ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ನವೆಂಬರ್ 12, 2017

ಸಂಕುಚಿತತೆಯ ಬೇಲಿ ಕಿತ್ತೊಗೆಯಬೇಕಿದೆ!


     "ಈಗಲೂ ನಮ್ಮ ರೀತಿ-ನೀತಿಗಳನ್ನು ಬದಲಾಯಿಸಿಕೊಳ್ಳಲು ಸಮಯವಿದೆ. ಅರ್ಥವಿಲ್ಲದ, ಸ್ವಭಾವತಃ ವಿವೇಕಯುತವಲ್ಲದ ಸಂಗತಿಗಳ ಕುರಿತು ಎಲ್ಲಾ ಹಳೆಯ ಚರ್ಚೆಗಳನ್ನು, ಹಳೆಯ ಸಂಘರ್ಷಗಳನ್ನು ಬಿಟ್ಟುಬಿಡಬೇಕು. ಹಿಂದಿನ ಆರು ಅಥವ ಏಳು ಶತಮಾನಗಳಲ್ಲಿ ಆಗಿರುವ ಕೆಳಗೆ ಜಾರುವ ಪ್ರಕ್ರಿಯೆಗಳ ಬಗ್ಗೆ, ನಾವು ಒಂದು ಲೋಟ ನೀರನ್ನು ಬಲಗೈಯಿಂದ ಕುಡಿಯಬೇಕೋ, ಎಡಗೈಯಿಂದ ಕುಡಿಯಬೇಕೋ, ನಾವು ಐದು ಸಲ ಬಾಯಿ ಮುಕ್ಕಳಿಸಬೇಕೋ, ಆರು ಸಲವೋ, ಎಂಬಂತಹ ಚರ್ಚೆಗಳ ಬಗ್ಗೆ ಹಿರಿಯರು ಹಲವಾರು ವರ್ಷಗಳವರೆಗೆ ನಡೆಸಿದ ಚರ್ಚೆಗಳ ಬಗ್ಗೆ  ಯೋಚಿಸಿ, ಇಂತಹ ಕ್ಷುಲ್ಲಕ ಸಂಗತಿಗಳ ಬಗ್ಗೆ ತಲೆ ಕೆಡಿಸಿಕೊಂಡು ಜೀವಿಸಿದ ಮತ್ತು ಅವುಗಳ ಕುರಿತು ದರ್ಶನ ಗ್ರಂಥಗಳನ್ನು ಬರೆದಂತಹ ಜನರಿಂದ ನಾವು ಏನು ತಾನೇ ನಿರೀಕ್ಷಿಸಬಲ್ಲೆವು? ನಮ್ಮ ಧರ್ಮ ಅಡುಗೆಮನೆಯನ್ನು ಸೇರಿಕೊಳ್ಳುವ ಅಪಾಯವಿದೆ. ನಾವು ಹೆಚ್ಚಿನವರು ವೇದಾಂತಿಗಳೂ ಅಲ್ಲ, ಅತ್ತ ಪುರಾಣಿಕರೂ ಅಲ್ಲ ಅಥವ ತಾಂತ್ರಿಕರೂ ಅಲ್ಲ. ನಾವು ಕೇವಲ ಅಸ್ಪೃಷ್ಯರು. ನಮ್ಮ ಧರ್ಮ ಅಡುಗೆಮನೆಯಲ್ಲಿದೆ. ನಮ್ಮ ದೇವರೆಂದರೆ ಅಡುಗೆ ಮಾಡುವ ಪಾತ್ರೆ ಮತ್ತು ನಮ್ಮ ಧರ್ಮವೆಂದರೆ, 'ನನ್ನನ್ನು ಮುಟ್ಟಬೇಡ, ನಾನು ಪವಿತ್ರ'. ಇದು ಇನ್ನು ಒಂದು ಶತಮಾನದವರೆಗೆ ಮುಂದುವರೆದರೆ, ನಮ್ಮಲ್ಲಿ ಪ್ರತಿಯೊಬ್ಬರೂ ಹುಚ್ಚಾಸ್ಪತ್ರೆಯಲ್ಲಿರಬೇಕಾಗುತ್ತದೆ. ಜೀವನದ ದೊಡ್ಡ ಸಮಸ್ಯೆಗಳ ಬಗ್ಗೆ ಗ್ರಹಿಸಲಾಗದಿರುವುದು ನಮ್ಮ ಮೆದುಳು ಬಲಹೀನವಾಗುತ್ತಿರುವ ಸ್ಪಷ್ಟ ಚಿಹ್ನೆ; ನಮ್ಮ ಮೂಲಸ್ವಭಾವ ಕಳೆದುಹೋಗುತ್ತದೆ, ಮೆದುಳು ತನ್ನೆಲ್ಲಾ ಶಕ್ತಿಯನ್ನು, ಚಟುವಟಿಕೆಗಳನ್ನು ಕಳೆದುಕೊಳ್ಳುತ್ತದೆ ಮತ್ತು ಅದು ತಾನು ಕಾಣುವ ಕೇವಲ ಅತ್ಯಂತ ಸಣ್ಣ ತಿರುವಿನ ಸುತ್ತಲೇ ಸುತ್ತುತ್ತಿರಲು ಹವಣಿಸುತ್ತದೆ."
     ಮೇಲಿನ ಮಾತುಗಳನ್ನು ಆಡಿದವರು ಬೇರೆ ಯಾರೂ ಅಲ್ಲ, ಸ್ವಾಮಿ ವಿವೇಕಾನಂದರು! ಅವರು ಈ ಮಾತುಗಳನ್ನು ಹೇಳಿ ಒಂದೂವರೆ ಶತಮಾನವೇ ಕಳೆದಿದೆ. ಅವರ ಮಾತು ನಿಜವಾಗುತ್ತಿದೆಯೆಂಬಂತೆ ಇಂದು ವಿಚಾರಗಳನ್ನು ಬದಿಗಿಟ್ಟು ಕುರುಡು ಆಚಾರಗಳನ್ನೇ ಪಾಲಿಸಿಕೊಂಡು ಬರುತ್ತಾ, ಅದನ್ನೇ ಇತರರ ಮೇಲೆ ಹೇರುವ ಪ್ರಯತ್ನಗಳು ಬಲವಾಗಿ ಮಾನವತ್ವ ಕಡೆಗಣಿತವಾಗುತ್ತಿದೆ ಮತ್ತು ಮೆದುಳು ವಿಚಾರ ಮಾಡುವ ಶಕ್ತಿಯನ್ನೇ ಕಳೆದುಕೊಂಡಿದೆಯೇನೋ ಎಂದು ಭಾಸವಾಗುತ್ತಿದೆ. ನಮ್ಮ ಧರ್ಮವೇ ಬೇರೆ, ನಾವೇ ಬೇರೆ, ನಮ್ಮ ಜಾತಿಯೇ ಬೇರೆ, ನಮ್ಮ ಮತವೇ ಬೇರೆ, ನಮ್ಮ ರೀತಿಯೇ ಬೇರೆ ಇತ್ಯಾದಿ ವಾದಗಳಲ್ಲಿ ಎಲ್ಲವನ್ನೂ ಬೇರೆ ಬೇರೆ ಮಾಡುತ್ತಾ ಸಮಾಜವನ್ನು ಒಗ್ಗೂಡಿಸಬೇಕಾದ ಸಂಗತಿಗಳೇ ಸಮಾಜವನ್ನು ವಿಘಟಿಸುವ ಹಂತಕ್ಕೆ ತಂದಿವೆ. ಇಷ್ಟೇ ಆದರೆ ಪರವಾಗಿಲ್ಲ, ಎಲ್ಲರೂ ನಮ್ಮ ವಾದವನ್ನೇ ಒಪ್ಪಬೇಕು, ನಮ್ಮ ವಿಚಾರವನ್ನೇ ಅಂಗೀಕರಿಸಬೇಕು