ಚತುರ್ವೇದಗಳ ಪರಿಪೂರ್ಣ ಜ್ಞಾನವಿಲ್ಲದ ವಿದ್ವಾಂಸರು - ಪ್ರಾಚೀನ ಕಾಲದ ಆರ್ಯರಿಗೆ ರಾಷ್ಟ್ರದ ಕಲ್ಪನೆಯಿರಲಿಲ್ಲ - ಎಂದು ಮುಂತಾಗಿ ಹೇಳುವುದುಂಟು. ಆದರೆ, ಸಂಪೂರ್ಣ ವೇದಗಳನ್ನು ಬಲ್ಲವರಿಗೆ ವೇದಗಳಲ್ಲಿ ಸಮಸ್ತ ವಿದ್ಯೆಗಳೂ ಇವೆ, ಮಾನವನ ಸಾಮೂಹಿಕ ಜೀವನಕ್ಕೆ ಪ್ರಬಲ ಆಧಾರವಾದ ರಾಜನೀತಿಯೂ ತುಂಬಿದೆ - ಎಂಬ ತಥ್ಯ ಚೆನ್ನಾಗಿ ಗೊತ್ತು. ಇಂದಿನ ಕಲ್ಪನೆಯ ಸಾಮ್ರಾಜ್ಯವಾದ, ಬಂಡವಾಳಶಾಹಿವಾದ, ಸಾಮ್ಯವಾದ, ಸಮಾಜವಾದ, ಅಧಿನಾಯಕವಾದ ಮೊದಲಾದ ಆಧುನಿಕ ವಾದಗಳನ್ನು ವೇದಗಳಲ್ಲಿ ಹುಡುಕುವುದು ತಪ್ಪಾದೀತು. ಆಧುನಿಕ ವಾದಗಳಲ್ಲಿ ಯಾವುದಾದರೂ, ವೈದಿಕ ರಾಜನೀತಿಗೆ ಹತ್ತಿರವಿದ್ದಲ್ಲಿ ಅದು ಪ್ರಜಾತಂತ್ರವೇ ಎಂದು ನಿಸ್ಸಂದೇಹವಾಗಿ ಹೇಳಬಹುದು. ಅಥರ್ವವೇದದ ಈ ಮಂತ್ರವನ್ನು ಓದಿರಿ:-
ತ್ವಾಂ ವಿಶೋ ವೃಣತಾಂ ರಾಜ್ಯಾಯ ತ್ವಾಮಿಮಾಃ ಪ್ರದಿಶಃ ಪಂಚ ದೇವೀಃ |
ವರ್ಷನ್ರಾಷ್ಟ್ರಸ್ಯ ಕಕುದಿ ಶ್ರಯಸ್ಯ ತತೋ ನ ಉಗ್ರೋ ವಿ ಭಜಾ ವಸೂನಿ || (ಅಥರ್ವ.೩.೪.೨.)
[ವರ್ಷನ್] ಓ ಸರ್ವಸುಖದಾಯಕನಾದ ಶಾಸಕನೇ! [ವಿಶಃ] ಪ್ರಜೆಗಳು, [ರಾಜ್ಯಾಯ] ರಾಜಕಾರ್ಯಕ್ಕಾಗಿ, [ತ್ವಾ ವೃಣತಾಮ್] ನಿನ್ನನ್ನು ಆರಿಸಲಿ. [ಇಮಾಃ ಪಂಚದೇವೀಃ ಪ್ರದಿಶಃ] ಈ ಸಂಸತ್ತಿನ ಐದು ದಿಕ್ಕಿನಲ್ಲಿಯೂ ಮಂಡಿಸಿರುವ, ಜ್ಞಾನತೇಜಸ್ಸಿನಿಂದ ಬೆಳಗುವ ಸದಸ್ಯರು, [ತ್ವಾ] ನಿನ್ನನ್ನು ಆರಿಸಲಿ. [ರಾಷ್ಟ್ರಸ್ಯ ಕಕುದಿ] ರಾಷ್ಟ್ರದ ಉನ್ನತಸ್ಥಾನದಲ್ಲಿ, [ಶ್ರಯಸ್ವ] ವಿರಾಜಿಸು. [ತತಃ] ಅಧಿಕಾರ ಗ್ರಹಣಾನಂತರ, [ಉಗ್ರಃ] ಶಕ್ತಿಸಂಪನ್ನನಾಗಿ, [ನಃ] ಪ್ರಜೆಗಳಾದ ನಮಗೆ, [ವಸೂನಿ ವಿ ಭಜ] ಐಶ್ವರ್ಯವನ್ನು, ಆಜೀವಿಕಾ ಸಾಧನಗಳನ್ನು ಹಂಚಿಕೊಡು.
ಈ ಮಂತ್ರದಲ್ಲಿ ಬಂದಿರುವ 'ವೃಣತಾಮ್' ಎಂಬ, ಆರಿಸಲಿ ಎಂಬರ್ಥದ ಶಬ್ದವನ್ನು ಪಾಠಕರು ಗ್ರಹಿಸಬೇಕು. ರಾಷ್ಟ್ರದ ಸರ್ವೋಚ್ಚ ಸ್ಥಾನದಲ್ಲಿ ಕುಳಿತುಕೊಳ್ಳುವ ಶಾಸಕನನ್ನು ಪ್ರಜೆಗಳೇ ಆರಿಸಬೇಕು. ಇದರ ಹಿಂದಿನ ಮಂತ್ರದಲ್ಲೂ, ಸರ್ವಸ್ತ್ವಾ ರಾಜನ್ ಪ್ರದಿಶೋ ಹ್ವಯಂತು || (ಅಥರ್ವ.೩.೪.೧.) - ಓ ಪ್ರಕಾಶಮಯ ಶಾಸಕ! ನಿನ್ನನ್ನು ಐದು ದಿಕ್ಕುಗಳಲ್ಲಿನ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಮಧ್ಯಭಾಗದ ಜನರೂ ಅಧಿಕಾರಕ್ಕಾಗಿ ಕರೆಯಲಿ - ಎಂಬ ಆದೇಶವನ್ನೇ ಕಾಣುತ್ತೇವೆ. ಯಜುರ್ವೇದದಲ್ಲಿಯೂ ಪ್ರಜಾತಂತ್ರದ ಸ್ಪಷ್ಟ ಉಲ್ಲೇಖ ಕಂಡುಬರುತ್ತದೆ. ನೋಡಿರಿ:-
ಇಮಂ ದೇವಾ ಅಸಪತ್ನಂ ಸುವಧ್ವಂ ಮಹತೇ ಕ್ಷತಾಯ ಮಹತೇ ಜಾನರಾಜ್ಯಾಯೇಂದ್ರಸ್ಯೇಂದ್ರಿಯಾಯ| ಇಮಮಮುಷ್ಯ ಪುತ್ರಮಮುಷ್ಯೈ ಪುತ್ರಮಸ್ಯೈ ವಿಶ ಏಷ ವೋsರಾಜಾ ಸೋಮೋಸ್ಮಾಕಂ ಬ್ರಾಹ್ಮಣಾನಾಂ ರಾಜಾ || (ಯಜು.೯.೪೦.)
