ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಅಕ್ಟೋಬರ್ 15, 2017

ಅನ್ನಬ್ರಹ್ಮನ ಸ್ಮರಿಸಿ ಧನ್ಯರಾಗಿ!


      ಯಾವುದು ಶಕ್ತಿಯನ್ನು ಕೊಡುತ್ತದೋ ಅದು ಶಕ್ತಿಗಿಂತಲೂ ದೊಡ್ಡದಾದುದು. ಶಕ್ತಿಯನ್ನು ಕರುಣಿಸುವುದೇ ಆಹಾರ ಅಥವ ಅನ್ನ! ಅನ್ನ ಎಂಬ ಪದ ವೇದ, ಉಪನಿಷತ್ತುಗಳಲ್ಲಿ ಅನೇಕ ಸಲ ಬಳಸಲಾಗಿರುವ ವಿಶಿಷ್ಟ ಪದವಾಗಿದೆ. ಈ ಪದ ಹೊರಡಿಸುವ ಅರ್ಥ ಆಹಾರ ಎಂಬುದೇ ಆಗಿದೆ. ಸೇವಿಸಲು ಉಪಯೋಗಿಸುವ ಯಾವುದೇ ಪದಾರ್ಥವಾಗಲಿ ಅದು ಆಹಾರವೆನಿಸುತ್ತದೆ, ಅದು ಅಕ್ಕಿಯಿರಬಹುದು, ಗೋಧಿಯಿರಬಹುದು ಅಥವ ಮತ್ತೇನೋ ಆಗಿರಬಹುದು. ಅದು ಯಾವುದೋ ಮಾನಸಿಕ ವಸ್ತುವೂ ಆಗಿರಬಹುದು. ಯಾವುದೋ ಒಂದರ ಜೀವಿತಕ್ಕೆ ಪೂರಕವಾಗುವ ಯಾವುದೇ ಸಂಗತಿ ಅನ್ನವೆನಿಸುವುದು. ಹೀಗೆ ಅನ್ನ ಎಂಬುದರಲ್ಲಿ ವಿಷಯಾತ್ಮಕ ಮತ್ತು ಗುಣಾತ್ಮಕವಾಗಿ ಸಮ್ಮಿಲಿತವಾದ ಯಾವುದೇ ರೀತಿಯ ಶಕ್ತಿಯ ಉತ್ಪತ್ತಿಗೆ ಕಾರಣವಾಗುವ ಅಂಶ ಅಡಗಿದೆ. 
     ಜೀವನದಲ್ಲಿ ಯಶಸ್ಸು ಅನ್ನುವುದು ಯಾವುದೋ ಒಂದು ಸಂಗತಿಯನ್ನು ಅವಲಂಬಿಸಿ ಬರುವಂತಹುದಲ್ಲ. ಹಲವಾರು ಸಂಗತಿಗಳ ಸಮ್ಮಿಲಿತ ಫಲವಾಗಿ ಯಶಸ್ಸು ಸಿದ್ಧಿಸುತ್ತದೆ. ಉದಾಹರಣೆ ಕೊಡಬೇಕೆಂದರೆ: ಗಾಳಿ ಇಲ್ಲದೆ ನಾವು ಉಸಿರಾಡಲಾರೆವು, ನಿಜ. ಆದರೆ ಶ್ವಾಸಕೋಶಗಳಿಲ್ಲದೆಯೂ ಸಹ ನಮಗೆ ಉಸಿರಾಡಲಾಗುವುದಿಲ್ಲ. ಸಾಮಾಜಿಕ ಜೀವನದಲ್ಲೂ ಸಹ ಈ ನಿಯಮ ಅನ್ವಯವಾಗುತ್ತದೆ. ನಾವು ಪರಸ್ಪರ ಹೊಂದಾಣಿಕೆ, ಸಹಕಾರ ಮತ್ತು ಅರ್ಥ ಮಾಡಿಕೊಳ್ಳುವಿಕೆಯಿಂದ ಬಾಳಬೇಕಾಗುತ್ತದೆ. ಉಪನಿಷತ್ತು ಹೇಳುವ ವಿಶಾಲ ಅರ್ಥದಲ್ಲಿ ಹೀಗೆ ಬಾಳುವುದಕ್ಕೆ ಸಹಾಯ ಮಾಡುವುದು, ಸಹಾಯವಾಗುವುದೂ ಅನ್ನವೆಂದು ಕರೆಸಿಕೊಳ್ಳುತ್ತದೆ. ಪ್ರಕೃತಿಯ ಶಕ್ತಿಗಳು ಮತ್ತು ವ್ಯಕ್ತಿಗತ ಶಕ್ತಿಗಳ ಪರಸ್ಪರ ಸಂಬಂಧಗಳು ಪ್ರತಿಯೊಂದು ಕ್ರಿಯೆಗೆ ಕಾರಣವಾಗುತ್ತದೆ. ಇದೇ ಶಕ್ತಿಯ ಮೂಲ. ನಾವು ಪ್ರಕೃತಿಯೊಂದಿಗೆ ಹೊಂದಿಕೊಂಡಿದ್ದಾಗ ಮತ್ತು ಪ್ರಕೃತಿಯ ಶಕ್ತಿಗಳು ನಮ್ಮೊಡನೆ ಹೊಂದಿಕೊಂಡಾಗ ನಾವು ಶಕ್ತಿಶಾಲಿಗಳಾಗುತ್ತೇವೆ. ಯಾವದು ಶಕ್ತಿಯ ಉತ್ಪಾದನೆಗೆ ಕಾರಣವಾಗುತ್ತದೋ ಅದೇ ಅನ್ನ!
     ಇಂತಹ ಚೈತನ್ಯದಾಯಕವಾದ ಅನ್ನದ ಕುರಿತು ಈ ವೇದಮಂತ್ರ ಹೀಗೆ ಹೇಳುತ್ತದೆ:
ಮೋಘಮನ್ನಂ ವಿಂದತೇ ಅಪ್ರಚೇತಾಃ ಸತ್ಯಂ ಬ್ರವೀಮಿ ವಧ ಇತ್ ಸ ತಸ್ಯ |
ನಾರ್ಯಮಣಂ ಪುಷ್ಯತಿ ನೋ ಸಖಾಯಂ ಕೇವಲಾಘೋ ಭವತಿ ಕೇವಲಾದೀ || (ಋಕ್.೧೦.೧೧೭.೬.)
     ಸೋಮಾರಿಯೂ, ಅಜ್ಞಾನಿಯೂ ಆದವನು ವ್ಯರ್ಥವಾಗಿ ಆಹಾರವನ್ನು ಪಡೆಯುತ್ತಾನೆ. ಸತ್ಯ ಹೇಳುತ್ತೇನೆ, ಅವನು ಆಹಾರದ ಕೊಲೆಗಾರನೇ ಸರಿ. ಅವನು ದೇವರ ಶಾಸನವನ್ನಾಗಲೀ, ತನ್ನ ಆಪ್ತೇಷ್ಟರನ್ನಾಗಲೀ ಬಲಗೊಳಿಸುವುದಿಲ್ಲ. ಕುಳಿತು ತಿನ್ನುವ ಸೋಮಾರಿಯೂ, ಅಜ್ಞಾನಿಯೂ ಆದ ಅವನು ಪಾಪದ ಪ್ರತೀಕ ಎಂಬುದು ಈ ಮಂತ್ರ ಅರ್ಥ. ಅವಧೂತ ಮುಕುಂದೂರು ಸ್ವಾಮಿಗಳು ಊಟಕ್ಕೆ ಕುಳಿತಿದ್ದ ಭಕ್ತರನ್ನು ಉದ್ದೇಶಿಸಿ ಹೀಗೆ ಹೇಳುತ್ತಿದ್ದರು: ಮುದ್ದೆ ಅಂತ ಊಟ ಇಲ್ಲ, ಸಿದ್ದಪ್ಪನಂತ ದೇವ್ರಿಲ್ಲ ಅಂತಾರೆ. ಆದ್ರೆ ಒಂದ್ಮಾತು, ಈ ಮುದ್ದೆಗೆ ತಕ್ಕಷ್ಟು ಕಷ್ಟ ಮಾಡಿದ್ದೀನಿ ಅಂತ ನಿಮಗೆ ನೀವೇ ಕೇಳ್ಕಂಡು, ಹೇಳ್ಕಂಡು ಮುದ್ದೆ ಮುರೀರಪ್ಪಾ. ಎಂತಹ ದಿವ್ಯ ಸಂದೇಶ. ಊಟ ಮಾಡುವುದಕ್ಕೂ ಅರ್ಹತೆ ಇರಬೇಕು. ಹಾಗಿರುವಾಗ ಆಹಾರಕ್ಕಾಗಿ ಹಪಹಪಿಸುವ ಲಕ್ಷಾಂತರ ಜೀವಿಗಳಿರುವ ಈ ಜಗತ್ತಿನಲ್ಲಿ ತಿನ್ನುವ ಆಹಾರವನ್ನೇ ವ್ಯರ್ಥ ಮಾಡುವುದು ಮಹಾಪಾಪ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು. ಇದೇ ಸಾಮಾಜಿಕ ಪ್ರಜ್ಞೆ. 
