ಮದಸೊಕ್ಕಿ ಮೆರೆದವರೊಡನಾಡಬಹುದೆ?
ನಯ ವಿನಯ ಸನ್ನಡತೆಗವಕಾಶ ಕೊಡದೆ |
ವಿಕಟನರ್ತನಗೈವ ಮದವದವನತಿ ತರದೆ?
ನರಾರಿ ಮದದೀಪರಿಯನರಿ ಮೂಢ ||
ಅಪರಿಚಿತರಾದರೂ ಕೆಲವು ವ್ಯಕ್ತಿಗಳನ್ನು ಕಂಡಾಗ ಸ್ನೇಹ ಭಾವನೆ ಮೂಡುತ್ತದೆ, ಇನ್ನು ಕೆಲವರನ್ನು ಕಂಡಾಗ ಅವರು ನಮಗೆ ಏನೂ ಮಾಡಿರದಿದ್ದರೂ ಅವರ ಬಗ್ಗೆ ಸದಭಿಪ್ರಾಯ ಬರುವುದಿಲ್ಲ. ಇದಕ್ಕೆ ಕಾರಣ ಅವರ 'ಬಾಡಿ ಲಾಂಗ್ವೇಜ್' ಅರ್ಥಾತ್ ಅವರ ನಡವಳಿಕೆಯ ಹೊರರೂಪ! ಮುಖವು ಮನಸ್ಸಿನ ಕನ್ನಡಿ ಎನ್ನುತ್ತಾರಲ್ಲಾ, ಹಾಗೆ ಅವರ ಮುಖಭಾವದಲ್ಲಿ ಅವರ ವ್ಯಕ್ತಿತ್ವ ಹೊರಸೂಸಿ ನಮ್ಮಲ್ಲಿ ಆ ಭಾವ ಬರುವಂತೆ ಮಾಡಬಹುದು. ಮದ ಸೊಕ್ಕಿ ಮೆರೆಯುವವರು, ದರ್ಪಿಷ್ಟರು ಸಹಜವಾಗಿ ಇತರರಿಗೆ ಸಹನೀಯವೆನಿಸಲಾರರು. ಸಾಮಾನ್ಯವಾಗಿ ಗಮನಕ್ಕೆ ಬರುವ ಈ ಉದಾಹರಣೆಯನ್ನು ನೋಡೋಣ. ಬಸ್ಸಿನಲ್ಲಿ, ರೈಲಿನಲ್ಲಿ ಅಕ್ಕಪಕ್ಕ ಕುಳಿತವರಲ್ಲಿ ಯಾರಾದರೊಬ್ಬರ ಕಾಲು ಇನ್ನೊಬ್ಬರಿಗೆ ಸೋಕಿದಾಗ ತಕ್ಷಣ ಕಾಲನ್ನು ಹಿಂದಕ್ಕೆಳೆದುಕೊಂಡು ಅವರನ್ನು ಕಣ್ಣಿಗೆ ಒತ್ತಿಕೊಂಡು 'ಸಾರಿ' ಅಥವ ಕ್ಷಮಿಸಿ ಎನ್ನುತ್ತೇವೆ. ಇನ್ನು ಕೆಲವರು ಇರುತ್ತಾರೆ. ಅವರು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುತ್ತಾರೆ. ಅವರ ಕಾಲು ಇನ್ನೇನು ಪಕ್ಕದವರ ಅಥವ ಮುಂದೆ ಕುಳಿತಿರುವವರನ್ನು ಸೋಕುವಂತಿರುತ್ತದೆ. ಕಾಲು ಸೋಕಬಾರದೆಂದು ಪಕ್ಕದವರೇ ಮುಜುಗರ ಪಟ್ಟುಕೊಂಡು ಸರಿಸಿ ಕುಳಿತಿರುತ್ತಾರೆ. ಅದರ ಅರಿವಿದ್ದೂ ಅರಿವಿಲ್ಲದಂತೆ ಪಾದ ಕುಣಿಸುವವರನ್ನು ಏನೆನ್ನಬೇಕು? ಅಕಸ್ಮಾತ್ ಕಾಲು ತಗುಲಿದರೂ ತಗುಲಿಸಿದವರು ಯಾವ ಭಾವವನ್ನೂ ವ್ಯಕ್ತಪಡಿಸದಿದ್ದರೆ? ಅವರ ಕಾಲನ್ನು ಕುಣಿಸುತ್ತಿರುವುದು ಅವರಲ್ಲ, ಅವರಲ್ಲಿರುವ ಮದ! ಅರಿಷಡ್ವರ್ಗಗಳಲ್ಲಿ ಒಂದಾದ ಈ ಮದ ಮದೋನ್ಮತ್ತರನ್ನು ಅವನತಿಯೆಡೆಗೆ ಜಾರಿಸುತ್ತಿರುತ್ತದೆ. ಇದು ಅರಿವಿಗೆ ಬರುವ ವೇಳೆಗೆ ಕಾಲ ಮಿಂಚಿರುತ್ತದೆ.