ಎನ್ನುವ ಹಟ ಎಲ್ಲಾ ಕೂಪಮಂಡೂಕ ಪ್ರಭೃತಿಗಳಿಗೂ ಇರುವುದು ಪರಿಸ್ಥಿತಿಯನ್ನು ಜಟಿಲಗೊಳಿಸುತ್ತಿದೆ. ಮತೀಯ ಹುಚ್ಚಾಟ ಭಯೋತ್ಪಾದಕತೆ, ಮಾನವ ಜೀವಗಳ ಮಾರಣಹೋಮಕ್ಕೆ ಕಾರಣವಾಗಿದೆ. ಮಾನವ ಹತ್ಯೆಯನ್ನೂ ಧರ್ಮಸಮ್ಮತ ಎಂದು ನಂಬುವವರು, ಪಾಲಿಸುವವರು ವಿಚಾರ ಮಾಡುವ ಶಕ್ತಿಯನ್ನು ಕಳೆದುಕೊಂಡ ಮಾನವರೂಪಿ ರಾಕ್ಷಸರಲ್ಲದೇ ಮತ್ತೇನೂ ಅಲ್ಲ. ವೈಚಾರಿಕತೆಯನ್ನು ಒಪ್ಪದ ಯಾವುದೇ ಧರ್ಮ ಧರ್ಮವೇ ಅಲ್ಲ, ಧರ್ಮಶಾಸ್ತ್ರಗಳು ಧರ್ಮಶಾಸ್ತ್ರಗಳೇ ಅಲ್ಲ.   
     ಭಾರತೀಯ ಸನಾತನ ಧರ್ಮ ತನ್ನಲ್ಲಿ ಅನೇಕ ವೈಚಾರಿಕ ಭೇದಗಳನ್ನು ಹೊಂದಿರುವವರಿಗೂ ಆಶ್ರಯ ನೀಡಿದೆ. ವಿವಿಧ ಮತ, ಪಂಥಗಳಿದ್ದರೂ ಅವರವರ ವಿಚಾರ, ರೀತಿ-ನೀತಿಗಳನ್ನು ಗೌರವಿಸುವ ಮನೋಭಾವವನ್ನು ಜನರಲ್ಲಿ ಬಿತ್ತಿದೆ. ದೇವರಿಲ್ಲ ಎನ್ನುವ ಚಾರ್ವಾಕರನ್ನೂ ಅದು ತನ್ನ ಮಡಿಲಿನಲ್ಲಿ ಹೊಂದಿದೆ. ಕಾಲಕ್ಕೆ ತಕ್ಕಂತೆ ಅನೇಕ ರೂಢಿಗತ ಸಂಪ್ರದಾಯಗಳೂ ಬದಲಾವಣೆ ಕಂಡಿವೆ. ಇಷ್ಟಿದ್ದೂ ಸಹ ಅನೇಕ ಸಂಪ್ರದಾಯವಾದಿಗಳು ಹಿಂದಿನ ರೀತಿ-ನೀತಿಗಳಿಗೇ ಜೋತುಬಿದ್ದು, ಅದನ್ನು ಅನುಸರಿಸದವರನ್ನು ನಿಕೃಷ್ಟವಾಗಿ ಕಾಣುವುದೂ ಇದೆ. ಇಂತಹ ಮನೋಭಾವದವರೇ ತಮ್ಮ ಧರ್ಮ, ಜಾತಿ, ಮತಗಳಿಗೆ ಕೆಟ್ಟ ಹೆಸರು ತರುವವರು ಮತ್ತು ಇದರಿಂದಾಗಿ ಇಡೀ ಸಮೂಹವನ್ನೇ ದೂಷಣೆಗೆ ಒಳಪಡಿಸುವವರು ಎಂಬ ಮಾತಿನಲ್ಲಿ ಹುರುಳಿದೆ. ಅಂತಹ ಒಂದು ಸಂಗತಿಯನ್ನು ಸಂಕ್ಷಿಪ್ತ ಮತ್ತು ಸೂಕ್ಷ್ಮವಾಗಿ ಇಲ್ಲಿ ಚರ್ಚಿಸಿದೆ.
