ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಜುಲೈ 22, 2013

ವೇದೋಕ್ತ ಜೀವನ ಪಥ: ಸಾಮಾಜಿಕ ಜೀವನ - ೩

     ಇಂತಹವೇ ಪವಿತ್ರ ಸಮಾನತಾ ಭಾವನೆಯನ್ನು ಋಗ್ವೇದ ಅತೀ ಸ್ಫುಟವಾಗಿ ಸಾರುತ್ತಿದೆ:-
ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹ ಚಿತ್ತಮೇಷಾಂ |
ಸಮಾನಂ ಮಂತ್ರಮಭಿ ಮಂತ್ರಯೇ ವಃ ಸಮಾನೇನ ವೋ ಹವಿಷಾ ಜುಹೋಮಿ || (ಋಕ್.೧೦.೧೯೧.೩.)
     [ಏಷಾಮ್] ಈ ನಿಮ್ಮ [ಮಂತ್ರ ಸಮಾನಃ] ಆಲೋಚನೆ ಸಮಾನವಾಗಿರಲಿ. [ಸಮಿತಿಃ ಸಮಾನೀ] ಸಮಿತಿಯೂ ಸಮಾನವಾಗಿರಲಿ. [ಮನಃ ಸಮಾನಮ್] ಮನಸ್ಸು ಸಮಾನವಾಗಿರಲಿ. [ಚಿತ್ತಂ ಸಹ] ಚೈತನ್ಯ ಒಂದಾಗಿ ಹರಿಯಲಿ. [ವಃ] ನಿಮ್ಮೆಲ್ಲರಿಗೂ, [ಸಮಾನಂ ಮಂತ್ರಮ್] ಸಮಾನವಾದ ಮಂತ್ರವನ್ನೇ ಉಪದೇಶಿಸುತ್ತೇನೆ. [ವಃ] ನಿಮ್ಮನ್ನು [ಸಮಾನೇನ ಹವಿಷಾ] ಸಮಾನವಾದ ಭೋಗ್ಯವಸ್ತುಗಳೊಂದಿಗೆ [ಜುಹೋಮಿ] ಸಮ್ಮಿಳಿತಗೊಳಿಸುತ್ತೇನೆ.
     ಹೀಗೆ, ವೇದೋಕ್ತ ಸಮಾಜ ಸಂಪೂರ್ಣ ಸಮಾನತ್ವದ ಆಧಾರದ ಮೇಲೆ ನಿಹಿತವಾಗಿದೆ. ವೈಷಮ್ಯಕ್ಕೆ, ಮೇಲು-ಕೀಳೆಂಬ ಭಾವನೆಗೆ ಈ ಸಮಾಜದಲ್ಲಿ ಎಳ್ಳಿನಷ್ಟೂ ಎಡೆಯಿಲ್ಲ. ಆದರೆ, ಜೀವಿತ, ಜಾಗೃತ ಸಮಾಜದ ಭುಜದ ಮೇಲೆ ಮತ್ತೊಂದು ಗುರುತರವಾದ ಉತ್ತರದಾಯಿತ್ವ ಬಿದ್ದಿರುತ್ತದೆ. ಅನೇಕ ಕಾರಣಗಳಿಂದ, ಕೆಲವು ಮಾನವಸಮೂಹಗಳು ವಿದ್ಯೆ, ಸಂಪತ್ತು, ಶಕ್ತಿ, ಸೌಜನ್ಯ ಮೊದಲಾದವುಗಳಲ್ಲಿ ಹಿಂದೆ ಬಿದ್ದಿರಬಹುದು. ಅಂತಹ ಹಿಂದುಳಿದ ಜನರನ್ನು ಹಿಂದೆಯೇ ಬಿಟ್ಟು ಮುಂದುವರೆದವರು ಮಾತ್ರ ಇನ್ನೂ ಮುಂದೆ ಹೋಗುವುದನ್ನು ವೇದಗಳು ಸಹಿಸಲಾರವು. ದೀನ, ಹೀನ, ರುಗ್ಣ, ದರಿದ್ರರಿಗೆ ಗೃಹಸ್ಥರು ಯಾವ ರೀತಿ ಸಹಾಯ ನೀಡಬೇಕೆಂಬುದನ್ನು ಬಲಿವೈಶ್ವದೇವ ಪ್ರಕರಣದಲ್ಲಿ ಚರ್ಚಿಸಿದ್ದೇವೆ. 
     ಇಲ್ಲಿ ಈ ಕೆಳಕಂಡ ಮಂತ್ರವನ್ನು ಕುರಿತು ಆಲೋಚಿಸೋಣ.
