ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಜುಲೈ 29, 2013

ವೇದೋಕ್ತ ಜೀವನ ಪಥ: ಚತುರ್ವಿಧ ಪುರುಷಾರ್ಥಗಳು: ೨. ಅರ್ಥ

     ದ್ವಿತೀಯ ಪುರುಷಾರ್ಥ ಅರ್ಥ. ಭೌತಿಕ ಆವಶ್ಯಕತೆಗಳನ್ನು ಪೂರೈಸಿಕೊಂಡು, ಸುಖ-ಶಾಂತಿಪೂರ್ವಕ ಜೀವಿಸಲು ಮತ್ತು ಪರರಿಗೆ ಸೇವೆ ಸಲ್ಲಿಸಲು ಅರ್ಥಸಂಪಾದನೆ ಕೇವಲ ಆವಶ್ಯಕವಲ್ಲ, ಅನಿವಾರ್ಯವೇ ಆಗಿದೆ. ವೇದಗಳು ದಾರಿದ್ರ್ಯವನ್ನು ಒಂದು ಅಮೂಲ್ಯ ವಸ್ತುವೆಂದು ಗ್ರಹಿಸುವುದಿಲ್ಲ. ಬಡವನು, ಇಚ್ಛೆಯಿಲ್ಲದಿದ್ದರೂ ಅನೇಕ ಪಾಪಗಳನ್ನು ಮಾಡುತ್ತಾನೆ. ಅರಾಯೀ ಕಾಣೇ ವಿಕಟೇ ಗಿರಿಂ ಗಚ್ಛ ಸದಾನ್ವೇ || (ಋಕ್.೧೦.೧೫೫.೧.) - [ಸದಾನ್ವೇ] ಸದಾ ಪೀಡೆಗಳನ್ನು ಹುಡುಕುತ್ತಿರುವ [ವಿಕಟೇ] ವಿಡಂಬನಕಾರಿಣಿಯಾದ [ಅರಾಯಿ] ದರಿದ್ರವೇ, [ಗಿರಿಂ ಗಚ್ಛ] (ಏನೂ ಬೆಳೆಯದ) ಪರ್ವತಕ್ಕೆ ಹೋಗು - ಎನ್ನುತ್ತಿದೆ. ವಯಂ ಸ್ಯಾಮ ಪತಯೋ ರಯೀಣಾಮ್ || (ಯಜು.೨೩.೬೫.) - [ಪ್ರಜಾಪತೇ] ಪ್ರಜೆಗಳ ಸ್ವಾಮಿಯೇ, [ವಯಮ್] ನಾವು [ರಯೀಣಾಂ ಪತಯಃ ಸ್ಯಾಮ] ಸಂಪತ್ತಿನ ಸ್ವಾಮಿಗಳಾಗೋಣ. ಈ ರೀತಿ ಪ್ರಾರ್ಥನೆ ಮಾಡುವುದನ್ನು ಯಜುರ್ವೇದ ಕಲಿಸುತ್ತದೆ. ಅಥರ್ವವೇದವಂತೂ ಪ್ರತಿಯೊಬ್ಬನಿಗೂ ಈ ಆದೇಶ ಕೊಡುತ್ತಲಿದೆ:-
ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ | 
ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ ||  (ಅಥರ್ವ.೩.೨೪.೫.)
     [ಶತಹಸ್ತ] ನೂರು ಕೈಗಳುಳ್ಳವನೇ, [ಸಂ ಆಹರ] ಚೆನ್ನಾಗಿ ಸಂಪಾದನೆ ಮಾಡು. [ಸಹಸ್ರಹಸ್ತ] ಸಾವಿರ ಕೈಗಳುಳ್ಳವನೇ, [ಸಂ ಕಿರ] ಚೆನ್ನಾಗಿ ಹಂಚು. [ಇಹ] ಈ ಲೋಕದಲ್ಲಿ [ಕೃತಸ್ಯ ಕಾರ್ಯಸ್ಯ ಸ್ಫಾತಿಮ್] ನೀನು ಮಾಡಿದ ಕಾರ್ಯದ ವಿಸ್ತಾರವನ್ನು [ಸಂ ಆವಹ] ಈ ರೀತಿ ಸಾಧಿಸಿಕೋ.
     ರಾಶಿಗೂಡಿದ ಹಣ ಅನರ್ಥಕಾರಿ. ಹಾಗೆಂದು, ಸಂಪಾದಿಸುವುದೇ ಬೇಡ ಎನ್ನುವುದು ಮಹಾ ಪ್ರಮಾದ. ದುಡಿಯಬೇಕು. ನೂರು ರೀತಿಯಲ್ಲಿ ಸಂಪಾದಿಸಬೇಕು. ಮತ್ತೆ, ತಾನು ಉಪಭುಂಜಿಸುವುದು ಮಾತ್ರವಲ್ಲದೇ, ಶಾರೀರಿಕ, ಮಾನಸಿಕ ವ್ಯಾಧಿಗಳಿಂದ ನರಳುತ್ತಿರುವ ದುಃಖೀ ಜೀವರಿಗಾಗಿ ಸಾವಿರ ಬಗೆಯಿಂದ ಉಪಯೋಗಿಸಲೂಬೇಕು.
