ಅನುಗಾಲವೂ ಚಿಂತೆ ಜೀವಕೆ ಎಂದು ದಾಸರು ಹೇಳಿರುವುದು ಸತ್ಯಸ್ಯ ಸತ್ಯವಾಗಿದೆ. ಚಿತೆ ಸತ್ತವರನ್ನು ದಹಿಸಿದರೆ ಚಿಂತೆ ಬದುಕಿರುವವರನ್ನೇ ದಹಿಸುತ್ತದೆ ಎಂಬುದು ಅನುಭವದ ನುಡಿಗಟ್ಟಾಗಿದೆ. ಪುಣ್ಯಕೋಟಿ ಗೋವಿನ ಹಾಡನ್ನು ಬದಲಾಯಿಸಿ ಹೀಗೆ ಹಾಡಬಹುದೇನೋ - ಚಿಂತೆಯೇ ನಮ್ಮ ತಾಯಿ ತಂದೆ, ಚಿಂತೆಯೇ ನಮ್ಮ ಬಂಧು ಬಳಗ, ಚಿಂತೆಯಿಲ್ಲದ ಮನುಜನಿದ್ದೊಡೆ, ಅವನೆ ನಿಜ ಪರಮಾತ್ಮನು! ಹಾಗಾದರೆ ಪರಮಾತ್ಮನಿಗೆ ಚಿಂತೆಯೇ ಇಲ್ಲವೇ? ಎಷ್ಟೊಂದು ಸೂರ್ಯಮಂಡಲಗಳು, ಎಷ್ಟೊಂದು ನಕ್ಷತ್ರಗಳು, ಎಷ್ಟೊಂದು ಬಗೆಯ ಜೀವಿಗಳು, ಎಷ್ಟೊಂದು ಬಗೆಯ ಪ್ರಕೃತಿ ಇವೆಲ್ಲದರ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಾದ ಅವನಿಗೆ ಚಿಂತೆ ಇಲ್ಲವೇ ಎಂದು ಕೇಳಬಹುದು. ನಿಜ, ಅವನಿಗೆ ಚಿಂತೆಯೇ ಇಲ್ಲ. ಏಕೆಂದರೆ ಅವನ ಕೆಲಸ ಅವನು ಮಾಡಿ ಮುಗಿಸಿದ್ದಾಗಿದೆ. ಸೃಷ್ಟಿ, ಸ್ಥಿತಿ. ಲಯಗಳನ್ನು ಸಹಜವಾಗಿ, ನಿರಂತರವಾಗಿ ನಡೆದುಕೊಂಡು ಹೋಗುತ್ತಿರುವಂತೆ ಮಾಡಿಬಿಟ್ಟಾಗಿದೆ. ಮನುಷ್ಯನಿಗೂ ಮಾಡಿದ್ದುಣ್ಣೋ ಮಹರಾಯ ಎಂದು ಕರ್ಮಕ್ಕೆ ತಕ್ಕ ಫಲ ಎಂದು ಹೇಳಿಬಿಟ್ಟಿದ್ದಾನೆ. ಹಾಗಾಗಿ ಆ ದೇವರು ನಿಶ್ಚಿಂತೆಯಾಗಿ ಯಾರು ಯಾರ ತಲೆ ಕಡಿದರೂ ಸಾಕ್ಷಿಯಂತೆ ನೋಡುತ್ತಾ ಸುಮ್ಮನಿರುತ್ತಾನೆಯೇ ಹೊರತು ತಲೆ ಕೆಡಿಸಿಕೊಳ್ಳುವುದೇ ಇಲ್ಲ.