     ಅಪೌರುಷೇಯವೆನ್ನಲಾಗುವ ವೇದಗಳು ಕೇವಲ ಮಾನವ ಮಾತ್ರರಲ್ಲ, ಸಕಲ ಚರಾಚರ ಜೀವ ಸಂಕುಲವೆಲ್ಲದರ ಹಿತ, ಸುಖ, ಶಾಂತಿ, ನೆಮ್ಮದಿ ಬಯಸುವ ಅತ್ಯುನ್ನತ ಮತ್ತು ಅತ್ಯುತ್ತಮ ಜ್ಞಾನಭಂಡಾರ. ಈ ಜ್ಞಾನ ಕೇವಲ ಕೆಲವರ ಸ್ವತ್ತಲ್ಲ ಮತ್ತು ಆಗಬಾರದು ಕೂಡಾ. ವೇದಗಳಲ್ಲಿನ ವಿಶಾಲತೆಯನ್ನು ಪೌರಾಣಿಕರು, ಸಾಂಪ್ರದಾಯಿಕರು ಸಂಕುಚಿತಗೊಳಿಸಿದ್ದಾರೆ, ಬೇಲಿ ಹಾಕಿ ಸೀಮಿತಗೊಳಿಸಿದ್ದಾರೆ ಎಂದರೆ ಅದು ಕಟುವಾದ ಸತ್ಯವೇ ಸರಿ. ಅನೇಕ ಸಂಪ್ರದಾಯಗಳು, ರೀತಿ ನೀತಿಗಳು ಪ್ರಾರಂಭಗೊಂಡ ಸಮಯದಲ್ಲಿ ಅಂದಿನ ಜೀವನ ಪದ್ಧತಿಗೆ, ರೀತಿ-ನೀತಿಗಳಿಗೆ, ಸಮಾಜದ ಹಿತಕ್ಕೆ ಪೂರಕವಾಗಿದ್ದಿರಬಹುದು. ಆದರೆ ಸಮಾಜ ಬದಲಾದಂತೆ, ಸಮಾಜದ ರೀತಿ-ನೀತಿಗಳು ಬದಲಾದಂತೆ ಸಂಪ್ರದಾಯಗಳೂ ಸೂಕ್ತವಾಗಿ ಬದಲಾಗಬೇಕಾಗುವುದು ಅಗತ್ಯ ಮತ್ತು ಅನಿವಾರ್ಯ. ಅನೇಕ ಸಂಪ್ರದಾಯಗಳು ಬದಲಾದ ರೀತಿಯಲ್ಲಿ ಆಚರಿಸಲ್ಪಡುತ್ತಿರುವುದೂ ವಾಸ್ತವ. ಆದರೂ ಕೆಲವು ಸಂಗತಿಗಳು, ಸಂಪ್ರದಾಯಗಳು ಇನ್ನೂ ಬದಲಾಗದ ಭದ್ರ ಚೌಕಟ್ಟಿನ ಒಳಗೇ ಇರುವುದೂ ವಾಸ್ತವವೇ. ಅಂತಹ ಒಂದು ಸಂಗತಿಯೇ ವೇದಾಭ್ಯಾಸ. ವೇದಗಳನ್ನು ಉಪನಯನವಾದವರು ಮಾತ್ರ ಅಧ್ಯಯನ ಮಾಡಬಹುದು, ಉಪನಯನಕ್ಕೆ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಮೂರು ವರ್ಣದವರು ಮಾತ್ರ ಅರ್ಹರು, ಶೂದ್ರರು ಮತ್ತು ಸ್ತ್ರೀಯರು ವೇದಾಧ್ಯಯನ ಮಾಡುವಂತಿಲ್ಲ ಎಂಬುದು ಸಾಂಪ್ರದಾಯಿಕರ ಸಿದ್ಧಾಂತವಾಗಿದೆ. ಈ ಸಾಂಪ್ರದಾಯಿಕರ ನಿಲುವಿಗೆ ವಿರುದ್ಧವಾದ ಅಂಶಗಳು ಮತ್ತು ಸಂಗತಿಗಳು ವೇದಗಳಲ್ಲೇ, ವೇದಕಾಲದ ಸಾಕ್ಷ್ಯಗಳಿಂದಲೇ ಲಭ್ಯವಿವೆ. ಇಂದಿನ ವಸ್ತುಸ್ಥಿತಿಯೇ ಭಿನ್ನವಾಗಿದೆ. ಇಂದಿನ ಪರಿಸ್ಥಿತಿಗೆ ತಕ್ಕಂತೆ ನಮ್ಮ ನಿಲುವನ್ನು ವೇದಗಳು ಸಾರುವ ವಿಶಾಲತೆಯ ಹಿನ್ನೆಲೆಯಲ್ಲಿ ಮಾರ್ಪಡಿಸಿಕೊಳ್ಳದಿದ್ದರೆ ಅಮೂಲ್ಯವಾದ ಜ್ಞಾನಭಂಡಾರವನ್ನು ನಾವು ಕಳೆದುಕೊಳ್ಳುವ ದಿನಗಳು ದೂರವಿಲ್ಲ.
     ಇಂದಿನ ವಸ್ತುಸ್ಥಿತಿಯೆಂದರೆ ಮಾಡುವ ವೃತ್ತಿ ಅನುಸರಿಸಿ ನಿರ್ಧರಿತವಾಗುವ ವರ್ಣಾಶ್ರಮ ಪದ್ಧತಿ ನಶಿಸಿಹೋಗಿ ಯಾವುದೋ ಕಾಲವಾಗಿದೆ. ಈಗ ಇರುವುದು ಮತ್ತು ಜೀವಂತವಾಗಿ ಉಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಕಟಿಬದ್ಧರಾಗಿ ನಿಂತಿರುವುದು ಹುಟ್ಟಿನ ಆಧಾರದ ಜಾತಿಪದ್ಧತಿ ಮಾತ್ರ. ಈಗ ಇರುವುದು ಹುಟ್ಟಿನ ಬ್ರಾಹ್ಮಣರು, ಹುಟ್ಟಿನ ವೈಶ್ಯರು ಮತ್ತು ಹುಟ್ಟಿನ ಆಧಾರದ ಅಸಂಖ್ಯ ಜಾತಿಗಳು! ಈಗ ವರ್ಣಾಶ್ರಮದ ಬ್ರಾಹ್ಮಣ, ವೈಶ್ಯ, ಕ್ಷತ್ರಿಯರಿಲ್ಲ. ಆದ್ದರಿಂದ ಉಪನಯನ, ವೇದಾಧ್ಯಯನಗಳ ಆಧಾರಸ್ತಂಭಗಳೇ ಮೂಲರೀತಿಯಲ್ಲಿ ಅಸ್ತಿತ್ವದಲ್ಲಿ ಇಲ್ಲ. ಗುರುಕುಲ ಪದ್ಧತಿ ಅಳಿದು ಮೆಕಾಲೆ ಪ್ರಣೀತ ಶಿಕ್ಷಣ ಪದ್ಧತಿ ಬಂದ ಮೇಲಂತೂ ಉಪನಯನದ ಮಹತ್ವವೂ ಅಳಿದುಹೋಗಿದೆ. ವೇದಾಧ್ಯಯನ ಮಾಡುವವರ ಸಂಖ್ಯೆಯೂ ಕ್ಷೀಣಿಸಿದೆ. ಕೆಲವು ಪೂಜಾ ಮಂತ್ರಗಳು, ಹೋಮ-ಹವನದ ಮಂತ್ರಗಳು, ಇತ್ಯಾದಿಗಳನ್ನು ಕಲಿಸುವವರು ಮತ್ತು