ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಮೇ 21, 2013

ವೇದೋಕ್ತ ಜೀವನ ಪಥ: ವೇದೋಕ್ತ ರಾಜನೀತಿ - ೨


     ಆ ಸಂಸತ್ತಿಗೆ ಆರಿಸಿ ಬರುವ ಸದಸ್ಯರು ಹೇಗಿರಬೇಕು? ಯಜುರ್ವೇದ ಹೇಳುತ್ತಲಿದೆ:-
ಯೇ ದೇವಾ ಅಗ್ನಿನೇತ್ರಾಃ ಪುರಃ ಸದಸ್ತೇಭ್ಯಃ ಸ್ವಾಹಾ|
ಯೇ ದೇವಾ ಯಮನೇತ್ರಾಃ ದಕ್ಷಿಣಾ ಸದಸ್ತೇಭ್ಯಃ ಸ್ವಾಹಾ|
ಯೇ ದೇವಾ ವಿಶ್ವದೇವನೇತ್ರಾಃ ಪಶ್ಚಾತ್ಸದಸ್ತೇಭ್ಯಃ ಸ್ವಾಹಾ|
ಯೇ ದೇವಾ ಮಿತ್ರಾವರುಣನೇತ್ರಾ ವಾ ಮರುನ್ನೇತ್ರಾ ವೋತ್ತರಾಸದಸ್ತೇಭ್ಯಃ ಸ್ವಾಹಾ|
ಯೇ ದೇವಾಃ ಸೋಮನೇತ್ರಾ ಉಪರಿಸದೋ ದುವಸ್ವಂತಸ್ತೇಭ್ಯಃ ಸ್ವಾಹಾ|| (ಯಜು.೯.೩೬.)
     [ಯೇ ದೇವಾಃ] ಯಾವ ಉನ್ನತ ಗುಣವಂತರಾದ ವಿದ್ವಾಂಸರು, [ಅಗ್ನಿನೇತ್ರಾಃ] ರಾಷ್ಟ್ರೋತ್ಥಾನಕವಾದ ರಾಜನೀತಿ ನಿಪುಣರೋ, ಮತ್ತು [ಪುರಃ ಸದಃ] ಶಾಸಕನ ಮುಂದೆ ಕುಳಿತುಕೊಳ್ಳುವವರಾಗಿರುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ. [ಯೇ ದೇವಾಃ] ಯಾವ ಉದಾರಾತ್ಮರಾದ ವಿದ್ವಾಂಸರು, [ಯಮನೇತ್ರಾಃ] ನ್ಯಾಯಶಾಸ್ತ್ರನಿಪುಣರೋ, ಮತ್ತು [ದಕ್ಷಿಣಾಸದಃ] ಸರ್ವೋಚ್ಚ ಶಾಸಕನ ಬಲಗಡೆ ಕುಳಿತುಕೊಳ್ಳುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ. [ಯೇ ದೇವಾಃ] ಯಾವ ಶ್ರೇಷ್ಠ ಗುಣಿಗಳಾದ ವಿದ್ವಾಂಸರು, [ವಿಶ್ವದೇವನೇತ್ರಾಃ] ಸಮಸ್ತ ಭೌತಿಕ ವಿಜ್ಞಾನದಲ್ಲಿ ನಿಪುಣರೋ, ಮತ್ತು, [ಪಶ್ಚಾತ್ಸದಃ] ಸರ್ವೋಚ್ಚ ಶಾಸಕನ ಹಿಂದೆ ಕುಳಿತುಕೊಳ್ಳುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ. [ಯೇ ದೇವಾಃ] ಯಾವ ಉದಾರ ಚರಿತರಾದ ವಿದ್ವಾಂಸರು, [ಮಿತ್ರಾವರುಣನೇತ್ರಾಃ] ಮಿತ್ರರನ್ನೂ ಮತ್ತು ನಿವಾರಿಸಲರ್ಹರಾದ ಶತ್ರುಗಳನ್ನು ಗುರುತಿಸುವುದರಲ್ಲಿ ನಿಪುಣರೋ, [ವಾ ವಾ] ಅಥವಾ [ಮರುನ್ನೇತ್ರಾಃ] ಆತ್ಮ ಬಲಿದಾನಕ್ಕೂ ಸಿದ್ಧರಾಗುವ ಯುದ್ಧಕಲಾನಿಪುಣರೋ, ಮತ್ತು, [ಉತ್ತರಾಸದಃ] ರಾಷ್ಟ್ರಪತಿಯ ಎಡಗಡೆಗೆ ಕುಳಿತುಕೊಳ್ಳುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ. [ಯೇ ದೇವಾಃ] ಯಾವ ದಿವ್ಯಗುಣಸಂಪನ್ನರಾದ ವಿದ್ವಾಂಸರು, [ಸೋಮನೇತ್ರಾಃ] ಆಧ್ಯಾತ್ಮವಿದ್ಯಾನಿಪುಣರೋ, [ಉಪರಿಸದಃ] ಉಚ್ಚಾಸನಗಳಲ್ಲಿ ಕುಳಿತುಕೊಳ್ಳುತ್ತಾರೋ, ಮತ್ತು, [ದುವಸ್ವಂತಃ] ಪ್ರಭೂಪಸನಾನಿರತರಾಗಿರುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ.