ಮದಕ್ಕೆ ನಾನಾ ರೂಪಗಳಿವೆ- ಸಂಪತ್ತಿನ ಮದ, ಅಧಿಕಾರ ಮದ, ರೂಪ ಮದ, ಯೌವನದ ಮದ, ತಿಳಿದವನೆಂಬ ಮದ, ಇತ್ಯಾದಿ, ಇತ್ಯಾದಿ. ಮನೆಯಲ್ಲಿ, ಸುತ್ತಮುತ್ತಲಿನಲ್ಲಿ ಸಿಗಬೇಕಾದ ಸಂಸ್ಕಾರ ಸಿಗದಿದ್ದಾಗ ಮದದ ಠೇಂಕಾರಕ್ಕೆ ಮಿತಿ ಇರುವುದಿಲ್ಲ. ಮನೆಗೆ ಯಾವುದೋ ಕಾರ್ಯಾರ್ಥವಾಗಿ ಹಿರಿಯರು ಅಥವ ಅತಿಥಿಗಳು ಬಂದಾಗ ಅವರನ್ನು ಸ್ವಾಗತಿಸುವ ಸೌಜನ್ಯ ಇಲ್ಲದಿದ್ದಾಗ ಬಂದವರಿಗೆ ಅಲ್ಲಿಗೆ ಏಕಾದರೂ ಹೋದೆವೋ ಅನ್ನಿಸದಿರದು. ಹಿರಿಯರು ಇದ್ದಾಗ ಕಿರಿಯರು ಅವರ ಎದುರಿಗೆ ಕಾಲು ಚಾಚಿ ಕೂಡುವುದು, ಅವರನ್ನು ಲೆಕ್ಕಕ್ಕೆ ಇಟ್ಟುಕೊಳ್ಳದಂತೆ ಅವರಿಗೆ ಘಾಸಿಯಾಗುವಂತೆ ಮಾತನಾಡುವುದು, ಇತ್ಯಾದಿಗಳೂ ಮದದ ಕಾಯಿಲೆಯಿಂದ ನರಳುತ್ತಿರುವರು ಮಾಡುವ ಕೆಲಸವೇ. ಇಂತಹವರಿಂದ ದೂರವಿರುವುದೇ ಕ್ಷೇಮ. ನನ್ನದೇ ಒಂದು ಉದಾಹರಣೆ ಹೇಳಬೇಕೆನ್ನಿಸುತ್ತಿದೆ. ಉಪವಿಭಾಗದ ಕೇಂದ್ರವೂ ಆಗಿದ್ದ ಒಂದು ತಾಲ್ಲೂಕಿನಲ್ಲಿ ತಹಸೀಲ್ದಾರನಾಗಿ ಕೆಲಸ ಮಾಡುತ್ತಿದ್ದಾಗ ಒಮ್ಮೆ ಒಂದು ತುರ್ತು ವಿಷಯಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಯವರೊಡನೆ ಚರ್ಚಿಸಬೇಕಿತ್ತು. ಕಛೇರಿ ಸಮಯವಲ್ಲವಾದುದರಿಂದ ಅವರನ್ನು ಕಾಣಲು ಅವರ ಮನೆಗೇ ಹೋದೆ. ನನ್ನನ್ನು ಕಂಡ ಆಳು (ಅವನು ಅವರ ಕಛೇರಿಯ ಜವಾನನಾಗಿದ್ದು ಮನೆಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದರು) ಯಾರೇ ಬಂದರೂ ಒಳಕ್ಕೆ ಬಿಡದಂತೆ ಉಪವಿಭಾಗಾಧಿಕಾರಿ ಆತನಿಗೆ ನೀಡಿದ್ದ ಸೂಚನೆಯಂತೆ, ನನ್ನನ್ನು ನಿಲ್ಲಲು ಹೇಳಿ ನಾನು ಬಂದ ವಿಷಯವನ್ನು ಉಪವಿಭಾಗಾಧಿಕಾರಿಗೆ ತಿಳಿಸಿದ. ಆ ಅಧಿಕಾರಿ ಸೌಜನ್ಯಕ್ಕಾದರೂ ನನ್ನನ್ನು ಒಳಕ್ಕೆ ಬರಹೇಳದೆ, ಗೇಟಿನ ಬಾಗಿಲನ್ನೂ ತೆರೆಯದೆ ಅಲ್ಲೇ ನಿಂತು ನನ್ನೊಡನೆ 'ಏನು ವಿಷಯ?' ಎಂದು ಕೇಳಿದರು. ಅವರ ವರ್ತನೆಯಿಂದ ನನಗೆ ಬೇಸರವಾಗಿ ಚರ್ಚಿಸಬೇಕಿದ್ದ ವಿಷಯ ಚರ್ಚಿಸದೆ ಬಂದಿದ್ದಕ್ಕೆ ಏನೋ ನೆಪ ಹೇಳಿ ವಾಪಸು ಬಂದಿದ್ದೆ. ನಂತರದಲ್ಲಿ ನನ್ನದೇ ಸ್ವಂತ ನಿರ್ಧಾರದಿಂದ ಮುಂದುವರೆದಿದ್ದೆ. ವಿಷಯ ತಿಳಿಸದೇ ಇದ್ದುದಕ್ಕೆ ಅವರು ನಂತರದಲ್ಲಿ ಅಕ್ಷೇಪಿಸಿದ್ದರು. ಅವರ ಆಕ್ಷೇಪಕ್ಕೆ ನನ್ನ ಮೌನವೇ ಉತ್ತರವಾಗಿತ್ತು. ಇಂತಹ ಅಧಿಕಾರದ ಮದ ತಲೆಗೆ ಏರಿದ ಅವರು ನನ್ನೊಡನೆ ಮಾತ್ರವಲ್ಲದೆ ಇತರರೊಂದಿಗೂ ಹಾಗೆಯೇ ವರ್ತಿಸುತ್ತಿದ್ದರು. ಹೀಗಾಗಿ ಅವರ ಮತ್ತು ಇತರ ಅಧಿಕಾರಿಗಳ ನಡುವೆ ಎಷ್ಟು ಬೇಕೋ ಅಷ್ಟು ಕನಿಷ್ಟ ಮಟ್ಟದ ಸಂಬಂಧಗಳು ಮಾತ್ರ ಉಳಿದಿದ್ದು, ಇದು ಆಡಳಿತದ ಮೇಲೂ ಪರಿಣಾಮ ಬೀರುತ್ತಿತ್ತು.
