ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಮೇ 21, 2014

ಪುನರ್ಜನ್ಮ

     ಕೆಲವು ದಶಕಗಳ ಹಿಂದೆ ದೇವಮಾನವ ಶಿರಡಿ ಸಾಯಿಬಾಬರ ನಿಜವಾದ ಪುನರವತಾರ ತಾವೆಂದು ಹೇಳಿಕೊಳ್ಳುತ್ತಿದ್ದ ಹಲವರನ್ನು ನಾವು ಕಂಡಿದ್ದೆವು. ಅವರುಗಳು ಕ್ರಮೇಣ ಜನಮಾನಸದಿಂದ ದೂರವಾದರು. ನಂತರ ಅವರುಗಳು ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ, ಏನಾಗಿದ್ದಾರೋ ಗೊತ್ತಿಲ್ಲ. ಇರಲಿ ಬಿಡಿ. ಪುನರ್ಜನ್ಮದ ಕುರಿತು ಹಲವಾರು ರೀತಿಯ ಸಂಶೋಧನೆಗಳು, ಜಿಜ್ಞಾಸೆಗಳು, ತರ್ಕ-ಕುತರ್ಕಗಳು ನಡೆದಿವೆ, ನಡೆಯುತ್ತಿವೆ, ನಡೆಯುತ್ತಲೇ ಇರುತ್ತವೆ. ಅದರ ಜೊತೆಗೆ ನನ್ನದೂ ಒಂದೆರಡು ಸಾಲುಗಳನ್ನು ಸೇರಿಸುವ ಸಲುವಾಗಿ ಈ ಪೀಠಿಕೆ ಅಷ್ಟೆ. ಹಿಂದೂ ಧರ್ಮದಲ್ಲಿ ಪುನರ್ಜನ್ಮವನ್ನು ನಂಬಲಾಗುತ್ತದೆ. ಪರಮಾತ್ಮನೂ ದುಷ್ಟ ಶಿಕ್ಷಣ-ಶಿಷ್ಟ ರಕ್ಷಣೆಯ ಸಲುವಾಗಿ ಹತ್ತು ಅವತಾರಗಳನ್ನು ಎತ್ತಿದ್ದನೆಂದು ಹೇಳುತ್ತಾರೆ. ದೇವರು ಪುನರವತಾರಗಳನ್ನು ಎತ್ತಿದ್ದನೋ, ಇಲ್ಲವೋ ಎಂಬ ಬಗ್ಗೆ ಚರ್ಚಿಸುತ್ತಾ ವಿಷಯಾಂತರ ಮಾಡದೆ ಪುನರ್ಜನ್ಮದ ಬಗ್ಗೆ ಮಾತನಾಡೋಣ.
     ಪುನರ್ಜನ್ಮದ ಕುರಿತು ಮಾತನಾಡಬೇಕಾದರೆ ಜನ್ಮದ ಕುರಿತ ವಿಚಾರದಿಂದಲೇ ಪ್ರಾರಂಭವಾಗಬೇಕು. ಈ ಜಗತ್ತಿನಲ್ಲಿ ಎಷ್ಟೊಂದು ಬಗೆಯ ಜೀವ ವೈವಿಧ್ಯಗಳಿವೆ. ಅಷ್ಟೊಂದು ಜೀವರಾಶಿಗಳು ಏಕೆ ಇದ್ದಾವೆ ಮತ್ತು ಏಕೆ ಇರಬೇಕು ಎಂಬುದಕ್ಕೆ ಉತ್ತರ 'ಅವನೇ' ಬಲ್ಲ. ನಮಗೆ ತಿಳಿದಿರುವಂತೆ ಲಕ್ಷಾಂತರ ಜೀವರಾಶಿಗಳ ಪೈಕಿ ಮಾನವಜೀವಿ ಎದ್ದು ಕಾಣುವಂತಹ ಮತ್ತು ಇತರ ಜೀವಿಗಳಿಗಿಂತ ಭಿನ್ನವಾದ ವೈಚಾರಿಕ ಶಕ್ತಿ ಮತ್ತು ವಿವೇಚನಾ ಶಕ್ತಿ ಇರುವ ಜೀವಿ. ಈ ಜೀವಸಂಕುಲವನ್ನು ಸ್ಟೃಸಿದ್ದಾದರೂ ಯಾರು? ದೇವರು ಸೃಷ್ಟಿಸಿದನೆಂದರೆ ಏಕೆ ಸೃಷ್ಟಿಸಿದ? ದೇವರಿಗೆ ಬೇಕಿತ್ತು, ಸೃಷ್ಟಿಸಿದ ಎಂದರೆ ಏನಾದರೂ ಬೇಕು ಅನ್ನಿಸಿದರೆ ಅವನು ದೇವರು ಎನಿಸಿಕೊಳ್ಳಲಾರ. ಹಾಗಾಗಿ ಇದು ಸರಿಯೆನಿಸುವುದಿಲ್ಲ. ಇರಲಿ ಬಿಡಿ, ಇದನ್ನು ಮುಂದುವರೆಸದೆ ಮಾನವ ಜೀವಿಗಳ ಬಗ್ಗೆ ಮಾತನಾಡೋಣ. ಕೆಲವರು ಬಡವರಾಗಿ ಹುಟ್ಟುತ್ತಾರೆ, ಕೆಲವರು ಶ್ರೀಮಂತರಾಗಿ ಹುಟ್ಟುತ್ತಾರೆ, ಕೆಲವರು ದಡ್ಡರಿರುತ್ತಾರೆ, ಕೆಲವರು ಬುದ್ಧಿವಂತರಿರುತ್ತಾರೆ, ಕೆಲವರು ಸುಂದರರಾಗಿರುತ್ತಾರೆ, ಕೆಲವರು ಕುರೂಪಿಗಳಾಗಿರುತ್ತಾರೆ, ಕೆಲವರು ಅಂಗವಿಕಲರಾಗಿರುತ್ತಾರೆ. ಏಕೆ? ನಾವು ಹುಟ್ಟಿದ್ದೇವೆ, ಇದ್ದೇವೆ ಎಂಬ ಸತ್ಯ ನಮಗೆ ಅರ್ಥವಾಗುತ್ತದೆ. ಆದರೆ ನಮ್ಮ ತಂದೆ-ತಾಯಿಗಳು ಇಂಥವರೇ ಆಗಿರಬೇಕು ಎಂಬ ಆಯ್ಕೆ ನಮ್ಮ ಕೈಯಲ್ಲಿದೆಯೇ? ನಾವು ಹೀಗೆಯೇ ಹುಟ್ಟಬೇಕು, ಇಂತಹ ಜಾತಿಯಲ್ಲೇ ಹುಟ್ಟಬೇಕು ಎಂದು ಬಯಸಲು ಸಾಧ್ಯವಿದೆಯೇ? ಇಲ್ಲ. ಏಕೆ? ನಮ್ಮ ಯಾವುದೇ ತಪ್ಪಿಲ್ಲದೆ ಹೀನ, ದೀನ ಸ್ಥಿತಿಯಲ್ಲಿ ಹುಟ್ಟುವುದಾದರೆ ಅದನ್ನು ದೇವರು ಮಾಡಿದ ಪಕ್ಷಪಾತ ಎನ್ನಲೇಬೇಕಾಗುತ್ತದೆ. ದೇವರು ಪಕ್ಷಪಾತ ಮಾಡುತ್ತಾನೆ ಎಂದರೆ ಯಾರು ನಂಬುತ್ತಾರೆ? ಹೆಚ್ಚಿನವರು ನಂಬುವುದಿಲ್ಲ. ದೇವರು ಪಕ್ಷಪಾತಿಯಲ್ಲ ಅನ್ನುವುದಾದರೆ ಈ ರೀತಿ ಹುಟ್ಟುವುದಕ್ಕೆ ಬೇರೆ ಏನೋ ಕಾರಣವಿರಲೇಬೇಕು. ಅದು ಏನು?
