ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಜುಲೈ 15, 2013

ವೇದೋಕ್ತ ಜೀವನ ಪಥ: ಸಾಮಾಜಿಕ ಜೀವನ - ೧

     ವೇದಗಳಲ್ಲಿ ಸಮಸ್ತ ಸಂಘಟನ ನಿಯಮಗಳೂ ಇವೆ. ಆಧ್ಯಾತ್ಮಿಕ ಉತ್ಕರ್ಷವನ್ನು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಪ್ರಯತ್ನದಿಂದಲೇ ಗಳಿಸಿಕೊಳ್ಳಬೇಕೆಂಬುದು ಸತ್ಯವಾದರೂ, ಉತ್ತಮ ಆದರ್ಶಗಳನ್ನಿಟ್ಟುಕೊಂಡು ನಡೆಯುವ ಸಮಾಜವೂ ಮಾನವನ ಉನ್ನತಿಗೆ ಸಾಧಕವಾಗಬಲ್ಲದು. ಸಮಾಜದ ರಕ್ಷಣೆಯಿಲ್ಲದೆ ಜೀವಿಸುವ ವ್ಯಕ್ತಿಯ ದೃಷ್ಟಿಕೋನ, ಅತ್ಯಂತ ಸಂಕುಚಿತವಾಗಿಹೋಗುವುದು. ಮತ್ತು, ಕಷ್ಟಕಾಲದಲ್ಲಿ ಆ ವ್ಯಕ್ತಿ ಆಶ್ರಯರಹಿತನಾಗಿ ನೋಯುವ ಪರಿಸ್ಥಿತಿಯೂ ಬರುತ್ತದೆ. ಸಾಮಾಜಿಕ ಜೀವನ ಇಹದ ಏಳಿಗೆಗೆ ಪೂರ್ಣತಃ ಮತ್ತು ಪರದ ಸಾಧನೆಗೆ ಅಂಶತಃ ನೆರವನ್ನು ನೀಡುತ್ತದೆ. ವಸ್ತುತಃ ಸಾಮಾಜಿಕ ಜೀವನವಿಲ್ಲದಿದ್ದಲ್ಲಿ ವೈಯಕ್ತಿಕ ಜೀವನ ನೀರಸವಾಗಿ ಹೋಗುತ್ತದೆ. ಪ್ರತಿ ಸದಸ್ಯನಿಗೂ ನೆರವನ್ನಿತ್ತು, ಪ್ರತಿಯೊಬ್ಬ ಸದಸ್ಯನಿಂದಲೂ ನೆರವನ್ನು ಪಡೆಯುವ ಸಂಘಟನವನ್ನೇ ಸಮಾಜವೆಂದು ಕರೆಯುತ್ತಾರೆ. ವೇದಗಳಲ್ಲಿ ಸಾಮಾಜಿಕ ಜೀವನದ ಭವ್ಯವಾದ ಆದೇಶವಿದೆ. ಸಮಾಜದ ಆಶ್ರಯದಲ್ಲಿ ಮುಂದುವರೆಯುವ ನೀತಿಯನ್ನು ಪ್ರತಿಪಾದಿಸುವ ಈ ಮಂತ್ರವನ್ನು ನೋಡಿರಿ:-
ಹಂಸಾ ಇವ ಶ್ರೇಣಿಶೋ ಯತಾನಾಃ ಶುಕ್ರಾಃ ವಸಾನಾಃ ಸ್ವರವೋ ನ ಆಗುಃ |
ಉನ್ನೀಯಮಾನಾಃ ಕವಿಭಿಃ ಪುರಸ್ತಾದ್ ದೇವಾ ದೇವಾನಾಮಪಿ ಯಂತಿ ಪಾಥಃ || (ಋಕ್.೩.೮.೯.)