ಕಣ್ಣೆತ್ತಿ ನೋಡರು ಪರರ ನುಡಿಗಳಾಲಿಸರು
ದರ್ಪದಿಂ ವರ್ತಿಸುತ ಕೊಬ್ಬಿ ಮೆರೆಯುವರು |
ಮೂಲೋಕದೊಡೆಯರೇ ತಾವೆಂದು ಭಾವಿಸುತ
ಮದೋನ್ಮತ್ತರೋಲಾಡುವರು ಮೂಢ ||
ಮೇಲೆ ಉದಾಹರಿಸಿದ ಉಪವಿಭಾಗಾಧಿಕಾರಿಯವರು ನಂತರದಲ್ಲಿ ಜಿಲ್ಲಾಧಿಕಾರಿಯವರಾಗಿ ಬಡ್ತಿ ಹೊಂದಿ ಪ್ರತಿಷ್ಠಿತ ಜಿಲ್ಲೆಗೆ ನೇಮಕವಾದಾಗಲೂ ಅವರ ಈ ಪ್ರವೃತ್ತಿ ಮುಂದುವರೆದಿತ್ತು. ಅವರ ಕುಟುಂಬದವರು ಒಂದು ಅಮ್ಯೂಸ್ ಮೆಂಟ್ ಪಾರ್ಕಿನ ಖಾಯಂ ಸದಸ್ಯರಾಗಿದ್ದು, ಬಿಲ್ಲಿನ ಮೊತ್ತ ರೂ. ೫ ಲಕ್ಷ ದಾಟಿದಾಗ ಪಾರ್ಕಿನ ಮಾಲೀಕರು ಬಿಲ್ಲಿನ ಪಾವತಿಗೆ ಒತ್ತಾಯಿಸಿದರು. ಇದರ ಪರಿಣಾಮ ಏನಾಯಿತು ಗೊತ್ತೇ? ಆ ಜಿಲ್ಲಾಧಿಕಾರಿ ಸರ್ಕಾರಿ ಭೂಮಿಯನ್ನು ಪಾರ್ಕಿನ ಮಾಲಿಕರು ಒತ್ತುವರಿ ಮಾಡಿದ್ದಾರೆಂದು ಆರೋಪಿಸಿ ಕೆ.ಎ.ಟಿ.ಯಿಂದ ತಡೆಯಾಜ್ಞೆ ಇದ್ದರೂ ಲೆಕ್ಕಿಸದೆ ತೆರವು ಕಾರ್ಯಾಚರಣೆ ನಡೆಸಿದ್ದರು. ಪಾರ್ಕಿನ ಮಾಲೀಕರು ಜಿಲ್ಲಾಧಿಕಾರಿಯವರ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ 'ಉಂಡೂ ಹೋದ, ಕೊಂಡೂ ಹೋದ' ಎಂಬ ಶೀರ್ಷಿಕೆಯಲ್ಲಿ ರಂಜಿತ ಸುದಿಯಾಗಿ ಪ್ರಕಟವಾಗಿತ್ತು. ಇದರೊಂದಿಗೇ ಹಿಂದಿ ಚಲನ ಚಿತ್ರ ನೋಡಲು ಹೋದಾಗ ಥಿಯೇಟರ್ ಮಾಲಿಕ ಹಣ ಕೇಳಿದ್ದಕ್ಕಾಗಿ ಅವರಿಗೆ ನೋಟೀಸು ಕೊಟ್ಟದ್ದು ಮತ್ತು ಯಾವುದೇ ವಾಣಿಜ್ಯ ಮಳಿಗೆಗೆ ಹೋಗಿ ಖರೀದಿ ಮಾಡಿದಾಗ ಹಣ ಕೊಡದೆ ಬರುತ್ತಿದ್ದುದರ ಬಗ್ಗೆಯೂ ಪ್ರಕಟವಾಗಿತ್ತು. (ವಿವರಕ್ಕಾಗಿ ೨೯-೦೬-೨೦೧೧ರ ವಿಜಯ ಕರ್ನಾಟಕ ಪತ್ರಿಕೆ ನೋಡಬಹುದು.) ಈಗ ಈ ಅಧಿಕಾರಿ ರಾಜ್ಯಮಟ್ಟದ ಅಧಿಕಾರಿಯಾಗಿದ್ದಾರೆ. ಇಂತಹವರು ಜನಸಾಮಾನ್ಯರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವರೇ? ಅಧಿಕಾರ ಮದದಿಂದ ಮನಸೋ ಇಚ್ಛೆ ಆಡಳಿತ ನಡೆಸಿದ ಐತಿಹಾಸಿಕ ಪಕ್ಷವನ್ನು ಈಚೆಗೆ ನೆಲಕಚ್ಚಿಸಿದ ಜನತೆ ಇಂತಹ ಅಧಿಕಾರಿಗಳಿಗೂ ಪಾಠ ಕಲಿಸಬೇಕಿದೆ.
