ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ನವೆಂಬರ್ 8, 2017

ಹಠಮಾರಿ ಮನಸ್ಸು


     ಒಬ್ಬ ಸಾಧಕನಿಗೆ ಅಷ್ಟೈಶ್ವರ್ಯ ಸಿದ್ಧಿ ಮಂತ್ರ ಗೊತ್ತಿತ್ತಂತೆ. ಅದನ್ನು ಆತ ಯಾರಿಗೂ ಹೇಳಿಕೊಡುತ್ತಿರಲಿಲ್ಲವಂತೆ. ಒಬ್ಬ ವ್ಯಕ್ತಿಗೆ ಆ ಸಾಧಕನನ್ನು ಹೇಗಾದರೂ ಒಲಿಸಿ ಮಂತ್ರವನ್ನು ಕಲಿಯಬೇಕೆಂದು ಮನಸ್ಸಾಗಿ ಆತನ ಹತ್ತಿರ ಹೋಗಿ ತನ್ನ ಇಷ್ಟವನ್ನು ಬಿನ್ನವಿಸಿಕೊಂಡು ತನಗೆ ಮಂತ್ರೋಪದೇಶ ಮಾಡುವಂತೆ ಗೋಗರೆದ. ತನಗೆ ಅಂತಹ ಯಾವುದೆ ಮಂತ್ರ ಗೊತ್ತಿಲ್ಲವೆಂದು ಸಾಧಕ ಹೇಳಿದರೂ ನಂಬದ ವ್ಯಕ್ತಿ ಪಟ್ಟು ಬಿಡದೆ ಅವನ ಸೇವೆ ಮಾಡುತ್ತಲೇ ಇದ್ದು ಸಾಧಕನನ್ನು ಪೀಡಿಸುತ್ತಲೇ ಇದ್ದ. ಅವನ ಕಾಟ ತಡೆಯಲಾರದೆ ಒಂದು ದಿನ ಆ ಸಾಧಕ ಒಂದು ಚೀಟಿಯಲ್ಲಿ ಏನನ್ನೋ ಬರೆದು ವ್ಯಕ್ತಿಯ ಕೈಗೆ ಮಡಿಸಿ ಕೊಟ್ಟು ಹೇಳಿದನಂತೆ, "ಈ ಚೀಟಿಯನ್ನು ಬಿಡಿಸಿ ನೋಡುವಾಗ ಯಾವುದೇ ಕಾರಣಕ್ಕೂ ನಿನಗೆ ಕೋತಿಯ ನೆನಪು ಬರಬಾರದು. ಹಾಗಾದರೆ ಮಾತ್ರ ನಿನಗೆ ಮಂತ್ರ ಸಿದ್ಧಿಯಾಗುತ್ತದೆ". ಆ ವ್ಯಕ್ತಿ, "ಹಾಗೆಯೇ ಆಗಲಿ. ಧನ್ಯವಾದಗಳು, ಗುರೂಜಿ. ನಾನು ಕೋತಿಯನ್ನು ಏಕೆ ನೆನೆಸಿಕೊಳ್ಳಲಿ? ಯಾವತ್ತೂ ನಾನು ಕೋತಿಯ ಬಗ್ಗೆ ಚಿಂತಿಸಿಯೇ ಇಲ್ಲ" ಎನ್ನುತ್ತಾ ಸಂಭ್ರಮದಿಂದ ಮನೆಗೆ ಹೊರಟ. ಆಗಲೇ ಶುರುವಾಯಿತು ನೋಡಿ, ಕೋತಿಯ ಕಾಟ! ಅವನು ಕೋತಿಯನ್ನು ಜ್ಞಾಪಿಸಿಕೊಳ್ಳಬಾರದು ಎಂದು ಅಂದುಕೊಂಡಷ್ಟೂ ಬರೀ ಕೋತಿಗಳೇ ಅವನ ಕಣ್ಣಮುಂದೆ ಕುಣಿಯತೊಡಗಿದ್ದವು. ಮನೆಗೆ ಹೋಗಿ ಚೀಟಿ ತೆಗೆಯಲು ಜೇಬಿಗೆ ಕೈಹಾಕುತ್ತಿದ್ದಾಗಲೇ ಅವನಿಗೆ ಕೋತಿಯ ನೆನಪಾಗುತ್ತಿತ್ತು. ಎಷ್ಟು ಸಲ ಪ್ರಯತ್ನಿಸಿದರೂ ಹಾಗೆಯೇ ಅಗುತ್ತಿತ್ತು. ಕೋತಿಯ ನೆನಪಿನಿಂದ ಅವನಿಗೆ ಬಿಡುಗಡೆಯೇ ಸಿಗಲಿಲ್ಲ. ಒಂದು ತಿಂಗಳು, ಎರಡು ತಿಂಗಳು, ವರ್ಷ ಕಳೆದರೂ ಅವನಿಗೆ ಚೀಟಿ ತೆಗೆಯಲು ಸಾಧ್ಯವೇ ಆಗಲಿಲ್ಲ. ಅವನಿಗೆ ಹತಾಶೆ, ಸಿಟ್ಟು ಹೆಚ್ಚಾಗಿ ಮತ್ತೆ ಸಾಧಕನಲ್ಲಿಗೆ ಬಂದು ಚೀಟಿಯನ್ನು ಅವರ ಮುಂದೆ ಎಸೆದು ಹೇಳಿದ್ದ, "ನೀವು ಕೋತಿಯ ಬಗ್ಗೆ ಹೇಳದೆ ಚೀಟಿ ಕೊಟ್ಟಿದ್ದರೆ ನಿಮ್ಮ ಗಂಟೇನು ಹೋಗುತ್ತಿತ್ತು? ನನಗೆ ಮೋಸ ಮಾಡಿದಿರಿ". ಇಲ್ಲಿ ಮೋಸ ಮಾಡಿದ್ದು ಯಾರು? ನಿಮ್ಮ ಅನಿಸಿಕೆ ಸರಿ, ಯಾವುದನ್ನು ಮಾಡಬಾರದು ಎನ್ನುತ್ತಾರೋ ಅದರ ಬಗ್ಗೆಯೇ ಯೋಚಿಸುವ ಮನಸ್ಸು ನಿಜವಾದ ಮೋಸಗಾರ!
     ನಮ್ಮ ಎಲ್ಲಾ ಸಮಸ್ಯೆಗಳು, ಕಷ್ಟಗಳ ಮೂಲವೇ ಚಂಡಿ ಹಿಡಿಯುವ ಮನಸ್ಸಿನದಾಗಿದೆ. ಬೆಳಿಗ್ಗೆ ಬೇಗ ಎದ್ದು ವಾಕಿಂಗಿಗೆ ಹೋಗುವುದು, ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಗೊತ್ತಿರುತ್ತದೆ. ಬೇಗ ಏಳಬೇಕೆಂದು ಅಲಾರಂ ಇಟ್ಟುಕೊಳ್ಳುತ್ತೇವೆ. ಅಲಾರಮ್ ಹೊಡೆದಾಗ ಅದನ್ನು ನಿಲ್ಲಿಸಿ, ಇನ್ನೊಂದೈದು ನಿಮಿಷ ಎಂದುಕೊಂಡು ಮಲಗಿಕೊಂಡರೆ ಮತ್ತೆ ಎಚ್ಚರವಾಗುವುದು ದಿನಾ ಏಳುವ ಸಮಯಕ್ಕೇ! ಬೆಳಗಿನ ಜಾವದ ಐದು ನಿಮಿಷ ಎಂದರೆ ಕನಿಷ್ಠ ಒಂದು ಗಂಟೆ ಆಗಿರುತ್ತದೆ! ಕುಡಿಯುವುದು ಕೆಟ್ಟದ್ದು ಎಂದು ಕುಡುಕರಿಗೆ ಗೊತ್ತಿರುವುದಿಲ್ಲವೇ? ಸಿಗರೇಟು, ತಂಬಾಕು ಸೇವನೆ ಕ್ಯಾನ್ಸರ್ ತರುತ್ತದೆ ಎಂದು ಸೇದುವವರಿಗೆ ತಿಳಿದಿರುವುದಿಲ್ಲವೇ? ಆದರೂ ಅವರುಗಳು ಕುಡಿಯತ್ತಾರೆ, ಸಿಗರೇಟು ಸೇದುತ್ತಾರೆ. ಅವರುಗಳಿಗೆ ತಮಗೆ ಕೆಟ್ಟದಾಗಬೇಕು ಎಂದಿರುತ್ತದೆಯೇ? ಹಾಗೆ ಮಾಡಬಾರದು ಎಂದು ಹೇಳುವ ಮನಸ್ಸೇ ಹಾಗೆ ಮಾಡು ಎಂದು ಉತ್ತೇಜಿಸುತ್ತದೆ.
