ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ನವೆಂಬರ್ 3, 2017

ನಗುವು ಸಹಜದ ಧರ್ಮ


     ಒಬ್ಬರು ಗುರು ತಮ್ಮ ಶಿಷ್ಯರಿಗೆ ನಿಜವಾಗಿಯೂ ವಿಕಾಸಗೊಂಡ ವ್ಯಕ್ತಿಯೆಂದರೆ ಅತ್ಯಂತ ಕಷ್ಟಗಳ ಮಧ್ಯೆಯೂ ಮಂದಹಾಸವನ್ನು ಮುಂದುವರೆಸಬಲ್ಲವರು ಎಂದು ಒಮ್ಮೆ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು. 'ತುಂಬಾ ಕಷ್ಟಗಳು, ತೊಂದರೆಗಳು ಬಂದಾಗ ನಗುವುದಾದರೂ ಹೇಗೆ ಸಾಧ್ಯ?' ಎಂಬ ಶಿಷ್ಯರ ಪ್ರಶ್ನೆಗೆ ಗುರು, "ನಾನು ನಿಮ್ಮ ಪ್ರಶ್ನೆಗೆ ಉತ್ತರಿಸಲಾರೆ. ನನಗೂ ಕಷ್ಟಗಳ ಸುಳಿಯಲ್ಲಿ ಸಿಕ್ಕಾಗ ನಗಲಾರದವನಾಗಿದ್ದೆ. ಎಷ್ಟೋ ಸಮಯ ನನಗೆ ನಗುವೇ ಮರೆತುಹೋಗಿತ್ತು. ನನಗೊಬ್ಬರು ವ್ಯಕ್ತಿ ಗೊತ್ತಿದ್ದಾರೆ. ಅವರು ತಬ್ಬಲಿ, ಕಾಲುಗಳಲ್ಲಿ ಸ್ವಾಧೀನವಿಲ್ಲದೆ ಓಡಾಡಲಾರರು. ಯಾರಾದರೂ ತಿನ್ನಲು ಕೊಟ್ಟರೆ ಉಂಟು. ಇಲ್ಲದಿದ್ದರೆ ಉಪವಾಸ. ಅವರು ಯಾರನ್ನೂ ಬೇಡುವುದಿಲ್ಲ. ತಮ್ಮ ಬಳಿ ಬಂದವರಿಗೆಲ್ಲಾ ಅವರ ಸಮಸ್ಯೆಗಳಿಗೆ ಸಮಾಧಾನ ಹೇಳುತ್ತಾರೆ. ಯಾವಾಗಲೂ ಹಸನ್ಮುಖಿಯಾಗಿರುತ್ತಾರೆ. ಅವರೇ ನಿಮಗೆ ಉತ್ತರ ಹೇಳಬಲ್ಲರು" ಎಂದು ಉತ್ತರಿಸುತ್ತಾರೆ. ಶಿಷ್ಯರು ಆ ವ್ಯಕ್ತಿಯನ್ನು ಹುಡುಕಿಕೊಂಡು ಹೋಗಿ ಅದೇ ಪ್ರಶ್ನೆಯನ್ನು ಅವರಿಗೆ ಕೇಳುತ್ತಾರೆ. ಆ ವ್ಯಕ್ತಿ ನಗುತ್ತಾ, "ನೀವು ಯಾರೋ ತಪ್ಪು ವ್ಯಕ್ತಿಯನ್ನು ವಿಚಾರಿಸುತ್ತಿದ್ದೀರಿ. ನನಗೆ ಯಾವ ಕಷ್ಟಗಳೂ ಇಲ್ಲ. ದೇವರು ನನ್ನ ಜೊತೆಯೇ ಇದ್ದು, ನನಗೆ ಏನು ಬೇಕೋ ಎಲ್ಲವನ್ನೂ ಒದಗಿಸಿದ್ದಾನೆ. ಕಷ್ಟಗಳೇ ಇಲ್ಲದಿರುವಾಗ, ಅದರ ಮಧ್ಯೆ ನಗುವುದನ್ನು ನಾನು ಹೇಗೆ ತಾನೆ ಹೇಳಬಲ್ಲೆ?" ಅಂದಿದ್ದರಂತೆ.  