ನಕಿರ್ದೇವಾ ಮಿನೀಮಸಿ ನಕಿರಾ ಯೋಪಯಾಮಸಿ ಮಂತ್ರಶ್ರುತ್ಯಂ ಚರಾಮಸಿ |
ಪಕ್ಷೇಭಿರಪಿಕಕ್ಷೇಭಿರತ್ರಾಭಿ ಸಂ ರಭಾಮಹೇ || (ಋಕ್.೧೦.೧೩೪.೭.)
     [ದೇವಾಃ] ಶುಭ ಗುಣ ಭೂಷಿತರೂ, ಜಾಗರೂಕರೂ ಆದ ನಾವು, [ನಕಿಃ ಮಿನೀಮಸಿ] ಹಿಂಸೆಯನ್ನೂ ಮಾಡುವುದಿಲ್ಲ. [ನಕಿಃ ಅಯೋಪಯಾಮಸಿ] ಜನರನ್ನು ಬೇರೆ ಬೇರೆಯಾಗಿ ಸೀಳುವುದೂ ಇಲ್ಲ. [ಮಂತ್ರಶ್ರುತ್ಯಮ್] ಮಂತ್ರಗಳಲ್ಲಿ ನಾವು ಆಲಿಸಿರುವ ಜ್ಞಾನದಂತೆ, [ಚರಾಮಸಿ] ನಡೆದುಕೊಳ್ಳುತ್ತೇವೆ. [ಅತ್ರ] ಇಲ್ಲಿ, [ಕಕ್ಷೇಭಿಃ ಅಪಿ] ತುಚ್ಛ ಸ್ಥಿತಿಯಲ್ಲಿ ಇರುವ [ಪಕ್ಷೇಭಿಃ ಅಪಿ] ಪಕ್ಷಗಳೊಂದಿಗೂ ಕೂಡ [ಸಮ್] ಸೇರಿ [ಅಭಿ ರಭಾಮಹೇ] ಎಲ್ಲೆಡೆಯಿಂದಲೂ ಕಾರ್ಯೋನ್ಮುಖರಾಗುತ್ತೇವೆ. 
     ಸಾಮಾಜಿಕ ನೇತೃತ್ವಗಳ ಸಂಕಲ್ಪವನ್ನು ಋಗ್ವೇದ ಹೀಗೆ ಬಣ್ಣಿಸಿದೆ. ಆದುದರಿಂದ, ಸಮಾಜ ಯಾರನ್ನೂ ಹಿಂದುಳಿಯಲು ಬಿಡುವಂತಿಲ್ಲ. ಕೊನೆಗೆ, ಜನಹಿತಘಾತಕವಾದ ವೃತ್ತಿಗಳಲ್ಲಿ ನಿರತರಾಗಿರುವ ಜನರನ್ನೂ ಸಹ ಮುಂದುವರೆಸಿಯೇ ಸಮಾಜ ತನ್ನ ಗೌರವವನ್ನು ಕಾಪಾಡಿಕೊಳ್ಳಬಲ್ಲದು. ಅದಕ್ಕಾಗಿಯೇ ಅಥರ್ವವೇದ ಹೇಳುತ್ತಲಿದೆ:-
ಸಂ ವೋ ಮನಾಂಸಿ ಸಂ ವ್ರತಾ ಸಮಾಕೂತೀರ್ನಮಾಮಸಿ |
ಅಮೀ ಯೇ ವಿವ್ರತಾ ಸ್ಥನ ತಾನ್ವಃ ಸಂ ನಮಯಾಮಸಿ || (ಅಥರ್ವ.೩.೮.೫.)
     [ವಃ ಮನಾಂಸಿ] ನಿಮ್ಮ ಮನಸ್ಸುಗಳು, [ಸಮ್] ಒಂದಾಗಿರಲಿ. [ವ್ರತಾ] ವ್ರತಗಳೂ, [ಸಮ್] ಸಮಾನವಾಗಿರಲಿ. [ಆಕೂತಿಃ] ನಿಮ್ಮ ನುಡಿಗಳು, [ಸಮ್] ಸಮಾನವಾಗಿರಲಿ. [ನಮಾಮಸಿ] ನಾವು ವಿನೀತರಾಗಿರುತ್ತೇವೆ. [ವಃ] ನಿಮ್ಮ ನಡುವೆ [ಯೇ ಅಮೀ] ಯಾವ ಈ ಜನರು [ವಿವ್ರತಾ ಸ್ಥನ] ವಿಪರೀತ ವ್ರತರಾಗಿ ವಿರುದ್ಧ ಸಂಕಲ್ಪದವರಾಗಿದ್ದಾರೋ, [ತಾನ್] ಅವರನ್ನು [ಸಮ್] ಒಳ್ಳೆಯ ರೀತಿಯಿಂದಲೇ [ಸಂ ನಮಯಾಮಸಿ] ವಿನೀತರನ್ನಾಗಿ ಮಾಡುತ್ತೇವೆ.
