ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಜುಲೈ 6, 2014

ದೇವರೇ ಗತಿ!


      ಈ ಚಿತ್ರಗಳನ್ನು ನೋಡಿ. ಒಂದೊಮ್ಮೆ ಮನೆಯಲ್ಲಿ ಧೂಪ, ದೀಪ, ಆರತಿ ಬೆಳಗಿಸಿಕೊಂಡು ಪೂಜೆ, ಪುನಸ್ಕಾರಗಳನ್ನು ಮಾಡಿಸಿಕೊಳ್ಳುತ್ತಿದ್ದ ಈ ದೇವರುಗಳ ಫೋಟೋಗಳು ಈಗ ಮರದ ಬುಡದಲ್ಲಿ ಅನಾಥವಾಗಿ ಬಿದ್ದಿವೆ. ಮನೆಗೆ ಬೇಡವೆನಿಸುವ ದೇವರ ಫೋಟೋಗಳು ಮೊದಮೊದಲು ದೇವಸ್ಥಾನಕ್ಕೆ ಸೇರಿಸಲ್ಪಡುತ್ತಿದ್ದವು, ಹಿರಿಯರನ್ನು ನೋಡಿಕೊಳ್ಳಲಾಗದೆ ವೃದ್ಧಾಶ್ರಮದಲ್ಲಿ ಸೇರಿಸುವಂತೆ! ಈಗ ದೇವಸ್ಥಾನಗಳಲ್ಲಿ ಅಂತಹ ಫೋಟೋಗಳನ್ನು ಇಟ್ಟುಕೊಳ್ಳಬಯಸುತ್ತಿಲ್ಲ. ಹೀಗಾಗಿ ದೇವಸ್ಥಾನದ ಬಾಗಿಲ ಪಕ್ಕದಲ್ಲಿ, ಅರಳಿಮರದ ಬುಡಗಳಲ್ಲಿ, ಪಾರ್ಕುಗಳಲ್ಲಿನ ಮರಗಳ ಬುಡದಲ್ಲಿ, ಹುತ್ತಗಳ ಪಕ್ಕದಲ್ಲಿ ಹಾಳಾದ, ಹಳೆಯದಾದ, ಬೇಡವೆನಿಸುವ ದೇವರ ಫೋಟೋಗಳು ತಮ್ಮ ಸ್ಥಾನ ಕಂಡುಕೊಳ್ಳುತ್ತಿವೆ ಅರ್ಥಾತ್ ಮನೆಯಿಂದ ಹೊರದಬ್ಬಲ್ಪಟ್ಟಿರುತ್ತವೆ. ಬಾಡಿಗೆ ಮನೆ ಖಾಲಿ ಮಾಡಿ ಬೇರೆ ಮನೆಗೆ ಹೋಗುವಾಗ ಹಳೆಯ ಮನೆಯಲ್ಲಿ ಉಳಿಸಿ ಹೋಗುವುದು ಉಪಯೋಗಕ್ಕೆ ಬಾರದ ಹಳೆಯ ವಸ್ತುಗಳು, ಕಸ ಮತ್ತು ಕೆಲವು ಹಳೆಯ ದೇವರ ಫೋಟೋಗಳು! ಮನೆ ಪೂರ್ತಿ ಖಾಲಿ ಮಾಡಬಾರದು, ಕಸ ಗುಡಿಸಿಹೋಗಬಾರದು ಎಂಬ ಅನುಕೂಲಸಿಂಧು ಶಾಸ್ತ್ರ ಹೇಳಿಬಿಟ್ಟರೆ ಆಯಿತು. ಒಟ್ಟಿನಲ್ಲಿ ಹೇಳಬೇಕೆಂದರೆ, ಈ ದೇವರುಗಳ ಸ್ಥಿತಿ ದೇವರೇ ಗತಿ ಅನ್ನುವಂತಾಗಿದೆ. ಇದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಯೋಚಿಸಬೇಕಿದೆ. 