     ಸಂಪಾದಿಸಬೇಕು, ಆದರೆ, ಧರ್ಮ ಸದಾ ಗಮನದಲ್ಲಿರಬೇಕು. ಅನ್ಯಾಯಮಾರ್ಗಕ್ಕೆ, ಅಸತ್ಯವ್ಯವಹಾರಗಳಿಗೆ, ಪರಿವಂಚನೆಗೆ, ಸುಲಭವಾಗಿ ಹಣ ರಾಶಿಹಾಕುವ ಪ್ರಲೋಭನಕ್ಕೆ ಎಂದೂ ಸಿಕ್ಕಿಕೊಳ್ಳಬಾರದು. ಋಗ್ವೇದ ಹೇಳುತ್ತದೆ:-
ಅಕ್ಷೈರ್ಮಾ ದೀವ್ಯಃ ಕೃಷಿಮಿತ್ ಕೃಷಸ್ಯ ವಿತ್ತೇ ರಮಸ್ವ ಬಹು ಮನ್ಯಮಾನಃ |
ತತ್ರ ಗಾವಃ ಕಿತವ ತತ್ರ ಜಾಯಾ ತನ್ಮೇ ವಿ ಚಷ್ಟೇ ಸವಿತಾಯಮರ್ಯಃ || (ಋಕ್.೧೦.೩೪.೧೩.)
     [ಅಕ್ಷೈಃ ಮಾ ದೀವ್ಯಃ] ದಾಳಗಳಿಂದ ಜೂಜಾಡಬೇಡ. [ಕೃಷಿಮಿತ್ ಕೃಷಸ್ವ] ಕೃಷಿಯನ್ನೇ ಮಾಡು, ಕಷ್ಟಪಟ್ಟು ದುಡಿ. [ಬಹುಮನ್ಯಮಾನಃ] ನಿಜವಾದ ದುಡಿಮೆಯಿಂದ ಲಭಿಸುದುದೇ ಬಹಳ ಎಂದರಿತು, [ವಿತ್ತೇ ರಮಸ್ಯ] ಆ ಹಣದಲ್ಲಿ ಸಂತುಷ್ಟನಾಗಿರು. [ಕಿತವ] ಓ ಜೂಜುಕೋರ, [ತತ್ರ ಗಾವಃ] ಕಷ್ಟದ ದುಡಿಮೆಯಲ್ಲೇ ಗೋಸಂಪತ್ತಿದೆ. [ತತ್ರ ಜಾಯಾ] ಅದರಲ್ಲೇ ದಾಂಪತ್ಯಸುಖವೂ ಇದೆ. [ಅಯಂ ಅರ್ಯಃ ಸವಿತಾ] ಈ ಸ್ವಾಮಿಯಾದ ಪ್ರೇರಕನು, [ತತ್ ಮೇ ವಿಚಷ್ಟೇ] ಅದನ್ನೇ ನನಗೆ ಹೇಳುತ್ತಿದ್ದಾನೆ. 
     'ಅಕ್ಷ' ಎಂದರೆ ದಾಳ ಎಂಬುದನ್ನು ಉಪಲಕ್ಷಣ ಮಾತ್ರವೆಂದು ಭಾವಿಸಬೇಕು. ಕುದುರೆ ಜೂಜು, ಲಾಟರಿ, ಕಾಳಸಂತೆ, ಲಾಭಕೋರತನ, ಕಳ್ಳದಾಸ್ತಾನು ಇವೆಲ್ಲಾ ಪಗಡೆಜೂಜಿನ ಗುಂಪಿಗೇ ಸೇರಿದ ಪಾಪವೃತ್ತಿಗಳು ಎಂಬುದನ್ನು ಎಂದಿಗೂ ಮರೆಯಬಾರದು. ಹೇಗೆ ಸಂಪಾದಿಸಬೇಕು ಎಂಬ ಪ್ರಶ್ನೆಗೆ ಋಗ್ವೇದದ ಉತ್ತರವಿದು:-
ಪರಿ ಚಿನ್ಮರ್ತೋ ದ್ರವಿಣಂ ಮಮನ್ಯಾದೃತಸ್ಯ ಪಥಾ ನಮಸಾ ವಿವಾಸೇತ್|
ಉತ ಸ್ವೇನ ಕ್ರತುನಾ ಸಂ ವದೇಶ ಶ್ರೇಯಾಂಸಂ ದಕ್ಷಂ ಮನಸಾ ಜಗೃಭ್ಯಾತ್ || (ಋಕ್.೧೦.೩೧.೨.)
     [ಮರ್ತಃ} ಮಾನವನು, [ದ್ರವಿಣಮ್] ಹಣವು [ಪರಿಚಿತ್] ಎಲ್ಲೆಡೆಯೂ ಇದೆ ಎಂದರಿಯಬೇಕು. [ಋತಸ್ಯ ಪಥಾ] ನ್ಯಾಯದ ಹಾಗೂ ಸತ್ಯದ ಮಾರ್ಗದಿಂದ [ನಮಸಾ] ನಮ್ರತೆಯಿಂದ [ವಿವಾಸೇತ್] ನಡೆದುಹೋಗಬೇಕು. [ಉತ] ಮತ್ತು [ಸ್ವೇನ ಕ್ರತುನಾ] ತನ್ನ ಸ್ವಂತ ಸದ್ವಿಚಾರ ಸದಾಚಾರಗಳಿಂದ [ಸಂ ವದೇತ್] ಮಾತನಾಡಬೇಕು. [ಮನಸಾ] ಮನಸ್ಸಿನಿಂದ [ಶ್ರೇಯಾಂಸಂ] ಶ್ರೇಯಸ್ಕರವಾದ ಶಕ್ತಿಯನ್ನು [ಜಗೃಭ್ಯಾತ್] ಗ್ರಹಿಸಬೇಕು. ಈ ವೇದೋಕ್ತ ಮಾರ್ಗದಲ್ಲಿ ಅರ್ಥಸಂಚಯ ಮಾಡುವುದೇ ದ್ವಿತೀಯ ಪುರುಷಾರ್ಥ.
*******************
-ಪಂ. ಸುಧಾಕರ ಚತುರ್ವೇದಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