ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಮೇ 1, 2012

ಸಾರಗ್ರಾಹಿಯ ರಸೋದ್ಗಾರಗಳು - 8



    ಪಂ. ಸುಧಾಕರ  ಚತುರ್ವೇದಿಯವರು  ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯವರು. 116 ವರ್ಷಗಳ  ಈ ಸತ್ಯವಾದಿಯ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿ, ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************
ಆಚಾರ-ವಿಚಾರ

     ನನ್ನ ತಂದೆಯವರು ಸಂಪ್ರದಾಯಸ್ಥ ಮಾಧ್ವ ಬ್ರಾಹ್ಮಣರು. ಅವರು ಸ್ನಾನ ಮಾಡಿಕೊಂಡು ಬರುವಾಗ ಎದುರಿಗೆ ಶೂದ್ರರು ಬರುವಂತೆಯೇ ಇಲ್ಲ, ಬ್ರಾಹ್ಮಣರಲ್ಲೂ, ಅದರಲ್ಲೂ ಯಾರೋ ಸ್ಮಾರ್ತರು, ಆಚಾರ್ಯರು, ಶಾಸ್ತ್ರಿಗಳು ಬಂದರೆ 'ನಮಸ್ಕಾರ ಆಚಾರ್ರೇ, ದೀಕ್ಷಿತರೇ' ಅಂತ ಹೇಳಿಬಿಡೋರು, ಅವರು ಹೋದ ನಂತರ ಬಚ್ಚಲು ಮನೆಗೆ ಹೋಗಿ ಪುನಃ ಸ್ನಾನ ಮಾಡಿಕೊಂಡು 'ಶುಚಿಯಾದೆ' ಅಂದುಕೊಂಡು ಬರುತ್ತಿದ್ದರು. ನಮ್ಮಪ್ಪಂದೇ ಈ ಗತಿ. ನನ್ನನ್ನು ಕಂಡು 'ಯಾವ ಪಾಪದ ಫಲವಾಗಿ ನೀನು ನಮ್ಮ ಮನೆಯಲ್ಲಿ ಹುಟ್ಟಿದೆಯೋ, ನೀನೊಂದು ಪಾಪದ ಮುದ್ದೆ, ನಮ್ಮ ಮನೆಯಲ್ಲಿ ಏಕೆ ಹುಟ್ಟಿದೆ, ನಮ್ಮ ಮನೆಯ ಹೆಸರು ಕೆಡಿಸುತ್ತೀಯಾ' ಎನ್ನುತ್ತಿದ್ದರು. ಅವರದು ಭಾರೀ ಮಡಿ. ನಾನು ಬೆಳಿಗ್ಗೆ ಏಳುವಾಗ 'ಶಂಭೋ, ಮಹಾದೇವಾ, ಕಾಪಾಡಪ್ಪಾ' ಅಂತಿದ್ದರೆ ಅವರಿಗೆ ಮೈ ಉರಿ, ವೈಶ್ಣವರ ಮನೆಯಲ್ಲಿ ಹುಟ್ಟಿ ಶೈವರ ದೇವರ ಹೆಸರು ಹೇಳುತ್ತಾನಲ್ಲಾ ಅಂತ, ಅವರು ಎರಡು ಹೊತ್ತು ವಿಷ್ಣು ಸಹಸ್ರನಾಮ ಹೇಳಿಕೊಂಡು ಪೂಜೆ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ಹೂವು ಬಿಡುತ್ತಿರಲಿಲ್ಲ, ಪಕ್ಕದ ಮನೆಯಲ್ಲಿ ಬಿಡುತ್ತಿದ್ದ ಹೂವು ಕದ್ದು ಕಿತ್ತು ದೇವರಿಗೆ ಪೂಜೆ ಮಾಡಿದರೆ ಪುಣ್ಯ ಬರುತ್ತದೆಯೇ ಎಂದು ನಾನು ಅಪ್ಪನನ್ನು ಕೇಳುತ್ತಿದ್ದೆ. ಅದರಲ್ಲಿ ಎರಡು ಪಾಪದ ಕೆಲಸ ಆಗುತ್ತದೆ. ಹೂವನ್ನು ಕದ್ದು ಕಿತ್ತಿದ್ದೊಂದು ಪಾಪ, ಇನ್ನೂ ಅರಳದಿರುವ ಹೂವು, ಅಲ್ಲೇ ಇದ್ದಿದ್ದರೆ ಪೂರ್ತಿ ಅರಳಿ ಬೀಳುವವರೆಗೆ ಎಷ್ಟು ಪರಿಮಳ ಬೀರಿ ಮುದ ತರುತಿತ್ತೋ ಆ  ಹೂವನ್ನು ಕಿತ್ತು ಬಾಡಿಸಿದ್ದು ಇನ್ನೊಂದು. ಅದನ್ನು ಕಿತ್ತರೆ ಅದಕ್ಕೆ ನೋವಾಗುತ್ತದೆ, ನಮಗೆ ಗೊತ್ತಾಗುವುದಿಲ್ಲ.  ನಾನು ಹೇಳುವುದು ನಿಮಗೆ ಇಷ್ಟವಾಗದೇ ಹೋಗಬಹುದು, ನಿಮಗೆ ಕೋಪ ಬರಬಹುದು. ಆದರೆ, ಹೀಗೆ ಆಲೋಚನೆ ಮಾಡಿ ಯಾರು ನಡೆದುಕೊಳ್ಳುತ್ತಾರೊ ಅವರನ್ನು ಮನುಷ್ಯ ಅಂತ ಕರೆಯಬಹುದು, ಆಲೋಚನೆ ಮಾಡದಿರುವವರು ಕೇವಲ ಮನುಷ್ಯರ ಆಕಾರ ಹೊಂದಿರುವವರು ಅಷ್ಟೆ. 
