ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಏಪ್ರಿಲ್ 11, 2011

ಅನುಪಮ ಸಾಧಕ - ಮಾರ್ಗದರ್ಶಿಗೆ ನಮಿಸೋಣ

     ಇಂದು ಶ್ರೀಯುತ ಪಂಡಿತ ಸುಧಾಕರ ಚತುರ್ವೇದಿಯವರು 115ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರನ್ನು ನೆನೆಯೋಣ, ಅವರ ವಿಚಾರಗಳನ್ನು ತಿಳಿಯೋಣ, ನಮಿಸೋಣ, ಶುಭ ಹಾರೈಸೋಣ!



ಪಂಡಿತ ಸುಧಾಕರ ಚತುರ್ವೇದಿಯವರ ಕುರಿತು ಕೆಲವು ಮಾಹಿತಿ:
1. 1897ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿದವರು, ಅಪ್ಪಟ ಕನ್ನಡಿಗರು.
2. 11ನೆಯ ವಯಸ್ಸಿಗೆ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿದವರು.
3. ಇವರು ಚತುರ್ವೇದಿ ಮನೆತನದವರಲ್ಲ. ನಾಲ್ಕೂ ವೇದಗಳನ್ನು ಇಪ್ಪತ್ತೈದು ವರ್ಷಗಳ ಕಾಲ ಸತತ ಅಭ್ಯಾಸ ಮಾಡಿದ ನಿಜವಾದ ಪಂಡಿತರು. ಈ ಕಾರಣಕ್ಕಾಗಿ ಸಾರ್ವದೇಶಿಕ ಆರ್ಯ ಪ್ರತಿನಿಧಿ ಸಭೆಯ ನಿರ್ಣಯಾನುಸಾರ 'ಚತುರ್ವೇದಿ' ಎಂಬ ಉಪಾಧಿ ಪಡೆದವರು.
4. ವೈದಿಕ ವಾಗ್ಮಿಗಳು, ಬ್ರಹ್ಮಚರ್ಯವ್ರತಪಾಲಕರು, ಯಾವುದೇ ವೈದಿಕ ವಿಷಯಗಳನ್ನು ಸರಳವಾಗಿ ವಿವರಿಸುವ ನೈಪುಣ್ಯತೆ ಹೊಂದಿದವರು. ಇವರ ಅನೇಕ ಲೇಖನಗಳು, ವಿಚಾರಗಳು ಪುಸ್ತಕರೂಪದಲ್ಲಿ ಪ್ರಕಟಗೊಂಡಿವೆ. ಸತ್ಯಾನ್ವೇಶಿಗಳಿಗೆ ನಿಜವಾಗಿ ಮಾರ್ಗದರ್ಶಿಯಾಗಿವೆ.
5. ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿರದಿಂದ ಕಂಡವರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಸಾಕ್ಷಿಯಾದವರು. ಆ ಕುರಿತು ಅವರ ಮಾತು: "1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ನೆನಸಿಕೊಂಡರೆ ಈಗಲೂ ಕಣ್ಣಲ್ಲಿ ನೀರು ಬರುತ್ತದೆ. ದೊಡ್ಡದಾದ ತೋಟದಂತಿದ್ದ ಅಲ್ಲಿ ಸುತ್ತಲೂ  3-4 ಅಂತಸ್ತಿನ ಗೋಡೆ, ಒಂದೇ ಬಾಗಿಲು. ನೋಡುತ್ತಿದ್ದಂತೆ ಎಲ್ಲರ ಮೇಲೂ ಗುಂಡಿನ ದಾಳಿ. ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದರು. ಆದರೆ ಅಂದಿನ ಬ್ರಿಟಿಷ್ ಸರ್ಕಾರ ಕೇವಲ 670 ಜನ ಮಾತ್ರ ಸತ್ತಿದ್ದಾರೆ ಎಂದು ಹೇಳಿತು. ಮಂತ್ರ ಬರುತ್ತಿದ್ದರಿಂದ ಗಾಂಧೀಜಿಯವರು ನನ್ನ ಬಳಿ ಅಂತ್ಯ ಸಂಸ್ಕಾರ ಮಾಡಲು ಹೇಳಿದರು. ಅವರ ಆಜ್ಞೆಯಂತೆ ನದಿತಟದಲ್ಲಿ ಸಾವಿರಕ್ಕೂ ಹೆಚ್ಚು ಜನರ ಅಂತ್ಯಸಂಸ್ಕಾರ ಮಾಡಿದ್ದೆ."
