ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಏಪ್ರಿಲ್ 2, 2011

ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ! - 1

     ಜಗತ್ತಿನ ಚರಾಚರ ಜೀವಿಗಳು, ನಿರ್ಜೀವಿಗಳ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತವಾದ ಶಕ್ತಿಯನ್ನು ದೇವರೆಂದು ಇಟ್ಟುಕೊಳ್ಳಬಹುದು. ದೇವರೇ ಇಲ್ಲ ಎಂದು ಹೇಳುವ ಚಾರ್ವಾಕ/ನಾಸ್ತಿಕರಿಂದ ಹಿಡಿದು, ದೇವರಿಗೆ ಹಲವಾರು ಹೆಸರುಗಳನ್ನು ನೀಡಿ ಪೂಜಿಸುವವರು, ನಾವು ಪೂಜಿಸುವ ದೇವರೊಬ್ಬರೇ ದೇವರು, ಆ ದೇವರನ್ನು ಪೂಜಿಸದವರೆಲ್ಲಾ ಪಾಖಂಡಿಗಳು/ಕಾಫಿರರು ಎಂದು ಹೇಳುವವರು, ತಮ್ಮ ನಂಬಿಕೆಯನ್ನು ಇತರರ ಮೇಲೆ ಬಲವಂತವಾಗಿ ಹೇರಬಯಸುವವರು, ತಮ್ಮ ಧರ್ಮ ಪ್ರಚಾರಕ್ಕಾಗಿ ಇತರರ ಬಡತನ, ಅನಾರೋಗ್ಯ, ತಿಳುವಳಿಕೆಯ ಕೊರತೆಯನ್ನು ಬಂಡವಾಳ ಮಾಡಿಕೊಳ್ಳುವವರು, ಅನೇಕ ಆಮಿಷಗಳನ್ನು ಒಡ್ಡಿ ಮತಾಂತರದ ಮೂಲಕ ಸಂಖ್ಯೆ ಹೆಚ್ಚಿಸಿಕೊಳ್ಳುವ ಧಾವಂತದಲ್ಲಿರುವವರು, ಧರ್ಮಯುದ್ಧದ ಹೆಸರಿನಲ್ಲಿ ನರಮೇಧ ಮಾಡುವವರು, ಇತ್ಯಾದಿ, ಇತ್ಯಾದಿ ಮಾನವರ ಸಮೂಹದಲ್ಲಿ ನಾವು ಬಾಳುತ್ತಿದ್ದೇವೆ. ಜಗತ್ತಿನ ಸೃಷ್ಟಿ ಹೇಗಾಯಿತು ಎಂಬ ಬಗ್ಗೆ ವೈಜ್ಞಾನಿಕವಾಗಿ, ಧಾರ್ಮಿಕವಾಗಿ ವಿವೇಚಿಸುವ, ವಿಶ್ಲೇಷಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಆದರೆ ಎಲ್ಲರೂ ಒಪ್ಪುವಂತಹ ವಿಚಾರವನ್ನು ಮುಂದಿಡಲು, ಆ ಅಗೋಚರ ಶಕ್ತಿಯ ಮೂಲವನ್ನು ತಿಳಿದು ಅರ್ಥೈಸುವ ಕಾರ್ಯ ಮಾಡಲು ಬಹಳ ಹಿಂದಿನ ಕಾಲದಿಂದಲೇ ನಿರಂತರ ಪ್ರಯತ್ನಗಳು, ಹುಡುಕಾಟಗಳು ಸಾಗಿವೆ, ಸಾಗುತ್ತಲೇ ಇವೆ, ಬಹುಷಃ ಸಾಗುತ್ತಲೇ ಇರುತ್ತದೆ.
     ಸಕಲ ಜೀವರಾಶಿಗಳಲ್ಲಿ ಮನುಷ್ಯ ಪ್ರಾಣಿ ಬಿಟ್ಟರೆ ಉಳಿದವು ದೇವರ ಬಗ್ಗೆ ತಲೆ ಕೆಡಿಸಿಕೊಂಡಿರಲಾರವು. ಮನುಷ್ಯ ಮಾತ್ರ ತಾನೂ ತಲೆ ಕೆಡಿಸಿಕೊಂಡು ಇತರರ ತಲೆಯನ್ನೂ ಕೆಡಿಸುತ್ತಿದ್ದಾನೆ. ಇದಕ್ಕೆ ಕಾರಣ ಅವನಿಗೆ ವಿವೇಚಿಸುವ ಶಕ್ತಿಯನ್ನು ದೇವರು ನೀಡಿರುವುದು. ಮನುಷ್ಯನಿಗೂ ಸಹ ಮೊದಲು ಈ ವಿಚಾರಗಳಿರಲಿಲ್ಲ. ವಿಕಾಸ ಹೊಂದುತ್ತಾ ಬಂದಂತೆ, ವಿಚಾರವಿಮರ್ಶೆ ಮಾಡುವ ಬುದ್ಧಿ ಬೆಳೆಯುತ್ತಾ ಹೋದಂತೆ, ತನ್ನನ್ನು ಮತ್ತು ಇತರ ಜೀವರಾಶಿಗಳನ್ನು ನಿಯಂತ್ರಿಸುವ ಶಕ್ತಿಯನ್ನು ಭಕ್ತಿಯಿಂದ, ಭಯದಿಂದ, ಗೌರವದಿಂದ ನೋಡುವ ಪ್ರವೃತ್ತಿ ಬೆಳೆದು ತನ್ನ ಕಲ್ಪನೆಯ ದೇವರುಗಳನ್ನು ಸೃಷ್ಟಿಸಿದ. ಮರ, ಗಿಡ, ಸೂರ್ಯ, ಚಂದ್ರ, ನಕ್ಷತ್ರ, ಗುಡುಗು, ಸಿಡಿಲು, ಮಿಂಚು, ಬೆಂಕಿ, ನೀರು, ಇತ್ಯಾದಿಗಳಲ್ಲಿ ದೇವರನ್ನು ಕಂಡು ಪೂಜಿಸತೊಡಗಿದ. ಇವುಗಳನ್ನೂ ಮೀರಿದ, ಇವುಗಳನ್ನೂ ನಿಯಂತ್ರಿಸುವ ಶಕ್ತಿಯೊಂದಿದೆ ಎಂದು ಅರಿತು ದೇವರ ಸಾಮ್ರಾಜ್ಯವನ್ನು ತನ್ನ ಕಲ್ಪನಾಶಕ್ತಿಯಲ್ಲಿ ಬೆಳೆಸತೊಡಗಿದ. ದೇವರ ಹೆಸರಿನಲ್ಲಿ ಕಥೆಗಳು, ಪುರಾಣಗಳು ಹುಟ್ಟಿಕೊಂಡವು. ದೇವರ ಮಹಿಮೆಯನ್ನು ಕೊಂಡಾಡಿದವು. ತಮ್ಮ ಕಲ್ಪನೆ, ನಂಬಿಕೆ, ಪ್ರದೇಶಗಳಿಗೆ ತಕ್ಕಂತೆ ಗುಂಪುಗಳಾಗಿ ಜಾತಿ, ಮತ, ಧರ್ಮಗಳು ಹುಟ್ಟಿಕೊಂಡವು. ನಂತರದಲ್ಲಿ ಹುಟ್ಟಿನ ಆಧಾರದಲ್ಲಿ ಮನುಷ್ಯನ ಜಾತಿ, ಧರ್ಮಗಳು ನಿಗದಿಸಲ್ಪಟ್ಟವು. ದೇವರು ಮನುಷ್ಯನನ್ನು ಸೃಷ್ಟಿಸಿದ. ಮನುಷ್ಯ ಹಲವು ದೇವರುಗಳನ್ನೇ ಸೃಷ್ಟಿಸಿದ.
