ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಅಕ್ಟೋಬರ್ 27, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -6

ಋಗ್ವೇದದಲ್ಲಿ:-

ಯೇ ತ್ರಿಂಶತಿ ತ್ರಯಸ್ಪರೋ ದೇವಾಸೋ ಬರ್ಹಿರಾಸದನ್|
ವಿದನ್ನಹ ದ್ವಿತಾಸನನ್|| (ಋಕ್. 8.28.1)

     [ಯೇ] ಯಾವ, [ತ್ರಿಂಶತಿ ತ್ರಯಃ ಪರಃ ದೇವಾಸಃ] ಮೂವತ್ತಮೂರು ದೇವತೆಗಳು, [ಬರ್ಹಿ ಆಸದನ್] ಆಸನಾರೂಢರಾಗಿದ್ದಾರೋ [ದ್ವಿತಾಸನನ್] ಜಡರೂಪದಲ್ಲಿಯೂ ದಾನ ನೀಡುತ್ತಾ [ನಃ ವಿದನ್] ನಮಗೆ ಪ್ರಾಪ್ತರಾಗಲಿ; - ಎಂದು ಓದುತ್ತೇವೆ. ಅಥರ್ವವೇದದಲ್ಲಿ:-

ತ್ರಯಂಸ್ತ್ರಿಂಶತ್ತ್ರಿಶತಾಃ ಷಟ್ ಸಹಸ್ರಾಃ ಸರ್ವಾಂತ್ಸ ದೇವಾಂಸ್ತಪಸಾ ಪಿಪರ್ತಿ|| (ಅಥರ್ವ.11.5.2.)

ಆ ತಪಸ್ವಿಯು 6333 ದೇವತೆಗಳನ್ನು ತನ್ನ ತಪಸ್ಸಿನಿಂದ ತೃಪ್ತಿಗೊಳಿಸುತ್ತಾನೆ- 
ಎಂದು ಹೇಳಿದೆ. ಯಜುರ್ವೇದದಲ್ಲಿ:-

ಅಗ್ನಿರ್ದೇವತಾ ವಾತೋ ದೇವತಾ ಸೂರ್ಯೋ ದೇವತಾ ಚಂದ್ರಮಾ ದೇವತಾ| ವಸವೋ ದೇವತಾ ರುದ್ರಾ ದೇವತಾssದಿತ್ಯಾ ದೇವತಾ ಮರುತೋ ದೇವತಾ ವಿಶ್ವೇ ದೇವಾ ದೇವತಾ ಬೃಹಸ್ಪತಿರ್ದೇವತೇಂದ್ರೋ ದೇವತಾ ವರುಣೋ ದೇವತಾ|| (ಯಜು. 14.20) ಎಂಬ ಮಂತ್ರದಲ್ಲಿ ಅಗ್ನಿ, ವಾಯು, ಸೂರ್ಯ, ಚಂದ್ರ, ವಸುಗಳು, ಬೃಹಸ್ಪತಿ, ಇಂದ್ರ, ವರುಣ ಅವರೆಲ್ಲಾ ದೇವತೆಗಳು ಎಂದು ಹೇಳಿದೆ. ಆದರೆ ವೇದಗಳಲ್ಲೆಲ್ಲಿಯೂ ಈ ದೇವತೆಗಳೇ ಪರಮಾತ್ಮ ಎಂದು ಹೇಳಿಲ್ಲ. ಉಪಾಸನೆಯ ಪ್ರಕರಣದಲ್ಲಿ ಈ ದೇವತೆಗಳು ಉಪಾಸ್ಯರು ಎಂದು ಅಂಗೀಕರಿಸಿಲ್ಲ. ಈ ವಿದ್ವಾಂಸರಿಗೆ ಭ್ರಾಂತಿಯುಂಟಾಗಲು, ಈ ದೇವತೆಗಳ ಹೆಸರಿನಿಂದಲೇ ಪರಮಾತ್ಮನನ್ನು ನಿರ್ದೇಶಿಸಿರುವುದೂ ಒಂದು ಕಾರಣವಾಗಿದೆ. ಆದರೂ ವೇದಗಳು ಅತಿ ಸ್ಪಷ್ಟವಾಗಿ, ನಾನಾ ಹೆಸರುಗಳಿದ್ದರೂ ಪರಮಾತ್ಮನಿರುವುದೇನೋ ಒಬ್ಬನೇ ಎಂದು ಸ್ಪಷ್ಟವಾಗಿ ಸಾರಿವೆ. ಉದಾಹರಣೆಗೆ:

ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ದಿವ್ಯಃ ಸ ಸುಪರ್ಣೋ ಗರುತ್ಮಾನ್| ಏಕಂ ಸದ್ ವಿಪ್ರಾ ಬಹುಧಾ ವದಂತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ|| (ಋಕ್. 1.164.46)

     [ಅಗ್ನಿಂ] ತೇಜೋಮಯ ಪ್ರಭುವನ್ನು [ಇಂದ್ರಂ, ಮಿತ್ರಂ, ವರುಣಮ್] ಇಂದ್ರ, ಮಿತ್ರ, ವರುಣ ಎಂದು [ಅಹುಃ] ಕರೆಯುತ್ತಾರೆ. [ಅಥೋ] ಹಾಗೆಯೇ [ಸಃ] ಆ ಪ್ರಭುವು [ದಿವ್ಯಃ] ದಿವ್ಯನೂ [ಸುಪರ್ಣಃ} ಸುಪರ್ಣನೂ [ಗರುತ್ಮಾನ್] ಗರುತ್ಮಂತನೂ ಅಹುದು. [ಸತ್ ಏಕಮ್] ಸತ್ತತ್ವ ಇರುವುದೇನೋ ಒಂದೇ. [ವಿಪ್ರಾಃ] ವಿಶೇಷ ಪ್ರಜ್ಞಾವಂತರಾದ ಜ್ಞಾನಿಗಳು [ಬಹುಧಾ ವದಂತಿ] ಅನೇಕ ರೀತಿಯಲ್ಲಿ ವರ್ಣಿಸುತ್ತಾರೆ. [ಅಗ್ನಿಂ] ಅದೇ ತೇಜೋರೂಪವನ್ನು [ಯಮಂ ಮಾತರಿಶ್ವಾನಂ ಅಹುಃ]ಯಮ, ಮಾತರಿಶ್ವಾ - ಎನ್ನುತ್ತಾರೆ.

     ಇನ್ನು ಭ್ರಾಂತಿಗವಕಾಶವೆಲ್ಲಿ? ಇದೇ ಹೆಸರುಗಳಿಂದ ಬೇರೆ ದೇವತೆಗಳನ್ನು ನಿರ್ದೇಶಿಸಿದ ಮಾತ್ರಕ್ಕೆ ಅಥವಾ ಪರಮಾತ್ಮನನ್ನು ಬೇರೆ ಬೇರೆ ಹೆಸರುಗಳಿಂದ ಕರೆದ ಮಾತ್ರಕ್ಕೆ ಒಬ್ಬ ಪರಮಾತ್ಮ ನೂರಾರು ಪರಮಾತ್ಮರುಗಳಾಗಿ ಹೋಗುವುದಿಲ್ಲ. ಇದೊಂದು ಮಂತ್ರದ ಕಡೆ ದೃಷ್ಟಿ ಹರಿಸೋಣ:-

ಯೋ ನಃ ಪಿತಾ ಜನಿತಾ ಯೋ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ|
ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ|| (ಯಜು.10.82.3)

     [ಯಃ] ಯಾವನು [ನಃ ಪಿತಾ] ನಮ್ಮ ತಂದೆಯೋ [ಜನಿತಾ] ಉತ್ಪಾದಕನೋ [ಯಃ] ಯಾವನು [ವಿಧಾತಾ] ನಿಯಾಮಕನೋ [ವಿಶ್ವಾ ಧಾಮಾನಿ ಭುವನಾನಿ ವೇದ] ಸಮಸ್ತ ನೆಲೆಗಳನ್ನೂ, ಲೋಕಗಳನ್ನೂ ಬಲ್ಲನೋ [ಯಃ] ಯಾವನು [ಏಕ ಏವ] ಒಬ್ಬನೇ ಒಬ್ಬನು [ದೇವಾನಾಂ ನಾಮಧಾ] ದೇವತೆಗಳ ಹೆಸರನ್ನೆಲ್ಲಾ ಧರಿಸುವವನಾಗಿದ್ದಾನೋ [ತಂ ಸಂಪ್ರಶ್ನಂ] ಆ ಮಹಾಜಿಜ್ಞಾಸುವಾದ ಪ್ರಭುವನ್ನು [ಅನ್ಯಾ ಭುವನಾ ಯಂತಿ] ಬೇರೆಲ್ಲಾ ಲೋಕಗಳನ್ನು ಪಡೆದುಕೊಳ್ಳುತ್ತವೆ.

