ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಸೆಪ್ಟೆಂಬರ್ 29, 2015

ಸಾಧನಾ ಸೋಪಾನ - 4: ಇಚ್ಛಾಶಕ್ತಿಯಿರದ ಸೃಷ್ಟಿಯಿಲ್ಲ!


     ಮನಸ್ಸು ಅನ್ನುವುದು ಜ್ಞಾನ ಮತ್ತು ಮಾತಿನ ಕ್ರಿಯೆಗಳಿಗೆ ಮೇಲಿನದೆಂದು ತಿಳಿದೆವು. ನಮ್ಮ ಎಲ್ಲಾ ಭೌತಿಕ ಚಟುವಟಿಕೆಗಳಿಗೆ ಮತ್ತು ಮಾತಿನ ಮೂಲಕ ನಾವು ಹೊರಸೂಸುವ ಎಲ್ಲಾ ಭಾವಗಳಿಗೆ ಮನಸ್ಸೇ ಕಾರಣಕರ್ತವಾಗಿದೆ. ಇಂತಹ ಪ್ರಬಲ ಮನಸ್ಸಿನ ಹಿಂದೆಯೂ ಒಂದು ನಿರ್ದಿಷ್ಟ ಚಿಂತನೆಯ ಚಟುವಟಿಕೆ ಇದ್ದು ಅದು ಮನಸ್ಸನ್ನು ಹಿಡಿದಿಡಬಲ್ಲುದಾಗಿದೆ. ಅದೇ ಇಚ್ಛಾಶಕ್ತಿ! ಸಂಸ್ಕೃತದಲ್ಲಿ ಇದನ್ನು 'ಸಂಕಲ್ಪ' ಎನ್ನುತ್ತಾರೆ. ಈ ಇಚ್ಛಾಶಕ್ತಿ ಅನುಸರಿಸಿ ಮನಸ್ಸು ಕೆಲಸ ಮಾಡುತ್ತದೆ.
     ಪ್ರತಿಯೊಂದು ಸಂಗತಿ/ವಿಷಯದ ಹಿಂದೆ ಒಂದು ನಿರ್ದಿಷ್ಟ ಇಚ್ಛಾಶಕ್ತಿ ಇರುತ್ತದೆ. ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ಭೂಮಿ, ನೀರುಗಳಿಗೂ ತಮ್ಮದೇ ಆದ ಇಚ್ಛಾಶಕ್ತಿ ಇರುತ್ತದೆ. ಅವುಗಳ ಗುಣ, ಸ್ವಭಾವಗಳ ಹಿಂದೆ ಅವುಗಳದೇ ಆದ ಇಚ್ಛಾಶಕ್ತಿ ಅಡಗಿರುತ್ತದೆ. ಅದು ಅವುಗಳ ಗುಣ, ಸ್ವಭಾವ, ಅಸ್ತಿತ್ವಗಳನ್ನು ಉಳಿಸಿಕೊಳ್ಳುವುದಕ್ಕೆ ಕಾರಣವಾಗಿದೆ. ಹಾಗೆ ಇರದಿದ್ದರೆ ಒಂದು ಇನ್ನೊಂದರ ಗುಣಗಳನ್ನು ಅರಗಿಸಿಕೊಂಡು ಎಲ್ಲವೂ ಒಂದೇ ಆಗಿಬಿಡುತ್ತಿದ್ದವು. ಈ ವಿಶ್ವದಲ್ಲಿ ಇಚ್ಛಾಶಕ್ತಿಯಿಲ್ಲದ ಯಾವ ಒಂದು ಸೃಷ್ಟಿಯೂ ಇಲ್ಲ, ಅಣುವೂ ಇಲ್ಲ. ಇದು ವಿಶ್ವಶಕ್ತಿ! ಜೀವಿಗಳೂ ಸಹ ಇಚ್ಛಾಶಕ್ತಿಯಿಂದಲೇ ಅಸ್ತಿತ್ವ ಕಂಡುಕೊಂಡಿವೆ. ನಮ್ಮ ದೇಹರಚನೆ, ಉಸಿರಾಟ, ಹೃದಯದ ಬಡಿತ, ರಕ್ತಪರಿಚಲನೆ ಮುಂತಾದುವುಗಳನ್ನೂ ನಿರ್ದಿಷ್ಟ ಇಚ್ಛಾಶಕ್ತಿ ನಿಯಂತ್ರಿಸುತ್ತಿದೆ.