     ಭಿನ್ನವಾದ ವಿಗ್ರಹಗಳನ್ನು ಪೂಜಿಸಬಾರದು ಎಂಬುದು ಸಂಪ್ರದಾಯವಾಗಿ ಬೆಳೆದುಕೊಂಡು ಬಂದ ಪದ್ಧತಿ. ವಿಗ್ರಹಪೂಜೆ ಸರಿಯೋ, ತಪ್ಪೋ ಅನ್ನುವ ಜಿಜ್ಞಾಸೆ ಮಾಡುವುದು ಈ ಲೇಖನದ ಉದ್ದೇಶವಾಗಿಲ್ಲ. 'ಶಾಸ್ತ್ರಾದ್ರೂಢಿರ್ಬಲೀಯಸೀ' ಎಂಬಂತೆ ಸರಿಯೋ, ತಪ್ಪೋ ಎಂದು ವಿವೇಚಿಸಹೋಗದೆ ರೂಢಿಗತವಾಗಿ, ಪರಂಪರಾಗತವಾಗಿ ಬೆಳೆದುಬಂದ ಪದ್ಧತಿಗಳನ್ನು ಪಾಲಿಸಿಕೊಂಡು ಬರುತ್ತಿರುವವರ ಸಂಖ್ಯೆಯೇ ಜಾಸ್ತಿ. ವಿವೇಕ, ವಿಚಾರಗಳನ್ನು ಬದಿಗಿರಿಸಿ ಕಾಟಾಚಾರಕ್ಕೆ ಸಂಪ್ರದಾಯ ಪಾಲಿಸುವ ಬದಲಿಗೆ ಮಾಡುವ ಕೆಲಸಗಳು, ಆಚಾರಗಳಿಗೆ ಅರ್ಥ ತಿಳಿದು ಮಾಡುವುದಾದರೆ ಮಾಡುವ ಕಾರ್ಯಗಳಿಗೆ ಬೆಲೆ, ಅರ್ಥ ಬರುತ್ತದೆ. ವಿಗ್ರಹಗಳು, ಫೋಟೋಗಳು ಯಾವ ಯಾವುದೋ ಕಾರಣಗಳಿಗಾಗಿ ಭಿನ್ನವಾದಾಗ, ವಿರೂಪವಾದಾಗ ಹೊಸ ವಿಗ್ರಹಗಳು, ಫೋಟೋಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಹಳೆಯ ವಿಗ್ರಹಗಳು, ಫೋಟೋಗಳು ತಮ್ಮ ಮೊದಲಿನ ಪ್ರಾಶಸ್ತ್ಯವನ್ನು ಕಳೆದುಕೊಂಡುಬಿಡುತ್ತಿವೆ. ಹಾಳಾದ, ಬೇಡವಾದ ದೇವರ ಫೋಟೋಗಳಿಗೆ ಬರುತ್ತಿರುವ ದಯನೀಯ ಸ್ಥಿತಿಯನ್ನು ಕಂಡಾದರೂ ಭಿನ್ನವಾದ ವಿಗ್ರಹಗಳು, ಫೋಟೋಗಳು, ಇತ್ಯಾದಿಗಳ ವಿಲೇವಾರಿಯ ವಿಚಾರದಲ್ಲಿ ವಿಗ್ರಹಾರಾಧಕರು ಅನುಸರಿಸಬೇಕಾದ ಕ್ರಮಗಳ ಕುರಿತು ಸಂಬಂಧಿಸಿದ ಪ್ರಾಜ್ಞರು ಗಮನ ಹರಿಸಿ ಸಾಮಾನ್ಯರಿಗೆ ತಿಳುವಳಿಕೆ ಕೊಡುವ ಕೆಲಸ ಜರೂರಾಗಿ ಮಾಡಬೇಕು.  ಇದರ ಬಗ್ಗೆ ಗಮನ ಸೆಳೆಯುವುದು ಈ ಲೇಖನದ ಉದ್ದೇಶ. 

