ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಏಪ್ರಿಲ್ 1, 2013

ವೇದೋಕ್ತ ಜೀವನ ಪಥ: ಷೋಡಶ ಸಂಸ್ಕಾರಗಳು - ೨


     ಎಂಟನೆಯದು  ಚೂಡಾಕರ್ಮ. ಹುಟ್ಟಿನಿಂದ ಬಂದ ತಲೆಕೂದಲು ಆರೋಗ್ಯಕರವಲ್ಲ. ಅದನ್ನು ತೆಗೆದುಬಿಟ್ಟರೆ, ಮಗು ನಾನಾ ರೋಗಗಳ ಆಕ್ರಮಣಕ್ಕೆ ಗುರಿಯಾಗುವುದು ತಪ್ಪುತ್ತದೆ. ಮತ್ತೆ ಬೆಳೆಯುವ ಕೂದಲು ಪುಷ್ಕಳವಾಗಿಯೂ ಸುಂದರವಾಗಿಯೂ ಇರುತ್ತದೆ. ಈ ಸಂಸ್ಕಾರದಲ್ಲಿಯೂ ವಿಶೇಷ ಹೋಮ ಮಾಡಿ, 'ಮಗು ದೀರ್ಘಾಯುವೂ, ಕೀರ್ತಿಶಾಲಿಯೂ ಆಗಲಿ' -  ಎಂಬ ಪ್ರಾರ್ಥನೆ ಸಲ್ಲಿಸಲ್ಪಡುತ್ತದೆ.
     ಒಂಬತ್ತನೆಯ ಸಂಸ್ಕಾರ ಕರ್ಣವೇಧ. ಮಗುವಿನ ಕಿವಿಗಳನ್ನು ಯುಕ್ತವಾದ ಸ್ಥಳದಲ್ಲಿ ಚುಚ್ಚಲಾಗುತ್ತದೆ. ಇದರಿಂದ ಅಂತ್ರವೃದ್ಧಿರೋಗವು ಬರುವ ಅವಕಾಶ ತಪ್ಪುತ್ತದೆ. ಒಡವೆ ಹಾಕುವುದರಿಂದ ಮಗುವಿನ ಸೌಂದರ್ಯವೂ ಹೆಚ್ಚುತ್ತದೆ. ಈ ಸಂಸ್ಕಾರದಲ್ಲಿಯೂ ಹೋಮ ಮಾಡಿ 'ಶಿಶುವಿನ ಕಿವಿಗಳ ಮೇಲೆ ಒಳ್ಳೆಯ ಮಾತುಗಳೇ ಬೀಳಲಿ' - ಎಂದು ಪ್ರಾರ್ಥಿಸಿಕೊಳ್ಳಲಾಗುತ್ತದೆ. 
     ಹತ್ತನೆಯ ಸಂಸ್ಕಾರ ಮಾನವ ಜೀವನದಲ್ಲಿ ಒಂದು ಹೊಸ ಘಟ್ಟವನ್ನು ಪ್ರಾರಂಭಿಸುತ್ತದೆ. ಅದನ್ನು ಉಪನಯನ ಸಂಸ್ಕಾರ ಎನ್ನುವುದೂ ಉಂಟು. ಆಚಾರ್ಯನು ಗರ್ಭಾಷ್ಟಮ ಅಂದರೆ, ಎಂಟು ವರ್ಷದ ಬಾಲಕ ಅಥವಾ ಬಾಲಿಕೆಗೆ, ಮಂತ್ರಪೂರ್ವಕವಾಗಿ ಮೂರೆಳೆಯ ಯಜ್ಞೋಪವೀತವನ್ನು ಧಾರಣೆ ಮಾಡಿಸುತ್ತಾನೆ. ಆ ಮಂತ್ರದಲ್ಲಿ, 