ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜುಲೈ 23, 2014

ಲೋಭಕ್ಕೆ ಮದ್ದುಂಟೆ?

ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಮುತಕೋಕಯಾತುಮ್ | 
ಸುಪರ್ಣಯಾತುಮುತ ಗೃಧ್ರಯಾತುಂ ದೃಷದೇವ ಪ್ರ ಮೃಣ ರಕ್ಷ ಇಂದ್ರ || (ಋಕ್.೭.೧೦೪.೨೨)
     ರಕ್ಷಸ್ ಎಂದರೆ ದುರ್ಭಾವನೆ. ಯಾರು ದುರ್ಭಾವನೆಗಳನ್ನು ಹೊಂದಿರುತ್ತಾರೋ ಅವರೇ ರಾಕ್ಷಸರು. ರಾಕ್ಷಸರು ಎಂದರೆ ಅವರು ಬೇರೆ ಯಾವುದೋ ಜೀವಿಗಳಲ್ಲ, ಮಾನವರೂಪಿಗಳಾಗೇ ಇದ್ದು ದುರ್ಭಾವನೆಗಳನ್ನು ಹೊಂದಿದವರು. ಈ ವೇದಮಂತ್ರದಲ್ಲಿ ಮಾನವನಲ್ಲಿ ಕಂಡು ಬರುವ ದುರ್ಭಾವನೆಗಳಾದ ಮೋಹವನ್ನು ಗೂಬೆಯ ನಡೆಗೂ, ಕ್ರೋಧವನ್ನು ತೋಳದ ಸ್ವಭಾವಕ್ಕೂ, ಮತ್ಸರವನ್ನು ನಾಯಿಯ ಗುಣಕ್ಕೂ, ಕೋಕ ಪಕ್ಷಿಯನ್ನು (ಚಕ್ರವಾಕ/ಜಕ್ಕವಕ್ಕಿ) ಕಾಮದ ಸಂಕೇತವಾಗಿಯೂ, ತಾನೇ ಮೇಲೆಂಬ ಗರ್ವ(ಮದ)ಕ್ಕೆ ಗರುಡ ಪಕ್ಷಿಯನ್ನೂ, ಹದ್ದನ್ನು ಲೋಭಕ್ಕೆ ಸಂಕೇತಿಸಿದ್ದು, ಈ ಗುಣಗಳನ್ನು ತೀಡಿ ಹಾಕು, ನಿರ್ಮೂಲ ಮಾಡು ಎಂದು ಜೀವಾತ್ಮರಿಗೆ ಕರೆ ಕೊಡಲಾಗಿದೆ. ಮಾನವನ ಶತ್ರುಗಳಾದ ಈ ಆರು ಗುಣಗಳು ಅವನನ್ನು ರಾಕ್ಷಸನನ್ನಾಗಿ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಕಾಮ, ಕ್ರೋಧ, ಮದ, ಮತ್ಸರ, ಮೋಹಗಳ ಕುರಿತು ಪ್ರತ್ಯೇಕ ಲೇಖನಗಳಲ್ಲಿ ಚರ್ಚಿಸಿದ್ದು, ಲೋಭದ ಕುರಿತು ಇಲ್ಲಿ ವಿಚಾರವನ್ನು ಹಂಚಿಕೊಳ್ಳೋಣ.