     ಪವಿತ್ರ ವೇದಗಳಲ್ಲಿ ಇಂತಹ ಭವ್ಯಮಂತ್ರಗಳು ಬೇಕಾದಷ್ಟು ತುಂಬಿವೆ. ವೈಯಕ್ತಿಕ, ಪಾರಿವಾರಿಕ, ಸಾಮಾಜಿಕ, ರಾಜನೈತಿಕ, ಯಾವುದೇ ಕ್ಷೇತ್ರಕ್ಕೆ ಬೇಕಾದರೂ ಅತ್ಯಂತ ಉನ್ನತತಮ ಆದರ್ಶವನ್ನು ಒದಗಿಸುವ ಸಾರ್ವಭೌಮ ಹಾಗೂ ಸಾರ್ವಕಾಲಿಕ ಶಾಸ್ತ್ರಗಳು ಭಗವದುಕ್ತವಾದ ಈ ವೇದಗಳು. ಜಿಜ್ಞಾಸುಗಳಾಗಿ - ಪೂರ್ವಾಗ್ರಹದೂಷಿತ ದೃಷ್ಟಿಯಿಂದಲ್ಲ - ವೇದಾಧ್ಯಯನ ಮಾಡಿ, ಅವುಗಳ ಆದೇಶದಂತೆ ನಡೆದಲ್ಲಿ, ಒಂದು ಜಾತಿಯಲ್ಲ, ಒಂದು ಭಾಷೆಯಲ್ಲ, ಸಂಪೂರ್ಣ ಮಾನವಸಮಾಜವೇ ಎಲ್ಲ ದೃಷ್ಟಿಗಳಿಂದಲೂ ಪೂರ್ಣಪ್ರಗತಿಯನ್ನು ಸಾಧಿಸಬಲ್ಲದು. ವೇದಾನುಯಾಯಿಗಳಾದ ಯಾರೂ ಹಿಂದುಳಿಯುವ ಪ್ರಶ್ನೆಯೇ ಇಲ್ಲ. 'ಸಂ ಅಜತಿ ಇತಿ ಸಮಾಜಃ' - ಒಂದುಗೂಡಿ ಮುಂದುವರೆಯುವುದೇ ಸಮಾಜ. ಹಾಗಲ್ಲದೇ, ಹಿಂದುಳಿದವರನ್ನು ಹಿಂದೆಯೇ ಬಿಟ್ಟು, ಕೆಲವರು ಮಾತ್ರ ಮುಂದುವರೆಯಲು ಅವಕಾಶ ಕೊಡುವ ಸಮಾಜ ಸಮಾಜವೇ ಅಲ್ಲ. ಅದನ್ನು 'ದುಃ+ಅಜ = ದುರಾಜ' ಎನ್ನಬೇಕಾದೀತು. ಬನ್ನಿ, ಕೊನೆಗೊಂದು ಸ್ಫೂರ್ತಿದಾಯಕ ಸಂದೇಶವನ್ನಾಲಿಸಿ, ಈ ಸಮಾಜ ಪ್ರಕರಣವನ್ನು ಸಮಾಪ್ತಗೊಳಿಸೋಣ.
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ |
ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || (ಅಥರ್ವ.೬.೬೪.೩.)
     [ಯಥಾ ವಃ ಸು ಸಹ ಅಸತಿ] ನಿಮ್ಮೆಲ್ಲರ ಕಲ್ಯಾಣವೂ ಒಟ್ಟಿಗೇ ಆಗುವಂತೆ, [ವಃ ಆಕೂತಿಃ] ನಿಮ್ಮ ಆಲೋಚನೆ, [ಸಮಾನೀ] ಸಮಾನವಾಗಿರಲಿ. [ವಃ ಹೃದಯಾನಿ] ನಿಮ್ಮ ಹೃದಯಗಳು [ಸಮಾನಾ] ಸಮಾನವಾಗಿರಲಿ. [ವಃ ಮನಃ] ನಿಮ್ಮ ಮನಸ್ಸು, [ಸಮಾನಂ ಅಸ್ತು] ಸಮಾನವಾಗಿರಲಿ.
*************
-ಪಂ. ಸುಧಾಕರ ಚತುರ್ವೇದಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