ನೂತನ ನಂದನ ಸಂವತ್ಸರ ಕಾಲಿರಿಸಿದೆ. ಎಲ್ಲಾ ಓದುಗರಿಗೂ ನೂತನ ವರ್ಷ ಮಂಗಳಕರವಾಗಿರಲಿ ಎಂದು ಹಾರೈಸುತ್ತಾ, ಯುಗಾದಿಯ ಹಾಗೂ ಬರಲಿರುವ ಶ್ರೀರಾಮನವಮಿಯ ಶುಭಾಶಯಗಳನ್ನು ಕೋರುತ್ತೇನೆ.
ಇತ್ತೀಚೆಗೆ ವೇದಸುಧೆ ಅಂತರ್ಜಾಲ ತಾಣದಲ್ಲಿ ಮತ್ತು ಫೇಸ್ ಬುಕ್ಕಿನ ಸುಮನಸ ಗುಂಪಿನಲ್ಲಿ 'ಯಜ್ಞದಲ್ಲಿ ಪ್ರಾಣಿಬಲಿ' ಎಂಬ ವಿಷಯ ಕುರಿತು ವ್ಯಾಪಕವಾದ ಚರ್ಚೆಯಾಯಿತು. ಚರ್ಚೆಯ ಫಲಾಫಲಗಳು ಏನೇ ಇರಲಿ, ಭಾಗವಹಿಸಿದವರು ಮನಃಪೂರ್ವಕವಾಗಿ ಚರ್ಚೆಯಲ್ಲಿ ತೊಡಗಿಸಿಕೊಂಡದ್ದು ವಿಶೇಷ. ಚರ್ಚೆಯಲ್ಲಿ ಇನ್ನಿತರ ತಜ್ಞರೂ, ವಿದ್ವಾಂಸರೂ, ವೇದಗಳನ್ನು ಅರಿತವರೂ ಭಾಗವಹಿಸಿದ್ದರೆ ಚೆನ್ನಾಗಿರುತ್ತಿತ್ತು. ಚರ್ಚೆಯಲ್ಲಿ ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲೂ ಪ್ರಾಣಿಬಲಿ ನೀಡಿರುವುದಕ್ಕೆ ಸಮರ್ಥನೆಯಿದೆ ಎಂಬ ಅಂಶವೂ ಪ್ರಸ್ತಾಪವಾಗಿತ್ತು. ಇದನ್ನು ಅಲ್ಲಗಳೆಯಲು ನನ್ನಂತಹ ಅಲ್ಪಮತಿಗಳಿಗೆ ಕಷ್ಟವಾಗಿತ್ತು. ಏಕೆಂದರೆ ಸಂಸ್ಕೃತದ ಆ ರಾಮಾಯಣವನ್ನು ಪೂರ್ಣವಾಗಿ ಓದಿರುವವರ ಸಂಖ್ಯೆ ಕಡಿಮೆಯೆಂದರೆ ತಪ್ಪಲ್ಲ. ನಾನೂ ಅವರಲ್ಲಿ ಒಬ್ಬನಾಗಿದ್ದೇನೆ. ಆದರೆ ರಾಮೋತ್ಸವದ ಸಂದರ್ಭದಲ್ಲಿ ರಾಮಾಯಣ ಕುರಿತು ಪ್ರವಚನಗಳು, ಹರಿಕಥೆಗಳನ್ನು ಚಿಕ್ಕಂದಿನಿಂದಲೂ ಕೇಳುತ್ತಾ ಬಂದು ಶ್ರೀರಾಮನ ಗುಣಗಳಿಂದ ಪ್ರಭಾವಿತನಾಗಿರುವುದು ಮಾತ್ರ ಸತ್ಯ. ರಾಮಾಯಣದಲ್ಲಿ ಪ್ರಾಣಿಬಲಿಗೆ ಸಮರ್ಥನೆಯಿದೆಯಂಬುದನ್ನು ಕೇಳಿ ಮನಸ್ಸಿಗೆ ಕಸಿವಿಸಿಯಾಗಿದ್ದ ಸಂದರ್ಭದಲ್ಲಿ ಪಂ. ಸುಧಾಕರ ಚತುರ್ವೇದಿಯವರು ರಚಿಸಿದ ಒಂದು ಪುಸ್ತಕ 'ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮಚಂದ್ರ' ನನ್ನ ಕೈಗೆ ಸಿಕ್ಕಿತು. ಅದನ್ನು ಓದಿದಾಗ ಹಿತವೆನಿಸಿತು. ೧೯೬೪ರಲ್ಲಿ 'ವಾಲ್ಮೀಕಿ ಕಂಡ ಶ್ರೀರಾಮ' ಎಂಬ ಹೆಸರಿನಲ್ಲಿ ಪ್ರಥಮವಾಗಿ ಮುದ್ರಿತವಾದ ಈ ಪುಸ್ತಕ ಈಗಾಗಲೇ ಐದು ಮುದ್ರಣಗಳನ್ನು ಕಂಡಿದೆ. ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲಿ ಆಗಿರುವ ಅನೇಕ ಪ್ರಕ್ಷೇಪಣೆಗಳ ಕುರಿತು ಲೇಖಕರು ಈ ಪುಸ್ತಕದಲ್ಲಿ ಸೋದಾಹರಣವಾಗಿ ಪ್ರಸ್ತಾಪಿಸಿದ್ದಾರೆ. ೧೧೬ ವರ್ಷಗಳ ಪಂ. ಸುಧಾಕರ ಚತುರ್ವೇದಿಯವರು ನಾಲ್ಕು ವೇದಗಳನ್ನು ಅಧ್ಯಯನ ಮಾಡಿದವರಾಗಿದ್ದು, ಈ ಕಾರಣದಿಂದಲೇ ಅವರಿಗೆ ಚತುರ್ವೇದಿ ಎಂಬ ಹೆಸರು ಬಂದಿದ್ದಾಗಿದೆ. ಇಂದಿಗೂ ಅವರು ವೇದಮಂತ್ರಗಳ ಅರ್ಥ, ವಿಮರ್ಶೆಗಳನ್ನು ಆಸಕ್ತರಿಗೆ ಮಾಡಿಕೊಡುತ್ತಿದ್ದಾರೆ. ಪ್ರತಿ ಶನಿವಾರ ಬೆಂಗಳೂರಿನ ಅವರ ನಿವಾಸದಲ್ಲಿ ನಡೆಯುವ ಸತ್ಸಂಗದಲ್ಲಿ ಅವರ ಪ್ರಖರ ವಿಚಾರಧಾರೆ ಸವಿಯಬಹುದಾಗಿದೆ. ಇಂತಹ ವಯೋವೃದ್ಧ, ಜ್ಞಾನವೃದ್ಧ, ಸತ್ಯನಿಷ್ಠ ಲೇಖಕರ ಈ ಪುಸ್ತಕವನ್ನು ಜಿಜ್ಞಾಸುಗಳು ಓದಲೇಬೇಕು. ಈ ಪುಸ್ತಕದ ಮುನ್ನುಡಿಯನ್ನು ಮಾತ್ರ ಯಥಾವತ್ತಾಗಿ ಇಲ್ಲಿ ಓದುಗರ ಗಮನಕ್ಕಾಗಿ ಕೊಟ್ಟಿರುವೆ. ಇದನ್ನು ಪಂಡಿತರು ೧೯೬೪ರಲ್ಲಿ ಬರೆದದ್ದಾದರೂ ಇಂದಿಗೂ ಪ್ರಸ್ತುತವಿದೆ, ಅರ್ಥವಿದೆ. [ಪುಸ್ತಕ ದೊರೆಯುವ ಸ್ಥಳ: ಆರ್ಯಸಮಾಜ, ಶ್ರದ್ಧಾನಂದ ಭವನ, ವಿಶ್ವೇಶ್ವಪುರಂ, ಬೆಂಗಳೂರು.] ಮುನ್ನುಡಿಯಲ್ಲೇ ವ್ಯಾಪಕ ವಿಷಯಗಳಿದ್ದು, ಪುಸ್ತಕದಲ್ಲಿ ಮತ್ತೂ ಹೆಚ್ಚಿನ ಮನನೀಯ ವಿಚಾರಗಳಿವೆ. ಚರ್ಚೆಯನ್ನು ಪುನಃ ಪ್ರಾರಂಭಿಸುವ ಪ್ರಯತ್ನ ಇದಲ್ಲವೆಂಬುದನ್ನು ನಮ್ರಪೂರ್ವಕ ತಿಳಿಸಬಯಸುತ್ತೇನೆ. ಈಗ ಚಂದನ ದೂರದರ್ಶನದಲ್ಲಿ ಹೊಸಬೆಳಕು ಶೀರ್ಷಿಕೆಯಲ್ಲಿ ವೇದಗಳ ಕುರಿತು ಚಿಂತನಾ ಕಾರ್ಯಕ್ರಮ ನಡೆಸಿಕೊಡುತ್ತಿರುವ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರು ಪಂ. ಸುಧಾಕರ ಚತುರ್ವೇದಿಯವರ ಶಿಷ್ಯರಾಗಿದ್ದಾರೆ. ನನಗೆ ತಿಳಿದ ಸಂಗತಿಯನ್ನು ತಮ್ಮೊಡನೆ ಹಂಚಿಕೊಳ್ಳುವ ಪ್ರಯತ್ನ ಮಾತ್ರವಿದು. ವಾಚಕರೂ ಸಹ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಾಗೂ ಹೊಸ ವಿಷಯಗಳಿದ್ದಲ್ಲಿ ತಿಳಿಸಬಹುದಾಗಿದೆ. ಪ್ರಾಸಂಗಿಕವಾಗಿ ಒಂದು ಉವಾಚ:
ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||
-ಕ.ವೆಂ.ನಾಗರಾಜ್.
