ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಅಕ್ಟೋಬರ್ 5, 2015

ಸಾಧನಾ ಸೋಪಾನ - 5: ಸ್ಮರಣ ಶಕ್ತಿ


"ನಿನ್ನೆ ಅನ್ನುವುದು ಇಂದಿನ ನೆನಪಾದರೆ ನಾಳೆ ಅನ್ನುವುದು ಇಂದಿನ ಕನಸು."
     ಮನಸ್ಸಿಗಿಂತಲೂ ಮಿಗಿಲಾದ ಇಚ್ಛಾಶಕ್ತಿ ನಮ್ಮ ಮನೋವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮನಸ್ಸಿನ ವಿಚಾರಗಳನ್ನು ಒಂದೆಡೆ ಕೇಂದ್ರೀಕರಿಸಿದ ಶಕ್ತಿಯೇ ಹೊರತು ಮತ್ತೇನಲ್ಲ. ಮನಸ್ಸನ್ನು ಒಂದು ನಿರ್ದಿಷ್ಟ ರೀತಿಯಲ್ಲಿ, ನಿರ್ದಿಷ್ಟ ದಿಕ್ಕಿನಲ್ಲಿ ನಿರ್ದೇಶಿಸುವುದನ್ನೇ ನಾವು ಇಚ್ಛಾಶಕ್ತಿ ಅಥವ ಸಂಕಲ್ಪ ಎನ್ನುತ್ತೇವೆ. ಇನ್ನೊಂದು ಸಂಗತಿ ಇಲ್ಲದಿದ್ದರೆ ಈ ಇಚ್ಛಾಶಕ್ತಿ ಸಹ ಅರ್ಥ ಕಳೆದುಕೊಳ್ಳುತ್ತದೆ ಮತ್ತು ಅದು ಕೆಲಸ ಮಾಡಲು ಸಾಧ್ಯವಾಗದು. ಅದೇ ಸ್ಮರಣಶಕ್ತಿ! ಇದನ್ನು ಚಿತ್ತ ಎಂದೂ ಕರೆಯುತ್ತಾರೆ. ನೆನಪಿನ ಶಕ್ತಿ ಇಲ್ಲದ ವ್ಯಕ್ತಿ, ಒಂದು ಘಳಿಗೆಯ ಹಿಂದೆ ಏನಾಯಿತು ಎಂಬುದೇ ನೆನಪಿನಲ್ಲಿ ಇಟ್ಟುಕೊಳ್ಳಲಾಗದವನು, ಇಚ್ಛಾಶಕ್ತಿಯನ್ನು ಬಳಸಿ ಮನಸ್ಸನ್ನು ಕೇಂದ್ರೀಕರಿಸಲಾರ. ಏಕೆಂದರೆ ಹಿಂದಿನ ಸಂಗತಿಗಳು, ಅನುಭವಗಳು, ನಿಶ್ಚಯಗಳು, ಇತ್ಯಾದಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮನಸ್ಸಿನಲ್ಲಿ ಸಂಕಲ್ಪ ಮೂಡಲು ಅತ್ಯಗತ್ಯವಾಗಿದೆ. ನೆನಪಿಟ್ಟುಕೊಳ್ಳುವ ಮತ್ತು ಅದನ್ನು ಉಳಿಸಿಕೊಳ್ಳುವ ಶಕ್ತಿ ಇದ್ದರೆ ಮಾತ್ರ ಇಚ್ಛಾಶಕ್ತಿ ಕೆಲಸ ಮಾಡಬಲ್ಲದು, ಮನಸ್ಸು ಕೇಳಬಲ್ಲುದು, ಸರಿಯಾದ ಮಾತು ಹೊರಬರುವುದು ಮತ್ತು ಜ್ಞಾನಕ್ಕೆ ಅರ್ಥ ಬರುವುದು! ಇವೆಲ್ಲವೂ ಒಂದು ಸರಪಳಿಯಿದ್ದಂತೆ!