     ಇಂತಹ ಪ್ರಬಲ ಇಚ್ಛಾಶಕ್ತಿಯಿಂದ ಮನಸ್ಸನ್ನು ನಿಯಂತ್ರಿಸಬಹುದಾಗಿದೆ. ಎಲ್ಲರಿಗೂ ಇಚ್ಛಾಶಕ್ತಿ ಇರುತ್ತದೆ. ಅದನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ ಎಂಬುದೇ ಮುಖ್ಯ. ಉತ್ತರಪ್ರದೇಶದ ಅಂಬೇಡ್ಕರ್ ನಗರದ ಅರುಣಿಮಾ ಸಿನ್ಹಾ ಪ್ರಬಲ ಇಚ್ಛಾಶಕ್ತಿಗೆ ಇತ್ತೀಚಿನ ಮಾದರಿಯಾಗಿದ್ದಾಳೆ. ಸಿ.ಐ.ಎಸ್.ಎಫ್ ಪರೀಕ್ಷೆಗೆ ಹೋಗುವ ಸಲುವಾಗಿ ಲಕ್ನೌನಿಂದ ದೆಹಲಿಗೆ ಹೋಗುವ ಪದ್ಮಾವತಿ ಎಕ್ಸ್‌ಪ್ರೆಸ್ ರೈಲಿಗೆ 11.4.2011ರಲ್ಲಿ ಹತ್ತಿ ಕುಳಿತಾಗ ಆಕೆಯ ವಯಸ್ಸು 23 ವರ್ಷಗಳು. ಮಾರ್ಗಮಧ್ಯದಲ್ಲಿ ಕಳ್ಳರು ಆಕೆಯ ಚೀಲ ಮತ್ತು ಸರವನ್ನು ಕಿತ್ತುಕೊಳ್ಳಲು ಬಂದಾಗ ಪ್ರತಿಭಟಿಸಿದ್ದ ಅವಳನ್ನು ಚಲಿಸುತ್ತಿದ್ದ ರೈಲಿನಿಂದ ಅವರು ಹೊರಗೆ ಎಸೆದುಬಿಟ್ಟಿದ್ದರು. ಅದೇ ಸಮಯಕ್ಕೆ ಎದುರಿನಿಂದ ಬರುತ್ತಿದ್ದ ರೈಲಿಗೆ ಸಿಕ್ಕಿ ಅವಳ ಕಾಲು ಜರ್ಜರಿತವಾಗಿತ್ತು. ಪ್ರಜ್ಞೆಯಿಲ್ಲದೆ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅವಳನ್ನು ಆ ಸ್ಥಿತಿಯಲ್ಲಿ ಕಂಡಿದ್ದವರಿಗೆ ಅವಳು ಬದುಕುವ ಬಗ್ಗೆ ಸಂದೇಹವಿತ್ತು. ಜೀವ ಉಳಿಸಲು ಆಸ್ಪತ್ರೆಯಲ್ಲಿ ಆಕೆಯ ಕಾಲನ್ನು ಮೊಳಕಾಲಿನಿಂದ ಕೆಳಕ್ಕೆ ಕತ್ತರಿಸಿದ್ದರು. ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದ ಆಕೆಗೆ ಇದರಿಂದ ಆಘಾತವಾಗಿತ್ತು. ಆಕೆಗೆ ಕೇಂದ್ರ ಕ್ರೀಡಾ ಪ್ರಾಧಿಕಾರದಿಂದ ಆರ್ಥಿಕ ನೆರವು ದೊರೆತು. ಖಾಸಗಿ ಕಂಪೆನಿಯೊಂದು ಆಕೆಗೆ ಉಚಿತವಾಗಿ ಕೃತಕ ಕಾಲು ಅಳವಡಿಸಲು ನೆರವಾಯಿತು. ಅಲಹಾಬಾದ್ ಉಚ್ಛನ್ಯಾಯಾಲಯ ರೈಲ್ವೆಯವರು ಆಕೆಗೆ ರೂ.5.00 ಲಕ್ಷ ಪರಿಹಾರಧನ ನೀಡಬೇಕೆಂದು ಆದೇಶಿಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆಕೆ ಎವರೆಸ್ಟ್ ಶಿಖರವನ್ನು ಏರುವ ಕನಸು ಕಂಡದ್ದು. ಕ್ಯಾನ್ಸರ್ ಗೆದ್ದು ಬಂದಿದ್ದ ಕ್ರಿಕೆಟಿಗ ಯುವರಾಜಸಿಂಗನಿಂದ ಆಕೆ 'ಏನನ್ನಾದರೂ ಸಾಧಿಸಬೇಕೆಂದು' ಪ್ರೇರಿತಳಾಗಿದ್ದಳು. ಮೌಂಟನಿಯರಿಂಗ್ ಕೋರ್ಸಿಗೆ ಸೇರಿದ ಅಕೆ ಅದರ ಪ್ರಾಥಮಿಕ ವಿಷಯಗಳಲ್ಲಿ ಅಗ್ರಗಣ್ಯತೆ ಗಳಿಸಿದಳು. ವಡೋದರದ ಸ್ವಾಮಿ ರಾಮಕೃಷ್ಣ ಮಿಶನ್ನಿನ ಸಹಾಯದಿಂದ ಕೃತಕ ಕಾಲಿನಿಂದ ಎವರೆಸ್ಟ್ ಏರುವ ಆಸೆಗೆ ಬೆಂಬಲ ಸಿಕ್ಕಿತು. ಎವರೆಸ್ಟ್ ಏರಿದ ಪ್ರಥಮ ಮಹಿಳೆ ಬಚೇಂದ್ರಿಪಾಲಳಿಂದ ಅಗತ್ಯದ ತರಬೇತಿ ಪಡೆದಳು. ಪೂರ್ವಭಾವಿಯಾಗಿ 6150 ಮೀಟರ್ ಎತ್ತರದ ಐಲೆಂಡ್ ಶಿಖರವನ್ನು 2012ರಲ್ಲಿ ಯಶಸ್ವಿಯಾಗಿ ಏರಿದ್ದಳು. 1.4.2013ರಂದು ಮಾರ್ಗದರ್ಶಿ ಸುಸೇನ್ ಮಹತೋ ಜೊತೆಗೂಡಿ ಎವರೆಸ್ಟ್ ವಿಜಯಕ್ಕೆ ಹೊರಟ ಅರುಣಿಮಾ 51 ದಿನಗಳ ಸತತ ಕಠಿಣ ಪರಿಶ್ರಮದ ನಂತರದಲ್ಲಿ ಯಶಸ್ವಿಯಾಗಿ ಶಿಖರದ ತುತ್ತ ತುದಿಯನ್ನು 21.5.2013ರಂದು ತಲುಪಿಯೇಬಿಟ್ಟಳು! ಶಿಖರವೇರಿದ ಆಕೆ ಒಂದು ಸಂದೇಶವನ್ನು ಬರೆದು ಬಟ್ಟೆಯಲ್ಲಿ ಸುತ್ತಿ ಹಿಮದಲ್ಲಿ ಹೂತಿಟ್ಟಳು. ಆಕೆಯೇ ಹೇಳಿದಂತೆ ಅದು, "ಶಂಕರ ಭಗವಾನ್ ಮತ್ತು ಜೀವನದುದ್ದಕ್ಕೂ ತನಗೆ ಚೈತನ್ಯದಾಯೆನಿಸಿದ್ದ ಸ್ವಾಮಿ ವಿವೇಕಾನಂದರಿಗೆ ಸಲ್ಲಿಸಿದ ಕೃತಜ್ಞತೆಯಾಗಿತ್ತು". ಕೈಕಾಲುಗಳು ಗಟ್ಟಿಯಾಗಿರುವವರಿಗೇ ಕಷ್ಟವೆನಿಸುವ ಆ ಕೆಲಸ ಆಕೆಗೆ ಸಾಧ್ಯವಾಗಿಸಿದ್ದು ಆಕೆಯ ಇಚ್ಛಾಶಕ್ತಿ!