*************************************
ಪಂ. ಸುಧಾಕರ ಚತುರ್ವೇದಿಗಳೊಂದಿಗೆ
**********
ಪಂಡಿತ ಸುಧಾಕರ ಚತುರ್ವೇದಿಯವರ . . . .
. . . . ಕಾಮನೆ
ಜಗದೀಶ್ವರ ಜೀವಮಾತ್ರರಿಗೆ ಅಸಂಖ್ಯ ವರದಾನ ಮಾಡಿದ್ದಾನೆ. ಮಾನವನಿಗೆ ಆ ದಯಾಮಯನಿಂದ ಬೇರಾವ ಜೀವರಿಗೂ ಸಿಕ್ಕದಿರುವ ಒಂದು ಅನುಪಮ ಹಾಗೂ ಅದ್ಭುತ ವರ ಸಿಕ್ಕಿದೆ. ಸತ್ಯವನ್ನು ಅಸತ್ಯದಿಂದ ಬೇರೆ ಮಾಡಬಲ್ಲ ವಿವೇಕಯುಕ್ತವಾದ ಮಸ್ತಿಷ್ಕವೇ ಆ ಅನುಪಮವಾದ, ಅದ್ಭುತವಾದ ಭಗವದ್ದತ್ತ ವರ. ಈ ಅಸದೃಶ ವರವನ್ನು ಪಡೆದೂ ಸಹ, 'ಶಾಸ್ತ್ರಾದ್ರೂಢಿರ್ಬಲೀಯಸೀ' - ಎಂಬ ಸಂಪ್ರದಾಯ ಶರಣರ ಮನೋಭಾವಕ್ಕೆ ಬಲಿಬಿದ್ದು, ಸತ್ಯಾಸತ್ಯವಿವೇಚನೆ ಮಾಡದೆ, ಈ ಅಮೂಲ್ಯವಾದ ನರಜನ್ಮವನ್ನು ವ್ಯರ್ಥಪಡಿಸಿಕೊಳ್ಳುವುದು ಮಹಾಪಾತಕವೇ ಎಂದೆನ್ನಬಹುದು. ಏಕೆಂದರೆ, ಸತ್ಯಾಸತ್ಯವಿವೇಚನೆ ಮಾಡದೆ, ಸತ್ಯದರ್ಶನವಾಗದು; ಸತ್ಯದರ್ಶನವಾಗದೆ, ಸತ್ಯಸ್ವರೂಪನಾದ ಭಗವಂತನ ಸಾಕ್ಷಾತ್ಕಾರವೂ ಆಗದು. ಭಗವತ್ಸಾಕ್ಷಾತ್ಕಾರಕ್ಕೊದಗದ ಜನ್ಮ, ಮಾನವಜನ್ಮವಾದರೇನು? ದಾನವಜನ್ಮವಾದರೇನು?
ಅನೇಕ ದಶಕಗಳಿಂದ ಶ್ರೀಮದ್ವಾಲ್ಮೀಕಿ ರಾಮಾಯಣವನ್ನು ವಿವೇಚನಾತ್ಮಕ ದೃಷ್ಟಿಯಿಂದ ಅದೆಷ್ಟೋ ಸಾರಿ ಓದುತ್ತಾ ಬಂದಿದ್ದೇನೆ. ಮೊದಮೊದಲು ಪರಂಪರಾಗತ ನಂಬಿಕೆಯಂತೆ ಶ್ರೀರಾಮನು ದೇವರು ಎಂದರಿತೇ ಓದಿದೆ. ಆ ನಂಬಿಕೆಯಿದ್ದಾಗಲೂ ಒಂದಾದಮೇಲೊಂದರಂತೆ ನಾನಾ ಸಂದೇಹಗಳು ಏಳುತ್ತಲೇ ಇದ್ದವು. ನಾನು ಇಪ್ಪತ್ತು ವರ್ಷದವನಾದಾಗ ಗುರುಮುಖವಾಗಿ ವೇದಾಂತದರ್ಶನ ಓದಿದೆ. ಆನಂದಮಯೋsಭ್ಯಾಸಾತ್ - ಪರಬ್ರಹ್ಮ, ಶಾಸ್ತ್ರಗಳಲ್ಲಿ ಬಾರಿ ಬಾರಿ ಆನಂದಮಯವೆಂದು ಹೇಳಲ್ಪಟ್ಟಿದೆ - ಎಂಬ ಸೂತ್ರದೊಂದಿಗೆ, ಸೀತಾಪಹರಣವಾದಾಗ ರಾಮನಿಗುಂಟಾದ ಶೋಚನೀಯಾವಸ್ಥೆಯನ್ನು ಮೇಳವಿಸಿ ನೋಡಿದೆ. ರಾಮ ಆನಂದಮಯನಾದ ಭಗವಂತನಂತೂ ಆಗಿರಲಾರ ಎನಿಸಿತು. ಶ್ರೀರಾಮ ಲೀಲಾಮಾನುಷ ವಿಗ್ರಹ; ಮಾನವರಂತೆಯೇ ಎಲ್ಲ ನಾಟಕಗಳನ್ನೂ ಆಡಿದ್ದಾನೆ - ಸ್ವತಃ ಭಗವಂತನಾಗಿದ್ದರೂ - ಎಂಬ ಸಮಾಧಾನವಾಕ್ಯ ನನ್ನ ಅಂತಃಕರಣಕ್ಕೆ ಶಾಂತಿ ಕೊಡಲಿಲ್ಲ. ಭಗವಂತ ನಾಟಕೀಯ ಪುರುಷ ಎಂದು ನನ್ನ ಹೃದಯ ಒಪ್ಪಿಕೊಳ್ಳಲಿಲ್ಲ. ೨೦ನೆಯ ವರ್ಷದಿಂದಲೇ ಆರಂಭಿಸಿ ನಿರಂತರವಾಗಿ ವೇದಗಳನ್ನೂ, ಪ್ರಾಮಾಣಿಕ ಉಪನಿಷತ್ತುಗಳನ್ನೂ, ಷಡ್ದರ್ಶನಗಳನ್ನೂ ಮಹಾವಿದ್ವಾಂಸರಾದ ಗುರುಜನರ ಚರಣಾರವಿಂದಗಳಲ್ಲಿ ಕುಳಿತು ಅಧ್ಯಯನ ಮಾಡಿದ ಮೇಲೆ, ಭಗವದವತಾರವಾದ ಕೇವಲ ಟೊಳ್ಳು ಕಲ್ಪನೆ; ಶ್ರೀರಾಮ, ಶ್ರೀಕೃಷ್ಣ ಮೊದಲಾದವರೆಲ್ಲಾ ಮಹಾಮಾನವರೇ ಹೊರತು ದೇವರ ಅವತಾರಗಳಲ್ಲ - ಎಂಬಂಶ ನನ್ನ ಹೃದಯವನ್ನು ಸ್ಪರ್ಷಿಸಿತು.