     ಪುನರ್ಜನ್ಮವನ್ನು ನಂಬುವುದಾದರೆ ಶರೀರ ಬೇರೆ ಮತ್ತು ಶರೀರದ ಚೈತನ್ಯಕ್ಕೆ ಕಾರಣವೆನಿಸಿದ ಜೀವಾತ್ಮ ಬೇರೆ ಅನ್ನುವುದನ್ನು ಒಪ್ಪಲೇಬೇಕಾಗುತ್ತದೆ. ಸತ್ತ ನಂತರ ಶರೀರ ಅಂತ್ಯ ಸಂಸ್ಕಾರದ ಮೂಲಕ ಪಂಚಭೂತಗಳಲ್ಲಿ ವಿಲೀನವಾಗುತ್ತದೆ. ಜೀವಾತ್ಮ ಜೀರ್ಣವಾದ ಬಟ್ಟೆಯನ್ನು ಎಸೆದು ಹೊಸ ಬಟ್ಟೆಯನ್ನು ತೊಡುವಂತೆ ಹೊಸ ಶರೀರದಲ್ಲಿ ಚೈತನ್ಯಶಾಲಿಯಾಗುತ್ತದೆ. ಇದನ್ನು ಒಪ್ಪುವುದಿಲ್ಲವೆಂದರೆ ಅಂತ್ಯ ಸಂಸ್ಕಾರದ ಜೊತೆಗೆ ಆತ್ಮವೂ ನಾಶವಾಗುತ್ತದೆ ಎನ್ನಬೇಕಾಗುತ್ತದೆ. ಯಾವುದು ಸರಿಯಿರಬಹುದು? ಪುನರ್ಜನ್ಮವಿಲ್ಲವೆಂದಾದರೆ ಹುಟ್ಟುವಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬಡವ, ಶ್ರೀಮಂತ, ಹೀನ-ದೀನ, ಅಂಗವಿಕಲ, ಇತ್ಯಾದಿಯಾಗಿ ತಮ್ಮ ಯಾವುದೇ ತಪ್ಪಿಲ್ಲದೆ ಹುಟ್ಟುವುದಕ್ಕೆ ಸಮಂಜಸ ಕಾರಣ ಕೊಡುವುದು ಕಷ್ಟವಾಗುತ್ತದೆ. ಜೀವಾತ್ಮ ಅವಿನಾಶಿ, ಆದಿ-ಅಂತ್ಯಗಳಿಲ್ಲದುದು ಎಂದು ವೇದ ಹೇಳುತ್ತದೆ. ಮಾಡಿದ ಕರ್ಮಕ್ಕನುಸಾರವಾಗಿ ಜನ್ಮಗಳು ಪ್ರಾಪ್ತವಾಗುತ್ತದೆ ಎಂದು ವೇದ ಸಾರುತ್ತದೆ. ಕರ್ಮಫಲಭೋಗ ಅನಿವಾರ್ಯ ಎಂದು ಗೀತೆ ಘೋಷಿಸುತ್ತದೆ. ಅಥರ್ವ ವೇದದ ಈ ಮಂತ್ರ ನೋಡಿ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ ||  (ಅಥರ್ವ.೧೨.೩.೪೮)
     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ ಸಹಾಯದಿಂದ ಮೋಕ್ಷ ಸಿಗುತ್ತದೆ ಎಂಬುದೂ ಕೂಡ ಇಲ್ಲ ಮತ್ತು ಇದಕ್ಕೆ ಆಧಾರವೂ ಇಲ್ಲ. ನಮ್ಮ ಈ ಒಡಕಿಲ್ಲದ, ಗೂಢವಾಗಿ ಇಡಲ್ಪಟ್ಟಿರುವ ಅಂತಃಕರಣದ ಪಾತ್ರೆಯಲ್ಲಿ  ಬೇಯಿಸಿದ ಅನ್ನವು (ಕರ್ಮಫಲವಿಪಾಕ) ಅದನ್ನು ಬೇಯಿಸಿದವನನ್ನು ಪುನಃ ಮರಳಿ ಸೇರಿಯೇ ತೀರುತ್ತದೆ ಎಂಬುದು ಈ ಮಂತ್ರ ಅರ್ಥ. ಮಾಡಿದ್ದುಣ್ಣೋ ಮಹರಾಯ! ಜೀವಿತ ಕಾಲದಲ್ಲಿ ಮಾಡಿದ ಒಳ್ಳೆಯ, ಕೆಟ್ಟ ಕಾರ್ಯಗಳಿಗೆ ಅಂತರ್ನಿಹಿತವಾದ ಮಾಪಕವಿದ್ದು, ಅದರಲ್ಲಿ ಎಲ್ಲವೂ ದಾಖಲಾಗುತ್ತದೆ. ಅದಕ್ಕೆ ತಕ್ಕಂತೆ ಮುಂದಿನ ಜನ್ಮ ನಿರ್ಧರಿಸಲ್ಪಡುತ್ತದೆ. ಇದನ್ನು ಒಪ್ಪುವುದಾದರೆ, ಹುಟ್ಟುವಾಗಲೇ ಮೇಲೆ ಹೇಳಿದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜನಿಸುವುದಕ್ಕೆ ಕಾರಣ ಸಿಗುತ್ತದೆ. ಇದಲ್ಲದೆ ಬೇರೆ ಕಾರಣಗಳು ಅಷ್ಟೊಂದು ಸಮಂಜಸವಾಗಿ ತೋರಲಾರವು.
     ತಮ್ಮ ಯಾವುದೇ ತಪ್ಪಿಲ್ಲದೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜನಿಸುವುದೇ ಪುನರ್ಜನ್ಮವನ್ನು ಸಮರ್ಥಿಸಬಹುದಾದ ಒಂದು ಪ್ರಬಲ ಕಾರಣವೆನಿಸುತ್ತದೆ. ಇದಕ್ಕೆ ಪೂರಕವಾಗಿ ಒಬ್ಬರೇ ತಂದೆ-ತಾಯಿಗಳಿಗೆ ಜನಿಸಿದ ಎಲ್ಲಾ ಮಕ್ಕಳೂ ಒಂದೇ ರೀತಿಯ ಗುಣ-ಸ್ವಭಾವದವರಾಗಿರುವುದಿಲ್ಲ. ಪುನರ್ಜನ್ಮವಿಲ್ಲವೆಂದಾದರೆ ಒಬ್ಬ ತಂದೆ-ತಾಯಿಗಳಿಗೆ ಹುಟ್ಟಿದ, ಒಂದೇ ರೀತಿಯ ಪರಿಸರದಲ್ಲಿ ಬೆಳೆದ ಮಕ್ಕಳೆಲ್ಲರೂ ಒಂದೇ ರೀತಿಯ ಗುಣ-ಸ್ವಭಾವದವರಾಗಬೇಕಿತ್ತು. ಹೀಗೆ ಇರುವ ಸಂಭವ ಅತಿ ಕಡಿಮೆಯೆಂದೇ ಹೇಳಬೇಕು. ಜೀವಿಯು ತನ್ನ ಜೀವಿತ ಕಾಲದಲ್ಲಿ ಮಾಡುವ ಪಾಪ/ಪುಣ್ಯ ಕಾರ್ಯಗಳಿಗನುಸಾರವಾಗಿ ಮುಂದಿನ ಜನ್ಮದಲ್ಲಿ ಒಳ್ಳೆಯ ಸ್ಥಿತಿಯಲ್ಲಿ ಅಥವ ಹೀನ-ದೀನ ಸ್ಥಿತಿಯಲ್ಲಿ ಜನಿಸುತ್ತಾನೆ ಎಂದರೆ ಒಪ್ಪಬಹುದು. ಒಪ್ಪದಿದ್ದರೆ, ಅಂತಹ ಸ್ಥಿತಿಯಲ್ಲಿ ಹುಟ್ಟಲು ದೇವರೊಬ್ಬನೇ ಕಾರಣ ಎನ್ನುವುದಾದರೆ ಜೀವಿಯು ಮುಂದೆ ತಾನು ಮಾಡುವ ಒಳ್ಳೆಯ/ಕೆಟ್ಟ ಕಾರ್ಯಗಳಿಗೆ ದೇವರೇ ಹೊಣೆಗಾರ ಎನ್ನಬೇಕಾಗುತ್ತದೆಯೇ ಹೊರತು ಜೀವಿಯನ್ನು ಹೊಣೆ ಮಾಡಲಾಗದು ಅಲ್ಲವೇ? ಅರ್ಥಾತ್ ಒಬ್ಬ ಕೊಲೆ ಮಾಡಿದರೂ ಅದಕ್ಕೆ ಅಂತಹ ಬುದ್ಧಿ ಕೊಟ್ಟ ದೇವರನ್ನೇ ಹೊಣೆ ಮಾಡಬೇಕಾಗುತ್ತದೆ. ಇದು ತರ್ಕಕ್ಕಾಗಲೀ, ವೈಜ್ಞಾನಿಕವಾಗಲೀ, ಧಾರ್ಮಿಕವಾಗಲೀ ಅಥವ ಇನ್ನಾವುದೇ ವಾದಕ್ಕಾಗಲೀ ಸಮಂಜಸವಾಗಿ ಕಾಣುವುದಿಲ್ಲ. ಅದೂ ಅಲ್ಲದೆ, ಧರ್ಮ, ಮೋಕ್ಷ, ಸನ್ನಡತೆ, ದುರ್ನಡತೆ, ಇತ್ಯಾದಿಗಳಿಗೆ ಅರ್ಥವೇ ಇರುವುದಿಲ್ಲ.
     ಪುನರ್ಜನ್ಮವಿದೆ ಅನ್ನುವುದಾದರೆ ಹಿಂದಿನ ಜನ್ಮಗಳ ನೆನಪು ಏಕೆ ಇರುವುದಿಲ್ಲ ಎಂಬ ವಾದವೂ ಮುಂದೆ ಬರುತ್ತದೆ. ಒಂದು ವೇಳೆ ನೆನಪು ಇದ್ದಿದ್ದರೆ ಏನಾಗಬಹುದಿತ್ತು? ಹಿಂದಿನ ಜನ್ಮದಲ್ಲಿ ಹೆಂಡತಿಯಾಗಿದ್ದವಳು ನಂತರದಲ್ಲಿ ಅಕ್ಕನೋ, ತಂಗಿಯೋ ಅಥವ ಮಗಳೋ ಆಗಿ ಹುಟ್ಟಿದ್ದರೆ ಮತ್ತು ಅದರ ಅರಿವು ಜೀವಿಗೆ ಇದ್ದರೆ ಆಗುವ ಮನೋವೇದನೆಗಳು/ಭಾವಗಳು ತರ್ಕಕ್ಕೆ ನಿಲುಕದು. ಹಿಂದೊಮ್ಮೆ ಆಗರ್ಭ ಶ್ರೀಮಂತನಾಗಿದ್ದು, ಈಗ ಬಡವನ ಮನೆಯಲ್ಲಿ ಜನಿಸಿದ್ದರೆ ಮತ್ತು ಅದರ ಅರಿವಿದ್ದರೆ ಏನಾಗುತ್ತಿತ್ತು? ತಾನು ಹಿಂದಿದ್ದ ಮನೆಗೆ ಹೋಗಿ ಅವರಿಂದ ಪಾಲು ಪಡೆಯಲು ಹೋದರೆ ಏನಾಗಬಹುದು? ಕೇವಲ ಉದಾಹರಣೆಗಾಗಿ ಇವನ್ನು ಹೇಳಿದ್ದಷ್ಟೇ. ಇಂತಹ ಅನೂಹ್ಯ ಪ್ರಸಂಗಗಳು ಎದುರಾಗಿ ಬದುಕು ದುರ್ಭರವೆನಿಸುವ ಸಾಧ್ಯತೆಗಳೇ ಜಾಸ್ತಿ. ಆದ್ದರಿಂದ ಹಿಂದಿನ ಜನ್ಮದ ನೆನಪು ಇಲ್ಲದಿರುವುದೇ ಒಂದು ರೀತಿಯಲ್ಲಿ ದೇವರ ಕರುಣೆಯೆನ್ನಬೇಕು. ಹಿಂದಿನ ಜನ್ಮದ ಸಂಸ್ಕಾರ/ಪ್ರಭಾವ ಪ್ರಬಲವಾಗಿರುವ ಕೆಲವರಿಗೆ ಹಿಂದಿನ ಜನ್ಮದ ನೆನಪು ಇರುವ ಹಲವಾರು ಪ್ರಕರಣಗಳನ್ನೂ ನಾವು ಕಾಣುತ್ತಿರುತ್ತೇವಲ್ಲವೆ?
     ಋಗ್ವೇದದ ಈ ಮಂತ್ರ ನೋಡಿ:
ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್|
ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ||  (ಋಕ್. ೧.೧೬೪.೩೦.)
     ಅಂತಃಸ್ಥಿತವಾದ ಪರಮಾತ್ಮ ತತ್ವ ಅತ್ಯಂತ ಚೈತನ್ಯಯುತವಾಗಿದ್ದು, ಜೀವದಾನ ಮಾಡುವಲ್ಲಿ, ಲೋಕ ಲೋಕಾಂತರಗಳಲ್ಲಿ ಸಂಚರಿಸುವಲ್ಲಿ ಪ್ರಧಾನವಾಗಿದೆ. ಮೃತರಾದವರ ಜೀವಾತ್ಮಕ್ಕೆ ಸಾವಿಲ್ಲದೆ ಇದ್ದು, ನಂತರದಲ್ಲಿ ಅದು ಸಾವು ಇರುವ ಶರೀರದಲ್ಲಿ ಪ್ರವೇಶಿಸಿ, ತನಗೆ ಪ್ರಾರಬ್ಧ ರೀತಿಯಲ್ಲಿ (ಕರ್ಮ ಫಲಾನುಸಾರವಾಗಿ) ಸಿಕ್ಕಿದ ಪರಿಸರದಲ್ಲಿ ಸಂಚರಿಸುತ್ತಿರುತ್ತದೆ ಎಂಬುದು ಈ ಮಂತ್ರದ ಅರ್ಥ. ಈ ರೀತಿಯಲ್ಲಿ ಪ್ರತಿ ಜೀವಿಯೂ ಹಿಂದೆ ಎಷ್ಟು ಜನ್ಮಗಳನ್ನು ಹಾದು ಬಂದಿದೆಯೋ, ಮುಂದೆ ಎಷ್ಟು ಜನ್ಮಗಳನ್ನು ಎತ್ತಬೇಕಿದೆಯೋ ಯಾರಿಗೆ ಗೊತ್ತು? ಶಂಕರಾಚಾರ್ಯರ 'ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ' ಎಂಬ ಉಕ್ತಿ ಹೇಳುವುದೂ ಇದನ್ನೇ!
