"ಪ್ರತಿಯೊಬ್ಬರೂ ತಾವು ತಾವಾಗಿರಬೇಕು; ಜೀವನದ ಮೂಲ ನಿಯಮವಿದು. ಎಲ್ಲರೂ ತಾವು ತಾವಾಗಿರದೆ ಬೇರಾರೋ ಆಗಬೇಕೆಂಬುದನ್ನೇ ಬಯಸಿ ಬೇರೊಬ್ಬರಂತೆ ಆಗಲು ಪ್ರಯತ್ನಿಸುತ್ತಾರೆ. ಮಹಾವೀರರಂತೆ ಆಗಬೇಕು, ಬುದ್ಧರಂತಾಗಬೇಕು, ಗಾಂಧಿಯಂತಾಗಬೇಕು ಎಂದೆಲ್ಲಾ ಧೋರಣೆಗಳನ್ನೂ ಎಲ್ಲರ ಮೇಲೆ ಆರೋಪಿಸುತ್ತಲೇ ನಾವು ಸಾಗುತ್ತಿರುವೆವು. ಇದು ಅತ್ಯಂತ ಅವಮಾನಕರ ಕೃತ್ಯ. ಪ್ರತಿಯೊಬ್ಬರ ವೈಯಕ್ತಿಕತೆಯ ಮೇಲೂ ನಾವು ದಾಳಿ ಮಾಡುತ್ತಿರುವೆವು. ಯಾರಿಗೇ ಆಗಲಿ, ನೀನು ಗಾಂಧಿಯಂತೆ ಆಗಬೇಕು ಎಂದು ಹೇಳಿದರೆ, ಇದಕ್ಕಿಂತ ಹೆಚ್ಚಿನ ಅವಮಾನ ಬೇರಾವುದೂ ಇಲ್ಲ. ಏಕೆಂದರೆ ಆತ ಗಾಂಧಿಯಾಗಲು ಹುಟ್ಟಿಲ್ಲ. ಒಬ್ಬ ಗಾಂಧಿ ಈಗಾಗಲೇ ಹುಟ್ಟಿ ಆಗಿದೆ. ಇನ್ನೊಬ್ಬ ಗಾಂಧಿಯ ಅಗತ್ಯವೇನಿದೆ? ನೀನು ಗಾಂಧಿಯಾಗು ಎಂದು ಹೇಳಿದರೆ, ಆ ವ್ಯಕ್ತಿ ತನ್ನಂತೆ ತಾನು ಇರಬಾರದೆಂದು, ಆತನಿಗೆ ಆತನಾಗಿರುವ ಹಕ್ಕಿಲ್ಲ ಎಂದಂತಾಯಿತು; ಬೇರಾರನ್ನೋ ಆತ ನಕಲು ಮಾಡಬೇಕೆಂದಾಯಿತು. ಆದ್ದರಿಂದ ಪ್ರತಿಯೊಬ್ಬರೂ ಅವರವರಂತೆಯೇ ಆಗಬೇಕು. ಬೇರೊಬ್ಬರಂತಲ್ಲ" - ಇವು ಓಶೋರವರ ಮಾತುಗಳು. ಸತ್ಯ ಕಠಿಣವಾಗಿರುತ್ತದೆ. ಈ ಜಗತ್ತಿನಲ್ಲಿ ಯಾರೇ ಇಬ್ಬರು ವ್ಯಕ್ತಿತ್ವಗಳಲ್ಲಿ ಸಾಮ್ಯತೆ ಕಾಣುವುದು ಕಷ್ಟ. ಸ್ವಲ್ಪವಾದರೂ ಭಿನ್ನತೆ ಇದ್ದೇ ಇರುತ್ತದೆ. ಹಾಗಿರುವಾಗ ನಮ್ಮತನವನ್ನು ಉಳಿಸಿಕೊಂಡು ಬೆಳೆಯಲು ಸಾಧ್ಯವಿದೆಯಲ್ಲವೇ? ಗಾಂಧಿಯೇ, ಆಗಲಿ, ವಿವೇಕಾನಂದರೇ ಆಗಲಿ, ಯಾವುದೇ ಮಹಾಪುರುಷರೆಂದು ಗೌರವಿಸುವ ವ್ಯಕ್ತಿಗಳೇ ಆಗಲಿ ಅವರುಗಳು ತಾವು ತಾವೇ ಆಗಿದ್ದರಿಂದಲೇ ಪ್ರಸಿದ್ಧರಾದುದು!
ಅದೇನೋ ಸರಿ, ಆದರೆ ಈಗಿರುವ ನಮ್ಮ ವ್ಯಕ್ತಿತ್ವ ಹೇಗಿದೆ? ನಾವು ಹೇಗಿದ್ದೇವೆ ಎಂಬುದನ್ನು ತಿಳಿಯುವುದಾದರೂ ಹೇಗೆ? ನಮ್ಮನ್ನು ನಾವು ಅರಿಯಬೇಕೆಂದರೆ ನಾವು ನಮ್ಮನ್ನು ಹೊರಗಿನವರು ನೋಡುವ ರೀತಿಯಲ್ಲಿ ನೋಡಿಕೊಳ್ಳಬೇಕಾಗುತ್ತದೆ. ನಮ್ಮ ಬಗ್ಗೆ ನಾವು ಪ್ರಾಮಾಣಿಕವಾಗಿ ವಿಮರ್ಶಿಸಿಕೊಳ್ಳಲು ಸಾಧ್ಯವಿದೆ. ಬೇರೆಯವರು ಆ ಕೆಲಸ ಮಾಡಲಾರರು. ಏಕೆಂದರೆ ನಾವು ನಿಜಜೀವನದಲ್ಲಿ ನಮ್ಮಂತೆ ನಾವಾಗಿರುವುದಿಲ್ಲ. ನಾವು ಇತರರಿಗೆ ಮೋಸ ಮಾಡಬಲ್ಲೆವು, ಆದರೆ ನಮಗೆ ನಾವೇ ಮೋಸ ಮಾಡಿಕೊಳ್ಳಲಾಗುವುದಿಲ್ಲ. ನಮ್ಮ ಅಂತರಂಗ ನಾವು ಏನು ಅನ್ನುವುದನ್ನು ನಿರ್ಭಿಡೆಯಿಂದ, ನಿರ್ವಂಚನೆಯಿಂದ ನಮಗೆ ಹೇಳಬಲ್ಲದು. ನಮ್ಮನ್ನು ನಾವು ನೋಡಿಕೊಳ್ಳುವುದು ಹೇಗೆ? ನಮ್ಮನ್ನು ನಾವೇ ಪರೀಕ್ಷೆಗೆ ಒಳಪಡಿಸಿಕೊಳ್ಳಲು ಈ ಪ್ರಶ್ನೆಗಳನ್ನು ಕೇಳಿಕೊಳ್ಳೋಣ. ನಮ್ಮಿಂದ ಬರುವ ಉತ್ತರಗಳೇ ನಾವು ಏನಾಗಿದ್ದೇವೆ ಎಂಬುದನ್ನು ತಿಳಿಸಿಬಿಡುತ್ತದೆ!
೧. ನಮ್ಮ ನಿಜವಾದ ವ್ಯಕ್ತಿತ್ವ ಯಾವುದು?