6. ಸ್ವಾತಂತ್ರ್ಯ ಸಮರದಲ್ಲಿ ಪಾಲ್ಗೊಂಡವರು. ಗಾಂಧೀಜಿ ಸೇರಿದಂತೆ ಹಲವಾರು ಸ್ವಾತಂತ್ರ್ಯ ಸೇನಾನಿಗಳ ಒಡನಾಡಿಯಾಗಿದ್ದವರು. 13 ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಅವರ ಅಂದಿನ ಸ್ಥಿತಿ ಹೇಗಿತ್ತೆಂದರೆ ಕಿತ್ತು ತಿನ್ನುತ್ತಿದ್ದ ಬಡತನ, ಹೊಟ್ಟೆಗೆ ಏನೂ ಇರುತ್ತಿರಲಿಲ್ಲ, 3-4 ದಿನಗಳು  ಏನೂ ತಿನ್ನಲು ಸಿಗದೆ ನೀರು ಮಾತ್ರ ಕುಡಿದು ಹೊಟ್ಟೆ ತುಂಬಿಸಿಕೊಂಡಿದ್ದವರು. ಯಾರಾದರೂ ಆಲೂಗೆಡ್ಡೆ ಕೊಟ್ಟರೆ ಬೇಯಿಸಿಕೊಂಡು ತಿನ್ನಲೂ ಸಾಧನಗಳಿರಲಿಲ್ಲ. ಹಸಿವು ಕಚ್ಚಿಕೊಂಡಿದ್ದರೂ ಏನೂ ಮಾಡಲಾಗುತ್ತಿರಲಿಲ್ಲವೆಂದು ನೆನೆಸಿಕೊಳ್ಳುತ್ತಾರೆ.
7. ಲಾಹೋರಿನಲ್ಲಿದ್ದಾಗ ಭಗತ್ ಸಿಂಗ್ ಇವರ ವಿದ್ಯಾರ್ಥಿಯಾಗಿದ್ದ. ಗಣಿತದಲ್ಲಿ ತೇರ್ಗಡೆಯಾಗಲು ಆತನಿಗೆ 15 ಅಂಕಗಳು ಬೇಕಿದ್ದವು. ಇವರ ಹತ್ತಿರ ಅಂಕ ಕೊಡಲು ಭಗತ್ ಕೇಳಿದಾಗ "ಲಕ್ಷಣವಾಗಿ ಫೇಲಾಗು, ನನ್ನಿಂದ ಇಂತಹ ಕೆಲಸ ಅಸಾಧ್ಯ" ಎಂದು ಹೇಳಿದ್ದರು. ನಂತರದ ದಿನಗಳಲ್ಲಿ ಭಗತ್ ಮತ್ತು ಅವನ ಇತರ ಒಡನಾಡಿಗಳು ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿ ಹುತಾತ್ಮರಾದವರು. ಹೋರಾಟದ ದಾರಿ ಬೇರೆಯಾದರೂ ಗಾಂಧೀಜಿ ಮತ್ತು ಅವರುಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ.
8. ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯದ ಅರ್ಥ ತಿಳಿದುಕೊಳ್ಳುವ, ಅಭಿವೃದ್ಧಿ ಕಡೆಗೆ ಗಮನ ಹರಿಸುವುದರೊಂದಿಗೆ ಕಿರಿಯರಿಗೆ ಸ್ವಾತಂತ್ರ್ಯದ ಮಹತ್ವ ತಿಳಿಸುವ ಅಗತ್ಯ ಹೆಚ್ಚು ಎಂಬುದು ಅವರ ಅಭಿಮತ.
9. ಆಚಾರಕ್ಕಿಂತ ವಿಚಾರಕ್ಕೆ ಹೆಚ್ಚು ಮಹತ್ವ, ಪ್ರಾಧಾನ್ಯತೆ ಕೊಟ್ಟವರು. ನಂಬಿದ ತತ್ವ, ಆದರ್ಶಗಳಿಗೆ ಬದ್ಧರಾದವರು. ಅವರ ಮಾತುಗಳು ಕೆಲವರಿಗೆ ಕಠಿಣವೆನಿಸಿದರೂ ಅದರಲ್ಲಿ ಸತ್ಯವಿದೆ, ತತ್ವವಿದೆ. ಆದರೆ ಪೂರ್ವಾಗ್ರಹ ಪೀಡಿತರಲ್ಲ. ತಾವು ನಂಬಿದ ಯಾವುದೇ ವಿಚಾರ ತಪ್ಪು ಎಂದು ಸಾಧಾರವಾಗಿ ಯಾರೇ ತಿಳಿಸಿಕೊಟ್ಟರೂ ಇದುವರೆಗೂ ನಂಬಿದ ವಿಚಾರ ಬಿಟ್ಟು ಸತ್ಯದ ಹಾದಿ ತುಳಿಯಲು ಸಿದ್ಧವಿರುವವರು.
