ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಸೆಪ್ಟೆಂಬರ್ 1, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -17: ಮಾನವ ಧರ್ಮ ಪಾಲಿಸೋಣ


     ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರ ವಿಚಾರಗಳು ಸತ್ಯಾನ್ವೇಷಿಗಳಿಗೆ ಮಾರ್ಗದರ್ಶಿಯಾಗಿವೆ.  ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು.  ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. ಇವರ 'ವೇದೋಕ್ತ ಜೀವನ ಪಥ' ಪುಸ್ತಕದಲ್ಲಿ ಒಬ್ಬ ಆದರ್ಶ ಮಾನವ ಹೇಗಿರಬೇಕು ಎಂಬುದನ್ನು ವೇದಮಂತ್ರಗಳ ಹಿನ್ನೆಲೆಯಲ್ಲಿ ವಿವರಿಸಿರುವುದು ಸಾಧಕರುಗಳಿಗೆ ಮಾರ್ಗದರ್ಶಿಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ವಿಚಾರಗಳನ್ನು ಸಂಗ್ರಹಿಸಿ ಕೊಟ್ಟಿರುವ ಈ ಲೇಖನಮಾಲೆ ಈ ಕಂತಿನೊಂದಿಗೆ ಮುಕ್ತಾಯವಾಗುತ್ತಿದೆ.
   ***************
      ಆಕಾಶದಲ್ಲಿ ಮೋಡ ಕಂಡಾಗ, ಆಕಾರದಲ್ಲಿ ತುಂಬಾ ಚಿಕ್ಕ ಚಿಕ್ಕದಾದ ಇರುವೆಗಳು ಏನು ಮಾಡುತ್ತವೆ ಗೊತ್ತಾ? ದವಸ, ಆಹಾರವನ್ನು ಹೊತ್ತುಕೊಂಡು ಸಾಲು ಸಾಲಾಗಿ ಹೋಗಿ ಗೂಡಲ್ಲಿ ಇಟ್ಟುಕೊಳ್ಳುತ್ತವೆ. ಯಾಕೆ ಅಂದ್ರೆ ಮಳೆಗಾಲದಲ್ಲಿ ಹೊರಕ್ಕೆ ಬರಕ್ಕೆ ಆಗಲ್ಲವಲ್ಲ, ಅದಕ್ಕೆ. ಅಷ್ಟು ಸಣ್ಣ ಇರುವೆಗೆ ತಲೆ ಎಷ್ಟಿರಬಹುದು? ಅದರ ಒಳಗೆ ಮೆದುಳು ಎರಬಹುದು? ಅಷ್ಟು ಸೂಕ್ಷ್ಮವಾದ ಮೆದುಳು ಇರುವೆಗೆ ಕೂಡಾ ಇದೆ. ಹೀಗಿರುವಾಗ ಆ ಪರಮಾತ್ಮನ ವಿಷಯದಲ್ಲಿ ನಾವು ಮಾತಾಡೋದೇನು? ಅವನನ್ನು ಮರೆಮಾಡಿ ನಾವು ಕದಿಯಬಹುದು, ಮೋಸ ಮಾಡಬಹುದು, ಸುಳ್ಳು ಹೇಳಬಹುದು ಅಂತ ಹೇಳಿ ನಾವು ಭಾವಿಸುತ್ತೇವಲ್ಲಾ, ಅದು ಸಾಧ್ಯವಾ? ಅವನು ಸಹಸ್ರಾಕ್ಷ, ಸಹಸ್ರಪಾತ್, ಅವನಿಗೆ ಎಲ್ಲಾ ಕಡೆಯೂ ಕಣ್ಣಿದೆ, ಅಂದರೆ ಕಣ್ಣಿಲ್ಲದೆ ನೋಡತಕ್ಕ ಶಕ್ತಿ ಆ ವಿಶ್ವಚೇತನನಲ್ಲಿ ಇದೆ. ಅವನಿಗೆ ಕಿವಿಯಿಲ್ಲ, ದೇವರ ಕಿವಿ ಯಾವುದು ತೋರಿಸುತ್ತೀರಾ? ಆದರೆ ಅವನು ಕೇಳದೇ ಇರುವ ಪದಾರ್ಥವೇ ಇಲ್ಲ. ಪ್ರತಿಯೊಂದನ್ನೂ ಅವನು ಕೇಳ್ತಾನೆ, ಪ್ರತಿಯೊಬ್ಬರನ್ನೂ ಅವನು ನೋಡ್ತಾನೆ. ಎಲ್ಲವೂ ಅವನಿಗೆ ಗೊತ್ತಾಗುತ್ತೆ. ಮತ್ತೆ ಅವನಿಗೆ ಕಾಲು ಇದೆಯಾ? ಇಲ್ಲ. ಆದರೆ ಅವನು ಇಲ್ಲದೆ ಇರುವ ಜಾಗವೇ ಇಲ್ಲ. ಪಾತ್ ಅಂದರೆ ಕಾಲು ಅಂತ ಇಟ್ಕೋಬೇಡಿ. ಕಾಲಿನ ಕೆಲಸ ಏನು? ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗೋದು. ಅವನು ಮೊದಲೇ ಇದ್ದು ಬಿಟ್ಟಿದ್ದಾನೆ. ಹೋಗೋದೆಲ್ಲಿಗೆ? ಆ ಸಮಸ್ಯೆಯೇ ಇಲ್ಲ ಅವನಿಗೆ. ನಾವು ಹೇಳಿಕೊಳ್ಳುತ್ತೇವಲ್ಲಾ, 'ಅಪರಾಧ ಸಹಸ್ರಾಣಿ . . ' 'ಹಗಲೂ ರಾತ್ರಿ ಏನೇನೋ ಪಾಪ ಮಾಡಿರ್ತೀನಿ. ನಿನ್ನ ದಾಸ ಅಂದುಕೊಂಡುಬಿಟ್ಟು ನನ್ನನ್ನು ಕ್ಷಮಿಸು' ಅಂತ! ಹಾಗೆ ದೇವರು ಕ್ಷಮಿಸಲು ಪ್ರಾರಂಭಿಸಿದರೆ ಪ್ರಪಂಚ ನಡೆಯುವ ಹಾಗೇ ಇರಲಿಲ್ಲ, ಯಾವ ಕೆಲಸವೂ ನಡೆಯುವ ಹಾಗಿರಲಿಲ್ಲ. ಆ ಪರಮಾತ್ಮನ ದಯೆ, ಎಲ್ಲರ ಮೇಲಿದೆ. ತಾಯಿ-ತಂದೆಗಳು ತಪ್ಪು ಮಾಡಿರುವ ಮಕ್ಕಳನ್ನು ದಂಡಿಸುತ್ತಾರೆ, ಹಾಗೆಂದು ಅವರಿಗೆ ಮಕ್ಕಳ ಮೇಲೆ ಕೋಪ ಇದೆಯೇನು? ಇಲ್ಲ, ಮಗು ಸುಧಾರಿಸಲಿ, ಒಳ್ಳೆಯ ಗುಣ ಕಲಿತುಕೊಳ್ಳಲಿ ಅಂತ ದಂಡಿಸುತ್ತಾರೆ. ಆ ಪರಮಾತ್ಮ ವಿಶ್ವತಶ್ಚಕ್ಷು, ಎಲ್ಲಾ ಕಡೆಯೂ ನೋಡಬಲ್ಲ! ವಿಶ್ವತೋಮುಖ- ಎಲ್ಲಾ ಕಡೆಯೂ ಮುಖ ಇರುವವನು! ಒಂದೇ ಕಡೆ ಇದಾನಾ ಅವನು? ಎಲ್ಲೆಡೆಯೂ ಇದ್ದಾನೆ.
