ಆದಿ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತಿ-ನೀತಿಗಳನ್ನು ತಿಳಿಸುವ ಅಪೂರ್ವ ರಚನೆ. ಪರಮ ಸತ್ಯದ ದರ್ಶನ ಮಾಡಿಸುವ ಶ್ರೇಯಸ್ಕರ, ಸನ್ಮಾರ್ಗದ ಪಥವಿದಾಗಿದೆ.
ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ ಸ್ವನ್ಠುಯತಾಂ
ತೇನೇಶಸ್ಯ ವಿಧೀಯತಾಂ ಅಪಚಿತಿಃ ಕಾಮ್ಯೇ ಮತಿಸ್ತ್ಯಜತಾಮ್ |
ಪಾಪೌಘಃ ಪರುಧೂಯತಾಂ ಭವಸುಖೇ ದೋಷೋsನುಸಂಧೀಯತಾಂ
ಆತ್ಮೇಚ್ಛಾ ವ್ಯವಸೀಯತಾಂ ನಿಜಗೃಹಾತ್ ತೂರ್ಣಂ ವಿನಿರ್ಗಮ್ಯತಾಮ್ || ೧ ||
ಪ್ರತಿನಿತ್ಯ ವೇದಾಧ್ಯಯನ ಮಾಡು; ವೇದ ವಿಧಿತ ಕರ್ಮಗಳನ್ನು ಶ್ರದ್ಧೆಯಿಂದ ನಿರ್ವಹಿಸು; ಮಾಡುವ ಎಲ್ಲಾ ಕೆಲಸಗಳನ್ನು ಭಗವದಾರಾಧನೆಯೆಂದು ಸಮರ್ಪಿಸು; ಕಾಮ್ಯ ಕರ್ಮಗಳನ್ನು (ಮನಸ್ಸಿನ ಸ್ವಾಧೀನ ತಪ್ಪಿಸುವ ಕಾಮನೆಗಳು) ತ್ಯಜಿಸು; ಅಂತರಂಗದಲ್ಲಿ ತುಂಬಿರುವ ಪಾಪರಾಶಿಯನ್ನು ತೊಳೆದುಹಾಕು; ಇಂದ್ರಿಯ ಸುಖಭೋಗಗಳು ದೋಷಪೂರಿತವೆಂದು ಗುರುತಿಸು; ಸ್ವಸ್ವರೂಪವನ್ನು ಅರಿಯಲು ಪ್ರಯತ್ನಿಸು; ಶರೀರ ಮೋಹದ ಸಂಕೋಲೆಯಿಂದ ಬಿಡಿಸಿಕೊಂಡು ಸಾಧನಾಪಥದಲ್ಲಿ ಸಾಗು.
ಸಂಗಃಸತ್ಸು ವಿಧೀಯತಾಂ ಭಗವತೋ ಭಕ್ತಿರ್ದೃಢಾsಧೀಯತಾಂ
ಶಾಂತ್ಯಾದಿಃ ಪರಿಚೀಯತಾಂ ದೃಢತರಂ ಕರ್ಮಾಶು ಸನ್ತ್ಯಜ್ಯತಾಮ್ |
ಅದ್ವಿದ್ವಾಬುಪಸೃಪ್ಯತಾಂ ಪ್ರತಿದಿನಂ ತತ್ಪಾದುಕಾ ಸೇವ್ಯತಾಂ
ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್ || ೨ ||
ಜ್ಞಾನಿಗಳ ಸಹವಾಸದಲ್ಲಿರು; ಭಗವಂತನಲ್ಲಿ ದೃಢ ಭಕ್ತಿಯಿರಿಸು; ಪ್ರಶಾಂತತೆ ಮುಂತಾದ ಗುಣಗಳನ್ನು ಬೆಳೆಸಿಕೋ; ಸ್ವಾರ್ಥಪರ ಕಾಮಕರ್ಮಗಳಲ್ಲಿ ಆಸಕ್ತಿ ತ್ಯಜಿಸು; ಸದ್ವಿದ್ವಾಂಸರ (ಗುರುಗಳ) ಆಶ್ರಯ ಪಡೆ; ಪ್ರತಿದಿನ ಸದ್ಗುರು ಪಾದಸೇವೆ ಮಾಡು; ಬ್ರಹ್ಮನನ್ನು ಸೂಚಿಸುವ ಏಕಾಕ್ಷರ 'ಓಂ'ಕಾರ ತಿಳಿಯಲು ಪ್ರಯತ್ನಿಸು; ಉಪನಿಷದ್ ವಾಕ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳು.
ವಾಕ್ಯಾರ್ಥಶ್ಚ ವಿಚಾರ್ಯತಾಂ ಶ್ರುತಿಶಿರಃ ಪಕ್ಷಃ ಸಮಾಶ್ರೀಯತಾಂ
ದುಸ್ತರ್ಕಾತ್ ಸುವಿರಮ್ಯತಾಂ ಶ್ರುತಿಮತಸ್ತರ್ಕೋsನುಸಂಧೀಯತಾಮ್ |
ಬ್ರಹ್ಮಾಸ್ಮೀತಿ ವಿಭಾವ್ಯತಾಂ ಅಹರಹರ್ಗರ್ವಃ ಪರಿತ್ಯಜ್ಯತಾಂ
ದೇಹೇsಹಂ ಮತಿರುಝ್ಯುತಾಂ ಬುಧಜನೈರ್ವಾದಃ ಪರಿತ್ಯಜ್ಯತಾಮ್ || ೩ ||
ಉಪನಿಷತ್ತಿನ ವಾಕ್ಯಗಳ ಅರ್ಥ ಕುರಿತು ಚಿಂತಿಸು; ಉಪನಿಷತ್ತಿನ ನಿಜಜ್ಞಾನವನ್ನು ಆಶ್ರಯಿಸು; ವಿತಂಡವಾದದಿಂದ ದೂರವಿರು; ಉಪನಿಷತ್ತಿಗೆ ಪೂರಕವಾದ ತರ್ಕದೊಂದಿಗೆ ಇರು; ಬ್ರಹ್ಮಾನುಭವದಲ್ಲಿ ಒಂದಾಗು; ಎಂದಿಗೂ ಗರ್ವಪಡದಿರು; ಶರೀರದೊಂದಿಗೆ ನಿನ್ನನ್ನು ಪರಿಭಾವಿಸಿಕೊಳ್ಳದಿರು ; ವಿದ್ವಾಂಸರೊಡನೆ ವಾದ ಮಾಡುವ ಪ್ರವೃತ್ತಿ ತೊರೆದುಬಿಡು.
ಕ್ಷುದ್ ವ್ಯಾಧಿಶ್ಚ ಚಿಕಿತ್ಸ್ಯತಾಂ ಪ್ರತಿದಿನಂ ಭಿಕ್ಷೌಷಧಂ ಭುಜ್ಯತಾಂ
ಸ್ವಾದ್ಯನ್ನಂ ನ ತು ಯಾಚ್ಯತಾಂ ವಿಧಿವಶಾತ್ ಪ್ರಾಪ್ತೇನ ಸಂತುಷ್ಟತಾಮ್ |
ಶೀತೋಷ್ಣಾದಿ ವಿಷಹ್ಯತಾಂ ನ ತು ವೃಥಾ ವಾಕ್ಯಂ ಸಮುಚ್ಚಾರ್ಯತಾಂ
ಔದಾಸೀನ್ಯಮಭೀಷ್ಟತಾಂ ಜನಕೃಪಾನೈಷ್ಠುರ್ಯಮುತ್ ಸೃಜ್ಯತಾಮ್ || ೪ ||
ಹಸಿವಿದ್ದರೆ, ಅಸ್ವಸ್ಥತೆಯಿದ್ದರೆ ಪರಿಹರಿಸಿಕೋ; ಪ್ರತಿದಿನ ಭಿಕ್ಷೆಯನ್ನು (ಆಹಾರ) ಔಷಧಿಯಂತೆ ಸೇವಿಸು; ರುಚಿಕರವಾದ ಆಹಾರಕ್ಕೆ ಹಂಬಲಿಸದಿರು; ತಾನಾಗಿ ಒದಗಿ ಬಂದುದರಲ್ಲಿ ತೃಪ್ತಿಪಡು; ಶೀತ-ಉಷ್ಣ ಮುಂತಾದುವುಗಳನ್ನು ಸಹಿಸು; ಅನುಚಿತ ಮಾತುಗಳನ್ನು ಆಡದಿರು; ನಿರ್ಲಿಪ್ತಭಾವವನ್ನು ಹೊಂದು; ಜನರ ಕೃಪೆ ಮತ್ತು ನಿಷ್ಠುರಗಳನ್ನು ಗಮನಿಸದಿರು.