     ಒಂದು ಹಂತದವರೆಗೆ ವಿವಿಧ ಆಚಾರ-ವಿಚಾರಗಳನ್ನು ಒಪ್ಪಿಕೊಳ್ಳಬಹುದು. ಆದರೆ, ನಾವು ಹೇಳುವುದೇ ಸರಿ, ಇತರರು ಹೇಳುವುದು ತಪ್ಪು, ದೇವರು ಹೀಗೆಯೇ ಇದ್ದಾನೆ, ನಾವು ಪಾಲಿಸುವ ಧರ್ಮ/ಜಾತಿ/ಮತವೇ ನೈಜವಾದದ್ದು ಎಂಬ ವಾದ ಒಪ್ಪುವುದು ಕಷ್ಟ. ಇತರ ವಿಚಾರಗಳನ್ನು ಹೊಂದಿರುವವರು ಧರ್ಮದ್ರೋಹಿಗಳು, ಶಿಕ್ಷಾರ್ಹರು, ಅವರು ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು, ನಮ್ಮ ಧರ್ಮಾನುಯಾಯಿಗಳಾಗಲೇಬೇಕು, ವಿಚಾರವನ್ನು ಒಪ್ಪಲೇಬೇಕು, ಎಂಬ ವಿಚಾರಧಾರೆ ಎಷ್ಟರ ಮಟ್ಟಿಗೆ ಸರಿ? ಅವರವರ ವಿಚಾರ ಅವರಿಗಿರಲಿ. ಅದನ್ನು ಕಡ್ಡಾಯವಾಗಿ ಇತರರ ಮೇಲೆ ಹೇರುವುದು ತರವಲ್ಲ. ತಮ್ಮ ಮತ/ಧರ್ಮ ಬೆಳೆಸಲು ಆರೋಗ್ಯ/ಶಿಕ್ಷಣ/ ಧಾರ್ಮಿಕ/ ವ್ಯಾವಹಾರಿಕ ಮಾಧ್ಯಮಗಳೆಲ್ಲವನ್ನೂ ಬಳಸಿಕೊಳ್ಳುವುದರ ಜೊತೆಗೆ ಬಡತನ, ಅಜ್ಞಾನಗಳನ್ನೂ ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಧರ್ಮಯುದ್ಧದ ಹೆಸರಿನಲ್ಲಿ ಇತರರನ್ನು ಮಟ್ಟ ಹಾಕುವ, ಬೆದರಿಕೆ ಹಾಕುವ, ಭಯೋತ್ಪಾದನೆ ನಡೆಸುವ ಕುರುಡು ಮತಾಂಧರ ಸಂಖ್ಯೆ ಸಹ ಕಡಿಮೆಯೇನಿಲ್ಲ. ವಿಗ್ರಹಾರಾಧನೆ ಮಾಡದಿರುವವರು ಧರ್ಮದ ಹೆಸರಿನಲ್ಲಿ ದೇವಸ್ಥಾನಗಳನ್ನು, ಪೂಜಾಸ್ಥಾನಗಳನ್ನು ಧ್ವ್ವಂಸ ಮಾಡಿ ಅನೇಕ ಅಮೂಲ್ಯ ಕಲಾಕೃತಿಗಳ ನಾಶ ಮಾಡುವುದನ್ನು, ಅದೇ ರೀತಿ ಒಂದು ಗುಂಪಿನವರು ಇನ್ನೊಂದು ಗುಂಪಿನೊಂದಿಗೆ ಘರ್ಷಣೆ ನಡೆಸುವುದನ್ನು ನಾಗರಿಕ ಸಮಾಜ ಒಪ್ಪಲಾರದು. ಕಲಾಕೃತಿಗಳನ್ನು ನಿರ್ಮಿಸುವುದು ಸುಲಭದ ಕೆಲಸವಲ್ಲ; ಆದರೆ ಹಾಳು ಮಾಡುವುದು ಸುಲಭ. ಸ್ವತಃ ಜೀವ ಕೊಡಲಾರದವರು ಜೀವ ತೆಗೆಯುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಪ್ರಯತ್ನಗಳಿಂದ ಅವರು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ತರ್ಕಕ್ಕಾಗಿ ಕಾಲಘಟ್ಟದಲ್ಲಿ ಎಲ್ಲರೂ ಒಂದೇ ಮತ/ಜಾತಿ/ಧರ್ಮಕ್ಕೆ ಸೇರಿದರು ಎಂದಿಟ್ಟುಕೊಳ್ಳೋಣ. ಆಮೇಲೆ ಏನು ಮಾಡುವುದು? ವಾಸ್ತವವಾಗಿ ಆಗ ಘಟಿಸಬಹುದಾದುದೇನೆಂದರೆ ಅವರಲ್ಲೇ ಪುನಃ ಒಳಪಂಗಡಗಳ ಸೃಷ್ಟಿಯಾಗಿ ತಮ್ಮದೇ ಮೇಲು ಎಂದು ವಾದಿಸತೊಡಗುವರು. ದೇವರ ಕೊಡುಗೆಯಾದ ವೈಚಾರಿಕ ಶಕ್ತಿಯನ್ನು ಮೊಟಕುಗೊಳಿಸುವ, ಇದಕ್ಕೂ ಮುಂದೆ ಯೋಚಿಸಬಾರದು ಎಂದು ಬೇಲಿ ಹಾಕುವ ಇಂತಹ ಪ್ರವೃತ್ತಿಗಳಿಂದ ಒಂದು ರೀತಿಯಲ್ಲಿ ಪ್ರಗತಿಗೆ ಹಿನ್ನಡೆಯಾಗುತ್ತದೆ ಎಂದು ಅನ್ನಿಸುವುದಿಲ್ಲವೇ?