     ಲೋಭ ಎಂಬ ಪದಕ್ಕೆ ಸಂಪತ್ತು, ಲಾಭ, ಆಹಾರ, ಪಾನೀಯ, ಹೆಸರು/ಕೀರ್ತಿ, ಇತ್ಯಾದಿಗಳ ಬಗ್ಗೆ ದುರಾಸೆ, ಅತಿಯಾದ ಆಸೆ ಹೊಂದಿರುವುದು, ಕೃಪಣತೆ, ಜಿಪುಣತನ, ಇತ್ಯಾದಿ ಅರ್ಥಗಳು ಹೊರಹೊಮ್ಮುತ್ತವೆ. ಮೇಲಿನ ಮಂತ್ರ 'ಉತ ಗೃಧ್ರಯಾತುಂ ಜಹಿ' ಅಂದರೆ, 'ಮತ್ತು ಹದ್ದಿನ ನಡೆಯನ್ನು ಹೊಡೆದು ಹಾಕು' ಎನ್ನುತ್ತದೆ. ಹದ್ದಿನ ನೋಟ ವಕ್ರವಾಗಿರುತ್ತದೆ. ಅದರ ಧ್ವನಿಯೂ ವಕ್ರವಾಗಿದ್ದು ಎಲ್ಲವೂ ತನಗೇ ಇರಲಿ ಎಂಬ ಆಸೆ ಅದರ ಗುಣಸ್ವಭಾವವಾಗಿದೆ. ಲೋಭಿಯಾದವನ ಗುಣವೂ ಅಷ್ಟೆ, ವಕ್ರವಾಗಿರುತ್ತದೆ. ಎಲ್ಲವೂ ತನಗೇ ಬೇಕೆಂಬ ಹಪಾಹಪಿತನದ ವ್ಯಕ್ತಿ ತಾನೂ ಹಾಳಾಗುತ್ತಾನೆ, ಸಮಾಜಕ್ಕೂ ಹಾನಿ ತರುತ್ತಾನೆ. ಪರಮ ಸ್ವಾರ್ಥವನ್ನು ಇಲ್ಲಿ ಕಾಣಬಹುದಾಗಿದೆ. 
ಬರುವುದೆಲ್ಲದಕು ಹಿಡಿಯುವುದು ಗ್ರಹಣ
ಕೂಡಿಡುವ ಬಚ್ಚಿಡುವ ನಿಪುಣ ತಾ ಕೃಪಣ |
ಕೈಯೆತ್ತಿ ಕೊಡಲಾರ ಬಂದದ್ದು ಬಿಡಲಾರ
ಲೋಭಿಯಾ ಲೋಭಕೆ ಮದ್ದುಂಟೆ ಮೂಢ || 
     ಲೋಭಿಗಳಿಗೆ ಯಾವುದೇ ನೀತಿ, ನಿಯಮಗಳು, ಸಿದ್ಧಾಂತಗಳು ಪಥ್ಯವಾಗುವುದಿಲ್ಲ. ಅವರ ಒಂದೇ ಗುರಿ ಎಲ್ಲವೂ ತಮಗಿರಲಿ ಎಂಬುದಷ್ಟೇ. ಇದರಿಂದಾಗಿ ಆಸ್ತಿಕತೆ, ಧಾರ್ಮಿಕತೆ, ಒಳ್ಳೆಯ ವಿಚಾರಗಳು, ನಡೆಗಳು, ಒಟ್ಟಾರೆಯಾಗಿ ಸತ್ಪ್ರವೃತ್ತಿಗಳು ಮರೆಯಾಗುತ್ತವೆ. ಕ್ರೂರ ಪಶುಗಳಿಗೂ ಅವರಿಗೂ ವ್ಯತ್ಯಾಸ ಇರದೆ, ಸಮಾಜ ದುಸ್ಥಿತಿಗೆ ಜಾರುತ್ತದೆ. ಲೋಭಿಗಳಲ್ಲಿ ಸಂಪತ್ತು ಕ್ರೋಢೀಕೃತವಾದರೆ, ಉಳಿದವರು ಸಹಜವಾಗಿ ಸಿಡಿಯುತ್ತಾರೆ ಮತ್ತು ಅವರಲ್ಲಿನ ದುರ್ಭಾವನೆಗಳೂ ಜಾಗೃತವಾಗುತ್ತವೆ. ಹೀಗಾಗಿ ಲೋಭಿ ತಾನು ಕೆಡುವುದಲ್ಲದೆ, ಸಮಾಜವನ್ನೂ ಕೆಡಿಸುತ್ತಾನೆ. ಲೋಭಿಯಾದವರು ಯಾವ ಮಾರ್ಗದಲ್ಲೇ ಆಗಲಿ, ತನಗೆ ಹಣ ಬಂದರಾಯಿತು ಎಂಬ ಮನೋಭಾವದವನಾಗಿದ್ದು, ಈ ಕಾರಣದಿಂದಲೇ ಕಪ್ಪು ಹಣ, ಭ್ರಷ್ಠಾಚಾರ, ಕಾಳಸಂತೆ, ಜೂಜು, ಬೆಟ್ಟಿಂಗ್ ವ್ಯವಹಾರ, ಅಕ್ರಮ ಶೇಖರಣೆ, ಕಲಬೆರಕೆ, ಮಾದಕ ದ್ರವ್ಯಗಳ ವ್ಯಾಪಾರ. ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆ, ದೇಶದ್ರೋಹದ ಚಟುವಟಿಕೆಗಳು, ಪ್ರಾಣಹಾನಿ, ಮಾನಹಾನಿ, ಭಯೋತ್ಪಾದಕತೆ, ಮುಂತಾದವುಗಳು ವಿಜೃಂಭಿಸುತ್ತವೆ ಎಂಬುದು ನಿಧಾನವಾಗಿ ಆಲೋಚಿಸಿದರೆ ಅರ್ಥವಾಗುತ್ತದೆ. 
