ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಮೇ 12, 2012

ಸಾರಗ್ರಾಹಿಯ ರಸೋದ್ಗಾರಗಳು - 10

     ಪಂ. ಸುಧಾಕರ  ಚತುರ್ವೇದಿಯವರು  ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯವರು. 116 ವರ್ಷಗಳ  ಈ ಸತ್ಯವಾದಿಯ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿ, ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಆಸಕ್ತಿಯುಳ್ಳವರಿಗಾಗಿ ಅವರ ವಿಳಾಸ ಹೀಗಿದೆ: #286/ಸಿ, ಶ್ರೀ ಕೃಷ್ಣ ಸೇವಾಶ್ರಮ ರಸ್ತೆ, ಜಯನಗರ 5ನೆಯ ಬ್ಲಾಕ್, ಬೆಂಗಳೂರು.  ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************
ಸಮಾಧಿ
     'ಸಮಾಧಿ, ಸುಷುಪ್ತಿ, ಮೋಕ್ಷೇಶು ಬ್ರಹ್ಮರೂಪಪ'- ಸಾಂಖ್ಯ ದರ್ಶನದಲ್ಲಿ ಕಪಿಲಾಚಾರ್ಯರು ಹೇಳುತ್ತಾರೆ. ಕಪಿಲಾಚಾರ್ಯರನ್ನು ಅನೇಕರು ನಾಸ್ತಿಕರು ಎನ್ನುತ್ತಾರೆ. ಅವರು ನಾಸ್ತಿಕರಲ್ಲ, ಅವರನ್ನು ನಾಸ್ತಿಕರು ಅನ್ನುವವರೇ ನಾಸ್ತಿಕರು. ಪರಮಾತ್ಮ ಸರ್ವಜ್ಞ, ಎಲ್ಲವನ್ನೂ ಮಾಡುವವನು, . ಅವನನ್ನು ನಾವು ಈಶ್ವರ ಅಂತ ಬಾವಿಸ್ತೇವೆ. ಭಗವಂತ ಈ ಜಗತ್ತನ್ನು ಸೃಷ್ಟಿ ಮಾಡಿದ್ದಾನೆ. ಪ್ರಕೃತಿ ಇಲ್ಲದಿದ್ದರೆ ಭಗವಂತ ಏನೂ ಮಾಡಲಾಗುತ್ತಿರಲಿಲ್ಲ. ಒಳ್ಳೆಯ ನಿಪುಣ ಟೈಲರ್ ಹತ್ತಿರ ಹೋಗಿ ಬಟ್ಟೆಯನ್ನು ಕೊಡದೆ 'ನನಗೊಂದು ಅಂಗಿ ಹೊಲೆದುಕೊಡು' ಅಂದರೆ ಅವನು ಹೇಗೆ ಹೊಲಿಯುತ್ತಾನೆ? ಹೊಲಿಯಲು ಅವನಿಗೆ ಬಟ್ಟೆ ಕೊಡಬೇಕು. ಹಾಗೆಯೇ ಈ ಪ್ರಕೃತಿ ಇಲ್ಲದಿದ್ದರೆ, ಈ ಜಡ ಪ್ರಕೃತಿ ಇಲ್ಲದಿರುತ್ತಿದ್ದರೆ ಭಗವಂತನಿಗೆ ಈ ಜಗತ್ತನ್ನು ಸ್ಥಾಪನೆ ಮಾಡಲು, ಸೃಷ್ಟಿ ಮಾಡಲು ಸಾಧ್ಯವೇ ಇರುತ್ತಿರಲಿಲ್ಲ. ಇದನ್ನು ಅರಿತುಕೊಂಡು ನಾವು ಮುಂದೆ ಹೆಜ್ಜೆ ಇಡಬೇಕಾಗುತ್ತದೆ. ಯಾವಾಗ ನಾವು ಕೆಳಕ್ಕೆ ಬೀಳುತ್ತೇವೆ ಅಂದರೆ ಆ ಪ್ರಕೃತಿಗೆ ವಶವಾದಂತೆ ನಾವು ಪರಮಾತ್ಮನನ್ನು ಮರೆತುಬಿಡ್ತೇವೆ, ಪ್ರಕೃತಿಗೆ ವಾಲುತ್ತೇವೆ, ಪರಮಾತ್ಮ ಇಲ್ಲದಿದ್ದರೆ ಪ್ರಕೃತಿ ತನ್ನಿಂದ ತಾನೇ ಏನೂ ಮಾಡುವಂತಿಲ್ಲ. ವಾಯು ಬೀಸುತ್ತೆ, ತನ್ನಷ್ಟಕ್ಕೆ ತಾನೇ ಬೀಸುತ್ತೇನು? ಸಾಧ್ಯವಿಲ್ಲ. ಆ ಬೀಸುವ ಹಾಗೆ ಮಾಡುವವನು ಪರಮಾತ್ಮ.  ಬೆಂಕಿ ಸುಡುತ್ತೆ, ಅದಕ್ಕೆ ಸುಡುವ ಶಕ್ತಿ ಕೊಟ್ಟವರಾರು? ಪಂಚಭೂತಗಳೂ ಅಷ್ಟೆ. ಹೀಗೆ ಯೋಚನೆ ಮಾಡುತ್ತಾ ಹೋಗಿ. ಎಲ್ಲಕ್ಕೂ ಮೂಲಶಕ್ತಿ ಆ ಭಗವಂತನೇ. ಜಡ ಪ್ರಕೃತಿ ತನ್ನಷ್ಟಕ್ಕೆ ತಾನೇ ಏನೂ ಮಾಡಲಾರದು. ಇದನ್ನೇ ಕಪಿಲ ಮಹರ್ಷಿಗಳೂ ಹೇಳುತ್ತಾರೆ, ಅವರನ್ನು ನಾಸ್ತಿಕರು ಅಂತ ಹೇಗೆ ಹೇಳುವುದು? ಅವರು ಹೇಳುತ್ತಾರೆ: ಸಮಾಧಿ, ಸುಷುಪ್ತಿ, ಮೋಕ್ಷ - ಈ ಮೂರು ಸ್ಥಿತಿಯಲ್ಲಿ ಜೀವಾತ್ಮನಿಗೆ ಬ್ರಹ್ಮ ರೂಪ ಬರುತ್ತೆ ಅಂತ. ಸಮಾಧಿ ಅಂದರೆ ಎಲ್ಲವನ್ನೂ ಮರೆತು ಮನಸ್ಸು ಸ್ಥಿರವಾಗಿ ನಿಂತು ಪರಮಾತ್ಮನನ್ನು ಧ್ಯಾನಿಸಿದಾಗ, ಜೀವಾತ್ಮ ಇದ್ದೂ ಕೂಡ ಇಲ್ಲದ ಹಾಗೆ ಆದಾಗ, ಜೀವಾತ್ಮ ತನ್ನ ಇರವನ್ನು ತಾನೇ ಮರೆತು ಭಗವಂತನಲ್ಲಿ ಮನಸ್ಸನ್ನು ಸ್ಥಿರಗೊಳಿಸಿದಾಗ ಭಗವಂತ ಬಿಟ್ಟು ಬೇರೇನೂ ಕಾಣದಿದ್ದಾಗ ಉಂಟಾಗುವ ಸ್ಥಿತಿ ಇದೆಯಲ್ಲಾ ಅದನ್ನು ಸಮಾಧಿ ಅನ್ನುತ್ತಾರೆ. ಈಗ ಹೇಳುತ್ತಾರಲ್ಲಾ, ಸತ್ತ ಮೇಲೆ ಹೂತು/ಸುಟ್ಟು ಕಟ್ಟುವ ಕಟ್ಟೆ ಇದೆಯಲ್ಲಾ, ಅದು ಸಮಾಧಿ ಅಲ್ಲ. ಒಳ್ಳೆಯ ವಿಚಾರದಲ್ಲಿ ಎಲ್ಲಿ ಮನಸ್ಸು ಮತ್ತು ಆತ್ಮ ಸ್ಥಿರವಾಗಿ ನಿಲ್ಲುತ್ತೋ ಅದು ಸಮಾಧಿ. ಅದು ಒಂದು ಅವಸ್ಥೆ. ಈ ಸ್ಥಿತಿಯಲ್ಲಿ ಜೀವಾತ್ಮ ತಾನು ಅಲ್ಪಜ್ಞ, ಅಲ್ಪಶಕ್ತ  ಎಂಬ ಎಲ್ಲಾ ಭಾವನೆಯನ್ನೂ ಮರೆತುಬಿಡುತ್ತಾನೆ, ಪರಮಾತ್ಮನಲ್ಲಿ ನೆಲೆ ನಿಲ್ಲುತ್ತಾನೆ. 