ಈ ಚಿಂತೆ ಅನ್ನುವುದಾದರೂ ಏನು? ಚಿಂತೆ ಅನ್ನುವುದು ಮನಸ್ಸಿನಲ್ಲಿ ಮುಂಬರಲಿರುವ ಅಪಾಯಗಳು, ಅಹಿತಕರ ಸನ್ನಿವೇಶಗಳನ್ನು ಎದುರಿಸುವ ಉಪಾಯಗಳ ಕುರಿತು ನಡೆಯುವ ತಾಕಲಾಟಗಳು. ಆ ಸಮಸ್ಯೆಗಳು ಆರೋಗ್ಯದ್ದಾಗಿರಬಹುದು, ವೃತ್ತಿಗೆ ಸಂಬಂಧಿಸಿದ್ದಿರಬಹುದು, ಆರ್ಥಿಕ ಕಾರಣಗಳಿರಬಹುದು, ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳಿರಬಹುದು, ಇಂತಹ ಮತ್ತಾವುದೋ ಆಗಿರಬಹುದು. ನೈಜ ಸಮಸ್ಯೆಗಿಂತ ಕಾಲ್ಪನಿಕ ಸಮಸ್ಯೆ ಮನುಷ್ಯನನ್ನು ಹಿಂಡಿಬಿಡುತ್ತದೆ. ಚಿಂತೆ ಹೆಚ್ಚಾದಷ್ಟೂ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಾ ಹೋಗುತ್ತದೆ. ಈ ಚಿಂತೆ ಅನ್ನುವುದು ಸಮಸ್ಯೆಯನ್ನು ಎದುರಿಸಿ ಗೆಲ್ಲಲು ಸಹಾಯಕವಾಗಬಹುದು. ಆದರೆ, ಹೀಗಾದರೆ ಏನು?, ಹಾಗಾದರೆ ಏನು?, ಸಮಸ್ಯೆಗೆ ಪರಿಹಾರವೇ ಇಲ್ಲದಿದ್ದರೆ ಏನು ಮಾಡುವುದು? ಇತ್ಯಾದಿ ತಾಕಲಾಟಗಳು, ಅನುಮಾನಗಳು ಮತ್ತು ಸಂದೇಹಗಳು ಮನಸ್ಸಿನ ಆರೋಗ್ಯಕ್ಕೆ, ದೈಹಿಕ ಆರೋಗ್ಯಕ್ಕೆ ಅಪಾಯಕಾರಿಯಾಗದೇ ಇರವು. ಅವು ಜೀವನದಲ್ಲಿನ ಆಸಕ್ತಿಯನ್ನು ಕಳೆದುಬಿಡುತ್ತವೆ, ಆತಂಕ ಮನೆ ಮಾಡಿ ಶಕ್ತಿಯನ್ನು ಬಸಿದುಬಿಡುತ್ತವೆ, ದಿನನಿತ್ಯದ ಚಟುವಟಿಕೆಗಳು ಏರುಪೇರಾಗುವಂತೆ ಮಾಡುತ್ತವೆ. ಸಮಸ್ಯೆ ಎದುರಿಸುವ ಕುರಿತು ಒಬ್ಬನೇ ಒಂಟಿಯಾಗಿ ಚಿಂತಿಸದೆ, ಅದನ್ನು ಆಪ್ತರಾದವರೊಡನೆ ಹಂಚಿಕೊಂಡರೆ ಸಮಸ್ಯೆಗೆ ಪರಿಹಾರ ಹುಡುಕಲು ಸುಲsವಾಗಬಹುದು. ಕನಿಷ್ಠ ಪಕ್ಷ ನೈತಿಕ ಬೆಂಬಲವಾದರೂ ಸಿಕ್ಕಿ ಮನಸ್ಸು ಹಗುರವಾಗಬಹುದು. ಒಳ್ಳೆಯ ಸಹವಾಸಗಳು, ಒಳ್ಳೆಯ ಆಹಾರ, ಒಳ್ಳೆಯ ನಿದ್ದೆ ಚಿಂತೆಯನ್ನು ಹಗುರಗೊಳಿಸಬಲ್ಲವು. ಆದರೆ, ಈ ಚಿಂತೆ ಇದಕ್ಕೆ ಅವಕಾಶ ಕೊಟ್ಟೀತೇ ಅನ್ನುವುದೂ ಪ್ರಶ್ನೆಯಾಗುತ್ತದೆ.