ವಿವೇವನಾತ್ಮಕ ದೃಷ್ಟಿಯಿಂದ ಶ್ರೀಮದ್ವಾಲ್ಮೀಕಿರಾಮಾಯಣವನ್ನು ಅವಲೋಕಿಸಿದಲ್ಲಿ, ಈ ತಥ್ಯ ಯಾರಿಗಾದರೂ ಅತಿ ಸ್ಪಷ್ಟವಾಗಿಯೇ ಗೊತ್ತಾಗುವುದು. ಈ ಪುಸ್ತಕದಲ್ಲಿ ಶ್ರೀರಾಮನೊಬ್ಬ ಮರ್ಯಾದಾ ಪುರುಷೋತ್ತಮ; ಮಹಾಮಾನವ ಎಂಬುದನ್ನು ಸಪ್ರಮಾಣವಾಗಿ ಪ್ರತಿಪಾದಿಸಲು ಯತ್ನಿಸುತ್ತಿದ್ದೇನೆ. ಈ ಸಂದರ್ಭದಲ್ಲಿ, ಇಂದು ಸಂಸ್ಕೃತದಲ್ಲಿ ಶ್ರೀಮದ್ವಾಲ್ಮೀಕಿ ರಾಮಾಯಣವೆಂದು ಪ್ರಸಿದ್ಧವಾಗಿರುವ ಗ್ರಂಥವೂ ಕೂಡ ಶ್ರೀಮದ್ವಾಲ್ಮೀಕಿಗಳು ಎಷ್ಟು ರಚಿಸಿದ್ದರೋ, ಅಷ್ಟೇ ಇಲ್ಲ; ಹೇಗೆ ರಚಿಸಿದ್ದರೋ ಹಾಗೆಯೇ ಇಲ್ಲ. ಅದರಲ್ಲಿ ಕಾಲಕಾಲಕ್ಕೆ ಅದೆಷ್ಟೋ ಪ್ರಕ್ಷೇಪಗಳಾಗುತ್ತಾ ಬಂದಿದೆ - ಎಂಬಂಶವನ್ನು ಪಾಠಕರ ಗಮನಕ್ಕೆ ತರುವುದು ಅವಶ್ಯಕವೆಂದು ತೋರುತ್ತದೆ. ಬೌದ್ಧಯುಗದಲ್ಲಿಯಂತೂ ಮೂಲ ರಾಮಾಯಣದ ಕಾಯಕಲ್ಪವೇ ಆಗಿಹೋದಂತೆ ಕಾಣುತ್ತದೆ. ರಾಮಾಯಣದಲ್ಲಿನ - ಯಥಾ ಹಿ ಚೋರಃ ಸ ತಥಾ ಹಿ ಬುದ್ಧಸ್ತಥಾಗತಂ ನಾಸ್ತಕಮತ್ರ ವಿದ್ಧಿ| ತಸ್ಮಾದ್ಧಿ ಯಃ ಶಂಕೃತಮಃ ಪ್ರಜಾನಾಂ ನ ನಾಸ್ತಿಕೇನಾಭಿಮುಖೋ ಬುಧಃ ಸ್ಯಾತ್|| (ಅಯೋಧ್ಯಾ.೧೦೯.೩೪.) ಚೋರನು ಹೇಗೋ ಹಾಗೆಯೇ ತಥಾಗತನನ್ನು ಈ ಲೋಕದಲ್ಲಿ ನಾಸ್ತಿಕನೆಂದೇ ತಿಳಿ. ಜನರಿಗೆ ಅತ್ಯಂತ ಸಂದೇಹಾಸ್ಪದನು ನಾಸ್ತಿಕ. ಎಂದಿಗೂ ವಿದ್ವಾಂಸನು ನಾಸ್ತಿಕನಿಗೆ ಎದುರಾಗಬಾರದು - ಎಂಬ ಶ್ಲೋಕವನ್ನೋದಿದ ಮೇಲೆ, ಬೌದ್ಧಮತದ ಆಕ್ರಮಣದಿಂದ ವೈದಿಕರನ್ನು ರಕ್ಷಿಸುವ ಸಲುವಾಗಿ, ರಾಮಾಯಣದಲ್ಲಿ ಬೌದ್ಧಮತಖಂಡನದ ಶ್ಲೋಕಗಳು ಸೇರಿಸಲ್ಪಟ್ಟಿದೆಯೆಂಬುದರಲ್ಲಿ ಯಾರಿಗೂ ಸಂದೇಹ ಉಳಿಯಲಾರದು. ಅನ್ಯಥಾ, ರಾಮನ ಯುಗವಾವುದು?! ವಾಲ್ಮೀಕಿಗಳ ಕಾಲವಾವುದು?! ಬುದ್ಧನ ಕಾಲವಾವುದು?!
ವಸ್ತುತಃ ಸುಪ್ರಸಿದ್ಧ ಸುಧಾರಕನಾದ ಗೌತಮಬುದ್ಧನು ಸ್ವತಃ ದೇವರಾಗಿ ಕುಳಿತು, ಬೌದ್ಧ ದೇಗುಲಗಳಲ್ಲಿ ಷೋಡಶೋಪಚಾರಸಹಿತ ವಿಜೃಂಭಣೆಯ ಪೂಜೆ ಪಡೆಯಲಾರಂಭಿಸಿ ಜನಸಾಧಾರಣರನ್ನು ತನ್ನ ಕಡೆ ಆಕರ್ಷಿಸಹತ್ತಿದಾಗ, ಶ್ರೀರಾಮ, ಶ್ರೀಕೃಷ್ಣಾದಿಗಳನ್ನೂ ದೇವರ ಮಟ್ಟಕ್ಕೋ, ಪಟ್ಟಕ್ಕೋ ಏರಿಸಿ ದೇವಾಲಯಗಳನ್ನು ಸ್ಥಾಪಿಸಿ, ಅತ್ತ ಸರಿಯುವವರನ್ನು ಇತ್ತಲೇ ಒತ್ತಿ ಹಿಡಿಯುವ ಪ್ರಯತ್ನಗಳು ನಡೆದವು. ಶ್ರೀರಾಮ, ವಿಷ್ಣುವಿನ ಅರ್ಧಾಂಶಸಂಭೂತ, ದೇವದಾನವ ಗಂಧರ್ವಾದಿಗಳಿಂದ ಸಾಯದಿದ್ದ ರಾವಣನನ್ನು ಬಲಿಹಾಕಲು ವಿಷ್ಣುವೇ ಮಾನವರೂಪದಲ್ಲಿ ದರೆಗಿಳಿದು ಬಂದ ಎಂಬ ಕೇವಲ ಕಲ್ಪನೆಗಳಿಂದ ಕೂಡಿದ ಶ್ಲೋಕಗಳನ್ನು ಅಲ್ಲಲ್ಲಿ ತೂರಿಸಲಾಯಿತು. ಬೇರಾವುದೋ ಲೋಕದಲ್ಲಿ ಸೇರಿದ ದೇವತೆಗಳ ಸಭೆ, ನಾರಾಯಣನಿಗೆ ಶರಣಾಗತರಾಗುವುದು, ರಾವಣನಿಗೆ ಬ್ರಹ್ಮನಿಂದ ವರಪ್ರಾಪ್ತಿ - ಇತ್ಯಾದಿ ಬುದ್ಧಿವಿರುದ್ದವಾದ, ವೇದವಿರುದ್ಧವಾದ ಅಪಸಿದ್ಧಾಂತಗಳನ್ನು ಗ್ರಂಥದಲ್ಲಿ ತುಂಬಲಾಯಿತು. ಬಾಲಕಾಂಡದ ಪ್ರಥಮಸರ್ಗದಲ್ಲಿನ ಕಥಾಸಂಕ್ಷೇಪವೇ ತೃತೀಯ ಅರ್ಗದಲ್ಲಿ ಬೇರೆ ಶಬ್ದಗಳಲ್ಲಿ ಪುನರುಕ್ತವಾಗಿರುವುದು, ಕಾವ್ಯದಲ್ಲಿ ಏನೇನೋ ಸೇರಿಕೆಗಳಾಗಿವೆ ಎಂಬುದನ್ನು ಸೂಚಿಸುತ್ತಲಿದೆ. ಬೌದ್ಧಮತದ ಅಹಿಂಸಾ ಪ್ರಚಾರದಿಂದ ಮಾಂಸಾಹಾರಿಗಳಾದ ಜನರಲ್ಲಿ ಒಂದು ರೀತಿಯ ಕಳವಳ ತೋರಿಬಂತು. ಮಾಂಸಾಹಾರದಲ್ಲಿ ಏನೇನೂ ದೋಷವಿಲ್ಲ, ಶ್ರೀರಾಮಾದಿಗಳೂ ಮಾಂಸಾಹಾರ ಮಾಡುತ್ತಿದ್ದರು - ಎಂದು ಸಾಧಿಸಲನುಕೂಲಿಸುವಂತೆ:
ತೌ ತತ್ರ ಹತ್ವಾ ಚತುರೋ ಮಹಾಮೃಗಾನ್
ವರಾಹಮೃಶ್ಯಂ ಪ್ರಷತಂ ಮಹಾರುರುಮ್|
ಆದಾಯ ಮೇಧ್ಯಂ ತ್ವರಿತಂ ಬುಭುಕ್ಷಿತೌ
ವಾಸಾಯ ಕಾಲೇ ಯಯತುರ್ವನಸ್ಪತಿಮ್|| (ಅಯೋಧ್ಯಾ.೫೨.೧೦೨.)