   ರಾಮಕೃಷ್ಣ ಪರಮಹಂಸರು ದೇವರ ಕುರಿತ ಯಾವುದೇ ಅಭಿಪ್ರಾಯಗಳನ್ನು ತಿರಸ್ಕರಿಸುತ್ತಿರಲಿಲ್ಲ. ಸರ್ವಶಕ್ತನಾದ, ಸರ್ವಾಂತರ್ಯಾಮಿಯಾದ ಪರಮಾತ್ಮನನ್ನು ಅರಿಯುವುದು ಹುಲುಮನುಜರಿಗೆ ಅವರ ಇತಿಮಿತಿಗಳಲ್ಲಿ ಕಷ್ಟಸಾಧ್ಯವೇ ಸರಿ. ಅವರು ಹೇಳುತ್ತಿದ್ದಂತೆ ಹಿಂದೂಗಳು ಆರಾಧಿಸುತ್ತಿರುವ ಅಸಂಖ್ಯ ದೇವರುಗಳು ಸರ್ವಶಕ್ತನನ್ನು ಕೇವಲ ಸೀಮಿತ ರೂಪಗಳಲ್ಲಿ ಕಾಣುವ ಪ್ರಯತ್ನಗಳಷ್ಟೆ. ಅನಂತನನ್ನು ಸೀಮಿತ ಬುದ್ಧಿಶಕ್ತಿಯ ಮನುಷ್ಯ ಗ್ರಹಿಸುವುದು ಹೇಗೆ ಸಾಧ್ಯ? ಈ ಸಾಂಕೇತಿಕ ರಚನೆಗಳು ಮನುಷ್ಯನ ಇಚ್ಛಾನುಸಾರ ಮೋಕ್ಷ ಪಡೆಯುವ ಸಾಧನಗಳಷ್ಟೆ.  ಈ ಎಲ್ಲಾ ದೇವರುಗಳು ಆ ಒಬ್ಬ ದೇವನ ಎಲ್ಲಾ ಬೆಳಕಿನ, ಎಲ್ಲಾ ಬುದ್ಧಿಮತ್ತೆಯ, ಎಲ್ಲಾ ವಿದ್ವತ್ತಿನ ಮೂಲ ತಲುಪುವ ಮಧ್ಯವರ್ತಿಗಳಷ್ಟೆ. ರಾಮಕೃಷ್ಣ ಪರಮಹಂಸರ ಈ ವಿಚಾರ ಆದರಣೀಯವಾಗಿದೆ. ವಿಗ್ರಹಗಳು ದೇವರಲ್ಲ, ದೇವರನ್ನು ಆ ಮೂಲಕ ಅರಿಯುವ ಪ್ರಯತ್ನವೆಂಬುದನ್ನು ಅವರು ಒತ್ತಿ ಹೇಳುತ್ತಿದ್ದರು. ವಿಗ್ರಹಪೂಜೆಯನ್ನು ವಿರೋಧಿಸುವ ವಿಚಾರವಾದಿಗಳೆನಿಸಿಕೊಂಡವರು ಅದನ್ನು ಅವಹೇಳನಕರವಾಗಿ ಖಂಡಿಸಬೇಕಿಲ್ಲ. ಹಾಗೆ ಖಂಡಿಸುವುದು ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ. ವಿಚಾರಗಳನ್ನು ಹೇಳುವ, ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರೆ ಅದನ್ನು ಒಪ್ಪಬಹುದು. ತಲೆತಲಾಂತರಗಳಿಂದ, ಬಹುಸಂಖ್ಯಾತರಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿರುವ ಆಚರಣೆಗಳನ್ನು ಅವರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಹೇಳಲು ಸಾಧ್ಯವಿರುವಾಗ ಅದನ್ನು ಬಿಟ್ಟು ಅವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಮಾತನಾಡುವುದರಿಂದ ಆಗುವುದು ಜಾಗೃತಿಯಲ್ಲ, ಬದಲಾಗಿ ಪರಸ್ಪರರಲ್ಲಿ ವೈಷಮ್ಯ, ಇದು ಪರೋಕ್ಷವಾಗಿ ವೈಚಾರಿಕ ಚರ್ಚೆಗೆ ದೊಡ್ಡ ಹಿನ್ನಡೆಯಾಗುತ್ತದೆ. 
