ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಮೇ 4, 2012

ಸಾರಗ್ರಾಹಿಯ ರಸೋದ್ಗಾರಗಳು - 9


     ಪಂ. ಸುಧಾಕರ  ಚತುರ್ವೇದಿಯವರು  ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯವರು. 116 ವರ್ಷಗಳ  ಈ ಸತ್ಯವಾದಿಯ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿ, ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************

ಪ್ರಾಣಿಬಲಿ
     ಯಜ್ಞ ಅಂದಕೂಡಲೆ ಪಶುಬಲಿ ಬೇಕೇಬೇಕು ಅಂತಾರೆ. ಯಾವ ಯಜ್ಞ ಹಿಂಸೆಯಿಂದ ಕೂಡಿರುವುದಿಲ್ಲವೋ -ಅಧ್ವರ - ಹಿಂಸೆಯಿಲ್ಲದ್ದು- ಅದೇ ಯಜ್ಞ ಎಂದು ವೇದದಲ್ಲಿ ಸ್ಪಷ್ಟವಾಗಿದೆ. ಯಜ್ಞಕ್ಕೆ ಬಲಿ ಕೊಡುವ ಪದ್ಧತಿ ಏಕೆ, ಹೇಗೆ ಸೇರಿತೋ ಗೊತ್ತಿಲ್ಲ. ಕೋಣಬಲಿ ಕೊಟ್ಟರೆ ಶ್ರೇಷ್ಠವಂತೆ, ಅದರಿಂದ ಸೂರ್ಯದೇವನಿಗೆ ತೃಪ್ತಿಯಾಗುತ್ತಂತೆ! ಕಾಲಕಾಲಕ್ಕೆ ಮಳೆ, ಬೆಳೆ ಕೊಡುತ್ತಾನಂತೆ! ಅದು ಹೇಗೆ ತೃಪ್ತಿಯಾಗುತ್ತೋ! ಅದಕ್ಕಾಗಿ ಪಾಪ, ಆ ಕೋಣನನ್ನು ಬಲಿಕೊಡಬೇಕೆ? ನಾನು . . . . ಸಮೀಪದ ಒಂದು ಮಠದ ಮುಖ್ಯಸ್ಥ . . .ರನ್ನು ಕೇಳಿದೆ: ಸ್ವಾಮಿ, ನೀವು ಯಾಕೆ ಪ್ರಾಣಿಹಿಂಸೆ ಮಾಡ್ತೀರಿ? ಅವರು ಹೇಳಿದರು: 'ನಾವು ಎಲ್ಲಾ ಪ್ರಾಣಿಗಳನ್ನೂ ಬಲಿ ಕೊಡಲ್ಲ, ಸಸ್ಯಾಹಾರಿ, ಸಾಧು ಪ್ರಾಣಿ ಮಾತ್ರ ಬಲಿ ಕೊಡ್ತೀವಿ, ಅವು ಶುದ್ಧವಾಗಿರುತ್ತವೆ, ಅವನ್ನು ಬಲಿ ಕೊಟ್ಟರೆ ಸೂರ್ಯನಾರಾಯಣನಿಗೆ ತೃಪ್ತಿಯಾಗುತ್ತೆ'. ನಾನು ಹೇಳಿದೆ - 'ನನ್ನ ಜೊತೆಗೆ ಬನ್ನಿ, ಕೆಲವು ತಿಂಗಳು ನಿಮಗೆ ವಡೆ, ಚಕ್ಕುಲಿ, ಏನೂ ಕೊಡಲ್ಲ, ಬರೀ ಹುಲ್ಲೇ ತಿನ್ನಿಸಿ ಆಮೇಲೆ ಯಜ್ಞಕ್ಕೆ ಬಲಿ ಕೊಡುತ್ತೇನೆ, ಸೂರ್ಯದೇವನಿಗೆ ತುಂಬಾ ಸಂತೋಷ ಆಗುತ್ತೆ'. ಅವರು 'ಅಯ್ಯೋ, ನಾನು ಮನುಷ್ಯ' ಅಂದರು. 