ಯಜುರ್ವೇದಲ್ಲಿ ತತೋ ವಿರಾಡಾಜಾಯತ || (ಯಜು.೩೧.೫.) - ಅನಂತರ ವಿರಾಟ್ ಉದ್ಭವಿಸಿತು - ಎಂದು ಹೇಳಿದೆ. ಈ ವಿರಾಟ್ ಒಂದು ಪುರುಷನ ರೂಪದಲ್ಲಿ ಊಹಿಸಲ್ಪಟ್ಟಿದೆ. ಆಮೇಲೆ ಪ್ರಶ್ನೆ ಎತ್ತಲ್ಪಟ್ಟಿದೆ.
ಮುಖಂ ಕಿಮಸ್ಯಾಸೀತ್ ಕಿಂ ಬಾಹೂ ಕಿಮೂರೂ ಪಾದಾ ಉಚ್ಯೇತೇ || (ಯಜು.೩೧.೧೦.)
[ಅಸ್ಯ] ಈ ವಿರಾಟ್ ಪುರುಷನ [ಮುಖಂ ಕಿಂ ಆಸೀತ್] ಮುಖ ಯಾವುದಾಯಿತು? [ಬಾಹೂ ಕಿಂ] ಬಾಹುಗಳು ಯಾವುವು? [ಊರೂ ಪಾದೌ ಕಿಂ ಉಚ್ಯೇತೇ] ಯಾವುದು ತೊಡೆಗಳು, ಪಾದಗಳು ಎಂದು ಹೇಳಲ್ಪಟ್ಟಿತು?
ಈ ಪ್ರಶ್ನೆಗಳಿಗೆ ಉತ್ತರವಾಗಿ ಕೆಳಗಿನ ಮಂತ್ರವಿದೆ:-
ಬ್ರಾಹ್ಮಣೋsಸ್ಯ ಮುಖಮಾಸೀದ್ಬಾಹೂ ರಾಜನ್ಯ ಕೃತಃ | ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ || (ಯಜು.೩೧.೧೧.)
[ಬ್ರಾಹ್ಮಣಃ] ಬ್ರಾಹ್ಮಣನು [ಅಸ್ಯ ಮುಖಂ ಆಸೀತ್] ಈ ವಿರಾಟ್ ಪುರುಷನ ಮುಖವಾದನು. [ರಾಜನ್ಯಃ] ಕ್ಷತ್ರಿಯನು [ಬಾಹೂ ಕೃತಃ] ತೋಳುಗಳಾಗಿ ಮಾಡಲ್ಪಟ್ಟನು. [ಯತ್ ವೈಶ್ಯಃ] ವೈಶ್ಯನು ಯಾವನಿದ್ದಾನೋ [ತತ್ ಅಸ್ಯ ಊರೂ] ಅವನು ಇವನ ತೊಡೆಗಳು. [ಪದ್ಬ್ಯಾಂ] ಪಾದಗಳಿಗಾಗಿ [ಶೂದ್ರಃ ಅಜಾಯತ] ಶೂದ್ರನು ಉದ್ಭವಿಸಿದನು.
ವಿರಾಟ್ ಪುರುಷನ ಬೇರೆ ಬೇರೆ ಅಂಗಗಳ ರೂಪದಲ್ಲಿ ವರ್ಣಗಳು ವರ್ಣಿತವಾಗಿವೆ. ರೂಪಕ ಅತ್ಯಂತ ಸಾರಗರ್ಭಿತವಾಗಿದೆ. ಮುಖದಲ್ಲಿಯೇ ಪಂಚ ಜ್ಞಾನೇಂದ್ರಿಯಗಳೂ, ವಾಗಿಂದ್ರಿಯವೂ ಅಡಗಿದೆ. ಇವು ವ್ಯಷ್ಟಿ ಶರೀರದಲ್ಲಿ ಮಾಡುವುದು ಜ್ಞಾನಸಂಬಂಧದ ಕಾರ್ಯಗಳನ್ನು. ವಾಗಿಂದ್ರಿಯ ಪರರಿಗೆ ತನ್ನ ಭಾವನೆಗಳನ್ನು ಸೂಚಿಸುವ ಸಾಧನ. ಈ ಜ್ಞಾನಕ್ಕೆ ಸಂಬಂಧಿಸಿದ ಮತ್ತು ಜ್ಞಾನ ಪ್ರಸಾರದ ಕಾರ್ಯವನ್ನು ಸಮಾಜದಲ್ಲಿ ಮಾಡುವವನೇ ಬ್ರಾಹ್ಮಣ.