     ರಾಮಕೃಷ್ಣ ಪರಮಹಂಸರು ಒಬ್ಬನೇ ದೇವರು ಎಂಬುದನ್ನು ನಂಬಿದರೂ, ಜನರು ಅವನನ್ನು ಯಾವುದೇ ರೀತಿಯಲ್ಲಿ ನಂಬಿದರೂ, ಅಲ್ಲಾಹು, ಕಾಳಿ ಅಥವ ಕ್ರಿಸ್ತ, ಇತ್ಯಾದಿ, ಆ ನಂಬಿಕೆಯಲ್ಲಿ ದೇವರು ಇರುತ್ತಾನೆಂದು ಹೇಳುತ್ತಿದ್ದವರು. ದೇವರು ಆಕಾರ ಮತ್ತು ನಿರಾಕಾರ ರೂಪದಲ್ಲಿ ಇರಬಹುದೆಂದು ಹೇಳುತ್ತಿದ್ದ ಅವರಿಗೆ ಒಬ್ಬ ಶಿಷ್ಯ ಪ್ರಶ್ನಿಸಿದ್ದ, "ವಿಗ್ರಹವನ್ನು ಪೂಜಿಸುವವರಿಗೆ ಅವರು ವಿಗ್ರಹವನ್ನು ಪೂಜಿಸುತ್ತಿಲ್ಲ, ದೇವರನ್ನು ಪೂಜಿಸುತ್ತಿದ್ದೇವೆ ಎಂದು ತಿಳುವಳಿಕೆ ಹೇಳಬೇಕು. ಅವರು ವಿಗ್ರಹಕ್ಕೆ ತಲೆಬಾಗುತ್ತಿಲ್ಲವೆಂದು ತಿಳಿಯಬೇಕಲ್ಲವೆ?" ರಾಮಕೃಷ್ಣರ ಉತ್ತರ ಮಾರ್ಮಿಕವಾಗಿತ್ತು: "ಇತರರಿಗೆ ಬುದ್ಧಿ ಹೇಳಲು ನೀವು ಯಾರು? ಆ ವಿಶ್ವನಿಯಾಮಕ ದೇವರು ಜನರಿಗೆ ಕಲಿಸುತ್ತಾನೆ. ನಾವು ಏನಾದರೂ ಕಲಿಯುವುದಿದ್ದರೆ ಅವನು ಕಲಿಸುತ್ತಾನೆ. ನಮ್ಮ ಒಳಗಿನ ಭಾವನೆಗಳು ಅವನಿಗೆ ಗೊತ್ತಿದೆ. ದೇವರನ್ನು ವಿಗ್ರಹದಲ್ಲಿ ಪೂಜಿಸುವುದು ಒಂದು ವೇಳೆ ತಪ್ಪಾಗಿದ್ದರೂ ಅವನಿಗೆ ನಾವು ಅವನನ್ನೇ ಪೂಜಿಸುತ್ತಿದ್ದೇವೆಂದು ತಿಳಿಯುವುದಿಲ್ಲವೇ? ಆ ವಿಷಯದಲ್ಲಿ ನೀವು ಏಕೆ ತಲೆನೋವು ಮಾಡಿಕೊಳ್ಳುತ್ತೀರಿ?" ನಿಜವಾದ ದೇವರ ಭಕ್ತನಿಗೆ ದೇವರ ಮೇಲಿನ ಭಕ್ತಿ ಪ್ರಧಾನವಾಗುತ್ತದೆಯೇ ಹೊರತು ಆಕಾರ, ನಿರಾಕಾರಗಳಲ್ಲ. 