     ಒಬ್ಬ ವ್ಯಕ್ತಿ ಹತ್ತು ದಿನಗಳಿಂದ ಆಹಾರ ಸೇವಿಸಿಲ್ಲವೆಂದಿಟ್ಟುಕೊಳ್ಳೋಣ. ಏನಾಗುತ್ತದೆ? ಅವನು ಬದುಕಿರಬಹುದು, ಜೀವಿಯೆಂದು ಅನ್ನಿಸಿಕೊಳ್ಳಬಹುದು, ಆದರೆ ಆತ ಕಾಣುವ, ಕೇಳುವ, ಯೋಚಿಸುವ ಅಥವ ಅರ್ಥ ಮಾಡಿಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿರುತ್ತಾನೆ. ಇದಕ್ಕೆ ಕಾರಣ ಆತ ಹತ್ತು ದಿನಗಳಿಂದ ಏನನ್ನೂ ಸೇವಿಸದಿರುವುದು. ಅಲ್ಲಿ ಪ್ರಾಣವಿದೆ, ಆದರೆ ಸತ್ವವಿಲ್ಲ, ಏಕೆಂದರೆ ಅನ್ನ ಇಲ್ಲ. ಆಹಾರ ಕಂಡ ಕೂಡಲೇ ಅವನಿಗೆ ಚೈತನ್ಯ ಬಂದಂತಾಗುತ್ತದೆ. ಅನ್ನವೆಂದರೆ ಕೇವಲ ತಿನ್ನುವ ಆಹಾರವಲ್ಲ. ಅದು ವಿಶ್ವದ ಉಗಮದ ಪ್ರತೀಕವಾಗಿದೆ. ಶಕ್ತಿಯ ಮೂಲವಾದ ಆಹಾರವೆಂದರೆ ಅದರಲ್ಲಿ ನಾವು ಸ್ವೀಕರಿಸುವುದೆಲ್ಲವೂ ಸೇರುತ್ತದೆ, ಅಂದರೆ ನಾವು ನೋಡುವುದು, ಕೇಳುವುದು, ತಿನ್ನುವುದು, ಇತ್ಯಾದಿಗಳೆಲ್ಲವೂ ಆಹಾರವೆಂದೇ ತಿಳಿಯಬೇಕು. ನಾವು ಎಂತಹ ಆಹಾರ ಸೇವಿಸುತ್ತೇವೆ ಎಂಬುದನ್ನು ಅವಲಂಬಿಸಿ ಅದಕ್ಕೆ ತಕ್ಕಂತೆ ನಾವು ಶಕ್ತಿ ಗಳಿಸಿಕೊಳ್ಳುತ್ತೇವೆ.