ಆ ಹಸಿದ ರಾಮಲಕ್ಷ್ಮಣರು ನಾಲ್ಕು ಮಹಾಮೃಗಗಳನ್ನಲ್ಲಿ ಕೊಂದು ತಿನ್ನಲರ್ಹವಾದ ಮಾಂಸವನ್ನುಂಡು, ವಾಸ ಮಾಡಲು ಮರದಡಿಗೆ ನಡೆದರು - ಈ ಬಗೆಯ ಶ್ಲೋಕಗಳನ್ನೂ ತೂರಿಸಿದರು. ಹಾಗೆಯೇ, ವೇದವಿರುದ್ಧವಾದರೂ ವೇದಗಳ ಹೆಸರಿನಲ್ಲಿಯೇ ಪ್ರಚಲಿತವಾಗಿದ್ದು, ಬೌದ್ಧ, ಜೈನಮತೀಯರಿಂದ ಖಂಡಿಸಲ್ಪಡುತ್ತಿದ್ದ ಪಶುಹಿಂಸಾಮಯವಾದ ಯಜ್ಞಗಳನ್ನೂ, ಧರ್ಮಾನುಕೂಲ ಎಂದು ಸಾಧಿಸಲು ದಶರಥನ ಅಶ್ವಮೇಧ ಯಾಗದಲ್ಲಿಯೂ ಕುದುರೆ ಕೊಲ್ಲಲ್ಪಟ್ಟಿತು - ಎಂಬರ್ಥ ಬರುವ ಶ್ಲೋಕಗಳನ್ನು ರಚಿಸಿ ಸೇರಿಸಿದರು. (ನೋಡಿರಿ. ಬಾಲಕಾಂಡ. ೧೪.೩೬.೩೮.)
ಪತತ್ರಿಣಸ್ತಸ್ಯ ವಪಾಮುದ್ಧೃತ್ಯ ನಿಯತೇಂದ್ರಿಯಃ|
ಋತ್ವಿಕ್ ಪರಮಸಂಪನ್ನಃ ಶ್ರಪಯಾಮಾಸ ಶಾಸ್ತ್ರತಃ ||೩೬||
ಹಯಸ್ಯ ಯಾನಿ ಚಾಂಗಾನಿ ತಾನಿ ಸರ್ವಾಣಿ ಭೂಸುರಾಃ||
ಅಗ್ನೌ ಪ್ರಾಸ್ಯಂತಿ ವಿಧಿವತ್ ಸಮಸ್ತಾಃ ಷೋಡಷರ್ತ್ವಿಜಃ ||೩೮||
ಚಾರ್ವಾಕರೂ, ಬೌದ್ಧರೂ ಖಂಡಿಸುತ್ತಿದ್ದ ಮೃತಕಶ್ರಾದ್ಧ ಪದ್ಧತಿಯನ್ನು ಸರಿ ಎಂದು ಸಾಧಿಸಲು, ಶ್ರೀರಾಮನ ಬಾಯಿನಿಂದ ಜಾಬಾಲಿಯಾಡಿದ ನಾಸ್ತಿಕ್ಯ ಸೂಚಕ ವಾಕ್ಯಗಳನ್ನು ಖಂಡನೆ ಮಾಡಿಸಿದರು. (ನೋಡಿ, ಅಯೋಧ್ಯಾ.೧೦೮, ೧೦೯ನೆಯ ಸರ್ಗಗಳು). ಬೌದ್ಧರು ಜಾತಿ-ಕುಲ ನೋಡದೆ ಇಚ್ಛುಕರಾದವರಿಗೆಲ್ಲಾ ಭಿಕ್ಷುದೀಕ್ಷೆ ಕೊಡುತ್ತಿದ್ದರು. ಪರಿಣಾಮತಃ ವೈದಿಕರೆನಿಸಿಕೊಂಡವರಿಂದ ಅವಜ್ಞೆಗೆ ಗುರಿಯಾಗಿದ್ದ ಶೂದ್ರರನೇಕರು ಭಿಕ್ಷುಗಳಾಗಹತ್ತಿದರು. ಜನಸಾಧಾರಣರಲ್ಲಿ ಇಂತಹ ಶೂದ್ರಯತಿಗಳಿಗೆ ಗೌರವ ಸಿಕ್ಕದಿರಲಿ ಎಂಬ ಭಾವನೆಯನ್ನಿಟ್ಟುಕೊಂಡು, ಶಂಬೂಕನೆಂಬ ಶೂದ್ರ ತಪಸ್ಸು ಮಾಡುತ್ತಿದ್ದ, ಆ ತಪ್ಪಿಗಾಗಿ ಶ್ರೀರಾಮ ಅವನನ್ನು ಬಲಿಹಾಕಿದ,
ಭಾಷತಸ್ತಸ್ಯ ಶೂದ್ರಸ್ಯ ಖಡ್ಗಂ ಸುರುಚಿರಪ್ರಭಮ್ |
ನಿಷ್ಕೃಷ್ಯ ಕೋಶಾದ್ವಮಲಂ ಶಿರಶ್ಚಿಚ್ಛೇದ ರಾಘವಃ || (ಉತ್ತರ.೭೬.೪.)
-ಎಂದು ಒಂದು ಕಲ್ಪಿತ ಘಟನೆಯನ್ನು ಸೇರಿಸಿಬಿಟ್ಟರು. ರಾಮಾಯಣದ ಕರ್ತೃಗಳಾದ ವಾಲ್ಮೀಕಿಗಳೂ ಬೇಡರೇ ತಾನೇ? ಆದರೂ ತಮ್ಮ ತಪೋಬಲದಿಂದ ಮಹತ್ವಗಳಿಸಿದ ಆ ವಾಲ್ಮೀಕಿಗಳನ್ನು ಗೌರವಿಸುತ್ತಿದ್ದ ಶ್ರೀರಾಮ, ಶಂಬೂಕನನ್ನು ಕೊಲ್ಲಲು ಸಾಧ್ಯವಿತ್ತೇ?
ಸಂಪೂರ್ಣ ಉತ್ತರಕಾಂಡವೇ ಪ್ರಕ್ಷಿಪ್ತ. ಅದು ವಾಲ್ಮೀಕಿಕೃತವೇ ಅಲ್ಲ. ಆರನೆಯ ಕಾಂಡವಾದ ಯುದ್ಧಕಾಂಡದ ಕೊನೆಯ ಸರ್ಗದಲ್ಲಿ ಶ್ರೀರಾಮನ ಪಟ್ಟಾಭಿಷೇಕ ಮತ್ತು ರಾಮರಾಜ್ಯದ ವರ್ಣನೆಯಾದ ನಂತರ ಈ ಶ್ಲೋಕ ಕಂಡುಬರುತ್ತದೆ:
ಧನ್ಯಂ ಯಶಸ್ಯಮಾಯುಷ್ಯಂ ರಾಜ್ಞಾಂ ಚ ವಿಜಯಾವಹಮ್ |
ಆದಿಕಾವ್ಯಮಿದಂ ತ್ವಾರ್ಷಂ ಪುರಾ ವಾಲ್ಮೀಕಿನಾ ಕೃತಮ್ || (ಯುದ್ಧ.೧೩೧.೧೦೭.)
ಇದು ಹಿಂದೆ ವಾಲ್ಮೀಕಿಗಳಿಂದ ರಚಿತವಾದ, ಧನಪ್ರದವೂ, ಯಶಃಪ್ರದವೂ, ಆಯುಃಪ್ರದವೂ, ರಾಜರಿಗೆ ವಿಜಯಪ್ರದವೂ, ಆರ್ಷವೂ ಆದ ಆದಿಕಾವ್ಯ. ಈ ಶ್ಲೋಕದವರೆಗೆ ವಾಲ್ಮೀಕಿಕೃತಿ - ಎಂಬುದು ಸ್ಪಷ್ಟವೇ ಆಗಿದೆ. ಬಾಲಕಾಂಡದ ನಾಲ್ಕನೆಯ ಸರ್ಗದಲ್ಲಿ ಷಟ್ಕಾಂಡಾನಿ ತಥೋತ್ತರಮ್| (೪.೨) ಆರು ಕಾಂಡಗಳನ್ನೂ, ಉತ್ತರಕಾಂಡವನ್ನೂ ವಾಲ್ಮೀಕಿಗಳು ಹೇಳಿದರು - ಎನ್ನಲಾಗುತ್ತಿರಲಿಲ್ಲವೇ? ಅದರ ಮುಂದಿನ ಶ್ಲೋಕದಲ್ಲೂ ಸಹೋತ್ತರಂ - ಉತ್ತರಕಾಂಡಸಮೇತ ಎಂದು ಕಥನವಿದೆ, ಮತ್ತು ವಾಲ್ಮೀಕಿಗಳು ಹೇಳಿದರು - ಎಂದಿರುವುದರಿಂದ, ಈ ಶ್ಲೋಕ ಬೇರಾರದೋ - ಎಂಬುದು ಸ್ಪಷ್ಟವೇ. ಮತ್ತೆ ಉತ್ತರಕಾಂಡದಲ್ಲಿ:
ಏತಾವದೇತದಾಖ್ಯಾನಂ ಸೋತ್ತರಂ ಬ್ರಹ್ಮಪೂಜಿತಮ್ |
ರಾಮಾಯಣಮಿತಿ ಖ್ಯಾತಂ ಮುಖ್ಯಂ ವಾಲ್ಮೀಕಿನಾ ಕೃತಮ್ || (ಉತ್ತರ.೧೧೧.೧.)
ಇಲ್ಲಿಯವರೆಗಿನದು, ಬ್ರಹ್ಮಪೂಜಿತವಾದ, ಉತ್ತರಕಾಂಡ ಸಹಿತವಾದ, ರಾಮಾಯಣವೆಂದು ಪ್ರಸಿದ್ದವಾದ ಆಖ್ಯಾನ. ಮುಖ್ಯವಾದುದು ವಾಲ್ಮೀಕಿ ರಚಿತ ಎಂಬ ಶ್ಲೋಕ ಕಂಡುಬರುತ್ತದೆ. ಉತ್ತರಕಾಂಡ ಸಹಿತವಾದ ಮತ್ತು ಮುಖ್ಯವಾದುದು ಈ ಉಕ್ತಿಗಳು. ಉತ್ತರಕಾಂಡ, ಆದಿ ರಾಮಾಯಣದ ಅಭಿನ್ನಾಂಗವಲ್ಲ; ಮೊದಲನೆಯ ಆರು ಕಾಂಡಗಳು ಮಾತ್ರ ಮುಖ್ಯ - ವಾಲ್ಮೀಕಿಕೃತ - ಎಂಬ ನಿರ್ಣಯಕ್ಕೇ ಬೆಂಬಲ ಕೊಡುತ್ತಿದೆ. ನಾನೊಂದು ೨೦ ಅಧ್ಯಾಯಗಳ ಗ್ರಂಥ ರಚಿಸಿದ್ದೇನೆ - ಎಂದಿಟ್ಟುಕೊಳ್ಳೋಣ. ಆಗ ೨೦ ಅದ್ಯಾಯಗಳ ಗ್ರಂಥ ಈ ಲೇಖಕರ ರಚನೆ - ಎನ್ನಬೇಕೋ, ೨೦ನೇ ಅಧ್ಯಾಯಸಮೇತವಾದ, ೧೯ ಅಧ್ಯಾಯಗಳ ಗ್ರಂಥ ಈ ಲೇಖಕರ ರಚನೆ ಎನ್ನಬೇಕೋ? ಎರಡನೆಯ ಹೇಳಿಕೆ - ೨೦ ಅಧ್ಯಾಯಗಳ ಕೃತಿಯಲ್ಲಿ, ೧೯ ಅಧ್ಯಾಯ ನನ್ನದು, ಕೊನೆಯದನ್ನು ಬೇರಾರೋ ಸೇರಿಸಿ, ನನ್ನ ತಲೆಗೆ ಸುತ್ತುತ್ತಿದ್ದಾರೆ - ಎಂಬ ಸಂಶಯಕ್ಕೆಡೆ ಕೊಡುವುದಿಲ್ಲವೇ? ವಸ್ತುತಃ ಮೊದಲ ಆರು ಕಾಂಡಗಳ ಭಾಷಾ ವೈಖರಿಯ ಮುಂದೆ ಉತ್ತರಕಾಂಡದ ಭಾಷೆ ಅತಿ ಸಪ್ಪೆಯಾಗಿದೆ. ಉತ್ತರಕಾಂಡ ಮತ್ತು ಅದರಲ್ಲಿ ಹೇಳಿರುವ ವಿಷಯಗಳು ವಾಲ್ಮೀಕಿ ಪ್ರೋಕ್ತವಂತೂ ಅಲ್ಲವೆಂಬುದು ನಿಶ್ಚಯ.