     ಒಬ್ಬ ದೊಡ್ಡ ಪಂಡಿತನಿದ್ದಾನೆ ಎಂದುಕೊಳ್ಳೋಣ. ಅವನಿಗೆ ಎಷ್ಟೇ ದೊಡ್ಡ ಪಾಂಡಿತ್ಯವಿರಬಹುದು, ಅವನು ಎಷ್ಟೋ ವಿದ್ಯೆಗಳನ್ನು ಕಲಿತು ಅರಗಿಸಿಕೊಂಡಿರಬಹುದು, ಆದರೆ ಸ್ಮರಣ ಶಕ್ತಿ ಇಲ್ಲದಿದ್ದರೆ ಅವನ ಪಾಂಡಿತ್ಯವೆಲ್ಲವೂ ವ್ಯರ್ಥ. ಸ್ಮರಣಶಕ್ತಿ ಇರುವ ಜ್ಞಾನಿಗಳ ಮಾತಿಗೆ ಜನ ಬೆಲೆ, ಗೌರವ ಕೊಡುತ್ತಾರೆ. ಆದ್ದರಿಂದ ಮನುಷ್ಯನ ವ್ಯಕ್ತಿತ್ವ ಪಾಂಡಿತ್ಯದೊಡನೆ ಅವನ ನೆನಪಿನ ಶಕ್ತಿಯನ್ನೂ ಆಧರಿಸಿರುತ್ತದೆ. ಓದಿದ ಎಷ್ಟೋ ವರ್ಷಗಳ ನಂತರದಲ್ಲೂ ಇಂತಹ ವಿಷಯ ಇಂತಹ ಗ್ರಂಥದ ಇಷ್ಟನೇ ಪುಟದಲ್ಲಿದೆ ಎಂದು ಹೇಳಬಲ್ಲ ಅದ್ಭುತ ವ್ಯಕ್ತಿಗಳೂ ಕಾಣಸಿಗುತ್ತಾರೆ.
     ನೆನಪು ಯಾವಾಗಲೂ ಹೃದಯದ ಮಾತನ್ನು ಕೇಳುತ್ತದೆ! ಹೃದಯದ ಮಾತು ಎಂದರೆ ನಮಗೆ ಇಷ್ಟವೆನಿಸುವ, ನಮಗೆ ಮಹತ್ವದ್ದೆನಿಸುವ ಸಂಗತಿಗಳು! ಅವು ನೆನಪಿನಲ್ಲಿ ಉಳಿಯುತ್ತವೆ. ಒಂದು ಸಣ್ಣ ಉದಾಹರಣೆ ಹೇಳಬೇಕೆಂದರೆ ನಾನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕಟ್ಟಿದ್ದು 1967ರಲ್ಲಿ. ಸುಮಾರು 48 ವರ್ಷಗಳ ಹಿಂದೆ ಕಟ್ಟಿದ್ದ ಆ ಪರೀಕ್ಷೆಯ ರಿಜಿಸ್ಟರ್ ನಂ. 47983 ಅನ್ನುವುದು ಈಗಲೂ ನೆನಪಿದೆ. ಪಿಯುಸಿಯ ನಂ. 17253 ಆಗಿತ್ತು. ಆದರೆ ಪದವಿ ಪರೀಕ್ಷೆಯ ನಂ. ನನಗೆ ನೆನಪಿಲ್ಲ. ಇದರ ಅರ್ಥ ಇಷ್ಟೇ, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಿಗೆ ಕೊಟ್ಟಿದ್ದಷ್ಟು ಮಹತ್ವವನ್ನು ನಾನು ಪದವಿ ಪರೀಕ್ಷೆಗೆ ಕೊಡಲಾಗಿರಲಿಲ್ಲ ಅಥವ ಕೊಟ್ಟಿರಲಿಲ್ಲ. ನಿಮಗೆ ನಿಮ್ಮ ಸ್ನೇಹಿತನೋ, ನಿಮ್ಮ ಮನೆಯ ಯಾರಾದರೂ ಸದಸ್ಯರೋ ಏನನ್ನಾದರೂ ಹೇಳಿರುತ್ತಾರೆಂದು ಇಟ್ಟುಕೊಳ್ಳಿ. ನೀವು ಅದಕ್ಕೆ ಮಹತ್ವ ಕೊಟ್ಟಿದ್ದರೆ ಮಾತ್ರ ನಿಮಗೆ ಅದು ನೆನಪಿರುತ್ತದೆ. ಇಲ್ಲದಿದ್ದರೆ ಅವರು ಎದುರಿಗೆ ಬಂದಾಗ ಮಾತ್ರ ನೆನಪಾಗಿ, 'ಅಯ್ಯೋ ಮರೆತೇಬಿಟ್ಟೆ' ಅನ್ನುತ್ತೀರಿ.
