ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಏಪ್ರಿಲ್ 29, 2013

ವೇದೋಕ್ತ ಜೀವನ ಪಥ: ಷೋಡಶ ಸಂಸ್ಕಾರಗಳು - ೪



    ಹದಿನಾಲ್ಕನೆಯ ಸಂಸ್ಕಾರ ವಾನಪ್ರಸ್ಥ.  ಚತುರಾಶ್ರಮಗಳ ಅಧ್ಯಾಯದಲ್ಲಿ ಹೇಳಿರುವಂತೆ ೨೫ ವರ್ಷಗಳ ಗೃಹಸ್ಥಜೀವನದ ನಂತರ, ಪುರುಷನು ವಾನಪ್ರಸ್ಥಾಶ್ರಮವನ್ನು ಸ್ವೀಕರಿಸುವಾಗ ಮಾಡುವ ಸಂಸ್ಕಾರವಿದು. ಬೃಹತ್ ಹವನವನ್ನು ಮಾಡಿ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿ, ಹಿರಿಯರ ಆಶೀರ್ವಾದ ಪಡೆದು, ಪತ್ನಿಯೊಂದಿಗೆ ಅಥವಾ ಒಬ್ಬನೇ ತನ್ನ ನೂತನ ಸ್ಥಾನಕ್ಕೆ ತೆರಳುತ್ತಾನೆ. 
     ಹದಿನೈದನೆಯ ಸಂಸ್ಕಾರ ಸಂನ್ಯಾಸ. ವಾನಪ್ರಸ್ಥವನ್ನು ಮುಗಿಸಿ ಸಂನ್ಯಾಸವನ್ನು ತೆಗೆದುಕೊಳ್ಳುವಾಗ ಮಾಡುವ ಸಂಸ್ಕಾರವಿದು. ಬೇರೊಬ್ಬ ವಿದ್ವಾನ್ ಸಂನ್ಯಾಸಿಯು ವಾನಪ್ರಸ್ಥಿಗೆ ಸಂನ್ಯಾಸದೀಕ್ಷೆ ಕೊಡುತ್ತಾನೆ. 'ನಾನು ಮಕ್ಕಳ ಮೇಲಿನ ಅಸೆಯನ್ನೂ, ಹಣದ ಆಸೆಯನ್ನೂ ಬಿಟ್ಟೆ. ಲೋಕದಲ್ಲಿ ಯಶಸ್ಸಿನ ಆಸೆಯನ್ನೂ ಬಿಟ್ಟೆ. ನನ್ನಿಂದ ಎಲ್ಲ ಪ್ರಾಣಿಗಳಿಗೂ ಅಭಯವಿರಲಿ' -  ಎಂದು ಘೋಷಿಸಿ, ಜಲದಲ್ಲಿ ನಿಂತು ಯಜ್ಞೋಪವೀತವನ್ನೂ, ಶಿಖೆಯನ್ನೂ ವಿಸರ್ಜಿಸುತ್ತಾನೆ. ಸ್ನಾನ ಮಾಡಿ, ಕಾಷಾಯಾಂಬರ ಧರಿಸಿ, ಪರಿವ್ರಾಜಕನಾಗಿ ಹೊರಟುಬಿಡುತ್ತಾನೆ. ಸರ್ವಬಂಧನಮುಕ್ತನಾಗಿ ಲೋಕಕ್ಕೆ ಆಧ್ಯಾತ್ಮ ಜ್ಞಾನದಾನ ಮಾಡುತ್ತಾ ತಿರುಗಾಡುತ್ತಾನೆ.
     ಕೊನೆಯದಾಗಿ ಅಂತ್ಯೇಷ್ಟಿ. ಮಾನವನು ಮೃತನಾದ ಮೇಲೆ, ಅವನ ಶವವನ್ನು ಆದಷ್ಟು ಬೇಗ ಪಂಚಭೂತಗಳಲ್ಲಿ ಲೀನ ಮಾಡಬೇಕು. ವೇದವು, ಭಸ್ಮಾಂತಂ ಶರೀರಮ್ || (ಯಜು.೪೦.೧೫.) - ಶರೀರ ಕೊನೆಯಾಗುವುದು ಬೂದಿಯಲ್ಲಿ - ಎನ್ನುತ್ತದೆ. ದಹನವೇ ವೈಜ್ಞಾನಿಕ ಕ್ರಮ. ಸರಿಯಾದ ಪ್ರಮಾಣದಲ್ಲಿ ತುಪ್ಪ-ಸಾಮಗ್ರಿಗಳನ್ನುಪಯೋಗಿಸಿದರೆ, ದುರ್ಗಂಧವೂ ಬರುವುದಿಲ್ಲ. ಅರ್ಥಗರ್ಭಿತ ವೇದಮಂತ್ರಗಳನ್ನುಚ್ಛರಿಸುತ್ತಾ ಚಿತಾಗ್ನಿಯಲ್ಲಿ ಆಹುತಿಗಳನ್ನು ಕೊಡಲಾಗುತ್ತದೆ. ಶವವೇನೋ ಮಂತ್ರಪಾಠದಿಂದ ಲಾಭ ಪಡೆಯಲಾರದು. ಆದರೆ, ಸ್ಮಶಾನದಲ್ಲಿ ಸೇರಿದ ಜನರ ಮನಸ್ಸಿನ ಮೇಲೆ ಜಗತ್ತಿನ ನಶ್ವರತೆಯ ರೂಪ ಚಿತ್ರಿತವಾಗಿ, ಆಧ್ಯಾತ್ಮಿಕ ಭಾವನೆಗಳು ಉದ್ಭವಿಸುತ್ತವೆ. ಉದಾಹರಣೆಗೆ ಇದೊಂದು ಮಂತ್ರವನ್ನು ನೋಡಬಹುದು.
