ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಮಾರ್ಚ್ 10, 2012

ಭಗವಂತನಿಗೆ ನೈವೇದ್ಯ ಸಮರ್ಪಿಸುವುದೆಂದರೆ . . .

     ಒಂದು ಉಪನ್ಯಾಸದ ಸಂದರ್ಭದಲ್ಲಿ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರು ಹಾಸ್ಯವಾಗಿ ಹೇಳಿದ್ದ ಉದಾಹರಣೆಯಿದು: "ಅಕ್ಕ ಪಕ್ಕ ವಾಸಿಸುವ ಇಬ್ಬರಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಎಂದು ಇಟ್ಟುಕೊಳ್ಳೋಣ. ಒಬ್ಬ ದೇವರನ್ನು ಪ್ರಾರ್ಥಿಸುತ್ತಾನೆ - ಓ, ದೇವರೇ, ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ. ಅವನ ಎರಡು ಕಣ್ಣುಗಳೂ ಹೋಗಲಿ. ಇನ್ನೊಬ್ಬನೂ ಹಾಗೆಯೇ ಪ್ರಾರ್ಥಿಸುತ್ತಾನೆ. ದೇವರು ಯಾರ ಮಾತನ್ನು ಕೇಳಬೇಕು? ಅವನ ಮಾತು ಕೇಳಿದರೆ ಇವನಿಗೆ ಕೋಪ, ಇವನ ಮಾತು ಕೇಳಿದರೆ ಅವನಿಗೆ ಕೋಪ." ದೇವರಿಗೆ ಯಾರ ಮೇಲೂ ಕೋಪವೂ ಇಲ್ಲ, ವಿಶೇಷ ಪ್ರೀತಿಯೂ ಇಲ್ಲ. ದೇವರು ಆಸ್ತಿಕರಿಗೆ ವಿಶೇಷ ಅನುಗ್ರಹ ತೋರುತ್ತಾನೆ ಎಂದೇನೂ ಇಲ್ಲ, ನಾಸ್ತಿಕರಿಗೆ ಕೇಡು ಮಾಡುತ್ತಾನೆ ಅನ್ನುವುದೂ ಸುಳ್ಳು. ದೇವರು ಎಲ್ಲಾ ಜೀವಿಗಳನ್ನೂ ನೋಡುವುದು ಒಂದೇ ರೀತಿಯಲ್ಲಿ. ದೇವರನ್ನು ನಾವು ಪೂಜಿಸುತ್ತೇವೆ, ಸ್ತುತಿಸುತ್ತೇವೆ, ಪ್ರಾರ್ಥಿಸುತ್ತೇವೆ. ಏಕೆ ಹಾಗೆ ಮಾಡುತ್ತೇವೆ? ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಉದ್ದೇಶ ನಮ್ಮನ್ನು ಚೆನ್ನಾಗಿಟ್ಟಿರು, ನಮಗೆ ಒಳ್ಳೆಯದು ಮಾಡು, ನಮಗೆ ಬಂದಿರುವ ಕಷ್ಟಗಳಿಂದ ಪಾರು ಮಾಡು ಎಂದು ಕೇಳುವುದೇ ಆಗಿದೆ. ನಮಗೆ ಉಪಯೋಗಿಸಿಕೊಳ್ಳಲು ಇಡೀ ಸೃಷ್ಟಿಯನ್ನು ಕೊಟ್ಟ ಭಗವಂತನನ್ನು ಆ ಉಪಕಾರಕ್ಕಾಗಿ ಕೃತಜ್ಞರಾಗಿ ಸ್ಮರಿಸಿಕೊಳ್ಳುವುದೇ ನಿಜವಾದ ಪೂಜೆ. ಅವನ ಸೃಷ್ಟಿಗೆ ಹಾನಿಯಾಗದಂತೆ ಉಪಯೋಗಿಸಿಕೊಳ್ಳುವುದು ನಿಜವಾದ ಅನುಷ್ಟಾನ. ಏನೂ ಅಗತ್ಯವಿಲ್ಲದ ಕರುಣಾಮಯಿ ದೇವರಿಗೆ ನಾವು ಏನನ್ನು ತಾನೇ ನೈವೇದ್ಯವಾಗಿ ಅರ್ಪಿಸಬಲ್ಲೆವು? ಪಂ. ಸುಧಾಕರ ಚತುರ್ವೇದಿಯವರ ಶಿಷ್ಯ ವೇದಾಧ್ಯಾಯಿ ಸುಧಾಕರ ಶರ್ಮರನ್ನು ಅವರ ಆರೋಗ್ಯ ವಿಚಾರಿಸುವ ಸಲುವಾಗಿ ಕಳೆದ ವಾರ ಬೆಂಗಳೂರಿನ ಅವರ ನಿವಾಸಕ್ಕೆ ಹೋಗಿದ್ದಾಗ ಅವರ ವಿಚಾರದ ತುಣುಕನ್ನು ವಿಡಿಯೋ ಚಿತ್ರಿಸಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಈಗ ಚರ್ಚಿತವಾಗುತ್ತಿರುವ ವಿಷಯಕ್ಕೆ ಈ ವಿಚಾರವೂ ಪೂರಕವಾಗಿದೆಯೆಂದು ಭಾವಿಸುವೆ. 
-ಕ.ವೆಂ.ನಾಗರಾಜ್.

12 ಕಾಮೆಂಟ್‌ಗಳು:

  1. ಭಗವಂತಾ, ಕಾಪಾಡಪ್ಪಾ, ನನ್ನ ಈ ಕೆಲಸ ಆದರೆ ನಿಮಗೆ ಬೆಳ್ಳಿ ಕವಚ ಮಾಡಿಸಿಕೊಡುವೆ! ೧೦೦ ಈಡು ಗಾಯಿ ಹಾಕುವೆ!!

    ಅಬ್ಭಾಬ್ಭಾ! ಏನೆನೆಲ್ಲಾ ಹರಕೆಹೊರುವ ಜನರಿದ್ದಾರಪ್ಪಾ!
    ಇಡೀ ಜಗತ್ತಿಗೆ ಅನ್ನ ನೀಡುವ ಇವನಿಗೆ ನೈವೇದ್ಯ, ಇಡೀ ಜಗತ್ತಿಗೆ ಬೆಳಕನ್ನು ನೀಡುವ ಇವನಿಗೇ ದೀಪ!!

    ಪ್ರತ್ಯುತ್ತರಅಳಿಸಿ
  2. :)) 40 ಕೋಟಿ ರೂ. ವೆಚ್ಚದ ಕಿರೀಟ ಮಾಡಿಸಿಕೊಟ್ಟ ಮಹನೀಯರು ಇಂದು ಜೈಲಿನಲ್ಲಿದ್ದಾರೆ!! ದೇವರಿಗೆ ಕರುಣೆಯೇ ಇಲ್ಲ !!!???!!!

