ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಅಕ್ಟೋಬರ್ 17, 2011

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೧

     ಮಾನವಸಮತಾ ಭಾವನೆಯನ್ನು ವೇದಗಳಿಗಿಂತ ಚೆನ್ನಾಗಿ ಪ್ರತಿಪಾದಿಸುವ ಶಾಸ್ತ್ರ ಜಗತ್ತಿನಲ್ಲಿ ಬೇರಾವುದೂ ಇಲ್ಲ. ವಿಷಯ ಪ್ರವೇಶದಲ್ಲೇ ವೇದಗಳು ಮಾನವ ಮಾತ್ರರನ್ನು ದೇವಪುತ್ರರು, ಋಷಿಗಳು, ಅಮೃತನಾದ ಪ್ರಭುವಿನ ಮಕ್ಕಳು ಎಂದು ಕರೆದಿರುವುದನ್ನು ಪಾಠಕರು ನೋಡಿದ್ದಾರೆ. ಸಮಾನತೆ ವೇದೋಪದೇಶದ ಒಂದು ಆಧಾರ ಶಿಲೆ. ಈ ಕೆಳಗಿನ ಮಂತ್ರವನ್ನೇ ನೋಡಿರಿ:-
ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ |
ಯುವಾ ವಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ || (ಋಕ್.೫.೬೦.೫.)
     [ಏತೇ] ಈ ಮಾನವರು, [ಅಜ್ಯೇಷ್ಠಾಸಃ] ಯಾರೂ ದೊಡ್ಡವರಲ್ಲ. [ಅಕನಿಷ್ಠಾಃ] ಇವರು ಯಾರೂ ಚಿಕ್ಕವರೂ ಅಲ್ಲ. [ಸಂ ಭ್ರಾತರಃ] ಇವರು ಪರಸ್ಪರ ಸಹೋದರರು. [ಸೌಭಗಾಯ] ಸೌಭಾಗ್ಯಪ್ರಾಪ್ತಿಗಾಗಿ [ವಾವೃಧುಃ] ಮುಂದುವರೆಯುತ್ತಾರೆ. [ಯುವಾ ಸೃಪಾ ರುದ್ರಃ] ಅಜರನೂ, ಆತ್ಮರಕ್ಷಕನೂ, ದುಷ್ಟರಿಗೆ ದಂಡ ನೀಡುವವನೂ ಆದ ಪ್ರಭುವು, [ಏಷಾಂ ಪಿತಾ] ಇವರೆಲ್ಲರ ತಂದೆ. [ಪೃಶ್ನಿಃ] ಭೂಮಾತೆ, [ಮರುದ್ಭ್ಯಃ] ಈ ಮರ್ತ್ಯರಿಗೆಲ್ಲಾ [ಸುದುಘಾ] ಉತ್ತಮ ಶಕ್ತಿಯನ್ನೆರೆಯುವವಳೂ [ಸುದಿನಾ] ಉತ್ತಮ ದಿನಗಳನ್ನು ತೋರಿಸುವವಳೂ ಆಗಿದ್ದಾಳೆ.
     ಇನ್ನೊಂದೆಡೆ ಅದೇ ವೇದ, ಇದೇ ಸಮಾನತೆಯ ಮತ್ತು ಭ್ರಾತೃತ್ವದ ಸಂದೇಶವನ್ನು ಸಾರಿ, ಕೊನೆಗೆ - ಸುಜಾತಾಸೋ ಜನುಷಾ ಪೃಶ್ನಿಮಾತರೋ ದಿವೋ ಮರ್ಯಾಃ|| (ಋಕ್. ೫.೫೯.೬.) ಅಂದರೆ ಇವರೆಲ್ಲಾ [ಪೃಶ್ನಿಮಾತರಃ] ಭೂಮಿಯನ್ನೇ ತಾಯಿಯಾಗಿ ಹೊಂದಿರುವವರೂ, [ದಿವಃ ಮರ್ಯಾಃ] ಜ್ಯೋತಿರ್ಮಯ ಪ್ರಭುವಿನ ಮಕ್ಕಳಾದ ಮಾನವರೂ ಆದಕಾರಣ [ಜನುಷಾ ಸುಜಾತಾಸಃ] ಜನ್ಮದಿಂದ ಉತ್ತಮ ಕುಲೀನರೇ ಆಗಿದ್ದಾರೆ ಎನ್ನುತ್ತದೆ.
**************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