10. ವೇದ, ಭಗವದ್ಗೀತೆ, ಇತ್ಯಾದಿಗಳನ್ನು ಅರ್ಥವತ್ತಾಗಿ ಸರಳವಾಗಿ ಶ್ರೋತೃಗಳೆದುರಿಗೆ ಬಿಚ್ಚಿಡುವ ಕಲೆ ಇವರಿಗೆ ಒಲಿದಿದೆ. ಅನಿಷ್ಟ ಸಂಪ್ರದಾಯಗಳ ವಿರುದ್ಧದ ಇವರ ಸಮರ, ಇವರ ಸಾಹಿತ್ಯ ಸೇವೆಗಳಿಗಾಗಿ ಇವರು ವಂದನೀಯರು.
11. ಪ್ರಸ್ತುತ ಇವರು ಬೆಂಗಳೂರಿನ ಜಯನಗರ 5ನೆಯ ಬ್ಲಾಕಿನಲ್ಲಿರುವ ಶ್ರೀ ಕೃಷ್ಣ ಸೇವಾಶ್ರಮ ಆಸ್ಪತ್ರೆಯ ಎದುರು ಸಾಲಿನಲ್ಲಿರುವ ಮನೆಯೊಂದರಲ್ಲಿ ವಾಸವಿದ್ದಾರೆ.
12. ಎಲ್ಲಾ ಪಕ್ಷಗಳ ನಾಯಕರು, ಪ್ರತಿಷ್ಠಿತರು ಇವರನ್ನು ಕಂಡು ನಮಸ್ಕರಿಸಿ ಆಶೀರ್ವಾದ ಪಡೆದು ಹೋಗುತ್ತಾರೆ. ಆದರೆ ಇವರನ್ನೇ ಮರೆಯುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುವ ಪಿಂಚಣಿಯನ್ನು ನಯವಾಗಿ ತಿರಸ್ಕರಿಸಿದ ಇವರಿಗೆ ಕೇಂದ್ರ ಸರ್ಕಾರದಿಂದಾಗಲೀ, ರಾಜ್ಯ ಸರ್ಕಾರದಿಂದಾಗಲೀ ಯಾವುದೇ ಅಧಿಕೃತ ಗೌರವವಾಗಲೀ, ಸನ್ಮಾನವಾಗಲೀ ದೊರೆತಿಲ್ಲ. ಇದಕ್ಕೆ ಅಡ್ಡಿಯಾಗಿರುವುದು ಸರ್ಕಾರದ ಕಟ್ಟಳೆಗಳು. ಅರ್ಜಿ ಹಾಕಿ ಸನ್ಮಾನ ಪಡೆಯಬೇಕು! ಅಂತಹ ಕೇಳಿ ಪಡೆಯುವ ಗೌರವದ ಅಗತ್ಯ ಈ ಹಿರಿಯ ಜೀವಕ್ಕಿಲ್ಲ!

      ಈ ಮೇರು ವ್ಯಕ್ತಿತ್ವಕ್ಕೆ ನಮಿಸೋಣ! ಅವರ ವಿಚಾರಗಳನ್ನು ತಿಳಿಯೋಣ! ಅವರ ಮಾರ್ಗದರ್ಶನ ಸದಾ ಸಿಗಲಿ ಎಂದು ಬಯಸೋಣ!
*******************
-ಕ.ವೆಂ.ನಾಗರಾಜ್.
ವಿ.ಸೂ.: ಇದು ಎರಡು ವರ್ಷಗಳ ಹಿಂದಿನ ಲೇಖನ. ಈಗ ಚತುರ್ವೇದಿಗಳು 117ನೆಯ ವರ್ಷದಲ್ಲಿದ್ದು ಈಗಲೂ ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿರುವ ಅದ್ಭುತ ಚೇತನವಾಗಿದ್ದಾರೆ. ಅವರಿಗೆ ಸಾಷ್ಟಾಂಗ ಪ್ರಣಾಮಗಳು. ಕಳೆದ ವರ್ಷ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅವರನ್ನು ಗೌರವಿಸಿದೆ.
-ಕ.ವೆಂ.ನಾ. (07-06-2013).

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