    ಪ್ರತ್ಯುತ್ತರಅಳಿಸಿ
  3. Durgaprasad Menda
    ಅನನ್ಯಶ್ಚಿಂತಯಂತೋ ಮಾಮ್ ಎ ಜನಾ ಪರ್ಯುಪಾಸತೇ
    ತೇಷಾಮ್ ನಿತ್ಯಾಭಿಯುಕ್ತಾನಾಮ್ ಯೋಗಕ್ಷೇಮಮ್ ವಹಾಮ್ಯಹಮ್ - ಭಗವದ್ಗೀತೆ 9.22
    ಯಾರು ಅನನ್ಯ ಭಾವದಿಂದ ನನ್ನ ಚಿಂತನೆಯನ್ನು ಮಾಡುತ್ತಾರೋ, ಯಾರು ನನ್ನ ದಿವ್ಯ ರೂಪದ ಕುರಿತಾಗಿ ಸದಾ ಧ್ಯಾನದಲ್ಲಿರುತ್ತಾರೋ, ಅವರ ಯೋಗಕ್ಷೇಮವನ್ನು ನಾನೇ ನೋಡಿಕೊಳ್ಳುತ್ತೇನೆ.
    ಇದು ಕೃಷ್ಣ ಗೀತೆಯಲ್ಲಿ ನೀಡಿರುವ ಭರವಸೆ. ಕೇವಲ ಆಸ್ತಿಕನಾಗಿದ್ದುಗೊಂಡು ತನ್ನ ಜೀವನದ ಬೇಕು-ಬೇಡಗಳಿಗೆ ಮಾತ್ರ ಭಗವಂತನ ಮೊರೆ ಹೋಗುವವನು ಅನನ್ಯ ಭಕ್ತನಾಗಲಾರ. ಆದಾಗ್ಯೂ ನಾಸ್ತಿಕನಿಗಿಂತ ಈ ತೆರನಾದ ಆಸ್ತಿಕ ಮೇಲು. ಆದರೆ ಯಾರು "ಅಹೇತುಕೀ ಅಪ್ರತಿಹತಾ" ರೀತಿಯ ಭಕ್ತಿ ಭಾವವನ್ನು ಹೊಂದಿರುತ್ತಾರೋ ಅವರು ಭಗವಂತನಿಗೆ ಬಲು ಪ್ರೀತಿ ಪಾತ್ರರು. ಮೇಲಿನ ಶ್ಲೋಕವು ಇದನ್ನು ದೃಢೀಕರಿಸುತ್ತದೆ.
    ನಾ ಮಾಮ್ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ
    ಮಾಯಯಾಪಹೃತ ಜ್ಞಾನಾ ಅಸುರಂ ಭವಂ ಆಶ್ರಿತಾಃ - ಭಗವದ್ಗೀತೆ- 7.15
    ಮೂಢರು, ನರಾಧಮರು, ಯಾರ ಜ್ಞಾನವು ಮಾಯೆಯಿಂದ ಅಪಹೃತವಾಗಿದೆಯೋ ಮತ್ತು ಅಸುರ ಭಾವದವರು ಎಂದಿಗೂ ನನಗೆ ಶರಣಾಗಲಾರರು.
    ಚತುರ್ವಿಧಾ ಭಜಂತೇ ಮಾಮ್ ಜನಾಃ ಸುಕೃತಿನೋರ್ಜುನಾ
    ಆರ್ತೋ ಜಿಜ್ಞಾಸುರ್ ಅರ್ಥಾರ್ಥೀ ಜ್ಞಾನೀಚ ಭರತರ್ಷಭಃ -ಭಗವದ್ಗೀತೆ- 7.16
    ಓ ಭರತವಂಶಜರಲ್ಲಿ ಶ್ರೇಷ್ಟನಾದವನೇ ನಾಲ್ಕು ವಿಧದ ಪುಣ್ಯಶಾಲಿಗಳು ನನ್ನ ಕುರಿತಾಗಿ ಭಕ್ತಿಭಾವವನ್ನು ಹೊಂದಿರುತ್ತಾರೆ. ಆರ್ತರು, ಅರ್ಥಾರ್ಥಿಗಳು, ಜಿಜ್ಞಾಸುಗಳು ಮತ್ತು ಜ್ಞಾನಿಗಳು.
    ಹೀಗೆ ಸಂಕಟದಲ್ಲಿರುವವರು ಮತ್ತು ಅರ್ಥಾರ್ಥಿಗಳನ್ನು ಕೂಡಾ ಸುಕೃತಿನಃ ಎಂಬುದಾಗಿ ಕೃಷ್ಣ ಗೀತೆಯಲ್ಲಿ ಸಂಬೋಧಿಸಿದ್ದಾನೆ. ಹೀಗಿರುವಾಗ ಅನನ್ಯ ಭಕ್ತನಲ್ಲದಿದ್ದರೂ ವ್ಯಾವಹಾರಿಕ ಭಕ್ತನೂ ಕೂಡಾ ಕ್ರಮೇಣ ಅನನ್ಯ ಭಕ್ತನಾಗುವ ಸಾಧ್ಯತೆಗಳಿರುವುದರಿಂದ 7.15 ರಲ್ಲಿ ಹೇಳಿರುವ 4 ವಿಧದ ಅಭಕ್ತರಿಗಿಂತ ಉತ್ತಮನೇ ಹೌದು.
    "ಏನೂ ಅಗತ್ಯವಿಲ್ಲದ ಕರುಣಾಮಯಿ ದೇವರಿಗೆ ನಾವು ಏನನ್ನು ತಾನೇ ನೈವೇದ್ಯವಾಗಿ ಅರ್ಪಿಸಬಲ್ಲೆವು?" ಈ ಹೇಳಿಕೆಯು ಕೂಡಾ ಸಾಧುವಾದುದಲ್ಲ. ಭಗವಂತನಿಗೆ ಅರ್ಪಣೆ ಮಾಡದೆ ನಾವು ತಿನ್ನುವ ಆಹಾರದಲ್ಲಿ ನಾವು ಪಾಪವನ್ನೇ ಉಣ್ಣುತ್ತೇವೆ ಎಂಬುದಾಗಿ ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ್ದಾನೆ.
    ಯಜ್ಞ ಷಿಶ್ಟಾಷಿನಃ ಸಂತೋ ಮುಚ್ಯಂತೇ ಸರ್ವ ಕಿಲ್ಭಿಷೈಃ
    ಭುಂಜತೇ ತೇ ತ್ವ ಅಘಮ್ ಪಾಪಾ ಎ ಪಚಂತಿ ಆತ್ಮ ಕಾರಣಾತ್ - ಭಗವದ್ಗೀತೆ 3.13
    ಸಂತರಾದ ಭಗದ್ಭಕ್ತರು ಎಲ್ಲಾ ವಿಧದ ಎಲ್ಲಾ ವಿಧದ ಪಾಪಾಗಳಿಂದ ಮುಕ್ತರಾಗಿರುತ್ತಾರೆ, ಯಾಕೆಂದರೆ ಅವರು ಮೊದಲು ಯಜ್ಞ ಪುರುಷನಿಗೆ ಅರ್ಪಣೆ ಮಾಡಿ ಬಳಿಕ ಉಚ್ಚಿಷ್ಟವನ್ನು ಸ್ವೀಕರಿಸುತ್ತಾರೆ. ಆದರೆ ಯಾರು ತನ್ನ ಇಂದ್ರಿಯ ತೃಪ್ತಿಗಾಗಿ ಅಡಿಗೆಮಾಡಿ ಉಣ್ಣುತ್ತಾರೋ ಅವರು ಪಾಪಾವನ್ನೇ ಉಣ್ಣುತ್ತಾರೆ.
    ಹೀಗಾಗಿ ಭಗವಂತನಿಗೆ ನೈವೇದ್ಯವನ್ನು ನೀಡುವುದು ನಮ್ಮ ಸುರಕ್ಷತೆಗಾಗಿ. ಅಲ್ಲದೆ ಭಗವಂತನು "ಪತ್ರಂ ಪುಷ್ಪಂ ಫಲಂ ತೋಯಂ " ಹೀಗೆ ಪ್ರೀತಿಯಿಂದ ಭಕ್ತರು ನೀಡಿದ್ದನ್ನು ಸ್ವೀಕರಿಸಿತ್ತಾನೆ ಮತ್ತು ಪ್ರಸಾದ ರೂಪವಾಗಿ ಉಚ್ಚಿಷ್ಟವನ್ನು ನೀಡುತ್ತಾನೆ. ಇದು ಅವನ ಅವ್ಯಾಜವಾದ ಕರುಣೆಯೇ ಸರಿ. ಭಗವಂತನೊಡನೆ ಅವಿನಾಭಾವ ಸಂಬಂಧವನ್ನು ಪುನಃ ಸ್ಥಾಪಿಸಲು ಇದು ಅತ್ಯಗತ್ಯ.
    ಹಾಗಾಗಿ ಭಗವಂತನಿಗೆ ಯಾರ ಮೇಲೂ ಕೋಪವಿಲ್ಲ ಎಂಬ ಮಾತನ್ನು ಸ್ವೀಕರಿಸಬಹುದಾದರೂ ಅವನಿಗೆ ಯಾರ ಮೇಲೂ ವಿಶೇಷ ಪ್ರೀತಿಯೂ ಇಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಭಗವಂತನು ತನ್ನ ಅನನ್ಯ ಭಕ್ತರೆಡೆಗೆ ವಿಶೇಷ ಒಲವನ್ನು ಹೊಂದಿರುತ್ತಾನೆ ಎಂಬುದನ್ನು ಗೀತೆಯಲ್ಲಿ ಅವನೇ ವಿಷದ ಪಡಿಸಿದ್ದಾನೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. Durgaprasad Menda
      ಶ್ರೀಯುತರು ವಿಡಿಯೋ-ದಲ್ಲಿ ಹೇಳಿರುವ ವಿಚಾರಗಳನ್ನು ಆಲಿಸಿದೆ. ಇಲ್ಲಿ ಅವರು ವೇದದ ಮಂತ್ರವನ್ನು out of context ಆಗಿ ವಿವರಿಸಿದ್ದಾರೆ ಎಂದೆನಿಸುತ್ತದೆ. ಅಲ್ಪ ಚೇತನ ಹಾಗೂ ವಿಶ್ವ ಚೇತನ ಎರಡರ ಕುರಿತಾಗಿ ಹೇಳುವಾಗ ವೇದಗಳಲ್ಲಿ ಹೇಳಿದ್ದು ಪ್ರತಿಯೊಂದು ದೇಹದಲ್ಲೂ ಜೀವಾತ್ಮ ಹಾಗೂ ಪರಮಾತ್ಮರು ಇರುತ್ತಾರೆ ಎಂಬ ಹಿನ್ನಲೆಯಲ್ಲಿ. ದೇಹಧಾರಿಯಾದ ಜೀವಾತ್ಮನ ಜೊತೆಗೆ ಪರಮಾತ್ಮನು ಕೂಡಾ ಅದೇ ದೇಹದಲ್ಲಿ ನೆಲೆಸಿರುತ್ತಾನೆ. ಜೀವಾತ್ಮನು ಆ ದೇಹದ ಮೂಲಕ ಭೌತಿಕ ಪ್ರಪಂಚವನ್ನು ಅನುಭವಿಸಲು ಬಯಸುತ್ತಾನೆ. ಆದರೆ ಪರಮಾತ್ಮನು ಯಾವುದೇ ಭೌತಿಕ ಭೋಗವನ್ನು ಆ ದೇಹದಿಂದ ಪಡೆಯಲು ಹಾತೊರೆಯುವುದಿಲ್ಲ.
      ಅವನು ಆ ಪ್ರತಿಯೊಂದು ಜೀವಿಯ ಜೊತೆಗೆ ಪ್ರತಿಯೊಂದು ದೇಹದೊಳಗೆ ನೆಲೆಸಿದ್ದು, ಅನುಮಂತ ಹಾಗೂ ಉಪದೃಷ್ಟ ನಾಗಿರುತ್ತಾನೆ. ಅನುಮಂತ ಎಂದರೆ ಜೀವಿಯು ಬಯಸುವುದನ್ನು ಅನುಮೋದಿಸುವವನು. ಉಪದೃಷ್ಟ ಎಂದರೆ ಜೀವಿಯ ಪ್ರತಿಯೊಂದು ಕರ್ಮಕ್ಕೂ ಪ್ರತಿಯೊಂದು ಚಿಂತನೆಗಳಿಗೂ ಸಾಕ್ಷಿಯಾಗಿರುವವನು. ಒಂದು ಮರದಲ್ಲಿ ಎರಡು ಪಕ್ಷಿಗಳು ನೆಲೆಸಿರುವುದನ್ನು ಉದಾಹರಣೆಯಾಗಿ ಉಪನಿಷತ್ತುಗಳಲ್ಲಿ ನೀಡಲಾಗಿದೆ. ಒಂದು ಪಕ್ಷಿಯು ಮರದ ಹಣ್ಣುಗಳನ್ನು ತಿನ್ನಲು ಬಯಸುತ್ತದೆ, ಆದರೆ ಇನ್ನೊಂದು ಕೇವಲ ಅನುಮಂತ ಮತ್ತು ಉಪದೃಷ್ಟನಾಗಿರುತ್ತದೆ.
      ಗೀತೆಯಲ್ಲಿ 5.29 ರಲ್ಲಿ ಕೃಷ್ಣನು ಹೀಗೆ ಹೇಳಿದ್ದಾನೆ.
      ಭೋಕ್ತಾರಮ್ ಯಜ್ಞ ತಪಸಾಮ್ ಸರ್ವ ಲೋಕ ಮಹೇಶ್ವರಂ
      ಸುಹೃದಮ್ ಸರ್ವ ಭೂತಾನಾಮ್ ಜ್ಞಾತ್ವಾ ಮಾಮ್ ಶಾಂತಿ ಮೃಚ್ಚತಿ.
      "ಎಲ್ಲಾ ಯಜ್ಞ ತಪಸ್ಸುಗಳ ಭೋಕ್ತಾರನು ನಾನೇ".
      ಭಗವಂತನಿಗೆ ನಾವು ನೈವೇದ್ಯವನ್ನು ನೀಡುವುದು ನಮ್ಮ ಒಳಿತಿಗಾಗಿಯೇ ಹೊರತು ಭಗವಂತನ ಬೇಕು ಬೇಡಗಳಿಗಾಗಿ ಅಲ್ಲ. ಮನೆಯ ಯಜಮಾನನಾದವನು ಮನೆಗೆ ಬರುವಾಗ ಸಿಹಿತಿಂಡಿಯನ್ನು ತರುತ್ತಾನೆ ಎಂದಿಟ್ಟುಕೊಳ್ಳಿ. ಮನೆಯಲ್ಲಿ ಮಕ್ಕಳು ಪ್ರೀತಿ ಪೂರ್ವಕವಾಗಿ ಅದನ್ನು ಯಜಮಾನನಾದ ತಮ್ಮ ತಂದೆಗೆ ನೀಡುವುದು ತಂದೆಯ ಮೇಲಿನ ಪ್ರೇಮದಿಂದ. ತಂದೆಗೆ ಮಕ್ಕಳು ಕೊಡದಿದ್ದರೆ ಉಪವಾಸ ಎಂದೇನಿಲ್ಲ. ಆದರೂ ಮಕ್ಕಳು ಪ್ರೀತಿಯಿಂದ ಕೊಟ್ಟದ್ದನ್ನು ಅವನು ಸ್ವೀಕರಿಸುತ್ತಾನೆ.
      ಅಂತೆಯೇ ಭಗವಂತನಿಗೆ ನೈವೇದ್ಯ ಸಮರ್ಪಿಸುವುದರಲ್ಲಿ ಪ್ರೀತಿ ಮುಖ್ಯವೇ ಹೊರತು ಆಡಂಬರವಲ್ಲ. ಪ್ರೀತಿಯಿಂದ ಸಮರ್ಪಿಸಿದ್ದನ್ನು ಅವನು ಪ್ರೀತಿಯಿಂದ ಸ್ವೀಕರಿಸುತ್ತಾನೆ. ಈ ಕುರಿತಾದ ಹೆಚ್ಚಿನ ವಿವರಣೆಯನ್ನು ಗೀತೆಯ ೯.೨೬ ಶ್ಲೋಕದಲ್ಲಿ ನೋಡಬಹುದು. (ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ, ತದಹಂ ಭಕ್ತ್ಯಾ ಉಪಹೃತಮ್ ಅಶ್ನಾಮಿ ಪ್ರಯತಾತ್ಮನಃ ). ಅಲ್ಲದೆ ನಾವು ಭಗವದರ್ಪಣೆ ಮಾಡದೆ ಸ್ವತಃ ತಿಂದರೆ ಏನಾಗುತ್ತದೆ ಎಂಬುದನ್ನು ಗೀತೆಯ ೩.೧೩ ಶ್ಲೋಕದಲ್ಲಿ ನೀಡಲಾಗಿದೆ. ದಯವಿಟ್ಟು ಪರಿಶೀಲಿಸಿ.
      Bhimasen Purohit
      ಎಲ್ಲವನ್ನೂ ಸೃಷ್ಟಿ ಮಾಡಿದ ಭಗವಂತನಿಗೆ ನಾವೇನು ಕೊಡಲು ಸಾಧ್ಯ.?
      -- ಈ ಪ್ರಶ್ನೆ ಅತ್ಯಂತ ಸಮಂಜಸವೂ,ತಾರ್ಕಿಕವೂ ಆಗಿದೆ. ಮತ್ತು ಈಶಾವಾಸ್ಯೋಪನಿಶತ್ತಿನಲ್ಲಿ ಹೇಳಿದಂತೆ "ಭೂಯಿಷ್ಟಾಂ ನಮ ಉಕ್ತಿಂ ವಿಧೇಮ" - ನಿನಗೆ ನಮಸ್ಕಾರ ಅಂತ ಹೇಳಬಹುದೇ ವಿನಃ ಅದಕ್ಕಿಂತ ಹೆಚ್ಚಿನದನ್ನು ಭಗವಂತನಿಗೆ ಮಾಡಲು ನಮಗೆ ಶಕ್ತಿಯಿಲ್ಲ.!
      ಖಂಡಿತವಾಗಿಯೂ, ಭಗವಂತ ನಾವು ಕೊಟ್ಟ ನೈವೆದ್ಯದಿಂದ ಸಂತೋಷ ಹೊಂದುತ್ತಾನೆ ಅಂತ ಹೇಳುವುದು ಬಾಲಿಶತನವಾಗುತ್ತದೆ.
      ಆದರೆ, ಅಸಲಿಗೆ ನೈವೇದ್ಯ ಅನ್ನೋದು ನಮಗೆ ಸಂಬಂಧಿಸಿದ್ದೇ ಹೊರತು ಭಗವಂತನಿಗಲ್ಲ. ಅದನ್ನು ಶ್ರೀ ದುರ್ಗಾಪ್ರಸಾದ್ ಅವರು ಚೆನ್ನಾಗಿ ಹೇಳಿದ್ದಾರೆ.
      ಆ ಶಬ್ದವೇ ಸ್ಪಷ್ಟವಾಗಿ ಹೇಳುತ್ತದೆ.
      ನೈವೆದ್ಯಂ - ನಿವೇದಸ್ಯ ಇದಂ ನೈವೆದ್ಯಂ ಅಂತ ತದ್ಧಿತ ಶಬ್ದ.
      ನಿವೇದನೆ ಅಂದ್ರೇನು, "ಹೇ ಭಗವಂತನೇ, ಇಂದಿನ ನನ್ನ ಆಹಾರಕ್ಕೆ ಮೂಲ ಕಾರಣ ನೀನೆ, ನಿನ್ನಿಂದಲೇ ಇದು ದೊರೆತಿದೆ" ಅಂತ ಭಗವಂತನ ಎದುರಿಗೆ ನಾವು ನಿವೇದನೆ ಮಾಡಿಕೊಳ್ಳುವುದೇ ನೈವೇದ್ಯ ಹೊರತು, ಆತನು ತಿನ್ನಲಿ ಅಂತಲೋ, ಅದರ ರುಚಿ ನೋಡಲಿ ಅಂತಲೋ ಅಲ್ಲ..!!

      ಅಳಿಸಿ
    2. ದುರ್ಗಾಪ್ರಸಾದರು ಮತ್ತು ಭೀಮಸೇನ ಪುರೋಹಿತರಿಗೆ ವಂದನೆಗಳು. ಭೀಮಸೇನರೇ, ನಿಮ್ಮ, "ಖಂಡಿತವಾಗಿಯೂ, ಭಗವಂತ ನಾವು ಕೊಟ್ಟ ನೈವೆದ್ಯದಿಂದ ಸಂತೋಷ ಹೊಂದುತ್ತಾನೆ ಅಂತ ಹೇಳುವುದು ಬಾಲಿಶತನವಾಗುತ್ತದೆ. "ನೈವೆದ್ಯಂ - ನಿವೇದಸ್ಯ ಇದಂ ನೈವೆದ್ಯಂ ಅಂತ ತದ್ಧಿತ ಶಬ್ದ.
      ನಿವೇದನೆ ಅಂದ್ರೇನು, "ಹೇ ಭಗವಂತನೇ, ಇಂದಿನ ನನ್ನ ಆಹಾರಕ್ಕೆ ಮೂಲ ಕಾರಣ ನೀನೆ, ನಿನ್ನಿಂದಲೇ ಇದು ದೊರೆತಿದೆ" ಅಂತ ಭಗವಂತನ ಎದುರಿಗೆ ನಾವು ನಿವೇದನೆ ಮಾಡಿಕೊಳ್ಳುವುದೇ ನೈವೇದ್ಯ ಹೊರತು, ಆತನು ತಿನ್ನಲಿ ಅಂತಲೋ, ಅದರ ರುಚಿ ನೋಡಲಿ ಅಂತಲೋ ಅಲ್ಲ..!!" ಎಂಬ ಮಾತುಗಳು ಇಷ್ಟವಾದವು.

      ಅಳಿಸಿ
    3. Mahesha Prasad Neerkaje
      ಹಾಗಿದ್ದರೆ ಅಗ್ನಿಯಲ್ಲಿ ಕೊಡುವ ನೈವೇದ್ಯ ಏನು? "ಪರಾಶರ ಸ್ಮೃತಿ" ಯನ್ನು ಓದುತ್ತಿದ್ದಾಗ ಬಂದ ಪ್ರಶ್ನೆ ಇದು.
      http://archive.org/.../SriParasharaSmrithiPdf_djvu.txt
      Full text of "Parashara smriti" archive.org
      ಬ್ರಾಹ್ಮಣ ನಾದವನು ಅಗ್ನಿಯಲ್ಲಿ ಮಾಡಿದ ಅರ್ಪಣೆಯ ಉಳಿಕೆಯನ್ನು ಮಾತ್ರ ಸೇವಿಸಬೇಕು ಅನ್ನುತ್ತದೆ ಪರಾಶರ ಸ್ಮೃತಿ. ಇದರ ಪ್ರಸ್ತುತತೆ ಹಾಗಿರಲಿ, ಇಲ್ಲಿ ಉಲ್ಲೇಖಿಸಿದ "ಅಗ್ನಿಯಲ್ಲಿ ಅರ್ಪಿಸಿ ಉಳಿದ ಆಹಾರ" ದ ಬಗ್ಗೆ ತಿಳಿಸುತ್ತೀರಾ?

      Durgaprasad Menda
      ನಾವು "ತಿನ್ನುವುದು" ಎಂದರೆ ಭೌತಿಕವಾಗಿ ಅನ್ನವನ್ನೋ ಅಥವಾ ಇನ್ನಿತರ ವ್ಯಂಜನಗಳನ್ನೋ ವಸ್ತುತಃ ಬಾಯಿಯಲ್ಲಿಟ್ಟು ಜಗಿದು ಹೊಟ್ಟೆಗೆ ಹಾಕುವ ಪ್ರಕ್ರಿಯೆ. ಆದರೆ ಉರ್ದ್ವ ಲೋಕವಾಸಿಗಳಾದ ದೇವತೆಗಳು ಆಹಾರವನ್ನು ಕೇವಲ ಆಘ್ರಾಣಿಸುವ ಮೂಲಕ ಸ್ವೀಕರಿಸುತ್ತಾರೆ. ಅಂತೆಯೇ ಪರಮ ಪುರುಷನಾದ ಭಗವಂತನು ಕೇವಲ ತನ್ನ ನೋಟದಿಂದಲೇ ಆಹಾರವನ್ನು ಸ್ವೀಕರಿಸಿ ಬಿಡುತ್ತಾನೆ. ಅವನ ಪ್ರತಿಯೊಂದು ಇಂದ್ರಿಯಗಳೂ ಮಿಕ್ಕುಳಿದ ಇಂದ್ರಿಯಗಳ ಕಾರ್ಯವನ್ನು ಮಾಡಲು ಸಮರ್ಥವಾಗಿರುತ್ತವೆ, ಇದನ್ನು ಬ್ರಹ್ಮ ಸಂಹಿತೆಯ ಈ ಕೆಳಗಿನ ಶ್ಲೋಕದಲ್ಲಿ ಹೇಳಲಾಗಿದೆ.
      ಅಂಗಾನಿಯಸ್ಯ ಸಕಲೇಂದ್ರಿಯ ವೃತ್ತಿ ಮಂತಿ,
      ಪಷ್ಯಂತಿ ಪಾಂತಿ ಕಲಯಂತಿ ಚಿರಂಜಗಂತಿ
      ವೇದೇಷು ದುರ್ಲಭಮ್ ಅದುರ್ಲಭಂ ಆತ್ಮ ಭಕ್ತೌ
      ಗೋವಿಂದಂ ಆದಿ ಪುರುಷಂ ತಮಹಂ ಭಜಾಮಿ. (ಬ್ರಹ್ಮ ಸಂಹಿತಾ)
      ಹೀಗಿರುವಾಗ ನಾವು ಪ್ರೀತಿಪೂರ್ವಕವಾಗಿ ಅರ್ಪಿಸಿದ ನೈವೇದ್ಯವನ್ನು (ಅರ್ಪಣೆಯನ್ನು) ಭಗವಂತ ಸ್ವೀಕರಿಸುವುದರಲ್ಲಿ ಯಾವುದೇ ಸೋಜಿಗವಿಲ್ಲ. ನಮ್ಮ ಪ್ರೀತಿಪೂರ್ವಕ ಅರ್ಪಣೆಯಿಂದಾಗಿ ಭಗವಂತ ಸಂತುಷ್ಟನಾಗುವುದರಲ್ಲಿಯೂ ಯಾವುದೇ ಬಾಲಿಶತನವಿಲ್ಲ. ತನ್ನ ಅನನ್ಯ ಭಕ್ತರೊಂದಿಗೆ ಈ ತೆರನಾದ ಪ್ರೀತಿಪೂರ್ವಕ ವಿನಿಮಯಗಳನ್ನು ಮಾಡುವುದು ಭಗವಂತನಿಗೆ ಅಚ್ಚುಮೆಚ್ಚಿನ ಕೆಲಸ. ಇದನ್ನು ಗೀತೆಯಲ್ಲಿ ಸ್ವತಃ ಅವನೇ ಅನೇಕ ಕಡೆ ವಿವರಿಸಿದ್ದಾನೆ.
      ಅಲ್ಲದೆ ವೇದಗಳಲ್ಲಿ ಉದ್ದಗಲಕ್ಕೂ ಅನೇಕ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಸಂಪೂರ್ಣವಾಗಿ ವೇದಗಳನ್ನು ಓದಿದ ಬಳಿಕವಷ್ಟೇ ನಾವು "ಇದಮಿತ್ಥಂ" ಎಂಬ ನಿಷ್ಕರ್ಷೆಗೆ ಬರಲು ಸಾಧ್ಯ. ಯಾವುದೋ ಒಂದು ಶ್ಲೋಕವನ್ನು ಪ್ರತ್ಯೇಕವಾಗಿ ಪರಿಗಣಿಸಿದಾಗ, ಸಮಗ್ರ ಅಭಿಪ್ರಾಯಕ್ಕಿಂತ ಭಿನ್ನವಾದುದನ್ನು ಊಹಿಸುವ ಪ್ರಮೇಯ ಬರುತ್ತದೆ. ಅದಕ್ಕೆಂದೇ ಗೀತೆಯ 15.15 ಕೃಷ್ಣನು ಹೀಗೆ ಹೇಳಿದ್ದಾನೆ:
      ವೇದೈಷ್ಚ ಸರ್ವೈರ್ ಅಹಮೇವ ವೇದ್ಯೋ
      ವೇದಾಂತ ಕೃದ್ ವೇದ ವಿದ್ ಏವ ಚಾಹಮ್
      "ಎಲ್ಲಾ ವೇದಗಳಿಂದ ವೇದ್ಯವಾಗತಕ್ಕವನು ನಾನು ಮಾತ್ರ, ನಾನೇ ವೇದಾಂತದ ಕರ್ತೃ ಮತ್ತು ನಾನೇ ಎಲ್ಲಾ ವೇದಗಳನ್ನು ಬಲ್ಲವನು".
      ಹೀಗಿರುವಾಗ ವೇದಗಳನ್ನು ಸಮಗ್ರವಾಗಿ ಅಧ್ಯಯನ ಮಾಡದೆ ಅಲ್ಲಲ್ಲಿ ಹೆಕ್ಕಿ ಓದುವುದರಿಂದ ವೇದಗಳಿಂದ ವೇದ್ಯವಾಗುವವನನ್ನು ಅಪಾರ್ಥಮಾಡಿಕೊಳ್ಳುವ ಸಂಭವವೇ ಹೆಚ್ಚು. ಹಾಗಾಗಿ ...
      ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲ ನಂದನಃ
      ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಮ್ ಇದಂ ಮಹತ್ ( ಗೀತ ಮಹಾತ್ಮ್ಯಾ 6)
      ಎಲ್ಲಾ ವೇದ ಉಪನಿಷತ್ತುಗಳ ಸಾರ ಸರ್ವಸ್ವವಾದ ಗೀತೆಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ ಭಗವಂತನನ್ನು ಅರಿತುಕೊಳ್ಳಲು ಪ್ರಯತ್ನಿಸುವುದೇ ಲೇಸು.
      ಅಲ್ಲದೆ ಕೇವಲ ವೇದಾಧ್ಯಯನದಿಂದ ಭಗವಂತನನ್ನು ಅರಿಯಲು ಅಸಾಧ್ಯ ಎಂಬುದನ್ನು ಮೇಲೆ ಉಲ್ಲೇಖಿಸಲಾದ ಬ್ರಹ್ಮ ಸಂಹಿತೆಯ ಶ್ಲೋಕದಲ್ಲಿ ಸ್ವತಃ ಭ್ರಹ್ಮ ದೇವನೇ ಹೇಳಿದ್ದಾನೆ.
      (ವೇದೇಷು ದುರ್ಲಭಮ್ ಅದುರ್ಲಭಂ ಆತ್ಮ ಭಕ್ತೌ
      ಗೋವಿಂದಂ ಆದಿ ಪುರುಷಂ ತಮಹಂ ಭಜಾಮಿ)- ಕೇವಲ ವೇದಗಳನ್ನು ಓದುವ ಮೂಲಕ ಭಗವಂತನನ್ನು ಪ್ರಪ್ತಿಸಲು ಅಸಾಧ್ಯ, ಆದರೆ ತನ್ನ ಭಕ್ತರಿಗೆ ಅವನುಸುಲಭವಾಗಿ ಲಭ್ಯನು.
      Mahesha Prasad Neerkaje
      ಅಂದರೆ ನೈವೇದ್ಯವನ್ನು ಅಗ್ನಿಯಲ್ಲಿ ಆಹುತಿ ಕೊಡುವುದು ವೇದವನ್ನು ಸರಿಯಾಗಿ ತಿಳಿಯದವರು ಪ್ರಾರಂಭಿಸಿದಂತಹ ಕ್ರಮ ಅಂತ ನಿಮ್ಮ ಅಭಿಮತವೆ?
      Durgaprasad Menda
      @ Mahesha Prasad Neerkaje: ಅಲ್ಲ ಅಲ್ಲ, ಯಜ್ಞಗಳು ಕಾಮ್ಯ ಕರ್ಮಗಳು ಎಂದೆನಿಸುತ್ತವೆ. ನಮಗೆ ಯಾವ ಯಾವ ಕಾಮನೆಗಳಿರುತ್ತವೋ ಆಯಾ ಕಾಮನೆಗಳಿಗೆ ಅನುಸಾರವಾಗಿ ಪ್ರತ್ಯೇಕ ಪ್ರತ್ಯೇಕ ಯಜ್ಞಗಳನ್ನು ವೇದಗಳಲ್ಲಿ ಸೂಚಿಸಲಾಗಿದೆ. ಅಗ್ನಿಮುಖೇನ ಯಜ್ಞದಲ್ಲಿ ಸಮರ್ಪಿಸಿದ ಸುವಸ್ತುಗಳು ಸಂಬಂಧಪಟ್ಟ ದೇವತೆಗಳಿಗೆ ಲಭಿಸುತ್ತದೆ.

      ಆದರೆ ಭಗವಂತನಿಗೆ ನೇರವಾಗಿ ನೈವೇದ್ಯ ಸಮರ್ಪಿಸಲು ಯಜ್ಞ ಕುಂಡಕ್ಕೆ ಆಹಾರವನ್ನು ಅರ್ಪಿಸುವ ಅಗತ್ಯತೆ ಇಲ್ಲ.

      ಅಳಿಸಿ
    4. Vasudevarao Rao
      ಯಜ್ಞ ಎನ್ನುವ ಪದ "ಯಜ್" ಧಾತುವಿನಿಂದ ಬಂದಿದೆ. ಯಜ್ಞದ ಅರ್ಥ, ದೇವ ಪೂಜಾ, ದಾನ ಮತ್ತು ಸಂಗತೀಕರಣ. ನಾವು ಯಜ್ಞಕುಂಡದ ಮೂಲಕ ಮಾಡುವ ಯಜ್ಞದ ಉದ್ದೇಶ್ಯ ಪರಿಸರವನ್ನು ಶುಭ್ರವಾಗಿಡುವ ಒಂದು ಪ್ರಕ್ರಿಯೆ. ಜಡ ದೇವತೆಗಳನ್ನು ಬಲಿಷ್ಠಗೊಳಿಸುವ, ರೋಗ ರುಜಿನಗಳನ್ನು ತರುವ ಕ್ರಮಿ ಕೀಟಾದಿಗಳನ್ನು ದೂರ ವಿಡುವ ಯಜ್ಞ ಒಂದು ಪರಿಸರವನ್ನು ಕಾಪಾಡುವ ಕ್ರಿಯೆಯೇ ಹೊರತೂ ಮತ್ತೇನಿಲ್ಲ
      Mahesha Prasad Neerkaje
      ಯಜ್ಞ ದ ಬಗೆಗಿನ ಆರ್ಯಸಮಾಜ ಅಥವಾ ಮಹರ್ಷಿ ದಯಾನಂದರ ನಿಲುವು ಬಗ್ಗೆ ಅರಿವಿದೆ. ಅದು ನನಗೆ ಸಮಂಜಸವೂ ಆಗಿ ಕಾಣಿಸುತ್ತದೆ. ಆದರೆ ಇತಿಹಾಸ ಕಂಡ ಮಹಾ ಮಹಾ ಮುನಿಗಳು ಯಾಕೆ ಆಹಾರ ವಸ್ತುಗಳನ್ನು ಅಗ್ನಿಗೆ ಸಮರ್ಪಿಸುತ್ತಿದ್ದರು ಅನ್ನುವುದು ನನಗೆ ಇನ್ನೂ ತಿಳಿಯದ ವಿಚಾರವಾಗಿದೆ. ಉದಾಹರಣೆಗೆ ಮೇಲೆ ನಾನು ಉದಾಹರಿಸಿದ ಪರಾಶರ ಮುನಿಯ ಗ್ರಂಥ. ಪರಾಶರ ಮುನಿ ಒಬ್ಬ ಮಹಾನ್ ವೈದಿಕ ಋಷಿ ಆಗಿದ್ದರು ಎನ್ನುವುದರಲ್ಲಿ ಸಂಶಯ ಇಲ್ಲ ತಾನೇ (ಇವರು ಋಗ್ವೇದದ ಹಲವಾರು ಮಂತ್ರಗಳ ದೃಷ್ಟಾರರು ಕೂಡ ಆಗಿದ್ದಾರೆ ಅಲ್ಲವೇ?). ಹಾಗಿದ್ದೂ ಮೇಲೆ ಉಲ್ಲೇಖಿಸಿದ ಗ್ರಂಥದಲ್ಲಿ "ವಿಶ್ವದೇವ" ನಿಗೆ ಅರ್ಪಿಸುವ ಯಜ್ನಾಹುತಿಗಳ (ಆಹಾರ ವಸ್ತುಗಳು) ಬಗ್ಗೆ ಉಲ್ಲೇಖ ಇದೆ. ಅದೂ ಒಂದೆರಡು ಕಡೆ ಅಲ್ಲ, ಗ್ರಂಥದುದ್ದಕ್ಕೂ. ಆದ್ದರಿಂದ ಇದನ್ನು ಬರಿಯ ಪ್ರಕ್ಷೇಪ ಎಂದೂ ಕೂಡ ಹೇಳಲಾಗದು ಅಲ್ಲವೇ? Vasudevarao Rao
      Vasudevarao Rao
      ನಾನು ಇದನ್ನು ಜಡ ದೇವತೆಗಳನ್ನು ಬಲ ಪಡಿಸುವ ಕ್ರಿಯೆ ಎಂದು ಈಗಾಗಲೇ ಹೇಳಿದ್ದೇನೆ. ಉದಾಹರಣೆಗೆ ವಾಯು. ಇದು ಜಡ ದೇವತೆ. ಇದನ್ನು ಶುದ್ಧಿಗೊಳಿಸಲು ಮಾಡುವುದೇ ಯಜ್ಞ. ಚೇತನ ದೇವತೆಗಳಿಗೆ ಉದಾ ಪರಮಾತ್ಮನಿಗೆ ಯಾವುದೇ ಆಹುತಿ ಅಗತ್ಯವಿಲ್ಲ. ನಿಜ. ಯಜ್ಞ ಮಂತ್ರಗಳಲ್ಲಿ ಆಧ್ಯಾತ್ಮಿಕ ಅರ್ಥವೂ ಇದೆ. ಇವೆಲ್ಲಾ ಸ್ತುತಿ, ಪ್ರಾರ್ಥನೆ ಮತ್ತು ಉಪಾಸನೆ ಚೌಕಟ್ಟಿನಲ್ಲಿ ಬರುತ್ತದೆ. ನನ್ನ ಸ್ಪಷ್ಟ ಅಭಿಪ್ರಾಯವೆಂದರೆ ಯಜ್ಞದ ಭೋಕ್ತೃ ಪರಮಾತ್ಮ, ಅಥವಾ ದೇವತೆಗಳಲ್ಲ. ಇದೊಂದು ಪರ್ಯಾವರಣವನ್ನು ಕಾಪಾಡುವ ಒಂದು ಪರೋಪಕಾರಿ ಕೆಲಸ. ದಾನದ ವ್ಯಾಪ್ತಿಯಲ್ಲಿ ಯಜ್ಞ ವೂ ಸೇರಿದೆ. ಇದೊಂದು ಉತ್ತಮ ಕ್ರಿಯೆಯಾದ್ದರಿಂದ ಈಶ್ವರಿನಿಗೆ ಮೆಚ್ಚುಗೆಯಾಗಬಹುದೇನೋ? ಆದರೆ ಈಶ್ವರ ಯಾರನ್ನೂ ಮೆಚ್ಚುವುದಿಲ್ಲ, ನಿಂದಿಸುವುದೂ ಇಲ್ಲ ಒಟ್ಟಿನಲ್ಲಿ ಇದೊಂದು ಪರೋಪಕಾರದ ಕೆಲಸವಷ್ಟೇ.
      Durgaprasad Menda
      vasudevarao Rao @ : ದಯವಿಟ್ಟು ತಾವು ತಮ್ಮ ಸ್ಪಷ್ಟ ಅನಿಸಿಕೆಗಳಿಗೆ ಶೃತಿ ಸ್ಮೃತಿ ಪುರಾಣಗಳ ಶ್ಲೋಕಗಳ ಸೂಕ್ತವಾದ ಉಲ್ಲೇಖಗಳನ್ನು ನೀಡಬೇಕೆಂದು ವಿನಂತಿ.
      ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಸ್ಪಷ್ಟವಾಗಿ "ಭೋಕ್ತಾರಮ್ ಯಜ್ಞ ತಪಸಾಮ್" ಎಂಬುದಾಗಿ ಹೇಳಿದ್ದರೂ (ಈ ಶ್ಲೋಕವನ್ನು ನಾನು ಈ ಮೊದಲೇ ಉಲ್ಲೇಖಿಸಿದ್ದೇನೆ), ತಾವು " ನನ್ನ ಸ್ಪಷ್ಟ ಅಭಿಪ್ರಾಯವೆಂದರೆ ಯಜ್ಞದ ಭೋಕ್ತೃ ಪರಮಾತ್ಮ, ಅಥವಾ ದೇವತೆಗಳಲ್ಲ", ಎಂದು ಬರೆದಿರುವುದು ಬಹಳ ವಿಷಾದನೀಯ. ಬಹುಷಃ ತಾವು ಗೀತೆಯ ಈ ಶ್ಲೋಕವನ್ನು ಪರಿಗಣಿಸಿಲ್ಲ ಎಂದು ನಾನು ಭಾವಿಸುತ್ತೇನೆ.
      ತಮ್ಮ ಅನಿಸಿಕೆಗಳಿಗೆ ಶಾಸ್ತ್ರಗಳಲ್ಲಿ ಉಲ್ಲೇಖಗಳಿದ್ದರೆ ಮಾತ್ರ ಅವುಗಳು ಸ್ವೀಕಾರಾರ್ಹ ಎಂದಾಗುತ್ತವೆ. ಇಲ್ಲದೆ ಹೋದರೆ ಅದು ಕೇವಲ ನಿಮ್ಮ ಅಭಿಪ್ರಾಯವಷ್ಟೇ ಎಂದಾಗುತ್ತದೆ. ಯಾರೋ ಸೋನಿಯಾ ಮತ್ತು ಯಾಕೂಬ್ ರವರಿಗೆ ಹೇಗೆ ಗೀತೆಯಲ್ಲಿ ನಂಬಿಕೆ ವಿಶ್ವಾಸವಿರಲಾರದೋ ಅಂತೆಯೇ ವೈದಿಕ ಪರಂಪರೆಯಲ್ಲಿ ಜನಿಸಿದ್ದರೂ ತಾವೂ ಕೂಡಾ ಅವರ ಹಾಗೆ ಭಗವದ್ಗೀತೆಯಲ್ಲಿ ವಿಶ್ವಾಸಲಿಲ್ಲದವರು ಎಂದು ಅಂದುಕೊಂಡು ಸುಮ್ಮನಿರಬೇಕಾಗುತ್ತದೆ. (ನನ್ನ ಈ ತೆರನಾದ ಕಟುವಾದ ಬರವಣಿಗೆಯಿಂದ ತಮ್ಮ ಮನಸ್ಸಿಗೆ ನೋವುಂಟಾಗಿದ್ದಲಿ ಕ್ಷಮೆಯಿರಲಿ. ನನ್ನ ಉದ್ದೇಶ ತಮ್ಮ ಗಮನವನ್ನು ಗೀತೆಯ ಶ್ಲೊಕಗಳೆಡೆಗೆ ಸೆಳೆಯುವುದು ಮಾತ್ರ. ವ್ಯರ್ಥ ಊಹಾಪೋಹಗಳನ್ನು ತ್ಯಜಿಸಿ ಶಾಸ್ತ್ರಗಳಲ್ಲಿ ಹೇಳಿರುವುದನ್ನು ಯಥಾವತ್ತಾಗಿ ತಾವುಗಳು ಸ್ವೀಕರಿಸಬೇಕು ಎಂಬುದು ಮಾತ್ರ ನನ್ನ ಉದ್ದೇಶ)
      ಗೀತೆಯ ಕುರಿತಾಗಿ ಪದ್ಮ ಪುರಾಣದಲ್ಲಿ ಬರುವ ಗೀತಾ ಮಹಾತ್ಮ್ಯದಲ್ಲಿ ಹೇಳಿರುವ ಈ ಶ್ಲೋಕವನ್ನು ದಯವಿಟ್ಟು ಗಮನಿಸಿ:
      ಏಕಮ್ ಶಾಸ್ತ್ರಂ ದೇವಕೀ ಪುತ್ರ ಗೀತಮ್
      ಏಕೋ ದೇವೋ ದೇವಕೀ ಪುತ್ರ ಏವೋ
      ಏಕೋ ಮಂತ್ರಸ್ತಸ್ಯ ನಾಮಾನಿ ಯಾನಿ
      ಕರ್ಮಪಿ ಏಕಮ್ ತಸ್ಯ ದೇವಸ್ಯ ಸೇವಾ ( ಗೀತಾ ಮಹಾತ್ಮ್ಯ ಶ್ಲೋಕ ಸಂಖ್ಯೆ 7)

      ಅಳಿಸಿ
    5. Vasudevarao Rao
      ನೀವು ಯಾವುದನ್ನು ದೇವತೆ ಎನ್ನುತ್ತೀರಿ?
      Durgaprasad Menda
      ಯಾವುದನ್ನು ಅಲ್ಲ ಯಾರನ್ನು ಎಂದು ಕೇಳಿ. ಇಂದ್ರಾದಿ ಸುಮನಸರೆಲ್ಲರೂ ದೇವತೆಗಳೇ. ಅವರ್ಯಾರೂ ಜಡ ವಸ್ತುಗಳಲ್ಲ. ಗೀತೆಯ ಈ ಕೆಳಗಿನ ಶ್ಲೋಕವನ್ನು ದಯವಿಟ್ಟು ಗಮನಿಸಿ:
      ಯಾಂತಿ ದೇವವೃತಾ ದೇವಾನ್ ಪಿತೃನ್ ಯಾಂತಿ ಪಿತೃ ವೃತಾ
      ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮಧ್ಯಾಜಿನೋಪಿ ಮಾಮ್ (9.25)
      ಯಾರು ದೇವತೆಗಳನ್ನು ಪೂಜಿಸುತ್ತಾರೋ ಅವರು ದೇವತೆಗಳ ಲೋಕಕ್ಕೆ ಹೋಗುತ್ತಾರೆ, ಯಾರು ಪಿತೃಗಳನ್ನು ಪೂಜಿಸುತ್ತಾರೋ ಅವರು ಪಿತೃಗಳೊಂದಿಗೆ ವಾಸಿಸುತ್ತಾರೆ, ಯಾರು ಭೂತಗಳನ್ನು ಪೂಜಿಸುತ್ತಾರೋ ಅವರು ಭೂತಗಳ ನಡುವೆ ಜನ್ಮತಾಳುತ್ತಾರೆ, ಮತ್ತು ಯಾರು ನನ್ನನ್ನು ಪೂಜಿಸುತ್ತಾರೋ ಅವರೋ ನನ್ನೊಡನೆ ಜೀವಿಸುತ್ತಾರೆ.
      Durgaprasad Menda
      Vasudevarao Rao-ನಿಮ್ಮ ಮಿತ್ರರಾದ "ಸ್ಟೀಫನ್ ನ್ಯಾಪ್" ರವರು ಈ ಕುರಿತು ಹೆಚ್ಚಿನ ಮಾಹಿತಿಯನ್ನು ಕೊಡಬಲ್ಲರು. ಹುಟ್ಟಿನಿಂದ ಪಾಶ್ಚಾತ್ಯರಾದರೂ ಅವರು ನಮ್ಮ ಸಂಸ್ಕೃತಿಯನ್ನು , ಭಗವದ್ಗೀತೆಯನ್ನು, ಭಾಗವತವನ್ನು ಸಮಗ್ರವಾಗಿ ಅಧ್ಯಯನ ಮಾಡಿರುತ್ತಾರೆ. ಅವರೊಂದಿಗೆ ಚರ್ಚಿಸಿದಲ್ಲಿ ನಿಮಗೆ ಈ ಕುರಿತಾದ (ಗೀತೆಯ ಕುರಿತಾದ) ಅನುಭವವು ದೊರೆಯಬಲ್ಲುದು
      Bhimasen Purohit
      Vasudevarao Rao: ದೇವತೆಗಳಲ್ಲಿ ಜಡದೇವತೆಗಳು, ಚೇತನದೇವತೆಗಳು ಎಂಬ ಈ ವಿಭಾಗ ಎಲ್ಲಿಯೂ ಇಲ್ಲ.
      ದೇವತೆಗಳು ಯಾವತ್ತಿಗೂ ಚೇತನರೆ.. ವಾಯು ಜಡದೇವತೆ ಎಂದಿದ್ದೀರಿ. ನಮ್ಮ ಸುತ್ತಲಿರುವ ವಾಯು ಜಡವೇ. ಆದರೆ ಅದಕ್ಕೆ ಅಭಿಮಾನಿಯಾದ ಒಂದು ದೇವತೆ ಇದ್ದಾನಲ್ಲ, ಆ ದೇವತೆ ಚೇತನನೆ ಆಗಿದ್ದಾನೆ. ಇದನ್ನು ವೇದವ್ಯಾಸರು ಬ್ರಹ್ಮಸೂತ್ರದಲ್ಲಿ ಬರುವ "ಅಭಿಮಾನಿ-ಅಧಿಕರಣ"ದಲ್ಲಿ ಸ್ಪಷ್ಟಪಡಿಸಿದ್ದಾರೆ. ಅದರ ವಿಸ್ತಾರ ಬಹಳ ಇರುವುದರಿಂದ, ಎಲ್ಲವನ್ನೂ ಇಲ್ಲಿಯೇ ಬರೆಯಲು ಸಾಧ್ಯವಿಲ್ಲ. ಆ ರೀತಿಯ ವೇದಿಕೆ ಸಿಕ್ಕಾಗ ವಿವರಿಸುತ್ತೇನೆ..!!

      ಅಳಿಸಿ
    6. Vasudevarao Rao
      ವಾಯು ಜಡ ದೇವತೆ. ಪಂಚ ಭೂತಗಳು ಜಡ ದೇವತೆಗಳೇ. ಯಾರು ನಮಗೆ ದಾನವನ್ನು ಕೊಡುತ್ತಾರೋ ಅವರು ದೇವತೆಗಳು [ ದೇವಾ ದಾನಾಡ್ಯ] ಉತ್ತಮ ಗುಣಗಳಿಂದ ಶೋಭಿತರಾಗಿರುವವರು ದೇವತೆಗಳು. ಆದರೆ ಪಂಚ ಭೂತಗಳಲ್ಲಿ ಒಂದಾದ ವಾಯುವಿಗೆ ಚೇತನವಿಲ್ಲ. ಆದರೆ ಪಂಚಭೂತಗಳಲ್ಲಿ ಮಾನವರಿಗೆ ಅನುಕೂಲವಾಗುವಂತೆ ವೈವಸ್ಥೆಯಿದೆಯಾಗಿ ಅವರು ದೇವತೆಗಳೇ ವಿನಃ ಅವರು ಚೇತನ ಸ್ವರೂಪರಲ್ಲ. ದೇವರ ದೇವ ಮಹದೇವ. ಅವನೊಬ್ಬನೇ ಪೂಜ್ಯವಸ್ತು ಚೇತನ ಸ್ಹರೂಪಿ. ಹೊರತು ಈ ಜಡ ದೇವತೆಗಳಲ್ಲ. ದೇವತೆಗಳ ಅಭಿಮಾನಿ ದೇವತೆ ಮುಂತಾದವು ನಮ್ಮ ಕಲ್ಪನೆ ಮಾತ್ರ. ಎಲ್ಲಕ್ಕೂ ಸೃಷ್ಟಿ ಕರ್ತನಾದ ಪರಮೇಶ್ವರನೇ ಎಲ್ಲರ ಒಡೆಯ. ವಾಯು ಜಡ ಎಂದು ನೀವು ಒಪ್ಪಿಕೊಂಡು ಇದಕ್ಕೊಬ್ಬ ಅಭಿಮಾನಿ ಇದ್ದಾನೆ ಎಂದು ಹೇಳಿದ್ದೀರಿ. ಬಹುಶಃ ಆ ಸೃಷ್ಷಿಕರ್ತನೇ ನಿಮ್ಮ ಅಭಿಮಾನಿ ದೇವತೆಯಾದಲ್ಲಿ ನನ್ನ ಅಕ್ಷೇಪಣೆಯಿಲ್ಲ. ಇಡೀ ವೈದಿಕ ಸಾಹಿತ್ಯದಲ್ಲಿ ಈಶ್ವರ ನನ್ನು ಹೊರತು ಪಡಿಸಿದರೆ, ಮಿಕ್ಕವರು ಎಂದರೆ ತಂದೆ ತಾಯಿಗಳು, ಆಚಾರ್ಯ, ಅತಿಥಿ ಪತಿಗೆ ಪತ್ನಿ ಮತ್ತು ಪತ್ನಿಗೆ ಪತಿ ಹೀಗೆ ಪಂಚ ಚೇತನರಿದ್ದಾರೆ. ಪರಮಾತ್ಮ ಚೇತನ ಆದರೆ ನಿರಾಕಾರ, ಯಾವುದೇ ವೈದಿಕ ಸಾಹಿತ್ಯದಲ್ಲೂ ಪಂಚ ಭೂತಗಳನ್ನು ಚೇತನರೆಂದು ಕರೆದಿಲ್ಲ. ಆದರೆ ಈ ಜಡ ದೇವತೆಗಳ ಪೂಜೆ ಎಂದರೆ ಬಲ ಪಡಿಸುವುದು, ಯಜ್ಞ ಒಂದು ಈ ದಿಕ್ಕಿನಲ್ಲಿ ಮಾಡುವ ಪ್ರಯತ್ನ ಹೇಳಲಾಗಿದೆ.
      Vasudevarao Rao
      ಮಾನ್ಯ ಮೆಂಡೇ ಯವರೇ, ಪರಮಾತ್ಮನ ವೈದಿಕ ಸ್ವರೂಪ ಹೀಗಿದೆ. ಪರಮಾತ್ಮನು ಸಚ್ಚಿದಾನಂದ ಸ್ವರೂಪನೂ, ನಿರಾಕಾರನೂ ಸರ್ವಶಕ್ತನೂ, ನ್ಯಾಯಕಾರಿಯೂ, ದಯಾಳುವೂ, ಆಜನ್ಮನೂ ಅನಂತನೂ ನಿರ್ವಿಕಾರನೂ, ಅನಾದಿಯೂ, ಅನುಪಮನೂ, ಸರ್ವಾಧಾರನೂ, ಸರ್ವೇಶ್ವರನೂ, ಅಜರನೂ, ಸರ್ವಾಂತರ್ಯಾಮಿಯೂ, ಅಮರನೂ, ಅಭಯನೂ ನಿತ್ಯನೂ ಪವಿತ್ರನೂ ಸೃಷ್ಟಿಕರ್ತನೂ ಆಗಿದ್ದಾನೆ. ಇದೇ ರೀತಿಯಲ್ಲಿ ಅವನು ಪೂರ್ಣನೂ, ಮತ್ತು ನಿತ್ಯ ತೃಪ್ತನೂ ಆಗಿದ್ದಾನೆ. ಅವನು ಆನಂದ ಸ್ವರೂಪನಾಗಿರುವುದರಿಂದ ಯಾವುದೇ ಕೊರತೆಯಿಲ್ಲ. ನೀವು ಹೇಳುವಂತೆ ಹವಿರ್ಬಾಗವನ್ನು ಸ್ವೀಕರಿಸುವ ಭೋಕ್ತೃ ಅವನಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಶಂಕರಾಚಾರ್ಯರ ಅಬಿಪ್ರಾಯವನ್ನು ಇಲ್ಲಿ ಹೇಳಲು ಬಯಸುತ್ತೇನೆ. ಅವರು ಪರಪೂಜಾ ಎಂಬ ಗ್ರಂಥದಲ್ಲಿ ಹೀಗೆ ಹೇಳಿದ್ದಾರೆ " ಪೂರ್ಣನಾದ ಪರಮಾತ್ಮನ ಅವಾಹನೆ ಹೇಗೆ ಸಾಧ್ಯ? ಸರ್ವಾಧಾರನಿಗೆ ಆಸನವೆಲ್ಲಿ? ಸ್ವಚ್ಛನಾದ ದೇವನಿಗೆ ಪಾದ್ಯ-ಅರ್ಘ್ಯಗಳೇಕೆ? ಶುದ್ಧನಿಗೆ ಆಚಮನದ ಅವಶ್ಯಕತೆ ಏನು? ನಿರ್ಮಲನಿಗೆ ಸ್ನಾನವೆಲ್ಲಿ? ವಿಶ್ವೋದರನಿಗೆ ವಸ್ತ್ರವೆಂತು? ನಿರಾಲಂಬನಿಗೆ ಉಪವೀತವೆಂತಹುದು? ಸುಂದರನಾದ ದೇವನಿಗೆ ಆಭರಣವೆತ್ತಣದು? ಸ್ವಯಂ ಪ್ರಕಾಶಮಾನನಾದ ಜಗದೀಶ್ವರನಿಗೆ ದೀಪವೇತಕ್ಕೆ? ಒಳಗೂ ಹೊರಗೂ ವ್ಯಾಪಕನಾಗಿರುವವನಿಗೆ ಉದ್ವಾಸನ ಅಂದರೆ ವಿಸರ್ಜನ ವಿಧಿ ಹೇಗೆ ಹೊಂದುವುದು? ಈ ಹಿನ್ನೆಲೆಯಲ್ಲಿ ಪರಿಪೂರ್ಣನೂ, ನಿತ್ಯತೃಪ್ತನೂ ಆದ ದೇವರ ದೇವ ಮಹದೇವನಾದ ಈಶ್ವರ ಯಜ್ಞದ ಹವಿಸ್ಸನ್ನು ಸ್ವೀಕರಿಸುತ್ತಾನೆಂದು ಒಪ್ಪುವುದು ಕಷ್ಟ. ನೀವು ಗೀತೆಯ ಬಗ್ಗೆ ಹೇಳಿದ್ದೀರಿ, ಆದರೆ ಗೀತೆಯೂ ಸಹ ವೇದಗಳನ್ನು ಈಶ್ವರ ವಾಣಿಯೆಂದೇ ಹೇಳಿದೆ. ಇನ್ನು ನಾವು ಗೌರವಿಸಬೇಕಾದ್ದು ಈಶ್ವರನ ವಾಣಿಯೋ ಅಥವಾ ಮನುಷ್ಯಕೃತ ಗೀತೆಯೋ? ಮನು ಒಂದು ಕಡೆ ಹೇಳುತ್ತಾನೆ." ಧರ್ಮ ಜಿಜ್ಞಾಸಮಾನಾನಂ ಪ್ರಮಾಣಂ ಪರಮಂ ಶೃತಿಃ ಶೃತಿಸ್ತು ವೇದೋ ವಿಜ್ಞೇಯಃ ಎಂದರೆ ವೇದಗಳೇ ಪರಮ ಪ್ರಮಾಣ. ಹಾಗಾಗಿ ಯಾವುದೇ ಸಾಹಿತ್ಯವಿರಲಿ ಅದು ವೇದ ಪೂರಕವಾಗಿದ್ದರೆ ಅದು ನಮಗೆ ಮಾನ್ಯ. ಇಲ್ಲವಾದಲ್ಲಿ ಇಲ್ಲ. ಪುರಾಣಗಳು, ಗೀತೆ ಹೀಗೆ ಯಾವುದೇ ಸಾಹಿತ್ಯವಿರಲಿ. ಅದು ವೇದಾನುಕೂಲವಿದ್ದಲ್ಲಿ ಮಾತ್ರ ಮಾನ್ಯ. ಸ್ಟೀಪನ್ ನ್ಯಾಪ್ ರವರ ಬಗ್ಗೆ ನನಗೆ ಪ್ರೀತಿ ಇದೆ. ಆದರೆ ನನಗೆ ದಯಾನಂದರ ಬಗ್ಗೆ ಗುರು ಭಾವನೆಯಿದೆ.

      ಅಳಿಸಿ
    7. Durgaprasad Menda
      Vasudevarao Rao@ ವಾಯು ಜಡ ಎಂದು ನಾನು ಎಲ್ಲೂ ಹೇಳಿಲ್ಲ, ಅದು ಭೀಮಸೇನಪುರೋಹಿತರ ಅಭಿಪ್ರಾಯ. ಇಷ್ಟಕ್ಕೂ ತಾವು ಭಗವದ್ಗೀತೆಯನ್ನು ಸ್ವೀಕರಿಸುವುದಿಲ್ಲ ಎಂದಾದಮೇಲೆ ತಮ್ಮಲ್ಲಿ ನನ್ನ ವಾದವಿಲ್ಲ. ವಂದನೆಗಳು.
      ಯಾಮ್ ಇಮಾಮ್ ಪುಷ್ಪಿತಾಮ್ ವಾಚಾಮ್
      ಪ್ರವದಂತಿ ಅವಿಪಶ್ಚಿತಃ
      ವೇದ ವಾದ ರತಾಃ ಪಾರ್ಥಾ
      ನ ಅನ್ಯಾದ್ ಅಸ್ತಿ ಇತಿ ವಾದಿನಃ (ಭಗವದ್ಗೀತೆ 2.42 )
      ಅವಜಾನಂತಿ ಮಾಮ್ ಮೂಢೋ
      ಮಾನುಶೀಮ್ ತನುಮಾಶ್ರಿತಃ
      ಪರಮ್ ಭಾವಂ ಅಜಾನಂತೋ
      ಮಾಮ ಭೂತ ಮಹೇಶ್ವರಂ
      ಮೂಢರು ನಾನು ಮನುಷ್ಯ ದೇಹಧಾರಿಯಾಗಿ ಬಂದಾಗ ನನ್ನನ್ನು ಅರಿತುಕೊಳ್ಳಲಾರರು. ಅವರು ನನ್ನ ಪರಮ್ ಭಾವವನ್ನು ಅರಿತುಕೊಳ್ಳದೆ, ನಾನು ಎಲ್ಲದರ ಮಹೇಶ್ವರ ಎಂಬುದನ್ನು ಕಾಣಲಾರರು. (ಭಗದ್ಗೀತಾ 9.11)
      ವೇದಗಳ ಶ್ಲೋಕಗಳನ್ನು ಅಪಾರ್ಥ ಮಾಡಿಕೊಂಡುದುದರ ಪರಿಣಾಮವಾಗಿ ಹಿಂದೆ ವೈದಿಕ ಸಂಸ್ಕೃತಿಯು ನಶಿಸಿಹೋಗುವ ಪ್ರಮೇಯ ಬಂದೊದಗಿತ್ತು.
      ವೇದಗಳ ಶ್ಲೋಕಗಳನ್ನು ಅಪಾರ್ಥ ಮಾಡಿಕೊಂಡುದುದರ ಪರಿಣಾಮವಾಗಿ ಹಿಂದೆ ವೈದಿಕ ಸಂಸ್ಕೃತಿಯು ನಶಿಸಿಹೋಗುವ ಪ್ರಮೇಯ ಬಂದೊದಗಿತ್ತು.
      ವೇದಗಳಲ್ಲಿ ಮಾಂಸಾಹಾರ ಭಕ್ಷಣೆಯನ್ನು ಖಂಡಿಸಲಾಗಿದೆ. ಆದರೂ ಯಾರಿಗೆ ಮಾಂಸಾಹಾರವು ಬೇಕೇಬೇಕೋ (ಯಾರಿಗೆ ತಮ್ಮ ಜಿಹ್ವೆಯ ಮೇಲೆ ಹತೋಟಿ ಇಲ್ಲದೆ ಮಾಂಸಾಹಾರವು ಖಡ್ಡಾಯವಾಗಿ ಬೇಕೋ) ಅವರಿಗೆ ಮಾಂಸವನ್ನು ತಿನ್ನಲು ಅನುವು ಮಾಡಲು ವೇದಗಳಲ್ಲಿ ಮೂಲ ನಿಯಮಕ್ಕೆ ರಿಯಾಯಿತಿಯನ್ನು ಕೂಡಾ ನೀಡಲಾಗಿದೆ. ಆದರೆ ಯಾರಿಗೆ ಮಾಂಸವನ್ನು ತಿನ್ನಬೇಕೆಂದಿದೆಯೋ ಅವರೇ ಸ್ವತಃ ತಾವು ತಿನ್ನಬೇಕೆಂದಿರುವ ಪ್ರಾಣಿಯನ್ನು, ಅಮಾವಾಸ್ಯೆ ಮುಂತಾದ ವಿಶೇಷ ದಿನದಂದು ಕಾಳಿ ಮೊದಲಾದ ಉಗ್ರಸ್ವರೂಪೀ ದೇವತೆಗಳಿಗೆ ಅಥವಾ ಇನ್ನಿತರ ಭೂತಗಳಿಗೆ ಬಲಿಯಾಗಿ ಸಮರ್ಪಿಸಬೇಕು. ಹಾಗೆ ಬಲಿಕೊಡುವಾಗ ಆ ಪ್ರಾಣಿಯ ಕಿವಿಯಲ್ಲಿ "ಮಾಂಸಃ..." ಎಂಬ ಮಂತ್ರವನ್ನು ಉಚ್ಚರಿಸಬೇಕು.
      ಈ ರೀತಿಯ ರಿಯಾಯಿತಿಯಿಂದಾಗಿ ಯಾರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೋ, ಅವರು ಕ್ರಮೇಣ ಮಾಂಸ ಭಕ್ಷಣೆಯ ಅಭಿರುಚಿಯಿಂದ ಮುಕ್ತರಾಗುತ್ತಾರೆ. ಮಾಂಸ ಭಕ್ಷಣೆ ಸಲ್ಲದು ಎಂಬ ಮೂಲ ನಿಯಮಕ್ಕೆ ವೇದಗಳಲ್ಲಿನೀಡಿರುವ ರಿಯಾಯತಿಯ ಉದ್ದೇಶವು ಕೂಡಾ ಇದೇ. ಆದರೆ ಈ ರಿಯಾಯಿತಿಯನ್ನೇ ಮೂಲ ನಿಯಮವೆಂದು ಬಗೆದು ಕೆಲವು ವೇದಾಧ್ಯಾಯಿ ಬ್ರಾಹ್ಮಣರು, ಸ್ವತಃ ಪ್ರಾಣಿಬಲಿಯನ್ನು ಪ್ರೋತ್ಸಾಹಿಸ ತೊಡಗಿದರು. ಕ್ರಮೇಣ ಪ್ರಾಣಿಬಲಿಯು ಎಷ್ಟೊಂದು ಪ್ರಚಲಿತವಾಯಿತಂದರೆ ಸ್ವತಃ ಭಗವಂತನಾದ ವಿಷ್ಣು ತಾನೇ ಬುದ್ಧಾವತಾರಿಯಾಗಿ ಬಂದು ಅಹಿಂಸೋ ಪರಮೋ ಧರ್ಮಃ ಎಂಬುದಾಗಿ ಬೋಧಿಸಿದನು.
      ಆದರೆ ವೇದವಿದರಾದ ಬ್ರಾಹ್ಮಣರು ತಮ್ಮ ಪ್ರಾಣಿಬಲಿಯನ್ನು ಸಮರ್ಥಿಸಿಕೊಳ್ಳಲು ವೇದಗಳಲ್ಲಿ ನೀಡಿರುವ ರಿಯಾಯಿತಿಯನ್ನೇ ಉಲ್ಲೇಖಿಸತೊಡಗಿ ಬುದ್ಧನನ್ನು ಖಂಡಿಸತೊಡಗಿದರು. ಆಗ ಬುದ್ಧನು ತಾನು ಅಂತಹ ವೇದಗಳನ್ನು ತಿರಸ್ಕರಿಸುತ್ತೇನೆ ಎಂಬುದಾಗಿ ಹೇಳುತ್ತಾನೆ. ಆದರೆ ಬುದ್ಧನು ವೇದಗಳನ್ನು ತಿರಸರಿಸುತ್ತೇನೆ ಎಂದದ್ದು ಅವರು ರಿಯಾಯಿತಿಯನ್ನೇ ಮೂಲ ವಿಧಿಎಂಬುದಾಗಿ ಅಳವಡಿಸಿದ್ದನ್ನೇ ಹೊರತು ಸಮಗ್ರವಾಗಿರುವ ವೇದಗಳ ಅಭಿಪ್ರಾಯವನ್ನಲ್ಲ.
      ಅಶೋಕನೇ ಮೊದಲಾದ ಚಕ್ರವರ್ತಿಗಳು ಬೌದ್ಧಧರ್ಮಕ್ಕೆ ರಾಜಾಶ್ರಯವನ್ನಿತ್ತ ಪರಿಣಾಮವಾಗಿ ಬೌದ್ಧಧರ್ಮವು ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಲಾರಂಭಿಸಿತು. ಆದರೆ ಬೌದ್ಧಧರ್ಮದ ಅನುಯಾಯಿಗಳು ವೇದಗಳನ್ನು ಸ್ಪಷ್ಟವಾಗಿ ತಿರಸ್ಕರಿಬಿಟ್ಟಿದ್ದರು, ಯಾಕೆಂದರೆ ಬುದ್ಧನು ವೇದಗಳನ್ನು ತಿರಸ್ಕರಿಸಿದ್ದನು. ಹೀಗೆ ಬೌದ್ಧಧರ್ಮದ ವಿಸ್ತಾರತೆಯು ಇಡೀ ಭಾರತ ಖಂಡವನ್ನೇ ಆವರಿಸಿ ಇನ್ನೂ ಹೆಚ್ಚಾಗಿ ಪಸರಿಸಲು ಪ್ರಾರಂಭಿಸಿತ್ತು. ಹೀಗೆ ವೈದಿಕ ಸಂಸ್ಕೃತಿಯು ನಶಿಸಿ ಹೋಗುವ ಅಪಾಯದಲ್ಲಿತ್ತು.
      ಆಗ ಭಗವತ್ಪಾದ ಶಂಕರಾಚಾರ್ಯರು ಬಂದು ವೈದಿಕ ಸನಾತನ ಸಂಸ್ಕೃತಿಯನ್ನು ಪುನಃ ಸ್ಥಾಪಿಸಿದರು. ಬೌದ್ಧಧರ್ಮದ ಶೂನ್ಯವಾದದಿಂದ ಸಮಾಜವನ್ನು ಮುನ್ನಡೆಸಿ ಅದ್ವೈತವಾದವನ್ನು( ಮಾಯವಾದವನ್ನು) ಸ್ಥಾಪಿಸಿದರು.
      ಒಟ್ಟಿನಲ್ಲಿ ವೇದಗಳನ್ನು ಅಪಾರ್ಥಮಾಡಿಕೊಂಡು ಮನಬಂದಂತೆ ಅರ್ಥೈಸಿದುದರಿಂದಾಗಿ ವೈದಿಕ ಸಂಸ್ಕೃತಿಯು ನಶಿಸಿಹೋಗುವ ಅಪಾಯವು ಎದುರಾಗಿತ್ತು. ಹಾಗಾಗಿ ಮತ್ತೊಮ್ಮೆ ಈ ರೀತಿಯ ಸಂದರ್ಭಗಳು ಬರುವಂತಾಗದಿರಲೆಂದು ಆಶಿಸೋಣ. ಅಲ್ಲದೆ ಭಗವತ್ಪಾದ ಶಂಕರಾಚಾರ್ಯರು ಹೇಳಿರುವಂತೆ "ಭಜ ಗೋವಿಂದಮ್ ಭಜ ಗೋವಿಂದಮ್ ಗೋವಿಂದಮ್ ಭಜ ಮೂಢ ಮತೇ", ಗೋವಿಂದನ ಭಜನೆ ಮಾಡಿ ಅವರನ್ನು ಹಾಗೂ ಅವನನ್ನು ಮೆಚ್ಚಿಸುವುದೇ ಒಳಿತಲ್ಲವೇ.
      Vasudevarao Rao ವೇದಗಳಲ್ಲಿ ಪರಸ್ಪರ ವಿರೋಧ ವಿಚಾರಗಳಿಲ್ಲ. ಮಾಂಸ ಭಕ್ಷಣೆಗೆ ವೇದಗಳಲ್ಲಿ ಸಂಪೂರ್ಣ ವಿರೋಧವಿದೆ. ಆದರೆ ನೀವು ಮಾಂಸ ಭಕ್ಷಣೆಗೆ ವೇದಗಳಲ್ಲಿ ರಿಯಾಯತಿ ನೀಡಲಾಗಿದೆ ಎಂದು ನೀವು ಹೇಳಿದ್ದೀರಿ. ದಯವಿಟ್ಟು ಈ ಅಭಿಪ್ರಯಾವನ್ನು ಸಮರ್ಥಿಸುವ ವೇದ ಮಂತ್ರವನ್ನು ಉದಾಹರಿಸಿ.
      Vasudevarao Rao
      ವೇದಗಳಲ್ಲಿ ಪರಸ್ಪರ ವಿರೋಧ ವಿಚಾರಗಳಿಲ್ಲ. ಮಾಂಸ ಭಕ್ಷಣೆಗೆ ವೇದಗಳಲ್ಲಿ ಸಂಪೂರ್ಣ ವಿರೋಧವಿದೆ. ಆದರೆ ನೀವು ಮಾಂಸ ಭಕ್ಷಣೆಗೆ ವೇದಗಳಲ್ಲಿ ರಿಯಾಯತಿ ನೀಡಲಾಗಿದೆ ಎಂದು ನೀವು ಹೇಳಿದ್ದೀರಿ. ದಯವಿಟ್ಟು ಈ ಅಭಿಪ್ರಯಾವನ್ನು ಸಮರ್ಥಿಸುವ ವೇದ ಮಂತ್ರವನ್ನು ಉದಾಹರಿಸಿ.
      Durgaprasad Menda ಮನು ಸ್ಮೃತಿಯ 5 ನೇ ಅಧ್ಯಾಯದಲ್ಲಿ ಅಲ್ಲಲ್ಲಿ ಯಜ್ಞದಲ್ಲಿ ಬಲಿಕೊಟ್ಟ ಪ್ರಾಣಿಗಳನ್ನು ತಿನ್ನಬಹುದು ಎಂದು ಹೇಳಲಾಗಿದೆ. ಅಂತೆಯೇ ಯಜುರ್ವೇದದಲ್ಲಿಯೂ ಅನೇಕ ಕಡೆ ಈ ತೆರನಾದ ನಿಯಮಗಳನ್ನು ನೀಡಲಾಗಿದೆ. ನಾನು ಇಲ್ಲಿ ಅವುಗಳನ್ನು ಉಲ್ಲೇಖಿಸಲು ಬಯಸುವುದಿಲ್ಲ, ಯಾಕೆಂದರೆ ಈಗಾಗಲೇ ಅನೇಕ ಅನ್ಯ ಧರ್ಮೀಯರು ವೇದಗಳು ಮಾಂಸಾ...See