ಸುಷುಪ್ತಿ
     ಸುಷುಪ್ತಿ - ನಿದ್ದೆ, ಒಳ್ಳೆಯ ನಿದ್ದೆ - ಶ್ರೀಮಂತನೂ ನಿದ್ದೆ ಮಾಡ್ತಾನೆ, ಬಡವನೂ ನಿದ್ದೆ ಮಾಡ್ತಾನೆ. ಶ್ರೀಮಂತನ ನಿದ್ದೆ ಚಂಚಲವಾಗಬಹುದು, ಎಲ್ಲಿ ತನ್ನ ಶ್ರೀಮಂತಿಕೆಯನ್ನು ಯಾರು ಕೊಳ್ಳೆ ಹೊಡೀತಾರೋ ಅಂತ ಯೋಚನೆಯಲ್ಲಿ ಹಣದ ಮೇಲೆ ಮನಸ್ಸು ನಿಂತಿರುತ್ತದೆ. ಬಡವನಿಗೆ ಹಾಗಲ್ಲ, ಚಾಪೆ ಇದ್ದರೆ ಚಾಪೆ, ನೆಲ ಇದ್ದರೆ ನೆಲ, ಮಲಗುತ್ತಾನೆ, ಚೆನ್ನಾಗಿ ನಿದ್ದೆ ಹೋಗುತ್ತಾನೆ. ಕಾರಣವೇನೆಂದರೆ ಕಳೆದುಕೊಳ್ಳುವುದಕ್ಕೆ ಅವನ ಹತ್ತಿರ ಜಾಸ್ತಿ ಇಲ್ಲ. ಯಾವನ ಹತ್ತಿರ ಕಳೆದುಕೊಳ್ಳುವುದಕ್ಕೆ ಬಹಳ ಕಡಿಮೆ ಇರುತ್ತೋ ಅವನೇ ಸುಖಿ. ನನ್ನ ಹತ್ತಿರ ಒಂದು ರೂಪಾಯಿ ಇತ್ತು ಅಂತ ಇಟ್ಕೊಳ್ಳಿ, ಕಳೆದುಹೋಯಿತು. ಪರವಾಗಿಲ್ಲ, ಮತ್ತೆ ಗಳಿಸಬಹುದು. ಅದೇ ಒಂದು ಕೋಟಿ ರೂಪಾಯಿ ಇತ್ತು ಅಂತ ಇಟ್ಕೊಳ್ಳಿ, ಅದು ಕಳೆದುಹೋಯಿತು ಅಂದರೆ ಅಷ್ಟು ಸುಲಭವಾಗಿ ಸಹಿಸಿಕೊಳ್ಳಲು ಆಗುವುದಿಲ್ಲ. ಈ ಮಾತನ್ನು ಒತ್ತಿ ಒತ್ತಿ ಶಂಕರಾಚಾರ್ಯರೂ ಹೇಳ್ತಾರೆ, ಮಧ್ವಾಚಾರ್ಯರೂ ಹೇಳ್ತಾರೆ, ರಾಮಾನುಜಾಚಾರ್ಯರೂ ಹೇಳ್ತಾರೆ, ಭಾಷೆ/ರೀತಿ ಬೇರೆ ಅಷ್ಟೆ. ಶಂಕರಾಚಾರ್ಯರು 