'ಮನುಷ್ಯ ಎಂದು ಏಕೆ ಹೇಳುತ್ತಿ? ಮನುಷ್ಯ ಜಾತಿಗೆ ಏಕೆ ಅವಮಾನ ಮಾಡುತ್ತಿ? ಆಲೋಚನೆ ಮಾಡಿ ಕೆಲಸ ಮಾಡುವವನು ಮನುಷ್ಯ ಎಂದು ಶಾಸ್ತ್ರ ಹೇಳುತ್ತೆ. ಆಲೋಚನೆ ಮಾಡದೆ ಕೆಲಸ ಮಾಡುವ ನೀನು ಹೇಗೆ ಮನುಷ್ಯ?' ಎಂದು ಹೇಳಿದೆ. ಯಜ್ಞ ಶ್ರೇಷ್ಠವಾದ ಕರ್ಮ, ಅಂತಹ ಯಜ್ಞದ ಹೆಸರಿನಲ್ಲಿ ಇಂತಹ ಪಾಪ ಏಕೆ ಮಾಡಬೇಕು? ಯಾವತ್ತೂ ಮಾಡಬಾರದು. 'ದೇವೋ ದುರ್ಬಲ ಘಾತಕಃ' ಅನ್ನುತ್ತಾರೆ. [ತಮ್ಮ ತಪ್ಪನ್ನು ದೇವರ ಮೇಲೆಯೇ ಹೊರಿಸುತ್ತಾರೆ!] ಜಗತ್ತಿನ ಎಲ್ಲಾ ಜೀವಿಗಳೂ ದೇವರ ಮಕ್ಕಳೇ ಆಗಿರುವಾಗ ಅವನ ಮಕ್ಕಳ ಬಲಿಯನ್ನು ಅವನೇ ಬಯಸುವನೇ? ಪಶುಬಲಿಯಿಂದ ತೃಪ್ತನಾಗುವ ದೇವರು ದೇವರೇ ಅಲ್ಲ.
ಸತ್ಯಂ ಬ್ರೂಯಾತ್. .
     'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನಬ್ರೂಯಾತ್ ಸತ್ಯಮಪ್ರಿಯಂ'. ಸತ್ಯ ಹೇಳಬೇಕು, ಆದರೆ ಆ ಸತ್ಯವನ್ನು ಹಿತವಾಗಿ ಹೇಳಬೇಕು, ಅಪ್ರಿಯವಾದ ಸತ್ಯ ಹೇಳಬಾರದು ಎಂದು ಇದರ ಅರ್ಥ. ಕುಂಟನನ್ನು ಕುಂಟ ಎಂದರೆ, ಕುರುಡನನ್ನು ಕುರುಡ ಎಂದರೆ ಅದು ಸತ್ಯ ಇದ್ದರೂ ಕೇಳಿಸಿಕೊಂಡವರಿಗೆ ನೋವಾಗುತ್ತದೆ. ನಮ್ಮ ಗುರುಗಳು ಹೇಳುತ್ತಿದ್ದರು, ಕುರುಡನನ್ನು ಪ್ರಜ್ಞಾಚಕ್ಷು ಎನ್ನಬೇಕು ಎಂದು. ಮಹರ್ಷಿ ದಯಾನಂದರ ಗುರು ಸ್ವಾಮಿ ವಿರಜಾನಂದರೂ ಕುರುಡರೇ. ಅವರು ನಿಜಕ್ಕೂ ಪ್ರಜ್ಞಾಚಕ್ಷುಗಳಾಗಿದ್ದರು. (ಪ್ರಾಸಂಗಿಕವಾಗಿ ಒಂದು ಕಥೆ:) ಒಬ್ಬ ಕಳ್ಳ ಒಬ್ಬ ಗುರು ಹತ್ತಿರ ಉಪದೇಶ ಕೇಳಲು ಹೋಗುತ್ತಿದ್ದ. ಸತ್ಯವನ್ನೇ ಹೇಳಬೇಕು ಎಂಬ ಗುರುಗಳ ಮಾತನ್ನು ಕೇಳಿದ ಕಳ್ಳ ನಾನು ನಿಜ ಹೇಳಿದರೆ ನನ್ನ ಜೀವನ ಹೇಗೆ ನಡೆಯಬೇಕು ಸ್ವಾಮಿ ಅಂದಾಗ ಗುರು ಹೇಳಿದರು: ಸತ್ಯದ ಮಾರ್ಗದಲ್ಲಿ ನಡೆಯದಿದ್ದರೂ ಪರವಾಗಿಲ್ಲ, ಯಾರಾದರೂ ಕೇಳಿದರೆ ಸತ್ಯವನ್ನೇ ಹೇಳು. ಅವನು ಒಮ್ಮೆ ದಾರಿಯಲ್ಲಿ ಹೋಗುತ್ತಿರುವಾಗ ಅವನನ್ನು ಒಬ್ಬರು ಕೇಳಿದರು: 'ಯಾವ ಕಡೆಗೆ ಪ್ರಯಾಣ?' ಕಳ್ಳ ಇಂಥವರ ಮನೆಗೆ ಕನ್ನ ಹಾಕಲು ಹೋಗುತ್ತಿದ್ದೇನೆ ಎಂದು ಸತ್ಯ ಹೇಳಿದರೆ ಅವನು ಸೀದಾ ಹೋಗುವುದು ಪೋಲಿಸ್ ಸ್ಟೇಷನ್ನಿಗೆ, ಜೈಲಿಗೆ!
