ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಜುಲೈ 18, 2013

ವೇದೋಕ್ತ ಜೀವನ ಪಥ: ಸಾಮಾಜಿಕ ಜೀವನ - ೨

     ಇನ್ನೊಂದು ಕಡೆ ಅದೇ ವೇದ ಹೇಳುತ್ತದೆ:-
ಸಹೃದಯಂ ಸಾಂಮನಸ್ಯಮವಿದ್ವೇಷಂ ಕೃಣೋಮಿ ವಃ |
ಅನ್ಯೋ ಅನ್ಯಮಭಿ ಹರ್ಯತ ವತ್ಸಂ ಜಾತಮಿವಾಘ್ನ್ಯಾ || (ಅಥರ್ವ.೩.೩೦.೧.)
     [ವಃ] ನಿಮ್ಮೆಲ್ಲರಿಗೂ, [ಸಹೃದಯಮ್] ಸಮಾನ ಭಾವನೆಯಿಂದ ತುಡಿಯುವ ಹೃದಯವನ್ನೂ, [ಸಾಮ್ಮನಸ್ಯಮ್] ಒಂದೇ ಮಾರ್ಗದಲ್ಲಿ ನಡೆಯುವ ಮನಸ್ಸನ್ನೂ, [ಅವಿದ್ವೇಷಮ್] ವಿದ್ವೇಷರಹಿತವಾದ ಒಲವನ್ನೂ, [ಕೃಣೋಮಿ] ನೀಡುತ್ತೇನೆ. [ಅಘ್ನ್ಯಾ] ಎಂದಿಗೂ ಕೊಲ್ಲಲ್ಪಡಬಾರದ ಗೋವು, [ಜಾತಂ ವತ್ಸಂ ಇವ] ನವಜಾತ ಕರುವನ್ನು ಪ್ರೀತಿಸುವಂತೆ, [ಅನ್ಯೋ ಅನ್ಯಂ ಅಭಿಹರ್ಯತ] ಒಬ್ಬರನ್ನೊಬ್ಬರು ಪ್ರೀತಿಸಿರಿ. 
     ಇದು ನಿಜ. ವೇದಗಳ ಪ್ರಕಾಶನವಾಗಿರುವುದು ಮಾನವ ಮಾತ್ರರನ್ನು ಒಂದುಗೂಡಿಸುವುದಕ್ಕಾಗಿ. ಒಬ್ಬರ ಮೇಲೆ ಒಬ್ಬರನ್ನು ಎತ್ತಿ ಕಟ್ಟುವುದಕ್ಕಲ್ಲ. ವೇದಜ್ಞಾನದ ಜ್ಯೋತಿ ಬೆಳಗುತ್ತಿರುವೆಡೆ, ಈರ್ಷ್ಯಾಸೂಯೆಗಳ, ರಾಗದ್ವೇಷಗಳ ಅಂಧಕಾರ ಸುಳಿಯುವಂತಿಲ್ಲ. ಮಾನವರೆಲ್ಲರ ಹೃದಯದಲ್ಲಿಯೂ ಪರಸ್ಪರ ವಿಶ್ವಾಸದ ಭಾವನೆಯನ್ನು ಒಡಮೂಡಿಸುವುದಕ್ಕಾಗಿ ವೇದ ಹೇಳುತ್ತದೆ:- 
ಯೇನ ದೇವಾ ನ ವಿಯಂತಿ ನೋ ಚ ವಿದ್ವಿಷತೇ ಮಿಥಃ |
ತತ್ಕೃಣ್ಮೋ ಬ್ರಹ್ಮ ವೋ ಗೃಹೇ ಸಂಜ್ಞಾನಂ ಪುರುಷೇಭ್ಯಃ || (ಅಥರ್ವ.೩.೩೦.೪.)
     [ಯೇನ] ಯಾವುದರಿಂದ [ದೇವಾಃ ನ ವಿಯಂತಿ] ವಿದ್ವಜ್ಜನರು ಬೇರೆ ಬೇರೆಯಾಗಿ ಒಬ್ಬರಿಂದೊಬ್ಬರು ದೂರ ಸರಿಯುವುದಿಲ್ಲವೋ, [ಚ] ಮತ್ತು ಪರಸ್ಪರ, [ನ ವಿದ್ವಷತೇ] ದ್ವೇಷಿಸುವುದಿಲ್ಲವೋ. [ತತ್ ಬ್ರಹ್ಮ] ಆ ವೇದಜ್ಞಾನವನ್ನು, [ವಃ ಗೃಹೇ] ನಿಮ್ಮ ಗೃಹಗಳಲ್ಲಿ [ಕೃಣ್ಮಃ] ಮಾಡುತ್ತೇವೆ. 
     ವಸ್ತುತಃ ಒಬ್ಬರನ್ನೊಬ್ಬರು ಅರಿತುಕೊಳ್ಳುವುದೇ ಪರಸ್ಪರ ಪ್ರೇಮದ ಆಧಾರಶಿಲೆ. ವೇದಗಳು ಆ ಆಧಾರಶಿಲೆಯನ್ನು ನಿಃಸಂದೇಹವಾದ ಶೈಲಿಯಲ್ಲಿ ಪ್ರತಿಪಾದಿಸುತ್ತವೆ. ಕೇಳಿರಿ:-
ಸಂ ಜಾನೀಧಂ ಸಂ ಪೃಚ್ಯಧ್ವಂ ಸಂ ವೋ ಮನಾಂಸಿ ಜಾನತಾಮ್ |
ದೇವಾ ಭಾಗಂ ಯಥಾ ಪೂರ್ವೇ ಸಂಜಾನಾನಾ ಉಪಾಸತೇ || (ಅಥರ್ವ.೬.೬೪.೧.)
     [ಯಥಾ] ಹೇಗೆ ನಡೆದು, [ಪೂರ್ವೇ ದೇವಾಃ] ಅಗ್ರಗಾಮಿಗಳಾದ ವಿದ್ವಾಂಸರು, [ಸಂಜಾನಾನಾಃ] ಒಬ್ಬರನ್ನೊಬ್ಬರು ಅರಿತುಕೊಳ್ಳುತ್ತಾ, [ಭಾಗಂ ಉಪಾಸತೇ] ತಮ್ಮ ಭಾಗದ ಕರ್ತವ್ಯವನ್ನು ನಿರ್ವಹಿಸುತ್ತಾರೋ, ಅಥವಾ, ತಮ್ಮ ಭಾಗ್ಯವನ್ನು ಕಂಡುಕೊಳ್ಳುತ್ತಾರೋ, ಹಾಗೂ ಭಗವಂತನನ್ನು ಉಪಾಸಿಸುತ್ತಾರೋ ಹಾಗೆಯೇ, [ಸಂ ಜಾನೀಧ್ವಮ್] ನೀವೂ ಒಬ್ಬರನ್ನೊಬ್ಬರು ಅರಿತುಕೊಳ್ಳಿರಿ. [ಸಂ ಪೃಚ್ಛಧ್ವಮ್] ಒಬ್ಬರ ಸಂಪರ್ಕದಲ್ಲಿ ಒಬ್ಬರು ಬನ್ನಿರಿ. [ಜಾನತಾಂ ವಃ] ಈ ರೀತಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ನಿಮ್ಮ, [ಮನಾಂಸಿ] ಮನಸ್ಸುಗಳನ್ನು [ಸಮ್] ಒಂದಕ್ಕೊಂದು ಹೊಂದಿಸಿಕೊಂಡು ನಡೆಯಿರಿ.
     ಹೀಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಒಬ್ಬರ ಮೇಲೊಬ್ಬರಿಗೆ ಪರಸ್ಪರ ಪ್ರೇಮಭಾವ ಬೆಳೆದುಬರಬೇಕಾದರೆ, ಎಲ್ಲರೂ ಸಮಾನರು ಎಂಬ ಧೃಢವಾದ ತತ್ತ್ವ ಹೃದ್ಗತವಾಗಬೇಕು. ವರ್ಣವ್ಯವಸ್ಥಾಪ್ರಕರಣದಲ್ಲಿ ವೇದೋಕ್ತ ಸಮಾನತಾ ಸಿದ್ಧಾಂತವನ್ನು ಸಾಕಷ್ಟು ಚರ್ಚಿಸಿದ್ದೇವೆ. ಮಾನವಸಮಾಜದಲ್ಲಿ ಎಲ್ಲರ ಅಧಿಕಾರಗಳೂ ಸಮಾನವೇ. ಜಾತಿಯ ಪ್ರಶ್ನೆಯಂತೂ ವೇದಗಳಲ್ಲಿ ಇಲ್ಲವೇ ಇಲ್ಲ ಎಂದ ಮೇಲೆ ಸ್ಪೃಶ್ಯ-ಅಸ್ಪೃಶ್ಯ. ಹಿಂದೂ, ಅಹಿಂದೂ ಎಂಬ ನರನಿರ್ಮಿತ ಭೇದವೂ ಇಲ್ಲ. ಆದುದರಿಂದ ಅಥರ್ವವೇದ ತೆರೆನುಡಿಗಳಲ್ಲಿ ಮುಚ್ಚುಮರೆಯಿಲ್ಲದೆ ಸಂಶಯಕ್ಕೆಡೆಯಿಲ್ಲದಂತೆ ಈ ರೀತಿ ಘೋಷಿಸುತ್ತಿದೆ:-
ಸಮಾನೀ ಪ್ರಪಾ ಸಹ ವೋsನ್ನಭಾಗಃ ಸಮಾನೇ ಯೋಕ್ತ್ರೇ ಸಹ ವೋ ಯುನಜ್ಮಿ |
ಸಮ್ಯಂಚೋsಗ್ನಿಂ ಸಪರ್ಯತಾರಾ ನಾಭಿಮಿವಾಭಿತಃ || (ಅಥರ್ವ.೩.೩೦.೬.)
     ಮಾನವರೇ, [ವಃ] ನಿಮ್ಮ, [ಪ್ರಪಾ] ಜಲಾಶಯ, [ಸಮಾನೀ] ಒಂದೇ ಆಗಿರಲಿ. [ಅನ್ನಭಾಗಃ] ಆಹಾರ ಭಾಗವೂ [ಸಹ] ಒಂದಿಗೇ ಆಗಲಿ. [ವಃ] ನಿಮ್ಮೆಲ್ಲರನ್ನೂ [ಸಮಾನೇ ಯೋಕ್ತ್ರೇ] ಸಮಾನವಾದ ದರ್ಮಬಂಧನದಲ್ಲಿ [ಸಹ] ಜೊತೆಯಾಗಿ [ಯುನಜ್ಮಿ] ಸೇರಿಸುತ್ತೇನೆ. [ಆರಾಃ] ಚಕ್ರದ ಅರೆಕಾಲುಗಳು [ನಾಭಿಮ್] ಚಕ್ರದ ಗುಂಬವನ್ನು [ಅಭಿತಃ ಇವ] ಸುತ್ತಿನಿಂದ ಸ್ಪರ್ಶಿಸುವಂತೆ [ಸಮ್ಯಂಚಃ] ನೀವೆಲ್ಲರೂ ಒಂದಾಗಿ [ಅಗ್ನಿಮ್] ತೇಜೋಮಯನಾದ ಪ್ರಭುವನ್ನು [ಸಪರ್ಯತ] ಆರಾಧಿಸಿರಿ.
**********
-ಪಂ.ಸುಧಾಕರ ಚತುರ್ವೇದಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