ನಾನು ಇಷ್ಟೆಲ್ಲಾ ಹೇಳಿರುವುದರ ಉದ್ದೇಶ್ಯವಿಷ್ಟೆ. ಯಾರ ಧಾರ್ಮಿಕ ಭಾವನೆಗೂ ಧಕ್ಕೆ ತರುವುದು, ಯಾರ ಮನಸ್ಸನ್ನಾದರೂ ನೋಯಿಸುವುದು ನನ್ನ ಗುರಿಯಲ್ಲ. ಶ್ರೀರಾಮನ ಬಗೆಗೆ ನನ್ನ ಹೃದಯದಲ್ಲಿರುವ ಗೌರವಭಾವನೆ, ಯಾವ ರಾಮಭಕ್ತನ ಹೃದಯದಲ್ಲಿರುವ ಭಾವನೆಗಿಂತಲೂ ಎಳ್ಳಿನ ಕೋಟ್ಯಂಶದಷ್ಟೂ ಕಡಿಮೆಯಲ್ಲ. ರಾಮ ಎಂಬ ಎರಡಕ್ಷರ ಕಿವಿಯ ಮೇಲೆ ಬಿದ್ದೊಡನೆಯೇ ಇಂದೂ ನನ್ನ ತಲೆ ಶ್ರದ್ಧೆಯಿಂದ ಬಾಗಿಹೋಗುತ್ತದೆ. ಆದರೆ ಶ್ರೀರಾಮನನ್ನು ದೇವರೆಂದು ಕರೆದು, ಅತ್ತ ಸರ್ವಶ್ರೇಷ್ಠ-ಸರ್ವಜ್ಯೇಷ್ಠ ಪ್ರಭುವಿನ ನಿಜಸ್ವರೂಪವನ್ನೂ ಮರೆತು, ಅತ್ತ ಆಧ್ಯಾತ್ಮಿಕ ಉತ್ಕರ್ಷ, ಇತ್ತ ಲೌಕಿಕ ಅಭ್ಯುದಯ ಎರಡಕ್ಕೂ ಸೊನ್ನೆ ಸುತ್ತಿಕೊಳ್ಳಲು ಮಾತ್ರ ನಾನು ಸಿದ್ಧನಾಗಿಲ್ಲ. ಸಮಸ್ತ ಪರಂಪರಾಗತ ಪಕ್ಷಪಾತಕ್ಕೂ ಅಂಧವಿಶ್ವಾಸಕ್ಕೂ, ತಿಲಾಂಜಲಿಯಿತ್ತು, ದೇವರ ಜೀವನಚರಿತ್ರೆಯೆಂದಲ್ಲ; ಧರ್ಮಶಾಸ್ತ್ರವೆಂದೂ ಅಲ್ಲ; ಒಬ್ಬ ಮಹಾಪ್ರಗಲ್ಭ, ಕಾವ್ಯಶಾಸ್ತ್ರ ವಿಶಾರದ, ಕವಿಸಾಮ್ರಾಟ್ ಮಹರ್ಷಿ ಪ್ರವರನಿಂದ ರಚಿತವಾದ, ಒಬ್ಬ ಮಹಾಮಾನವ ಆದರ್ಶಮಯ ಜೀವನೇತಿಹಾಸ - ಎಂಬ ಭಾವನೆಯಿಂದ ಎಲ್ಲರೂ ಶ್ರೀಮದ್ರಾಮಾಯಣವನ್ನು ಓದುವಂತಾಗಬೇಕು. ಅದಕ್ಕೆ ಸ್ವಲ್ಪವಾದರೂ ಪ್ರೇರಣೆ ಸಿಕ್ಕಬೇಕು; ಎಲ್ಲರ ಬಾಳಿಗೂ ಬೆಳಕು ಸಿಕ್ಕಬೇಕು ಎನ್ನುವುದೊಂದೇ ಈ ಪುಸ್ತಕ ರಚನೆಯಲ್ಲಿರುವ ನನ್ನ ಉದ್ದೇಶ್ಯ. ಪ್ರಕ್ಷಿಪ್ತ ಭಾಗಗಳನ್ನು ಬಿಟ್ಟರೆ, ಇಂದೂ ಶ್ರೀಮದ್ರಾಮಾಯಣ ಕೇವಲ ಭಾರತೀಯರಿಗಲ್ಲ; ಸಂಪೂರ್ಣ ಮಾನವಜಾತಿಗೆ ಬಾಳಿನ ಕೈಗನ್ನಡಿಯಾಗಿ, ನಡೆನುಡಿಯ ಕೆಡುಕಿಲ್ಲದ ಪಡಿಯಚ್ಚಾಗಿ ಉತ್ಥಾನಪಥದ ಉಜ್ವಲ ಪ್ರದೀಪವಾಗಿ ಸಹಾಯಕವಾಗಬಲ್ಲದು, ಅದು ಹೇಗೆಂಬುದರ ಕಿರುನೋಟವನ್ನೀ ಕೃತಿಯಲ್ಲಿ ಪಾಠಕರು ಕಾಣಬಲ್ಲರು.
ಸಂಪೂರ್ಣ ವಿಶ್ವವಂತಿರಲಿ; ಇಂದು ನೆತ್ತಿಯ ಮೇಲೆ ಚೀಣದಿಂದ, ಅಕ್ಕಪಕ್ಕಗಳಿಂದ ಪಾಕಿಸ್ತಾನದಿಂದ, ಕೆನ್ನೆಯ ಮೆಲೆ ಕಾಶ್ಮೀರದ ಒಬ್ಬ ಪಥಭ್ರಷ್ಟ ನಾಯಕನಿಂದ ಪೆಟ್ಟು ತಿನ್ನುತ್ತಿರುವ, ಅಂಗಾಲುಗಳ ಮೇಲೆ ಇಂಡೋನೇಷಿಯದಿಂದ ಮುಳ್ಳು ಚುಚ್ಚಿಸಿಕೊಳ್ಳುತ್ತಿರುವ, ವಿದೇಶಗಳಿಂದ ಬರುವ ದ್ರವ್ಯವನ್ನು ನೀರಿನಂತೆ ಸುರಿದು ಹಸಿದವರ ಮನ ಒಲಿಸಿಕೊಂಡು ದೇಶದ ಜನರ ಧರ್ಮಕ್ಕೇ ಸಂಚಕಾರ ತರುತ್ತಿರುವ ಪಾದರಿಗಳಿಂದ ಕೊಳ್ಳೆ ಹೊಡೆಸಿಕೊಳ್ಳುತ್ತಿರುವ, ಹಾಸಿಗೆಯಲ್ಲೇ ಸೇರಿಕೊಂಡು ರಕ್ತ ಹೀರುವ ತಿಗಣೆಗಳಂತೆ, ದೇಶದಲ್ಲೇ ಸೇರಿಕೊಂಡು ದೇಶದ ಸತ್ವವನ್ನೇ ಹೀರುತ್ತಿರುವ, ಸದಾ ಮತಭ್ರಾಂತರಾಗಿಯೇ ವರ್ತಿಸುತ್ತಿರುವ ವಿಶೇಷ ಕೃಪಾಪಾತ್ರ ಅಲ್ಪಸಂಖ್ಯಾತರಿಂದ ಜರ್ಜರೀಭೂತವಾಗುತ್ತಿರುವ, ನ್ಯಾಯವಾಗಿ ಸಿಕ್ಕಬೇಕಾದ ಸಾಮಾಜಿಕ ಅಧಿಕಾರಿಗಳು ಸಿಕ್ಕದೆ, ಇನ್ನೂ ಚೀತ್ಕರಿಸುತ್ತಿರುವ ಹಿಂದುಳಿದವರ ಶಾಪದ ಕಾರಣದಿಂದ ತತ್ತರಿಸುತ್ತಿರುವ, ಸ್ವಸುಖಸಾಧನ ಸಂಪತ್ತಿನ ಸುಖನಿದ್ರೆಯಲ್ಲಿ ಗೊರಕೆ ಹೊಡೆಯುತ್ತಿರುವ ರಾಷ್ಟ್ರಭಕ್ತರ ಕರುಣೆಯಿಂದ ಕಂಗೆಡುತ್ತಿರುವ, ದಾರಿದ್ರ್ಯ-ರೋಗ-ಅಜ್ಞಾನ-ಭಯಗಳಿಂದ ಹಾಹಾಕಾರ ಮಾಡುತ್ತಿರುವ ಜನರಿಂದ ಕೂಡಿರುವ ಈ ನಮ್ಮ ಮಾತೃಭೂಮಿಯಾದರೂ ಶ್ರೀರಾಮನತ್ತ ತಿರುಗಿ ನೋಡಿದರೆ, ಈಗಲೂ ಆಶಾಸಂಚಾರವಾದೀತು.
ನಾನು ಇದೇ ಪವಿತ್ರ ಭಾವನೆಯಿಂದ ಪ್ರೇರಿತನಾಗಿ, ಈ ಪುಸ್ತಕವನ್ನು ಬರೆದಿದ್ದೇನೆ. ನಮ್ಮೆಲ್ಲರ ಪರಮಶಾಸ್ತ್ರವಾದ ವೇದ ಹೇಳುತ್ತಲಿದೆ:
ಸುಜ್ಞಾನಂ ಚಿಕಿತುಷೇ ಜನಾಯ ಸಚ್ಚಾಸಚ್ಚ ವಚಸೀ ಪಸ್ಪೃಧಾತೇ |
ತಯೋರ್ಯತ್ ಸತ್ಯಂ ಯತರದೃಜೀಯಸ್ತದಿತ್ ಸೋಮೋsವತಿ ಹಂತ್ಯಾಸತ್|| (ಋಕ್.೭.೧೦೪.೧೨.)
[ಚಿಕಿತುಷೇ ಜನಾಯ] ತಿಳಿಯಬಯಸುವ ಮಾನವನಿಗೆ [ಸುವಿಜ್ಞಾನಮ್] ಒಳ್ಳೆಯ ವಿಜ್ಞಾನವಿದೆ. [ಸತ್ ಚ ಅಸತ್ ಚ] ಸತ್ಯವಾದ ಮತ್ತು ಅಸತ್ಯವಾದ [ವಚಸೀ] ಮಾತುಗಳು [ಪಸ್ಪೃಧಾತೇ] ಪರಸ್ಪರ ಹೋರಾಡುತ್ತಲೇ ಇರುತ್ತವೆ. [ತಯೋಃ] ಅವೆರಡರಲ್ಲಿ [ಯತ್ ಸತ್ಯಮ್] ಯಾವುದು ಸತ್ಯವೋ, ಅದನ್ನು [ಯತರತ್ ಋಜೀಯಃ] ಯಾವುದು ನೇರವಾಗಿದೆಯೋ [ತತ್ ಇತ್] ಅದನ್ನೇ [ಸೋಮಃ] ಉದ್ವೇಗರಹಿತನಾದ, ಶಾಂತಿಗುಣಯುಕ್ತನಾದ ವಿವೇಚಕನು [ಅವತಿ] ಪಾಲಿಸುತ್ತಾನೆ. [ಅಸತ್] ಅಸತ್ಯವನ್ನು [ಅಹಂತಿ] ನಿರಂತರ ಸದೆಬಡಿಯುತ್ತಾನೆ. ಈ ಸತ್ಯ ತತ್ತ್ವಗಳನ್ನು ಅರಿತು, ನಮ್ಮ ಬಾಳನ್ನು ಹಸನಾಗಿ ಮಾಡೋಣ.
