ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ಜನಪ್ರಿಯ ಗಾದೆ. ಇದರ ಅರ್ಥ - ಯಾರು ಸರಿಯಾದ ಕ್ರಮದಲ್ಲಿ ಆಹಾರವನ್ನು ಸೇವಿಸಬಲ್ಲರೋ ಅವರು ಆರೋಗ್ಯವಂತರಾಗುವರು ಎಂದು. ನಮ್ಮ ಆಹಾರ ಕ್ರಮ ಹೇಗಿರಬೇಕು ಎಂಬುದನ್ನು ಆಯುರ್ವೇದ ಬಹು ಸೂಕ್ಷ್ಮವಾಗಿ ಮತ್ತು ಸ್ಪಷ್ಟವಾಗಿ ನಿರೂಪಿಸುತ್ತದೆ.
ಪ್ರಪ್ರಥಮವಾಗಿ ನಮ್ಮ ಆಹಾರ ಷಡ್ರಸೋಪೇತವಾಗಿರಬೇಕು. ಅಂದರೆ ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು - ಈ ಆರೂ ರಸಗಳು ಸರಿಯಾದ ಪ್ರಮಾಣದಲ್ಲಿ ಆಹಾರದಲ್ಲಿ ಇರಬೇಕು. ಇದರಿಂದ ಮನುಷ್ಯನ ಬಲವು ವೃದ್ಧಿಯಾಗುತ್ತದೆ. ಕೇವಲ ಒಂದೇ ತರಹದ ಅಥವಾ ಒಂದೆರಡು ತರಹದ ರಸಗಳನ್ನೇ ಬಳಸುವುದರಿಂದ ದೌರ್ಬಲ್ಯವುಂಟಾಗುತ್ತದೆ. ಷಡ್ರಸಭರಿತ ಆಹಾರ ಸೇವನೆ ಆರೋಗ್ಯದ ಪ್ರಥಮ ಮೂಲ.
ಆಹಾರದ ಪ್ರಮಾಣ: ಆಹಾರದ ಪ್ರಮಾಣದ ನಿಗದಿ ಕಷ್ಟಸಾಧ್ಯ. ಪ್ರತಿಯೊಬ್ಬರಿಗೂ ಇಷ್ಟೇ ಆಹಾರ ಎಂದು ನಿಗದಿಪಡಿಸಲು ಸಾಧ್ಯವಿಲ್ಲ. ಅದರ ಪ್ರಮಾಣ ಅವರವರ ಅಗ್ನಿಬಲ ಅಂದರೆ ಪಚನಶಕ್ತಿಯನ್ನು ಅವಲಂಬಿಸಿರುತ್ತದೆ. ಆಹಾರವನ್ನು ಲಘು ಮತ್ತು ಗುರು ಎಂದು ವಿಂಗಡಿಸಬಹುದು. ಲಘು ಆಹಾರವು ಅಗ್ನಿ, ವಾಯು ಮಹಾಭೂತ ಪ್ರಧಾನವಾಗಿದ್ದು ಸುಲಭವಾಗಿ ಪಚನಗೊಳ್ಳುತ್ತದೆ. ಗುರು ಆಹಾರವು ಪೃಥ್ವಿ, ಜಲ ಮಹಾಭೂತ ಪ್ರಧಾನವಾಗಿದ್ದು ಪಚನಕ್ಕೆ ಕಷ್ಟಕರವಾಗಿರುತ್ತದೆ. ಅಕ್ಕಿ, ಹೆಸರು ಬೇಳೆ, ಜೇನುತುಪ್ಪ, ಮೃಗಮಾಂಸ, ಮೊಲದ ಮಾಂಸ ಮುಂತಾದವು ಲಘು ಆಹಾರಕ್ಕೆ ಉದಾಹರಣೆ. ಹಿಟ್ಟಿನ ಪದಾರ್ಥಗಳು, ಕ್ಷೀರ ವಿಕೃತಿ (ಹಾಲು, ಮೊಸರು, ಬೆಣ್ಣೆ, ತುಪ್ಪ ಮುಂತಾದವು), ಇಕ್ಷು ವಿಕೃತಿ (ಸಕ್ಕರೆ, ಬೆಲ್ಲ ಮುಂತಾದವು), ಉದ್ದು, ಎಳ್ಳು ಮುಂತಾದ ಪದಾರ್ಥಗಳು ಗುರು ಆಹಾರಕ್ಕೆ ಉದಾಹರಣೆ. ಗುರು ಆಹಾರವನ್ನು ಅರ್ಧ ತೃಪ್ತಿಯವರೆಗೆ ಮಾತ್ರ ತಿನ್ನಬೇಕು. ಹಾಗೆಂದು ಲಘು ಆಹಾರವನ್ನು ಅತಿ ಹೆಚ್ಚು ತಿನ್ನಬಹುದೆಂದು ಭಾವಿಸಬಾರದು. ತಿನ್ನುವಾಗ ಹೊಟ್ಟೆಯ ಅರ್ಧ ಭಾಗದಲ್ಲಿ ಘನ ಆಹಾರ, ಕಾಲುಭಾಗದಲ್ಲಿ ದ್ರವ, ಉಳಿದ ಕಾಲು ಭಾಗ ದೋಷ ಸಂಚಾರಕ್ಕೆ ಅನುಕೂಲವಾಗುವಂತಹ ಕ್ರಮದಲ್ಲಿ ತಿನ್ನಬೇಕು.
ನಿತ್ಯ ಬಳಸಬಹುದಾದ ಪದಾರ್ಥಗಳು: ಅಕ್ಕಿ, ಹೆಸರು ಬೇಳೆ, ಸೈಂಧವ ಲವಣ, ಬೆಟ್ಟದ ನೆಲ್ಲಿ, ಅಂತರೀಕ್ಷ ಜಲ (ಮಳೆ ನೀರು), ತುಪ್ಪ, ಜಾಂಗಲ ಪಶು ಮಾಂಸ (ಮಾಂಸಾಹಾರಿಯಾಗಿದ್ದಲ್ಲಿ), ಜೇನುತುಪ್ಪ ಮುಂತಾದವು.
ನಿತ್ಯ ಬಳಸಬಾರದ ಪದಾರ್ಥಗಳು: ಮೊಸರು, ಉದ್ದು, ಮೀನು, ಹಂದಿ, ಹಸು, ಎಮ್ಮೆ ಮಾಂಸ, ಶುಷ್ಕ ಶಾಕ (ಒಣಗಿದ ಸೊಪ್ಪು ತರಕಾರಿ), ಒಣಗಿಸಿದ ಮಾಂಸ ಮುಂತಾದವು. ವಿಶೇಷವಾಗಿ ಕ್ಷಾರ, ಉಪ್ಪು, ಹಿಪ್ಪಲಿ ಇವನ್ನು ಹೆಚ್ಚು ಬಳಸಬಾರದು.
ವಿಶೇಷ ಆಹಾರವಿಧಿಗಳ ಬಗ್ಗೆ ಮುಂದಿನ ಆಯುರ್ಧಾರಾ ಸಂಚಿಕೆಯಲ್ಲಿ ತಿಳಿಸಲಾಗುವುದು.
ಚಿತ್ರದಲ್ಲಿ ತೋರಿಸಿದ ಆಹಾರ ಬಾಯಿಯಲ್ಲಿ ನೀರೂರಿಸುತ್ತಿದೆ!!
ಪ್ರತ್ಯುತ್ತರಅಳಿಸಿThanks for the article. Are there any health effects if we eat rice prepared in cooker or electric rice maker?
ಪ್ರತ್ಯುತ್ತರಅಳಿಸಿ