ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಡಿಸೆಂಬರ್ 18, 2017

ಹುಟ್ಟಿನ ಜಾತಿಗೆ ಪ್ರಾಧಾನ್ಯತೆ ಸಲ್ಲದು! (No importance to the caste by birth)


     ಪುನರ್ಜನ್ಮ ನಂಬುವವರಿಗೆ ಒಂದು ಪ್ರಶ್ನೆ: "ನೀವು ಹಿಂದಿನ ಜನ್ಮದಲ್ಲಿ ಮನುಷ್ಯರಾಗಿಯೇ ಹುಟ್ಟಿದ್ದಿರಾ? ಮನುಷ್ಯರಾಗಿಯೇ ಹುಟ್ಟಿದ್ದಿದ್ದರೂ ಈಗಿನ ಜಾತಿಯಲ್ಲೇ ಹುಟ್ಟಿದ್ದಿರಾ?" ಈ ಪ್ರಶ್ನೆಗೆ ಯಾರೂ ಉತ್ತರ ಕೊಡಲಾರರು. ಏಕೆಂದರೆ ಹಿಂದೆ ಏನಾಗಿ ಹುಟ್ಟಿದ್ದೆವೋ, ಎಲ್ಲಿ ಹುಟ್ಟಿದ್ದೆವೋ, ನಮ್ಮ ಅಪ್ಪ-ಅಮ್ಮ ಯಾರಾಗಿದ್ದರೋ ಯಾರಿಗೆ ಗೊತ್ತು? ಮುಂದೆ ಸತ್ತ ಮೇಲೆ ಮತ್ತೆ ಏನಾಗಿ ಹುಟ್ಟುತ್ತೇವೋ, ಯಾವ ಜಾತಿಯಲ್ಲಿ ಹುಟ್ಟುತ್ತೇವೋ ಅದೂ ಸಹ ಗೊತ್ತಿಲ್ಲ. ಏಕೆಂದರೆ ಸತ್ತವರು ಯಾರೂ ತಾವು ಎಲ್ಲಿದ್ದೇವೆ, ಹೇಗಿದ್ದೇವೆ ಎಂದು ತಮ್ಮ ವಿಳಾಸ ತಿಳಿಸಿ ಯಾರಿಗೂ ಏನೂ ಹೇಳುವುದೇ ಇಲ್ಲ. ಅಷ್ಟಿದ್ದೂ ಜಾತಿ, ಜಾತಿ ಎಂದು ಸಾಯುವ, ಮೇಲು-ಕೀಳು ಎಂದು ಹೊಡೆದಾಡುವ ಜನರೇ ಜಾಸ್ತಿ. ಪುನರ್ಜನ್ಮ ನಂಬದಿದ್ದವರಿಗೂ ಒಂದು ಪ್ರಶ್ನೆ: "ನೀವು ಹಿಂದೆ ಹುಟ್ಟಿರಲಿಲ್ಲ ಮತ್ತು ಮುಂದೆ ಹುಟ್ಟುವುದಿಲ್ಲ ಎಂದಾದರೆ ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದೇವೆ ಎಂದು ಬೊಬ್ಬೆ ಹೊಡೆಯುವುದಾದರೂ ಏಕೆ? ಈಗ ಏನಾಗಿದ್ದೇವೆ ಅದನ್ನು ಮಾತ್ರ ಗಣನೆಗೆ ತೆಗೆದುಕೊಂಡು ವ್ಯವಹರಿಸಬೇಕಲ್ಲವೇ?" ಹಿಂದೆ ಯಾರೋ ಯಾರಿಗೋ ಅನ್ಯಾಯ ಮಾಡಿದ್ದರು ಎಂದು ಈಗ ಮತ್ಯಾರೋ ಮತ್ಯಾರನ್ನೋ ಟೀಕಿಸಿದರೆ, ಹೊಣೆ ಮಾಡಿದರೆ ಅದಕ್ಕೆ ಅರ್ಥವಿದೆಯೇ? ಬ್ರಾಹ್ಮಣ ಬ್ರಾಹ್ಮಣನಾಗಿಯೇ ಹುಟ್ಟುತ್ತಾನೆ, ಜೈನ ಜೈನನಾಗಿಯೇ ಹುಟ್ಟುತ್ತಾನೆ, ಮುಸ್ಲಿಮ ಮುಸ್ಲಿಮನಾಗಿಯೇ ಹುಟ್ಟುತ್ತಾನೆ, ಯಾವುದೇ ಜಾತಿಯವರು ಅದೇ ಜಾತಿಯಲ್ಲೇ ಹುಟ್ಟುತ್ತಾರೆ ಎಂದು ಯಾರಾದರೂ ಖಚಿತಪಡಿಸಿದರೆ, ಪ್ರಮಾಣ ಪಡಿಸಿದರೆ ಜಾತಿ ಲೆಕ್ಕಾಚಾರಗಳನ್ನು ಒಪ್ಪಿಕೊಳ್ಳೋಣ. ಇಲ್ಲವೆಂದರೆ ರಾಜಕೀಯದ ಕಾರಣಕ್ಕಾಗಿ, ಕ್ಷುಲ್ಲಕ ಸ್ವಾರ್ಥಗಳಿಗಾಗಿ ಹುಟ್ಟಿನ ಜಾತಿಗಳನ್ನು ಉಳಿಸಿಕೊಂಡು ಬಂದಿದ್ದೇವೆಂದು ನಾಚಿಕೆಯಿಲ್ಲದೆ ಒಪ್ಪಿಕೊಂಡುಬಿಡೋಣ.
     ಈ ಜಾತಿಗಳು ದೇವರ ಸೃಷ್ಟಿಯಂತೂ ಅಲ್ಲ. ಮಾನವಸೃಷ್ಟಿ ಎಂಬುದು ನಿರ್ವಿವಾದ. ಜಗತ್ತಿನಲ್ಲಿ ವ್ಯಾಪಕವಾಗಿರುವ ಕ್ರಿಶ್ಚಿಯನ್ ಧರ್ಮ 2000 ವರ್ಷಗಳಿಗೂ ಹಿಂದೆ ಇರಲೇ ಇಲ್ಲ. ಇಡೀ ಪ್ರಪಂಚವನ್ನೇ ಇಸ್ಲಾಮೀಕರಣ ಮಾಡಬೇಕು ಎಂದು ಕಟಿಬದ್ಧರಾಗಿರುವ ಜನರು ಇರುವ, ಭಯೋತ್ಪಾದನೆಗೂ ಕಾರಣವಾಗಿರುವ ಇಸ್ಲಾಮ್ 1500 ವರ್ಷಗಳಿಗೂ ಹಿಂದೆ ಯಾರಿಗೂ ಗೊತ್ತೇ ಇರಲಿಲ್ಲ. ಈ ಮಾನವಬ್ರಹ್ಮ ಸಾಮಾನ್ಯನಲ್ಲ. ಅವನು ಕೇವಲ ಜಾತಿಗಳನ್ನು ಮಾತ್ರ ಅಲ್ಲ, ದೇವರುಗಳನ್ನೂ ಸೃಷ್ಟಿ ಮಾಡಿಬಿಟ್ಟಿದ್ದಾನೆ. ಹೊಸ ಹೊಸ ಜಾತಿಗಳು, ಹೊಸ ಹೊಸ ದೇವರುಗಳನ್ನು ಸೃಷ್ಟಿಸುತ್ತಲೇ ಇದ್ದಾನೆ. ಜಾತಿ, ಜಾತಿಗಳಿಗೂ ಬೇರೆ ಬೇರೆ ದೇವರುಗಳು! ಕ್ರಿಶ್ಚಿಯನರ ದೇವರು ಏಸು, ಮುಸ್ಲಿಮರ ದೇವರು ಅಲ್ಲಾಹು, ಹಿಂದೂಗಳ ದೇವರುಗಳಂತೂ ಲೆಕ್ಕವೇ ಇಲ್ಲದಷ್ಟು ಇದ್ದಾರೆ. ದೇವರು ಒಬ್ಬನೇ ಎಂದು ಎಲ್ಲರೂ ಒಪ್ಪುತ್ತಾರೆ. ಆದರೆ ಆ ದೇವರು ನಮ್ಮ ದೇವರು ಮಾತ್ರ ಎಂದು ಬಡಿದಾಡುತ್ತೇವೆ. ನಮ್ಮ ದೇವರನ್ನು ಒಪ್ಪದಿದ್ದವರು ಕಾಫಿರರು, ಬದುಕಲು ಅರ್ಹರಲ್ಲ ಎಂದು ಮುಸ್ಲಿಮರು ಹೇಳುತ್ತಾರೆ. ಏಸುವನ್ನು ಒಪ್ಪದಿದ್ದವರು ನರಕಕ್ಕೆ ಹೋಗುತ್ತಾರೆ ಎಂದು ಕ್ರಿಶ್ಚಿಯನರು ಹೇಳುತ್ತಾರೆ. ಹಿಂದೂಗಳಂತೂ ತಮ್ಮ ದೇವರನ್ನು ನಂಬಿದರೆ ಕೈಲಾಸಕ್ಕೋ, ವೈಕುಂಠಕ್ಕೋ, ಸ್ವರ್ಗಕ್ಕೋ ಹೋಗುತ್ತೇವೆಂದು ನಂಬುತ್ತಾರೆ. ಈಗ ಪ್ರಚಲಿತವಾಗಿರುವ ಮನುಷ್ಯರಲ್ಲಿನ ಹುಟ್ಟಿನ ಜಾತಿಗಳು ಮಾನವಸೃಷ್ಟಿ ಅಲ್ಲ ಎಂದು ಯಾರಾದರೂ ಆಧಾರಪೂರ್ವಕವಾಗಿ ಸಾಬೀತುಪಡಿಸಿದರೆ ಜಾತಿಗಳನ್ನು ಒಪ್ಪಿಕೊಳ್ಳೋಣ. ಇಲ್ಲದಿದ್ದರೆ ನಮ್ಮ ವೈಚಾರಿಕತೆಗೆ, ವಿವೇಚನಾಶಕ್ತಿಗೆ ಸ್ವಲ್ಪ ಕೆಲಸ ಕೊಡೋಣ. ಸರಿ ಯಾವುದು, ತಪ್ಪು ಯಾವುದು ಎಂದು ತರ್ಕಿಸೋಣ. 
     ಮಾನವನ ಉಗಮವಾದ ಅದೆಷ್ಟೋ ಸಹಸ್ರ ಸಹಸ್ರ ವರ್ಷಗಳ ನಂತರದಲ್ಲಿ ಈ ಜಾತಿಯ ಪಿಡುಗು ಮಾನವಕುಲಕ್ಕೆ ಮಾರಕವಾಗಿ ಕಾಡುತ್ತಿದೆ. ಸುಮಾರು ಐದು ಸಹಸ್ರ ವರ್ಷಗಳ ಹಿಂದಿನ ವೇದ ಸಾಹಿತ್ಯ ಅತ್ಯಂತ ಪುರಾತನವಾದ ಲಭ್ಯ ಸಾಹಿತ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೂಲ ವೇದಮಂತ್ರಗಳು ಸಕಲ ಚರಾಚರ ಜೀವಿಗಳೆಲ್ಲರ ಶಾಂತಿ, ನೆಮ್ಮದಿ ಬಯಸುವ ಸದಾಶಯಗಳಿಂದ ಕೂಡಿವೆ. ಅದರಲ್ಲಿನ ಯಾವುದೇ ವಿಷಯ ವಿರೋಧಾಭಾಸಗಳಿಂದ ಕೂಡಿಲ್ಲವೆಂಬುದು ವಿಶೇಷ. ವೇದೋತ್ತರ ಸಾಹಿತ್ಯಗಳೆಂದು ಹೇಳುವ ಪುರಾಣಗಳು ಇತ್ಯಾದಿಗಳಲ್ಲಿ ವಿರೋಧಾಭಾಸದ ಸಂಗತಿಗಳು, ವಿವಾದದ ವಿಚಾರಗಳು ಇರಬಹುದಾದರೂ, ವಿವಾದ, ಸಂಶಯ ಬಂದ ಸಂದರ್ಭಗಳಲ್ಲಿ ಮೂಲವೇದಮಂತ್ರಗಳು ಹೇಳುವ ಅಂಶವೇ ಪರಮಪ್ರಮಾಣವಾಗಿವೆ. ವೇದಗಳ ಹೆಸರಿನಲ್ಲಿ ಇಂದು ಆಚರಣೆಯಲ್ಲಿರುವ ಅನೇಕ ಸಂಪ್ರದಾಯಗಳು ಅವೈದಿಕವಾಗಿವೆ ಎಂದರೆ ಕಹಿ ಅನ್ನಿಸಿದರೂ ಅದು ಸತ್ಯದ ಮಾತಾಗಿದೆ. ನೈಜ ವೇದಾಧ್ಯಾಯಿಗಳು, ವೇದಪಂಡಿತರುಗಳು ಪ್ರತಿಷ್ಠೆಯನ್ನು ಬದಿಗಿಟ್ಟು ಸತ್ಯಶೋಧ ಮತ್ತು ಸತ್ಯಪ್ರಚಾರಕ್ಕೆ ತೊಡಗುವುದು ಒಳ್ಳೆಯದು. ವೇದಕಾಲದಲ್ಲಿ ಪ್ರಚಲಿತವಿದ್ದ ವರ್ಣಾಶ್ರಮ ಪದ್ಧತಿಯ ಬಗೆಗೂ ಸಂಕ್ಷಿಪ್ತವಾಗಿ ಗಮನಿಸೋಣ.
     ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳೋಣ. ಇಂದಿನ ಜಾತಿವ್ಯವಸ್ಥೆಗೂ ಅಂದಿನ ವರ್ಣಾಶ್ರಮ ಪದ್ಧತಿಗೂ ಸಂಬಂಧವಿಲ್ಲ. ಈಗ ಹುಟ್ಟಿನಿಂದ ಬರುವುದೆಂದು ಭಾವಿಸಲಾಗಿರುವ ಜಾತಿ ಪದ್ಧತಿಯು, ಸ್ವಾರ್ಥಿಗಳು ಮೇಲು-ಕೀಳು ಎಂಬ ನೀಚ ಭಾವನೆಗಳಿಗೆ ಅವಕಾಶ ಕೊಡುವುದಾಗಿದೆ ಮತ್ತು ವರ್ಣಾಶ್ರಮ ವ್ಯವಸ್ಥೆಗೆ ಸುದೀರ್ಘ ಕಾಲಾನಂತರದಲ್ಲಿ ಹಚ್ಚಿರುವ ಕಳಂಕವಾಗಿದೆ, ವಿರೂಪಗೊಳಿಸಿರುವುದಾಗಿದೆ. ಸರಿಯಾಗಿ ವಿವೇಚಿಸಿದರೆ, ಕಾಣುವ ದೃಷ್ಟಿಯಿದ್ದರೆ ವರ್ಣಾಶ್ರಮದಲ್ಲಿದ್ದ ಶ್ರೇಷ್ಠತೆಯನ್ನು ಗುರುತಿಸಬಹುದು.  ವರ್ಣಾಶ್ರಮ ಪದ್ಧತಿಯಲ್ಲಿ ನಾಲ್ಕು ವರ್ಣಗಳನ್ನು ಗುರುತಿಸಿದ್ದಾರೆ - ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಈ ಪದಗಳನ್ನು ಒಪ್ಪಿಕೊಳ್ಳುವುದು ಬೇಡವೆಂದಾದರೆ ಬೌದ್ಧಿಕ ಪರಿಶ್ರಮ, ಬಾಹುಬಲ ಆಧಾರಿತ ಕಾರ್ಯ, ವ್ಯಾಪಾರೋದ್ಯಮ ಮತ್ತು ಕೃಷಿ ಹಾಗೂ ಶಾರೀರಿಕ ಪರಿಶ್ರಮದ ವೃತ್ತಿಗಳು ಎಂದಿಟ್ಟುಕೊಳ್ಳಬಹುದು. ವರ್ಣ ಎಂಬ ಪದದ ಅರ್ಥ 'ಆರಿಸಿಕೊಳ್ಳುವ ತತ್ವ' ಎಂದು. ಹುಟ್ಟಿನ ಜಾತಿಗೂ ವರ್ಣಕ್ಕೂ ಸಂಬಂಧವಿಲ್ಲ. ಅವರವರ ವ್ಯಕ್ತಿಗತ ಸಾಮರ್ಥ್ಯ, ಅಭಿರುಚಿ, ಗುಣ, ಸ್ವಭಾವಗಳಿಗೆ ತಕ್ಕಂತೆ ಆರಿಸಿಕೊಳ್ಳುವ ವೃತ್ತಿಯೇ ವರ್ಣ. ಇದರಲ್ಲಿ ಯಾವುದೂ ಕೀಳಲ್ಲ, ಯಾವುದೂ ಮೇಲಲ್ಲ. ಎಲ್ಲರ ಅಭಿರುಚಿ, ಸಾಮರ್ಥ್ಯಗಳೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಹೀಗಾಗಿ ಒಂದೇ ಕುಟುಂಬದಲ್ಲಿ ನಾಲ್ಕು ವರ್ಣಗಳವರೂ ಇರುವ ಸಾಧ್ಯತೆಯಿದೆ. ಒಬ್ಬ ಬ್ರಾಹ್ಮಣನ ಮಗ ಬ್ರಾಹ್ಮಣನೂ ಆಗಬಹುದು, ಆಗದೆಯೂ ಇರಬಹುದು; ಕ್ಷತ್ರಿಯನೂ ಆಗಬಹುದು, ಕಾರ್ಮಿಕನೂ ಆಗಬಹುದು. ಹಾಗೆಯೇ ಒಬ್ಬ ಕ್ಷತ್ರಿಯ, ವೈಶ್ಯ, ಶೂದ್ರರು ಬ್ರಾಹ್ಮಣರಾಗಲೂ ಅಭ್ಯಂತರವಿರಲಿಲ್ಲ. ಇಲ್ಲಿ ಅಭಿರುಚಿ, ಗುಣ, ಸ್ವಭಾವ ಮತ್ತು ಸಾಮರ್ಥ್ಯಕ್ಕಷ್ಟೇ ಪ್ರಾಧಾನ್ಯತೆ. 