     ಪುರುಷರು ಪುರುಷರಾಗಿಯೇ ಜನಿಸುತ್ತಾರೆಯೇ? ಸ್ತ್ರೀ ಸ್ತ್ರೀಯಾಗಿಯೇ ಜನಿಸುತ್ತಾಳೆಯೇ? ಇಲ್ಲ, ವೇದದ ಪ್ರಕಾರ ಜೀವಾತ್ಮಕ್ಕೆ ಲಿಂಗ ಭೇದವಿಲ್ಲ, ಜೀವಭೇದವೂ ಇಲ್ಲ. ಗಳಿಸಿದ ಕರ್ಮಫಲಾನುಸಾರವಾಗಿ ಯಾವ ಜೀವಿಯಾಗಿಯಾದರೂ ಜನಿಸಬಹುದಾಗಿರುತ್ತದೆ. ಈ ಮಂತ್ರ ನೋಡಿ:
ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ|
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ|| (ಅಥರ್ವ.೧೦.೮.೨೭)
     ಜೀವಾತ್ಮವು ಸ್ತ್ರೀಯೂ ಆಗಿದೆ, ಪುರುಷನೂ ಆಗಿದೆ, ಕುಮಾರನೂ ಆಗಿದೆ, ಕುಮಾರಿಯೂ ಆಗಿದೆ. ವೃದ್ಧಾಪ್ಯದ ನಂತರದಲ್ಲಿ ಮೃತನಾದ ಮೇಲೆ ಮತ್ತೆ ಜನ್ಮವೆತ್ತಿ ಎಲ್ಲೆಡೆಯೂ ಪ್ರವೇಶಿಸುವುದಾಗಿದೆ ಎಂದು ಈ ಮಂತ್ರ ಹೇಳುತ್ತದೆ. ಲಿಂಗರಹಿತವಾದ ಜೀವಾತ್ಮವು ತಾನು ಹೊಂದಿದ ಶರೀರಕ್ಕೆ ಅನುಗುಣವಾಗಿ ಸ್ತ್ರೀ, ಪುರುಷ, ಕುಮಾರ ಅಥವ ಕುಮಾರಿ ಎಂದು ಕರೆಸಿಕೊಳ್ಳುತ್ತದೆ. ಜೀವಾತ್ಮವು ಅನೇಕ ಜನ್ಮಗಳನ್ನೆತ್ತುತ್ತಾ ವಿಕಾಸವಾಗುತ್ತಾ ಹೋಗಿ, ಜ್ಞಾನ, ಕರ್ಮ, ಉಪಾಸನೆಗಳ ಫಲವಾಗಿ ಉತ್ತಮ ರೀತಿಯಲ್ಲಿ ಜೀವನ ನಡೆಸುತ್ತಾ ಸತ್ಕರ್ಮದ ಫಲವಾಗಿ ಮೋಕ್ಷ ಸ್ಥಿತಿ ತಲುಪುತ್ತದೆ ಎಂದು ವೇದ ಸಾರುತ್ತದೆ.
     ಒಂದಂತೂ ನಮಗೆ ಅರ್ಥವಾಗುತ್ತದೆ, ಅದೇನೆಂದರೆ ನಾವು ಇಂದು ಇರುವ ಸ್ಥಿತಿಗೆ ನಮ್ಮ ಹಿಂದಿನ ಕರ್ಮಗಳು ಕಾರಣೀಭೂತವಾಗಿವೆ ಎನ್ನುವುದಾದರೆ, ಮುಂದೆ ಏನಾಗಬೇಕು ಎಂದು ನಾವು ಬಯಸುತ್ತೇವೆಯೋ ಅದಕ್ಕೆ ನಮ್ಮ ಇಂದಿನ ಕರ್ಮಗಳು ನೆರವಾಗುತ್ತವೆ ಅಲ್ಲವೇ? ಜನ್ಮ ಜನ್ಮಾಂತರಗಳ ಒಂದು ಸ್ವಾರಸ್ಯಕರ ಸಂಗತಿಯನ್ನು ಪ್ರಸ್ತಾಪಿಸಿ ಲೇಖನ ಮುಗಿಸುವೆ. ಜೀವಾತ್ಮ ಅವಿನಾಶಿ ಎಂದರೆ ನಾವು ಎಂದೆಂದೂ ಇದ್ದೆವು, ಮುಂದೆಯೂ ಇರುತ್ತೇವೆ ಅಲ್ಲವೇ? ಅಂದರೆ, ನಾವು ಈಗ ದೇವರೆಂದು ಪೂಜಿಸುವ ರಾಮ, ಕೃಷ್ಣ, ಶಿವರ ಕಾಲದಲ್ಲಿಯೂ ಇದ್ದೆವು. ನಾವು ಆಗ ರಾಮನೇ ಆಗಿದ್ದಿರಬಹುದು, ರಾವಣನೇ ಆಗಿರಬಹುದು, ವಾಲಿ, ಸುಗ್ರೀವರಾಗಿದ್ದಿರಬಹುದು ಅಥವ ಇನ್ನು ಯಾರೋ ಆಗಿದ್ದಿರಬಹುದು. ಬುದ್ಧ, ಮಹಾವೀರ, ಬಸವಣ್ಣ, ಏಸುಕ್ರಿಸ್ತರವರಂತವರುಗಳ ಕಾಲದಲ್ಲಿಯೂ ನಾವು ಯಾವುದೋ ರೀತಿಯಲ್ಲಿ ಇದ್ದೆವು ಅಲ್ಲವೇ? ರಾಮ ಒಳಿತಿನ ಸಂಕೇತ ಮತ್ತು ರಾವಣ ಕೆಡುಕಿನ ಸಂಕೇತವೆಂದು ಇಟ್ಟುಕೊಂಡರೆ, ರಾವಣತ್ವ ಕಳೆದುಕೊಂಡರೆ ರಾವಣನೂ ರಾಮ ಆಗುತ್ತಾನಲ್ಲವೇ? ರಾಮನಾಗುವುದೋ ಅಥವ ರಾವಣನಾಗುವುದೋ ಅಥವ  ಬಯಸಿದಂತೆ ಮತ್ತೇನೋ ಆಗುವುದೋ ಎಂಬುದು ಜೀವಿಯ ಕೈಯಲ್ಲಿಯೇ ಇದೆ.
-ಕ.ವೆಂ.ನಾಗರಾಜ್.    
*********************
19.05.2014ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ.