ದೃಷ್ಟಿಭೋಗಕ್ಕುಂಟು ವಿನಿಯೋಗಕಿಲ್ಲ
ಅಪಹಾಸ್ಯ ನಿಂದೆಗಳಿಗಂಜುವುದೆ ಇಲ್ಲ |
ಪ್ರಾಣವನೆ ಬಿಟ್ಟಾನು ಕೈಯೆತ್ತಿ ಕೊಡನು
ಲೋಭಿಯಾ ಲೋಭಕೆ ಮದ್ದುಂಟೆ ಮೂಢ ||
     ಲೋಭಕ್ಕೆ ಮಿತಿಯೆಂಬುದೇ ಇಲ್ಲ. ಎಷ್ಟಿದ್ದರೂ ಬೇಕು, ಏನಿದ್ದರೂ ಬೇಕು. ಮಹಾಭಾರತದ ಆದಿ ಪರ್ವದ ಒಂದು ಶ್ಲೋಕದಲ್ಲಿ, 'ಪ್ರಪಂಚದಲ್ಲಿ ಎಷ್ಟು ಆಹಾರ ಪದಾರ್ಥಗಳಿವೆಯೋ, ಎಷ್ಟು ಚಿನ್ನವಿದೆಯೋ, ಎಷ್ಟು ಪಶು ಸಂಪತ್ತಿದೆಯೋ, ಎಷ್ಟು ಸ್ತ್ರೀಯರಿದ್ದಾರೋ, ಎಲ್ಲವೂ ಒಬ್ಬನಿಗೇ ಸಿಕ್ಕಿದರೂ ಸಾಲದೆನ್ನಿಸುತ್ತದೆ. ಆದ್ದರಿಂದ ಲೋಭವನ್ನು ಬಿಟ್ಟುಬಿಡಬೇಕು' ಎಂದು ವ್ಯಾಸ ಮಹರ್ಷಿ ಬರೆಯುತ್ತಾರೆ. ಲೋಭಿಗಳಿಗೆ ಇಂತಹ ವಿಚಾರಗಳು ಪಥ್ಯವಾಗುವುದೇ ಇಲ್ಲ. ನೂರಾರು ಜನರಿಗೆ ನೋವು ಕೊಟ್ಟು ಅಕ್ರಮವಾಗಿ ಗಳಿಸಿದ ಸಂಪತ್ತು ಹಿತ ತರುವುದಿಲ್ಲ. ಅವರುಗಳನ್ನು ಉಪವಾಸ ಮಾಡಲು ಬಿಟ್ಟು ಮೃಷ್ಟಾನ್ನ ಭೋಜನ ಉಂಡು ಸುಖವಾಗಿರುತ್ತೇವೆ ಎಂಬುದು ಭ್ರಮೆಯಷ್ಟೆ. ಸಮಾಜದ ಶಾಪ ಲೋಭಿಗಳಿಗೆ ತಟ್ಟದೇ ಇರದು. 