     ನಮ್ಮ ಕನಸುಗಳನ್ನು ಜೀವಂತವಾಗಿರಿಸಿಕೊಳ್ಳಬೇಕು. ಅದಕ್ಕಾಗಿ ನಮ್ಮ ಬಗ್ಗೆಯೇ ನಮಗೆ ನಂಬಿಕೆ ಮತ್ತು ವಿಶ್ವಾಸಗಳಿರಬೇಕು. ದೂರದೃಷ್ಟಿ, ಕಠಿಣ ಶ್ರಮ, ಧೃಢ ನಿರ್ಧಾರ ಮತ್ತು ಅದಕ್ಕೋಸ್ಕರ ಅರ್ಪಣಾ ಮನೋಭಾವಗಳಿದ್ದರೆ ಎಂತಹುದನ್ನಾದರೂ ಸಾಧಿಸಬಹುದು ಎಂಬುದಕ್ಕೆ ನೂರಾರು ನಿದರ್ಶನಗಳು ಸಿಗುತ್ತವೆ. ಹಿಂದೆ ಆಗಿಹೋದ ಹಲವಾರು ಸಾಧು-ಸಂತರು, ಸಾಧಕರುಗಳು, ವಿವಿಧ ಕ್ಷೇತ್ರಗಳಲ್ಲಿ ಉತ್ತುಂಗ ಸಾಧನೆಗಳನ್ನು ಮಾಡಿದವರು, ಮಾಡುತ್ತಿರುವವರನ್ನು ಕಾಣುತ್ತಿರುತ್ತೇವೆ. ದೌರ್ಭಾಗ್ಯವೆಂದರೆ ಅಂತಹ ಸಾಧಕರುಗಳನ್ನು ದೇವರುಗಳಂತೆ ಕಂಡು ಗುಡಿ ಕಟ್ಟಿ ಪೂಜಿಸಿ ಧನ್ಯರಾದೆವೆಂದುಕೊಂಡುಬಿಡುತ್ತೇವೆ. ಅವರುಗಳಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ ಅವರುಗಳು ತೋರಿದ ಹಾದಿಯಲ್ಲಿ ನಡೆದು ನಾವುಗಳೂ ಸಹ ಅಂತಹ ಸಾಧನಾ ಪರಂಪರೆ ಮುಂದುವರೆಸುವುದು. ಪ್ರತಿಯೊಂದು ಸಾಧನೆಯೂ ಸುಮ್ಮನೆ ಆದುದಲ್ಲ. ಪ್ರಯತ್ನಿಸುವ ನಿರ್ಧಾರದಿಂದ ಆ ಸಾಧನೆ ಆರಂಭವಾಗುತ್ತದೆ ಅಷ್ಟೆ. ಸಾವಿರ ಮೈಲುಗಳ ಪ್ರಯಾಣ ಆರಂಭವಾಗುವುದೂ ನಾವಿಡುವ ಮೊದಲ ಸಣ್ಣ ಹೆಜ್ಜೆಯಿಂದಲೇ! ಆ ಹೆಜ್ಜೆಯಿಡಲು ಬೇಕಿರುವುದು ಇಚ್ಛಾಶಕ್ತಿ! ವಿವೇಕಾನಂದರ ವಾಣಿಯಿದು: "ಧೃಢನಿರ್ಧಾರದ ಒಬ್ಬ ವ್ಯಕ್ತಿ ಬದಲಾವಣೆ ತರಬಲ್ಲ; ಧೃಢ ನಿರ್ಧಾರ ಹೊಂದಿದ ಸಣ್ಣ ಜನರ ಗುಂಪು ಇತಿಹಾಸದ ಗತಿಯನ್ನೇ ಬದಲಾಯಿಸಬಲ್ಲದು!"