ಮದಸೊಕ್ಕಿ ಮೆರೆದವರು ಒಮ್ಮೆ ತಮ್ಮ ಮದಕ್ಕೆ ಕಾರಣವಾದ ಸಂಗತಿಯಿಂದ ವಂಚಿತರಾದರೆ ಅವರ ಸ್ಥಿತಿ ಅಧೋಗತಿ. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತಹ ಸ್ಥಿತಿ ಅವರದಾಗುತ್ತದೆ. ಕೆಲವು ಬರಹಗಾರರಲ್ಲೂ ಈ ಮದ ತಾವೇ ತಿಳಿದವರು, ಇತರರಿಗಿಂತ ಮೇಲಿನವರು, ತಮ್ಮ ಮಾತನ್ನು ಇತರ ಎಲ್ಲರೂ ಗೌರವಿಸಬೇಕು ಎಂದು ಅಪೇಕ್ಷಿಸುವಂತೆ ಮಾಡುತ್ತದೆ. ತುಂಬಿದ ಕೊಡ ತುಳುಕದು ಎಂಬಂತಿರುವ ಸಾಹಿತಿಗಳು ಎಲ್ಲರ ಗೌರವಕ್ಕೆ ಭಾಜನರಾಗುತ್ತಾರೆ. ವಿಪರ್ಯಾಸವೆಂದರೆ ಉತ್ತಮ ಸಾಹಿತ್ಯಕ್ಕಾಗಿ ಕೊಡಮಾಡುವ ಪ್ರಶಸ್ತಿಗಳು ಇತ್ತೀಚೆಗೆ ಲಾಬಿ ಮಾಡುವವರಿಗೆ ಲಭಿಸುವಂತಾಗಿ ಪ್ರಶಸ್ತಿಯ ಮೌಲ್ಯವೇ ನಶಿಸುತ್ತಿದೆಯೇನೋ ಎಂದು ಅನ್ನಿಸುತ್ತದೆ. ಸಾಹಿತಿಯ ರಾಜಕೀಯ ಒಲವು, ನಿಲುವುಗಳನ್ನು ಅವಲಂಬಿಸಿ ಸಹ ಪ್ರಶಸ್ತಿ ನಿರ್ಧರಿಸಲಾಗುತ್ತಿದೆ ಎಂಬ ಭಾವನೆ ಜನರಲ್ಲಿದೆ. ಇರಲಿ ಬಿಡಿ, ಒಟ್ಟಿನಲ್ಲಿ ಹೇಳಬೇಕೆಂದರೆ ಮದದಿಂದ ಸೊಕ್ಕಿ ನಡೆಯುವವರು ಮೇಲರಿಮೆಯಿಂದ ನರಳುತ್ತಿರುತ್ತಾರೆ. ಪ್ರತಿಭೆ ಅನ್ನುವುದು ದೇವರ ಕೊಡುಗೆ. ಗೌರವ ಜನರು ಕೊಡುವುದು. ಗೌರವಿಸಿದರೆ ಜನರಿಗೆ ಕೃತಜ್ಞರಾಗಿರಬೇಕು, ಇಲ್ಲದಿದ್ದರೆ ತೆಪ್ಪಗಿರಬೇಕು. ಹೆಮ್ಮೆ, ಒಣ ಪ್ರತಿಷ್ಠೆ ಅನ್ನುವುದು ಮದಭರಿತರು ತಮಗೆ ತಾವೇ ಕೊಟ್ಟುಕೊಳ್ಳುವುದು! ಒಣಪ್ರತಿಷ್ಠೆಯಿಂದ ಆಡಿದ ಅಪ್ರಬುದ್ಧ ಮಾತುಗಳಿಂದಾಗಿ ಹಿರಿಯ ಸಾಹಿತಿಯೊಬ್ಬರು ಅವಮಾನ ಮತ್ತು ಮಾತುಗಳ ಕೂರಂಬುಗಳ ಮಹಾಪೂರವನ್ನೇ ಎದುರಿಸಬೇಕಾಗಿ ಬಂದದ್ದನ್ನು ಕಂಡಿದ್ದೇವಲ್ಲವೇ? ಮದ ಮನುಷ್ಯನನ್ನು ಹಾಳು ಮಾಡುತ್ತದೆ. ಸೌಜನ್ಯದ ನಡವಳಿಕೆಗಳು ಗೌರವ ತರುತ್ತವೆ.
'ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯ ರಾತ್ರಿಯಲ್ಲಿ ಕೊಡೆ ಹಿಡಿದರಂತೆ' ಎಂಬಂತೆ ಮದ ತಾವೇ ಇಂದ್ರ, ಚಂದ್ರ, ದೇವೇಂದ್ರ ಎಂಬಂತೆ ಮನುಷ್ಯರಲ್ಲಿ ಭ್ರಮೆ ಮೂಡಿಸುತ್ತದೆ. ಜಂಭದಲ್ಲಿ ಎರಡು ವಿಧ ಇರುತ್ತದೆ- ಕೆಟ್ಟದ್ದು ಮತ್ತು ಒಳ್ಳೆಯದು. ಒಳ್ಳೆಯ ಜಂಭ ನಮ್ಮ ಗೌರವ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿಯುವಂತಹದು. ಕೆಟ್ಟ ಜಂಭವೆಂದರೆ ಮೇಲರಿಮೆಯಿಂದ ಒಡಮೂಡುವ ಅಹಂಕಾರ, ಒಣ ಪ್ರತಿಷ್ಠೆಗಳು ಮತ್ತು ಇತರರ ಕುರಿತ ಅಸಹನೆ - ಇದೇ ಮದ. ತಮ್ಮನ್ನು ಬಿಟ್ಟರಿಲ್ಲ ಎಂಬಂತೆ ಆಡುತ್ತಿದ್ದ ಚಕ್ರವರ್ತಿಗಳು, ಸಾಮ್ರಾಟರು, ಬಾದಶಹರು, ರಾಜ-ಮಹಾರಾಜರು ಇಂದು ಎಲ್ಲಿದ್ದಾರೆ? ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಅವರಲ್ಲಿ ಎಷ್ಟೋ ಜನರ ನೆನಪೂ ನಮಗಿಲ್ಲ. ಹೀಗಿರುವಾಗ ಇರುವ ಅಲ್ಪ ಅವಧಿಯ ಜೀವನ ಮುಗಿಸಿ ಹೋಗುವ ಮುನ್ನ ಕೆಲವರಾದರೂ 'ಇಂತಹವರೊಬ್ಬರಿದ್ದರು' ಎಂದು ನೆನೆಸಿಕೊಳ್ಳುವಂತೆ ಬಾಳುವುದು ಶ್ರೇಷ್ಠ. ಆದರೆ, ವಿಕಟನರ್ತನಗೈಯುವ ಮದ ಇದಕ್ಕೆ ಅವಕಾಶ ಕೊಟ್ಟೀತೇ?