     [ದೇವಾಃ] ದಿವ್ಯಗುಣಭೂತರೂ, ಜ್ಞಾನಿಗಳೂ ಆದ ಸಜ್ಜನರು, [ಹಂಸಾಃ] ಇವ ಹಂಸಗಳ ಹಾಗೆ, [ಶ್ರೇಣಿಶಃ ಯತಾನಾಃ] ಶ್ರೇಣಿಬದ್ಧರಾಗಿ ಸಾಮಾಜಿಕವಾಗಿ ಪ್ರಯತ್ನ ಪಡುತ್ತಾ [ಶುಕ್ರಾ ವಸಾನಾಃ] ಶುಭ್ರವಾದ ಜೀವನವನ್ನು ನಡೆಸುತ್ತಾ, [ಸ್ವರವಃ] ಪ್ರೇಮಪೂರ್ವಕವಾಗಿ ಮಾತನಾಡುತ್ತಾ, [ನಃ] ನಮ್ಮ ಬಳಿಗೆ, [ಆಗುಃ] ಬರುತ್ತಾರೆ. [ಕವಿಭಿಃ] ತತ್ತ್ವದರ್ಶಿಗಳಿಂದ, [ಪುರಸ್ತಾತ್] ಮುಂದಕ್ಕೆ [ಉನ್ನೀಯಮಾನಾಃ] ನಡೆಸಲ್ಪಡುವವರಾಗಿ, [ದೇವಾನಾಂ ಪಾಥಃ ಅಪಿ] ಪ್ರಕಾಶಮಯರಾದ, ತೇಜಸ್ವಿಗಳಾದ ವಿದ್ವಾಂಸರ ಮಾರ್ಗವನ್ನೇ, [ಯಂತಿ] ಹೊಂದುತ್ತಾರೆ.
     ಸಮಾಜದ ಪ್ರತಿಯೊಬ್ಬ ಸದಸ್ಯನೂ, ಪ್ರತಿಯೊಬ್ಬಳು ಸದಸ್ಯೆಯೂ ಶುಭ್ರವಾದ ನಡೆನುಡಿಗಳಿಂದ ಸಂಪನ್ನರಾಗಿರಬೇಕು. ಸಮಾಜದ ನಾಯಕರೂ ಉನ್ನತಸ್ತರದ ಚಾರಿತ್ರ್ಯವಂತರೇ ಆಗಿರಬೇಕು. ಸಮಾಜವಿರುವುದು ವ್ಯಕ್ತಿಯ ವಿಕಾಸವನ್ನು ತಡೆಗಟ್ಟುವುದಕ್ಕಲ್ಲ, ಅವನಿಗೆ ವಿಕಾಸಪಥದಲ್ಲಿ ನೆರವನ್ನು ನೀಡುವುದಕ್ಕೆ. ವೇದಗಳು ಸಾಮಾಜಿಕ ಜೀವನಕ್ಕೆ ಎಷ್ಟು ಮಹತ್ವ ಕೊಡುತ್ತವೆ ಎಂದರೆ, ಮುಕ್ತಿಯಂತಹ, ವ್ಯಕ್ತಿಪ್ರಯತ್ನಕ್ಕೇ ಪ್ರಾಧಾನ್ಯ ನೀಡುವ ವಿಷಯವನ್ನು ಪ್ರಸ್ತಾಪಿಸುವಾಗಲೂ ಕೂಡ, ಮೋಕ್ಷಗಾಮಿಗಳ ವರ್ಣನೆ ಮಾಡುವಾಗಲೂ ಕೂಡ, ಋಗ್ವೇದ, ಹಂಸಾ ಇವ ಶ್ರೇಣಿಷೋ ಯತಂತೇ|| (ಋಕ್.೧.೧೬೩.೧೦.) - ಹಂಸಗಳಂತೆ ಗುಂಪುಕೂಡಿ ಯತ್ನಿಸುತ್ತಾರೆ -  ಎಂದು ಹೇಳುತ್ತದೆ. ಸಾಮಾಜಿಕ ಜೀವನಕ್ಕೆ ಹಂಸಶ್ರೇಣಿಯ ಉದಾಹರಣೆ ನೀಡುವಾಗಲೂ, ವೇದ ಒಂದು ಭವ್ಯ ಆದರ್ಶವನ್ನು ಎದುರಿಗಿಡುತ್ತದೆ. ಹಂಸಗಳು ಸಾಂಘಿಕ ಜೀವನ ನಡೆಸುವುದಲ್ಲದೇ ಪ್ರತಿಯೊಂದೂ ಶುಭ್ರವಾಗಿರುತ್ತದೆ. ಸಮಾಜದ ಪ್ರತಿಯೊಬ್ಬ ಸದಸ್ಯನೂ ನಿರ್ಮಲವಾದ, ಪವಿತ್ರವಾದ ಜೀವನವನ್ನೇ ನಡೆಸಬೇಕೆಂಬ ಆದರ್ಶ ಈ ದೃಷ್ಟಾಂತದಲ್ಲಿದೆ. ವ್ಯಷ್ಟಿಗಳಿಂದ ಸಮಷ್ಟಿ, ಸಮಷ್ಟಿಯಿಂದ ವ್ಯಷ್ಟಿಗೆ ಸುರಕ್ಷತೆಯ ಹಾಗೂ ಬೆಂಬಲದ ಭರವಸೆ. ವೈದಿಕ ಜೀವನದ ಮಾರ್ಗ, ಉದಾರಾತ್ಮರ, ಆತ್ಮೌಪಮ್ಯ ದೃಷ್ಟಿಯನ್ನು ರೂಢಿಸಿಕೊಂಡ ವಿಶಾಲಾಂತಃಕರಣರ ಮಾರ್ಗ. ಸ್ವಾರ್ಥಿಗಳಿಗೆ ಈ ಮಾರ್ಗ ಎಂದಿಗೂ ಪ್ರಿಯವೆನಿಸದು. ಒಬ್ಬರಿಗೊಬ್ಬರು ನೆರವಾಗಿ ನಿಂತು, ಒಂದಾಗಿ, ಒಟ್ಟುಗೂಡಿ, ಇಹ-ಪರಗಳೆರಡನ್ನೂ ಸಾಧಿಸಿಕೊಳ್ಳಿರಿ ಎನ್ನುವ ವೇದಾದೇಶದ ಒಂದು ಸಾರ್ವಭೌಮ ಸಂದೇಶವನ್ನು ಆಲಿಸಿರಿ:-
ಜ್ಯಾಯಸ್ವಂತಶ್ಚಿತ್ತಿನೋ ಮಾ ವಿ ಯೌಷ್ಟ ಸಂರಾಧಯಂತಃ ಸಧುರಾಶ್ಚರಂತಃ |
ಅನ್ಯೋ ಅನ್ಯಸ್ಮೈ ವಲ್ಗು ವದಂತ ಏತ ಸಧ್ರೀಚೀನಾನ್ವಃ ಸಂಮನಸಸ್ಕೃಣೋಮಿ || (ಅಥರ್ವ.೩.೩೦.೫.)
     ವೇದಜ್ಞಾನದಾತೃ ಪರಮಾತ್ಮನ ಕರೆಯಿದು. ಮಾನವರೇ, [ಜ್ಯಾಯಸ್ವಂತಃ] ಉನ್ನತಾದರ್ಶವಂತರಾಗಿರಿ. [ಚಿತ್ರಿನಃ] ತಮ್ಮ ಉತ್ತರದಾಯಿತ್ವವನ್ನು ತಿಳಿದವರೂ, ಜಾಗರೂಕರೂ ಆಗಿರಿ. [ಮಾ ವಿಯೌಷ್ಟ] ಒಬ್ಬರಿಂದೊಬ್ಬರು ಭಿನ್ನ ಭಿನ್ನರಾಗಬೇಡಿ, ಒಬ್ಬರಿಂದೊಬ್ಬರು ದೂರ ಸರಿಯಬೇಡಿ. [ಸಂ ರಾಧಯಂತಃ] ಒಗ್ಗಟ್ಟಾಗಿ ಸಂಪದರ್ಜನೆ ಮಾಡಿರಿ. [ಸಧುರಾಃ] ಒಂದೇ ಸಾರ್ವಭೌಮ ಧರ್ಮದ ನೊಗವನ್ನು ಹೊತ್ತು ಸಂಚರಿಸಿರಿ. [ಅನ್ಯಃ ಅನ್ಯಸ್ಮೈ ವಲ್ಗು ವದಂತ] ಒಬ್ಬರಿಗೊಬ್ಬರು ಒಳ್ಳೆಯ ಮಾತುಗಳನ್ನಾಡುತ್ತಾ, [ಏತ] ಪ್ರಗತಿಯನ್ನು ಸಾಧಿಸಿರಿ. [ವಃ] ನಿಮ್ಮನ್ನು, [ಸಧ್ರೀಚೀನಾನ್] ಒಂದೇ ಮಾನವಪಥದಲ್ಲಿ ನಡೆಯುವವರನ್ನಾಗಿಯೂ, [ಸಂ ಮನಸಃ] ಸಮಾನ ಮನಸ್ಕರನ್ನಾಗಿಯೂ, [ಕೃಣೋಮಿ] ಮಾಡುತ್ತೇನೆ. ಎಂತಹ ಆಕರ್ಷಣೀಯವಾದ ಸಂದೇಶವಿದು!
***********************
-ಪಂ. ಸುಧಾಕರ ಚತುರ್ವೇದಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