ಸತತವಾಗಿ ಚಿಂತಿತರಾಗಿರುವುದು ಬಹಳ ಹಾನಿಯುಂಟುಮಾಡುತ್ತದೆ. ಅದು ರಾತ್ರಿಯ ಸಮಯದಲ್ಲಿ ನಿದ್ರೆ ಬರದಂತೆ ಮಾಡುತ್ತದೆ. ದಿನದ ಸಮಯದಲ್ಲಿ ಏನೋ ಆತಂಕ, ಏನೋ ದುಗುಡ, ಏನೋ ಉದ್ವೇಗದಲ್ಲಿ ಇರುವಂತೆ ಮಾಡುತ್ತದೆ. ಯಾವ ಕೆಲಸ-ಕಾರ್ಯಗಳಲ್ಲೂ ಆಸಕ್ತಿ ಕಾಣುವುದಿಲ್ಲ. ಖಿನ್ನತೆ ಕಾಡುತ್ತದೆ ಮತ್ತು ಯಾರ ಸಹವಾಸವೂ, ಸ್ನೇಹವೂ ಹಿತಕರವೆನಿಸುವುದಿಲ್ಲ, ಏನೋ ಕಳೆದುಕೊಂಡವರಂತೆ ಚಡಪಡಿಸುತ್ತಿರುತ್ತಾರೆ. ಸೂಕ್ಷ್ಮ ಸ್ವಭಾವದವರಿಗೆ, ಭಾವಜೀವಿಗಳಿಗೆ ಚಿಂತೆಯಿಂದ ಆಗುವ ಹಾನಿ, ತೊಂದರೆಗಳ ಅರಿವಿದ್ದರೂ ಚಿಂತೆಯಿಂದ ಮುಕ್ತರಾಗುವ ದಾರಿ ಕಂಡುಕೊಳ್ಳುವುದು ಸುಲಭವಲ್ಲ.
ಚಿಂತೆ ಮಾಡದಿರುವುದು ಇಷ್ಟೊಂದು ಕಷ್ಟವಾಗಿರುವುದೇಕೆ? ಸತತ ಚಿಂತೆಯಿಂದ ನರಳುವವರು ಚಿಂತೆಯ ಬಗ್ಗೆ ಧನಾತ್ಮಕವಾದ ಮತ್ತು ಋಣಾತ್ಮಕವಾದ ನಂಬಿಕೆಗಳನ್ನು ಹೊಂದಿರುತ್ತಾರೆ. ಚಿಂತೆ ತಲೆ ಕೆಡುವಂತೆ ಮಾಡುತ್ತದೆ, ಅದು ಆರೋಗ್ಯವನ್ನು ಹಾಳು ಮಾಡುತ್ತದೆ, ಸತತವಾಗಿ ಚಿಂತಿಸುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ, ಅದು ನಿರಂತರವಾಗಿರುತ್ತದೆ ಎಂಬುದು ಋಣಾತ್ಮಕ ನಂಬಿಕೆಯಾಗಿದೆ. ಚಿಂತಿಸುವುದರಿಂದ ಕೆಟ್ಟ ಸಂಗತಿಗಳನ್ನು ನಿವಾರಿಸಿಕೊಳ್ಳಬಹುದು, ಸಮಸ್ಯೆಗಳನ್ನು ಪರಿಹರಿಸುತ್ತದೆ, ಅತಿ ಕೆಟ್ಟ ಸನ್ನಿವೇಶಗಳಲ್ಲೂ ಸಿದ್ಧರಿರುವಂತೆ ಮಾಡುತ್ತದೆ ಅಥವ ಸಮಸ್ಯೆಗೆ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಧನಾತ್ಮಕ ನಂಬಿಕೆಯೆನಿಸುತ್ತದೆ. ಈ ಎರಡೂ ನಂಬಿಕೆಗಳು ಒಳ್ಳೆಯವಲ್ಲ. ಋಣಾತ್ಮಕ ನಂಬಿಕೆ ಆತಂಕವನ್ನು ಹೆಚ್ಚಿಸುತ್ತದೆ ಮತ್ತು ಚಿಂತೆ ಮುಂದುವರೆಯುವಂತೆ ಮಾಡುತ್ತದೆ. ಧನಾತ್ಮಕ ನಂಬಿಕೆ ಸಹ ಅಷ್ಟೇ ಹಾನಿ ತರಬಲ್ಲದು. ಚಿಂತೆ ಮಾಡುವುದರಿಂದ ಸಮಸ್ಯೆ ಪರಿಹಾರಕ್ಕೆ ಸಹಾಯವಾಗುತ್ತದೆ ಎಂಬ ಭಾವನೆ ಚಿಂತಿಸುವ ಸ್ವಭಾವವನ್ನು ಉತ್ತೇಜಿಸುತ್ತದೆ. ಮನಸ್ಸಿನ ಮೇಲೆ ಹತೋಟಿ ಸಾಧಿಸಬೇಕೆಂದರೆ ಚಿಂತೆ ಅನ್ನುವುದು ಒಂದು ಸಮಸ್ಯೆ, ಪರಿಹಾರವಲ್ಲ ಎಂದು ಅರಿತುಕೊಳ್ಳಬೇಕಿದೆ.