'ಯಜ್ಞೋಪವೀತ, ಸತ್ಕರ್ಮಗಳೊಂದಿಗೇ ಉದ್ಣವಿಸುವಂತಹದು. ಮೂರು ಎಳೆಗಳು ಮನಃಶುದ್ಧಿ, ವಚಃಶುದ್ಧಿ, ಕಾಯಶುದ್ಧಿ - ಈ ಮೂರು ಪವಿತ್ರತೆಗಳನ್ನು ಸೂಚಿಸುತ್ತವೆ. ಶುಭ್ರವೂ, ಗತಿಶೀಲವೂ ಆದ ಜೀವನ ನಡೆಸು' - ಎಂದು ಹೇಳುತ್ತದೆ. ಸಂಸ್ಕಾರದೊಂದಿಗೇ ಬಾಲಕ-ಬಾಲಿಕೆಯರ ಧಾರ್ಮಿಕ ಜೀವನ ಪ್ರಾರಂಭವಾಗುತ್ತದೆ. ವಿಶೇಷ ಹವನ ಮಾಡಿ, ಬಾಲಕ-ಬಾಲಿಕೆ, "ಅನೃತಾತ್ ಸತ್ಯಮುಪೈ"|| (ಯಜು.೧.೫.) -  ಅಸತ್ಯದಿಂದ ಸರಿದು ಸತ್ಯದ ಕಡೆಗೆ ಅಡಿಯಿಡುತ್ತೇನೆ -  ಎಂಬ ಮಹಾವ್ರತವನ್ನು ಸ್ವೀಕರಿಸುತ್ತಾರೆ. 'ಉಪನಯನ' ಎಂದರೆ, ಹತ್ತಿರ ಕರೆದುಕೊಳ್ಳುವುದು ಎಂದರ್ಥ. ಆಚಾರ್ಯ, ಈ ಸಂಸ್ಕಾರ ನೀಡಿ, ಬಾಲಕ-ಬಾಲಿಕೆಯರನ್ನು ಶಿಕ್ಷಣಕ್ಕಾಗಿ ತನ್ನ ಬಳಿ ಕರೆದುಕೊಳ್ಳುತ್ತಾನೆ.
     ಇದಾದ ಕೂಡಲೇ ಹನ್ನೊಂದನೆಯ ಸಂಸ್ಕಾರ ವೇದಾರಂಭ ಮಾಡಲ್ಪಡುತ್ತದೆ. ಇದು ಅದ್ಯಯನದ ಉದ್ಘಾಟನಾ ಸಮಾರಂಭ ಎನ್ನಬಹುದು. ಈ ಸಂಸ್ಕಾರದಲ್ಲಿಯೇ ಆಚಾರ್ಯನು ಶಿಷ್ಯ-ಶಿಷ್ಯೆಯರಿಗೆ, ಜಗತ್ತಿನ ಪ್ರಾರ್ಥನೆಗಳಲ್ಲೆಲ್ಲಾ ಅತ್ಯಂತ ಉತ್ಕೃಷ್ಟವಾದ, ಸರ್ವಥಾ ಅನುಪಮವಾದ, ಸಾರ್ವಭೌಮ ಹಾಗೂ ಸಾರ್ವಕಾಲಿಕವಾದ, ಅದ್ಭುತ ಗಾಯತ್ರೀ ಮಂತ್ರವನ್ನು ಉಪದೇಶಿಸುತ್ತಾನೆ. ವೈದಿಕ ದರ್ಮದ ಸೌಂದರ್ಯವಾದ ಗಾಯತ್ರೀ ಮಂತ್ರವಿದು:
ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | 
ಧಿಯೋ ಯೋ ನಃ ಪ್ರಚೋದಯಾತ್ || (ಯಜು. ೩೬.೩.)