ಯಾವ ಶಾಸ್ತ್ರ?
    ನಾವು ಮನಸ್ಸಿನಲ್ಲಿ ಎಲ್ಲರೂ ಸುಖವಾಗಿರಲಿ ಅನ್ನುತ್ತೇವೆ, ಆದರೆ  ನಾವು ಅನ್ನುವುದನ್ನು ಬಿಡುವುದಿಲ್ಲ. ನಮ್ಮ ಸ್ವಾರ್ಥವನ್ನು ನಾವು ಬಿಡುವುದಿಲ್ಲ. 'ಗೋಬ್ರಾಹ್ಮಣೇಭ್ಯಃ ಶುಭಂಭವತು' ಅಂತೀವಿ, ಗೋವು, ಬ್ರಾಹ್ಮಣರಿಗೆ -ಅವರೂ ಒಂದು ತರಹ ಪ್ರಾಣಿಗಳೇ ಅಂದುಕೊಳ್ಳಿ - ಶುಭವಾಗಲಿ ಅಂತ. ಈ ಗೋವು, ಬ್ರಾಹ್ಮಣರು ಈ ಪ್ರಪಂಚದಿಂದ ಹೊರಗಿದ್ದಾರೆಯೇ? 'ಲೋಕಾಸಮಸ್ತಾಃ ಸುಖಿನೋಭವಂತು' ಎಂದು ವೇದ ಹೇಳುತ್ತಿರುವಾಗ ಇವೆರಡನ್ನು ಮಾತ್ರಾ ಎತ್ತಿ ಏಕೆ ತೋರಿಸಬೇಕು? ಹೀಗೆ ನಮ್ಮ ತಂದೆಗೆ ಹೇಳಿದಾಗ ಅವರಿಗೆ ಬಹಳ ಕೋಪ ಬರುತ್ತಿತ್ತು. "ಏನಪ್ಪಾ ನೀನು, ಶಾಸ್ತ್ರಕ್ಕೆ ವಿರುದ್ಧವಾಗಿ ಮಾತನಾಡುತ್ತೀ" ಅನ್ನುತ್ತಿದ್ದರು. ಅದು ಯಾವ ಶಾಸ್ತ್ರ? ಅಂತ ಕೇಳಿದರೆ ಅವರಿಗೆ ಸರಿಯಾಗಿ ಉತ್ತರ ಕೊಡಲಾಗುತ್ತಿರಲಿಲ್ಲ, "ಶಾಸ್ತ್ರ ಶಾಸ್ತ್ರ ಕಣಯ್ಯಾ" ಎಂದು ಸಿಡುಕುತ್ತಿದ್ದರು. ನನ್ನ ತಾಯಿ, "ಅವನ ಮೇಲೆ ಏಕೆ ಸಿಡುಕುತ್ತೀರಿ? ಗೊತ್ತಿದ್ದರೆ ಉತ್ತರ ಹೇಳಿ, ಇಲ್ಲದಿದ್ದರೆ ಸುಮ್ಮನಿರಿ" ಎಂದು ಅನ್ನುತ್ತಿದ್ದರು. ಸಂಸ್ಕೃತದಲ್ಲಿ ಇರುವುದೆಲ್ಲಾ ಶಾಸ್ತ್ರವಾ?  ಇವೆಲ್ಲಾ ಆಲೋಚನೆ ಮಾಡಿದರೆ ಮಾತ್ರ ಗೊತ್ತಾಗುವುದೇ ಹೊರತು, ಇಲ್ಲದಿದ್ದರೆ ಗೊತ್ತಾಗುವುದಿಲ್ಲ.