ಆತಂಕ, ಚಿಂತೆಗಳು ರಚನಾತ್ಮಕ ಶಕ್ತಿಯನ್ನು ಕಸಿದುಬಿಡುತ್ತವೆ, ಉತ್ಸಾಹಕ್ಕೆ ಗರ ಬಡಿಯುತ್ತದೆ, ಕ್ರಿಯಾತ್ಮಕತೆಯ ಬಾಗಿಲು ಮುಚ್ಚಿಬಿಡುತ್ತದೆ. ಆಗ ಏನು ಮಾಡಬಹುದು? ಸತತ ಚಿಂತೆಯಿಂದ ನರಳುವವರು ಏನೇ ಪ್ರಯತ್ನ ಮಾಡಿದರೂ ಅದರಿಂದ ಪಾರಾಗುವುದು ಸುಲಭವಲ್ಲವೆಂಬುದು ಅರಿವಿಗೆ ಬಂದಾಗ ನಿರಾಶೆ ಮೂಡುತ್ತದೆ. ಚಿಂತೆಯನ್ನು ಮರೆಯುವ ಪ್ರಯತ್ನ ಅಷ್ಟು ಸುಲಭವಲ್ಲ. ಮರೆಯಬೇಕೆಂದಷ್ಟೂ ಚಿಂತೆಯ ಸುತ್ತಲೇ ಮನಸ್ಸು ಸುಳಿದಾಡುತ್ತಿರುತ್ತದೆ. ಒಂದು ಉದಾಹರಣೆ ನೋಡೋಣ. ಕಣ್ಣು ಮುಚ್ಚಿ ಒಂದು ದೊಡ್ಡ ಹಂದಿ ತಿಪ್ಪೆಯ ಹೊಲಸಲ್ಲಿ ಆನಂದವಾಗಿ ಬಾಯಾಡಿಸುತ್ತಿರುವ ಚಿತ್ರವನ್ನು ಕಲ್ಪಿಸಿಕೊಳ್ಳೋಣ. ಮನಸ್ಸಿನಲ್ಲಿ ಆ ಚಿತ್ರ ಮನಸ್ಸಿನಲ್ಲಿ ಗಟ್ಟಿಗೊಂಡಾಗ ಆ ಚಿತ್ರದ ಕುರಿತು ಚಿಂತಿಸುವುದನ್ನು ನಿಲ್ಲಿಸೋಣ. ಏನೇ ಆದರೂ ಮುಂದಿನ ಐದು ನಿಮಿಷಗಳ ಅವಧಿಯವರೆಗೆ ಹಂದಿಯ ನೆನಪು ಬಾರದಿರುವಂತೆ ನಿರ್ಧರಿಸೋಣ. ಏನಾಗುತ್ತದೆ? ಅದರ ಕುರಿತು ಚಿಂತಿಸಬಾರದೆಂದುಕೊಂಡರೂ ಅದು ಸಾಧ್ಯವಾಗದು. ಮತ್ತೆ ಮತ್ತೆ ಆ ಚಿತ್ರ ಮೂಡಿಬರುತ್ತಿರುತ್ತದೆ. ಆದ್ದರಿಂದ ಚಿಂತೆಯನ್ನು ಮರೆಯಲು ಪ್ರಯತ್ನಿಸುವ ಬದಲು ಅದನ್ನು ನಿಯಂತ್ರಿಸಲು ಬೇರೆ ಮಾರ್ಗವನ್ನೇ ಹುಡುಕಬೇಕಿದೆ. ಚಿಂತೆ ಮಾಡಲು ದಿನದ ಒಂದು ನಿರ್ದಿಷ್ಟ ಅವಧಿಯನ್ನು, ಉದಾಹರಣೆಗೆ ಸಂಜೆಯ ೫ ಗಂಟೆಯಿಂದ ೬ ಗಂಟೆಯವರೆಗೆ ಅಥವ ರಾತ್ರಿಯ ೯ ಗಂಟೆಯಿಂದ ೧೦ ಗಂಟೆಯವರೆಗೆ, ಹೀಗೆ ನಿಗದಿಪಡಿಸಿಕೊಂಡರೆ ಮನಸ್ಸು ಸ್ವಲ್ಪ ಮಟ್ಟಿಗೆ ಚಿಂತೆಯನ್ನು ಬದಿಗಿಟ್ಟು ಮುಂದೂಡಲು ಸಹಾಯವಾಗುತ್ತದೆ. ಚಿಂತೆಗಾಗಿ ಸಮಯವಿರುವುದರಿಂದ ಇತರ ಸಂಗತಿಗಳಿಗೆ ಗಮನ ಕೊಡೋಣ ಎಂದು ಮನಸ್ಸನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಹೀಗೆ ಮುಂದೂಡುವ ಶಕ್ತಿ ರೂಢಿಸಿಕೊಂಡರೆ ಚಿಂತೆಯನ್ನು ನಿಯಂತ್ರಿಸುವ ಶಕ್ತಿ ಇದೆಯೆಂಬ ಅರಿವು ಮೂಡಿ ಹುರುಪು ಉಳಿಸಿಕೊಳ್ಳಲು ಸಹಾಯಕವಾಗುತ್ತದೆ.