'ಇಷ್ಟೆಲ್ಲಾ ಮಾಡಿದ್ದು ಮಕ್ಕಳ ಹಿತಕ್ಕಾಗಿ, ಸುಖಕ್ಕಾಗಿ' ಎಂಬ ಮಾತು ಕೇಳಿ ಬರುತ್ತದೆ. ಮಕ್ಕಳಿಗೆ ಕೊಡಬೇಕಾದದ್ದು ಆಸ್ತಿಯಲ್ಲ, ಸಂಪತ್ತಲ್ಲ, ಯೋಗ್ಯವಾದ ವಿದ್ಯೆ, ಸತ್ಪ್ರಜೆಗಳನ್ನಾಗಿಸುವ ಶಿಕ್ಷಣ. ಅಪ್ಪ ಮಾಡಿಟ್ಟ, ಕೂಡಿಟ್ಟ ಆಸ್ತಿಯಿಂದ ಮಕ್ಕಳು ವಿಲಾಸಿಗಳಾಗಿ, ಸೋಮಾರಿಗಳಾಗಿ ಸಮಾಜಕಂಟಕರಾಗಿ ಬಾಳುವುದನ್ನು ಕಾಣುತ್ತಿರುತ್ತೇವೆ. ಹಣ ಮನುಷ್ಯರನ್ನು ಬದಲಾಯಿಸುವುದಿಲ್ಲ, ಅವರಲ್ಲಿನ ಮುಖವಾಡಗಳನ್ನು ಕಳಚುತ್ತದೆ. ಐಷಾರಾಮಿ ಕಾರುಗಳಲ್ಲಿ ಸ್ನೇಹಿತರೊಡಗೂಡಿ ಪಾನಮತ್ತರಾಗಿ ಹೋಟೆಲುಗಳಲ್ಲಿ, ಬಾರುಗಳಲ್ಲಿ ದಾಂಧಲೆ ಮಾಡುವ, ಬೆಂಕಿ ಹಚ್ಚುವ ಯುವಕರುಗಳನ್ನು ಕಂಡು ಮನಸ್ಸು ಮರುಗುತ್ತದೆ. ಕಾನೂನು, ಸುವ್ಯವಸ್ಥೆ ಪಾಲನೆ ಹೊಣೆ ಹೊತ್ತ ಪೋಲಿಸರ ಮೇಲೆ ಕೈಮಾಡಿಯೂ ಪಾರಾಗಬಲ್ಲೆವೆಂಬ ಪರಿಸ್ಥಿತಿ ಸಮಾಜ ಅಧೋಗತಿಗೆ ಜಾರುತ್ತಿರುವುದನ್ನು ತೋರಿಸುತ್ತಿದೆ. ಅಕ್ರಮ ಸಂಪತ್ತು ಅಧರ್ಮವನ್ನೇ ಪೋಷಿಸುತ್ತದೆ, ಜನರಲ್ಲಿ ಅಶಾಂತಿಯನ್ನೇ ಉಂಟು ಮಾಡುತ್ತದೆ. ಯಾರು ಶಾಸಕಾಂಗದ ಪ್ರಮುಖರೆನಿಸಿರುವರೋ ಅವರುಗಳೇ ಕೋಟಿ ಕೋಟಿ ಹಣ ಪಡೆದು ತಮ್ಮನ್ನು ತಾವು ಮಾರಿಕೊಳ್ಳುತ್ತಿರುವುದು ಇಂದು ಅಸಹಜ ಸಂಗತಿಯಾಗಿ ಉಳಿದಿಲ್ಲವೆಂಬುದು ಮತ್ತು ಅದನ್ನು ಅವರುಗಳು ನಾಚಿಕೆಯಿಲ್ಲದೆ ಸಮರ್ಥಿಸಿಕೊಳ್ಳುತ್ತಿರುವುದು ಲೋಭಿತನದ ಪರಾಕಾಷ್ಠೆಯಾಗಿದೆ. 