     ರಾವಣ ವಿದ್ವಾಂಸನಾಗಿದ್ದ, ಸರಿ, ತಪ್ಪುಗಳ ವಿವೇಚನೆ ಮಾಡುವ ಶಕ್ತಿ ಇತ್ತು. ಆದರೂ ಆತ ಸೀತೆಯನ್ನು ಅಪಹರಿಸಿದ. ಪರಸ್ತ್ರೀ ವ್ಯಾಮೋಹ ಸರಿಯಲ್ಲವೆಂದು ತಿಳಿದಿದ್ದರೂ ಆತ ತನ್ನ ಸಮಾಧಾನಕ್ಕಾಗಿ ಸೀತೆಯೇ ತಾನಾಗಿ ತನ್ನನ್ನು ಒಲಿಯುವವರೆಗೆ ಕಾಯಲು ನಿರ್ಧರಿಸಿದ್ದ. ವಿಭೀಷಣ ಮುಂತಾದವರ ಹಿತನುಡಿಗಳನ್ನು ಕೇಳಲು ಅವನು ತಯಾರಿರಲಿಲ್ಲ ಅನ್ನುವುದಕ್ಕಿಂತ ಹಠ ಹಿಡಿದಿದ್ದ ಅವನ ಮನಸ್ಸು ಅವನಿಗೆ ಅವಕಾಶ ಕೊಡಲಿಲ್ಲ. 'ಇಂದ್ರಿಯಾಣಿ ಪುರಾ ಜಿತ್ವಾ ಜಿತಂ ತ್ರಿಭುವನಂ ತ್ವಯಾ| ಸ್ಮರದ್ಧಿರಿವ ತದ್ವೈರಮಿಂದ್ರಿಯೈರೇವ ನಿರ್ಜಿತ:||' (ವಾ.ರಾ.ಯು.ಕಾಂ.೧೧೪.೧೮) ರಾಮನಿಂದ ರಾವಣನ ವಧೆಯಾದಾಗ ಆತನ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡು ರೋದಿಸಿದ ಮಂಡೋದರಿ ಹೇಳಿದ್ದ ಮಾತುಗಳಿವು: 'ನೀನು ಮೊದಲು ಇಂದ್ರಿಯಗಳನ್ನು ಜಯಿಸಿ ಮೂಲೋಕಗಳಿಗೆ ಒಡೆಯನಾದೆ. ಆ ಇಂದ್ರಿಯಗಳು ಅದನ್ನು ನೆನಪಿನಲ್ಲಿಟ್ಟುಕೊಂಡಿದ್ದವೋ ಎಂಬಂತೆ ನಿನ್ನ ಮೇಲೆ ದ್ವೇಷ ಸಾಧಿಸಿ ನಿನ್ನನ್ನು ಗೆದ್ದವು'. ರಾವಣನ ಚಂಡಿ ಮನಸ್ಸು ಬುದ್ಧಿಯ ಮಾತುಗಳನ್ನು ಕೇಳದಿದ್ದರಿಂದ ಅವನ ಅಂತ್ಯವಾಗಿತ್ತು! ದುರ್ಯೋಧನನೂ ಹೀಗೆಯೇ ಹಠ ಮಾಡಿದ್ದರಿಂದ ಮತ್ತು ಗುರು-ಹಿರಿಯರ ಮಾತುಗಳನ್ನು ಧಿಕ್ಕರಿಸಿ ತನ್ನ ಮನಸ್ಸಿನ ಹಠದಂತೆಯೇ ನಡೆದುಕೊಂಡದ್ದರಿಂದ ಅವನ ಮತ್ತು ಅವನನ್ನು ಅನುಸರಿಸಿದವರ ಸರ್ವನಾಶಕ್ಕೆ ಕಾರಣವಾಯಿತು.
