರು, 'ಏಯ್, ಕುರುಡಾ, ದೇವರು ಇರೋದು ಗೊತ್ತಾಗಲ್ವಾ?' ವಿರಜಾನಂದರು ಹೇಳಿದರು, 'ನಾನು ಕುರುಡ ಅನ್ನೋದು ಜಗತ್ತಿಗೇ ಗೊತ್ತು, ಆ ನಿಮ್ಮ ದೇವರೂ ಕುರುಡನೇ ಇರಬೇಕು, ಪಾಪ, ಮುದುಕ, ಕುರುಡ ಬರ್ತಾ ಇದಾನೆ ಅಂತ ಸರಿಯೋಕೆ ಆಗ್ತಾ ಇರಲಿಲ್ವಾ?' ಈ ರೀತಿ ಸಮಯಕ್ಕೆ ಸರಿಯಾಗಿ ತಕ್ಷಣ ಉತ್ತರ ಕೊಡೋದು ಬಹಳ ಕಷ್ಟ. ಎಡ್ವರ್ಡ್ ದಿ ಸೆವೆನ್ತ್ ಅವನು ಇಂಡಿಯಾ ದೇಶಕ್ಕೆ ಬಂದಿದ್ದ. ಮಥುರಾಕ್ಕೆ ಬಂದಿದ್ದ. ಸ್ವಲ್ಪ ಹಿಂದೂಸ್ತಾನಿ, ಸಂಸ್ಕೃತ ನಾಲ್ಕು ಅಕ್ಷರ ಕಲಿತುಕೊಂಡಿದ್ದ. ನಾಲ್ಕು ವಾಕ್ಯ ಗಟ್ಟು ಮಾಡಿಕೊಂಡಿದ್ದ. ಅವನು ಬಂದ. ಬಂದವನೇ ಒಂದು ಸಭೆಯಲ್ಲಿ ತಪ್ಪು ತಪ್ಪಾಗಿ ಸಂಸ್ಕೃತದಲ್ಲಿ, ಹಿಂದೂಸ್ತಾನಿಯಲ್ಲಿ ಮಾತಾಡಿದ. 'ಇವನಾ ನಮ್ಮ ಚಕ್ರವರ್ತಿ, ಮುಠ್ಠಾಳ, ಇವನಿಗೆ ನಾವು ಪ್ರಜೆಗಳಾ?' ಎಂದು ವಿರಜಾನಂದರು ಅಂದುಬಿಟ್ಟರು. ಅವನೂ ಸಂಭಾವಿತ, ಸಹಿಸಿದ. ಕೋಪ ಮಾಡಿಕೊಳ್ಳಲಿಲ್ಲ. ದೊಡ್ಡಸ್ತಿಕೆಗೆ ಮಿತಿಯಿಲ್ಲ.
ಫಿಲಾಸಫಿ?
ನಾನು ಹಿಂದೆ ಈ ವಿಷಯ ಹೇಳಿದೀನಿ, ಡಾ. . . . .ರು ಸೈಂಟಿಸ್ಟೂ ಹೌದು, ಎಜುಕೇಶನಿಸ್ಟೂ ಹೌದು. ಅವರು ಸಮಾಜಕ್ಕೆ ಬರ್ತಾ ಇದ್ದರು, ಪ್ರತೀವಾರ. ಆಮೇಲೆ ಇದ್ದಕ್ಕಿದ್ದ ಹಾಗೇ ನಿಲ್ಲಿಸಿಬಿಟ್ಟರು. ಒಂದು ಸಲ ದಾರಿಯಲ್ಲಿ ಸಿಕ್ಕಿದ್ದರು, ಕೇಳಿದೆ, 'ಯಾಕೆ . . . . .ರೇ, ಬರ್ತಾ ಇಲ್ಲ?' 'ನಿಜ ಹೇಳಿಬಿಡಲಾ?' 'ನಿಜ ನೀವು ಹೇಳ್ತೀರಿ ಅಂತಲೇ ಕೇಳ್ತಾ ಇರೋದು.' 'ನೀವು ಏನು ಹೇಳ್ತೀರಿ, ಅದೆಲ್ಲಾ ನಮಗೆ ಗೊತ್ತಾಗಿ ಹೋಯಿತು. ಯಾವುದು ಗೊತ್ತಾಗಬೇಕೋ ಅದು ನನಗೆ ಸಿಗ್ತಾ ಇಲ್ಲ.' ಗೊತ್ತಿರೋ ವಿಷಯ ಹೇಳಬಾರದು. ಹೇಳೋ ವಿಷಯ ಅದು ಗೊತ್ತಿರಬಾರದು. ಕೇಳೋರಿಗೆ ಅದೇನು ವಿಷಯ ಅಂತ ಗೊತ್ತಾಗಬಾರದು. ಇವನೊಂದು ತರಹ ಹೇಳ್ತಾ ಇರಬೇಕು, ಅವನೊಂದು ತರಹ ಕೇಳ್ತಾ ಇರಬೇಕು. ನಾನು ಹೇಳಿದೆ, ' . . . . .ರೇ, ದಯಮಾಡಿಸಿ, ಈ ಭಾನುವಾರ ನಿಮ್ಮ ಫಿಲಾಸಫಿಯನ್ನೇ ಮಾತಾಡ್ತೀನಿ.' ಅವತ್ತು ಏನು ಮಾತಾಡಿದೆ ಅಂತ ನನಗೇ ಗೊತ್ತಾಗಲಿಲ್ಲ. 'ಹೇ ಜೀವಾತ್ಮ, ನೀನು ಆನಂದಮಯ, ಅಳುತ್ತಾ ಇದೀಯಾ ಯಾಕೆ? ಕಣ್ಣೀರು ಒರೆಸಿಕೋ. ದೇವರಿಗೆ ನಾವು ಹೇಳೋ ಮಾತಾ ಇದು?' ಹೀಗೇ ಹೇಳ್ತಾ ಇದ್ದೆ. ಒಂದು ಗಂಟೆ ಅವರ ತಲೆ ತಿಂದೆ. ಕೊನೆಗೆ, '. . . ರೇ, ಹೇಗಿತ್ತು?' 'ಏನೂ ಗೊತ್ತಾಗಲಿಲ್ಲ, ಸ್ವಾಮಿ.' ಅದಾ ಫಿಲಾಸಫಿ? ಯಾವುದು ಅರ್ಥವಾಗುವುದಿಲ್ಲವೋ ಅದು ಫಿಲಾಸಫಿ ಅಲ್ಲ. ಫಿಲಾಸಫಿ ಅನ್ನೋದು ಇದೆಯಲ್ಲಾ, ಅದರಲ್ಲಿ ಫಿಲ್ ಅನ್ನೋದು ಮುಖ್ಯ, ಫಿಲ್ ಅಂದರೆ ಸ್ವರೂಪ ಅಂತ. ಯಾವುದಾದರೂ ವಸ್ತುವಿನ ಸ್ವರೂಪವನ್ನು ಯಾವ ಶಾಸ್ತ್ರ ಯಾವ ದರ್ಶನ ಮಾಡಿಸುತ್ತೋ ಅದು ಫಿಲಾಸಫಿ. ನಮ್ಮಲ್ಲಿ ಆರು ಫಿಲಾಸಫಿ(ದರ್ಶನ)ಗಳಿವೆ. ಆರೂ ಒಂದಕ್ಕೊಂದು ವಿರೋಧ ಅಂತ ತಿಳಕೋಬೇಡಿ, ದಯಾನಂದರನ್ನು ಒಬ್ಬರು ಕೇಳಿದರು, 'ಒಂದು ದರ್ಶನ ಸಾಕಾಗ್ತಾ ಇರ್ಲಿಲ್ವಾ ಸ್ವಾಮೀಜಿ, ಆರು ಯಾತಕ್ಕೆ?' 'ಜ್ಞಾನಿ ಆದರೆ ಒಂದು ಮಾತು ಹೇಳಿದರೆ ತಿಳಿದುಕೊಳ್ಳುತ್ತಾನೆ. ಎಲ್ಲರಿಗೂ ಅರ್ಥವಾಗಬೇಕಲ್ಲಾ, ಅದಕ್ಕೆ' ಅಂದರು.
ಪ್ರಾಣಿಗಳಿಂದಲೂ ಕಲಿಯುವುದಿದೆ
ಮಗು ಇದೆಯಲ್ಲಾ, ಹುಟ್ಟಿದ ಕೂಡಲೇ ಅಳುತ್ತೆ, ಅದೂ ಒಂದು ವಿದ್ಯೆ, ಅದೂ ಒಂದು ಕಲೆ, ಅದೇ ತಾನೇ ಹುಟ್ಟಿದೆ, 'ಸದ್ಯೋಜಾತಸ್ಯ ಹರ್ಷ ಶೋಕ ಭಯ . . . ' ಅದೇ ತಾನೇ ಹುಟ್ಟಿದ ಮಗು ಸಂತೋಷ ತೋರಿಸುತ್ತೆ, ನಗುತ್ತೆ, ಅಳುತ್ತೆ, ಇದನ್ನೆಲ್ಲಾ ತೋರಿಸುತ್ತೆ, ಅದು ಎಲ್ಲಿಂದ ಕಲಿಯಿತು? ಹಿಂದಿನ ಜನ್ಮದ ಅರಿವಿರಬೇಕು. 'ಪೂರ್ವಾಭ್ಯಾಂ ಕೃತಾಂ . . . ' ಕರು ಇದೆ. ಆ ಕರು ಹುಟ್ಟಿದ ಕೂಡಲೇ ತಾಯಿಯ ಮೊಲೆ ಹುಡುಕಿಕೊಂಡು ಹೋಗುತ್ತೆ. ಯಾಕೆ? ಅದು ಹಿಂದೆ ಇತ್ತದು, ಹಾಲು ಕುಡಿದಿತ್ತು. ಅದರ ಸ್ಮರಣೆ ಅದಕ್ಕಿದೆ. ಹೀಗೆ ಪ್ರಾಣಿಗಳನ್ನು ನೋಡಿ ಕೂಡಾ ನಾವು ಕಲಿಯುವುದಿದೆ. ಬಹಳ ಕಲಿಯುವುದಿದೆ. ನಾಯೀನ ಬೈತೀರೋ, ಹೊಗಳುತ್ತೀರೋ? ತನ್ನ ಯಜಮಾನನ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಕೊಡುತ್ತೆ ಅದು. ಅಷ್ಟು ಇದೆ. ಆದರೆ ಆ ನಾಯಿಯಲ್ಲಿ ಒಂದು ಅವಗುಣವೂ ಇದೆ. ದೈನ್ಯ, humility, ವಿಪರೀತ ದೀನತ್ವ ಅದಕ್ಕೆ.