ಮುಂದಿನ ಹಂತವಾಗಿ ಸಮಸ್ಯೆಯ ಅಂತರಾಳಕ್ಕೆ ಇಳಿಯಬೇಕು. ಸಮಸ್ಯೆಯನ್ನು ಕೇವಲ ಚಿಂತಿಸುವುದರಿಂದ ಬಗೆಹರಿಸಲಾಗದು. ಪರಿಸ್ಥಿತಿಯ ಅವಲೋಕನ ಮಾಡಬೇಕು, ಏನು ಮಾಡಬಹುದೆಂಬ ಬಗ್ಗೆ ಯೋಚಿಸಬೇಕು ಮತ್ತು ಅದನ್ನು ಕ್ರಿಯಾರೂಪಕ್ಕೆ ತರುವ ಮಾರ್ಗಗಳನ್ನು ಹುಡುಕಬೇಕು. ಈ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕು.
>>; ಸಮಸ್ಯೆ ಕೇವಲ ಊಹಾತ್ಮಕ ಮತ್ತು ಕಲ್ಪನೆಯದೇ?
>>; ಕಲ್ಪನೆಯ ಸಮಸ್ಯೆಯಾದರೆ, ಅದು ನಿಜಕ್ಕೂ ಸಂಭವಿಸಬಹುದೇ?
>>; ಸಮಸ್ಯೆ ಪರಿಹಾರಕ್ಕೆ ಏನಾದರೂ ಮಾಡಬಹುದೇ ಅಥವ ಅದನ್ನು ಎದುರಿಸಲು ಸಿದ್ಧರಾಗಿದ್ದೇವೆಯೇ? ಅಥವ ಅದು ನಮ್ಮ ನಿಯಂತ್ರಣಕ್ಕೆ ಹೊರತಾದುದೇ?
ಪರಿಹರಿಸಬಹುದಾದ ಸಮಸ್ಯೆಯಾದರೆ ಏನು ಮಾಡಬಹುದೆಂಬ ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಜನೆಗಳನ್ನು ರೂಪಿಸಬೇಕು. ಅದರ ಬಗ್ಗೆಯೇ, ಪರಿಪೂರ್ಣ ಪರಿಹಾರದ ಬಗ್ಗೆಯೇ, ತಲೆ ಕೆಡಿಸಿಕೊಳ್ಳದೆ, ನಮ್ಮ ನಿಯಂತ್ರಣಕ್ಕೆ ಹೊರತಾದ ಸಂಗತಿಗಳನ್ನು ಬಿಟ್ಟು ಉಳಿದಂತೆ ಏನು ಬದಲಾವಂಣೆ ತರಬಹುದೋ ಅಂತಹುದರ ಬಗ್ಗೆ ಕೇಂದ್ರೀಕರಿಸಿ ಪ್ರಯತ್ನಿಸಬೇಕು. ಒಮ್ಮೆ ಕಾರ್ಯಯೋಜನೆ ಸಿದ್ಧಪಡಿಸಿಕೊಂಡು ಪ್ರವೃತ್ತರಾದೆವೆಂದರೆ ಅರ್ಧ ಚಿಂತೆಯಿಂದ ಮುಕ್ತರಾದಂತೆಯೇ ಸರಿ.
ಪರಿಹರಿಸಲಾಗದ ಸಮಸ್ಯೆಗಳಿದ್ದರೆ ಏನು ಮಾಡುವುದು? ನಮ್ಮಲ್ಲಿ ಹೆಚ್ಚಿನವರು ಇಂತಹ ಸಮಸ್ಯೆಗಳ ಚಿಂತೆಯಲ್ಲೇ ಬಳಲುತ್ತಿರುತ್ತೇವೆ. ಇಂತಹ ಸಂದರ್ಭಗಳಲ್ಲಿ, ನಮ್ಮ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದು ಅವಶ್ಯಕವಾಗಿದೆ. ಚಿಂತೆ ಸಮಸ್ಯೆ ಪರಿಹರಿಸಲಾಗದಿದ್ದರೂ ಭಾವನೆಗಳನ್ನು ನಿಯಂತ್ರಿಸಲು ಸಹಕಾರಿಯೆಂಬುದನ್ನು ಹಿಂದೆಯೇ ಹೇಳಿದೆ. ಆದರೆ ಅದು ಅಹಿತಕರ ಭಾವನೆಗಳನ್ನು ಹೋಗಲಾಡಿಸಲಾರದು. ಈ ವಿಷವೃತ್ತದಿಂದ ಹೊರಬರಬೇಕೆಂದರೆ ಅಹಿತಕರ ಭಾವನೆಗಳನ್ನು ಅವು ಇರುವಂತೆ ಒಪ್ಪಿಕೊಳ್ಳಬೇಕಷ್ಟೆ. ಈ ಭಾವನೆಗಳು ಜೀವನದಂತೆಯೇ ಗೋಜಲು ಗೋಜಲಾಗಿರುತ್ತವೆ ಎಂಬ ಸತ್ಯ ಮನಗಾಣಬೇಕು. ಭಾವನೆಗಳು ಯಾವಾಗಲೂ ಅರ್ಥವತ್ತಾಗಿರಲಾರದು ಅಥವ ಹಿತವಾಗಿರಲಾರದು. ಅವು ಮಾನವಸಹಜವೆಂದು ತಿಳಿದು ಅವುಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದರ ಬಗ್ಗೆ ಗಮನಿಸಬೇಕು.
ಸತತ ಚಿಂತೆಯಿಂದ ಬಳಲುತ್ತಿರುವವರ ಮೂಲ ಸಮಸ್ಯೆಯೆಂದರೆ ಅವರು ಅನಿಶ್ಚಿತತೆಯನ್ನು ತಾಳಿಕೊಳ್ಳಲಾರರು. ಮುಂದೆ ಏನಾಗಬಹುದು ಎಂಬ ಕುರಿತು ಅವರು ಶೇಕಡ ನೂರರಷ್ಟು ಖಚಿತಪಡಿಸಿಕೊಳ್ಳಬಯಸುವವರು. ಅದನ್ನು ತಿಳಿಯುವ ಸಲುವಾಗಿಯೇ ಮತ್ತು ಅಂತಹ ಅಹಿತಕರ ಸನ್ನಿವೇಶಗಳನ್ನು ತಡೆಯುವುದು ಹೇಗೆ ಎಂಬ ಕುರಿತಾಗಿಯೇ ಚಿಂತೆಯಿಂದ ಬಳಲುತ್ತಾರೆ. ಆದರೆ ಸಮಸ್ಯೆಯೆಂದರೆ ಅಂತಹ ಚಿಂತೆ ಉಪಯೋಗಕ್ಕೆ ಬರುವುದಿಲ್ಲ. ಮುಂದೆ ಆಗಬಹುದಾದ ಸಂಗತಿಗಳ ಬಗ್ಗೆ ಚಿಂತಿಸುವುದರಿಂದ ಭವಿಷ್ಯ ತಿಳಿಯಲಾಗದು. ಹಾಗೆ ಚಿಂತಿಸುವುದರಿಂದ ಒಳ್ಳೆಯ ಸ್ಥಿತಿ ಬಂದೀತೆಂದು ಭಾವಿಸುವುದಾದರೂ, ಅದು ಕೇವಲ ಭ್ರಮೆಯಾಗಿರುತ್ತದೆ. ಕೆಟ್ಟ ಸಂಭವನೀಯ ಸಂಗತಿಗಳ ಬಗ್ಗೆ ಚಿಂತಿಸುವುದರಿಂದ ಅದನ್ನು ನಡೆಯುವುದನ್ನು ನಿಲ್ಲಿಸಲಾಗದು. ಅಂತಹ ಚಿಂತೆ ನಮ್ಮ ಈಗಿನ ಸುಖ-ಸಂತೋಷಗಳನ್ನು ಕಿತ್ತುಕೊಳ್ಳುತ್ತದೆ. ಆದ್ದರಿಂದ ತಾತ್ಕಾಲಿಕವಾಗಿ ಈಗ ಏನು ಮಾಡಬಹುದೆಂಬ ಬಗ್ಗೆ ಮಾತ್ರ ಯೋಚಿಸಿ, ಕ್ರಮೇಣ ನಿಶ್ಚಿತ ಮತ್ತು ಉಪಯುಕ್ತ ಕ್ರಮಗಳ ಬಗ್ಗೆ ಮುಂದುವರೆಯುವುದು ಸೂಕ್ತ.
ಸತತ ಚಿಂತೆಯಿಂದ ಬಳಲುವವರಿಗೆ ಸಮಸ್ಯೆ ವಾಸ್ತವಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ತೋರುತ್ತದೆ. ಸಮಸ್ಯೆಯನ್ನು ನಿಭಾಯಿಸುವುದು ದುಸ್ತರವಾಗಿ ತೋರುತ್ತದೆ. ಇದನ್ನು ಅರಿವಿನ ವಿಕಾರವೆನ್ನಬೇಕೋ ಅಥವ ಬೇರೆ ಏನೆನ್ನಬೇಕೋ ತಿಳಿಯದು. ಈ ಅರಿವಿನ ವಿಕಾರ ವಾಸ್ತವಿಕ ವಿಚಾರಗಳನ್ನು ಅವಲಂಬಿಸಿರದಿದ್ದರೂ ಅದನ್ನು ಬಿಡುವುದು ಕಷ್ಟವೇ. ಎಷ್ಟೋ ಸಲ ಅದು ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಬಿಟ್ಟಿರುವ, ಬದಲಾಯಿಸಲಾಗದ ವಿಚಾರವಾಗಿರಬಹುದು. ಇದನ್ನು ಸರಿಪಡಿಸಲು ಮೆದುಳಿಗೆ ತರಬೇತಿ ಕೊಡುವುದು ಅಗತ್ಯ. ಸಮಸ್ಯೆಯ ಅಪಾಯಗಳ ಕುರಿತು ಯಾವ ಸಂಗತಿ ಭಯಕ್ಕೆ ಕಾರಣವಾಗಿದೆಯೋ ಅದನ್ನು ವಸ್ತುಸ್ಥಿತಿಯೆಂದು ಭಾವಿಸದೆ, ಅದರ ಕುರಿತು ಸಾಧಕ-ಬಾಧಕಗಳ ಕುರಿತು ಪರಿಶೀಲಿಸಿದರೆ ಸಮತೋಲಿತವಾಗಿ ಯೋಚಿಸಲು ಸಾಧ್ಯವಾಗಬಹುದು. ಈ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ:
>>; ಚಿಂತೆಗೆ ಕಾರಣವಾದ ಸಂಗತಿ ಎಷ್ಟರಮಟ್ಟಿಗೆ ಸತ್ಯ? ಎಷ್ಟು ಅಸತ್ಯ?
>>; ಈಗಿನ ಪರಿಹಾರಕ್ಕಿಂತ ಬೇರೆ ರೀತಿಯ ಪರಿಹಾರಕ್ಕೆ ಅವಕಾಶವಿದೆಯೇ?
>>; ಭಯಕ್ಕೆ ಕಾರಣವಾದ ಸಂಗತಿ ನಡೆಯುವ ಸಾಧ್ಯತೆ ಎಷ್ಟು?
>>; ಅಂತಹ ಸಾಧ್ಯತೆ ಕಡಿಮೆಯಿದ್ದರೆ, ಇತರ ಪರಿಣಾಮಗಳಾದರೂ ಎಂತಹವು?
>>; ಚಿಂತಿಸುವುದು ಸಹಕಾರಿಯೇ? ಚಿಂತೆ ಮಾಡುವುದರಿಂದ ಎಷ್ಟರ ಮಟ್ಟಿಗೆ ಅನುಕೂಲ/ತೊಂದರೆ?
>>; ಇಂತಹುದೇ ಸಮಸ್ಯೆ ನನ್ನ ಸ್ನೇಹಿತನಿಗೆ ಇದ್ದರೆ ನಾನು ಏನು ಸಲಹೆ ಕೊಡುತ್ತಿದ್ದೆ?