ನಮ್ಮ ಈಗಿರುವ ವ್ಯಕ್ತಿತ್ವ ನಮ್ಮ ನಿಜವಾದ ವ್ಯಕ್ತಿತ್ವ ಆಗಿರಲಾರದು. ಅದು ಇನ್ನೊಬ್ಬರನ್ನು ಮೆಚ್ಚಿಸುವ, ಓಲೈಸುವ ಸಲುವಾಗಿ ನಿಜವಾದ ನಮ್ಮತನವನ್ನು ಮುಚ್ಚಿಟ್ಟುಕೊಂಡಿರುವ, ಇತರರ ಅಭಿಪ್ರಾಯ, ಅನಿಸಿಕೆಗಳನ್ನು ಆಧರಿಸಿರುವ ಮುಖವಾಡವಾಗಿರುವ ಸಾಧ್ಯತೆ ಇರುತ್ತದೆ. ಒಬ್ಬ ಸಾಹಿತಿಯೋ, ವಿದ್ವಾಂಸನೋ ಯಾವುದೋ ಪ್ರಶಸ್ತಿಯೋ, ಸವಲತ್ತಿನ ನಿರೀಕ್ಷೆಯೋ, ಮತ್ತಾವುದೋ ಕಾರಣದಿಂದ ತನಗೆ ಇಷ್ಟವಿಲ್ಲದ ರಾಜಕಾರಣಿಯನ್ನೋ, ಅಧಿಕಾರಿಯನ್ನೋ ಓಲೈಸುತ್ತಾನೆ, ಹೊಗಳುತ್ತಾನೆ ಎಂದರೆ ಅದು ಅವನ ನೈಜ ವ್ಯಕ್ತಿತ್ವ ಆಗಿರಲಿಕ್ಕೆ ಸಾಧ್ಯವಿಲ್ಲ ಅಲ್ಲವೆ? ನಾವು ನಿಜವಾಗಿ ಏನು ಎಂಬುದು ನಮ್ಮ ಅಂತರಂಗಕ್ಕೆ ಸ್ಪಷ್ಟವಾಗಿ ತಿಳಿದಿರುತ್ತದೆ. ಅಯ್ಯೋ, ನಾನು ಹೀಗೇಕೆ ಮಾಡಿದೆ? ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಂಡು ನಾವೇ ಉತ್ತರಿಸಲು ಪ್ರಯತ್ನಿಸಬೇಕು. ಬರುವ ಉತ್ತರವೇ, ನಾನು ಹೀಗೆ ಮಾಡಬೇಕಿತ್ತು ಎಂಬುದು.
೨. ನಾವು ಗೌರವಿಸುವ ಗುಣಗಳು ಯಾವುವು?
ನಾವು ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಯಾವ ವಿಷಯಗಳಿಗೆ ಸಂಬಂಧಿಸಿದಂತೆ ರಾಜಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲವೋ ಅವು ನಮ್ಮ ಗುಣಗಳು! ಅಂತಹ ಗುಣಗಳು ಯಾವುವು ಎಂಬ ಬಗ್ಗೆ ನಮಗೆ ನಾವೆ ಸ್ಪಷ್ಟಪಡಿಸಿಕೊಳ್ಳಬೇಕು. ಅದು ಪ್ರಾಮಾಣಿಕತೆಯೇ, ಬದ್ಧತೆಯೇ, ಭದ್ರತೆಯೇ, ಹೊಂದಿಕೊಂಡು ಹೋಗುವುದೇ, ಸಮಯಕ್ಕೆ ತಕ್ಕಂತೆ ಆಡುವ ನಾಟಕವೇ, ಇತ್ಯಾದಿಗಳಲ್ಲಿ ಯಾವುದು? ಮಹತ್ವ ಕೊಡುವುದು ಕಾರ್ಯದಕ್ಷತೆಗೋ, ವಿಧೇಯತೆಗೋ? ಜವಾಬ್ದಾರಿಗೋ, ಆಸೆ-ಆಕಾಂಕ್ಷೆಗೋ? ಉತ್ತರವನ್ನು ನಾವೇ ಕೊಡಬೇಕು.
೩. ನಮ್ಮ ಶರೀರದ ಅರಿವು ನಮಗಿದೆಯೇ?