ಬಾರರದು ಜನವು ಧನವು ಕಾಯದು
ಕರೆ ಬಂದಾಗ ಅಡೆತಡೆಯು ನಡೆಯದು |
ಇರುವ ಮೂರು ದಿನ ಜನಕೆ ಬೇಕಾಗಿ
ಜಗಕೆ ಬೆಳಕಾಗಿ ಬಾಳೆಲೋ ಮೂಢ ||
-ಕ.ವೆಂ.ನಾಗರಾಜ್.
**************
9.6.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ.
ಮದೋನ್ಮತ್ತರ ನಡವಳಿಕೆಗಳ ಬಗ್ಗೆ ಬಹಳ ಸೊಗಸಾಗಿ ಬೆಳಕು ಚೆಲ್ಲಿದ್ದೀರಿ ಸರ್ , " ತಲೆಗೆ ಹಾಕಿಕೊಂಡ ನೀರು ಕಾಲಿಗೆ ಬರಲೇ ಬೇಕು " ಎಂಬ ಗಾದೆ ಮಾತಿನಂತೆ ಇಂಥವರ ಮದ ಇಳಿಸಲು ಇನ್ಯಾರೋ ಬಂದೇ ಬರುತ್ತಾರೆ. ಕೆಲವಾರು ಕನಿಷ್ಠ ಸೌಜನ್ಯಗಳೂ ಇತ್ತೀಚೆಗೆ ನಮ್ಮಲ್ಲಿ ಮರೆಯಾಗುತ್ತಿದೆ ಹಣದ ಪ್ರಾಬಲ್ಯದ ಮುಂದೆ ಗುಣ, ಹಿರಿತನ, ಮಾನವೀಯತೆ ಎಲ್ಲೋ ಕಳೆದುಹೋಗುತ್ತಿದೆ
ಪ್ರತ್ಯುತ್ತರಅಳಿಸಿಸೂಕ್ತ ಮತ್ತು ಮೆಚ್ಚುಗೆಯ ಪ್ರತಿಕ್ರಿಯೆಗೆ ವಂದನೆಗಳು, ನಾಗಲಕ್ಷ್ಮಿಯವರೇ.
ಅಳಿಸಿಹೊಳೆನರಸಿಪುರ ಮ೦ಜುನಾಥ Thimmayya
ಅಳಿಸಿAnnodenide? Hididu kennegeradu barisabekashte!
Prathibha Rai S......
ಅಳಿಸಿಅಲ್ಪನಿಗೆ ಐಶ್ವರ್ಯ ಬಂದರೆ---ಮದ, ಅಹಂಕಾರ ಬರುವುದುಸರಿಯಾದ ಮಾತು
Saraswathi Murthy
adu avaravara samskruthi beledu banda samskara a reethi iruthhade sir
Nirmala Krishnamurthy
Ahankarakke udaseenave maddu .
Shantha Kumari
ಅಳಿಸಿವಿಷಾದವೆಂದರೆ, ಜನ ಇಂಥ ಆಟಾಟೋಪದ ವ್ಯಕ್ತಿಗಳಿಗೆ ಬೆಲೆ ಕೊಟ್ಟಷ್ಟು ಸರಳ ಸಜ್ಜನರಿಗೆ ಕೊಡುವುದಿಲ್ಲ. ಅವರ ಕೈಕೆಳಗೆ ಕೆಲಸ ಮಾಡುವವರೂ ಬೆಲೆ ಕೊಡದೆ ಅವರನ್ನೇ ಹೆರಾಸ್ ಮಾಡುವವರೂ ಇದ್ದಾರೆ. ಆದರೆ ಸತ್ಯಕ್ಕೆ ಪ್ರಾಮಾಣಿಕತೆಗೆ ಒಳ್ಳೇತನಕ್ಕೆ ಎಂದಿದ್ದರೂ ಬೆಲೆ ಇದೆ ಇಲ್ಲದಿದ್ದರೂ ನಮಗೆ ಆತ್ಮತೃಪ್ತಿ ಇರುತ್ತದೆ ಎಂದು ನಾವು ಸಂಸ್ಕಾರವಂತರಾಗಿ ನಡೆದುಕೊಳ್ಳಬೇಕಾಗುತ್ತದೆ. ಒಳ್ಳೆಯ ಲೇಖನ..ಅಭಿನಂದನೆಗಳು.