     ಇಚ್ಛಾಶಕ್ತಿಯನ್ನು ಹೊಸದಾಗಿ ಗಳಿಸಿಕೊಳ್ಳಬೇಕಿಲ್ಲ, ನಮ್ಮೊಳಗೆಯೇ ಇರುವ ಅದನ್ನು ಉಪಯೋಗಿಸಿಕೊಳ್ಳಬೇಕಷ್ಟೆ. ಕುಡಿಯುವುದು ಕೆಟ್ಟದ್ದು, ಸಿಗರೇಟು ಸೇದುವುದರಿಂದ ನಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯವೂ ಹಾಳಾಗುತ್ತದೆ ಎಂಬುದು ಕುಡಿಯುವವರಿಗೂ ಗೊತ್ತು, ಧೂಮಪಾನಿಗಳಿಗೂ ಗೊತ್ತು. ಆದರೂ ಅವರು ಕುಡಿಯುತ್ತಾರೆ, ಸಿಗರೇಟು ಸೇದುತ್ತಾರೆ. ಏಕೆಂದರೆ ಇಚ್ಛಾಶಕ್ತಿಯನ್ನು ಉಪಯೋಗಿಸಿಕೊಳ್ಳಲು ಅವರ ಮನಸ್ಸು ಬಿಡುವುದಿಲ್ಲ. ಮಧುಮೇಹದಿಂದ ನರಳುತ್ತಿರುವವನ ಮನಸ್ಸು 'ಇದೊಂದು ಸಲ ಹೋಳಿಗೆ ತಿಂದುಬಿಡು, ಒಂದು ಮಾತ್ರೆ ಜಾಸ್ತಿ ತೆಗೆದುಕೊಂಡರಾಯಿತು' ಎಂದು ಪುಸಲಾಯಿಸುತ್ತದೆ. ಚಂಚಲ ಮನಸ್ಸಿಗೆ ಕಡಿವಾಣ ಹಾಕಬೇಕೆಂದರೆ ನಮ್ಮ ಅಂತರಂಗದ ಧ್ವನಿಗೆ ಕಿವಿಗೊಡಲೇಬೇಕು.
     ಮನಸ್ಸಿನ ನಿಯಂತ್ರಣಕ್ಕೆ ಮತ್ತು ಇಚ್ಛಾಶಕ್ತಿಯ ಉಪಯೋಗಕ್ಕೆ ಕೆಲವು ಆಂತರಿಕ ಮತ್ತು ಬಾಹ್ಯ ಆಚರಣೆಗಳು ನೆರವಾಗುತ್ತವೆ. ಯಾವುದಾದರೂ ಶುಭ ಕಾರ್ಯ ಮಾಡುವ ಮುನ್ನ ಸಂಕಲ್ಪ ಮಾಡುವ, ಕಂಕಣ ಕಟ್ಟಿಕೊಳ್ಳುವ ಸಂಪ್ರದಾಯವಿದೆ. ನಾವು ಮಾಡುವ ಈ ಕೆಲಸದಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ನಿಶ್ಚಯದಿಂದ ಆ ಕೆಲಸ ಮುಗಿಯುವವರೆಗೂ ಶ್ರದ್ಧೆಯಿಂದ ಮಾಡುವವರು ಇರುತ್ತಾರೆ. ಅಂತಹ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿ, ಸಂತೋಷವೂ ಸಿಗುತ್ತದೆ. ಸ್ವಾಮಿ ಅಯ್ಯಪ್ಪನ ದರ್ಶನ ಮತ್ತು ಪೂಜೆಯ ಸಲುವಾಗಿ ಮಾಲೆ ಧರಿಸುವವರ ನಡವಳಿಕೆಗಳನ್ನು ನಾವು ಕಂಡಿರುತ್ತೇವೆ ಅಲ್ಲವೇ? ಅವರು ವ್ರತದಲ್ಲಿರುವ ಅವಧಿಯಲ್ಲಿ ಅವರು ಎಲ್ಲರನ್ನೂ 'ಸ್ವಾಮಿ' ಎಂದೇ ಸಂಬೋಧಿಸುತ್ತಾರೆ, ಸ್ತ್ರೀ ಸಂಗ ಮಾಡುವುದಿಲ್ಲ, ಯಾರ ಮೇಲೂ ಸಿಟ್ಟಿಗೇಳುವುದಿಲ್ಲ, ಕುಡಿಯುವ, ಮಾಂಸ ತಿನ್ನುವ ಅಭ್ಯಾಸವಿರುವವರು ಆ ಅವಧಿಯಲ್ಲಿ ಅವನ್ನೆಲ್ಲಾ ವರ್ಜಿಸುತ್ತಾರೆ. ಇದನ್ನೆಲ್ಲಾ ಅವರುಗಳು ಮಾಡುವುದು ಅವರ 'ಸಂಕಲ್ಪ'ದ/ಇಚ್ಛಾಶಕ್ತಿಯ ಕಾರಣದಿಂದ! ಇಂತಹ ಒಳ್ಳೆಯ ನಿರ್ಧಾರಗಳನ್ನು ಮುಂದುವರೆಸಲು ಅವಕಾಶವಿದೆ ಅಲ್ಲವೇ? ಭಜನೆ, ಪೂಜೆ, ಪುನಸ್ಕಾರ, ಇತ್ಯಾದಿಗಳು ಮನಸ್ಸನ್ನು ನಿಯಂತ್ರಿಸಲು, ಶಾಂತಗೊಳಿಸಲು ಪೂರಕ ಸಹಕಾರ ಕೊಡುತ್ತವೆ. ಸಜ್ಜನರ ಸಹವಾಸ, ಗುರು-ಹಿರಿಯರ ಮಾರ್ಗದರ್ಶನಗಳು, ಸಂಸ್ಕಾರಯುತ ನಡವಳಿಕೆಗಳು, ಸುಯೋಗ್ಯ ಶಿಕ್ಷಣ, ಉತ್ತಮ ವೃತ್ತಿ, ಪ್ರವೃತ್ತಿಗಳು ಸಹ ಹುಚ್ಚು ಕುದುರೆಯಂತೆ ಓಡುವ ಮನಸ್ಸಿಗೆ ಕಡಿವಾಣ ಹಾಕಲು ಸಹಕಾರಿ. ನಿಯಮಿತವಾದ ಒಳ್ಳೆಯ ಅಭ್ಯಾಸಗಳು- ಪ್ರತಿನಿತ್ಯ ವಾಕಿಂಗ್ ಮಾಡುವುದು, ವ್ಯಾಯಾಮ, ಯೋಗಾಭ್ಯಾಸ, ಇತ್ಯಾದಿಗಳಲ್ಲಿ ತೊಡಗುವುದು, ಉತ್ತಮ ಸಾಹಿತ್ಯವನ್ನು ಓದಲು ಸಮಯ ಮಾಡಿಕೊಳ್ಳುವುದು, ಆರೋಗ್ಯಕರವಾದ ಆಹಾರ ಸೇವನೆ, ಇತ್ಯಾದಿಗಳೂ ಸಹ ಮನಸ್ಸನ್ನು ಹಿಡಿತದಲ್ಲಿಡಲು ಉಪಯೋಗಕಾರಿ. ಹಿಡಿತದಲ್ಲಿರುವ ಮನಸ್ಸಿಗೆ ಇಚ್ಛಾಶಕ್ತಿಯ ಆದೇಶವನ್ನು ಪಾಲಿಸುವ ಮನಸ್ಸು ಬರುತ್ತದೆ.
     "ಯಶಸ್ಸು ಮುಕ್ತಾಯವಲ್ಲ, ಸೋಲು ಹೀನಾಯವಲ್ಲ; ಆದರೆ ಸತತ ಪ್ರಯತ್ನ ಮಾಡುತ್ತಿರುವುದು ಮಾತ್ರ ಲೆಕ್ಕಕ್ಕೆ ಬರುತ್ತದೆ! ಗೆಲ್ಲಬೇಕೆಂಬ ಇಚ್ಛಾಶಕ್ತಿ ಪ್ರಬಲವಾಗಿದ್ದರೆ ಸೋಲು ಅದನ್ನು ಹಿಮ್ಮೆಟ್ಟಿಸಲಾರದು. ಅಸಾಧ್ಯ ಮತ್ತು ಸಾಧ್ಯಗಳ ನಡುವಣ ವ್ಯತ್ಯಾಸ ಇಚ್ಛಾಶಕ್ತಿಯಲ್ಲಿದೆ. ಗೆಲ್ಲುವ ಧೃಢನಿರ್ಧಾರ ಗೆಲ್ಲುವುದಕ್ಕಿಂತಲೂ ದೊಡ್ಡದು. ಸೋಲಿಗೆ ನಿಜವಾದ ಕಾರಣವೆಂದರೆ ಇಚ್ಛಾಶಕ್ತಿಯ ಕೊರತೆಯಷ್ಟೆ."
     ಇಚ್ಛಾಶಕ್ತಿರುವ ವ್ಯಕ್ತಿ ಹೇಗೆ ಯೋಚಿಸುತ್ತಾನೆ, ಗೊತ್ತೇ? ಆರ್ಕಿಮಿಡಿಸ್ ಹೇಳುತ್ತಿದ್ದ ಮಾತು ಇದು: 'ನನಗೆ ಒಂದು ದೊಡ್ಡ ಮೀಟುಕೋಲು ಮತ್ತು ಅದನ್ನು ಸನ್ನೆಯಂತೆ ಬಳಸಲು ಒಂದು ಕಲ್ಲು ಹಾಗೂ ನಿಲ್ಲಲು ಸರಿಯಾದ ಸ್ಥಳ ಸಿಕ್ಕರೆ ಪ್ರಪಂಚವನ್ನೇ ಮೀಟುವೆ." ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ಗೆಲ್ಲುವ ಪದಕಗಳು ಚಿನ್ನದ್ದಿರಬಹುದು, ಆದರೆ ಅವುಗಳು ನಿಜವಾಗಿಯೂ ಚಿನ್ನದ್ದಲ್ಲ, ಸ್ಪರ್ಧಿಗಳ ಬೆವರು, ಧೃಢನಿರ್ಧಾರ ಮತ್ತು ಅದಮ್ಯ ಶಕ್ತಿಗಳಿಂದ ಕೂಡಿದ್ದಾಗಿರುತ್ತವೆ. ರಾಹುಲ್ ದ್ರಾವಿಡರ ಈ ಮಾತು ಮನನೀಯ: "ನಾವು ಕೌಶಲ್ಯವನ್ನು ತಪ್ಪಾಗಿ ಅರ್ಥೈಸುತ್ತೇವೆ. ನಾನೂ ಸಹ ಆ ತಪ್ಪು ಮಾಡಿದ್ದೇನೆ. ಕ್ರಿಕೆಟ್ ಚೆಂಡನ್ನು ಹೊಡೆಯುವ ರೀತಿ, ಹೊಡೆಯುವ ಆ ಸರಿಯಾದ ಸಮಯಗಳನ್ನು ಕೌಶಲ್ಯವಾಗಿ ಕಾಣುತ್ತೇವೆ. ಆದರೆ ಅದರ ಹಿಂದಿನ ಧೃಢನಿರ್ಧಾರ, ಧೈರ್ಯ, ಶಿಸ್ತು, ಮನೋಭಾವ, ಇತ್ಯಾದಿಗಳೂ ಕೌಶಲ್ಯಗಳಾಗಿವೆ." ದ್ರಾವಿಡರ ಆ ಇಚ್ಛಾಶಕ್ತಿಯೇ ಅವರನ್ನು ಬೌಲರುಗಳು ಬೀಳಿಸಲಾಗದ 'ಗೋಡೆ'ಯಾಗಿ ಅವರನ್ನು ರೂಪಿಸಿದ್ದು, ಭಾರತವನ್ನು ಅನೇಕ ಸಂದರ್ಭಗಳಲ್ಲಿ ಸಂಕಷ್ಟದ ಸ್ಥಿತಿಯಿಂದ ಪಾರು ಮಾಡಿದ್ದು! ನಾವೂ ಸಹ ನಮ್ಮೊಳಗೇ ಇರುವ ಇಚ್ಛಾಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ಧರಿಸಿಕೊಳ್ಳಬಹುದಲ್ಲವೇ?
-ಕ.ವೆಂ.ನಾಗರಾಜ್.
***************
ದಿನಾಂಕ 16-09-2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

1 ಕಾಮೆಂಟ್‌: