ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಜುಲೈ 23, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ -8

ವೇದ ಮತ್ತೆ ಮತ್ತೆ ಸಾರುತ್ತಲಿದೆ:
ಗೂಹತಾ ಗುಹ್ಯಂ ತಮೋ ವಿ ಯಾತ ವಿಶ್ವಮತ್ರಿಣಮ್| ಜ್ಯೋತಿಷ್ಕರ್ತಾ ಯದುಶ್ಮಸಿ|| (ಋಕ್.1.86.10)
     
[ಗುಹ್ಯಂ ತಮಮ್] ಗೂಢವಾದ ಅಂತರಿಕ ತಮಸ್ಸನ್ನು, ಅಜ್ಞಾನಾಂಧಕಾರವನ್ನು, [ಗೂಹತ] ಅದುಮಿ ಹಾಕಿರಿ. [ಅತ್ರಿಣಂ ವಿಶ್ವಮ್] ಆತ್ಮನನ್ನು ನುಂಗಿ ಹಾಕುವ ಸಮಸ್ತ ದುರ್ಗುಣಗಳನ್ನು [ವಿಯಾತ] ದೂರಕ್ಕಟ್ಟಿರಿ. [ಯತ್ ಉಶ್ಮಸಿ] ಯಾವುದನ್ನು ಅಪೇಕ್ಷಿಸುತ್ತೇವೋ, [ಜ್ಯೋತಿಃ ಕರ್ತಃ] ಆ ಜ್ಞಾನಜ್ಯೋತಿಯನ್ನು ಬೆಳಗಿರಿ. ವೇದಗಳ ಜೀವ ಜೀವಾಳ ಇದೇ ಜ್ಯೋತಿ. ಇದೇ ಜ್ಞಾನಜ್ಯೋತಿ. ವೇದಗಳು ಎಷ್ಟು ಉದಾರವೋ ಅಷ್ಟೇ ಅಂಧಕಾರ ವಿದೂರ. ಅವು ಭಗವದ್ಭಕ್ತನ ಬಾಯಿನಿಂದ ಬಿನ್ನಹ ರೂಪದಲ್ಲಿ ಹೊರಡಿಸುವುದಾದರೂ, "ಮಾ ನೋ ದೀರ್ಘಾ ಅಭ ಸಹಸ್ತಮಿಸ್ರಾಃ" (ಋಕ್.2.27.14) -ಪ್ರಭೋ, ದೀರ್ಘವಾದ ಅಂಧಕಾರಗಳು ನಮ್ಮನ್ನು ಆವರಿಸದಿರಲಿ- ಎಂದೇ. ಭಕ್ತನ ಭಾವನಾಭರಿತ ಹೃದಯದ ಮೇಲೆ ಅಂಕಿತಗೊಳಿಸುವುದಾದರೂ - "ಜ್ಯೋತಿರ್ವೃಣೀತ ತಮಸೋ ವಿಜಾಸನ್" (ಋಕ್.3.39.7) - ಅಂಧಕಾರದಿಂದ ದೂರಸರಿದು ಜ್ಯೋತಿಯನ್ನು ತುಂಬಿಕೊಳ್ಳಬೇಕು- ಎಂಬ ಪುನೀತ ಭಾವನೆಯನ್ನೇ. ಹೆಚ್ಚೇನು? ಆರ್ಯರ - ಶ್ರೇಷ್ಠರ ಸ್ಫುಟ ಚಿತ್ರವನ್ನು ಚಿತ್ರಿಸುವುದಾದರೂ "ಆರ್ಯಾ ಜ್ಯೋತಿಷಗ್ರಾಃ" (ಋಕ್.7.33.7)- ಜ್ಯೋತಿಯನ್ನು ಮುಂದಿಟ್ಟುಕೊಂಡು ಮುನ್ನಡೆಯುವವರೇ ಆರ್ಯರು- ಎಂಬ ಶಬ್ದಗಳಿಂದಲೇ. ವೇದಗಳ ಈ ಜ್ಯೋತಿ ಬೆಂಕಿಯಲ್ಲ, ಸೂರ್ಯನೂ ಅಲ್ಲ, ನಿಷ್ಕಲ್ಮಶವಾದ, ಪರಮ ಪರಿಷ್ಕೃತವಾದ ದಿವ್ಯಜ್ಞಾನ.
-ಪಂ. ಸುಧಾಕರ ಚತುರ್ವೇದಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