ದೇವಾಸುರ ಸಂಗ್ರಾಮ ಎಂದೋ, ಯಾವುದೋ ಎರಡು ಗುಂಪುಗಳ ನಡುವೆ ನಡೆದು ಅಡಗಿಹೋಯಿತೆಂದು ತಿಳಿದರೆ ತಪ್ಪಾದೀತು. ಸತ್ಯಂ ವೈ ದೇವಾಃ| ಸತ್ಯವೇ ದೇವಜನ; ಅನೃತತಮಸುರಾಃ| - ಅಸತ್ಯವೇ ಅಸುರಗುಣ. ಈ ಸತ್ಯಾಸತ್ಯಗಳ ಸಂಘರ್ಷ ಮಾನವ ಜಾತಿಯ ಉದ್ಭವವಾದ ಕ್ಷಣದಲ್ಲೇ ಆರಂಭವಾಯಿತು. ಇಂದೂ ನಡೆಯುತ್ತಿದೆ; ಮಾನವಜಾತಿ ಇರುವವರೆಗೂ ನಡೆಯುತ್ತಲೇ ಹೋಗುತ್ತದೆ. ಹೊರಗೆ ಸಮಾಜದಲ್ಲೆಂತೋ ಒಳಗೆ ವ್ಯಕ್ತಿ ವ್ಯಕ್ತಿಯ ಹೃದಯದಲ್ಲಿಯೂ ಅಂತೆಯೇ ಈ ಸತ್ಯಾಸತ್ಯಗಳ ತಿಕ್ಕಾಟ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ಮತ್ತು ಮಾನವನ ಸರ್ವಶ್ರೇಷ್ಠರೂಪ ಅವನ ಸೋಮರೂಪವೇ. ಸೋಮಃ ಸುನೋತೇಃ| ಸಾರ ಹಿಂಡಿ ತೆಗೆಯುವವನೇ ಸೋಮ - ಎಂದರೆ, ವಿವೇಚಕನೇ, ವಿಚಾರಶೀಲನೇ ಸೋಮ. ಸೋಮ - ಎಂಬ ಶಬ್ದಕ್ಕೆ ಶಾಂತ, ಉದ್ರೇಕ ರಹಿತ, ಅನುದ್ವೇಗ ಎಂಬರ್ಥವೂ ಇದೆ. ಈ ರೀತಿ ಉರಿದು ಬೀಳದೆ, ತನಗೆ ಪ್ರತಿಕೂಲವಾದುದು ಕಿವಿಗೆ ಬಿದ್ದಾಗ ಉದ್ರೇಕಗೊಳ್ಳದೆ, ಪಕ್ಷಪಾತಕೆ, ದುರಾಗ್ರಹಕ್ಕೆ ಸಿಲುಕದೆ, ಶಾಂತಿಯಿಂದ ವಿವೇಚನೆ ಮಾಡಿ ಸತ್ಯವನ್ನು ರಕ್ಷಿಸಿ, ಅಸತ್ಯವನ್ನು ಬಲಿ ಹಾಕುವ ಮಾನವನೇ ಸೋಮ. ದೇವಾಸುರ ಸಂಗ್ರಾಮದಲ್ಲಿ, ಸದಸತ್ಸಂಘರ್ಷದಲ್ಲಿ, ದೇವಪಕ್ಷ ವಹಿಸಿ, ಸತ್ಪಕ್ಷಕ್ಕೆ ಸೇರಿ, ಸತ್ಯ ರಕ್ಷಣೆಗಾಗಿ ಹೋರಾಡುವ ಸೋಮರಾಗಬೇಕು. ನಮ್ಮವರೆಲ್ಲಾ ಇದೇ ನಿರೀಕ್ಷಣೆಯಿಂದ ಈ ಪಂಕ್ತಿಗಳನ್ನು ಬರೆದಿದ್ದೇನೆ. ಬನ್ನಿರಿ, ಪಾಠಕ ಬಂಧುಗಳೇ! ನಾವೆಲ್ಲಾ ಈ ಅದ್ಭುತ ದೇವಸೇನೆಯನ್ನು ಸೇರೋಣ:
ಇಂದ್ರ ಏಷಾಂ ನೇತಾ ಬ್ರಹ್ಮಸ್ಪತಿರ್ದಕ್ಷಿಣಾ
ಯಜ್ಞಃ ಪುರ ಏತು ಸೋಮಃ|
ದೇವಸೇನಾನಾಮ್ ಅಭಿಭಂಜತೀನಾಂ
ಜಯಂತೀನಾಂ ಮರುತೋ ಯಂತು ಮಧ್ಯೇ|| (ಅಥರ್ವ.೧೯.೧೩.೯.)
[ಏಷಾಂ ನೇತಾ] ಈ ಮಾನವರ ನಾಯಕನು, [ಬ್ರಹಸ್ಪತಿಃ] ವಿಶ್ವಬ್ರಹ್ಮಾಂಡದ ಪತಿಯೂ, ಸರ್ವಜ್ಞನೂ ಆದ, [ಇಂದ್ರ] ಸರ್ವಶಕ್ತಿಮಾನ್ ಪ್ರಭು, [ದಕ್ಷಿಣಾ} ಇವರಿಗೆ ಸಿಕ್ಕುವ ದಕ್ಷಿಣೆ [ಯಜ್ಞಃ] ತ್ಯಾಗ, [ಸೋಮಃ] ಶಾಂತ ವಿವೇಚಕನು, [ಪುರಃ ಏತು] ಮುಂದೆ ನಡೆಯಲಿ. [ಮರುತಃ] ಸಂಯಮಿಗಳಾದ ಮಾನವರು [ಅಭಿಭಂಜತೀನಾಮ್] ಅಸತ್ಯವನ್ನು ತುಂಡರಿಸಿ ಚೆಲ್ಲುತ್ತಾ [ಜಯಂತೀನಾಮ್] ಜಯಗಳಿಸುತ್ತಾ ಸಾಗುತ್ತಿರುವ [ದೇವಸೇನಾನಾಂ ಮಧ್ಯೇ] ದೇವಸೇನೆಗಳ ನಡುವೆ, [ಯಂತು] ನಡೆಯಲಿ.
ಸತ್ಯಾಸತ್ಯ ವಿವೇಚನೆ ಇಂದು ವ್ಯಕ್ತಿ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಗೆ ಎಷ್ಟು ಆವಶ್ಯಕವೋ, ಸಾಮಾಜಿಕ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಲ್ಯಾಣಕ್ಕೂ ಅಷ್ಟೇ ಆವಶ್ಯಕ. ಸತ್ಯರಕ್ಷಣೆಗಾಗಿ ನಾವೆಲ್ಲಾ ಉದಾರಮನಸ್ಕರಾಗಿ, ಪಕ್ಷಪಾತರಹಿತರಾಗಿ, ಸ್ವತಃ ದೇವಜನರಾಗಿ ದೇವ ಸೈನ್ಯದ ಸೈನಿಕರಾಗೋಣ. ಕೇಳಿರಿ:
ಇಂದ್ರಸ್ಯ ವೃಷ್ಣೋ ವರುಣಸ್ಯ ರಾಜ್ಞ ಆದಿತ್ಯಾನಾಂ ಮರುತಾಂ ಶರ್ಧ ಉಗ್ರಮ್|
ಮಹಾಮನಸಾಂ ಭುವನಚ್ಯವಾನಾಂ ಘೋಷೋ ದೇವಾನಾಂ ಜಯತಾಮುದಸ್ಥಾತ್|| (ಅಥರ್ವ.೧೯.೧೩.೧೦.)