     ಜಗತ್ತಿನ ಯಾವುದೇ ದೇಶವಿರಲಿ, ಆಸ್ತಿಕ ದೇಶವಾಗಿರಲಿ, ನಾಸ್ತಿಕ ದೇಶವಾಗಿರಲಿ, ನಾಲ್ಕು ಬಗೆಯ ಜನರು ಇದ್ದೇ ಇರುತ್ತಾರೆ - ಬೌದ್ಧಿಕ ಪ್ರಾಧಾನ್ಯರು, ಸೈನಿಕರು ಮುಂತಾದ ಶಕ್ತಿ ಪ್ರಾಧಾನ್ಯರು, ವ್ಯಾಪಾರಿಗಳು ಮತ್ತು ಶ್ರಮಿಕರು! ಯಾರು ಒಪ್ಪಲಿ, ಬಿಡಲಿ ಈ ಸಹಜ ವಿಂಗಡಣೆ ಇದ್ದೇ ಇರುತ್ತದೆ. ಇದನ್ನು ವಿರೋಧಿಸಿ ಎಲ್ಲರೂ ಬುದ್ಧಿಜೀವಿಗಳಾಗಲಿ, ಎಲ್ಲರೂ ಸೈನಿಕರಾಗಲಿ, ಎಲ್ಲರೂ ವ್ಯಾಪಾರಿಗಳಾಗಲಿ ಅಥವ ಎಲ್ಲರೂ ಕಾರ್ಮಿಕರಾಗಲಿ, ಎಲ್ಲರೂ ಒಂದೇ ವೃತ್ತಿಯನ್ನು ಆರಿಸಿಕೊಳ್ಳಲಿ ಎಂದು ಬಯಸಿದರೂ ಅದು ಸಾಧ್ಯವಾಗದು. ಈ ನಾಲ್ಕು ವರ್ಗಗಳೂ ದೇಶದ ಅಭಿವೃದ್ದಿಗೆ ಅತ್ಯಗತ್ಯ ಮತ್ತು ಪರಸ್ಪರ ಪೂರಕ; ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಇಂತಹ ವರ್ಗಗಳನ್ನು ಸಮಾನ ಗೌರವದಿಂದ ಕಾಣುವುದು ಮತ್ತು ಹುಟ್ಟಿನ ಜಾತಿಗೆ ಅನಗತ್ಯ ಪ್ರಾಮುಖ್ಯತೆ ನೀಡುವುದು ತಪ್ಪಿದಲ್ಲಿ ಸಧೃಢ ಸಮಾಜ ನಿರ್ಮಾಣ ಸಾಧ್ಯ. ಸಮಾನತೆ ಸಾರುವ ವೇದಮಂತ್ರದ ಕರೆ ನಮ್ಮನ್ನು ಎಚ್ಚರಿಸಲಿ:
ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ | ಯುವಾ ವಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ || (ಋಕ್.5.60.5.) 
     ಅರ್ಥ: ಈ ಮಾನವರು ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರೂ ಅಲ್ಲ, ಪರಸ್ಪರ ಸಹೋದರರು. ಸೌಭಾಗ್ಯಪ್ರಾಪ್ತಿಗಾಗಿ ಮುಂದುವರೆಯುತ್ತಾರೆ. ಶಿಷ್ಟರಕ್ಷಕ, ದುಷ್ಟಶಿಕ್ಷಕ ಪರಮಾತ್ಮ ಇವರೆಲ್ಲರ ತಂದೆ. ಭೂಮಾತೆ ಈ ಮರ್ತ್ಯರಿಗೆಲ್ಲಾ ಉತ್ತಮ ಶಕ್ತಿಯನ್ನೆರೆಯುವವಳೂ, ಉತ್ತಮ ದಿನಗಳನ್ನು ತೋರಿಸುವವಳೂ ಆಗಿದ್ದಾಳೆ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