     ಪರಮಾತ್ಮನು, [ಓಮ್] ಸರ್ವರಕ್ಷಕನು, [ಭೂಃ] ಪ್ರಾಣಸ್ವರೂಪನು, [ಭುವಃ] ದುಃಖ ನಿವಾರಕನು, [ಸ್ವಃ] ಆನಂದಸ್ವರೂಪನು. [ಸವಿತುಃ ದೇವಸ್ಯ] ಸರ್ವ ಜಗದುತ್ಪಾದಕನೂ, ಪ್ರೇರಕನೂ ಆದ ಆ ಸರ್ವದಾತೃ ಜ್ಯೋತಿರ್ಮಯನ, [ತತ್ ವರೇಣ್ಯಂ ಭರ್ಗಃ] ಆ ಸ್ವೀಕರಿಸಲರ್ಹವಾದ ಪಾಪದಾಹಕ ಜ್ಯೋತಿಯನ್ನು, [ಧೀಮಹಿ] ಧ್ಯಾನಿಸೋಣ, ಧರಿಸೋಣ. [ಯಃ] ಯಾವ ಆ ಪ್ರಭುವು, [ನಃ ಧಿಯಃ] ನಮ್ಮ ಬುದ್ಧಿಯನ್ನು ಉತ್ತಮ ಕರ್ಮಗಳತ್ತ, [ಪ್ರಚೋದಯಾತ್] ಪ್ರೇರೇಪಿಸಲಿ.
     ಈ ವಿಚಿತ್ರ ಪ್ರಾರ್ಥನೆ ಕ್ರಿಯಾರೂಪಕ್ಕಿಳಿದು ಬಂದಲ್ಲಿ, ಬುದ್ಧಿ ಶುದ್ಧಿ ಸಿದ್ಧಿಸಿದಲ್ಲಿ ನಮಗೆ ಸಿಕ್ಕದಿರುವ ವಸ್ತುವಾದರೂ ಯಾವುದು ಉಳಿದೀತು?
     ಈ ಸಂಸ್ಕಾರವಾದ ಮೇಲೆ ಬಾಲಕ-ಬಾಲಿಕೆಯರು ವಿದ್ಯಾಭ್ಯಾಸವನ್ನಾರಂಭಿಸಿ ಬ್ರಹ್ಮಚರ್ಯಪೂರ್ವಕವಾಗಿ ಸಾಧನಾಮಯವಾದ ಜೀವನವನ್ನು ನಿರ್ವಹಿಸುತ್ತಾ ಸಮಸ್ತ ವಿದ್ಯೆಗಳನ್ನು ಕಲಿಯುತ್ತಾರೆ. 
     ವಿದ್ಯಾಭ್ಯಾಸ ಪೂರ್ಣವಾದ ಮೇಲೆ, ಹನ್ನೆರಡನೆಯದಾದ ಸಮಾವರ್ತನ ಸಂಸ್ಕಾರ ನಡೆಯುತ್ತದೆ. ವಿಶಿಷ್ಟ ಹೋಮಾನಂತರ ಯುವಕ-ಯುವತಿಯರು ಎಂಟು ಕುಂಭಗಳಲ್ಲಿಟ್ಟ ನೀರಿನಿಂದ ಸ್ನಾನ ಮಾಡುತ್ತಾರೆ. ಎಂಟು ದಿಕ್ಕಿನಲ್ಲಿ ಎಲ್ಲೇ ಹೋದರೂ, ಜಲದ ಶಾಂತಿಯನ್ನೂ, ಪವಿತ್ರತೆಯನ್ನೂ ಪ್ರಸರಿಸುತ್ತೇವೆ ಎಂಬ ಸಂಕಲ್ಪವೇ ಈ ಸಂಸ್ಕಾರದ ರಹಸ್ಯ. ಈ ಸ್ನಾನವಾದ ಮೇಲೆ ಅವರು 'ಸ್ನಾತಕ'ರು ಅಥವಾ 'ಸ್ನಾತಿಕೆ'ಯರು ಎನ್ನಿಸಿಕೊಳ್ಳುತ್ತಾರೆ. ಇಲ್ಲಿಗೆ ಬ್ರಹ್ಮಚರ್ಯಾಶ್ರಮ ಸಮಾಪ್ತವಾಗುತ್ತದೆ. 
-ಪಂ. ಸುಧಾಕರ ಚತುರ್ವೇದಿ.
*******************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