     ನಿಜವಾದ ಬಡವನೆಂದರೆ ಲೋಭಿಯೇ! ಏಕೆಂದರೆ ಬಡವನಾದರೋ ಉಣ್ಣಲು, ಉಡಲು ಸಿಕ್ಕರೆ ಸಂತುಷ್ಟನಾಗುತ್ತಾನೆ. ಲೋಭಿಗೆ ಆ ತೃಪ್ತಿ ಇರುವುದೇ ಇಲ್ಲ. ಕಡುಬಡವರಂತೆ ಜೀವಿಸಿ ಸತ್ತಾಗ ಅಪಾರ ಹಣ, ಸಂಪತ್ತು ಬಿಟ್ಟು ಹೋದ ಮಹನೀಯರುಗಳು ಇದ್ದಾರೆ. ಅವರಲ್ಲಿದ್ದ ಸಂಪತ್ತು ಸಮಾಜಕ್ಕಿರಲಿ, ಸ್ವತಃ ಅವರಿಗೇ ಉಪಯೋಗಕ್ಕೆ ಬಂದಿರಲಿಲ್ಲ. ಜಗತ್ತಿಗೇ ಶ್ರೇಷ್ಠ ಎನಿಸಿದ್ದ ಚಕ್ರವರ್ತಿಗಳು, ರಾಜ ಮಹಾರಾಜರುಗಳು ಸಾಯುವಾಗ ಒಂದು ಕವಡೆ ಕಾಸನ್ನೂ ತಮ್ಮೊಡನೆ ಒಯ್ಯಲಾಗಲಿಲ್ಲ. ಸಮುದ್ರಕ್ಕೇ ಸೇತುವೆ ಕಟ್ಟಿದ್ದ ಶ್ರೀರಾಮಚಂದ್ರ, ಮಹಾಭಾರತ ಯುದ್ಧದಲ್ಲಿ ಜಯಗಳಿಸಿದ ಧರ್ಮರಾಯ, ಇಂತಹ ಅನೇಕ ಶೂರ, ಮಹಾಶೂರರು ಆಳಿದ ಈ ಭೂಮಿ ಈಗಲೂ ಇಲ್ಲೇ ಇದೆ, ಅವರೊಡನೆ ಹೋಗಲಿಲ್ಲ. ಕೋಟಿ, ಕೋಟಿ ಅಕ್ರಮ ಸಂಪತ್ತು ಕೂಡಿಸಿ, ವಿಧವಿಧವಾದ ಆಸ್ತಿ ಪಾಸ್ತಿಗಳನ್ನು ಮಾಡಿಕೊಂಡಿರುವ, ಮಾಡಿಕೊಳ್ಳುತ್ತಿರುವ ನಮ್ಮ ನಾಯಕರುಗಳ ಜೊತೆಗೆ ಸಹ ಆ ಸಂಪತ್ತು ಹೋಗುವುದೇ ಇಲ್ಲ. ಆದರೂ ಈ ಲೋಭ ಹೋಗುವುದೇ ಇಲ್ಲವೆಂದಾದರೆ, ಈ ರಕ್ಷಸ್ಸು, ದುರ್ಭಾವನೆ, ರಾಕ್ಷಸತ್ವ ಎಷ್ಟು ಪ್ರಬಲವಾಗಿದೆ ಎಂಬುದು ವೇದ್ಯವಾಗುತ್ತದೆ. ನಮ್ಮನ್ನು ದುರಾಸೆಯ ಜನರು ಆಳುತ್ತಿದ್ದಾರೆಂಬುದು ಅರಿವಾದಾಗ ನಮಗೆ ಅತೀವ ನೋವಾಗುತ್ತದೆ. ಈ ಭೀಕರ ಕ್ಯಾನ್ಸರಿನಿಂದ ವಿಮುಕ್ತಿ ಸಿಗಬೇಕೆಂದರೆ ಜನರು ಜಾಗೃತರಾಗಬೇಕಾಗುತ್ತದೆ. ಅದೊಂದೇ ಮಾರ್ಗ. ಸುವಿಚಾರಿಗಳು ಜನರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ.