6 ಕಾಮೆಂಟ್‌ಗಳು:

  1. Iynanda Prabhukumar
    ಪುನರ್ಜನ್ಮವಿದೆಯೆಂದು ಸನಾತನಿಗಳು ನಂಬಿರುವದು ಸರ್ವವಿದಿತ. ಪುನರ್ಜನ್ಮದ ನೆನಪನ್ನುಳಿಸಿಕೊಂಡು ನಮ್ಮ ದೇಶದಲ್ಲಿ ಜನಿಸಿದವರ ಬಗ್ಗೆ ಸಾಕ್ಷ್ಯ ಬರೆಹಗಳು ಸುಮಾರು ೬೦-೭೦ ವರ್ಷಗಳ ಹಿಂದೆಯೇ ನಮ್ಮ ದೇಶದಲ್ಲಿಯೇ ಪ್ರಕಟವಾಗಿವೆ.
    "Twenty Cases Suggestive of Reincarnation" ಎನ್ನುವ ಪುಸ್ತಕವೊಂದನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳ ಮನೋರೋಗತಜ್ಞರೊಬ್ಬರಾದ Ian Stevenson ಎನ್ನುವವರು ೧೯೬೬ರಲ್ಲಿ ಪ್ರಕಟಿಸಿದ್ದಾರೆ. ಇದರ ಎರಡನೇ ಆವೃತ್ತಿಯು University Press of Virginiaದ ಮೂಲಕ ಪ್ರಕಟಗೊಂಡಿದ್ದು ಇದರ e book ಮತ್ತು pdf ಪ್ರತಿಯೂ ಲಭ್ಯವಿದೆ.
    ಈ ಪುಸ್ತಕದಲ್ಲಿ ಭಾರತದ ೭ ಘಟನೆ(case)ಗಳಲ್ಲದೆ, ಶ್ರೀಲಂಕಾದ ೩, ಬ್ರೆಜಿಲ್ಲಿನ ೨, ಲೆಬನಾನಿನ ೧ ಹಾಗೂ ಆಗ್ನೇಯ ಅಲಾಸ್ಕ(USA)ದ Tlingit Indians ಅವರ ಘಟನೆಗಳೂ ವಿವರವಾಗಿ ನಿರೂಪಿತವಾಗಿವೆ. ಇವಲ್ಲದೆ, ಉತ್ತರ ಅಮೆರಿಕಾ, ಆಸ್ಟ್ರೇಲಿಯಾ, ಯೂರೋಪ್, ಮೊದಲಾದ ದೇಶಗಳಲ್ಲೂ ಇರಬಹುದಾದ ಪುನರ್ಜನ್ಮದ ಘಟನೆಗಳ ಕುರಿತು ಏನೂ ಬರೆದಿಲ್ಲದಿರುವದು ಕುತೂಹಲಕಾರಕ.
    ಪುನರ್ಜನ್ಮದ ಕುರಿತು ಪಾಶ್ಚಿಮಾತ್ಯರು ಬರೆದಿರುವ ಅತ್ಯಂತ ಗಣನೀಯವಾದ ಪುಸ್ತಕ ಇದೊಂದೇ ಎಂದು ನನ್ನ ಎಣಿಕೆ.

    kavinagaraj
    ಐನಂಡ ಪ್ರಭುಕುಮಾರರಿಗೆ ವಂದನೆಗಳು. ಪುನರ್ಜನ್ಮದ ಬಗ್ಗೆ ಬಹಳ ಪುಸ್ತಕಗಳಿವೆ, ಎಡ್ಗರ್ ಕೇಸಿಯ ಅನುಭವಗಳಂತೂ ಅಸದಳವಾಗಿದೆ. ಇವುಗಳ ಜೊತೆಗೆ ನನ್ನದೂ ಒಂದೆರಡು ಸಾಲುಗಳನ್ನೆ ಸೇರಿಸಲಷ್ಟೇ ಈ ಬರಹ ಎಂಬುದನ್ನು ಪ್ರಾರಂಭದಲ್ಲೆ ಬರೆದಿರುವೆ. ವಿಷಯದ ಬಗ್ಗೆ ಕುತೂಹಲ ಮೂಡಿಸುವುದಲ್ಲದೆ ಮತ್ತು ಪ್ರತಿಕ್ರಿಯೆಗಳ ಮೂಲಕ ಹೆಚ್ಚಿನ ಮಾಹಿತಿಗಳು ತಿಳಿಯಲಿ ಎಂಬುದೂ ಇದೆ. ಈ ಲೇಖನ 19.5.2014ರ ಹಾಸನ ಜಿಲ್ಲಾ ಪತ್ರಿಕೆಯ ನನ್ನ 'ಚಿಂತನ' ಅಂಕಣದಲ್ಲಿಯೂ ಪ್ರಕಟವಾಗಿದೆ.

    nageshamysore
    ಒಟ್ಟಾರೆ, ಯಾವುದೇ ಕಾಲಮಾನದಲ್ಲಿ ನೋಡಿದರೂ, ಈ ಬ್ರಹ್ಮಾಂಡದ ಒಟ್ಟು ಜೀವಾತ್ಮಗಳ ಮೊತ್ತ ಸದಾಕಾಲವೂ ಒಂದೆ ಇತ್ತು-ಇದೆ-ಇರುತ್ತದೆ ಅಂತಾಯ್ತು - ಮನುಜ ರೂಪಲ್ಲೊ, ಪ್ರಾಣಿ, ಪಾಸು, ಜಂತು, ಕ್ರಿಮಿ-ಕೀಟ ರೂಪಲ್ಲೊ - ಕರ್ಮದ ಲೆಕ್ಕಾಚಾರಕ್ಕನುಸಾರವಾಗಿ :-)

    kavinagaraj
    ಹಾಗೆ ಅಂದುಕೊಳ್ಳಬಹುದು. ಇದನ್ನು ಪ್ರತ್ಯಕ್ಷವಾಗಿ ಪರೀಕ್ಷಿಸಲು/ಪ್ರಮಾಣಿಸಲು ಮಾತ್ರ ಕಷ್ಟ!! :) ಧನ್ಯವಾದಗಳು, ನಾಗೇಶರೇ.