     'ಸಂಕಟ ಬಂದಾಗ ವೆಂಕಟರಮಣ' ಎಂಬಂತೆ ನಾವು ಕಷ್ಟದ ಪರಿಸ್ಥಿತಿಯಲ್ಲಿ ದೇವರನ್ನು ನೆನೆಯುವುದೇ ಹೆಚ್ಚು. ತೊಂದರೆ, ತಾಪತ್ರಯಗಳಿಲ್ಲದವರು ಯಾರಿದ್ದಾರೆ? ಹೀಗಾಗಿ ಯಾರೂ ಸಹಾಯಕ್ಕೆ ಬಾರದಿದ್ದಾಗ ಸಹಾಯ ಮಾಡು ಎಂದು ದೇವರನ್ನು ಬಿಟ್ಟು ಇನ್ನು ಯಾರನ್ನು ಕೋರಬೇಕು? ಈ ಕಾರಣಕ್ಕಾಗಿಯಾದರೂ ದೇವರು ನಮಗೆ ಬೇಕು. ಒಂದೆರಡು ಉದಾಹರಣೆಗಳನ್ನು ಗಮನಿಸೋಣ. ರಸ್ತೆ ಅಪಘಾತದಲ್ಲಿ ಇರುವ ಒಬ್ಬನೇ ೬ ವರ್ಷದ ಮಗ ತೀವ್ರವಾಗಿ ಪೆಟ್ಟು ಬಿದ್ದು ಆಸ್ಪತ್ರೆಗೆ ಸೇರಿಸಿದ ತಂದೆ-ತಾಯಿಯರ ಗೋಳು ಹೇಳತೀರದು. ತುಂಬಾ ರಕ್ತಸ್ರಾವವಾಗಿ ಮಗುವಿಗೆ ತುರ್ತಾಗಿ ರಕ್ತ ಕೊಡಬೇಕಾಗಿದೆ. ತಂದೆ ನೀಡಿದ ರಕ್ತದ ಪ್ರಮಾಣ ಸಾಲದು. ಆಸ್ಪತ್ರೆಯಲ್ಲಿ ಮಗುವಿಗೆ ಬೇಕಾದ ವರ್ಗದ ರಕ್ತ ಇಲ್ಲ. ಬೇರೆಲ್ಲಾ ಕಡೆ ರಕ್ತ ಹೊಂದಿಸಲು ಪರದಾಡಿದರೂ ಫಲ ಸಿಗಲಿಲ್ಲ. ಏನು ಮಾಡಲೂ ತೋಚದ ಆ ಸಂದರ್ಭದಲ್ಲಿ ಅಕಾಸ್ಮಾತ್ತಾಗಿ ಅಲ್ಲಿಗೆ ಬಂದಿದ್ದವರೊಬ್ಬರಿಗೆ ವಿಷಯ ತಿಳಿದು ಅವರ ರಕ್ತದ ವರ್ಗವೂ ಮಗುವಿನ ರಕ್ತದ ವರ್ಗಕ್ಕೆ ಸೇರಿದ್ದು ಅವರು ರಕ್ತ ನೀಡಿದ್ದಲ್ಲದೇ ತಮ್ಮ ಸಹೋದರನನ್ನೂ ಕರೆಸಿ ಅವರಿಂದಲೂ ರಕ್ತದಾನ ಮಾಡಿಸಿದರು. ಮಗುವಿನ ಪ್ರಾಣ ಉಳಿಯಿತು. ಮಗುವಿನ ತಂದೆ, ತಾಯಿ ಆ ವ್ಯಕ್ತಿಯ ಕಾಲಿಗೆ ಬಿದ್ದು ಹೇಳಿದರು -'ನೀವೇ ನಮ್ಮ ಪಾಲಿನ ದೇವರು!'.