     ಮೂಲ ವಿಷಯವಾದ ಭಿನ್ನ ವಿಗ್ರಹಗಳ ವಿಚಾರಕ್ಕೆ ಮರಳೋಣ. ಈ ವಿಷಯದಲ್ಲೂ ರಾಮಕೃಷ್ಣರ ವಿಚಾರ ಅನನ್ಯವೆನಿಸುತ್ತದೆ. ಧಾರ್ಮಿಕ ಗ್ರಂಥಗಳು ಜೀವಂತ ಸಂದೇಶಗಳನ್ನು ಕೊಟ್ಟರೆ ದೇವರ ವಿಗ್ರಹಗಳು ಜೀವಂತ ಪಾಠ ಹೇಳುತ್ತವೆ. ಅವು ಕೇವಲ ಮರ, ಶಿಲೆ ಅಥವ ಮಣ್ಣು ಮಾತ್ರವಲ್ಲ. ರಾಮಕೃಷ್ಣರು ಮುರಿದ ವಿಗ್ರಹಗಳನ್ನು ದೂರೀಕರಿಸುವುದು ತರವಲ್ಲವೆನ್ನುತ್ತಿದ್ದರು. ಅವುಗಳನ್ನು ದುರಸ್ತಿ ಮಾಡಿ ಪೂಜಿಸಬಹುದೆಂದು ಹೇಳುತ್ತಿದ್ದರು. ಈ ವಿಚಾರದಲ್ಲಿ ಒಮ್ಮೆ ವಾಗ್ವಾದವಾದಾಗ ಅವರು ರಾಣಿ ರಾಸಮಣಿಯವರಿಗೆ ಕೇಳಿದ್ದರು, "ನಿಮ್ಮ ಅಳಿಯ ಮಥುರಾಬಾಬು ಒಂದು ವೇಳೆ ಕಾಲು ಮುರಿದುಕೊಂಡರೆ, ನೀವು ಅವನನ್ನು ಬಿಟ್ಟುಬಿಡುತ್ತೀರಾ? ಅವನನ್ನು ಉಪಚರಿಸಿ ಸರಿಪಡಿಸುವುದಿಲ್ಲವೇ?" ಭಿನ್ನ ವಿಗ್ರಹಗಳು ಪೂಜಾರ್ಹವಲ್ಲವೆನ್ನುವವರು ಈ ಕುರಿತು ಚಿಂತಿಸಬೇಕಲ್ಲವೇ? ಹಿಂದಿನ ರಾಜಮಹಾರಾಜರುಗಳ ಕಾಲದಲ್ಲಿ ಕಟ್ಟಿದ ಹಲವಾರು ದೇಗುಲಗಳು ಶಿಲ್ಪಕಲೆಗೆ ಹೆಸರಾಗಿವೆ. ಅಲ್ಲಿನ ವಿಗ್ರಹಗಳು ಪರಕೀಯರ ದಾಳಿಗಳೂ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಶಿಥಿಲವಾಗಿವೆ, ಭಿನ್ನಗೊಂಡಿವೆ, ಕಣ್ಮರೆಯೂ ಆಗಿವೆ. ಹೀಗಾಗಿ ಒಂದೊಮ್ಮೆ ಪೂಜೆಗೊಳ್ಳುತ್ತಿದ್ದ ವಿಗ್ರಹಗಳು ಇಂದು ಅನಾಥವಾಗಿವೆ. ಭಿನ್ನಗೊಂಡ ಕಾರಣದಿಂದ ಪೂಜೆಗಳು ನಿಲ್ಲಿಸಲ್ಪಟ್ಟಿವೆ. ಆ ದೇಗುಲಗಳು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಗೆ ಸೇರಿದವೆಂದರೆ ಮುಗಿದೇಹೋಯಿತು. ವಿಗ್ರಹಗಳನ್ನು ದುರಸ್ತಿ ಮಾಡುವ, ಅದರ ಬದಲಿಗೆ ಬೇರೆ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಕೆಲಸವೂ ಕಷ್ಟವೇ. ಇದರಿಂದ ಯಾವ ಉದ್ದೇಶದಿಂದ ಆ ದೇಗುಲಗಳು ಸ್ಥಾಪಿತಗೊಂಡವೋ ಆ ಉದ್ದೇಶ ವಿಫಲವಾದಂತಾಯಿತು. ಇದಕ್ಕೆ ಧಾರ್ಮಿಕ ಪಂಡಿತರು, ಸರ್ಕಾರ ಸೂಕ್ತವಾಗಿ ಚಿಂತಿಸಿ ಮುಂದುವರೆಯಬೇಕಾದುದು ಅಗತ್ಯವಿದೆ. ಇಲ್ಲದಿದ್ದರೆ ಸ್ಮಾರಕಗಳೆನಿಸಿರುವ ಇಂತಹ ಪುರಾತನ ದೇಗುಲಗಳು ಮುಂದೊಮ್ಮೆ ಕಣ್ಮರೆಯಾದರೂ ಆಶ್ಚರ್ಯವಿಲ್ಲ.