ನಮ್ಮ ಶರೀರದ ಸ್ಥಿತಿ ಬಗ್ಗೆ ನಮಗೆ ತಿಳುವಳಿಕೆ ಇದೆಯೇ? ನಮ್ಮ ಉಸಿರಾಟ, ದೇಹದ ಬಲ, ಇತಿ-ಮಿತಿಗಳ ಅರಿವು ಹೊಂದಿರಬೇಕು. ಅಯ್ಯೋ, ಈ ಕೆಲಸ ನನಗೆ ಮಾಡಲಾಗುವುದಿಲ್ಲ, ಇದು ನನ್ನ ಶಕ್ತಿಗೆ ಮೀರಿದ್ದು ಎಂದು ಪ್ರಯತ್ನ ಮಾಡುವ ಮುನ್ನವೇ ಅಂದುಕೊಳ್ಳುವವರಾದರೆ, ನಾವು ಭೂಮಿಯ ಮೇಲಿನ ಸುಂದರ ದೇವಾಲಯವಾದ ನಮ್ಮ ಶರೀರದ ಉಪಯೋಗ ಪಡೆಯದೆ ಅನೇಕ ಅಮೂಲ್ಯ ಸಂಗತಿಗಳ, ಸಾಧ್ಯತೆಗಳ ಬಾಗಿಲುಗಳನ್ನು ಮುಚ್ಚಿದ್ದೇವೆ ಎಂದೇ ಅರ್ಥ.
೪. ನಮ್ಮ ಕನಸುಗಳ ಬಗ್ಗೆ ನಮ್ಮ ನಿಲುವು ಹೇಗಿದೆ?
ನಮ್ಮ ಕನಸುಗಳು ಮತ್ತು ಆಸೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ನಾವು ಹೆಮ್ಮೆಯಿಂದ ತಲೆ ಎತ್ತಿ ನಡೆಯುವಂತೆ ಮಾಡಲು ಅವು ಸಹಕಾರಿ. ಇಲ್ಲಿ ಪ್ರಸ್ತುತವಾಗುವುದು ನಮ್ಮ ಕನಸುಗಳು! ನಮ್ಮ ಕನಸುಗಳಿಗಿಂತ ಕಡಿಮೆಯಾದವುಗಳನ್ನು ಒಪ್ಪಿಕೊಳ್ಳಲೇಬಾರದು. ನಮ್ಮ ಕನಸುಗಳೇನು ಎಂದು ನಮಗೆ ಸ್ಪಷ್ಟವಾದರೆ ಅದನ್ನು ನನಸಾಗಿಸಲು ಪ್ರಯತ್ನ ಮಾಡಲೇಬೇಕು. ಸಂಗೀತಗಾರನಾಗಬೇಕೋ, ಬರಹಗಾರನಾಗಬೇಕೋ, ಆಟಗಾರನಾಗಬೇಕೋ, ಹೀಗೆ ಯಾವುದೇ ಕನಸಾಗಿರಲಿ. ಅದರ ಕುರಿತು ಸಾಧನೆ ಮಾಡುವುದು ನಮ್ಮ ದಿನನಿತ್ಯದ ಕಾರ್ಯಕ್ರಮದ ಭಾಗವಾಗಬೇಕು. ಧೃತಿಗೆಡದೆ, ಸೋಲುಗಳಿಗೆ, ಅಡ್ಡಿ-ಅಡಚಣೆಗಳಿಗೆ ಅಂಜದೆ ಮುಂದುವರೆಯುವುದಾದರೆ ಯಶಸ್ಸು ಒಲಿಯಲೇಬೇಕು. ಅಂತಹ ನಿಲುವು ನಮ್ಮದಾಗಿದೆಯೇ?
೫. ಇಷ್ಟಪಡುವ, ಇಷ್ಟಪಡದಿರುವ ಸಂಗತಿಗಳು ಯಾವುವು?