'ಜ್ಞಾನವಿಲ್ಲದೆ ಮುಕ್ತಿಯಿಲ್ಲ' ಅಂತ ಹೇಳ್ತಾರೆ, ರಾಮಾನುಜರು 'ಭಗವಂತನಲ್ಲಿ ಸಂಪೂರ್ಣ ಆತ್ಮಸಮರ್ಪಣೆ ಮಾಡಿಕೊಂಡರೆ ಮುಕ್ತಿ ಸಿಗುತ್ತೆ'  ಅಂತಾರೆ, ಮಧ್ವಾಚಾರ್ಯರೂ  'ನಿನ್ನನ್ನು ನೀನು ಮರೆ' ಅಂತ ಹೇಳ್ತಾರೆ. ಪರಮಾತ್ಮನನ್ನು ನಾರಾಯಣ ಅಂತ ಕರೀತಾರೆ. ಅವನನ್ನು ಶಂಕರ ಅಂತಾಲಾದ್ರೂ ಕರೀರಿ, ಶಿವ ಅಂತಲಾದ್ರೂ ಕರೀರಿ, ಯಾವ ಹೆಸರಿನಿಂದಾದರೂ ಕರೀರಿ, ಏನಡ್ಡಿಯಿಲ್ಲ. ನಾವು ಅರ್ಥ ಮಾಡಿಕೊಳ್ಳೋಕೆ ಹೋಗಲ್ಲ. ಪದಗಳನ್ನು ತೆಗೆದುಕೊಂಡು ಬಿಡ್ತೇವೆ, ಅವನಿಗೊಂದು ಜಾಗ ಕಲ್ಪಿಸಬೇಕಲ್ಲಾ, ಸರಿ ವೈಕುಂಠ ಆಯ್ತು.  ನಾವು ದೇವರಿಗೆ ಬೇರೆ ಬೇರೆ ಲೋಕ ಕಟ್ಟಿಸಿಕೊಟ್ಟುಬಿಡುತ್ತೇವೆ. ವೈಕುಂಠದಲ್ಲಿ ನಾರಾಯಣ ಇರ್ತಾನೆ, ಕೈಲಾಸದಲ್ಲಿ ಶಿವ ಇರ್ತಾನೆ, ಹೀಗೆ.  ಇದೆಲ್ಲಾ ನಮ್ಮ ಕಲ್ಪನೆ. ಪೌರಾಣಿಕರ ಪ್ರಕಾರ ದೇವರು ಈ ಲೋಕಕ್ಕೆ ಸಂಬಂಧಿಸಿದವನಲ್ಲ. ಬೇರೆ ಲೋಕದಲ್ಲಿರೋ ಭಗವಂತನಾದರೋ ನಮಗೇಕೆ ಬೇಕು? ಸುಷುಪ್ತಿ - ಅಂದರೆ ಒಳ್ಳೆಯ ಸ್ವಾಭಾವಿಕವಾದ ನಿದ್ದೆ. ಆ ಸ್ಥಿತಿಯಲ್ಲಿ ಕೂಡ ನಾವು ಆನಂದ ಪಡೆಯುತ್ತೇವೆ. ಅಲ್ಲಿ ಬಾಹ್ಯ ಪ್ರಪಂಚ ಇರುವುದಿಲ್ಲ. 