     ಒಳ್ಳೆಯ ಅನುಭವಗಳಿಗಿಂತ ಕೆಟ್ಟ ಅನುಭವಗಳು ನೆನಪಿನಲ್ಲಿ ಉಳಿಯುತ್ತವೆ! ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ, ಸ್ವಾಭಿಮಾನವನ್ನು ಕೆಣಕುವ ಮಾತುಗಳನ್ನು ನಾವು ಮರೆಯುವುದಿಲ್ಲ. 'ನಾನು ಸತ್ತರೂ ಇದನ್ನು ಮಾತ್ರ ಮರೆಯುವುದಿಲ್ಲ' ಎಂಬಂತಹ ಮಾತುಗಳನ್ನು ಕೇಳಿರುತ್ತೇವಲ್ಲವೇ? ಸ್ವಾಭಿಮಾನವನ್ನು ಕೆಣಕುವ ಮಾತುಗಳು, ಅವಮಾನಗಳು, ಸೋಲುಗಳು ದೀರ್ಘಕಾಲ ನೆನಪಿನಲ್ಲಿರುತ್ತವೆ. ಇವು ಅಸಾಧಾರಣವಾದುದನ್ನು ಸಾಧಿಸಲೂ ಉತ್ತೇಜಿಸುತ್ತವೆ. ಹುಟ್ಟುಕುರುಡನಾಗಿ ಜನಿಸಿದ್ದ ಬಾಲಕ ಚಿಕ್ಕಂದಿನಲ್ಲೇ ತಂದೆ-ತಾಯಿಯರನ್ನು ಕಳೆದುಕೊಂಡು ಅಣ್ಣ-ಅತ್ತಿಗೆಯರಿಂದ ದಂಡಪಿಂಡ, ಶನಿ, ಕೂಳಿಗೆ ಭಾರ, ಇತ್ಯಾದಿ ದೂಷಣೆಗಳನ್ನು ಪ್ರತಿನಿತ್ಯ ಕೇಳಿ ಸಹಿಸಿಕೊಳ್ಳಲಾಗದೆ ಮನೆಬಿಟ್ಟು ಹೊರಟಾಗ ಅವನಿಗೆ ಕೇವಲ ಎಂಟು ವರ್ಷಗಳು. ಮುಂದೆ ಆ ಬಾಲಕ  ವಿರಜಾನಂದ ಸರಸ್ವತಿಯಾಗಿ ರೂಪುಗೊಂಡಿದ್ದ. ತಮ್ಮ ಶಿಷ್ಯ ಮಹರ್ಷಿ ದಯಾನಂದ ಸರಸ್ವತಿಯಂತಹ ಮಹಿಮಾನ್ವಿತರನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದು ಈ ವಿರಜಾನಂದರೇ! ವಿರಜಾನಂದರ ಸಾಧನೆಗೆ ಪ್ರೇರಣೆಯಾಗಿದ್ದು ಅವರು ದಂಡಪಿಂಡ ಎಂದು ಬೈಯಿಸಿಕೊಂಡ ನೆನಪು ಅಚ್ಚಳಿಯದೇ ಉಳಿದಿದ್ದು!