ಕಲಿಯುವವರು ಕಂಡುಬರುತ್ತಾರೆ. ಬ್ರಾಹ್ಮಣ್ಯದ ನಿಜವಾದ ಅರ್ಥವನ್ನು ತಿಳಿದು ಅದರಂತೆ ಇರುವ ಎಷ್ಟು ಬ್ರಾಹ್ಮಣರಿದ್ದಾರೆ? ವೇದಗಳನ್ನು ಅರ್ಥಸಹಿತವಾಗಿ ಅಧ್ಯಯನ ಮಾಡಿ ಇನ್ನೊಬ್ಬರಿಗೆ ಹೇಳಿಕೊಡಬಲ್ಲ ಸಾಮರ್ಥ್ಯ ಇರುವವರ ಸಂಖ್ಯೆ ಎಷ್ಟು? ಕಲಿಯಲು ಆಸಕ್ತಿ ಮತ್ತು ಸಮಯ ಇರುವವರೆಷ್ಟು? ಸಾಂಪ್ರದಾಯಿಕರು ಹೇಳುವಂತೆ ಸ್ವತಃ ಉಪನಯನ ಮಾಡಿಕೊಂಡು, ಸ್ವಸಾಮರ್ಥ್ಯದಿಂದ ವೇದಾಧ್ಯಯನ ಮಾಡುವವರದು ಲೌಕಿಕ ಸಾಮರ್ಥ್ಯವಾಗುತ್ತದೆ, ಶಾಸ್ತ್ರೀಯ ಸಾಮರ್ಥ್ಯವಾಗುವುದಿಲ್ಲವೆಂದರೂ, ಇಂದು ಲೌಕಿಕವಾಗಿಯಾದರೂ ವೇದದ ಜ್ಞಾನಭಂಡಾರದ ಪ್ರಯೋಜನವನ್ನು ಪಡೆಯುವುದು ಅಮೂಲ್ಯ ಜ್ಞಾನಸಂಪತ್ತಿನ ಉಳಿಕೆಗೆ ಅತ್ಯಗತ್ಯವಾಗಿದೆ. ಕಲಿತಿರುವ ಜ್ಞಾನವನ್ನು ಆಸಕ್ತರಿಗೆ ಕಲಿಸದವರು ಕಳ್ಳರೇ ಸರಿ ಎಂಬುದು ವೇದ ಸಾರುವ ನೀತಿಯೇ ಆಗಿದೆ. ಸಾಂಪ್ರದಾಯಿಕರು, ಮಠ-ಮಂದಿರಗಳ ಪೀಠಾಧಿಪತಿಗಳು ಲೋಕಹಿತದ ದೃಷ್ಟಿಯಿಂದ ವೇದಗಳು ಸಾರುವ ವಿಶಾಲ ಮನೋಭಾವವನ್ನು ಮೈಗೂಡಿಸಿಕೊಂಡು, ಪಟ್ಟಭದ್ರರು ನಿರ್ಮಿಸಿರುವ ಬೇಲಿಗಳನ್ನು ಕಿತ್ತೊಗೆದು, ವೇದಾಧ್ಯಯನ ಮಾಡಲಿಚ್ಛಿಸುವ ಎಲ್ಲರಿಗೂ ಉಪನಯನ ಸಂಸ್ಕಾರ ನೀಡುವ, ಲೌಕಿಕವಾಗಿಯಾಗಲೀ, ಶಾಸ್ತ್ರೀಯವಾಗಿಯಾಗಲೀ ವೇದಾಧ್ಯಯನಕ್ಕೆ ಮುಕ್ತ ಅವಕಾಶ ನೀಡುವ ಮನಸ್ಸು ಮಾಡಿದರೆ ಅದೊಂದು ಲೋಕಕಲ್ಯಾಣಕ್ಕೆ ಬಹು ದೊಡ್ಡ ಕಾಣಿಕೆಯಾಗುತ್ತದೆ. 
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