    ಪ್ರತ್ಯುತ್ತರಅಳಿಸಿ
  2. ಒಳ್ಳೆಯ ತಾರ್ಕಿಕ ಲೇಖನ. ಶಾಸ್ತ್ರಬದ್ಧವಾದ ವಿಚಾರಧಾರೆ.

    "ಸತ್ತ ನಂತರ ಶರೀರ ಅಂತ್ಯ ಸಂಸ್ಕಾರದ ಮೂಲಕ ಪಂಚಭೂತಗಳಲ್ಲಿ ವಿಲೀನವಾಗುತ್ತದೆ."
    -- ಈ ವಿಚಾರದಲ್ಲಿ ವೇದವ್ಯಾಸರು, ಬ್ರಹ್ಮಸೂತ್ರಗಳಲ್ಲಿ, ಸ್ಪಷ್ಟವಾದ ವಿಚಾರವನ್ನು ಹೇಳಿದ್ದಾರೆ.
    "ಓಂ ಸಂಪರಿಶ್ವಕ್ತಃ....." [ ಸೂತ್ರದ ಪೂರ್ಣಪಾಠ ನೆನಪಾಗುತ್ತಿಲ್ಲ ]
    ಈ ಬ್ರಹ್ಮಸೂತ್ರದಲ್ಲಿ - ಸತ್ತು, ಅಗ್ನಿಸಂಸ್ಕಾರ ಆದ ಮೇಲೆಯೂ, ಪಂಚಭೌತಿಕ ಶರೀರ ನಾಶವಾಗೋದಿಲ್ಲ. ಅದು ಅತ್ಯಂತ ಸೂಕ್ಷ್ಮರೂಪದಲ್ಲಿ ಇದ್ದೆ ಇರುತ್ತದೆ. ಎಲ್ಲಾ ಕರ್ಮವಿಪಾಕಗಳನ್ನು ಕಳೆದು, ಕಡೆಯ ಮೋಕ್ಷದ ಕಾಲದಲ್ಲಿ, ಎಲ್ಲ ಪ್ರಾಕೃತ ಅಂಶಗಳು ನಾಶವಾಗಿ, ಚಿದಾನಂದಾತ್ಮಕವಾದ ಜೀವಸ್ವರೂಪವು ಉಳಿಯುತ್ತದೆ.

    ಪ್ರತ್ಯುತ್ತರಅಳಿಸಿ
  3. ಕವಿನಾಗರಾಜರಿಗೆ ನಮಸ್ಕಾರ
    ನಿಮ್ಮ ಬರಹ ಓದಿದೆ, ಸಂಪದದಲ್ಲಿ :-)
    ಕೆಲವು ಅನುಮಾನಗಳು ಉಳಿದೇ ತೀರುತ್ತದೆ ನಂನಂತವರಿಗೆ !
    ಸಾಯುವ ಎಲ್ಲರೂ ಪುನರ್ಜಮ ಪಡೆಯುತ್ತಾರೆ ಎಂದು ನಂಬುತ್ತದೆ ಹಿಂದೂ ಧರ್ಮ , ಆದರೆ ನಮ್ಮ ಮನೆಗಳಲ್ಲಿ ಸತ್ತವರಿಗಾಗಿ, ವೈಕುಂಟವಾಸಿಯೆಂದು, ಅಥವ ಪ್ರೇತರೂಪದಲ್ಲಿರುವರೆಂದು ’ತಿಥಿ’ ಮಾಡುತ್ತಾರೆ ಪ್ರತಿವರ್ಷವೂ / ಸತ್ತಾಗ. ಕೆಲವೊಮ್ಮೆ ಚಿಕ್ಕವಯಸಿನಲ್ಲಿ ತಂದೆ ಕಳೆದುಕೊಂಡವರು (ನಮ್ಮ ಮಾವ), ಸುಮಾರು ಅರವತ್ತು ವರ್ಷಗಳಿಂದ ಅವರ ತಂದೆಯ ತಿಥಿ ಮಾದುತ್ತಿದ್ದಾರೆ. ಪುನರ್ಜನ್ಮವಿರುವದಾದರೆ, ಸತ್ತ ಆತ್ಮ ಮತ್ತೊಂದು ರೂಪಧರಿಸಿರುತ್ತಾರೆ ಅನ್ನುವದಾದರೆ ತಿಥಿ ಮಾಡುವುದು ಯಾರಿಗಾಗಿ ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ತಿಥಿ ಮಾಡುವುದು ನಮಗಾಗಿ! ಸತ್ತವರಿಗಾಗಿ ಅಲ್ಲ. ಸತ್ತವರ ನೆನಪು ಉಳಿಸಲು ಮಾಡಬೇಕಷ್ಟೆ. ಈ ಲೇಖನವನ್ನೂ ಅವಕಾಶವಾದರೆ ಓದಲು ಕೋರುವೆ: ಶ್ರಾದ್ಧ; ಏಕೆ ಮತ್ತು ಹೇಗೆ?- http://vedajeevana.blogspot.in/2014/02/blog-post.html

      ಅಳಿಸಿ
    2. Durgaprasad Menda
      ಪುನರ್ಜನ್ಮದ ಕುರಿತಾದ ನಿಮ್ಮ ಈ ಲೇಖನ ಅತ್ಯುತ್ತಮವಾಗಿದೆ. ಕೆಲವೊಂದು ಪೂರಕ ಮಾಹಿತಿಗಳನ್ನು ನೀಡಲು ಬಯಸುತ್ತೇನೆ.
      ಗೀತೆಯ ಈ ಕೆಳಗಿನ ಶ್ಲೋಕವನ್ನು ದಯವಿಟ್ಟು ಗಮನಿಸಿ:
      ಜನ್ಮ ಕರ್ಮ ಚ ಮೇ ದಿವ್ಯಂ
      ಏವಂ ಯೋ ವೇತ್ತಿ ತತ್ತ್ವತಃ
      ತ್ಯಕ್ತ್ವಾ ದೇಹಮ್ ಪುನರ್ಜನ್ಮ
      ನೈತಿ ಮಾಮೇತಿ ಸೋರ್ಜುನ (4.9)