     ನೂರಾರು ಜನರನ್ನು ನೋಯಿಸಿ ಗಳಿಸಿದ ಸಂಪತ್ತು ಒಂದು ಸಂಪತ್ತೇ? ಭರ್ತೃಹರಿಯ ನೀತಿಶತಕದ ಈ ಶ್ಲೋಕ ನೋಡಿ:
"ಸ ತು ಭವತು ದರಿದ್ರೋ ಯಸ್ಯ ತೃಷ್ಣಾ ವಿಶಾಲಾ ಮನಸಿ ಚ ಪರಿತುಷ್ಟೇ ಕೋರ್ಥವಾನ್ ಕೋ ದರಿದ್ರಃ |"
ಯಾರ ಆಸೆಗೆ ಮಿತಿಯಿಲ್ಲವೋ, ಇನ್ನೂ ಬೇಕು, ಬೇಕು ಎಂದು ಹಪಹಪಿಸುತ್ತಾನೋ ಅವನು ಕೋಟ್ಯಾಧೀಶನಾದರೂ ದರಿದ್ರನಿಗಿಂತ ಕಡೆಯಾಗಿರುತ್ತಾನೆ. ಸಾಕೆನ್ನುವವನೇ ಶ್ರೀಮಂತ, ಬೇಕೆನ್ನುವವನೇ ಬಡವ! ಯಾರು ತೃಪ್ತರೋ ಅವರೇ ಶ್ರೀಮಂತರು; ಅತೃಪ್ತರೇ ದರಿದ್ರರು. ವೇದದ ಕರೆಯಂತೆ ಹದ್ದಿನ ವಕ್ರ ನಡೆಯನ್ನು, ಅರ್ಥಾತ್ ಲೋಭವನ್ನು ನಿರ್ದಾಕ್ಷಿಣ್ಯವಾಗಿ ಹೊಡೆದಟ್ಟದೆ ರಾಕ್ಷಸತ್ವ ಕಳೆಯಲಾರದು, ಮಾನವತ್ವ ಸಿಗಲಾರದು. ಲೋಭಕ್ಕೆ ಮದ್ದುಂಟೆ? ಅದನ್ನು ಹೊಡೆದೋಡಿಸುವ ಆಯುಧವಿದೆಯೇ? ಇದೆ, ಆತ್ಮಾವಲೋಕನವೇ ಮದ್ದು ಮತ್ತು  ಆಯುಧವೂ ಅದೇ! ಮಾನವತೆಯನ್ನು ಬೋಧಿಸುವ ವೈದಿಕ ಭಜನೆಯ ಈ ಸಾಲುಗಳು ನಮ್ಮನ್ನು ಪ್ರೇರಿಸಲಿ:
ದೀನರ್ಗೆ ನೋವನಿತ್ತು ಸಂಪತ್ತ ಗಳಿಸದಂತೆ |
ನೀ ನೀಡು ಶುದ್ಧ ಮತಿಯ ಪರಹಿಂಸೆಗೆಳಸದಂತೆ ||
-ಕ.ವೆಂ. ನಾಗರಾಜ್.
*****************
21.7.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

4 ಕಾಮೆಂಟ್‌ಗಳು:

 1. ಪ್ರತ್ಯುತ್ತರಗಳು
  1. pitnal
   ಕವಿನಾ ಸರ್, ಜಗದ್ವಿಖ್ಯಾತ ದೊರೆ ಸಾಯಲು ಅವನ ದೇಹಕ್ಕೆ ಕಾಸು ಕೊಟ್ಟು ಪಡೆಯಲು ಒಬ್ಬರೂ ಮುಂದಾಗರು' ಎನ್ನುವ ಶರಣರ ನುಡಿಗಢಣದ ಸಾಲುಗಳು ಈ ಸಮಯದಲ್ಲಿ ನೆನಪಾಗುತ್ತಿದೆ. ಲೋಭವಿದು ತನ್ನನ್ನು ತಾನೇ ಕೊಲ್ಲುವ ಹೀನ ದಾರಿ, ಅದರಲ್ಲಿ ಸಾಗುವವರಿಗೆ ಅದು ಅರ್ಥವಾಗದು, ಅರ್ಥವಾದವರು ಮನುಷ್ಯರಾದ ಉದಾಯರಣೆಗಳೂ ಇವೆ ಅಲ್ಲವೇ ಸರ್. ಸುಂದರ ಲೇಖನ, ಧನ್ಯವಾದಗಳು ಸರ್

   kavinagaraj
   ಪ್ರತಿಕ್ರಿಯೆಗೆ ವಂದನೆಗಳು, ಇಟ್ನಾಳರೇ.

   partha1059
   ಲೋಭ ಹಾಗು ಜಿಪುಣತನ ಬೇರೆ ಬೇರೆಯ ಅಥವ ಒಂದೇನಾ ?