ವ್ಯಷ್ಟಿ ಶರೀರದಲ್ಲಿ ಬಾಹುಗಳ ಮುಖ್ಯ ಕಾರ್ಯ ರಕ್ಷಣೆ. ಈ ರಕ್ಷಣಾ ಕಾರ್ಯವನ್ನು ಸಮಾಜದಲ್ಲಿ ನಿರ್ವಹಿಸುವವನೇ ಕ್ಷತ್ರಿಯ.
ತೊಡೆಗಳು ಎಂಬ ಶಬ್ದಕ್ಕೆ ಬದಲು ಅಥರ್ವವೇದದಲ್ಲಿ ಮಧ್ಯಂ ತದಸ್ಯ ಯದ್ವೈಶ್ಯಃ|| (ಅಥರ್ವ. ೧೯.೬.೬.) - ವೈಶ್ಯನು ವಿರಾಟ್ ಪರುಷನ ಮಧ್ಯಭಾಗ - ಎಂದು ಹೇಳಿ ಭಾವನೆಯನ್ನು ಸ್ಪಷ್ಟಪಡಿಸಿದೆ. ವ್ಯಷ್ಟಿಶರೀರದ ಮಧ್ಯಭಾಗ ಎಂದರೆ ಮುಂಡದಲ್ಲಿಯೇ ಜೀವನವನ್ನು ನಿರ್ವಹಿಸಲು ಆವಶ್ಯಕವಾದ ಹೃದಯ, ಶ್ವಾಸಕೋಶಗಳು, ಜಠರ, ಆಹಾರ ಜೀರ್ಣಾಂಗಗಳು, ಮಲ-ಮೂತ್ರ ವಿಸರ್ಜನಾಂಗಗಳು, ಪ್ರಜನನೇಂದ್ರಿಯ ಎಲ್ಲವೂ ಇವೆ. ಇವೆಲ್ಲಾ ಮಾಡುವ ಕಾರ್ಯಗಳು ವಿವಿಧವಾದರೂ, ಆಹಾರ ಪಚನ, ಸರ್ವೇಂದ್ರಿಯಗಳಿಗೂ ರಕ್ತದಾನ ಇವೇ ಅತಿ ಮುಖ್ಯವೆನ್ನಬಹುದು. ಸಮಾಜದಲ್ಲಿ ಇದೇ ರೀತಿ ಸಂಪದರ್ಜನ ಮತ್ತು ವಿಭಜನ ಮಾಡುವವನು ವೈಶ್ಯನು.
ವ್ಯಷ್ಟಿಶರೀರದಲ್ಲಿ ಪಾದಗಳ ಸ್ಥಾನ ಕೀಳುದರ್ಜೆಯದಲ್ಲ. ಸಂಪೂರ್ಣ ಶರೀರ ನಿಂತಿರುವುದೇ ಪಾದಗಳ ಮೇಲೆ. ಉದ್ದಿಷ್ಟ ಸ್ಥಾನಕ್ಕೆ ದೇಹವನ್ನು ಒಯ್ಯುವುದೂ ಪಾದಗಳೇ! ಸಮಾಜದಲ್ಲಿ ಇದೇ ರೀತಿ ಶಾರೀರಿಕ ಶ್ರಮ ಮಾಡುವವನೇ ಶೂದ್ರ.