ಸಂ ಗಚ್ಛಸ್ವ ಪಿತೃಭಿಃ ಸಂ ಯಮನೇಷ್ಟಾಪೂರ್ತೇನ ಪರಮೇ ವ್ಯೋಮನ್ |
ಹಿತ್ವಾಯಾವದ್ಯಂ ಪುನರಸ್ತಮೇಹಿ ಸಂ ಗಚ್ಛಸ್ವ ತನ್ವಾ ಸುವರ್ಚಾ || (ಋಕ್.೧೦.೧೪.೮.)
     ಓ ಜೀವ! [ಪಿತೃಭಿಃ ಸಮ್] ನಿನ್ನನ್ನು ಪಾಲಿಸುವವರೊಂದಿಗೆ, [ಯಮೇನ ಸಮ್] ಅಹಿಂಸಾ, ಸತ್ಯಾದಿ ವ್ರತಗಳೊಂದಿಗೆ, [ಇಷ್ಟಾಪೂರ್ತೇನ] ಪ್ರಾಪ್ತ ಮತ್ತು ಪ್ರಾಪ್ಯ ಅಭಿಲಾಷೆಗಳೊಂದಿಗೆ, [ಪರಮೇ ವ್ಯೋಮನ್] ಪರಮರಕ್ಷಕನಾದ ಪ್ರಭುವಿನಲ್ಲಿ, [ಗಚ್ಛಸ್ವ] ಆಶ್ರಯ ಪಡೆದುಕೋ. [ಅವದ್ಯಂ ಹಿತ್ವಾಯ] ಕೆಟ್ಟದ್ದನ್ನು ಬಿಟ್ಟು, [ಪುನಃ ಅಸ್ತಮೇಹಿ] ಮತ್ತೆ ಮನೆಗೆ ಹೋಗು. [ಸುವರ್ಚಾಃ] ಸುವರ್ಚಸ್ವಿಯಾಗಿ, [ತನ್ವಾ ಸಂ ಗಚ್ಛಸ್ವ] ಶರೀರದೊಂದಿಗೆ ಮುಂದೆ ಸಾಗು, ಪ್ರಭುವಿಗೆ ಶರಣಾಗು, ಕೆಟ್ಟದ್ದನ್ನು ಬಿಡು. ನಶ್ವರ ಜಗತ್ತನ್ನು ನಂಬಿ ನೀನೇನು ಪಡೆದುಕೊಳ್ಳಬೇಕಾಗಿದೆ?
     ಮೂರನೆಯ ದಿನ ಯಾರಾದರೂ ಅಸ್ಥಿಸಂಚಯ ಮಾಡಿ, ಎಲ್ಲಿಯಾದರೂ ಹೂತು ಬರಬೇಕು. ಅಲ್ಲಿಗೆ ಅಂತ್ಯೇಷ್ಟಿ ಕರ್ಮ ಮುಗಿಯಿತು. ಮೃತನಿಗೆ ಶ್ರಾದ್ಧಾದಿಗಳನ್ನು ಮಾಡುವುದು ಅವೈದಿಕವೆಂದು ಹಿಂದೆಯೇ ಹೇಳಿದ್ದೇವೆ.
     ಈ ಹದಿನಾರು ವೈದಿಕ ಸಂಸ್ಕಾರಗಳೂ ಮಾನವನ ಮನಸ್ಸಿನ ಮೇಲೆ ಅದ್ಭುತ ಪ್ರಭಾವವನ್ನು ಬೀರುತ್ತವೆ.
-ಪಂ. ಸುಧಾಕರ ಚತುರ್ವೇದಿ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