ಮೋಕ್ಷ
     ಮೋಕ್ಷ ಇದ್ದೇ ಇದೆ. ಅಲ್ಲಿ ಪ್ರಕೃತಿಯ ಬಂಧನವೇ ಇಲ್ಲ, ಆ ಭಗವಂತನ ಸಾನ್ನಿಧ್ಯದಲ್ಲಿ ಆನಂದವನ್ನು ನೇರವಾಗೇ ಪಡೆಯುತ್ತೇವೆ. ಬ್ರಹ್ಮರೂಪಪ ಅಂತ ಹೇಳ್ತಾರೆ, ಜ್ಞಾಪಕವಿಟ್ಟುಕೊಳ್ಳಿ. ಮೋಕ್ಷದಲ್ಲಿ ಇವನೇ ಬ್ರಹ್ಮ ಆಗಿಬಿಡ್ತಾನೆ ಅಂತ ಅಲ್ಲ. ಜೀವಾತ್ಮ ಯಾವಾಗಲೂ ಜೀವಾತ್ಮನೇ, ಹಿಂದೆಯೂ ಜೀವಾತ್ಮ, ಮುಂದೆಯೂ ಜೀವಾತ್ಮನೇ, ಅನಂತಕಾಲದವರೆಗೂ ಜೀವಾತ್ಮನೇ. ಅದು ಎಂದೂ ಪರಮಾತ್ಮ ಆಗುವುದಿಲ್ಲ. ನಮ್ಮಲ್ಲಿ ಒಂದು ಕಲ್ಪನೆ ಇದೆ, ಸತ್ತ ಮೇಲೆ ಭಗವಂತನಲ್ಲಿ ಸೇರಿ ಹೋಗಿಬಿಡ್ತಾರೆ ಅಂತ. ಹಾಗೆ ಸೇರುತ್ತಾ ಹೋದರೆ ಪರಮಾತ್ಮ ಬೆಳೆಯುತ್ತಾ ಹೋಗಬೇಕಲ್ಲಾ! ಎಲ್ಲರೂ ಸತ್ತು ಸತ್ತು ಸೇರುತ್ತಾ ಹೋದರೆ ದೊಡ್ಡ ಪರಮಾತ್ಮ ಆಗಬೇಕಲ್ಲಾ! ಇದು ಪರಮಾತ್ಮನ ಭಕ್ತರು ಆಡುವ ಮಾತೇ ಇದು? ಪರಮಾತ್ಮನನ್ನು ಹಾಸ್ಯ ಮಾಡಿದಂತೆ. 
ಒಗ್ಗಟ್ಟೇಕಿಲ್ಲ?
     ಒಂದು ಉದಾಹರಣೆ ತೆಗೆದುಕೊಳ್ಳಿ, ನಮ್ಮಲ್ಲಿ ಒಗ್ಗಟ್ಟು ಏಕೆ ಇಲ್ಲ? ಶಂಕರಾಚಾರ್ಯರು ಒಂದು ಶ್ಲೋಕ ಬರೆದಿದ್ದಾರೆ; 'ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ'  ಅಂದರೆ ಹೇಗೆ ಆಕಾಶದಿಂದ ಬಿದ್ದ ಮಳೆನೀರು ಹೇಗೆ ಸಮುದ್ರ ಸೇರುತ್ತೋ ಹಾಗೆ ಎಲ್ಲಾ ದೇವರಿಗೆ ಮಾಡಿದ ನಮಸ್ಕಾರ ಕೇಶವನಿಗೆ ಸೇರುತ್ತೆ ಅಂತ. ಲಿಂಗಾಯಿತರು ಅದು ಏಕೆ ಸ್ವಾಮಿ, ಕೇಶವನಿಗೇ ಏಕೆ ಸೇರಬೇಕು? 'ಶಂಕರಂ ಪ್ರತಿಗಚ್ಛತಿ' ಅಂತ ಹೇಳಬಾರದಾ? ಅಂತ ಕೇಳಬಹುದು. ಜೈನರು 'ಜಿನನಿಗೇ ಏಕೆ ಸೇರಬಾರದು' ಅಂತ ಕೇಳಬಾರದಾ? ಅಲ್ಲೂ ಕೂಡ ಪ್ರತ್ಯೇಕತೆ! ದೇವರೊಬ್ಬ ಅಂತ ಹೇಳೋದು, ನಾಮ ಹಲವು ಅಂತ ಹೇಳೋದು, ಬೇರೆ ಬೇರೆ ಹೆಸರಿಟ್ಟುಕೊಂಡು ಗುದ್ದಾಡೋದು. ಇದು ಮನುಷ್ಯನ ಅಲ್ಪತ್ವ. ದೇವರು ಎಲ್ಲಿದ್ದಾನೆ? ಅವನು ಎಲ್ಲಾ ಕಡೆ ಇದ್ದಾನೆ. ಅವನನ್ನು ನೋಡಲು ಕಾಶಿಗೆ ಹೋಗಬೇಕಿಲ್ಲ, ರಾಮೇಶ್ವರಕ್ಕೂ ಹೋಗಬೇಕಿಲ್ಲ, ಬದರಿಗೂ ಹೋಗಬೇಕಿಲ್ಲ,  ಕೇದಾರನಾಥಕ್ಕೂ ಹೋಗಬೇಕಿಲ್ಲ, ಅಮರನಾಥಕ್ಕೂ ಹೋಗಬೇಕಿಲ್ಲ.ಇರೋ ಊರೇ ಸಾಕು. ದೇವಸ್ಥಾನಕ್ಕೂ ಹೋಗಬೇಕಿಲ್ಲ, ಈ ಶರೀರ ಇದೆಯಲ್ಲಾ, ಇದರಲ್ಲೂ ಇದ್ದಾನೆ. ಅಲ್ಲಿರುವ ದೇವರು ದೊಡ್ಡವನು, ಇಲ್ಲಿರುವ ದೇವರು ಚಿಕ್ಕವನು ಅಂತ ಏನೂ ಇಲ್ಲ. ಅವನು ಎಲ್ಲೋ ಒಂದು ಕಡೆ ಇರುತ್ತಾನಾ? ಎಲ್ಲಾಕಡೆ ಇರುತ್ತಾನೆ. ಇರೋನು ಒಬ್ಬನೇ ದೇವರು. ೨೫ ದೇವರಿಲ್ಲ. ಕಲ್ಪನೆ ಮಾಡಿಕೊಂಡು ಬೇರೆ ಬೇರೆ ಹೆಸರು ಕೊಡೋದು! ಅಣು-ಅಣುವಿನಲ್ಲೂ ದೇವರಿದ್ದಾನೆ ಅಂತಾರೆ. ಹಾಗಿದ್ದ ಮೇಲೆ ಇವೆಲ್ಲಾ ಯಾಕೆ? 
ಪರಮಾತ್ಮನನ್ನು ಕಾಣುವುದು!
     ಸತ್ತ್ವಗುಣ ಹೆಚ್ಚಾಗಿ, ರಜೋಗುಣ ಕಡಿಮೆಯಾಗಿ, ತಮೋಗುಣ ಶೂನ್ಯವಾದಾಗ ನಮಗೆ ಸ್ವಲ್ಪ ಸ್ವಲ್ಪ ಪರಮಾತ್ಮನ ಅನುಭವವಾಗುವುದಕ್ಕೆ ಪ್ರಾರಂಭವಾಗುತ್ತದೆ. ಇದನ್ನು ಅನುಭವಿಸಿ ತಿಳಿಯಬೇಕೇ ಹೊರತು ಪದಗಳಲ್ಲಿ ವಿವರಿಸುವುದು ಕಷ್ಟ. ಜೀವಾತ್ಮ - ಪರಮಾತ್ಮ ಒಟ್ಟು ಸೇರಿದಾಗ ಆಗುವ ಅನುಭೂತಿ, ಆನಂದ ವರ್ಣಿಸಲಸದಳ. ಸಕ್ಕರೆಯ ರುಚಿಯೇ ಗೊತ್ತಿಲ್ಲದೆ ಇರುವವರಿಗೆ ಸಕ್ಕರೆ ಸಿಹಿ ಎಂದು ಇಪ್ಪತ್ತೈದು ಸಲ ಒತ್ತಿ ಒತ್ತಿ ಹೇಳಿದರೂ ಅರ್ಥವಾಗದೆ ಹೋಗಬಹುದು, ಆದರೆ ಸಕ್ಕರೆಯನ್ನು ಆತ ನಾಲಗೆಯ ಮೇಲಿರಿಸಿಕೊಂಡಾಗ ಅವನಿಗೆ ಅದರ ಸಿಹಿ ಅನುಭವಕ್ಕೆ ಬರುತ್ತದೆ. ಹಾಗೆಯೇ ಪರಮಾತ್ಮನನ್ನು ಅನುಭವಿಸಿಯೇ ತಿಳಿಯಬೇಕು. ಸಾಕ್ಷಾತ್ಕಾರ ಅನ್ನುವುದು ಸುಳ್ಳು. ಪರಮಾತ್ಮನನ್ನು ನಮ್ಮ ಹಣೆಗಣ್ಣಿಂದ ನೋಡಿದೆವು ಅನ್ನುವುದು ಸುಳ್ಳು. ಪರಮಾತ್ಮನನ್ನು ಕಾಣಲು ಬೇಕಾಗಿರುವುದು ಜ್ಞಾನದ ಕಣ್ಣು, ಒಳಗಣ್ಣು, ಅಂತಃಚಕ್ಷು, ಆ ಕಣ್ಣುಗಳಿಂದ ನಾವು ಭಗವಂತನನ್ನು ಕಾಣಬಹುದು. 