ಕರ್ತವ್ಯ ಮತ್ತು ಮಾನಾಪಮಾನ
     ಪರಮಾತ್ಮ ಕಂಬದಂತೆ ಈ ಪ್ರಪಂಚ ಮತ್ತು ಆಕಾಶದಾಚೆಯಿರುವ ಪ್ರಪಂಚಗಳನ್ನೆಲ್ಲಾ ಆಧರಿಸಿದ್ದಾನೆ. ನಾವು ಸರ್ವಾಧಾರ ಪರಮಾತ್ಮನನ್ನು ಮರೆತುಬಿಡುತ್ತೇವೆ. ನಮಗೆ ಕಷ್ಟ ಬಂದಾಗ ಇನ್ನೇನಪ್ಪಾ ಗತಿ, ನಮ್ಮನ್ಯಾರು ಕಾಪಾಡುತ್ತಾರೆ ಅಂತ ಗೋಳಿಡುತ್ತೇವೆ. ಸರ್ವರಕ್ಷಕ ಅವನಿರುವಾಗ ಹೆದರುವುದು ಏಕೆ? ಹಿಂದೊಮ್ಮೆ ವಿಗ್ರಹಾರಾಧನೆ ವಿಷಯದಲ್ಲಿ ಚರ್ಚೆ ಏರ್ಪಾಡಾಯಿತು. ದಯಾನಂದರು ಒಂದು ಕಡೆ, ಕಾಶಿ ಪಂಡಿತರೆಲ್ಲಾ ಒಂದು ಕಡೆ. ಅಲ್ಲಿ ವಿಗ್ರಹಾರಾಧನೆ ವಿಷಯ ಬರಲೇ ಇಲ್ಲ. ವ್ಯಾಕರಣದ ಬಗ್ಗೆ ಕಿತ್ತಾಡಿದರು, ಆ ಸೂತ್ರ ಸರಿಯೋ ಈ ಸೂತ್ರ ಸರಿಯೋ ಅಂತ. ಎಲ್ಲಾ ಛಲ, ಕಪಟ. ಪ್ರತಿಮೆ ಇಲ್ಲದಿದ್ದರೆ ಮನಸ್ಸು ನಿಲ್ಲುವುದಿಲ್ಲ. ಪ್ರತಿಮಾರಾಧನೆ ಸಮರ್ಥಿಸುವ ವೇದಮಂತ್ರ ಇದು ಎಂದು ಕೈಯಲ್ಲಿ ಬರೆದಿದ್ದ ಯಾವುದೋ ಕಾಗದವನ್ನು ಒಬ್ಬರು ದಯಾನಂದರಿಗೆ ಕೊಟ್ಟರು. ಅವರು ಅದು ಯಾವ ವೇದದ ಮಂತ್ರ ಎಂದು ನೋಡುತ್ತಿರುವಾಗ ಕಾಶಿ ಪಂಡಿತರೆಲ್ಲಾ ದಯಾನಂದರಿಗೆ ಉತ್ತರ ಕೊಡಲಾಗಲಿಲ್ಲ ಎಂದು ಎದ್ದುಬಿಟ್ಟರು. ಸಭೆಯಲ್ಲಿ ಗಲಾಟೆಯಾಯಿತು. ಪುಂಡರೂ ಅಲ್ಲಿ ಸೇರಿದ್ದು ದಯಾನಂದರ ಮೇಲೆ ಕಲ್ಲು, ಇಟ್ಟಿಗೆ ಚೂರುಗಳಿಂದ ಪ್ರಹಾರ ಮಾಡಿದರು. ಆ ಮಹಾತ್ಮ ಸಹಿಸಿಕೊಂಡು ಸ್ವಲ್ಪವೂ ಅಲುಗಾಡದೆ ಶಾಂತವಾಗಿದ್ದರು. ಶಾಸ್ತ್ರಾರ್ಥದ ಗತಿ ಹೀಗಾಯಿತು. ಸುಳ್ಳು ಗೆದ್ದಿತು. ಸತ್ಯ ಗೆಲ್ಲಲಿಲ್ಲ. ವಿಷಯ ತಿಳಿದ ಸಂತ ಈಶ್ವರ ಸಿಂಹ ಎಂಬ ಸಿಖ್ಖರ ಗುರು ಒಬ್ಬರು ದಯಾನಂದರನ್ನು ಕಾಣಲು ಬಂದರು. ದಯಾನಂದರ ಹತ್ತಿರ ಗಂಟೆಗಟ್ಟಲೇ ಮಾತನಾಡಿದರೂ ದಯಾನಂದರು ಗಲಾಟೆಯ ವಿಷಯ ಎತ್ತಲೇ ಇಲ್ಲ. ದಯಾನಂದರು ಹೊದ್ದಿದ್ದ ಶಾಲು ಜಾರಿದಾಗ ಅವರ ಎದೆಯ ಮೇಲೆ ಕಲ್ಲಿನ ಹೊಡೆತದಿಂದಾಗಿದ್ದ ಗಾಯ ಕಂಡಿತು. ಸಿಖ್ ಗುರು (ಮರುಗಿ) ವಿಚಾರಿಸಿ ಬಹಳ ಗಲಾಟೆಯಾಗಿದೆ. ಇಂದು ರಾತ್ರಿ ಕಳೆಯುವವವರೆಗಾದರೂ ಎಲ್ಲಾದರೂ ಅಡಗಿಕೊಂಡಿರುವುದು ಒಳ್ಳೆಯದು ಎಂದು ಸಲಹೆ ಕೊಟ್ಟರು. ದಯಾನಂದರು ಹೇಳಿದರು: ನನ್ನ ಕರ್ತವ್ಯ ನಾನು ಮಾಡಿದ್ದೇನೆ. ಮಾನ, ಅವಮಾನಗಳಿಗೆ, ಕಷ್ಟ, ನಷ್ಟಗಳಿಗೆ ಅಂಜಿದರೆ ಸನ್ಯಾಸಿಗಳಿಗೆ ಸೇವೆ ಮಾಡಲಾಗುವುದಿಲ್ಲ. ಇಂದು ಕಲ್ಲು, ಇಟ್ಟಿಗೆಗಳಿಂದ ಹೊಡೆದಿದ್ದಾರೆ. ನಾಳೆ ಪುಷ್ಪವೃಷ್ಠಿ ಮಾಡುತ್ತಾರೆ. ಸುಖ-ದುಃಖಗಳೆರಡೂ ಕೂಡ ಆ ಭಗವಂತ ಕೊಟ್ಟ ವರದಾನ. ನಿಷ್ಠೆಯಿಂದ ಸತ್ಯ ಬಿಡದಿರುವುದೇ ನಮ್ಮ ಧರ್ಮ. ಪ್ರಪಂಚವೆಲ್ಲಾ ಎದುರಾಗಲಿ, ರಕ್ಷಿಸುವ ಪರಮಾತ್ಮ ರಕ್ಷಣೆ ಕೊಟ್ಟೇ ಕೊಡುತ್ತಾನೆ. ಜ್ಞಾಪಕ ಇಟ್ಟುಕೊಳ್ಳಿ, ಸತ್ಯದ ದಾರಿ ಯಾವತ್ತೂ ಸುಲಭವಲ್ಲ.
ದೇವರೆಲ್ಲಿದ್ದಾನೆ?
     ದೇವರು ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಎಲ್ಲೆಲ್ಲೂ ವ್ಯಾಪಿಸಿದ್ದಾನೆ. ಅವನು ಸರ್ವರಕ್ಷಕ, ಸರ್ವಶಕ್ತ, ಯಾರೂ ಅವನನ್ನು ಬಗ್ಗಿಸಲು ಸಾಧ್ಯವಿಲ್ಲ. ಹಾಗಿದ್ದಾಗ ನನ್ನ ದೇವರು ತಿರುಪತಿಯಲ್ಲಿದ್ದಾನೆ, ನನ್ನ ದೇವರು ರಾಮೇಶ್ವರದಲ್ಲಿದ್ದಾನೆ, ಅಲ್ಲಿದ್ದಾನೆ, ಇಲ್ಲಿದ್ದಾನೆ, ಆ ವಿಗ್ರಹದಲ್ಲಿದ್ದಾನೆ, ಈ ವಿಗ್ರಹದಲ್ಲಿದ್ದಾನೆ ಎನ್ನುವುದು ಎಷ್ಟು ಸರಿ? ಸೋಮೇಶ್ವರ ದೇವಸ್ಥಾನದ ಮೇಲೆ ಘಜನಿ ಮಹಮದ್ ಬಾರಿ ಬಾರಿ ದಾಳಿ ಮಾಡಿದ. ದೇವಸ್ಥಾನ ಧ್ವಂಸ ಮಾಡಿದ. ಸೋಮೇಶ್ವರ ತನ್ನನ್ನು ತಾನೇ ರಕ್ಷಣೆ ಮಾಡಿಕೊಂಡನೆ? ಘಜನಿ ಮಹಮದ್ ಗೆದ್ದ, ಸೋಮೇಶ್ವರ ಸೋತ! ಆ ವಿಗ್ರಹ ನಿಜವಾಗಿ ದೇವರಾಗಿದ್ದರೆ ಎಂದೂ ಆ ಸ್ಥಿತಿ ಬರುತ್ತಿರಲಿಲ್ಲ. ನಾನು ಹೇಳುತ್ತಾ ಇರುತ್ತೇನೆ, ನನಗೆ ಭಗವಂತನ ಭಯ ಇಲ್ಲ, ಅವನ ಭಕ್ತರ ಭಯ! ನಾನು ಹೀಗೆ ಹೇಳಿದರೆ ಅವರಿಗೆ ಕೋಪ ಬರುತ್ತೆ. ನನ್ನನ್ನು ನಾಸ್ತಿಕ ಎನ್ನುತ್ತಾರೆ. ಗೊಂಬೆಯನ್ನು ದೇವರು ಎಂದು ನಂಬದಿದ್ದರೆ ನಾಸ್ತಿಕ ಎನ್ನುವುದಾದರೆ ನಾನು ನಾಸ್ತಿಕನೇ. ದೇವರಿಲ್ಲದಿದ್ದರೆ ಈ ಪ್ರಪಂಚ ಇರುತ್ತಿರಲಿಲ್ಲ. ಆ ಪರಮಾತ್ಮ ಕರ್ತ-ಧರ್ತ-ಸಂಹರ್ತ. ಪ್ರಪಂಚ ಸೃಷ್ಟಿ ಮಾಡುವವನು, ರಕ್ಷಿಸುವವನು ಮತ್ತು ನಾಶ ಮಾಡುವವನು ಅವನೇ. ಆ ದೇವರು ಕಾಣುವುದಿಲ್ಲ, ಅದಕ್ಕೇ ನಂಬುವುದಿಲ್ಲ ಅಂದರೆ ಬಹಳ ಕಷ್ಟ. ಕಣ್ಣಿಗೆ ಕಾಣುವುದಕ್ಕಿಂತ ಕಾಣಿಸದಿರುವುದೇ ಹೆಚ್ಚು. ವಾಯು ಇದೆ, ಕಣ್ಣಿಗೆ ಕಾಣುತ್ತಾ? ಆಕಾಶ ಇದೆ, ಅದನ್ನು ಕಾಣಲು ಎಷ್ಟು ಮೇಲಕ್ಕೆ ಹೋದರೆ ಅದು ಅಷ್ಟೂ ಮೇಲಕ್ಕೆ ಹೋಗುತ್ತೆ. ಏಕೆಂದರೆ ಅಲ್ಲಿ ಏನೂ ಇಲ್ಲ, ಶೂನ್ಯ. ಆ ಶೂನ್ಯಕ್ಕೆ ಹದ್ದು ಕಟ್ಟಲು ಸಾಧ್ಯವೇ? ಇಷ್ಟೇ ಉದ್ದ, ಇಷ್ಟೇ ಅಗಲ, ಇಷ್ಟೇ ಎತ್ತರ ಎಂದು ನಿಗದಿ ಪಡಿಸಲು ಸಾಧ್ಯವೇ? ಆ ಪರಮಾತ್ಮ ಇದ್ದಾನೆ, ಅವನು ಶೂನ್ಯ ಅಲ್ಲ. ಅವನಿರುವುದರಿಂದಲೇ ಈ ಸೂರ್ಯ, ಚಂದ್ರ, ಭೂಮಿ, ಬ್ರಹ್ಮಾಂಡ ಎಲ್ಲಾ! ಆ ಭಗವಂತ ಎಷ್ಟು ಪ್ರಕಾಶಮಯವೆಂದರೆ ಅವನೆದುರಿಗೆ ಈ ಸೂರ್ಯ ಯಾವ ಲೆಕ್ಕಕ್ಕೂ ಇಲ್ಲ. ಆ ಸೂರ್ಯನೇ ಲೆಕ್ಕಕ್ಕಿಲ್ಲವೆಂದರೆ ಚಂದ್ರನ ಪಾಡೇನು? ನಕ್ಷತ್ರಗಳೂ ಅಷ್ಟೆ. ಆ ಪರಮಾತ್ಮನ ಜ್ಯೋತಿಯಿಂದಲೇ ಇವೆಲ್ಲಾ ಬೆಳಗುತ್ತಿವೆ. ಅಂತಹ ಜ್ಯೋತಿರ್ಮಯನಾದ ಪರಮಾತ್ಮನನ್ನು ಬಿಟ್ಟು ಯಾವತ್ತು ಕಲ್ಲು, ಮಣ್ಣು, ಮರಗಳಿಂದ ಮಾಡಿದ ಗೊಂಬೆಗಳನ್ನು ಪೂಜಿಸಲು ಪ್ರಾರಂಭಿಸಿದೆವೋ ಅವತ್ತಿನಿಂದಲೇ ನಮ್ಮ ಪತನ ಆರಂಭವಾಯಿತು. 
ನಾವೇನು ಮಾಡಬೇಕು?
     ಬೇರೆಯವರು ಮುಂದಕ್ಕೆ ಹೋಗುತ್ತಿದ್ದಾರೆ. ಮುಸ್ಲಿಮರಾಗಲಿ, ಕ್ರಿಶ್ಚಿಯನರಾಗಲಿ ಅವರ ಸಂಖ್ಯೆ ಜಾಸ್ತಿಯಾಗುತ್ತಾ ಇದೆ. ನಮ್ಮದೇ ಯಾಕೆ ಪೀಕಲಾಟ? ಯಾಕೆ? ಅವರು ಬುದ್ಧಿಪೂರ್ವಕವಾಗಿ ಕೆಲಸ ಮಾಡುತ್ತಿದ್ದಾರೆ. ಬಡವರಿಗೆ ಅನ್ನ ಬೇಕು, ಅನ್ನ ಕೊಡುತ್ತಾರೆ, ಬಟ್ಟೆ ಬೇಕು, ಕೊಡುತ್ತಾರೆ, ಮನೆ ಬೇಕು, ಕಟ್ಟಿಸಿಕೊಡುತ್ತಾರೆ. ಹೀಗೆ ಮಾಡಿ ಮಾಡಿ ಕ್ರಿಶ್ಚಿಯನರು ತಮ್ಮ ಸಂಖ್ಯೆ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ. ನಾವು? ನಮ್ಮವರು ಬಡವರಾ? ಕೋಟ್ಯಾಧೀಶರಿದ್ದಾರೆ. ಪೇಪರಿನಲ್ಲಿ ಓದಿರಬಹುದು. ಆ ತಿರುಪತಿ ದೇವರಿಗೆ ೪೫ ಕೋಟಿ ಬೆಲೆ ಬಾಳುವ ವಜ್ರದ ಕಿರೀಟ ಮಾಡಿಸಿಕೊಡುತ್ತಾರೆ. ಆ ಗೊಂಬೆಗೆ ಏನು ಗೊತ್ತಾಗುತ್ತೆ? ಆ ವಜ್ರದ ಕಿರೀಟ ಇಡಿ, ತೆಗೆದು ಹಾಕಿ, ಮುಳ್ಳಿನ ಕಂತೆ ಇಡಿ, ಏನು