ಶಾಪ ಕೊಟ್ಟವರೇ ಆಶೀರ್ವದಿಸಿದರು
     ಅಷ್ಟೆಲ್ಲಾ ಸಂಪ್ರದಾಯಸ್ಥರಾಗಿದ್ದ ನನ್ನ ತಂದೆ ಸಾಯುವ ಕಾಲಕ್ಕೆ ಆಸ್ಪತ್ರೆಯಲ್ಲಿದ್ದಾಗ ನಾನು ಹೊರಗೆ ಇದ್ದೆ. ನನ್ನ ತಂದೆ ನರ್ಸ್‌ಗೆ ಹೇಳಿ ನನ್ನನ್ನು ಕರೆಸಿದರು. ನನ್ನ ಕೈಹಿಡಿದು "ಮಗೂ, ನಿನಗೆ ನಾನು ಸಿಕ್ಕಾಪಟ್ಟೆ ಬೈದುಬಿಟ್ಟಿದ್ದೀನಿ. ಮರೆತುಬಿಡು, ನೀನು ದೊಡ್ಡ ಮನುಷ್ಯ ಆಗುತ್ತೀಯ, ನಿನ್ನಿಂದ ನಮ್ಮ ಕುಲಕ್ಕೆ ಒಳ್ಳೆ ಹೆಸರು ಬರಬೇಕು" ಎಂದು ಹೇಳಿದ್ದರು. ಶಾಪ ಕೊಟ್ಟಿದ್ದ ತಂದೆಯಿಂದ ನನಗೆ ಆಶೀರ್ವಾದ ಸಿಕ್ಕಿತು, ನನಗೆ ತೃಪ್ತಿ. ಅವರು ಆಶೀರ್ವಾದ ಕೊಡದೇ ಹೋಗಿದ್ದರೂ ನನ್ನ ತೃಪ್ತಿಯಲ್ಲಿ ಕೊರತೆಯಾಗುತ್ತಿರಲಿಲ್ಲ. ನನ್ನ ತಂದೆ ನನಗೆ ಪೂಜ್ಯರು ಹೌದು, ಆದರೆ ಯಾರಿಗೆ ಗೊತ್ತು, ಎಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾರೋ ಏನೋ, . . . ! ಹಳ್ಳಿಯಲ್ಲಿ ಇದ್ದಾಗ ಪಟೇಲರು, ಶಾನುಭೋಗರು, ಅವರು, ಇವರು ತರಕಾರಿ, ಎಣ್ಣೆ, ತುಪ್ಪ, ಅಕ್ಕಿ, ಬೇಳೆ ತಂದು ಕೊಡುತ್ತಿದ್ದರು. ನಾನು ಕೇಳುತ್ತಿದ್ದೆ, "ಅಪ್ಪಾ, ಇದಕ್ಕೆ ನೀವು ದುಡ್ಡು ಕೊಡುತ್ತೀರಾ?" ಅಂತ. "ಇಲ್ಲ, ಅವರು ಶ್ರದ್ಧೆಯಿಂದ ಕೊಡ್ತಾರೆ " ಅಂತಿದ್ದರು. ನಾನು ಕೇಳುತ್ತಿದ್ದೆ:"ಅವರು ಶ್ರದ್ಧೆಯಿಂದ ಕೊಡ್ತಾರೆ, ನೀವು ಶ್ರದ್ಧೆಯಿಂದ ತೊಗೋತೀರಾ?" ಅದಕ್ಕೆ ಅವರು ಉತ್ತರಿಸುತ್ತಿರಲಿಲ್ಲ.
ಹೇಳುವುದು ಒಂದು . . .