     ಈ ನೆನಪಿನ ಶಕ್ತಿ ಉಳಿಯಲು ಕೆಲವು ಆಂತರಿಕ ಮತ್ತು ಬಾಹ್ಯ ಸಂಗತಿಗಳು ಸಹಾಯಕವಾಗುತ್ತವೆ. ಈ ಸಂಗತಿಗಳೆಂದರೆ ಮನಸ್ಸನ್ನು ನಿಯಂತ್ರಿಸುವುದು, ಜ್ಞಾನ ಸಂಪಾದನೆ, ಸಜ್ಜನ ಸಹವಾಸ (ಸತ್ಸಂಗ), ಸುಯೋಗ್ಯ ಗುರುಗಳ ಮಾರ್ಗದರ್ಶನ, ನಿಯಮಿತವಾದ ವ್ಯಾಯಾಮ, ಧ್ಯಾನ, ಇತ್ಯಾದಿಗಳು. ಹಿಂದೆ ಹಿರಿಯರು ಮರೆಗುಳಿಗಳಿಗೆ ಏನಾದರೂ ಸಂಗತಿಯ ನೆನಪು ಮರೆಯದಿರಲು ಜೇಬಿನಲ್ಲಿ ಒಂದು ಕಲ್ಲು ಇಟ್ಟುಕೋ, ಸೆರಗಿನಲ್ಲಿ ಒಂದು ಕಲ್ಲು ಕಟ್ಟಿಕೋ, ಇತ್ಯಾದಿ ಸಲಹೆ ಕೊಡುತ್ತಿದ್ದರು. ಆ ಕಲ್ಲನ್ನು ಕಂಡಾಗ, 'ಓಹ್, ಈ ಕೆಲಸ ಮಾಡಬೇಕಾಗಿತ್ತು' ಎಂಬುದು ಅವರುಗಳಿಗೆ ನೆನಪಾಗುತ್ತಿತ್ತು. ಈಗ ಉಪನಯನವನ್ನು ಯಾವ ಯಾವ ಸಮಯದಲ್ಲೋ ಮಾಡುತ್ತಾರೆ. ಇಂದಿನ ಸಾಮಾಜಿಕ ವ್ಯವಸ್ಥೆ ಸಹ ಈ ಏರುಪೇರಿಗೆ ಕಾರಣವಾಗಿದೆ. ಮೊದಲಾದರೋ ಇದನ್ನು ಯಾವುದೇ ಜಾತಿ, ಮತ, ಪಂಥ, ಲಿಂಗಬೇಧವಿಲ್ಲದೆ ಮಕ್ಕಳನ್ನು ಶಿಕ್ಷಣದ ಸಲುವಾಗಿ ಗುರುಕುಲಗಳಿಗೆ ಕಳುಹಿಸುವ ಮುನ್ನ ಮಾಡಿ ಕಳುಹಿಸಲಾಗುತ್ತಿತ್ತು. ಸುಯೋಗ್ಯ ಶಿಕ್ಷಣ ಪಡೆಯುವ ಸಂಕಲ್ಪದ ಜೊತೆಗೆ ಉಪವೀತದ ಮೂರು ಎಳೆಗಳು ಒಬ್ಬ ಮಾನವ ಜೀವಿತಕಾಲದಲ್ಲಿ ತೀರಿಸಬೇಕಾದ ಮೂರು ಋಣಗಳ-ದೇವಋಣ, ಪಿತೃಋಣ ಮತ್ತು ಆಚಾರ್ಯಋಣ- ಕುರಿತು ಸದಾಕಾಲ ನೆನಪಿರಲಿ ಎಂಬ ಉದ್ದೇಶವನ್ನು ಧರಿಸಿದವರಿಗೆ ನೆನಪಿಸುತ್ತಿದ್ದವು. ಇಂದು ಇದು ಕೇವಲ ಜಾತಿಸೂಚಕವಾಗಿ ಬಳಸಲಾಗುತ್ತಿರುವುದು ವಿಷಾದದ ಸಂಗತಿ. ಶುಭಕಾರ್ಯಗಳ ಸಂದರ್ಭದಲ್ಲಿ ಕಟ್ಟಿಕೊಳ್ಳುವ ಕಂಕಣವೂ ಸಹ ಸ್ಮರಣಶಕ್ತಿಯ ಜಾಗೃತಿಗಾಗಿಯೇ ಆಗಿದೆ.