ಮಾಡಿದರೂ ಸುಮ್ಮನಿರುತ್ತೆ. ಅದೇ ಹಸಿವಿರುವವರಿಗೆ ಅನ್ನ ಹಾಕುವುದಿಲ್ಲ. ಪೂರ್ಣ ತೃಪ್ತನಿಗೆ ನಾವು ಏನಾದರೂ ಕೊಟ್ಟು ತೃಪ್ತಿ ಕೊಡಲು ಸಾಧ್ಯವೇ? ದೇವರಿಗೆ ನೈವೇದ್ಯ ಅಂತ ಇಡ್ತೀವಿ. ಯಾವುದು ಆ ನೈವೇದ್ಯ? ಎಲ್ಲಿಂದ ಬಂತು? ತೆಂಗಿನಕಾಯಿಯಾಗಲಿ, ಹಣ್ಣು ಹಂಪಲಾಗಲೀ ಎಲ್ಲಿಂದ ಬಂತು? ನಾವು ಮಾಡಿದ್ದಾ? ಅದೂ ಭಗವಂತನದೇ. ಅವನದ್ದನ್ನೇ ಅವನಿಗೆ ಕೊಟ್ಟಂತೆ ಮಾಡಿ, ನಾವು ಹೇಳುತ್ತೇವೆ, ನಾನು ಭಗವದ್ಭಕ್ತ, ಅವನಿಗಾಗಿ ಇಷ್ಟೊಂದು ಖರ್ಚು ಮಾಡಿದ್ದೇನೆ, ಅಂತ.
ದೇವರು ಮೆಚ್ಚುವ ಕೆಲಸ ಮಾಡೋಣ
     ದುಡಿಯಬೇಕು, ತಿನ್ನಬೇಕು, ಅದು ನಿಜವಾದ ಊಟ. ತಿನ್ನುವವರೇ ತುಂಬಾ ಇದ್ದು, ದುಡಿಯುವವರು ಇಲ್ಲದಿದ್ದರೆ! ಅನ್ನ ಎಲ್ಲಿಂದ ಬರಬೇಕು? ತುಂಬಾ ಕಷ್ಟ. ಸರ್ವಾಧಾರ ಪರಮಾತ್ಮ ಎಲ್ಲರಿಗೂ ಆಧಾರ ಹೌದು, ಆದರೆ ಸೋಮಾರಿಗಳ ಬಂಧು ಅಲ್ಲ. ಪರಮಾತ್ಮ ಎಲ್ಲರಿಗೂ ಕೊಡುತ್ತಾನೆ, ಯಾರಿಗೆ ಕೊಡುತ್ತಾನೆ? ದುಡಿಯುವವರಿಗೆ ಕೊಡುತ್ತಾನೆ. ವೇದ ಹೇಳುತ್ತೆ, ಕಷ್ಟ ಪಡು, ದುಡಿ, ಬೇರೆಯವರ ಶ್ರಮದ ಊಟ ನಮಗೆ ಬೇಡ, ನಮ್ಮ ಅನ್ನವನ್ನು ನಾವು ಸಂಪಾದಿಸೋಣ, ವೇದ ಹೀಗೆ ಹೇಳಿದರೆ ಇಂದು ನಾವು ನೋಡುತ್ತಿರುವುದೇನು? ಮನೆಯಲ್ಲಿ ಸಮಾರಂಭ, ಪೂಜೆ ಮಾಡಿ ಹೊಟ್ಟೆ ತುಂಬಿದವರಿಗೇ ಊಟ ಹಾಕುತ್ತೇವೆ, ಹಸಿದ ಭಿಕ್ಷುಕ ಹೊರಗೆ ಬೇಡಿ ಬಂದರೆ 'ಹೋಗಲೇ' ಅಂತ ಗದರಿಸಿ ಕಳಿಸಿಬಿಡುತ್ತೇವೆ. ಇದು ದಾನ ಮಾಡುವ ರೀತಿಯಾ? ಹಸಿದವರಿಗೆ ಅನ್ನ ಹಾಕಿ, ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡಿ, ಮನೆಯಿಲ್ಲದವರಿಗೆ ಮನೆ ಕಟ್ಟಿಸಿಕೊಡಿ,  ಇದು ಪುಣ್ಯದ ಕೆಲಸ. ಇದು ನಿಮ್ಮ ಕರ್ತವ್ಯ. ಇದು