.  ನಾವು ಸತ್ಕರ್ಮಕ್ಕೆ ವಿಮುಖರಾಗದಿರೋಣ, ಐಶ್ವರ್ಯ ಇದ್ದಾಗ ಆಡಂಬರದಿಂದ ಹಬ್ಬ, ನಾಮಕರಣ, ಉಪನಯನ, ಮದುವೆ, ಇತ್ಯಾದಿಗೆ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ, ಬಡವ ಏನು ಮಾಡಬೇಕು? ಬಡವ, ಭಾಗ್ಯವಂತ ಎಲ್ಲಾ ನಾವು ಮಾಡಿಕೊಂಡಿರೋದು, ಬೆಂಕಿಯಲ್ಲಿ, ಗಾಳಿಯಲ್ಲಿ, ಭೂಮಿಯಲ್ಲಿ, ಆಕಾಶದಲ್ಲಿ, ನೀರಿನಲ್ಲಿ ಎಲ್ಲಾ ಕಡೆ ಐಶ್ವರ್ಯ ತುಂಬಿಕೊಂಡಿದೆ. ಬುದ್ಧಿಹೀನರಾದ ನಾವು ಆ ಐಶ್ವರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತೇವೆ. ವಾಯುವಿನಲ್ಲಿ ಪ್ರಾಣ ಕೊಡುವ ಶಕ್ತಿ ಇದೆ. ಜನ ಹೋಮ, ಹವನ ಮಾಡಿ ಗಾಳಿಯಲ್ಲಿ ಶುದ್ಧತೆ ಹರಡುವುದಿಲ್ಲ, ಬೀಡಿ, ಸಿಗರೇಟು, ಚುಟ್ಟಾ ಸೇದಿ ಗಾಳಿಯಲ್ಲಿ ಹೊಗೆ ಬಿಟ್ಟು ಅವರೂ ಹಾಳಾಗಿ ನಮ್ಮಂತಹವರನ್ನೂ ಹಾಳು ಮಾಡುತ್ತಾರೆ, ಯಾತಕ್ಕೆ? ಪಂಚಭೂತಗಳನ್ನು ಶುದ್ಧವಾಗಿಡಲು ಕರ್ಮ ಮಾಡಬೇಕು. ಯಜ್ಞ ಮಾಡುವುದಕ್ಕೆ ತುಪ್ಪ ಇಲ್ಲ, ಯಾವುದೋಎಣ್ಣೆ ಹಾಕುವುದು, ಅದೂ ಇಲ್ಲ, ವನಸ್ಪತಿ,  ಹಾಕಬೇಕಾದ ಸಮಿತ್ತು ಇಲ್ಲ, ಯಾವುದೋ ಕಡ್ಡಿ ಹಾಕಿದರಾಯಿತು, ಈ ರೀತಿ ಮಾಡಿದರೆ ಸರಿಯೇ? ಅದರಲ್ಲಿ ಸತ್ವ ಇಲ್ಲ. ಹಾಕಬೇಕಾದ್ದನ್ನು ಹಾಕದೆ ಬಿಟ್ಟು ಯಜ್ಞ ಮಾಡಿದರೇನು, ಬಿಟ್ಟರೇನು! ನನಗೆ ಗೊತ್ತಿರುವ ಒಂದು ಕುಟುಂಬ ಇದೆ -ದೊಡ್ಡ ಆರ್ಯಸಮಾಜಿ ಪರಿವಾರ ಅದು- ಅವರ ಮನೆಯಲ್ಲಿ ಒಮ್ಮೆ ಯಜ್ಞ ಮಾಡುವಾಗ ಮನೆಯ ಯಜಮಾನಿಯಾದ ಅಜ್ಜಿ -ಅವರೂ ಉಪಾಧ್ಯಾಯಿನಿ ಆಗಿದ್ದವರು- ತನ್ನ ಅಳಿಯನಿಗೆ ತುಪ್ಪ ತರಲು ಹೇಳಿದರು, ಅವರು ಅಡಿಗೆ ಮನೆಯಿಂದ ತುಪ್ಪ ತಂದರೆ, "ಅದಲ್ಲಾ, ಅದು ತಿನ್ನುವ ತುಪ್ಪ, ಯಜ್ಞಕ್ಕೆ ಅಂತ ಇಟ್ಟಿರುವ ಬೇರೆ ತುಪ್ಪ ತನ್ನಿ"  ಅಂತ ಹೇಳಿದರು. ಇಂಥ ಯಜ್ಞ ಯಾಕೆ ಮಾಡಬೇಕು? ಮಾಡಲೇಬಾರದು. ಬದಲಿಗೆ ನಾಸ್ತಿಕರಾಗಿ, ನಾನು ಒಪ್ಪುತ್ತೇನೆ. ಆಸ್ತಿಕತೆ ಹೆಸರಿನಲ್ಲಿ ಎಲ್ಲರ ತಲೆ ಬೋಳಿಸುವ ಕೆಲಸ ಇದೆಯಲ್ಲಾ, ಅದು ಮಹಾ ಪಾಪ. ಒಬ್ಬರು ಮಹಾಶಯರು ನನಗೆ ಹೇಳಿದ್ದರು, 'ನೀನು ನಾಸ್ತಿಕ ಕಣಯ್ಯಾ' ಅಂತ. 'ಆಗಲಿ, ನಿಮ್ಮ ಆಶೀರ್ವಾದದಿಂದ ನಾನು ನಾಸ್ತಿಕನಾಗೆ ಇರುತ್ತೇನೆ' ಎಂದು ಉತ್ತರಿಸಿದ್ದೆ.
*********************
[ನಾಗರಾಜನ ಮಾತು: ಬೂಟಾಟಿಕೆಯ ನಡವಳಿಕೆಗಳಿಗೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಮಾರುಕಟ್ಟೆಗಳಲ್ಲಿ, ದೇವಸ್ಥಾನಗಳ ಸಮೀಪದಲ್ಲಿ ದೇವರಿಗೆ ನೈವೇದ್ಯ ಕೊಡುವ ಸಲುವಾಗಿಯೇ ಮಾರಾಟ ಮಾಡುವ ಕಾಯಿ, ಹೂವು, ಹಣ್ಣುಗಳನ್ನು ಗಮನಿಸಿ. ಆ ಬಾಳೆಹಣ್ಣುಗಳು ಹಣ್ಣೇ ಆಗಿರುವುದಿಲ್ಲ, ಕಾಯಿ ಆಗಿರುತ್ತದೆ, ಅಲ್ಲದೆ ಪುಟ್ಟ ಗಾತ್ರದವು. ನಾವೇ ತಿನ್ನುವುದಾದರೆ ಅಂತಹವುಗಳನ್ನು ನಾವು ಕೊಳ್ಳುವುದೇ ಇಲ್ಲ. ಮದುವೆ, ಸಮಾರಂಭಗಳು, ಇತ್ಯಾದಿಗಳಲ್ಲಿ ಉಡುಗೊರೆ ಕೊಡುವ ಸಲುವಾಗಿಯೇ ಕಡಿಮೆ ದರದ, ಕಡಿಮೆ ಅಳತೆಯ ಬಟ್ಟೆಗಳನ್ನು, ಪದಾರ್ಥಗಳನ್ನು ಕೊಳ್ಳುತ್ತೇವೆ. ಉಡುಗೊರೆ ಪಡೆದವರೂ ಅದನ್ನು ಉಪಯೋಗಿಸಲಾರರು. ಅದನ್ನು ಬೇರೊಬ್ಬರಿಗೆ ಉಡುಗೊರೆಯಾಗಿ ದಾಟಿಸಿಬಿಡುತ್ತಾರೆ! ದೇವರಿಗೆ, ಇನ್ನೊಬ್ಬರಿಗೆ ಕೊಡುವುದಾದರೆ ಒಂದು ತರಹ, ನಮಗೇ ಅದರೆ ಮತ್ತೊಂದು ತರಹ! ಕೊಡುವುದಾದರೆ ನಾವು ಉಪಯೋಗಿಸುವಂತಹುದೇ ಕೊಡೋಣ, ಇಲ್ಲದಿದ್ದರೆ ಕೊಡದಿರುವುದೇ ಒಳ್ಳೆಯದಲ್ಲವೇ?]
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/04/7.html

2 ಕಾಮೆಂಟ್‌ಗಳು:

  1. ಅಂಗಡಿಗೆ ಹೋಗೆ ಬಟ್ಟೆಯನ್ನೋ ಪಾತ್ರೆಯನ್ನೋ ಕೇಳಿದಾಗ ಅವನು ಕೇಳುವ ಮೊದಲ ಪ್ರಶ್ನೆ - `ಸ್ವಂತಕ್ಕೋ, ದಾನಕ್ಕೋ?'. ತನ್ನಂತೆ ಪರರನ್ನು ಕಾಣು ಎಂಬ ಮಾತಿನ ಅರ್ಥವನ್ನು ಮತ್ತೊಮ್ಮೆ ಹುಡುಕಬೇಕಾಗಿದೆ.

    ಪ್ರತ್ಯುತ್ತರಅಳಿಸಿ
  2. ನಿಜ, ಶರ್ಮಾಜಿಯವರೇ. ಈ ಬರಹಗಳನ್ನು 'ಸಂಪದ' ಅಂತರ್ಜಾಲ ತಾಣದಲ್ಲೂ ಪ್ರಕಟಿಸುತ್ತಿದ್ದು ಅಲ್ಲೂ ಉತ್ತೇಜಕ ಪ್ರತಿಕ್ರಿಯೆಗಳು ಬರುತ್ತಿವೆ. ವಂದನೆಗಳು.

    ಪ್ರತ್ಯುತ್ತರಅಳಿಸಿ