ಮಿತ್ರ ಎನ್. ಪ್ರಕಾಶರು  ಸೋಮವಾರದ ಪತ್ರ ಎಂಬ ಹೆಸರಿನಲ್ಲಿ ವಾರಕ್ಕೊಮ್ಮೆ ಸುವಿಚಾರದ ಬುತ್ತಿಯನ್ನು ಮಿತ್ರರೆಲ್ಲರಿಗೂ ಇ-ಅಂಚೆ ಮೂಲಕ ಹಂಚುತ್ತಿರುತ್ತಾರೆ. ಅಂತಹ ಒಂದು ಸೋಮವಾರದ ಪತ್ರದಲ್ಲಿ ಉದಾಹರಿಸಿದ್ದ ಸಂಗತಿ ಇದು. ಅವರ ಪತ್ರದಲ್ಲಿ ಉಲ್ಲೇಖಿಸಿದಂತಹ ಸಾಧಕರುಗಳು ಕಾಣಸಿಗುವುದು ಅಪರೂಪ. ಆದರೆ ಅಂತಹ ನಗುವನ್ನು ರೂಢಿಸಿಕೊಳ್ಳಲು ಸಾಧ್ಯವಿದೆ ಎಂಬ ಅಂಶಕ್ಕೆ ಇಲ್ಲಿ ಪ್ರಾಧಾನ್ಯವಿರುವುದು ವಿಶೇಷ.
     ನಿಜ, ನಗುವಿಗೆ ದೊಡ್ಡ ಶಕ್ತಿಯಿದೆ. ಅದಕ್ಕೆ ನಗುವವರ ಕಷ್ಟ ಮಾತ್ರವಲ್ಲ, ಅವರ ಎದುರಿಗೆ ಇರುವವರ ಕಷ್ಟಗಳನ್ನೂ ಮರೆಸುವ ಶಕ್ತಿ ಇದೆ. ನನ್ನ ಬಂಧು ಒಬ್ಬರು ಹಲ್ಲು ನೋವಿಗೆ ಚಿಕಿತ್ಸೆ ಪಡೆಯುವ ಸಲುವಾಗಿ ವೈದ್ಯರ ಕ್ಲಿನಿಕ್ಕಿಗೆ ಹೋದಾಗ ಅವರೊಡನೆ ನಾನೂ ಹೋಗಿದ್ದೆ. ಬಹಳಷ್ಟು ರೋಗಿಗಳು ಅಲ್ಲಿ ಹಾಕಿದ್ದ ಬೆಂಚುಗಳ ಮೇಲೆ ಕುಳಿತಿದ್ದರು. ಒಬ್ಬೊಬ್ಬರ ಮುಖವೂ ನೋವಿನಿಂದ ಕಿವಿಚಿತ್ತು. ಮುಖ ಗಂಟು ಹಾಕಿಕೊಂಡು ನರಳುತ್ತಿದ್ದವರೇ ಬಹುತೇಕರು. ಆಗ ಒಬ್ಬ ತಾಯಿ ಸಹ ಹಲ್ಲು ನೋವಿನ ಕಾರಣದಿಂದಾಗಿ ತನ್ನ ಎರಡು ವರ್ಷದ ಮಗುವಿನೊಂದಿಗೆ ಬಂದು ಕುಳಿತಳು. ಮಗು ಅಲ್ಲಿ ಕುಳಿತಿದ್ದ ಎಲ್ಲರನ್ನೂ ನೋಡಿತು. ಪಕ್ಕದಲ್ಲಿ ಕುಳಿತಿದ್ದ ಒಬ್ಬರು ವೃದ್ಧರನ್ನೂ ನೋಡಿ, ತಾತಾ ಎಂದಿತು. ಆ ಮುದುಕರು ಮಗುವಿನತ್ತ ತಿರುಗಿಯೂ ನೋಡಲಿಲ್ಲ. ಮಗು ಮತ್ತೊಮ್ಮೆ ಅವರನ್ನು ಮುಟ್ಟಿ 'ತಾತಾ' ಎಂದು ಕರೆಯಿತು. ಕರವಸ್ತ್ರದಿಂದ ಕೆನ್ನೆ ಹಿಡಿದುಕೊಂಡಿದ್ದ ಅವರು ಮಗುವಿನತ್ತ ಓರೆನೋಟ ಬೀರಿ ಮುಖವನ್ನು ಬೇರೆಡೆಗೆ ತಿರುಗಿಸಿಕೊಂಡರು. ಮಗು ಸುಮ್ಮನಿರಲಿಲ್ಲ. ತಾಯಿಯ ತೊಡೆಯಿಂದ ಕೆಳಗಿಳಿದು ಆ ಮುದುಕರ ಎದುರಿಗೆ ಬಂದು ಅವರನ್ನು ಮುಟ್ಟಿ ಮತ್ತೆ 'ತಾತಾ' ಎಂದಿತು. ಮುಖ ಯಾವ ಕಡೆಗೆ ತಿರುಗಿಸಿಕೊಂಡಿದ್ದರೋ ಆ ಕಡೆಗೇ ಬಗ್ಗಿ ನೋಡಿ ನಗಿಸಿತು. ಮುದುಕರಿಗೆ ಮಾತನಾಡಿಸದಿರಲು ಸಾಧ್ಯವಾಗಲಿಲ್ಲ. ಅವರೂ ನಗುತ್ತಾ, 'ಏನೋ ಪುಟ್ಟಾ' ಅಂದರು. ಮಗು ಕೇಕೆ ಹಾಕಿ ನಕ್ಕಿತು. ನಂತರ ಅವರಿಬ್ಬರೂ ಗೆಳೆಯರಾಗಿಬಿಟ್ಟರು. ಅಲ್ಲಿದ್ದ ಇತರರೂ ಅದನ್ನೆಲ್ಲಾ ಗಮನಿಸಿ ಸಂತೋಷಿಸುತ್ತಿದ್ದರು. ಮಗು ಎಲ್ಲರನ್ನೂ ಮಾತನಾಡಿಸುತ್ತಾ, ಕರೆದವರ ಬಳಿ ಕಣಿ ಮಾತನಾಡುತ್ತಾ ಇದ್ದಿತು. ಆ ಸಂದರ್ಭದಲ್ಲಿ ಯಾರಿಗೂ ಹಲ್ಲು ನೋವು ತೊಂದರೆ ಕೊಟ್ಟೇ ಇರಲಿಲ್ಲ. ಡಾಕ್ಟರರ ಕರೆ ಬಂದಾಗಲಷ್ಟೇ ಅವರಿಗೆ ಮತ್ತೆ ನೋವಿನ ನೆನಪಾಗಿತ್ತು. ನಿಷ್ಕಲ್ಮಷ ನಗುವಿನ ಶಕ್ತಿಯೇ ಅಂತಹದು!
     ಮಗುವಿನ ನಿಷ್ಕಲ್ಮಷ ನಗು ನಮಗೂ ಬರುವಂತೆ ಆದಾಗ ನಾವು ಸಾಧಕರಾಗುತ್ತೇವೆ. ಮಗುವಿಗೆ ಆ ನಗು ಬರಲು ಸಾಧ್ಯವಾದುದಾದರೂ ಹೇಗೆ? ಮಗುವಿಗೆ ಬಡವ-ಶ್ರೀಮಂತ, ಆ ಜಾತಿ-ಈ ಜಾತಿ, ಮೇಲು-ಕೀಳು, ದೊಡ್ಡವರು-ಚಿಕ್ಕವರು, ಕರಿಯ-ಬಿಳಿಯ ಇತ್ಯಾದಿ ಭೇದ ಮಾಡುವ ಬುದ್ಧಿ ಇರುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ದುಃಖವಾದಾಗ ಅಳುತ್ತದೆ, ಸಂತೋಷವಾದಾಗ ಮುಕ್ತವಾಗಿ ನಗುತ್ತದೆ. ಸಾಧಕರಲ್ಲೂ ಇಂತಹ ಗುಣ ಕಂಡುಬರುತ್ತದೆ. ನಗು ಅನ್ನುವುದು ಎಲ್ಲರ ಹೃದಯಗಳನ್ನು ತೆರೆಯಬಲ್ಲ ಮಾಸ್ಟರ್ ಕೀ, ಜೀವನವನ್ನು ಸುಂದರಗೊಳಿಸುವ ಅದ್ಭುತ ಸಾಧನ. ನಗುವನ್ನು ಮಗು ದೊಡ್ಡವರಿಂದ ಕಲಿಯುತ್ತದೋ ಅಥವ ದೊಡ್ಡವರು ಮಗುವಿನಿಂದ ನಗು ಕಲಿಯುತ್ತಾರೋ? ಈ ಪ್ರಶ್ನೆ ಸರಿಯಾಗುವುದಿಲ್ಲ. ಆದರೆ ಮಗುವಿನ ನಗುವಿನಿಂದ ದೊಡ್ಡವರು ಕಲಿಯಬೇಕು ಅನ್ನುವುದು ಒಳ್ಳೆಯ ಮಾತಾಗಬಹುದು. ದೊಡ್ಡವರ ನಗುವಾದರೋ ದೊಡ್ಡವರಾಗುತ್ತಾ, ಆಗುತ್ತಾ ಕಲುಷಿತಗೊಂಡುಬಿಡುತ್ತದೆ. ಆ ಕಲ್ಮಷವನ್ನು ಕಳೆದುಕೊಳ್ಳಬೇಕಾದರೆ ಮಗುವಿನಂತೆ ನಗುವ ಅಭ್ಯಾಸ ಮಾಡಿಕೊಳ್ಳಬೇಕು.