     . ನಾವು ಸೇವಿಸುವ ಆಹಾರ ನಮ್ಮ ಕೃತಿಯ ಮೇಲೆ, ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ ಎಂಬುದೇ ಅದು. ಪ್ರಾಣಿಲೋಕದಲ್ಲೂ ಸಹ ಸಸ್ಯಾಹಾರಿ ಪ್ರಾಣಿಗಳು ಮತ್ತು ಮಾಂಸಾಹಾರಿ ಪ್ರಾಣಿಗಳ ಗುಣ, ಲಕ್ಷಣ ಮತ್ತು ಸ್ವಭಾವಗಳಲ್ಲಿ ಎದ್ದು ಕಾಣುವ ವ್ಯತ್ಯಾಸಗಳನ್ನು ಗಮನಿಸಬಹುದಾಗಿದೆ. ಆಯುರ‍್ವೇದದಲ್ಲಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರದ ಬಗ್ಗೆ ವಿವರಣೆ ಸಿಗುತ್ತದೆ. ಸಾತ್ವಿಕ ಗುಣವೆಂದರೆ ರಚನಾತ್ಮಕ, ಸ್ಪಷ್ಟ ಮತ್ತು ಜೀವನವನ್ನು ಪೋಷಿಸುವುದಾಗಿದೆ. ಶಾಂತಿ, ನೆಮ್ಮದಿ, ಪ್ರೀತಿ, ಇತ್ಯಾದಿಗಳು ಸಾತ್ವಿಕರ ಲಕ್ಷಣಗಳು. ಸಾತ್ವಿಕರು ಸಾಮಾನ್ಯವಾಗಿ ಆಧ್ಯಾತ್ಮಿಕ ಒಲವುಳ್ಳವರು, ಸರಳರು, ಉದ್ವೇಗರಹಿತರು, ಸಂತುಷ್ಟರು, ಕೋಪನಿಗ್ರಹಿಗಳು ಆಗಿದ್ದು, ಅವರ ವಿಚಾರಗಳು ಸ್ಪಷ್ಟವಾಗಿರುತ್ತವೆ. ಅವರು ಇತರರಿಗೆ ಸಂತೋಷ ಕೊಡುವವರು, ಉತ್ಸಾಹಿತರು, ಕುತೂಹಲಿಗಳು ಮತ್ತು ಪ್ರೇರಕರಾಗಿರುತ್ತಾರೆ. ಸಾತ್ವಿಕ ಆಹಾರ ಸತ್ವಯುತವಾಗಿದ್ದು ಸುಲಭವಾಗಿ ಜೀರ್ಣವಾಗುವಂತಹದು ಮತ್ತು ಹಗುರವಾಗಿರುತ್ತವೆ. ಹದವಾಗಿ ಬೇಯಿಸಿದ ತರಕಾರಿಗಳು, ಕಳಿತ ಹಣ್ಣುಗಳು, ಕಾಳುಗಳು, ಜೇನುತುಪ್ಪ, ಶುಂಠಿ, ಸ್ವಲ್ಪ ಪ್ರಮಾಣದ ತುಪ್ಪ, ಹಸುವಿನ ಹಾಲು ಇತ್ಯಾದಿಗಳು ಸಾತ್ವಿಕ ಆಹಾರದ ಪಟ್ಟಿಯಲ್ಲಿವೆ. ಸತ್ವವನ್ನು ಹೆಚ್ಚಿಸಿಕೊಳ್ಳಲು ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ಸತ್ಸಂಗ ಇತ್ಯಾದಿಗಳಲ್ಲಿ ತೊಡಗಿಕೊಳ್ಳುವುದಲ್ಲದೆ, ಪ್ರಶಾಂತವಾದ ಮತ್ತು ಹಿತಕರವೆನಿಸುವ ವಾತಾವರಣದಲ್ಲಿ ಇರುವುದು ಸಹಾಯಕಾರಿಯಾಗುತ್ತವೆ. ನೋಡುವ ನೋಟಗಳು, ಕೇಳುವ ಸಂಗತಿಗಳು, ಓದುವ ಪುಸ್ತಕಗಳು ಒಳ್ಳೆಯದಾಗಿದ್ದಲ್ಲಿ, ಧನಾತ್ಮಕವಾಗಿದ್ದಲ್ಲಿ ಅವೂ ಸಹ ಸಾತ್ವಿಕ ಗುಣವನ್ನು ವೃದ್ಧಿಸುತ್ತವೆ.