[ದೇವಾಃ] ನಿತ್ಯ ಜಾಗರೂಕರಾದ, ಸತ್ಯಾಚಾರ-ವಿಚಾರವಂತರಾದ, ಉದಾರಾತ್ಮರಾದ ವಿದ್ವಾಂಸರೇ! [ಅಸಪತ್ನಂ ಇಮಮ್] ಶತ್ರುರಹಿತನಾದ ಇವನನ್ನು, [ಅಮುಷ್ಯಪುತ್ರಮ್] ಇಂತಹವನ ಮಗನಾದ, [ಅಮುಷ್ಯೈ ಪುತ್ರಮ್] ಇಂತಹವಳ ಮಗನಾದ, [ಇಮಮ್] ಇವನನ್ನು [ಅಸ್ಮೇ ವಿಶೇ] ಈ ಪ್ರಜಾವೃಂದಕ್ಕಾಗಿ, [ಮಹತಾ ಕ್ಷತ್ರಾಯ] ಮಹಚ್ಛಕ್ತಿಗಾಗಿ, [ಮಹತೇ ಜಾನಜ್ಯೈಷ್ಠಾಯ] ಮಹಾನ್ ಔನ್ನತ್ಯಕ್ಕಾಗಿ, [ಮಹತೇ ಜಾನರಾಜ್ಯಾಯ] ಮಹಾನ್ ಜನತಂತ್ರಕ್ಕಾಗಿ, [ಇಂದ್ರಸ್ಯ ಇಂದ್ರಿಯಾಯ] ಪರಮೈಶ್ವರ್ಯವಾನ್ ಪ್ರಭುವಿನ ಆನಂದದ ಪ್ರಾಪ್ತಿಗಾಗಿ, [ಸುವದ್ವಮ್] ಅಭಿಕ್ತನನ್ನಾಗಿ ಮಾಡಿರಿ. [ಏಷಃ ಸೋಮಃ] ಈ ಪ್ರಜಾವತ್ಸಲನಾದ, ಪ್ರಶಾಂತ ಪುರುಷನು, [ವಃ ರಾಜಾ] ನಿಮ್ಮ ರಾಜನು. [ಅಸ್ಮಾಕಂ ಬ್ರಾಹ್ಮಣಾನಾಂ ರಾಜಾ] ಬ್ರಹ್ಮಜ್ಞರಾದ ನಮ್ಮ ರಾಜನು.
ಮಂತ್ರವನ್ನು ಗಮನವಿಟ್ಟು ಓದಿದರೆ, ಆಚಾರ್ಯ ಪುರುಷರು, ಪ್ರಜೆಗಳಿಂದ ಸಂಸತ್ತಿಗಾಗಿ ಆರಿಸಲ್ಪಟ್ಟ ವಿದ್ವಾಂಸರನ್ನು ಸಂಬೋಧಿಸಿ, ಸರ್ವೋಚ್ಚ ಶಾಸಕನನ್ನು ಆರಿಸಿ, ಅವನಿಗೆ ಅಭಿಷೇಕ ಮಾಡಬೇಕೆಂದು ಆದೇಶ ನೀಡುತ್ತಿರುವುದು ಗೊತ್ತಾಗುತ್ತದೆ. ಆ ಸರ್ವೋಚ್ಚ ಶಾಸಕನು ಶತ್ರುರಹಿತನಾಗಿರಬೇಕು. ಬೃಹತ್ತಾದ ಕ್ಷಾತ್ರ ಶಕ್ತಿಯನ್ನೂ, ಮಹಾನ್ ಜ್ಯೇಷ್ಠತ್ವವನ್ನೂ, ಪ್ರಜಾಸತ್ತೆಯನ್ನೂ, ಕೊನೆಗೆ ಜನಮನದ ಮನದಲ್ಲಿಯೂ ಮಿತ್ರಭಾವನೆಗಳನ್ನೂ ಜಾಗರಿಸಿ, ಅವರಿಗೆ ಭಗವದಾನಂದವನ್ನೂ ಒದಗಿಸಲು ಸಮರ್ಥನಾಗಿರಬೇಕು. ಅವನು 'ಸೋಮ' ಎಂದರೆ, ಜನರೆಲ್ಲರ ಸಾರರೂಪನಾಗಿರಬೇಕು. ಇಂತಹ ಸರ್ವೋನ್ನತ ಶಾಸಕನನ್ನು ಆರಿಸುವವರು, ಪ್ರಜೆಗಳಿಂದ ಆರಿಸಲ್ಪಟ್ಟ ಸಂಸತ್ತಿನ ಸದಸ್ಯರು.
-ಪಂ. ಸುಧಾಕರ ಚತುರ್ವೇದಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