     ವಿಗ್ರಹಗಳನ್ನು ಮೂರು ಭಾಗಗಳಲ್ಲಿ ಗುರುತಿಸುತ್ತಾರೆ - ಅಂಗ, ಪ್ರತ್ಯಾಂಗ ಮತ್ತು ಉಪಾಂಗ. ಪ್ರತ್ಯಾಂಗ ಮತ್ತು ಉಪಾಂಗಗಳಲ್ಲಿ ಏನಾದರೂ ದೋಷ ಅಥವ ಭಿನ್ನತೆ ಇದ್ದರೆ ಅದನ್ನು ಸರಿಪಡಿಸಬಹುದಂತೆ. ಮುಖ್ಯ ಅಂಗದಲ್ಲೇನಾದರೂ ಭಿನ್ನತೆ ಕಂಡರೆ ವಿಗ್ರಹ ತನ್ನ ಪ್ರಾಮುಖ್ಯ ಕಳೆದುಕೊಳ್ಳುತ್ತದಂತೆ. ಇಂತಹ ವಿಗ್ರಹವನ್ನು, ಒಂದೊಮ್ಮೆ ಭಕ್ತಿಪೂರ್ವಕವಾಗಿ ಪೂಜಿಸಿಕೊಳ್ಳುತ್ತಿದ್ದ ವಿಗ್ರಹವನ್ನು, ನಂತರ ಏನು ಮಾಡಬೇಕು? ಕಲ್ಲಿನ ವಿಗ್ರಹವಾದರೆ, ಇದನ್ನು ಸಂರಕ್ಷಿಸಿ ಸಂಗ್ರಹಾಲಯದಲ್ಲಿ ಇಡಬಹುದು. ಮರದ ಅಥವ ನಾಶ ಹೊಂದಬಹುದಾದ ವಸ್ತುಗಳಿಂದ ತಯಾರಾದುದಾದರೆ ಅದನ್ನು ಯೋಗ್ಯ ರೀತಿಯಲ್ಲಿ ಸಂಸ್ಕಾರಕ್ರಮ ಅನುಸರಿಸಿ ಅಗ್ನಿಗೆ ಅರ್ಪಿಸುವುದೋ, ಮತ್ತೇನನ್ನೋ ಮಾಡುವುದರ ಮೂಲಕ ವಿಸರ್ಜನೆ ಮಾಡುವುದು ಸಮಂಜಸವಾಗುತ್ತದೆ. ಗಣೇಶನ ಪೂಜಾ ಸಂದರ್ಭದಲ್ಲಿ ಪೂಜಾನಂತರ ವಿಗ್ರಹವನ್ನು ವಿಸರ್ಜಿಸುವ ರೀತಿಯನ್ನು ಒಂದು ಮಾದರಿಯಾಗಿ ತೆಗೆದುಕೊಳ್ಳಬಹುದು. ಕಾಂಪೌಂಡ್ ಬದಿಯಲ್ಲಿ ಮೂತ್ರ ಮಾಡಬಾರದೆಂದು ಕಾಂಪೌಂಡಿನ ಹೊರಭಾಗದಲ್ಲಿ ಕಾವಲುಗಾರರ ರೀತಿಯಲ್ಲಿ ದೇವರ ಫೋಟೋಗಳು, ಮೂರ್ತಿಗಳನ್ನು ಹಾಕುವುದನ್ನೂ ಕಾಣುತ್ತಿದ್ದೇವೆ. ದೇವರ ಫೋಟೋಗಳು, ಚಿತ್ರಗಳನ್ನು ಇಂದು ಬೇಕಾಬಿಟ್ಟಿಯಾಗಿ ಮುದ್ರಿಸುವ ಕೆಲಸಕ್ಕೆ ಕಡಿವಾಣ ಬಿದ್ದರೆ ಉತ್ತಮ. ಆಹ್ವಾನ ಪತ್ರಗಳು, ಕರಪತ್ರಗಳು ಮುಂತಾದವುಗಳಲ್ಲಿ ದೇವರ ಚಿತ್ರಗಳನ್ನು ಮುದ್ರಿಸದಿದ್ದರೆ ಒಳಿತು. ಏಕೆಂದರೆ, ಅವುಗಳು ಮುಂದೊಮ್ಮೆ ತ್ಯಾಜ್ಯವಸ್ತುವಾಗಿ ಕಸದ ತೊಟ್ಟಿ ಸೇರುತ್ತವೆ. ಇದು ಹಿತವೆನಿಸುವುದೇ? ದೇವರ ಚಿತ್ರಗಳನ್ನು ಒಳ ಉಡುಪುಗಳಲ್ಲಿ, ಪಾದರಕ್ಷೆಗಳಲ್ಲಿ ಮುದ್ರಿಸಿ, ಅಶ್ಲೀಲವಾಗಿ ಚಿತ್ರಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಸಹ ಆಗುತ್ತಿರುವುದನ್ನು ಕಾಣುತ್ತಿರುವ ದೌರ್ಭಾಗ್ಯ ನಮ್ಮದಾಗಿದೆ. ಇದಕ್ಕೆ ದೇವರ ಚಿತ್ರಗಳನ್ನು ಬೇಕಾಬಿಟ್ಟಿಯಾಗಿ ಆಹ್ವಾನಪತ್ರಗಳು, ಕರಪತ್ರಗಳು, ಮುಂತಾದವುಗಳಲ್ಲಿ ಮುದ್ರಿಸುವ ಪರಿಪಾಠ ಮತ್ತು ಅವಕಾಶ ಇರುವುದೂ ಒಂದು ಕಾರಣವಾಗಿದೆ. ಧಾರ್ಮಿಕ ಪಂಡಿತರೆನಿಸಿಕೊಂಡವರು ಮತ್ತು ಧಾರ್ಮಿಕ ಸಂಘಟನೆಗಳು ಈ ವಿಚಾರದಲ್ಲಿ ಜನರಿಗೆ ತಿಳುವಳಿಕೆ ಕೊಡುವ ಕೆಲಸ ಮಾಡಬೇಕು.
-ಕ.ವೆಂ.ನಾಗರಾಜ್.
**************
16.6.2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ.
6 ಕಾಮೆಂಟ್‌ಗಳು:

 1. Pramod M Hegade Khandika
  Thumba vishadakara , nanu inthahavarige tilisuvudenendare , frame thegedu olage iruva devara PATAvannu NEERU ANDARE NADIYALLI or KEREYALLI VISARJANE MADI , ee reeti ogeyuvudu sari alla

  ಪ್ರತ್ಯುತ್ತರಅಳಿಸಿ
 2. ಖಂಡಿತವಾಗಿ ದೇವರ ಪಟಗಳನ್ನು ಅಗ್ನಿಗೆ ಅರ್ಪಿಸಿ ಅವುಗಳ ಭಸ್ಮವನ್ನು ಗಿಡದ ಬುಡಕ್ಕೋ ಅಥವಾ ನದಿಯಲ್ಲಿ ಬಿಡುವುದೇ ಸೂಕ್ತವೆನಿಸುತ್ತದೆ. ಇಲ್ಲದಿದ್ದರೆ ನಾವು ನಮ್ಮ ದೇವರ ಪಟಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಅವುಗಳಿಗೆ ಅವಮಾನಮಾಡಿ ಖಂಡಿತಾ ಧರ್ಮಗ್ಲಾನಿಗಳಾಗುತ್ತೇವೆ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಪೂರಕ ಪ್ರತಿಕ್ರಿಯೆಗೆ ವಂದನೆಗಳು, ಶ್ರೀಧರರೇ.