     ಈ ಉದ್ಧರಣದಲ್ಲಿ ಮೊದಲು ಗಮನಿಸಬೇಕಾದ ಅಂಶವೇನೆಂದರೆ ಸಂಸತ್ತಿನ ಎಲ್ಲಾ ಸದಸ್ಯರೂ ಪ್ರಥಮತಃ 'ದೇವಜನರು' ಎಂದರೆ, ಶ್ರೇಷ್ಠತರದ ಜೀವನ ನಡೆಸುವ ಸತ್ಯಸಂಧರಾದ, ಉದಾರಾತ್ಮರಾದ ಪುರುಷರಾಗಿರಬೇಕು. ಅಂತಹ ಐದು ಬಗೆಯ ದೇವಜನರು, ಅಂದರೆ, ರಾಜನೀತಿ ನಿಪುಣರು, ನ್ಯಾಯಶಾಸ್ತ್ರ ನಿಪುಣರು, ಭೌತಿಕ ವಿಜ್ಞಾನ ನಿಪುಣರು, ಮಿತ್ರ-ಶತ್ರುಗಳನ್ನು ಗುರುತಿಸಬಲ್ಲ, ಆತ್ಮತ್ಯಾಗಕ್ಕೂ ಸಿದ್ಧರಾದ ಯುದ್ಧಕಲಾನಿಪುಣರು ಮತ್ತು ಭಗವದುಪಾಸಕರಾದ ಆಧ್ಯಾತ್ಮ ವಿದ್ಯಾ ನಿಪುಣರೂ ಸಂಸತ್ತಿನ ಸದಸ್ಯರಾಗಬೇಕು. ಈ ಸಂಸತ್ತಿನ ಸದಸ್ಯರೇ ತಮ್ಮಲ್ಲಿ ಒಬ್ಬನನ್ನು ರಾಷ್ಟ್ರದ ಉಚ್ಚತಮ ಶಾಸಕನನ್ನಾಗಿ ಆರಿಸಬೇಕು. ರಾಜನೀತಿ ನಿಪುಣರು ರಾಷ್ಟ್ರಪತಿಯ ಮುಂದೆ, ನ್ಯಾಯಶಾಸ್ತ್ರ ನಿಪುಣರು ಬಲಕ್ಕೆ, ಭೌತಿಕ ವಿಜ್ಞಾನ ನಿಪುಣರು ಹಿಂದೆ, ಯುದ್ಧಕಲಾ ನಿಪುಣರು ಎಡಕ್ಕೆ ಮತ್ತು ಆಧ್ಯಾತ್ಮವಿದ್ಯಾ ನಿಪುಣರು ಇವರೆಲ್ಲರಿಗಿಂತ ಉನ್ನತಾಸನದಲ್ಲಿ ಕುಳಿತುಕೊಳ್ಳಬೇಕು. ಇಂತಹ ವಿಶೇಷಜ್ಞರಾದ ವಿದ್ವಾಂಸರನ್ನು ಬಿಟ್ಟು, ನಿರಕ್ಷರಕುಕ್ಷಿಗಳೂ, ಸ್ವಾರ್ಥಪರರೂ ಆದವರನ್ನು ಸಂಸತ್ತಿಗೆ ಆರಿಸುವಂತಿಲ್ಲ. 