ಏಕಾಂತೇ ಸುಖಮಾಸ್ಯತಾಂ ಪರತರೇ ಚೇತಃ ಸಮಾಧೀಯತಾಂ
ಪೂರ್ಣಾತ್ಮಾ ಸುಸಮೀಕ್ಷತಾಂ ಜಗದಿದಂ ತದ್ಭಾದಿತಂ ದೃಶ್ಯತಾಮ್ |
ಪ್ರಾಕ್ಕರ್ಮ ಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ಯುತ್ತರೈಃ ಶ್ಲಿಷ್ಯತಾಂ
ಪ್ರಾರಬ್ಧಂ ತ್ವಿಹ ಭುಜ್ಯತಾಂ ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್ || ೫ ||
ಏಕಾಂತದಲ್ಲಿ ಸುಖವನ್ನು ಅರಸು; ಪರಮಾತ್ಮನಲ್ಲಿ ಚಿತ್ತವನ್ನು ಲೀನಗೊಳಿಸು (ಸಮಾಧಿ); ಸರ್ವವ್ಯಾಪಿ ಪೂರ್ಣಾತ್ಮನನ್ನು ಎಲ್ಲೆಡೆಯಲ್ಲೂ 'ದರ್ಶಿಸು'; ಕಾಣುವ ದೃಶ್ಯಗಳು, ಅನುಭವಗಳು ಮನಸ್ಸಿನ ಭ್ರಮೆಯೆಂಬುದನ್ನು ಮನಗಾಣು; ಹಿಂದಿನ ಕರ್ಮಗಳ ಫಲವನ್ನು ಅನುಭವಿಸು; ಮುಂದೊದಗಬಹುದಾದ ಫಲಗಳಿಂದ ಧೃತಿಗೆಡದಿರು; ಪ್ರಾರಬ್ಧದ ಕರ್ಮಫಲಗಳನ್ನು ಅನುಭವಿಸಿ ಕಳೆದುಕೋ; ಬ್ರಹ್ಮಾನುಭವದಲ್ಲಿ ಸ್ಥಿತನಾಗಿರು.
-ಕ.ವೆಂ.ನಾಗರಾಜ್.
ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಸುಧರ್ಮಚೈತನ್ಯರು ಮಾಡಿರುವ ಸಾಧನಾ ಪಂಚಕಮ್ ಉಪನ್ಯಾಸ ಕೇಳಲು ಕೊಂಡಿ ಇಲ್ಲಿದೆ.
ಪ್ರತ್ಯುತ್ತರಅಳಿಸಿhttp://blog.vedasudhe.com/2011/07/1.html
ಸಾಧಕರಿಗೆ ದಾರಿದೀಪ ಈ ಸಾಧನಾಪಂಚಕ! ಧನ್ಯವಾದ, ಶ್ರೀಧರ್.
ಪ್ರತ್ಯುತ್ತರಅಳಿಸಿ