      ಅಳಿಸಿ
    8. Durgaprasad Menda
      ಮನು ಸ್ಮೃತಿಯ 5 ನೇ ಅಧ್ಯಾಯದಲ್ಲಿ ಅಲ್ಲಲ್ಲಿ ಯಜ್ಞದಲ್ಲಿ ಬಲಿಕೊಟ್ಟ ಪ್ರಾಣಿಗಳನ್ನು ತಿನ್ನಬಹುದು ಎಂದು ಹೇಳಲಾಗಿದೆ. ಅಂತೆಯೇ ಯಜುರ್ವೇದದಲ್ಲಿಯೂ ಅನೇಕ ಕಡೆ ಈ ತೆರನಾದ ನಿಯಮಗಳನ್ನು ನೀಡಲಾಗಿದೆ. ನಾನು ಇಲ್ಲಿ ಅವುಗಳನ್ನು ಉಲ್ಲೇಖಿಸಲು ಬಯಸುವುದಿಲ್ಲ, ಯಾಕೆಂದರೆ ಈಗಾಗಲೇ ಅನೇಕ ಅನ್ಯ ಧರ್ಮೀಯರು ವೇದಗಳು ಮಾಂಸಾಹಾರವನ್ನು ನಿರಾಕರಿಸುತ್ತಿರಲಿಲ್ಲ ಎಂಬುದಕ್ಕೆ ಈ ತೆರನಾದ ಉದಾಹರಣೆಗಳನ್ನು ನೀಡಿ ನಮ್ಮ ಸಮಾಜದ ದಾರಿ ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಹಾಗಾಗಿ ನಾವು ಇದಕ್ಕೆ ಆಸ್ಪದ ಕೊಡುವ ಹಾಗಾಗಬಾರದು. ಈ ಉಲ್ಲೇಖಗಳು ಇಂದಿಗೂ ಕೂಡಾ ಸಮಾಜದ ದಾರಿತಪ್ಪಿಸುವಲ್ಲಿ ಗಣನೀಯ ಕೊಡುಗೆಗಳನ್ನು ನೀಡಬಲ್ಲವು.
      Vasudevarao Rao
      " ಅಂತಕಾಯ ಗೋಧಾತಾಮ್" ಯಾರು ಗೋವನ್ನು ಕೊಲ್ಲುತ್ತಾರೋ ಅವರನ್ನು ಕೂಡಲೇ ಸಾಯಸಬೇಕು.ಯಜುರ್ವೇದ 30.18 ಮನುಸ್ಮೃತಿಯಲ್ಲಿ ಹೀಗೆ ಹೇಳಿದೆ " "ಅನುಮಂತಾ ವಿಶಸಿತ ನಿಹಂತ ಕ್ರಯವಿಕ್ರಯಿ| ಸಸ್ಕತಾ ಚೋಪಹತಾ ಚ ಖಾದ ಕಶ್ಚೇತಿ ಘಾತಕಃ|| ಯಾರು ಪ್ರಾಣಿಯನ್ನು ಕೊಲ್ಲಲು ಸಲಹುವರೋ, ಯಾರು ಪ್ರಾಣಿಯನ್ನು ಕೊಲ್ಲುವರೋ ಈ ಉದ್ದೇಶಕ್ಕಾಗಿ ಯಾರು ಪ್ರಾಣಿಯನ್ನು ಕೊಳ್ಳುವರೋ, ಯಾರು ಪ್ರಾಣಿಯನ್ನು ಕೊಂದು ಅಡಿಗೆ ಮಾಡುವರೋ, ಯಾರು ಈ ಮಾಂಸವನ್ನು ಬಡಿಸುವರೋ, ಯಾರು ತಿನ್ನುವರೋ ಇವರೆಲ್ಲರೂ ಘಾತಕರು ಆದ್ದರಿಂದ ಶಿಕ್ಷೆಗೆ ಅರ್ಹರು. ನೀವು ಮನುಸ್ಮೃತಿಯಲ್ಲಿ ಮಾಂಸವನ್ನು ತಿನ್ನಬಹುದು ಎಂದು ಹೇಳಿದ್ದೇರಿ, ಈ ಎರಡೂ ಶ್ಲೋಕಗಳು ಪರಸ್ಪರ ವಿರುದ್ಧವಾಗಿದ್ದು ಯಾವುದು ಸತ್ಯ ಮತ್ತು ಯಾವುದು ಅಸತ್ಯ? ವಾಸ್ತವವಾಗಿ ಹೇಳಬೇಕೆಂದರೆ ಇಂದು ದೊರೆಯುವ ಮನುಸ್ಮೃತಿಯಲ್ಲಿ ಸುಮಾರು 40% ಕಲಬೆರಕೆ ಶ್ಲೋಕಗಳಿವೆ. ಈ ಕಲಬರೆಕೆ ಶ್ಲೋಕಗಳನ್ನುದ್ಧರಿಸಿ ಜನಗಳು ಮಾಂಸ ಭಕ್ಷಣೆಯನ್ನು ಸಮರ್ಥಿಸುತ್ತಾರೆ. ಮನುಸ್ಮೃತಿಯನ್ನು ಆಮೂಲಾಗ್ರವಾಗಿ ಪರಿಷ್ಕರಿಸಿ, ಕೆಲವು ಮಾನದಂಡಗಳನ್ನು ವಿಧಿಸಿ, ವಿಶುದ್ಧ ಮನುಸ್ಮೃತಿಯನ್ನು ಡಾ|| ಸುರೇಂದ್ರಕುಮಾರ್ ರವರು ತಯಾರಿಸಿದ್ದಾರೆ. ನ್ಯಾಯಾಲಯಗಳು ಈ ವಿಶುದ್ಧ ಮನುಸ್ಮೃತಿಯನ್ನು ಮೆಚ್ಚಿವೆ. ಪ್ರಸ್ತುತ ಇವರು ಹರಿದ್ವಾರದಲ್ಲಿರುವ ಕಾಂಗಡಿ ಗುರುಕುಲದ ಕುಲಸಚಿವರಾಗಿದ್ದಾರೆ. ಮತ್ತೊಂದು ವಿಷಯ. ನಾನು ಮಾಂಸ ಭಕ್ಷಣೆಯನ್ನು ಸಮರ್ಥಿಸುವ ವೇದ ಮಂತ್ರವನ್ನು ಉದಾಹರಿಸಿ ಎಂದು ಕೇಳಿದರೆ ನೀವು ಹಾರಿಕೆ ಉತ್ತರವನ್ನು ನೀಡುತ್ತಿದ್ದೀರಿ. ಇಲ್ಲವೇ ವೇದಮಂತ್ರವನ್ನು ಹೇಳಿ. ಇಲ್ಲವೇ ವೇದಗಳಲ್ಲಿ ಮಾಂಸಾಹಾರವಿದೆ ಎಂಬುದನ್ನು ಹೇಳಲು ದಯವಿಟ್ಟು ನಿಲ್ಲಿಸಿ.

      ಅಳಿಸಿ