ರೂಪಕ ಅತಿ ಭವ್ಯ. ದೇಹಕ್ಕೆ ಯಾವ ಅಂಗ ಬೇಕು, ಯಾವ ಅಂಗ ಬೇಡ? ಎಲ್ಲವೂ ತಮ್ಮ ತಮ್ಮ ಸ್ಥಾನದಲ್ಲಿ ಪ್ರಧಾನವೇ! ಯಾವುದಿಲ್ಲದಿದ್ದರೂ ಶರೀರ ಅಪೂರ್ಣವೇ. ತಲೆ ಮೇಲು, ಕಾಲು ಕೀಳು - ಎಂದು ಭಾವಿಸುವುದು ಮಹಾನ್ ಭ್ರಮೆ. ಕಾಲಿಗೆ ಮುಳ್ಳು ಚುಚ್ಚಿದರೆ ಮೊದಲು 'ಹಾ' ಎನ್ನುವುದು ಬಾಯಿ-ಬ್ರಾಹ್ಮಣ; ಆ ಮುಳ್ಳನ್ನು ಕಿತ್ತೆಸೆಯುವುದು ಬಾಹು-ಕ್ಷತ್ರಿಯ. ಪ್ರತಿಯೊಂದು ಅಂಗ ಪರಸ್ಪರಾಶ್ರಿತ. ಇದೇ ರೀತಿ ಸಮಾಜದಲ್ಲಿ ಬ್ರಾಹ್ಮಣರು. ಕ್ಷತ್ರಿಯರು, ವೈಶ್ಯರು, ಶೂದ್ರರು ಪರಸ್ಪರ ವೈರಿಗಳಲ್ಲ, ಪರಸ್ಪರ ಆಶ್ರಿತರು.
ಬೌದ್ಧಿಕ ಪರಿಶ್ರಮ, ಬಾಹುಬಲ ಸಂಯೋಜನ, ವ್ಯಾಪಾರೋದ್ಯಮ, ಕೃಷಿಸಾಧನ ಹಾಗೂ ಶಾರೀರಿಕ ಪರಿಶ್ರಮ - ಈ ನಾಲ್ಕು ಸೇವಾಸಾಧನಗಳಿವೆ. ಇವನ್ನು ವರ್ಣಗಳು ಎನ್ನುತ್ತಾರೆ. ವರ್ಣ ಎಂಬ ಶಬ್ದದ ಅರ್ಥ 'ಆರಿಸಿಕೊಳ್ಳುವ ತತ್ತ್ವ' ಎಂದು. ವರ್ಣ, ಜಾತಿಯಂತೆ ಹುಟ್ಟಿ ಬರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಗುಣ-ಕರ್ಮ-ಸ್ವಭಾವಕ್ಕನುಸಾರ, ತನ್ನ ವರ್ಣವನ್ನು ಆರಿಸಿಕೊಳ್ಳುತ್ತಾನೆ. ಹುಟ್ಟಿದ ಕುಲ, ಈ ಬಗೆ ಆರಿಸುವಿಕೆಗೆ ನೆರವಾಗಬಹುದು. ಅಂದರೆ, ಬ್ರಾಹ್ಮಣನ ಮಗ ಬ್ರಾಹ್ಮಣನಾಗಬಹುದು, ಆಗದೆಯೂ ಇರಬಹುದು. ವರ್ಣದಲ್ಲಿ ವ್ಯಕ್ತಿಗತ ಸಾಮರ್ಥ್ಯಾಭಿರುಚಿಗಳಿಗೆ ಪ್ರಾಧಾನ್ಯವೇ ಹೊರತು ಕುಲ ಅಥವಾ ಪರಂಪರೆಗಲ್ಲ. ಕೆಲವರಿಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಶಬ್ದಗಳು ರುಚಿಸದಿರಬಹುದು. ಆದರೆ, ರಾಷ್ಟ್ರ ಆಸ್ತಿಕವೇ ಆಗಿರಲಿ, ನಾಸ್ತಿಕವೇ ಆಗಿರಲಿ, ಬುದ್ಧಿಜೀವಿ, ಶಕ್ತಿಜೀವಿ, ವ್ಯಾಪಾರೋದ್ಯಮಜೀವಿ, ಶ್ರಮಜೀವಿ ಇದ್ದೇ ಇರುತ್ತಾರೆ. ಈ ನೈಸರ್ಗಿಕ ವಿಭಾಗಗಳಿಗೆ ಸೊನ್ನೆ ಸುತ್ತಿ, ಎಲ್ಲರ ತಲೆಗೂ ಒಂದೇ ವೃತ್ತಿಯನ್ನು ಸುತ್ತುವ ಪ್ರಯತ್ನ ಎಂದಿಗೂ ಸಫಲವಾಗದು.
***************
ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೪ ಕ್ಕೆ ಲಿಂಕ್: http://vedajeevana.blogspot.in/2011/12/blog-post_15.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