ಬಿಟ್ಟು ಸ್ವಾರ್ಥಿಗಳಾಗಿ ನಿಮ್ಮ ಅಭಿವೃದ್ಧಿ ಮಾತ್ರ ಮಾಡಿಕೊಂಡರೆ ಅದು ದೇವರು ಮೆಚ್ಚುವ ಕೆಲಸವಲ್ಲ. ಯಾವತ್ತೂ ಕೂಡ ಸ್ವಾರ್ಥಿಗೆ ತಾನು ಮಾಡುವುದು ತಪ್ಪು ಅಂತ ಅನ್ನಿಸುವುದೇ ಇಲ್ಲ. ನನ್ನ ಅನ್ನ ಸಂಪಾದಿಸಿ ತಿನ್ನುತ್ತೇನೆ, ಆ ಸಂಪಾದನೆ ಹೇಗಾದರೂ ಸರಿ, ಹತ್ತು ಜನರ ತಲೆ ಒಡೆದಾದರೂ ಸರಿ, ಅನ್ನುವುದು ಅವರ ಮಾತು. ಬೇರೆಯವರ ಶ್ರಮದ ಫಲವನ್ನು ಕಿತ್ತುಕೊಂಡು ಅನ್ಯಾಯವಾಗಿ ಹಣ ಸಂಗ್ರಹಿಸುವವರನ್ನು ಇಂದು ಕಾಣುತ್ತಿದ್ದೇವೆ. 'ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ| ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ||' - ಈ ಮಂತ್ರದ ಅರ್ಥ, ನೂರು ಕೈಗಳಿಂದ ದುಡಿ, ಸಾವಿರ ಕೈಗಳಿಂದ ದಾನ ಮಾಡು ಅಂತ. ಇದರ ಅರ್ಥ ನಿಮಗಾಗಿ ಮಾತ್ರ, ನಿಮ್ಮ ಕುಟುಂಬಕ್ಕಾಗಿ ಮಾತ್ರ ನೀವು ದುಡಿಯಬಾರದು. ಸಮಾಜದ ಹಿತವನ್ನೂ ಪರಿಗಣಿಸಬೇಕು ಎಂದು. ಈ ಮಾತು ಎಲ್ಲರಿಗೂ ಅನ್ವಯಿಸುತ್ತೆ, ಬ್ರಹ್ಮಚಾರಿ, ಗೃಹಸ್ಥ, ಸನ್ಯಾಸಿ, ಎಲ್ಲರಿಗೂ ಅನ್ವಯಿಸುತ್ತೆ. ಎಲ್ಲರ ಸುಖದಲ್ಲಿ ನಮ್ಮ ಸುಖ ಇದೆ. 'ಸರ್ವೇಜನಾಃ ಸುಖಿನೋ ಭವಂತು'- ಎಲ್ಲರೂ ಅನ್ನುವಲ್ಲಿ ನಾವೂ ಸೇರುತ್ತೇವೆ. ಎಲ್ಲರಿಗೂ ಸಿಕ್ಕಿದರೆ ನಮಗೂ ಸಿಗುತ್ತೆ, ಯಾರಿಗೂ ಸಿಗದಿದ್ದರೆ ನಮಗೂ ಇಲ್ಲ ಅಷ್ಟೆ. ಇದು ಈ ವೇದ ಮಂತ್ರದ ಅರ್ಥ. ಅರ್ಥ ಮಾಡಿಕೊಂಡು ಅನುಸರಿಸಿದರೆ ನಮ್ಮದು ಶ್ರೇಷ್ಠ ಜೀವನವಾಗುತ್ತದೆ. 
. . . .ಮುಂದುವರೆಯುವುದು. . . .
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/05/blog-post.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