ಸಮಸ್ಯೆ ಉಂಟುಮಾಡುವವರಿಂದ ಹಿತಕರವಾದ ಅಂತರ ಕಾಯ್ದುಕೊಳ್ಳುವುದು ಸೂಕ್ತ. ಸಮಸ್ಯೆ ಉಲ್ಬಣವಾಗದಂತೆ ಅಂತಹವರೊಂದಿಗೆ ಜಾಗ್ರತೆಯಿಂದ ವ್ಯವಹರಿಸಬೇಕಾಗುತ್ತದೆ. ಆಪ್ತರು, ಸ್ನೇಹಿತರು, ಹಿತಚಿಂತಕರುಗಳನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಬೇಕು. ಚಿಂತೆಗೆ ಭವಿಷ್ಯದಲ್ಲಿ ಏನಾಗಬಹುದು ಮತ್ತು ಅದಕ್ಕೆ ನಾವು ಏನು ಮಾಡಬೇಕು ಎಂಬುದೇ ಮುಖ್ಯ ಕಾರಣವಾಗಿದೆ. ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು ಮತ್ತು ಅದಕ್ಕೆ ತರಬೇತಿ ನೀಡಿದರೆ ಸಮಸ್ಯೆ ಹಗುರವಾದೀತು. ಮನಸ್ಸಿನ ಆತಂಕಗಳು, ಉದ್ವೇಗಗಳನ್ನು ಉಪೇಕ್ಷಿಸದೆ, ಹತ್ತಿಕ್ಕದೆ ಅವುಗಳನ್ನು ಹೊರಗಿನ ವ್ಯಕ್ತಿಯ ದೃಷ್ಟಿಯಿಂದ ನೋಡುವ ಅಭ್ಯಾಸ ಬೆಳೆಸಿಕೊಂಡರೆ ಒಳಿತಾದೀತು. ಇಂತಹ ಅಭ್ಯಾಸ ಬೆಳೆಸಿಕೊಂಡರೆ ಸಮಸ್ಯೆಗಳು ಮೋಡ ಆಕಾಶದಲ್ಲಿ ಸರಿದುಹೋದಂತೆ ಸರಿದು ಹೋಗಬಹುದು. ಚಿಂತೆ ಭವಿಷ್ಯದ ದುಃಖಗಳನ್ನು ನಿವಾರಿಸುತ್ತದೋ ಇಲ್ಲವೋ ತಿಳಿಯದು, ಆದರೆ ಇಂದಿನ ಸಂತೋಷವನ್ನು ಮಾತ್ರ ಹಾಳು ಮಾಡುತ್ತದೆ. ಮುಂದಿನ ಸಂಗತಿಗಳಿಗಿಂತ ಇಂದಿನ ಪರಿಸ್ಥಿತಿಯ ಬಗ್ಗೆ ಗಮನ ನೀಡಿದರೆ ಮುಂದಿನದೂ ಸರಾಗವಾಗಿ ಸಾಗಬಹುದು. ಮನಸ್ಸನ್ನು ಕೇಂದ್ರೀಕರಿಸಿ ಈಗ ಏನು ಮಾಡಬೇಕೆಂಬ ಬಗ್ಗೆ ಮಾತ್ರ ಧ್ಯಾನಿಸಿದರೆ ಅನುಕೂಲವಾಗಬಹುದು. ಹಳೆಯ ಚಿಂತೆಗಳಿಗೆ ಮನಸ್ಸು ಮರಳಿದರೂ, ವಿಚಲಿತರಾಗದೆ ಪ್ರಯತ್ನ ಮುಂದುವರೆಸಿದರೆ ಚಿಂತೆಯಿಂದ ಮುಕ್ತವಾಗುವ ದಾರಿ ಸಿಕ್ಕೀತು. ಚಿಂತಿಸದಿರೋಣ. ಚಿಂತೆಯದೇ ಚಿಂತೆಯಾಗಿರುವಾಗ ಇದು ಬಹಳ ಕಷ್ಟವಾದರೂ ಪ್ರಯತ್ನಪಟ್ಟು ಚಿಂತಿಸದಿರೋಣ.
-ಕ.ವೆಂ.ನಾಗರಾಜ್.
**************
ದಿನಾಂಕ 17.02.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ.
**************
ದಿನಾಂಕ 17.02.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