     ರಾಜಸಿಕತೆಯೆಂದರೆ ಮನ್ನುಗ್ಗುವ ಮತ್ತು ಚಟುವಟಿಕೆಯಿಂದ ಒಡಗೂಡಿದ ಸ್ವಭಾವ. ಜೀವನದಲ್ಲಿ ಕೆಲಸಗಳಾಗಬೇಕಾದರೆ ಈ ಸ್ವಭಾವವೂ ಅಗತ್ಯವಾಗಿದೆ. ಆದರೆ ಅತಿಯಾದಲ್ಲಿ ಇದು ಅತಿ ಚಟುವಟಿಕೆ ಮತ್ತು ತಳಮಳಕ್ಕೂ ಕಾರಣವಾಗುತ್ತದೆ. ಮನಸ್ಸು ವಿಶ್ರಾಂತವಾಗುವುದಿಲ್ಲ, ಭಯ, ಕಾತುರ ಮತ್ತು ಉಗ್ರತೆಯಿಂದ ಚಡಪಡಿಸುತ್ತದೆ. ಮಿತಿಯಲ್ಲಿರುವ ರಾಜಸಿಕತೆ ಒಳ್ಳೆಯ ಫಲ ನೀಡುತ್ತದೆ, ಸಮಾಜಕ್ಕೆ ಉಪಕಾರಿಯಾಗಿರುತ್ತದೆ. ಅತಿಯಾದಲ್ಲಿ ಅದು ಗರ್ವ, ಸ್ಪರ್ಧೆ, ಅತಿಕ್ರಮಣಕಾರಿ ಮನೋಭಾವ ಮತ್ತು ಮತ್ಸರಕ್ಕೆ ರಹದಾರಿಯಾಗುತ್ತದೆ. ಭೌತಿಕವಾದಕ್ಕೆ ಹೆಚ್ಚು ಮಹತ್ವ ಕೊಡುವ ಇವರು ಅಧಿಕಾರ, ಹೆಸರು, ವ್ಯಾಪಾರ, ವ್ಯವಹಾರಗಳಲ್ಲಿ ಉನ್ನತಿಗಾಗಿ ಹಂಬಲಿಸುತ್ತಾರೆ. ತಕ್ಷಣದಲ್ಲಿ ಇವರು ಮಾಡುವ ಕ್ರಿಯೆಗಳಿಂದಾಗಿ ನಂತರದಲ್ಲಿ ಪಶ್ಚಾತ್ತಾಪ ಪಡಬೇಕಾಗಿ ಬರುವುದನ್ನೂ ನಾವು ಕಾಣುತ್ತಿರುತ್ತೇವೆ. ನಮ್ಮ ಬಹುತೇಕ ರಾಜಕಾರಣಿಗಳನ್ನು ನೋಡಿದರೆ ಇದಕ್ಕೆ ಹೇರಳವಾದ ಉದಾಹರಣೆಗಳು ಸಿಗುತ್ತವೆ. ಮತೀಯ ಹುಚ್ಚಾಟಗಳಿಗೂ ಇದು ಮೂಲಕಾರಣವಾಗಿದೆ. ಅವರುಗಳು ತಾವು ನಂಬಿರುವುದೇ ಸರಿಯೆನ್ನುತ್ತಾರೆ ಮತ್ತು ಇತರರು ತಮ್ಮ ಮಾತನ್ನು ಕೇಳಬೇಕೆನ್ನುವ ಸಲುವಾಗಿ ಏನು ಮಾಡಲೂ ತಯಾರಿರುತ್ತಾರೆ. ಅತಿ ರಾಜಸಿಕತೆಯಲ್ಲಿ ಯಾವುದು ಒಳ್ಳೆಯದೆಂದು ಹೃದಯಕ್ಕೆ ಗೊತ್ತಿದ್ದರೂ, ಮನಸ್ಸು ಮಾತ್ರ ಬೇರೆಲ್ಲೋ ಕೊಂಡೊಯ್ಯುತ್ತದೆ. ಆದರೆ ಹಿಡಿತದಲ್ಲಿರುವ ರಾಜಸಿಕತೆ ಅತ್ಯಗತ್ಯವಾಗಿದ್ದು, ಗುರಿ ತಲುಪಲು ಮತ್ತು ಸಮಾಜವನ್ನು ಸರಿಯಾಗಿ ಕೊಂಡೊಯ್ಯಲು ಸಹಕಾರಿಯಾಗಿರುತ್ತದೆ. ಇದಕ್ಕೂ ಸಹ ನಮ್ಮ ರಾಜಕಾರಣಿಗಳಲ್ಲಿ ಉದಾಹರಣೆಗಳು ಸಿಗುತ್ತವೆ. ನೋಡುವ ದೃಷ್ಯಗಳು/ಸಂಗತಿಗಳು, ದಾರಿ ತಪ್ಪಿಸುವ ಚಿತ್ರಗಳು, ಧಾರಾವಾಹಿಗಳು, ಕೇಳುವ ಕೆಟ್ಟ ಮಾತುಗಳು, ವಾಸಿಸುವ ಅಶಾಂತ ಪರಿಸರ ಸಹ ರಾಜಸಿಕತೆಗೆ ಪ್ರಚೋದಿಸುತ್ತವೆ. ಅತಿಯಾದ ವ್ಯಾಯಾಮ, ಅತಿಯಾದ ಪ್ರಯಾಣ, ಅತಿಯಾದ ಮಾತುಗಳು, ಅತಿಯಾದ ಕೆಲಸಗಳು, ಅತಿಯಾದ ಮನರಂಜನೆಗಳೂ ಸಹ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಕರಿದ, ಹುರಿದ ಪದಾರ್ಥಗಳು, ಚಾಕೊಲೇಟುಗಳು, ಅತಿಯಾದ ಸಿಹಿ, ಉಪ್ಪು, ಖಾರದ ಪದಾರ್ಥಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳು ರಾಜಸಿಕ ಆಹಾರದ ಪಟ್ಟಿಯಲ್ಲಿ ಇವೆ. ಇವುಗಳನ್ನು ಹಿತ-ಮಿತವಾಗಿ ಬಳಸಿದರೆ ಒಳಿತು. ರಾಜಸಿಕತೆಯನ್ನು ಸಾತ್ವಿಕ ಆಹಾರಗಳ ಬಳಕೆಯೊಂದಿಗೆ ನಿಯಂತ್ರಿಸಬಹುದು. ಸಾತ್ವಿಕರ ಸಂಗವೂ ಸಹಕಾರಿಯಾಗುವುದು. ಸಾತ್ವಿಕರ ಮತ್ತು ನಿಯಂತ್ರಿತ ರಾಜಸಿಕರ ಒಟ್ಟುಗೂಡುವಿಕೆ ಸಮಾಜಕ್ಕೆ ಉಪಕಾರಿಯಾಗಿರುತ್ತದೆ.
     ತಾಮಸಿಕತೆ ನಾಶ ಮಾಡುವ ಗುಣವಾಗಿದೆ. ಆಲಸ್ಯ, ಜಡತ್ವ, ನಿರಾಶೆ, ಖಿನ್ನತೆ, ಕ್ರೋಧ ಇದರ ಉತ್ಪನ್ನಗಳು. ನಿದ್ರೆ, ವಿಶ್ರಾಂತಿ, ಮುನ್ನುಗ್ಗದಿರುವಿಕೆ, ಇತ್ಯಾದಿಗಳು ಸಂದರ್ಭಗಳಲ್ಲಿ ಅವಶ್ಯವಾಗಿದ್ದು ತಾಮಸಿಕತೆಯೂ ಸಹ ಸ್ವಲ್ಪ ಮಟ್ಟಿಗೆ ಅಗತ್ಯವಾದುದೇ ಆಗಿದೆ. ಆದರೆ ತಮೋಗುಣ ಹೆಚ್ಚಾದರೆ ಅನರ್ಥಕಾರಿ ಎಂಬುದರಲ್ಲಿ ಅನುಮಾನವಿಲ್ಲ. ಕೀಳು ಅಭಿರುಚಿಯ ಚಿತ್ರಗಳು, ಕೀಳು ಮನೋಭಾವದ ಚಾನೆಲ್ಲುಗಳು, ಅಂತರ್ಜಾಲದ ಅಶ್ಲೀಲ ತಾಣಗಳು ತಾಮಸಿಕತೆಯ ಬೆಂಕಿಗೆ ತುಪ್ಪ ಸುರಿಯುತ್ತವೆ. ತಾಮಸಿಕರು ಸ್ವನಾಶಕ್ಕೆಡೆಮಾಡುವ ಜೀವನಶೈಲಿ ಮತ್ತು ಆಹಾರಸೇವನೆಯ ಅಭ್ಯಾಸದವರಾಗಿರುತ್ತಾರೆ. ಅತಿಯಾದ ಆಹಾರ ಸೇವನೆ, ಅತಿಯಾದ ಕಾಮ ಚಟುವಟಿಕೆ, ಮಾದಕ ದ್ರವ್ಯಗಳ ಸೇವನೆ ಮಾಡಲು ಹಂಬಲಿಸುತ್ತಾರೆ.  ಪರಿಣಾಮವಾಗಿ ನಿಸ್ತೇಜತೆ, ಭಾರವಾದ ಮನಸ್ಸಿನೊಂದಿಗೆ ಏನು ಮಾಡಬೇಕೆಂದು ತೋಚದ ಸ್ಥಿತಿಗೆ ತಲುಪುತ್ತಾರೆ. ತಮ್ಮ ಮತ್ತು ಇತರರ ಬಗ್ಗೆ ಲೆಕ್ಕಿಸದಂತೆ ಇರುತ್ತಾರೆ. ಕೊನೆಯಲ್ಲಿ ಯಾವ ಸ್ಥಿತಿಗೆ ತಲುಪುತ್ತಾರೆಂದರೆ ತಮಗೆ ತಾವು ಸಹಾಯ ಮಾಡಿಕೊಳ್ಳಲಾಗದಂತಾಗಿ ಇತರರನ್ನು ಆಶ್ರಯಿಸಬೇಕಾಗುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧರಿಸಲಾರರು ಮತ್ತು ಅಸ್ಪಷ್ಟ ಮನಸ್ಸಿನಿಂದಾಗಿ ಒಳ್ಳೆಯ ನಿರ್ಧಾರ ತಳೆಯಲಾರರು. ತಾಮಸಿಕ ಆಹಾರ ಕಡಿಮೆ ಸತ್ವಯುತವಾಗಿದ್ದು, ಜೀವಕ್ಕೆ ಪೋಷಕವಾಗಿರುವುದಿಲ್ಲ. ಹಳೆಯದಾದ ಮತ್ತು ತಂಗಳು ಆಹಾರ, ಅತಿಯಾಗಿ ಕರಿದ ಮತ್ತು ಹುರಿದ ಪದಾರ್ಥಗಳು, ಸುಲಭವಾಗಿ ಜೀರ್ಣವಾಗದಂತಹ ಗಡಸು ಆಹಾರ, ಹೆಚ್ಚು ಅನ್ನಿಸುವಷ್ಟು ಮಾಂಸಾಹಾರ, ಇತ್ಯಾದಿಗಳು ತಾಮಸಿಕವೆನಿಸುವ ಆಹಾರಗಳ ಪಟ್ಟಿಯಲ್ಲಿ ಸೇರಿವೆ. ಮಾದಕ ದ್ರವ್ಯಗಳು, ಡ್ರಗ್ಸ್ ಮುಂತಾದವು ತಾಮಸ ಗುಣ ಪ್ರಚೋದಕಗಳು. ಇವು ರಾಜಸಿಕ ಪರಿಣಾಮಗಳನ್ನೂ ಬೀರುತ್ತವೆ. ಮೆದುಳಿನ ಮೇಲೆ ಪ್ರಭಾವ ಬೀರುವ, ಅದನ್ನು ಮಂಕುಗೊಳಿಸುವ ಪದಾರ್ಥಗಳೆಲ್ಲವೂ ತಾಮಸಿಕ ಆಹಾರವೆನಿಸುವುವು. ಮೆದುಳನ್ನು ಆವರಿಸಿರುವ ತಾಮಸಿಕ ಪೊರೆಯನ್ನು ಸರಿಸಲು ಶಾಂತ ಪರಿಸರ, ಸಾತ್ವಿಕ ಆಹಾರ ಸೇವನೆ ಮತ್ತು ಬದಲಾದ ಜೀವನಶೈಲಿಯಿಂದ ಸಾಧ್ಯವಿದೆ.