ಚಿತ್ತ ಚಪಲತೆಯಿಂ ಚಿತ್ತ ಚಂಚಲತೆ
ಚಿತ್ತ ಚಂಚಲತೆಯಿಂ ಚಿತ್ತ ತಳಮಳವು |
ತಳಮಳ ಕಳವಳ ಹಾಳುಗೆಡವದೆ ಶಾಂತಿ
ಶಾಂತಿಯಿಲ್ಲದಿರೆ ಸುಖವೆಲ್ಲಿ ಮೂಢ ||
     ನೆನಪಿನ ಶಕ್ತಿ ಹಾಳಾಗಲು ಚಿತ್ತ ಚಪಲತೆ ಪ್ರಧಾನ ಕಾರಣವಾಗಿದೆ. ಒಂದು ತರಬೇತಿ ಕೇಂದ್ರದಲ್ಲಿ ಚಿತ್ರಕಲೆ, ಕರಕುಶಲಕಲೆ, ಶಿಲ್ಪಕಲೆ, ನಟನೆಗಳನ್ನು ಕಲಿಸಲಾಗುತ್ತಿತ್ತು. ಪ್ರತಿಯೊಂದೂ ಆರು ತಿಂಗಳ ಕಾಲಾವಧಿಯ ತರಬೇತಿಯಾಗಿದ್ದು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುತ್ತಿತ್ತು. ರಾಮಣ್ಣ ಮತ್ತು ಶಾಮಣ್ಣ ತರಬೇತಿಗೆ ಸೇರಿದರು. ರಾಮಣ್ಣ ಮೊದಲಿಗೆ ಚಿತ್ರಕಲೆ ಆರಿಸಿಕೊಂಡರೆ ಶಾಮಣ್ಣ ಕರಕುಶಲಕಲೆ ಆರಿಸಿಕೊಂಡ. ಒಂದು ತಿಂಗಳ ನಂತರ ಶಾಮಣ್ಣನಿಗೆ ಕರಕುಶಲಕಲೆ ಕಷ್ಟ, ನಂತರ ಕಲಿತರಾಯಿತು ಎಂದು ಶಿಲ್ಪಕಲೆ ಕಲಿಯಲು ಆರಂಭಿಸಿದ. ಅಲ್ಲೂ ಒಂದೆರಡು ತಿಂಗಳ ನಂತರ ಅದನ್ನು ಬಿಟ್ಟು ನಟನೆಗೆ ಸೇರಿದ. ಅಲ್ಲೂ ಬೇಸರವಾಗಿ ಚಿತ್ರಕಲೆ ಕಲಿಯಲು ಆರಂಭಿಸಿದ. ಇಷ್ಟರಲ್ಲಿ ರಾಮಣ್ಣ ಚಿತ್ರಕಲೆ, ಕರಕುಶಲಕಲೆ ತರಬೇತಿಗಳನ್ನು ಪೂರ್ಣವಾಗಿ ಮುಗಿಸಿ ಶಿಲ್ಪಕಲೆಯಲ್ಲಿ ತರಬೇತಿ ಪಡೆಯತೊಡಗಿದ್ದ. ತರಬೇತಿ ಅವಧಿ ಪೂರ್ಣಗೊಂಡಾಗ ರಾಮಣ್ಣ ಎಲ್ಲದರಲ್ಲೂ ಪರಿಣಿತನಾಗಿದ್ದರೆ, ಶಾಮಣ್ಣ ಯಾವುದರಲ್ಲೂ ಪ್ರಯೋಜನವಿಲ್ಲದವನಾಗಿದ್ದ. ಅವನ ಚಿತ್ತ ಚಂಚಲತೆ ಅವನನ್ನು ಹಾಳು ಮಾಡಿತ್ತು. ರಾಮಣ್ಣನನ್ನು ಕಂಡು ಅಸೂಯೆಪಟ್ಟು ಮನಃಶಾಂತಿ ಹಾಳು ಮಾಡಿಕೊಂಡದ್ದೇ ಅವನಿಗೆ ಬಂದ ಲಾಭ! ಸಾತತ್ಯವಿಲ್ಲದಿದ್ದರೆ ಯಾವುದೂ ಸಿದ್ಧಿಸದು.