      ಯಾರು ನನ್ನ ದಿವ್ಯವಾದ ಹುಟ್ಟು ಹಾಗೂ ಲೀಲೆಗಳನ್ನು ತತ್ತ್ವತಃ ಅರಿತುಕೊಳ್ಳುತ್ತಾರೋ, ಅವರು ತಮ್ಮ ದೇಹತ್ಯಾಗದ ಬಳಿಕ ಪುನರ್ಜನ್ಮವನ್ನು ಪಡೆಯದೆ, ಮರಳಿ ನನ್ನೆಡೆಗೆ ಬರುತ್ತಾರೆ.

      ಅಂದರೆ ಯಾರು ಕೃಷ್ಣನ ದಿವ್ಯವಾದ ಹುಟ್ಟು ಹಾಗೂ ಲೀಲೆಗಳನ್ನು ಯಥಾರ್ಥವಾಗಿ ಅರಿತುಕೊಳ್ಳುತ್ತಾರೋ ಅವರಿಗೆ ಪುನರ್ಜನ್ಮವಿಲ್ಲ.

      ಮುಂದೆ 8 ನೇ ಅಧ್ಯಾಯದಲ್ಲಿ ಭಗವಂತನಾದ ಕೃಷ್ಣನು ಹೀಗೆ ಹೇಳುತ್ತಾನೆ:
      ಅಂತಕಾಲೇಚ ಮಾಮೇವ ಸ್ಮರನ್ ಉಕ್ತ್ವಾ ಕಲೇವರಮ್
      ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾತ್ಯತ್ರ ಸಂಶಯಃ (8.5)
      ಯಾರು ಅಂತ್ಯಕಾಲದಲ್ಲಿ ದೇಹತ್ಯಾಗಮಾಡುತ್ತಾ ನನ್ನನ್ನೇ ಸ್ಮರಿಸುತ್ತಾರೋ, ಅವರು ಕೂಡಲೇ ನನ್ನ ಭಾವವನ್ನು ಪಡೆಯುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ.
      ಯಮ್ ಯಮ್ ವಾಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಲೇವರಮ್
      ತಮ್ ತಮ್ ಏವೈತಿ ಕೌಂತೇಯ ಸದಾ ತದ್ಭಾವ ಭಾವಿತಃ (8.6)
      ದೇಹತ್ಯಾಗದ ಸಮಯದಲ್ಲಿ ಯಾವ ಭಾವವನ್ನು ವ್ಯಕ್ತಿಯು ತಾಳುತ್ತಾನೋ, ಅದೇ ಭಾವದ ದೇಹವನ್ನು ಅವನು ಮತ್ತೆ ಪಡೆಯುತ್ತಾನೆ.
      ಆಬ್ರಹ್ಮ ಭುವನಾಲ್ ಲೋಕಾಃ ಪುನರಾವರ್ತಿನೋ ಅರ್ಜುನ
      ಮಂ ಉಪೇತ್ಯತು ಕೌಂತೇಯ ಪುನರ್ಜನ್ಮ ನ ವಿದ್ಯತೇ (8.16)
      ಭೌತಿಕ ಜಗತ್ತಿನ ಅತ್ತ್ಯುನ್ನತ ಲೋಕವಾದ ಬ್ರಹ್ಮ ಲೋಕದಿಂದ ಹಿಡಿದು ಅಧೋ ಲೋಕಗಳು ಕೂಡಾ ಜನ್ಮ ಮೃತ್ಯುಗಳೆಂಬ ಪುನರಾವರ್ತನೆಗಳಿಂದ ಕೂಡಿದೆ. ಆದರೆ ಯಾರು ನನ್ನನ್ನು ಪಡೆಯುತ್ತಾನೋ, ಅಂಥವನಿಗೆ ಪುನರ್ಜನ್ಮವಿರಲಾರದು.
      ಹೀಗೆ ಇನ್ನೂ ಅನೇಕ ಕಡೆ ಭಗವದ್ಗೀತೆಯಲ್ಲಿ ಕೃಷ್ಣನು ಪುನರ್ಜನ್ಮದಿಂದ ಹೊರಬರುವ ದಾರಿಯನ್ನು ಹೇಳಿದ್ದಾನೆ. ಅಲ್ಲದೆ ಶ್ರೀಮದ್ಭಾಗವತದಲ್ಲೂ ಅನೇಕ ಕಡೆ ಪುನರ್ಜನ್ಮ ಹಾಗೂ ಜನ್ಮ ಮೃತ್ಯುಗಳ ವಿಷ ವರ್ತುಲದಿಂದ ಹೊರಬರುವ ಉಪಾಯಗಳ ಕುರಿತಾಗಿ ವಿಷದೀಕರಿಸಲಾಗಿದೆ.

      Kavi Nagaraj
      ಉತ್ತಮ ವಿಚಾರ ಹಂಚಿಕೆಗಾಗಿ ವಂದನೆಗಳು, ದುರ್ಗಾಪ್ರಸಾದ ಮೆಂಡರವರೇ. ಈ ಲೇಖನವನ್ನೂ ಪೂರಕವಾಗಿ ನೋಡಬಹುದು: ಚತುರ್ವಿಧ ಪುರುಷಾರ್ಥಗಳು-2: ಕಾಮ ಮತ್ತು ಮೋಕ್ಷ: http://vedajeevana.blogspot.in/2013/08/blog-post_26.html

      ಅಳಿಸಿ