     ಸುಮಾರು ೨೫ವರ್ಷಗಳ ಹಿಂದಿನ ನನ್ನ ಸ್ವಂತದ ಒಂದು ಅನುಭವ ಹೇಳುವೆ. ನಾನು ಹಾಸನ ಜಿಲ್ಲೆಯ ಹಳ್ಳಿಮೈಸೂರಿನಲ್ಲಿ ಉಪತಹಸೀಲ್ದಾರನಾಗಿದ್ದಾಗ ಒಂದು ಮಧ್ಯಾಹ್ನ ಒಬ್ಬ ಸುಮಾರು ೫೦ ವರ್ಷದ ಸುಬ್ಬಯ್ಯ ಎಂಬ ವ್ಯಕ್ತಿ ಕಛೇರಿಗೆ ಬಂದ. ಅಂದು ಹೆಚ್ಚಿನ ಕೆಲಸವಿಲ್ಲದ್ದರಿಂದ ಅವನೊಂದಿಗೆ ಕುಶಲೋಪರಿ ಮಾತನಾಡುತ್ತಿದ್ದೆ. ತೊಗಲು ಗೊಂಬೆ ಆಡಿಸುವ ವೃತ್ತಿಯ ಆತ ಹಲವಾರು ಪೌರಾಣಿಕ, ಐತಿಹಾಸಿಕ ಸಂಗತಿಗಳನ್ನು ರಾಗವಾಗಿ ಜಾನಪದ ಧಾಟಿಯಲ್ಲಿ ಹಾಡಿದ ಕುಶಲತೆಗೆ ಬೆರಗಾದೆ. ಅನಕ್ಷರಸ್ತನಾದರೂ ಅದ್ಭುತ ಕಲಾವಿದ ಅವನಲ್ಲಿ ನನಗೆ ಕಂಡ. ಸರ್ಕಾರ ಅವನಿಗೆ ಮಂಜೂರು ಮಾಡಿದ್ದ ೪ ಎಕರೆ ಜಮೀನನ್ನು ಗ್ರಾಮದ ಬಲಾಢ್ಯರೊಬ್ಬರು ಆಕ್ರಮಿಸಿಕೊಂಡು ಅನುಭವಿಸುತ್ತಿದ್ದರು. ವಂಶದ ಕಾಯಕವಾಗಿ ತೊಗಲು ಗೊಂಬೆ ಆಡಿಸಿಕೊಂಡು ಊರೂರು ಅಲೆಯುತ್ತಿದ್ದರಿಂದ ಜಮೀನು ಉಳಿಸಿಕೊಳ್ಳಲು ಅವನಿಗೆ ಆಗಿರಲಿಲ್ಲ. ಈ ಸಮಸ್ಯೆಯ ಸಲುವಾಗಿಯೇ ಆತ ನನ್ನನ್ನು ಭೇಟಿ ಮಾಡಲು ಬಂದಿದ್ದ. ವಿವರ ಪಡೆದು ನಾನೇ ಖುದ್ದು ಗ್ರಾಮಕ್ಕೆ ಹೋಗಿ ಜಮೀನನ್ನು ಅವನಿಗೆ ಬಿಡಿಸಿಕೊಟ್ಟೆ. ನನ್ನ ಪ್ರಯತ್ನದಿಂದ ಆ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗೊಂಬೆಸುಬ್ಬಯ್ಯನನ್ನು ಸನ್ಮಾನಿಸಿ ಗೌರವಿಸಲಾಯಿತು. ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಹಾಗೂ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯೂ ನಾನೇ ಆಗಿದ್ದರಿಂದ ಸಂಘಗಳ ವತಿಯಿಂದಲೂ ತೊಗಲು ಗೊಂಬೆ ಆಡಿಸಲು ಅಗತ್ಯವಾಧ ಉತ್ತಮ ಗುಣಮಟ್ಟದ ಪರದೆ, ಗ್ಯಾಸ್ ಲೈಟು, ತಬಲ, ಮುಂತಾದ ವಾದ್ಯ ಪರಿಕರಗಳೊಂದಿಗೆ ಧನಸಹಾಯವನ್ನೂ ಸಹ ಮಾಡಿಸಿದೆ. ಆ ಸಂದರ್ಭದಲ್ಲಿ ಆತ ನನಗೆ ಕೈ ಮುಗಿದು ಹೇಳಿದ್ದು: 'ಯಪ್ಪಾ, ನೀವೇ ನಮ್ಮ ದ್ಯಾವರು!'.