[ವೃಷ್ಣಃ] ಸುಖವರ್ಷಕನೂ, ಧರ್ಮರೂಪನೂ [ವರುಣಸ್ಯ] ದುಃಖನಿವಾರಕನೂ, ವರಣೀಯನೂ [ರಾಜ್ಯಃ] ಜಗತ್ಸಾಮ್ರಾಟನೂ ಆದ, [ಇಂದ್ರಸ್ಯ] ಸರ್ವಶಕ್ತಿಮಾನ್ ಪ್ರಭುವಿನ [ಆದಿತ್ಯಾನಾಮ್] ಅಖಂಡ ಚಾರಿತ್ರರಾದ, ಪ್ರಾಮಾಣಿಕರಾದ [ಮರುತಾಮ್] ಸಂಯಮೀ ಮನವರ [ಶರ್ಧಃ] ಪ್ರತಿರಕ್ಷಣಾಸಾಮರ್ಥ್ಯ [ಉಗ್ರಮ್] ಉಗ್ರವಾಗಿರುತ್ತದೆ. [ಮಹಾಮನಸಾಮ್] ಮಹಾಮನಸ್ಕರಾದ [ಭುವನಚ್ಯವಾನಾಮ್] ಮಹಾನ್ ಕ್ರಾಂತಿಕಾರರಾದ [ಜಯತಾಮ್] ಗೆಲ್ಲುತ್ತಲೇ ಸಾಗುವ [ದೇವಾನಮ್] ದೇವಜನರ [ಘೋಷಃ] ಜಯಘೋಷವು [ಉತ ಅಸ್ಥಾತ್] ಆಗಸಕ್ಕೇರುತ್ತದೆ.
ಸ್ವತಃ ದೇವಜನರಾಗಿ, ದೇವ ಸೈನ್ಯದ ಸೈನಿಕರಾದ ಮಾನವರು ಎಂತಹ ಮಹಿಮಾ ಸಂಪನ್ನರಾಗುವರೆಂಬುದನ್ನು ಸ್ವಯಂ ಋಗ್ವೇದ ಸ್ಪಷ್ಟವಾದ ಮಾತಿನಲ್ಲಿ ಹೇಳುತ್ತಿದೆ:
ಋತಸ್ಯ ಗೋಪಾ ನ ದಭಾಯ ಸುಕ್ರತುಸ್ತ್ರೀ ಷ ಪವಿತ್ರಾ ಹೃದ್ಯಂತರಾ ದಧೇ|
ವಿದ್ವಾನ್ ತ್ಸ ವಿಶ್ವಾ ಭುವನಾಭಿ ಪಶ್ಯತ್ಯವಾಜುಷ್ಟಾನ್ ವಿಧ್ಯತಿ ಕರ್ತೇ ಆವ್ರತಾನ್|| (ಋಕ್.೯.೭೩.೮.)
[ಋತಸ್ಯ ಗೋಪಾ] ಋತದ, ಈಶ್ವರೀಯ ವಿಧಾನದ ಧರ್ಮದ ರಕ್ಷಕನು [ನ ದಭಾಯ] ಎಂದಿಗೂ ತುಳಿಯಲ್ಪಡಲಿಕ್ಕಿಲ್ಲ. [ಸ ಸುಕ್ರತುಃ] ಆ ಉತ್ತಮ ವಿಚಾರಶೀಲನೂ, ಆಚರಣವಂತನೂ ಆದ ಮಾನವನು [ಹೃದಿ ಅಂತಃ] ತನ್ನ ಹೃದಯದಲ್ಲಿ [ಸ್ತ್ರೀ ಪವಿತ್ರಾ] ಮೂರು ಪವಿತ್ರ ತತ್ತ್ವಗಳನ್ನು ಜ್ಞಾನ-ಕರ್ಮ-ಉಪಾಸನೆಗಳನ್ನು [ಆದಧೇ] ಸದಾ ಧರಿಸಿರುತ್ತಾನೆ. [ಸ ವಿದ್ವಾನ್] ಆ ಜ್ಞಾನಿಯಾದ ಮಾನವನು [ವಿಶ್ವಾಭುವನಾ ಅಭಿಪಶ್ಯತಿ] ಸಮಸ್ತ ಲೋಕಗಳನ್ನೂ ಎಲ್ಲಡೆಯಿಂದಲೂ ಯಥಾರ್ಥ ರೂಪದಲ್ಲಿ ನೋಡುತ್ತಾನೆ. [ಅಜುಷ್ಟಾನ್ ಅವ್ರತಾನ್] ಅಪ್ರಿಯರಾದ ವ್ರತರಹಿತರನ್ನು [ಕರ್ತೇ ಅವ ವಿಧ್ಯತಿ] ಪತನಕೂಪದಲ್ಲಿ ಕೆಳಗೆ ಬಿದ್ದವರನ್ನು ಕೂಡ ಉತ್ತಮ ಶಾಸನಕ್ಕೆ ಗುರಿಪಡಿಸುತ್ತಾನೆ.
ಶ್ರೀರಾಮನ ಮುಂದಿದ್ದ ಆದರ್ಶವಿದೇ. ಆ ಮಹಾಮಾನವ ಭಗವಂತನನ್ನೇ ನಾಯಕನನ್ನಾಗಿ ಆರಿಸಿಕೊಂಡು, ಮಹಾಮನಸ್ಕನಾಗಿ, ಅದ್ಭುತ ಕ್ರಾಂತಿಕಾರಿಯಾಗಿ, ಅಸಚ್ಛಕ್ತಿಗಳೊಂದಿಗೆ ನಿರಂತರ ಹೋರಾಡಿದನು. ಕೊನೆಗೆ ಜಯಗಳಿಸಿದನು. ಆ ಪುರುಷನ ದಿವ್ಯ ಜೀವನದ ವೈಖರಿಯನ್ನು ಈ ಸಣ್ಣ ಪುಸ್ತಕದಲ್ಲಿ ವಿವರಿಸಲು ಯತ್ನಿಸಿದ್ದೇನೆ. ವಿಶ್ಲೇಷಣಾತ್ಮಕವೂ, ವಿಚಾರಪ್ರಚೋದಕವೂ ಆದ ಈ ರಚನೆ ಕೇವಲ ಸತ್ಯಾಸತ್ಯವಿವೇಚನೆಗಾಗಿ ಪಾಠಕರ ಕರಕಮಲಗಳಲ್ಲಿ ಸಮರ್ಪಿಸಲ್ಪಟ್ಟಿದೆ. ಪರಂಪರಾಗತ ನಂಬಿಕೆಗಳನ್ನೂ, ಸಾಂಪ್ರದಾಯಿಕ ಮನೋಭಾವವನ್ನೂ ಬದಿಗೊತ್ತುವುದು ಅಷ್ಟು ಸುಲಭವಲ್ಲ; ಅದಕ್ಕೆ ಉಕ್ಕಿನಂತಹ ಆತ್ಮಬಲ ಬೇಕು - ಎಂಬುದನ್ನು ನಾನು ಬಲ್ಲೆ. ಈ ಹಾಳೆಗಳನ್ನು ತಿರುವಿಹಕುವುದರಿಂದ ಪಾಠಕರ ಮನಸ್ಸಿನಲ್ಲಿ ಈವರೆಗೆ ಉದಿಸದಿದ್ದ ಪ್ರಶ್ನೆಗಳು ಉದ್ಭವಿಸತೊಡಗಿದರೆ, ನನ್ನ ಈ ಪರಿಶ್ರಮ ಸಾರ್ಥಕವಾಯಿತೆಂದೇ ನಾನು ತಿಳಿಯುತ್ತೇನೆ.
ದಯಾಮಯನಾದ ದೇವದೇವನು ತನ್ನ ಒಬ್ಬ ನೆಚ್ಚಿನ ಮಗ ಮಹಾಮಾನವ ಶ್ರೀರಾಮನ ಪದ ಚಿಹ್ನೆಯಲ್ಲಿ ನಡೆಯಲು ಬೇಕಾದ ಮನೋಬಲವನ್ನು ನಮ್ಮೆಲ್ಲರಿಗೂ ಕರುಣಿಸಲಿ.
ಶ್ರೀರಾಮನ ಒಬ್ಬ ಅನುಯಾಯಿ
-ಸುಧಾಕರ ಚತುರ್ವೇದಿ.
************************
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