     ಗಾಂಧೀಜಿಯವರು ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿರುವ ಕೆಲವು ಸಂಗತಿಗಳು, ವಿಶೇಷವಾಗಿ ಕಾಮ ಮತ್ತು ಬ್ರಹ್ಮಚರ್ಯದ ವಿಚಾರಗಳು ಚಂಡಿ ಮನಸ್ಸಿನ ಪ್ರತಾಪವೇ ಎಂದೆನಿಸುತ್ತದೆ. ಗಾಂಧಿಯವರ ತಂದೆ ಮರಣಶಯ್ಯೆಯಲ್ಲಿದ್ದಾಗಲೂ ಗಾಂಧಿ ತಮ್ಮ ಪತ್ನಿಯೊಂದಿಗೆ ಮಲಗುತ್ತಿದ್ದರಂತೆ. ಇಂತಹ ಒಂದು ಸಂದರ್ಭದಲ್ಲೇ ಅವರ ತಂದೆ ಮೃತರಾದದ್ದು ಅವರಲ್ಲಿ ತಪ್ಪಿತಸ್ಥ ಮನೋಭಾವವನ್ನು ಉಂಟುಮಾಡಿತ್ತಂತೆ. ಮುಂದಿನ ದಿನಗಳಲ್ಲಿ ಅವರು ಬ್ರಹ್ಮಚರ್ಯಪಾಲನೆಗೆ ಒತ್ತು ಕೊಟ್ಟು ಮಾತನಾಡುತ್ತಿದ್ದರಂತೆ. ತಮ್ಮ ಕಾಮನಿಗ್ರಹ ಶಕ್ತಿಯನ್ನು ಪರೀಕ್ಷಿಸಲು ನಗ್ನ ಮಹಿಳೆಯರ ಪಕ್ಕದಲ್ಲಿ ನಗ್ನರಾಗಿ ಮಲಗುತ್ತಿದ್ದ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ಅವರೇನೋ ತಮ್ಮ ಶಕ್ತಿಯನ್ನು ಪರೀಕ್ಷಿಸಿಕೊಂಡರು ಎಂದುಕೊಳ್ಳೋಣ. ಅವರ ಪಕ್ಕ ಮಲಗುತ್ತಿದ್ದವರೂ ಅದೇ ರೀತಿ ಪರೀಕ್ಷೆಗೆ ಒಳಗಾಗುವ ಮನಸ್ಥಿತಿ ಹೊಂದಿದ್ದರೇ ಎಂಬುದು ಯಾರಿಗೆ ತಿಳಿದಿದೆ? ಮನಃಶಾಸ್ತ್ರಜ್ಞರು ಇಂತಹ ವಿಚಾರದ ಬಗ್ಗೆ ಬೆಳಕು ಚೆಲ್ಲಲು ಅವಕಾಶವಿದೆ. ಅವರ ಅದುಮಿಟ್ಟ ಕಾಮದ ಭಾವನೆಗಳು ಈ ರೀತಿ ಹೊರಹೊಮ್ಮಿತ್ತೇ? ಈ ವಿಚಾರದಲ್ಲಿ ಹೆಚ್ಚು ಚರ್ಚಿಸುವುದು ಸೂಕ್ತವಾಗಲಾರದಾದರೂ ಅವರೇ ಪ್ರಸ್ತಾಪಿಸಿದ್ದ ಸಂಗತಿಗಳಾದ್ದರಿಂದ ಓದುಗರು ತಮಗೆ ತಿಳಿದಂತೆ ವಿಶ್ಲೇಷಣೆ ಮಾಡಿಕೊಳ್ಳಬಹುದು. ಇಷ್ಟಂತೂ ಸತ್ಯ, ಕಾಮವನ್ನು ಕಾಮದಿಂದ ಹತ್ತಿಕ್ಕುವುದು ಅಸಾಧ್ಯ. ಕ್ಷಣಿಕ ಆಸೆಗಳಿಗೆ ಬಲಿಬಿದ್ದು ಜೀವನವನ್ನೇ ಹಾಳು ಮಾಡಿಕೊಂಡವರಿದ್ದಾರೆ. ತಪ್ಪು ಎಂದು ಗೊತ್ತಿದ್ದರೂ ತಪ್ಪೆಸಗಲು ಪ್ರೇರಿಸುವುದು ಹಟಮಾರಿ ಮನಸ್ಸೇ ಆಗಿರುತ್ತದೆ.