naveengkn
ಅಳಿಸಿಮದಿಸಿದ ಮನಸ್ಸು, ಮದವೇರಿದ ಅನೆಗಿಂತಲೂ ಅಪಾಯಕಾರಿ ಎಂದು ನವಿರಾಗಿ ವಿವರಿಸಿದ್ದೀರಿ ಕವಿಗಳೇ,,,,,,,, ಧನ್ಯವಾದಗಳು
kavinagaraj
ಧನ್ಯವಾದಗಳು, ನವೀನರೇ.
nageshamysore
ಕವಿಗಳೆ, ಮದದ ನರ್ತನ ಜನದ ವರ್ತನೆಗಳಲ್ಲಿ ಪ್ರತಿಬಿಂಬಿಸುವ ಬಗೆ ಸೊಗಸಾಗಿ ಬಿಂಬಿಸಿದೆ ಲೇಖನ!
ಮದವೇರಿ ಮದಿಸಿದ ಹೊತ್ತಲ್ಲಿ,
ದಮನದಾಸೆ ಬಯಕೆಗೆ ಹೊತ್ತೆಲ್ಲಿ?
ಮದನ ಮದನಾರಿ ನಿರ್ಲಜ್ಜೆಯ ಪರಿ,
ಮದದೆ ನಡೆವ ಹುಂಬ ಜಂಬೂಸವಾರಿ ||
kavinagaraj
:) ಮದವೇರಿದವಗೆ ಮುಂದಿದ್ದವರು ಕಾಣಿಸರು! ಪ್ರತಿಕ್ರಿಯೆಗೆ ವಂದನೆ, ನಾಗೇಶರೇ.
Prakash Narasimhaiya
ಅಳಿಸಿಆತ್ಮೀಯ ನಾಗರಾಜರೇ, ಮದವೇರಿದ ಆನೆಯನ್ನು ಪಳಗಿಸಿ ತನ್ನ ಅಡಿಯಾಳಾಗಿ ಮಾಡಿಕೊಳ್ಳುವ ಮಾನವನ ಶಕ್ತಿಯೇನು ಕಡಿಮೆ ಇಲ್ಲ. ಏನೆಂದರೆ ಜಯವಿರುವವರೆಗೆ ಭಯವಿಲ್ಲ. ನಂತರದಲ್ಲಿ ಒಂದು ನಾಯಿಯು ಮುಸಿಕೂದಾ ನೋಡದು. ಇಂತಹ ದುರ್ಭರ ಪರಿಸ್ತಿತಿ ಒದಗುತ್ತದೆ. ಮದವೇರಿದ ದುರ್ಯೋಧನನ ಗತಿ ಏನಾಯಿತು? ಜೀವಂತ ಇರುವಾಗಲೇ ತೋಳ ನರಿಗಳು ಎಳೆದಾಡಲು ಮುಂದಾದದ್ದು ಎಂತಹ ಭೀಕರ? ಮದೊನ್ಮತ್ಥರಿಗೂ ಇಂತಹ ಪರಿಸ್ತಿತಿ ಎದುರಾದರೆ ಆಶ್ಚರ್ಯವೇನಿಲ್ಲ.
ಉತ್ತಮವಾದ ಲೇಖನಕ್ಕೆ ಧನ್ಯವಾದಗಳು
kavinagaraj
ಪೂರಕ ಪ್ರತಿಕ್ರಿಯೆಗೆ ವಂದನೆಗಳು, ಪ್ರಕಾಶರೇ.