ನೆನಪಿನಲ್ಲಿಡೋಣ
     ವೇದಗಳು ಆತ್ಮಾವಲಂಬನೆಯ ಭವ್ಯಪಾಠವನ್ನು ಕಲಿಸುತ್ತವೆ. ಪ್ರತಿಯೊಬ್ಬ ಜೀವಾತ್ಮನ ಏಳಿಗೆ ಅಥವ ಬೀಳಿಗೆ ಸ್ವತಃ ಅವನೇ ಕಾರಣ, ಬೇರೆಯವರಲ್ಲ. ಈ ಮಂತ್ರ ಹೇಳುತ್ತದೆ:
ಸ್ವಯಂ ವಾಜಿಸ್ವನ್ವಂ ಕಲ್ಪಯಸ್ವ ಸ್ವಯಂ ಯಜಸ್ವ| ಸ್ವಯಂ ಜುಷಸ್ವ ಮಹಿಮಾ ತೇsನ್ಯೇನ ನ ಸನ್ನಶೇ|| (ಯಜು.23.15.)
     ಓ ಬಲಶಾಲಿ, ಅನ್ನವಾನ್, ಜ್ಞಾನವಾನ್ ಜೀವಾತ್ಮ! ಸ್ವತಃ ಶರೀರಧಾರ್ಢ್ಯವನ್ನು ಸಾಧಿಸಿಕೋ. ಸ್ವತಃ ಸತ್ಕರ್ಮ ಮಾಡು. ಸ್ವತಃ ಸಂತೋಷಪಡು. ನಿನ್ನ ಮಾಹಾತ್ಮ್ಯ ಬೇರೆಯವರಿಂದ ಸಿದ್ಧಿಸದು ಎಂದು ಇದರ ಅರ್ಥ. ಸತ್ಯವಾದ ಮಾತು. ಬೇರೆಯವರ ಪುಣ್ಯವನ್ನು ದೋಚಿಕೊಂಡು ತಾನು ಸ್ವರ್ಗ ಅಥವಾ ಮೋಕ್ಷಕ್ಕೆ ಹೋಗಲು ಮೂರು ಕಾಲಕ್ಕೂ ಸಾಧ್ಯವಿಲ್ಲ. ಎಲ್ಲರೂ ಪ್ರತಿಯೊಂದು ಕ್ಷಣದಲ್ಲಿಯೂ ನೆನಪಿಡಲೇಬೇಕಾದ ಅಂಶವೆಂದರೆ ಪ್ರತಿಯೊಬ್ಬ ಜೀವಾತ್ಮನೂ ತನ್ನ ಕರ್ಮಕ್ಕೆ -ಅದು ಪುಣ್ಯವಾಗಿರಲಿ, ಪಾಪವಾಗಿರಲಿ- ತಾನೇ ಹೊಣೆಗಾರ. ಸ್ವೇಚ್ಛೆಯ ಹಾಗೂ ಹಿಂಸಾಮಯ ಜೀವನ ಸಾಗಿಸುತ್ತಾ. 'ನಾನು ಈ ಮಹಾತ್ಮನನ್ನು ನಂಬಿದ್ದೇನೆ, ಆದುದರಿಂದ ಮುಕ್ತಿ ನನಗೆ ಕಟ್ಟಿಟ್ಟ ಬುತ್ತಿ' ಎಂದು ಯಾರೂ ಹೇಳುವಂತಿಲ್ಲ.
     ವೇದೋಕ್ತ ಕರ್ಮಫಲಸಿದ್ಧಾಂತ ಸರ್ವತಂತ್ರ, ಸಾರ್ವಭೌಮ, ಸಾರ್ವಕಾಲಿಕ ಸತ್ಯ. ಈ ವೇದಮಂತ್ರ ಇದನ್ನೇ ಸಾರುತ್ತಿದೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ ||  (ಅಥರ್ವ.12.3.48.)
     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ ಮಧ್ಯೆ ಸೇರಿಕೊಂಡು ನಾನು ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನವನ್ನು (ಕರ್ಮಫಲವಿಪಾಕ) ಅಡುಗೆ ಮಾಡಿದವನೇ ತಿನ್ನಲೇಬೇಕಾಗುತ್ತದೆ. ಅರ್ಥ ಸ್ಪಷ್ಟವಾಗಿದೆ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಆದ ಕಾರಣ ಅನ್ಯ ವ್ಯಕ್ತಿಯ ಹೆಗಲ ಮೇಲೆ ತನ್ನ ಪಾಪದ ಹೊರೆ ಹೊರಿಸಿ, ಮುಕ್ತನಾಗುತ್ತೇನೆಂದು ಭಾವಿಸುವುದು ಆತ್ಮಘಾತಕವಾದ ಘೋರ ಅಜ್ಞಾನ. ಮಾಡಿದ್ದುಣ್ಣೋ ಮಹರಾಯ!
ಮಾನವ ಧರ್ಮದ ಮೂರು ಅಭಿನ್ನ ಅಂಗಗಳು
      ಜ್ಞಾನ, ಕರ್ಮ ಮತ್ತು ಉಪಾಸನೆಗಳು ಮಾನವ ಧರ್ಮದ ಮೂರು ಅಭಿನ್ನ ಅಂಗಗಳು. ಈ ಮೂರರಲ್ಲಿ ಯಾವುದೊಂದು ನಷ್ಟವಾದರೂ, ಧರ್ಮ ಪರಿಪೂರ್ಣವಾಗಿ ಉಳಿಯುವುದಿಲ್ಲ. ವೇದಗಳ ದೃಷ್ಟಿಯಲ್ಲಿ ಧಾರ್ಮಿಕರಾದವರು ಹೇಗಿರುತ್ತಾರೆಂದರೆ:
ಏತೇ ಅಸ್ಯಗ್ರಮಾಶವೋssತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್. 9.63.4.)
     ಈ ಆಲಸ್ಯ-ಪ್ರಮಾದರಹಿತರೂ, ಶುಭ್ರವಾದ ಆಚಾರ-ವಿಚಾರಗಳನ್ನುಳ್ಳವರೂ, ಶಾಂತಿಗುಣಪ್ರಧಾನರೂ ಆದ ಉತ್ತಮ ಮಾನವರು, ಧರ್ಮದ ಪ್ರವಾಹದೊಂದಿಗೆ ನಡೆಯುತ್ತಾ, ಕುಟಿಲ ಭಾವನೆಗಳನ್ನು ದಾಟಿ, ಮುಂದೆ ಸಾಗುತ್ತಾರೆ.
ಇಂದ್ರಂ ವರ್ಧಂತೋ ಅಪ್ತುರಃ ಕೃಣ್ವಂತೋ ವಿಶ್ವಮಾರ್ಯಮ್ | ಅಪಘ್ನಂತೋ ಅರಾವ್ಣಃ || (ಋಕ್. 9.63.5.)
    ಕಾರ್ಯ ಮಾಡುವುದರಲ್ಲಿ ವೇಗಶಾಲಿಗಳಾದ ಇವರು, ತಮ್ಮ ಆತ್ಮವಿಕಾಸ ಮಾಡಿಕೊಳ್ಳುತ್ತಾ, ಸಮಸ್ತ ಜಗತ್ತನ್ನೂ ಶ್ರೇಷ್ಠವಾಗಿ ಮಾಡುತ್ತಾ, ಸಂಕುಚಿತ ಭಾವನೆಗಳನ್ನು ತುಂಡರಿಸಿ ಚೆಲ್ಲುತ್ತಾರೆ.
ಸುತಾ ಅನು ಸ್ವಮಾ ರಜೋsಭ್ಯರ್ಷಂತಿ ಬಭ್ರವಃ || ಇಂದ್ರಂ ಗಚ್ಛಂತ ಇಂದವಃ || (ಋಕ್. 9.63.6.)