     ಅನ್ನದ ಮಹತ್ವವನ್ನು ಮತ್ತು ಅನ್ನವೆಂದರೆ ಕೇವಲ ನಾವು ಸೇವಿಸುವ ಆಹಾರ ಮಾತ್ರವಲ್ಲ ಎಂಬುದನ್ನೂ ಅರಿತೆವು. ಹಾಗೆಯೇ ನಾವು ನೋಡುವ, ಕೇಳುವ ಮತ್ತು ತಿನ್ನುವ ಅನ್ನವನ್ನು ಅವಲಂಬಿಸಿ ನಮ್ಮ ಗುಣ, ಸ್ವಭಾವಗಳು ರೂಪಿತವಾಗುತ್ತವೆ ಎಂಬುದನ್ನೂ ತಿಳಿದೆವು. ಒಂದು ಕೆಟ್ಟ ಸುದ್ದಿಯಿದೆ. ಅದೆಂದರೆ, ಮನುಷ್ಯನ ಸ್ವಭಾವಕ್ಕೂ ಆತನ ಹುಟ್ಟಿನ ಜಾತಿಗೂ ಯಾವುದೇ ಸಂಬಂಧವಿಲ್ಲ. ಹಿಂದುಳಿದಿರುವಿಕೆ ಅಥವ ಮುಂದುವರೆದಿರುವಿಕೆಗೆ ಜಾತಿ ಕಾರಣ ಅಲ್ಲವೇ ಅಲ್ಲ. ಜಾತಿ ಆಧಾರಿತವಾಗಿ ಇದನ್ನು ನಿರ್ಧರಿಸುವುದು ಕೇವಲ ಅಧಿಕಾರದ, ಸ್ವಾರ್ಥದ ಅಥವ ರಾಜಕೀಯ ಲಾಭಗಳಿಕೆಯ ಉದ್ದೇಶದಿಂದ ಮಾತ್ರವೇ ಆಗಿದೆ. ಒಂದು ಒಳ್ಳೆಯ ಸುದ್ದಿಯೂ ಇದೆ. ಅದೆಂದರೆ, ಸಾತ್ವಿಕರೇ ಬೇರೆ, ರಾಜಸಿಕರೇ ಬೇರೆ ಮತ್ತು ತಾಮಸಿಕರೇ ಬೇರೆ ಎಂದು ಪ್ರತ್ಯೇಕವಾಗಿ ಗುರುತಿಸಲ್ಪಡುವವರು ಇರುವದಿಲ್ಲ. ಪ್ರತಿಯೊಬ್ಬರೂ ಸಾತ್ವಿಕರೂ, ರಾಜಸಿಕರೂ ಮತ್ತು ತಾಮಸಿಕರೂ ಆಗಿರುತ್ತಾರೆ. ಅವರು ಈ ಮೂರೂ ಗುಣಗಳ ಮಿಶ್ರಣವಾಗಿರುತ್ತಾರೆ. ಕೆಲವರಲ್ಲಿ ಕೆಲವೊಂದು ಗುಣಗಳು ಪ್ರಧಾನವಾಗಿರುತ್ತವೆ. ಆ ಪ್ರಧಾನ ಗುಣಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಎಂತಹ ಒಳ್ಳೆಯ ಅವಕಾಶ! ನಾವು ಏನಾಗಬೇಕು, ಹೇಗಿರಬೇಕು ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಬಲ್ಲೆವು. ಅದನ್ನು ನಾವು ಸೂಕ್ತವಾಗಿ ಆರಿಸಿಕೊಳ್ಳುವ ಅನ್ನದ ಮೂಲಕ ಮತ್ತು ಬದಲಾಯಿಸಿಕೊಳ್ಳುವ ಜೀವನಶೈಲಿಯಿಂದ ಪಡೆದುಕೊಳ್ಳಬಲ್ಲೆವು. ಇಂತಹ ಕರುಣಾಮಯಿ ಅನ್ನಬ್ರಹ್ಮನಿಗೆ ನಮಸ್ಕಾರಗಳು.
-ಕ.ವೆಂ.ನಾಗರಾಜ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