     ಈ ಸಂಸತ್ಸದಸ್ಯರನ್ನು ಆರಿಸುವವರಾರು? ವೇದಗಳು ನಿರ್ವಾಚಕರಿಗೂ ಸಹ ಕೆಲವು ಯೋಗ್ಯತೆಗಳನ್ನು ವಿಧಿಸುತ್ತವೆ. ಇಲ್ಲಿ ಕೇಳಿರಿ:-
ಅರ್ಥೇತಃ ಓಜಸ್ವತೀಃ ಆಪಃ ಪರಿವಾಹಿಣೀಃ ಸ್ಥ ರಾಷ್ಟ್ರದಾ ರಾಷ್ಟ್ರಂ ಮೇ ದತ್ತ || (ಯಜು.೧೦.೩.)
     [ಅರ್ಥೇತಃ] ಸಂಪತ್ತನ್ನು ಸಂಪಾದಿಸುವವರು, [ಓಜಸ್ವತೀಃ] ಓಜಸ್ಸಿನಿಂದ ಪ್ರಕಾಶಿಸುವವರಾಗಿದ್ದೀರಿ. [ಆಪಃ ಪರಿವಾಹಿಣೀಃ] ಇತರರನ್ನೂ ಮುಂದಕ್ಕೆ ತರುವ ಆಪ್ತರಾಗಿದ್ದೀರಿ. [ರಾಷ್ಟ್ರದಾಃ] ನೀವೆಲ್ಲರೂ ರಾಷ್ಟ್ರವನ್ನು, ಶಾಸನಾಧಿಕಾರವನ್ನು ಕೊಡುವವರಾಗಿದ್ದೀರಿ. [ರಾಷ್ಟ್ರಂ ಮೇ ದತ್ತಾ] ಶಾಸನಾಧಿಕಾರವನ್ನು ಕೊಡಿರಿ.
     ಇವು ಸಂಸತ್ತಿನ ಸದಸ್ಯತ್ವಕ್ಕೆ ಅಭ್ಯರ್ಥಿಯಾಗಿ ನಿಂತವನು ಜನಸಾಮಾನ್ಯರಿಗೆ ಹೇಳುವ ಮಾತುಗಳು. ಒಂದಿಲ್ಲೊಂದು ವೈಶಿಷ್ಟ್ಯ ಪಡೆದಿರುವವರೇ ಮತದಾನ ಮಾಡಲು ಅರ್ಹರು. ಅಂತಹ ಪ್ರಜೆಗಳನ್ನು 'ರಾಷ್ಟ್ರದಾಃ' ಎಂದು ಕರೆದಿರುವುದು ಗಮನಾರ್ಹವಾದ ವಿಷಯ. ವಸ್ತುತಃ ಪ್ರಜೆಗಳೇ ಶಾಸನಾದಿಕಾರವನ್ನು ಕೊಡುವವರು. ಇಂತಹವರು ಚುನಾಯಿಸಿದ ಪ್ರತಿನಿಧಿಗಳಿಂದ ಕೂಡಿದ ಸಂಸತ್ತನ್ನು ವೇದಗಳು 'ಸಭೆ' ಎಂದು ಕರೆಯುತ್ತವೆ. ಈ ಸಭೆ ಪ್ರಧಾನಶಾಸಕನನ್ನು ಹಿಂದೆ ಹೇಳಿದಂತೆ ಆರಿಸುತ್ತದೆ. ಆ ಪ್ರಧಾನ ಶಾಸಕನು, ಸಭೆಯ ಸದಸ್ಯರಿಂದಲೇ ಆವಶ್ಯಕವಾದ ಸಂಖ್ಯೆಯಲ್ಲಿ ಜನರನ್ನು ಆರಿಸಿಕೊಂಡು, ಶಾಸನಕಾರ್ಯ ನಿರ್ವಹಿಸಲು 'ಮಂತ್ರಿಮಂಡಲ'ವನ್ನು ರಚಿಸಿಕೊಳ್ಳುತ್ತಾನೆ. ಈ ಮಂತ್ರಿಮಂಡಲ, ವೇದಗಳ ಭಾಷೆಯಲ್ಲಿ 'ಸಮಿತಿ' ಎನಿಸಿಕೊಳ್ಳುತ್ತದೆ.
-ಪಂ. ಸುಧಾಕರ ಚತುರ್ವೇದಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