   ಅಳಿಸಿ
 3. ಅವುಗಳು ಸುಮಾರು ೫೦-೬೦ ವರುಷಗಳ ನಂತರ ಹೇಗೆ ಕಾಪಾಡಿದರು ಹಾಳಾಗಿ, ಒಳಗಿನ ಪೋಟೋಗಳು ಮುಟ್ಟಿದರೂ ಮುರಿದು ಹುದುರುವ ಹಂತಕ್ಕೆ ಬಂದಿರುತ್ತವೆ. ಅವುಗಳನ್ನು ಗೌರವಯುತವಾಗಿ ನಾಶಪಡಿಸುವುದು ಹೇಗೆಂಬುದು ತಿಳಿದವರು ತಿಳಿಸಿದರೆ ಉತ್ತಮ. ಹಾಗೆಯೇ ಈಗ ಇನ್ನೊಂದು ಹೊಸ ಪಿಡುಗು ಪ್ರಾರಂಭವಾಗಿದೆ. ರಸ್ತೆಯ ಬಧಿಯಲ್ಲಿ ಹೇಸಿಗೆ ಮೂತ್ರ ವಿಸರ್ಜನೆ ಮಾಡುತ್ತರೆಂದು ವಿವಿಧ ದೇವರ ಚಿತ್ರಗಳಿರುವ ಗ್ಲೇಜ್ ಟೈಲ್ಸ್ ಗಳನ್ನು ಅಂಟಿಸಿರುತ್ತಾರೆ ಅವುಗಳಿಗೆ ಅಷ್ಟಾಗಿ ಬೆಲೆಕೊಡುವುದಿಲ್ಲ. ಕೆಲವು ಕಿಡಿಗೇಡಿಗಳು ಅದರ ಮೇಲೆಯೇ ಮೂತ್ರ ವಿಸರ್ಜನೆ ಮಾಡಿರುತ್ತಾರೆ. ಇವುಗಳನ್ನು ನೋಡಿದರೆ ನಮಗೆ ನೋವಾಗುತ್ತದೆ. ಹಾಗೆಯೇ ಮತ್ತೊಂದು ಪಿಡುಗು ಪಟಾಕಿಗಳ ಮೇಲೆ ಹಿಂದು ದೇವರುಗಳ ಚಿತ್ರವಿರುವ ಪಟಾಕಿಗಳನ್ನು ತಯಾರಿಸಿರುತ್ತಾರೆ. ಇದಕ್ಕೆ ನಮ್ಮ ಸಂಘ ಸಂಸ್ಠೆಗಳು ಅಂತಹವರಿಗೆ ತಿಳುವಳಿಕೆ ನೀಡಬೇಕು.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಸತ್ಯವಾದ ಅಭಿಪ್ರಾಯಕ್ಕೆ ಧನ್ಯವಾದಗಳು, ನಂಜುಂಡರಾಜುರವರೇ.

   ಅಳಿಸಿ
  2. nageshamysore
   ಬದುಕಲ್ಲಿ ದಾರಿ ಕಾಣದೆ ಕಂಗೆಟ್ಟ ಮನುಜ, 'ಕಾಯಬಾರದೆ ದೇವರೆ?' ಎನ್ನಬಹುದು. ಆದರೆ ದೇವರೆ ಸಂಕಟದಲ್ಲಿದ್ದರೆ ಯಾರಿಗೆ ಮೊರೆಯಿಡಬೇಕೊ? ದೇವರ ಮೇಲಿನ ಭಕ್ತಿಯಿರುವಷ್ಟೆ ತೀವ್ರವಾಗಿ, ಇವುಗಳನ್ನು ಸೂಕ್ತರೀತಿಯಲ್ಲಿ ವಿಸರ್ಜಿಸಬೇಕೆನ್ನುವ ಪ್ರಜ್ಞೆ ಮೂಡಿದಲ್ಲಿ ಒಂದಲ್ಲ ಒಂದು ಸರಿಯಾದ ವಿಧಾನ ತಲೆದೋರುತ್ತದೆ, ಕವಿಗಳೆ.

   kavinagaraj
   ನಿಮ್ಮ ಅನಿಸಿಕೆ ಸರಿಯಾಗಿದೆ, ನಾಗೇಶರೇ. ಧನ್ಯವಾದಗಳು.

   ಗಣೇಶ
   ದೇವರ ಫೋಟೋಗಳನ್ನು, ಕ್ಯಾಲಂಡರ್, ಪತ್ರಿಕೆಗಳನ್ನು ಅಲ್ಲಿ ಇಲ್ಲಿ ಎಸೆಯುವ ಬದಲು, ಹಳೇ ಪೇಪರ್(ರದ್ದಿ ಆಯುವವರಿಗೆ) ಮಾರಾಟಗಾರರಿಗೆ ಕೊಟ್ಟರಾಯಿತು.

   kavinagaraj
   ಅದಕ್ಕಿಂತಾ ಕ್ಯಾಲೆಂಡರ್, ಪತ್ರಿಕೆಗಳಲ್ಲಿ ಮುದ್ರಿಸದಿರುವುದೇ ಹೆಚ್ಚು ಒಳ್ಳೆಯದು. ಧನ್ಯವಾದ, ಗಣೇಶರೇ.

   ಅಳಿಸಿ