   ಜಿಪುಣನಾಗಿತ್ತು ಒಬ್ಬನ್ನು ಪರದನಕ್ಕೆ ಆಸೆ ಪಡದಿರುವನಾದರೆ ಅವನು ನಿಂದನೆಗೆ ಅರ್‌ಹನಾ
   ಅವನು ದುಡಿದಿರುವದನ್ನು ಯಾವುದಕ್ಕು ವ್ಯಯಿಸದೆ ಇಟ್ಟು ಹೋಗುವನು ಜಿಪುಣ. ಕೊಡುವುದು ಬಿಡುವುದು ಅವನ ಇಚ್ಚೆ,
   ಅದರಲ್ಲಿ ಪಾಪ ಪುಣ್ಯದ ಪ್ರಸಕ್ತಿ ಇರಲ್ಲ. ಆದರೆ ವ್ಯಯಮಾಡದೆ ಲೋಕಕ್ಕೆ ನಷ್ಟ ಮಾಡಿದರೆ ನಿಂದನೆಗೆ ಸರಿಯಾದವನು,
   ಉದಾಹರಣೆ ತಿನ್ನುವ ವಸ್ತು ಪರರಿಗೂ ಕೊಡದೆ ತಾವು ತಿನ್ನದೆ ಕೆಡುವವರೆಗೂ ಇಟ್ಟು ನಂತರ ಹೊರಗೆ ಎಸೆಯುವವರು !

   kavinagaraj
   ಲೋಭ ಮತ್ತು ಜಿಪುಣತನಗಳ ನಡುವೆ ಬಹಳ ತೆಳುವಾದ ಗೆರೆಯಿದೆ. ಕೆಲವೊಮ್ಮೆ ಜಿಪುಣತನವೂ ನಿಂದನೀಯವಾಗುತ್ತದೆ. ನನಗೆ ಗೊತ್ತಿದ್ದ ಒಬ್ಬರು ಮನೆಯ ದವಸ-ಧಾನ್ಯಗಳನ್ನು ಕೋಣೆಯೊಂದರಲ್ಲಿ ಇಟ್ಟು ಬೀಗ ಹಾಕಿ 'ಈದಿನಕ್ಕೆ ಇಷ್ಟು ಮಾತ್ರ ಬಳಸು' ಎಂದು ಪತ್ನಿಗೆ ಅಳೆದು ಅಕ್ಕಿ, ಬೇಳೆ ಕೊಡುತ್ತಿದ್ದರು. ಉಚಿತವಾಗಿ ಸಿಗುವ ಯಾವುದನ್ನೇ ಆಗಲಿ ತಪ್ಪದೆ ಪಡೆಯುತ್ತಿದ್ದರು. ಹಾಗೆಂದು ಅವರು ಬಡವರೇನೂ ಆಗಿರಲಿಲ್ಲ. ಅವರ ಮನೆಯವರು ಬಹಳ ಮುಜುಗರಕ್ಕೆ ಒಳಗಾಗುತ್ತಿದ್ದರು. ಹಾಳಾದರೂ ಪರವಾಗಿಲ್ಲ, ಇತರರಿಗೆ ಕೊಡುವ ಮನಸ್ಸು ಮಾಡುತ್ತಿರಲಿಲ್ಲ. ಪ್ರತಿಕ್ರಿಯೆಗೆ ವಂದನೆಗಳು, ಪಾರ್ಥರೇ.

   ಅಳಿಸಿ
  2. nageshamysore
   ಜೀಣತನ ಇರುವುದನ್ನೂ ಖರ್ಚು ಮಾಡಿಸ ಬಿಡದೆ ಕಾಡಿಸಿದರೆ, ಲೋಭ ಇರುವುದರ ಮೇಲೆ ಅಗತ್ಯಕ್ಕಿಂತ ಮತ್ತಷ್ಟು ಹೆಚ್ಚು ಕೂಡಿಸಿಡುವ ಅತಿಯಾಸೆಯನ್ನು ಪ್ರಲೋಭಿಸುತ್ತದೆ ಎನ್ನಬಹುದೆ? ಒಂದು ರೀತಿ ಎರಡು ಪರಸ್ಪರ ವಿಲೋಮ ದಿಕ್ಕಲ್ಲಿ ವರ್ತಿಸಿದರೂ ಫಲಿತ ಒಂದೆ ಎನ್ನಬಹುದು - ಇರುವುದನ್ನು ಕಡಿಮೆಯಾಗಿಸಬಿಡದೆ ಹೆಚ್ಚಾಗಿಸಿಕೊಳ್ಳುವುದು :-)

   ಅಳಿಸಿ