ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಜುಲೈ 5, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ - 6






     ವಸ್ತುತಃ ವೇದಗಳು ಪ್ರತಿಯೊಬ್ಬ ಮಾನವನ ಪರಿಪೂರ್ಣ ವಿಕಾಸಕ್ಕೆ ಪಥಪ್ರದರ್ಶನ ಮಾಡುವ, ಸರ್ವೋನ್ನತಿಯ, ಸನ್ಮಾರ್ಗದ ಜ್ಯೋತಿಸ್ತಂಭಗಳಾಗಿ ವಿರಾಜಿಸುವ, ಸರ್ವಥಾ ಭ್ರಾಂತಿರಹಿತವಾದ, ಸಮಸ್ತ ಸತ್ಯ ವಿದ್ಯೆಗಳಿಂದ ಪರಿಪ್ಲುತವಾದ ಸಾರ್ವಕಾಲಿಕ-ಸಾರ್ವಭೌಮ ಪವಿತ್ರ ಶಾಸ್ತ್ರಗಳಾಗಿವೆ. ದೇಶ-ವಿದೇಶಗಳ ಗೌರ-ಶ್ಯಾಮಗಳ, ನರ-ನಾರಿಯರ, ಜನಾಂಗ-ಜಾತಿಗಳ ಭೂತ-ವರ್ತಮಾನ-ಭವಿಷ್ಯತ್ತುಗಳ ಭೇದ-ಸೋಂಕು ವೇದಗಳಿಗಿಲ್ಲ. "ವೇದ" ಎಂಬ ಶಬ್ದದ ಯೌಗಿಕಾರ್ಥವೇ "ನಿಷ್ಕಳ ಜ್ಞಾನ" ಎಂದು. ಜ್ಞಾನ ಯಾರಿಗೆ ಬೇಕು? ಯಾರಿಗೆ ಬೇಡ? ಅನ್ಯ ಮತೀಯ ಗ್ರಂಥಗಳಂತೆ ವೇದಗಳಲ್ಲಿ ಪಕ್ಷಪಾತಗಳಿಗೆ, ರಾಗ-ದ್ವೇಷಗಳಿಗೆ, ಸ್ವ-ಪರ ಅಥವಾ ಸ್ತ್ರೀ-ಪುರುಷರೆಂಬ ಮೇಲು-ಕೀಳೆಂಬ ಬೇಧಗಳಿಗೆ ವಿಜ್ಞಾನಕ್ಕೆ ಬೆನ್ನು ತಿರುಗಿಸಿ ನಡೆ ಎಂಬ ಅಜ್ಞಾನಾಂಧ ವಿಶ್ವಾಸಗಳಿಗೆ ಸೂಜಿಯ ಮೊನೆಯಷ್ಟೂ ಎಡೆಯಿಲ್ಲ. ಎಲ್ಲವನ್ನೂ ತನ್ನವರೇ ಎಂದು ಬಗೆದ ಹೃದಯ ವೈಶಾಲ್ಯಕ್ಕೆ ಪಾರಮಾರ್ಥಿಕ ಸಾಂಸಾರಿಕ ಸತ್ಯಜ್ಞಾನ ಪ್ರಾಬಲ್ಯಕ್ಕೆ ತವರುಮನೆ ಈ ಭಗವದ್ವಾಣಿ ವೇದ ಚತುಷ್ಟಯ. "ಸತ್ಯವನ್ನು, ತಥ್ಯವನ್ನು ಆತ್ಮಬಲದಿಂದ ಗುರುತಿಸು. ಹೊಸದು-ಹಳೆಯದು ಎಂದು ನೋಡಬೇಡ. ಸತ್ಯ ಸ್ವೀಕಾರಕ್ಕೆ ಜ್ಞಾನಂಗಿಕಾರಕ್ಕೆ ನಿನ್ನ ಆತ್ಮ ಸದಾ ಸಿದ್ದವಾಗಿರಲಿ; ಸದಾ ಚರಮ ಲಕ್ಷ್ಯವನ್ನು ಅಂತಿಮ ಧ್ಯೇಯವನ್ನು ಸ್ಪರ್ಷಿಸಲು ನಿನ್ನ ಮನಸ್ಸಿನ ಗವಾಕ್ಷ ತೆರೆದಿಟ್ಟಿರಲ್ಪಡಲಿ" ಎಂದು ಆದೇಶಿಸುತ್ತಲಿದೆ ವೇದ.
ಆಲಿಸಿರಿ:
ಯತ್ ಪೂರ್ವ್ಯಂ ಮಕುತೋ ಯಚ್ಚ ನೂತನಂ ಯದುದ್ಯತೇ ವಸವೋ ಯಚ್ಚ ಶಸ್ಯತೇ |
ವಿಶ್ವಸ್ಯ ತಸ್ಯ ಭವಥಾ ನವೇದಸಃ ಶುಭಂ ಯಾತಾಮನು ಕಥಾ ಅವೃತ್ಸತ || (ಋಕ್.೫.೫೫.೮)
     [ಮರುತಃ} ಮರಣ ಧರ್ಮೀಯರಾದ ಸತ್ಯಕ್ಕಾಗಿ ಪ್ರಾಣವನ್ನಾದರೂ ಬಲಿ ನೀಡಬಲ್ಲ ಧೀರರೇ, [ವಸವಃ] ದೇಹ ನಿವಾಸಿಗಳಾದ ದೈವೀ ಸಮಪತ್ಸಮೃದ್ಧರಾದ ಮಾನವರೇ, [ಸವೇದಸಃ] ನೀವು ವಿದ್ಯಾ ರಹಿತರಾಗಿದ್ದೀರಿ, ಅಪ್ರಜ್ಞರಾಗಿದ್ದೀರಿ. [ಯತ್ ಪೂರ್ವ್ಯಂ] ಯಾವುದು ಪ್ರಾಚೀನವೋ [ಚ] ಮತ್ತು [ಯತ್ ನೂತನಃ] ಯಾವುದು ನವೀನವೋ [ಯತ್ ಉದ್ಯತೇ] ಯಾವುದು ನಿಮ್ಮ ಅಂತಃಕರಣದಿಂದ ಉದ್ಭವಿಸುತ್ತದೋ [ಚ] ಮತ್ತು [ಯತ್ ಶಸ್ಯತೇ] ಯಾವುದು ಶಾಸ್ತ್ರ ರೂಪದಲ್ಲಿ ಉಪದೇಶಿಸಲ್ಪಡುತ್ತದೋ [ತಸ್ಯ ವಿಶ್ವಸ್ಯ ಭವಥ] ಆ ಎಲ್ಲದಕ್ಕೂ ಕಿವಿಗೊಡುವವರಾಗಿರಿ. [ಶುಭಂ ಯಾತಾಂ ಅನು] ಕಲ್ಯಾಣ ಮಾರ್ಗದಲ್ಲಿ ನಡೆಯುವವರ ಹಿಂದೆ, [ರಥಾ ಅವೃತ್ಸತ] ನಿಮ್ಮ ಜೀವನ ರಥಗಳು ತೆರಳಲಿ.
-ಪಂ. ಸುಧಾಕರ ಚತುರ್ವೇದಿ.
,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