     ದೈಹಿಕ ತೊಂದರೆಗಳು, ಮಾನಸಿಕ ಕಾಯಿಲೆಗಳು, ಭಯ, ದುರಭ್ಯಾಸಗಳು ಮುಂತಾದವು ಸಹ ನೆನಪಿನ ಶಕ್ತಿ ಹಾಳಾಗಲು ಕಾರಣವಾಗುತ್ತವೆ. ವೃದ್ಧಾಪ್ಯದಲ್ಲಿ ಮೆದುಳಿನ ನರಗಳು ಶಕ್ತಿ ಕಳೆದುಕೊಳ್ಳುತ್ತವೆ. ಆಗಲೂ ನೆನಪು ಕೈಕೊಡುತ್ತದೆ. ಆದ್ದರಿಂದ ದೈಹಿಕವಾಗಿ, ಮಾನಸಿಕವಾಗಿ ಧೃಢವಾಗಿದ್ದರೆ ನೆನಪಿನ ಶಕ್ತಿಗೆ ಬಲ ಇರುತ್ತದೆ. ನಮ್ಮ ಜೀವನಶೈಲಿ ಒಳ್ಳೆಯದಾಗಿದ್ದರೆ ನಾವು ದೈಹಿಕವಾಗಿ, ಮಾನಸಿಕವಾಗಿ ಧೃಢವಾಗಿರಲು ಸಾಧ್ಯವಿದೆ. ಒಳ್ಳೆಯ ರೀತಿಯಲ್ಲಿ ಬಾಳಿದರೆ ನಮ್ಮ ನೆನಪಿನ ಶಕ್ತಿ ಅಬಾಧಿತವಾಗಿರುತ್ತದೆ. ಒಳ್ಳೆಯ ರೀತಿಯಲ್ಲಿ ಬಾಳಿದರೆ ಇತರರ ನೆನಪಿನಲ್ಲೂ ಉಳಿಯುತ್ತೇವೆ!
     ಕೆಲವು ಸಂಗತಿಗಳನ್ನು ಮರೆಯುವುದೂ ಅಗತ್ಯವಿರುತ್ತದೆ. ಹಲವು ಕಹಿ ನೆನಪುಗಳು, ಘಟನೆಗಳು ನಮ್ಮ ನೆಮ್ಮದಿಯನ್ನು ಹಾಳುಗೆಡವುತ್ತವೆ. ಅಂತಹವುಗಳನ್ನು ಮರೆಯಲು ಅಥವ ನೆನಪಿನ ಬುತ್ತಿಯಿಂದ ಅಳಿಸಲು ನಮ್ಮ ಮನಸ್ಸನ್ನು ಟ್ಯೂನ್ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಮೆದುಳು ಅಂತಹ ಕೆಲಸವನ್ನೂ ಆಗಾಗ ಸಹಜವೆಂಬಂತೆ ಮಾಡುತ್ತಿರುತ್ತದೆ. ನಮ್ಮ ಸನಾತನ ಧರ್ಮ ಪುನರ್ಜನ್ಮವನ್ನು ಪ್ರತಿಪಾದಿಸುತ್ತದೆ. ಒಂದು ವೇಳೆ ಹಿಂದಿನ ಜನ್ಮದ ನೆನಪುಗಳು ಮುಂದಿನ ಜನ್ಮದಲ್ಲೂ ನೆನಪಿನಲ್ಲಿ ಉಳಿಯುತ್ತಿದ್ದರೆ ವ್ಯವಸ್ಥೆಯಲ್ಲಿ ಏರುಪೇರು ಆಗುವ ಸಂಭವವಿರುತ್ತದೆ. ಹಾಗಾಗಿ ಅಂತಹ ನೆನಪು ಉಳಿಯದಿದ್ದರೇ ಒಳಿತು.