     ಭಗವಂತನ ಮಕ್ಕಳಾದ ನಿರ್ಮಲಚರಿತರಾದ, ನೀರಸಜೀವನವನ್ನು ಸರಸಗೊಳಿಸುವ ಇವರು, ಸರ್ವಶಕ್ತಿಮಾನ್ ಪ್ರಭುವಿನೆಡೆಗೆ ಹೋಗುತ್ತಾ, ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ, ನಿರಂತರವಾಗಿ ಜೀವನದ ಎಲ್ಲ ಮುಖಗಳಿಂದಲೂ ಮುಂದುವರೆಯುತ್ತಾರೆ.
     ಮಂತ್ರಗಳು ಅತೀ ಸ್ಪಷ್ಟವಾಗಿವೆ. ಆದರ್ಶ ಜೀವನಪಥದ ವೈಭವವಿದು. ತಾವು ಒಳ್ಳೆಯವರಾದರೆ ಸಾಲದು. ಸಂಪೂರ್ಣ ಮಾನವ ಸಮಾಜವನ್ನೇ ಒಳಿತಾಗಿ ಮಾಡಬೇಕು. ಈರೀತಿ ಆಗುವ ಮತ್ತು ಮಾಡುವ ಶಕ್ತಿ ಸಿದ್ಧಿಸುವುದು ನಿಷ್ಕಳ ಜ್ಞಾನಪ್ರಾಪ್ತಿಯಿಂದ, ಪರಿಶುದ್ಧ ಕರ್ಮಾನುಷ್ಠಾನದಿಂದ, ಪವಿತ್ರ ಮನಸ್ಸಿನಿಂದ ಪರಮಾತ್ಮನ ಉಪಾಸನೆಯನ್ನು ಆಚರಿಸುವುದರಿಂದ!
     ಈ ಮಂತ್ರ ಮಾನವರಿಗೆ ಹೇಗೆ ನಡೆಯಬೇಕೆಂಬ ಬಗ್ಗೆ ಮಾರ್ಗದರ್ಶನ ನೀಡುತ್ತಿದೆ:
ಅಶ್ಮನ್ವತೀ ರೀಯತೇ ಸಂ ರಭದ್ವಮುತ್ತಿಷ್ಠತ ಪ್ರ ತರತಾ ಸಖಾಯಃ |
ಅತ್ರಾ ಜಹೀಮೋ ಅಸನ್ನಶೇವಾಃ ಶಿವಾನ್ ವಯಮುತ್ತರೇಮಾಭಿ ವಾಜಾನ್ || (ಋಕ್.10.53.8)
     ದೊಡ್ಡ ದೊಡ್ಡ ವಿಪತ್ತುಗಳೆಂಬ ಕಲ್ಲು ಗುಂಡುಗಳಿಂದ ಕೂಡಿದ ಈ ಜಗನ್ನದಿ ಹರಿಯುತ್ತಿದೆ. ಮಿತ್ರರೇ, ಏಳಿರಿ, ಒಟ್ಟಾಗಿರಿ, ದಾಟಿರಿ. ಕೆಟ್ಟದ್ದನ್ನೆಲ್ಲಾ ಇಲ್ಲಿಯೇ ಬಿಟ್ಟುಬಿಡೋಣ. ಒಳ್ಳೆಯದನ್ನೆಲ್ಲಾ ಮಾತ್ರ ತೆಗೆದುಕೊಂಡು ಮುಂದೆ ಹೋಗೋಣ! ಎಂತಹ ಉದಾತ್ತವಾದ ಕರೆಯಿದು! ಆದರ್ಶ ಮಾನವರಾಗಿ ಬದುಕುವುದು ನಮ್ಮ ಧ್ಯೇಯವಾಗಲಿ.
"ಮಾನವ ಧರ್ಮವನ್ನು ಪಾಲಿಸೋಣ, ನಿಜ ಮಾನವರಾಗಿ ಬಾಳೋಣ"
                                      (ಮುಗಿಯಿತು.)
-ಕ.ವೆಂ.ನಾಗರಾಜ್.
***************
ದಿನಾಂಕ  12.8.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