     ಮಂದಹಾಸ ಬೀರುವ ವ್ಯಕ್ತಿಗಳು ಎಲ್ಲರಿಗೂ ಇಷ್ಟವಾಗುತ್ತಾರೆ. ಆ ಮಂದಹಾಸ ದೂರದಲ್ಲೆಲ್ಲೂ ಇಲ್ಲ. ನಮ್ಮ ಮೂಗಿನ ಕೆಳಗೇ ಇದೆ. ಆದರೆ ಅದು ಅಲ್ಲಿದೆಯೆಂಬುದನ್ನು ನಾವು ಮರೆತುಬಿಟ್ಟಿರುತ್ತೇವೆ. ನಮ್ಮ ಮತ್ತು ನಮ್ಮ ಸುತ್ತಮುತ್ತಲಿನವರ ಸಂತೋಷದ ಸಲುವಾಗಿ, ಬಿಗಿಯಾದ ವಾತಾವರಣವನ್ನು ಸಡಿಲುಗೊಳಿಸುವ ಸಲುವಾಗಿ ಸ್ವಭಾವತಃ ಗಂಭೀರ ಸ್ವಭಾವದವರಾದ ನನ್ನಂತಹವರೂ ಸೇರಿದಂತೆ ಎಲ್ಲರೂ ಮಂದಹಾಸವನ್ನು ಮುಖದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡಲೇಬೇಕು. ಯಾರಾದರೂ ನಮ್ಮ ಸ್ನೇಹಿತರ ಬಳಿಯಲ್ಲಿ ಆ ನಗು ಇರದಿದ್ದರೆ ನಮ್ಮಲ್ಲಿರುವ ನಗುವನ್ನೇ ಅವರಿಗೆ ಹಂಚಬಹುದು. ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ ಎಂಬ ಆಡುಮಾತಿನಲ್ಲಿ ಸತ್ಯವಿದೆ. ಭಾಷೆಗಳು ನೂರಾರು ಇರಬಹುದು. ಆದರೆ ನಗುವಿನ ಭಾಷೆ ಎಲ್ಲರಿಗೂ ಅರ್ಥವಾಗುತ್ತದೆ. ಮಾತು, ಭಾಷೆ ಅರ್ಥವಾಗದಿದ್ದರೂ ನಗು ಪರಸ್ಪರರಲ್ಲಿ ಆತ್ಮೀಯತೆ ಬೆಸೆಯಬಲ್ಲದು. ಸಂತೋಷವಿದ್ದಾಗ ನಗು ಸಹಜವಾಗಿ ಬರುತ್ತದೆ. ನಗುವಿನಿಂದಲೂ ಸಂತೋಷ ಬರುತ್ತದೆ. ಸೋತರೂ ನಗುವಂತಹವರನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ. ಅಕ್ಕ ಪಕ್ಕದಲ್ಲಿರುವ ಎರಡು ದಿನಸಿ ಅಂಗಡಿಗಳಲ್ಲಿ ಒಂದರಲ್ಲಿ ಜನ ತುಂಬಿ ತುಳುಕಿರುತ್ತಾರೆ, ಇನ್ನೊಂದರಲ್ಲಿ ಎಲ್ಲಾ ಪದಾರ್ಥಗಳು ಇದ್ದರೂ ಜನರೇ ಇರುವುದಿಲ್ಲದಂತಹ ಅಂಗಡಿಗಳು ನಮ್ಮ ಗಮನಕ್ಕೆ ಬಂದಿರುತ್ತವೆ. ವ್ಯತ್ಯಾಸ ಇಷ್ಟೆ, ಜನ ತುಂಬಿರುವ ಅಂಗಡಿಯವನು ಎಲ್ಲರನ್ನೂ ಸಮಾಧಾನದಿಂದ ನಗುತ್ತಾ ಮಾತನಾಡಿಸುತ್ತಾನೆ. ಇನ್ನೊಬ್ಬನಲ್ಲಿ ಆ ಗುಣ ಇರುವುದಿಲ್ಲ. ವ್ಯತ್ಯಾಸ ಅರ್ಥವಾದರೆ, ನಾವೂ ನಮ್ಮ ಸ್ವಭಾವವನ್ನು ಸೂಕ್ತವಾಗಿ ಬದಲಾಯಿಸಿಕೊಳ್ಳಬಹುದಲ್ಲವೇ? ಇಂತಹ ಸಂಗತಿಗಳೇ ನಮಗೆ ಗುರುವಾಗಬೇಕು.
     ನಗುವಿನಲ್ಲೂ ನಾನಾ ವಿಧಗಳು! ಮೋಹಕ ನಗು, ಬೂಟಾಟಿಕೆಯ ನಗು, ವ್ಯಂಗ್ಯ ನಗು, ಮದಭರಿತ ಕೊಂಕು ನಗು, ಮುಸುಕಿನ ನಗು, ಮುಖವಾಡದ ನಗು, . . ಇನ್ನೆಷ್ಟೋ ಬಗೆಯ ನಗುಗಳು! ಆದರೆ ನಗುವಿನ ರಾಜ ನಿಷ್ಕಲ್ಮಷ ನಗು, ಮಗುವಿನ ನಗು! ಒಂದು ತಮಾಷೆಯೆಂದರೆ ನಗುವವರನ್ನು ಇತರರು ತಮಗಿಂತ ಉತ್ತಮ ಸ್ಥಿತಿಯಲ್ಲಿರುವವರೆಂದು ಭಾವಿಸುತ್ತಾರೆ. ನಮ್ಮ ನಗುವಿನ ಮೂಲಕ ನಮ್ಮ ಹೃದಯದಲ್ಲಿನ ಪ್ರೀತಿಯನ್ನು ಸುತ್ತಮುತ್ತಲಿನವರಿಗೆ ವ್ಯಕ್ತಪಡಿಸಿದರೆ, ಇತರರೂ ನಮ್ಮನ್ನು ಆದರದಿಂದ ಕಂಡೇ ಕಾಣುತ್ತಾರೆ. ನೂರಕ್ಕೆ ನೂರರಷ್ಟು ಸತ್ಯದ ಮಾತಿದು. ಸ್ವತಃ ಪರೀಕ್ಷೆ ಮಾಡಿ, ಫಲ ಕಂಡುಕೊಳ್ಳಿ. ಶತಾಯುಷಿ ಪಂ. ಸುಧಾಕರ ಚತುರ‍್ವೇದಿಯವರು ಸತ್ಸಂಗಗಳಲ್ಲಿ ಹೇಳುತ್ತಿರುತ್ತಾರೆ, "ನಗುವುದು ಮತ್ತು ನಗಿಸುವುದು ಧರ್ಮ. ಅಳುವುದು ಪಾಪ. ಪಾಪ ಮಾಡಬೇಡಿ; ನೀವೂ ನಗಿ, ಇತರರನ್ನೂ ನಗಿಸುತ್ತಾ ಉತ್ತಮ ಮಾನವರಾಗಿ ಬಾಳಿ". ನಗುವುದು ಅಭ್ಯಾಸವಾದರೆ ಕಷ್ಟಗಳೂ ನಮ್ಮನ್ನು ಕಂಡು ದೂರ ಸರಿಯುತ್ತವೆ.
-ಕ.ವೆಂ. ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