ಇನ್ನು ಧರ್ಮದ ಎರಡನೆಯ ಅಭಿನ್ನ ಅಂಗವಾದ ಕರ್ಮದ ಬಗೆಗೆ ಆಲೋಚಿಸೋಣ. ಜ್ಞಾನ, ಧರ್ಮದ ಶಿರಸ್ಸಿದ್ದಂತೆ ಎಂದು ಹೇಳಿದ್ದೇವೆ. ಅದೇ ರೂಪಕವನ್ನು ಮುಂದುವರೆಸಿ, ಕರ್ಮ, ಧರ್ಮದ ಕೈಕಾಲುಗಳಿದ್ದಂತೆ ಎನ್ನಬಹುದು. ಕರ್ಮರಹಿತವಾದ ಜ್ಞಾನ ಕೇವಲ ಸಿದ್ಧಾಂತ ಮಾತ್ರ. ಅದಕ್ಕನುಸಾರವಾದ ಕರ್ಮವಿಲ್ಲದಿದ್ದರೆ ಧರ್ಮ ಕೈಕಾಲಿಲ್ಲದ ಹೆಳವನಂತೆ ಪಂಗುವಾಗಿ ಹೋಗುವುದು. ಆದುದರಿಂದ, ಯಜುರ್ವೇದ ಹೇಳುತ್ತಲಿದೆ:-
ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ |
ಏವಂ ತ್ವಯ ನಾನ್ಯಥೇತೋsಸ್ತಿ ಕರ್ಮ ಲಿಪ್ಯತೇ ನರೇ || (ಯಜು.೪೦.೨.)
[ಇಹ] ಈ ಲೋಕದಲ್ಲಿ [ಕರ್ಮಾಣಿ ಕುರ್ವನ್ ಏವ] ಕರ್ಮಗಳನ್ನು ಮಾಡುತ್ತಲೇ, [ಶತಂ ಸಮಾಃ] ನೂರು ವರ್ಷಗಳವರೆಗೆ, [ಜಿಜೀವಿಷೇತ್] ಜೀವಿಸಲಿಚ್ಛಿಸಬೇಕು. [ತ್ವಯಿ ನರೇ] ಮಾನವನಾದ ನಿನ್ನಲ್ಲಿ [ಏವಂ ಕರ್ಮ ನ ಲಿಪ್ಯತೇ] ಹೀಗೆ ಕರ್ಮ ಅಂಟಿಕೊಳ್ಳುವುದಿಲ್ಲ. [ಇತಃ] ಇಲ್ಲಿಂದ [ಅನ್ಯಥಾ ನ ಅಸ್ತಿ] ಬೇರೆ ಮಾರ್ಗವಿಲ್ಲ.
ಇದೂ ವೈದಿಕ ಧರ್ಮದ ಅದ್ಭುತ ಸೌಂದರ್ಯವೇ. ನಾವು ವೇದಾಂತಿಗಳು, ನಾವು ನಿಷ್ಕರ್ಮರು, ಕರ್ಮ ಮಾಡಿದರೆ ಜಗತ್ತಿಗಂಟಿಕೊಳ್ಳುವೆವು. ಆದುದರಿಂದ ನಾವು ಯಾವ ಕರ್ಮಕ್ಕೂ ಕೈ ಹಾಕುವುದಿಲ್ಲ - ಎಂದು ಹೇಳುವವರಿಗೆ ವೈದಿಕ ಧರ್ಮದಲ್ಲಿ ಸ್ಥಳವಿಲ್ಲ. ನೈಷ್ಕರ್ಮ ಆಲಸ್ಯದ ಮತ್ತೊಂದು ಹೆಸರು. ಶರೀರ - ಆತ್ಮ ಎರಡೂ ಒಟ್ಟಿಗಿರುವವರೆಗೆ ಭೌತಿಕ ಆವಶ್ಯಕತೆಗಳನ್ನು, ಆಹಾರ-ಪಾನೀಯ-ವಸ್ತ್ರಾದಿಗಳನ್ನು ಪಡೆಯಲೇ ಬೇಕಾಗುತ್ತದೆ. ಅದನ್ನು ಪಡೆಯುವುದಕ್ಕಾಗಿ ಮಾತ್ರ ಸಮಾಜವನ್ನಾಶ್ರಯಿಸುವುದು, ಆದರೆ ಸಮಾಜಕ್ಕಾಗಿ ಏನನ್ನೂ ಮಾಡದಿರುವುದು ಮಹಾಪಾಪ. ಏಕೆಂದರೆ, ಆ ಆಲಸ್ಯವೃತ್ತಿ ಆತ್ಮನ ಮೇಲೆ ಮಹಾನ್ ಋಣದ ಹೊರೆಯನ್ನು ಹೇರುತ್ತದೆ. ಋಣಿಯಾದವನು ಸಮಾಜದ್ರೋಹಿ ಮಾತ್ರವಲ್ಲ, ಆಧ್ಯಾತ್ಮಿಕ ಉನ್ನತಿಗೂ ಅನರ್ಹನಾಗಿ ಹೋಗುತ್ತಾನೆ. ಸಮಾಜದಿಂದ ಪಡೆದ ಮೇಲೆ ಏನಾದರೂ ಕೊಡಲೂ ಬೇಕಾಗುತ್ತದೆ. ನಾವು ಯಾವುದೇ ಆಶ್ರಮದಲ್ಲಿರಲಿ, ಜಗತ್ತಿಗೆ ಹೊರೆಯಾಗಿ, ಋಣಿಗಳಾಗಿ, ಅನ್ನಶತ್ರುಗಳಾಗಿ ಬಾಳಬಾರದು.
****************************
-Pt. Sudhakara Chaturvedi.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