     ಮೇಲೆ ತಿಳಿಸಿದಂತಹ ಅನೇಕ ಉದಾಹರಣೆಗಳು ನಿಮ್ಮ ಗಮನಕ್ಕೂ ಬಂದಿರಬಹುದು. ನಮ್ಮ ನಿಮ್ಮೆಲ್ಲರ ಅನುಭವದಂತೆ ಕಷ್ಟದಲ್ಲಿದ್ದಾಗ, ಬೇರೆ ಯಾವುದೇ ಸಹಾಯ ದೊರಕದಿದ್ದಾಗ ಅನಿರೀಕ್ಷಿತ ನೆರವು ನೀಡುವವರನ್ನು ದೇವರು ಎಂತಲೋ ಅಥವಾ ದೇವರೇ ಅವರ ಮೂಲಕ ಮಾಡಿಸಿದ ಸಹಾಯ ಎಂತಲೋ ಭಾವಿಸುವುದು ಸುಳ್ಳಲ್ಲ. ಹಸಿವಿನಿಂದ ಕಂಗೆಟ್ಟು ಹಪಹಪ ಪಡುತ್ತಿರುವವರಿಗೆ ತಿನ್ನಲು ಏನಾದರೂ ಕೊಡುವವರೇ ದೇವರು. ಅಂದರೆ ದೇವರು ಆಪದ್ಭಾಂದವನೆಂದು ಎಲ್ಲರೂ ಒಪ್ಪುತ್ತೇವಲ್ಲವೇ?
     ಸೂರ್ಯನ ಕಿರಣಗಳನ್ನು ಮಸೂರದ (ಲೆನ್ಸ್) ಮೂಲಕ ಹಾಯಿಸಿ ಕೇಂದ್ರೀಕರಿಸಿ ಒಣಗಿದ ಕಾಗದ, ತರಗೆಲೆಗಳಿಗೆ ಬೆಂಕಿ ಹೊತ್ತಿಸಲು ಸಾಧ್ಯವಿರುವಂತೆಯೇ, ನಮ್ಮ ಮನಸ್ಸನ್ನು ನಿಯಂತ್ರಿಸಿ ಒಂದು ವಿಷಯದ ಕುರಿತು ಕ್ರೋಢೀಕರಿಸಿ ಪ್ರಾರ್ಥಿಸಿದಾಗ, ನಾವು ಎಷ್ಟರ ಮಟ್ಟಿಗೆ ಆರೀತಿ ಮಾಡಲು ಸಾಧ್ಯವಿದೆಯೋ ಅಷ್ಟರ ಮಟ್ಟಿಗೆ ಸಫಲತೆ ಕಂಡುಕೊಳ್ಳಬಹುದೆಂಬುದು ನನ್ನ ವೈಯಕ್ತಿಕ ಅನುಭವ. ಅನಿರೀಕ್ಷಿತವಾಗಿ ಕಷ್ಟಕರ ಪರಿಸ್ಥಿತಿಗೆ ಸಿಲುಕಿ ಹತಾಶನಾಗಿದ್ದಾಗ, ಅವಮಾನಿತನಾಗುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದು ಒಳಿತೆಂದು ಭಾವಿಸಿದ ಸಂದರ್ಭವೊಂದರಲ್ಲಿ ನಾನು ದೇವಸ್ಥಾನಕ್ಕೆ ಹೋಗಿ ಅಡ್ಡಬೀಳಲಿಲ್ಲ. ಆ ಸಮಯದಲ್ಲಿ ನಾನು ಸುಬ್ರಹ್ಮಣ್ಯದಲ್ಲಿ ಕೊಠಡಿಯೊಂದರಲ್ಲಿ ವಾಸವಿದ್ದೆ. ದೇವಸ್ಥಾನದ ಹೊರಗಿನ ಕಟ್ಟೆಯೊಂದರ ಮೇಲೆ ಕುಳಿತು ನನ್ನನ್ನು ಪಾರು ಮಾಡುವಂತೆ ಅಗೋಚರ ಶಕ್ತಿಯಲ್ಲಿ ತದೇಕ ಚಿತ್ತದಿಂದ ಆರ್ತನಾಗಿ, ಮೌನವಾಗಿ ಪ್ರಾರ್ಥಿಸಿದ್ದೆ. ನನ್ನ ಪ್ರಾರ್ಥನೆಯ ಫಲವೋ, ದೇವರ ಸಹಾಯವೋ ಎಂಬಂತೆ ನನ್ನನ್ನು ಮುಸುಕಿ ಮುಳುಗಿಸಲಿದ್ದ ಕಾರ್ಮೋಡ ಸರಿದು ಹೋಗಿದ್ದಂತೂ ಸತ್ಯ. ಒಮ್ಮೆಯಾದರೆ ಆಕಸ್ಮಿಕವೆನ್ನಬಹುದಿತ್ತು. ಹಲವಾರು ಸಂದರ್ಭಗಳಲ್ಲಿ ಮನಸ್ಸು ನಿಯಂತ್ರಿಸಿ ಮಾಡಿದ ಏಕಚಿತ್ತದ ಧ್ಯಾನ ನನಗೆ ಪರಿಹಾರದ ದಾರಿ ತೋರಿದೆ, ಸಾಂತ್ವನ ನೀಡಿದೆ. ನನಗೆ ದೇವರ ಕುರಿತು ಸ್ಪಷ್ಟ ಕಲ್ಪನೆಯಿಲ್ಲ, ಅಭಿಪ್ರಾಯವಿಲ್ಲ. ಯಾರನ್ನು ಪ್ರಾರ್ಥಿಸುತ್ತಿದ್ದೇನೆ, ಆ ದೇವರು ಹೇಗಿದ್ದಾನೆ ಎಂಬುದೂ ಗೊತ್ತಿಲ್ಲ. ಆದರೆ ಅಗೋಚರ, ಕಲ್ಪನೆ/ತರ್ಕಕ್ಕೆ ಮೀರಿದ, ನಮ್ಮನ್ನೆಲ್ಲಾ ನಿಯಂತ್ರಿಸುವ ಶಕ್ತಿಯೊಂದಿದೆ ಎಂಬ ನಂಬಿಕೆ ಮಾತ್ರ ಧೃಢವಾಗಿದ್ದು ನಾನು ಪ್ರಾರ್ಥಿಸಿದ್ದು, ಪ್ರಾರ್ಥಿಸುವುದು ಆ ಶಕ್ತಿಯನ್ನೇ! ಹಾಗಾದರೆ ನಮ್ಮ ಪ್ರಾರ್ಥನೆ ಸಫಲಗೊಳಿಸಿಕೊಳ್ಳಬಲ್ಲ ಶಕ್ತಿ ನಮ್ಮೊಳಗೇ ಇದೆಯೇ? ಹೌದಾದರೆ ದೇವರು ನಮ್ಮೊಳಗೂ ಇದ್ದಾನಲ್ಲವೇ?
. . . .(ಮುಂದುವರೆದಿದೆ.)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