     ಸೂರದಾಸರು ಹುಟ್ಟುಕುರುಡರು. ಅವರು ಕೃಷ್ಣನನ್ನು ವರ್ಣಿಸಿದ ರೀತಿ ನೋಡಿದರೆ ಕೃಷ್ಣ, ದೇವಕಿ, ಯಶೋದೆ, ಎಲ್ಲಾ ಎದುರಿಗೆ ಬಂದಂತೆ ಭಾಸವಾಗುತ್ತದೆ. ಹೇಗೆ ಸಾಧ್ಯವಾಯಿತು ಇದು? ಜನ್ಮಾಂತರದ ಸಂಸ್ಕಾರ, ಅಂತಃಚಕ್ಷುವಿನಿಂದ ನೋಡಿದರು. ಈಗಲೂ ಪರೀಕ್ಷೆ ಮಾಡಿ ನೋಡಿ, ದೇವರಿಗೆ ಆಕಾರ ಇಲ್ಲ, ಕಲ್ಪಿಸಿಕೊಳ್ಳಿ, ಯಾವ ಆಕಾರ ಬೇಕಾದರೂ ಕಲ್ಪಿಸಿಕೊಳ್ಳಿ. ನಾರಾಯಣ - ಶಂಖ, ಚಕ್ರ, ಗದಾಪದ್ಮಧಾರಿ, ಕಿರೀಟ ಹಾಕಿಕೊಂಡಿದ್ದಾನೆ, ತುಳಸಿಮಾಲೆ, ಪೀತಾಂಬರ ವಸ್ತ್ರ, ಏನೇನೋ ಕಲ್ಪಿಸಿಕೊಳ್ಳಿ, ಕಾಣಿ, ಆ ಚಿತ್ರ ಮನಸ್ಸಿಗೆ ಬರುತ್ತೆ, ನಿಜವಾಗಿಯೂ ಹಾಗೆ ಇದೆಯಾ? ನಿಜವಾಗಿ ಹಾಗಿಲ್ಲ. ನಿಮ್ಮ ಕಲ್ಪನೆಯಂತೆ ನಿಮಗೆ ಕಾಣುತ್ತೆ, ಅಷ್ಟೆ. ಹಾಗೆಯೇ ಶಿವ! ಪರಮಾತ್ಮನ ವಿಷಯ ಮಾತನಾಡುವಾಗ ಬಹಳ ಗಂಭೀರವಾಗಿ ಆಲೋಚಿಸಬೇಕು. ಪರಮಾತ್ಮ ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಅವನಿಲ್ಲದ ಜಾಗವೇ ಇಲ್ಲ. ಅಗ್ನಿಹೋತ್ರ ಮಾಡುವಾಗ, ಸಂಧ್ಯಾವಂದನೆ ಮಾಡುವಾಗ ಈ ಮಂತ್ರ ಹೇಳ್ತೇವೆ:
ಓಂ ನಮಃ ಶಂಭವಾಯ ಚ ಮಯೋಭವಾಯ ಚ ನಮಃ ಶಂಕರಾಯ ಚ ಮಯಸ್ಕರಾಯ ಚ |
ನಮಃ ಶಿವಾಯ ಚ ಶಿವತರಾಯ ಚ || (ಯಜು.೧೬.೪೧.)
     ಇದರ ಅರ್ಥ ಶಾಂತಿಸ್ವರೂಪನಿಗೆ ನಮಸ್ಕಾರ ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ ಎಂದು. 
*************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/05/9.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