     ಹಠಮಾರಿ ಮನಸ್ಸು ಕೇವಲ ಕೆಟ್ಟದ್ದನ್ನೇ ಮಾಡುತ್ತದೆ ಎಂತಲೂ ಹೇಳಲುಬರುವುದಿಲ್ಲ. ಯಾರಾದರೂ ಏನಾದರೂ ವಿಷಯದ ಬಗ್ಗೆ 'ಹೀಗೆ ಮಾಡಬೇಡ' ಎಂದರೆ 'ಏತಕ್ಕೆ ಮಾಡಬಾರದು?' ಎಂಬ ಪ್ರಶ್ನೆ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಮಾಡಬಾರದು ಎನ್ನುವ ವಿಷಯ ಮಾಡಬಾರದಂತಹ ಕೆಲಸವಾಗಿದ್ದರೆ ಹೇಳುವುದರಲ್ಲಿ ಅರ್ಥವಿರುತ್ತದೆ. ಆದರೆ ಒಳ್ಳೆಯ ಕೆಲಸವಾಗಿದ್ದು ಕಾರಣರಹಿತ ಅಡ್ಡಿಯಿದ್ದರೆ ಅದನ್ನು ಧಿಕ್ಕರಿಸಿ ಮಾಡಲು ಮನಸ್ಸು ಪ್ರಚೋದಿಸುತ್ತದೆ, ಸವಾಲು ಎಂಬಂತೆ ಸ್ವೀಕರಿಸಿ ಮುನ್ನುಗ್ಗಲು ಹೇಳುತ್ತದೆ. ಸವಾಲು ಸ್ವೀಕರಿಸಿ ಮುನ್ನಡೆಯುವವರು ಸಾಧಕರ ಸಾಲಿಗೆ ಸೇರುತ್ತಾರೆ. ಸಾಧಕರು ಅಡ್ಡಿಯಿಲ್ಲದ ಕೆಲಸಗಳಿಗಿಂತ ಅಡ್ಡಿಯಿರುವ ಕೆಲಸಗಳಲ್ಲಿ ಹೆಚ್ಚು ಸಾಧನೆ ತೋರುತ್ತಾರೆ. ಅಂತಹ ಸಾಧನೆಯ ಹಿಂದಿರುವುದೂ ಅವರ ಹಠ ಹಿಡಿಯುವ ಮನಸ್ಸೇ!
     ನಾನು ಅಂದರೆ ಮನಸ್ಸು ಎಂದು ಅಂದುಕೊಂಡರೆ ನಾವು ಮನಸ್ಸಿನ ಯಜಮಾನರಾಗಿರಬೇಕು. ಆದರೆ ಹಾಗೆ ಇದೆಯೇ? ಮನಸ್ಸು ವಿವಿಧ ದಿಕ್ಕುಗಳಲ್ಲಿ ಹೊಯ್ದಾಡುತ್ತಲೇ ಇರುತ್ತದೆ. ಮನಸೆಂಬ ಗಾಳಿ ಬೀಸಿದೆಡೆಗೆ ನಾವು ಹೋಗುತ್ತಿರುತ್ತೇವೆ. ಮನಸ್ಸು ನಮ್ಮ ಯಜಮಾನನಂತೆ ವರ್ತಿಸುತ್ತದೆ. ಆದ್ದರಿಂದ ಮನಸ್ಸು ಅನ್ನುವುದು ನಾನು ಹೇಳಿದಂತೆ ಕೇಳದಿದ್ದಾಗ, ಮನಸ್ಸು ಅನ್ನುವುದು ನಮ್ಮ ನಿಜವಾದ ನಾನು ಆಗಲಾರದು. ಯಜಮಾನರೆನಿಸಿಕೊಳ್ಳಬೇಕೆಂದರೆ ಅದರ ಮೇಲೆ ನಮ್ಮ ನಿಯಂತ್ರಣವಿರಬೇಕು. ನಾವು ಹೇಳಿದಂತೆ ನಮ್ಮ ಮನಸ್ಸು ಕೇಳುವಂತಾದರೆ ಒಳಿತಾದೀತು. ಬಾಲವೇ ನಾಯಿಯನ್ನು ಆಡಿಸಿದಂತೆ ಮನಸ್ಸು ಹೇಳಿದಂತೆ ಕುಣಿದರೆ ಅನರ್ಥ ಕಟ್ಟಿಟ್ಟ ಬುತ್ತಿ!
-ಕ.ವೆಂ. ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