ನಾವು ಇಷ್ಟಪಡುವ ಮತ್ತು ಇಷ್ಟಪಡದಿರುವ ಸಂಗತಿಗಳ ಬಗ್ಗೆ ನಮಗೆ ತಿಳಿದಿರುತ್ತದೆ. ಹಲ್ಲು ಉಜ್ಜಲು ಬಳಸುವ ಟೂತ್ ಪೇಸ್ಟ್ ಇರಬಹುದು, ಸೋಪು ಇರಬಹುದು, ಹೀಗೆ ಯಾವುದೇ ಇರಬಹುದು, ಎಲ್ಲರೂ ಬಳಸುವಂತಹ ಜನಪ್ರಿಯವಾದ ಬ್ರಾಂಡುಗಳ ಪದಾರ್ಥ ಬಳಸುತ್ತೇವೆಯೇ ಅಥವ ಉದ್ದೇಶ ಈಡೇರಿಕೆಗೆ ಅನುಕೂಲವಾದ ಪದಾರ್ಥಗಳನ್ನು ಬಳಸುತ್ತೇವೆಯೇ? ನಮ್ಮ ಇಷ್ಟಾನಿಷ್ಟಗಳ ಸಂಗತಿಗಳಿಗೆ ಸಂಬಂಧಿಸಿದಂತೆ ಧೃಡ ನಿಲುವು ಹೊಂದಿ ಅನುಸರಿಸಿದರೆ ಸಂತೋಷ, ತೃಪ್ತಿ ನಮ್ಮದಾಗುತ್ತದೆ. ನಮ್ಮ ಇಷ್ಟಗಳು ನಮ್ಮವು, ಅವನ್ನು ಬೇರೆಯವರು ಒಪ್ಪಬೇಕಿಲ್ಲ, ನಾವು ಒಪ್ಪಿದರೆ ಸಾಕು! ನಾವು ನಾವಾಗಿದ್ದೇವೆಯೇ?
ಮೇಲಿನ ಪ್ರಶ್ನೆಗಳಿಗೆ ನಮ್ಮ ಉತ್ತರಗಳೇನು ಎಂಬುದೇ ನಮ್ಮ ವ್ಯಕ್ತಿತ್ವದ ಅಳತೆಗೋಲಾಗುತ್ತದೆ. ಅದನ್ನು ನಮಗೇ ಒಪ್ಪಿಕೊಳ್ಳಲು ಆಗದಿದ್ದರೆ ನಾವು ಸುಧಾರಣೆಗೊಳ್ಳುವ ಅಗತ್ಯವಿದೆ ಎಂದು ತಿಳಿಯಬೇಕು. ನಮ್ಮ ಅಂತರಂಗವೇ ನಾವು ಹೇಗಿರಬೇಕು ಎಂಬುದಕ್ಕೆ ಸೂಚನೆ ಕೊಡಬಲ್ಲದು. ನಮ್ಮ ಒಳದನಿಯನ್ನು ಹತ್ತಿಕ್ಕಲು ಪ್ರಯತ್ನಿಸದೆ ಅದರ ಮಾತುಗಳನ್ನು ಕೇಳಿದರೆ, ಅದರಂತೆ ನಡೆದರೆ ನಾವೂ ಮಹಾಪುರುಷರೇ ಸರಿ. ಇದನ್ನೇ ಆಧ್ಯಾತ್ಮವಾದಿಗಳು ಆತ್ಮ ಸಾಕ್ಷಾತ್ಕಾರ ಎನ್ನುತ್ತಾರೆ. ಆತ್ಮ ಸಾಕ್ಷಾತ್ಕಾರವೆಂದರೆ ಬೇರೆ ಏನೂ ಅಲ್ಲ, ನಮ್ಮನ್ನು ನಾವು ಅರಿತುಕೊಳ್ಳುವುದು. ನಮ್ಮ ವ್ಯಕ್ತಿತ್ವದ ಶಿಲ್ಪಿಗಳು ನಾವೇ!
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