ಒಬ್ಬನೇ ಒಬ್ಬ ಎಲ್ಲಾ ಎಲ್ಲಾ ದೇವತೆಗಳ ಹೆಸರನ್ನೂ ಧರಿಸುತ್ತಾನೆ - ಎಂದು ವೇದವೇ ಘೋಷಿಸುತ್ತಿರುವಾಗ, ವೇದಗಳಲ್ಲಿ ಅನೇಕೇಶ್ವರವಾದವಿದೆ ಎನ್ನುವುದಕ್ಕೆ ಅವಕಾಶವಾದರೂ ಎಲ್ಲಿದೆ? ಈ ವಾದಕ್ಕೆ ಪೂರ್ಣವಿರಾಮ ಹಾಕುವ ಈ ಕೆಳಗಿನ ಮಂತ್ರವನ್ನು ನೋಡಿರಿ:-

ನ ದ್ವಿತೀಯೋ ನ ತೃತೀಯಶ್ಚತುರ್ಥೋ ನಾಪ್ಯುಚ್ಚತೇ|
ನ ಪಂಚಮೋ ನ ಷಷ್ಠಃ ಸಪ್ತಮೋ ನಾಪ್ಯುಚ್ಚತೇ|
ನಾಷ್ಟಮೋ ನಾ ನವಮೋ ದಶಮೋ ನಾಪ್ಯುಚ್ಚತೇ|
ತಮಿದಂ ನಿಗತಂ ಸಹಃ ಸ ಏಷ ಏಕ ಏಕವೃದೇಕ ಏವ|| (ಅಥರ್ವ.13.4.16-18,20)

[ನ ದ್ವಿತೀಯಃ] ಎರಡನೆಯ ಪರಮಾತ್ಮನಿಲ್ಲ. [ನ ತೃತೀಯಃ] ಮೂರನೆಯವನೂ ಇಲ್ಲ. [ಚತುರ್ಥಃ ಅಪಿ ನ ಉಚ್ಯತೇ] ನಾಲ್ಜನೆಯವನೂ ವರ್ಣಿಸಲ್ಪಡುವುದಿಲ್ಲ. [ನ ಪಂಚಮಃ] ಐದನೆಯವನಿಲ್ಲ. [ನ ಷಷ್ಠಃ] ಆರನೆಯವನಿಲ್ಲ. [ಸಪ್ತಮಃ ಅಪಿ ನ ಉಚ್ಯತೇ] ಏಳನೆಯವನೂ ವರ್ಣಿಸಲ್ಪಡುವುದಿಲ್ಲ. [ನ ಅಷ್ಟಮಃ] ಎಂಟನೆಯವನಿಲ್ಲ. [ನ ನವಮಃ] ಒಂಬತ್ತನೆಯವನಿಲ್ಲ. [ದಶಮಃ ಅಪಿ ನ ಉಚ್ಯತೇ] ಹತ್ತನೆಯವನ ನಿರ್ದೇಶನವೂ ಇಲ್ಲ. [ಇದಂ ಸಹಃ] ಈ ಶಕ್ತಿ [ತಂ ನಿಗತಮ್] ಅವನಲ್ಲಿಯೇ ಅಡಕವಾಗಿದೆ. [ಸಃ ಏಷಃ] ಆ, ಈ ಪ್ರಭುವು [ಏಕಃ] ಒಬ್ಬನೇ ಆಗಿದ್ದಾನೆ. [ಏಕವೃತ್] ಒಬ್ಬನೇ ವ್ಯಾಪಕನಾಗಿದ್ದಾನೆ. [ಏಕ ಏವ] ಇರುವುದು ಒಬ್ಬನೇ ಒಬ್ಬನು.

ಈ ರೀತಿ ಎಲ್ಲಾ ಸಂದೇಹಗಳು ಅಡಗಿಹೋಗುತ್ತವೆ. ಭಗವಂತನಿರುವುದು ಒಬ್ಬನೇ. ಅವನು ನಿರಾಕಾರ-ನಿರ್ವಿಕಾರನು, ಸರ್ವಜ್ಞ-ಸರ್ವವ್ಯಾಪಕ-ಸರ್ವದ್ರಷ್ಟನು. ಅವನು ಸದಾ ಅಶರೀರನೇ. ಅವನು ಶಕ್ತಿರೂಪನು; ವ್ಯಕ್ತಿರೂಪನಲ್ಲ. ಅವನು ಮೇಲಿಂದ ಕೆಳಗಿಳಿದು ಬರುವನು, ಅವತಾರವೆತ್ತುವನು - ಎನ್ನುವುದು ಕೇವಲ ಭ್ರಾಂತಿ ಮಾತ್ರ. ಅವನೇ ಸೃಷ್ಟಿಕರ್ತನು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