ಲಾಂಗೂಲ ಚಾಲನಮಧಶ್ವರಣಾವಪಾತಂ ಭೂಮೌ ನಿಪತ್ಯ ವದನೋದರದರ್ಶನಂ ಚ |
ಶ್ವಾ ಪಿಂಡದಸ್ಯ ಕುರುತೇ ಗಜಪುಂಗವಸ್ತು ಧೀರಂ ವಿಲೋಕಯತಿ ಚೌಟುಶತೈಶ್ಚ ಭುಂಕ್ತೇ || (ನೀತಿ ಶತಕ)
ಯಾವನು ಅನ್ನ ಹಾಕುತ್ತಾನೋ ಅವನನ್ನು ಕಂಡು ನಾಯಿ ಬಾಲ ಆಡಿಸುತ್ತದೆ, ಬೆನ್ನು ಮೇಲೆ ಮಲಗಿ ಹೊಟ್ಟೆ ತೋರಿಸುತ್ತೆ, ಆದರೆ ಆನೆ ಇದೆಯಲ್ಲಾ, ಅದು ಹಾಗಲ್ಲ, ಗಾಂಭೀರ್ಯದಿಂದ ನೋಡ್ತಾ ಇರುತ್ತೆ, ನೂರು ಸಲ ತಿನ್ನು ತಿನ್ನು ಅಂತ ಪುಸಲಾಯಿಸಿದ ಮೇಲೇ ತಿನ್ನುತ್ತೆ. ನಾಯಿ ಆಗಬೇಡ, ಆನೆ ಆಗು ಅಂತ ನೀತಿ ಶಾಸ್ತ್ರದಲ್ಲಿ ಹೇಳಿದೆ. ನಾಯಿಯಲ್ಲಿ ಒಳ್ಳೆ ಗುಣ ಇಲ್ಲ ಅಂತ ಅಲ್ಲವೇ ಅಲ್ಲ, ಆನೆಯಲ್ಲಿ ಎಲ್ಲಾ ಒಳ್ಳೆ ಗುಣ ಇದೆ ಅಂತಲೂ ಅಲ್ಲ, ದಯಾನಂದರು ಒಂದು ಉದಾಹರಣೆ ಕೊಡ್ತಾರೆ, ಸಕ್ಕರೆ ಇದೆ, ಮರಳಿನ ಜೊತೆ ಸೇರಿಸ್ತೀರಿ, ಆನೆ ಕರೆದುಕೊಂಡು ಬಂದು ಸಕ್ಕರೆ ತಿನ್ನು ಅಂದರೆ ಅದಕ್ಕೆ ತಿನ್ನಕ್ಕಾಗುತ್ತಾ? ಒಂದು ಇರುವೆ ಬಿಡಿ ಅಲ್ಲಿ, ಮರಳನ್ನು ಬಿಟ್ಟು ಸಕ್ಕರೆ ತೆಗೆದುಕೊಳ್ಳುತ್ತೆ. ಸೂಕ್ಷ್ಮಗ್ರಾಹಿ ಇರುವೆ. ಇಲಿ ಬಿಲ ಇದೆಯಲ್ಲಾ, ಅದರೊಳಗೆ ನೋಡಿದರೆ ಅದ್ಭುತ, ಬೆಡ್ ರೂಮೇ ಬೇರೆ ಇದೆ, ಆಹಾರ ಇಡಕ್ಕೆ ಸ್ಟೋರ್ ಹೌಸೇ ಬೇರೆ. ಮತ್ತೆ ಕೆಲವು ಪಕ್ಷಿಗಳಿವೆ. ದೀಪದ ಹುಳ, ಮಿಂಚು ಹುಳ ಅಂತಾರಲ್ಲಾ ಅದನ್ನು ತೆಗೆದುಕೊಂಡು ಹೋಗಿ ಗೂಡಿನಲ್ಲಿ ಇಟ್ಟುಕೊಂಡಿರುತ್ತವೆ, ಬೆಳಕಿಗಾಗಿ!
ಪಂಡಿತರೊಂದಿಗೆ ನಾಗರಾಜ್.
*************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/07/16.html
*************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/07/16.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