     ಜಗತ್ತಿನ ಇತಿಹಾಸ ಅನ್ನುವುದು ನೆನಪಿನ ದಾಖಲೆಯೇ ಹೊರತು ಮತ್ತೇನಲ್ಲ! ಆಯಾ ಕಾಲದ ಇತಿಹಾಸಕಾರರು, ಕವಿಗಳು, ಲೇಖಕರು ತಮ್ಮ ಕಾಲದ ಸಂಗತಿಗಳನ್ನು ತಮ್ಮ ಕೃತಿಗಳಲ್ಲಿ ದಾಖಲು ಮಾಡಿರುವುದನ್ನು ಆಧರಿಸಿ ಇತಿಹಾಸವನ್ನು ಅರಿಯಬಹುದಾಗಿದೆ. ಇತಿಹಾಸ ಅನ್ನುವುದು ಹಿಂದೆ ಹೀಗಿತ್ತು ಎಂದು ತೋರಿಸಿ ಹೇಗಿದ್ದರೆ ಚೆನ್ನಾಗಿರುತ್ತಿತ್ತು ಎಂಬುದರ ಅರಿವು ಮೂಡಿಸುವ ದಾಖಲೆ. ಇತಿಹಾಸ ಕಲಿಸುವ ಪಾಠಗಳನ್ನು 'ಮರೆತು' ಮತ್ತೆ ಅದೇ ತಪ್ಪುಗಳನ್ನು ಮಾಡಿ ಇತಿಹಾಸ ಪುನರಾವರ್ತಿಸುವಂತೆ ಮಾಡುತ್ತಿರುವುದು 'ಜನರ ನೆನಪು ಕ್ಷಣಿಕ' ಎಂಬುದರ ದ್ಯೋತಕ. ಕೆಲವರು ರಾಜಕಾರಣಿಗಳು ನೂರೆಂಟು ಅಕ್ರಮಗಳು, ಅನ್ಯಾಯಗಳನ್ನು ಮಾಡಿದವರು, ಮಾಡುವವರು ಎಂದು ತಿಳಿದಿದ್ದೂ ಅವರುಗಳನ್ನು ಚುನಾವಣೆಗಳಲ್ಲಿ ಮತ್ತೆ ಮತ್ತೆ ಗೆಲ್ಲಿಸುವುದಕ್ಕೆ ಕಾರಣ ಅವರ ತಪ್ಪುಗಳನ್ನು ನಾನಾ ಕಾರಣಗಳಿಗಾಗಿ 'ಮರೆಯುವುದೂ' ಕಾರಣವಾಗಿದೆ. ಇರಲಿ ಬಿಡಿ, ನೆನಪು ಮತ್ತು ಮರೆವು ಒಂದೇ ನಾಣ್ಯದ ಎರಡು ಮುಖಗಳು! ಜ್ಞಾನವಿರಲಿ, ಜ್ಞಾನಕ್ಕೆ ಮುಕುಟವಾದ ಸುವಾಕ್ಕುವಿರಲಿ, ಸುವಾಕ್ಕುವಾಡುವ ಮನಸ್ಸಿರಲಿ, ಮನಸ್ಸು ನಿಯಂತ್ರಿಸುವ ಸುಸಂಕಲ್ಪವಿರಲಿ ಮತ್ತು ಈ ಸುಸಂಕಲ್ಪವನ್ನು ಮರೆಯದಿರುವ ನೆನಪು ನಮ್ಮದಿರಲಿ. ಹೀಗಾದರೆ ಸಾಧನೆಯ ಐದು ಮೆಟ್ಟಲುಗಳನ್ನು ಏರಿದವರು ನಾವಾಗುತ್ತೇವೆ.
-ಕ.ವೆಂ.ನಾಗರಾಜ್.
**************
ದಿನಾಂಕ  23-09-2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

1 ಕಾಮೆಂಟ್‌: