ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಜುಲೈ 2, 2013

ವೇದೋಕ್ತ ಜೀವನ ಪಥ: ವೇದೋಕ್ತ ರಾಜನೀತಿ - ೪

     ವೇದಗಳು, ಅಸ್ಯ ಪ್ರಿಯಸ್ಯ ಶರ್ಮಣ್ಯ ಹಿಂಸಾನಸ್ಯ ಸಶ್ಚಿರೇ || (ಋಕ್.೫.೬೪.೩.) -  ಅಹಿಂಸಕನಾದ ಈ ಪ್ರಿಯ ಮಾನವನ ಆಶ್ರಯದಲ್ಲಿ ಎಲ್ಲರೂ ಒಂದಾಗುತ್ತಾರೆ -  ಎಂದು ಹೇಳಿ, ಅಹಿಂಸಾ ಮಹಿಮೆಯನ್ನು ವರ್ಣಿಸುತ್ತವಾದರೂ ಕೂಡ, ರಾಜನೀತಿಯಲ್ಲಿ ಕೇವಲ ಅಹಿಂಸಾವೃತ್ತಿಯಿಂದ ರಾಷ್ಟ್ರದ ರಕ್ಷಣೆಯಾಗಲಾರದೆಂಬುದನ್ನು ಸ್ಪಷ್ಟವಾಗಿ ಗುರುತಿಸುತ್ತದೆ. ಬ್ರಾಹ್ಮವರ್ಚಸ್ಸಿನೊಂದಿಗೆ ಕ್ಷಾತ್ರ ತೇಜಸ್ಸು ಕೂಡಿದಾಗಲೇ ರಾಷ್ಟ್ರೋದ್ಧಾರವಾಗಬಲ್ಲದೆಂಬುದನ್ನು ವೇದಗಳು ಬಲ್ಲವು. ಅದೇ ಕಾರಣದಿಂದ ಯಜುರ್ವೇದದಲ್ಲಿ ನಾವು ಈ ಕೆಳಕಂಡ ಮಂತ್ರವನ್ನು ಕಾಣುತ್ತೇವೆ:-
ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ |
ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.)
     [ಯತ್ರ] ಎಲ್ಲಿ [ಬ್ರಹ್ಮ ಚ ಕ್ಷತ್ರಂ ಚ] ಬ್ರಾಹ್ಮೀಶಕ್ತಿ ಮತ್ತು ಕ್ಷಾತ್ರಶಕ್ತಿಯು [ಸಮ್ಯಂಚೌ] ಒಂದಕ್ಕೊಂದು ಆಶ್ರಯ ನೀಡುತ್ತಾ [ಸಹಚರತಃ] ಒಟ್ಟಿಗೆ ಪ್ರವೃತ್ತವಾಗುತ್ತವೋ, [ಯತ್ರ] ಎಲ್ಲಿ [ದೇವಾ] ಉದಾರಾಶಯರೂ, ಸತ್ಯಮಯರೂ, ಪವಿತ್ರಚಾರಿತ್ರರೂ ಆದ ವಿದ್ವಜ್ಜನರು, [ಅಗ್ನಿನಾ ಸಹ] ರಾಷ್ಟ್ರನಾಯಕನೊಂದಿಗೆ ಸಹಕರಿಸಿ ನಡೆಯುತ್ತಾರೋ, [ತಂ ಲೋಕಮ್] ಆ ಲೋಕವನ್ನೇ [ಪುಣ್ಯಂ ಪ್ರಜ್ಞೇಷಮ್] ಪುಣ್ಯಶಾಲಿ ಎಂದು ತಿಳಿಯುತ್ತೇನೆ. 
     ಮಹಾಜನ, ರಾಜ್ಯದ ಪ್ರಧಾನಶಾಸಕನನ್ನು ಆರಿಸಬೇಕೆಂದು ಆದೇಶ ನೀಡುವ ಮಂತ್ರದಲ್ಲಿಯೂ 'ಮಹತೇ ಕ್ಷತ್ರಾಯ' ಎಂಬ ಪದವನ್ನು ಪಾಠಕರು ಓದಿದ್ದಾರೆ. ದೇವಾಸುರ ಸಂಗ್ರಾಮ ಮಾನವನ ಆಂತರ್ಯದಲ್ಲೆಂತೋ, ಬಾಹ್ಯ ಪ್ರಪಂಚದಲ್ಲಿಯೂ ಅಂತೆಯೇ ನಿರಂತರವಾಗಿ ನಡೆಯುತ್ತಿರುತ್ತದೆ. ವೈದಿಕ ಧರ್ಮ ಕ್ರಿಯಾತ್ಮಕ ಜೀವನಮಾರ್ಗ, ಅದರಲ್ಲಿ ನಿರರ್ಥಕ ಆದರ್ಶವಾದಕ್ಕೆ ಎಡೆಲ್ಲ.
     ಇಂದು ರಾಜನೈತಿಕಕ್ಷೇತ್ರದಲ್ಲಿ ದುಡಿದು ಅನುಭವ ಗಳಿಸಿದ ಸಮಸ್ತ ರಾಷ್ಟ್ರಗಳ ನಾಯಕರೂ, ಒಂದು 'ಜಾಗತಿಕ ಪ್ರಶಾಸನ'ಕ್ಕಾಗಿ, 'World Government ಗಾಗಿ ಹಾತೊರೆಯುತ್ತಿದ್ದಾರಷ್ಟೆ. ಸಾರ್ವಭೌಮವಾದ ವೇದಗಳು, ಮಾನವನ ಉದಯಕಾಲದಿಂದಲೇ ಈ ಆದರ್ಶವನ್ನು ಎತ್ತಿಹಿಡಿಯುತ್ತಾ ಬಂದಿದೆ. ವೇದಗಳಲ್ಲೆಲ್ಲಿಯೂ ದೇಶವಿದೇಶಗಳ ವರ್ಣನೆಯಿಲ್ಲ. ವೇದಗಳು ಸಂಪೂರ್ಣ ಜಗತ್ತನ್ನೇ ಒಂದು ರಾಷ್ಟ್ರವಾಗಿ ಪರಿಗಣಿಸುವ ಆದರ್ಶವನ್ನೇ ಮಾನವರ ಮುಂದೆ ಮೂಡಿಸುತ್ತಾ ಬಂದಿದೆ. ನಾವು ಅಥರ್ವವೇದದ ಪೃಥಿವೀ ಸೂಕ್ತದಲ್ಲಿ, ಸಾ ನೋ ಭೂಮಿರ್ವಿ ಸೃಜತಾಂ ಮಾತಾ ಪುತ್ರಾಯ ಮೇ ಪಯಃ|| (ಅಥರ್ವ.೧೨.೧.೧೦.) - [ನಃ ಸಾ ಭೂಮಿಃ ಮಾತಾ] ನಮ್ಮ ಭೂಮಿಯ ಮಾತೆಯು, [ಪುತ್ರಾಯ ಮೇ] ಮಗನಾದ ನನಗೆ, [ಪಯಃ ವಿ ಸೃಜತಾಮ್] ರಸವತ್ತಾದುದನ್ನು ಒದಗಿಸಲಿ. ಮಾತಾ ಭೂಮಿಃ ಪುತ್ರೋ ಅಹಂ ಪೃಥಿವ್ಯಾಃ|| (ಅಥರ್ವ.೧೨.೧.೧೨.) - {ಭೂಮಿಃ ಮಾತಾ] ಭೂಮಿಯ ತಾಯಿ, [ಅಹಂ ಪೃಥಿವ್ಯಾಃ ಪುತ್ರಃ] ನಾನು ಪೃಥ್ವಿಯ ಮಗ. ಭೂಮೇ ಮಾತರ್ನಿ ಧೇಹಿ ಮಾ ಭದ್ರಯಾ ಸುಪ್ರತಿಷ್ಠಿತಮ್|| (ಅಥರ್ವ.೧೨.೧.೬೩.) - {ಭೂಮೇ ಮಾತಃ] ಓ ಭೂಮಿ ಮಾತೆ, [ಭದ್ರಯಾ] ಕಲ್ಯಾಣದೊಂದಿಗೆ, [ಸುಪ್ರತಿಷ್ಠಿತಂ ಮಾ] ಧೃಢವಾಗಿ ನಿಂತ ನನ್ನನ್ನು [ನಿ ಧೇಹಿ] ರಕ್ಷಿಸು. ಈ ಬಗೆಯ ಅನೇಕ ವಾಕ್ಯಗಳನ್ನು ಕಾಣುತ್ತೇವೆ. ಸಾರ್ವಭೌಮ ಶಾಸ್ತ್ರಗಳಾದ ವೇದಗಳ ದೃಷ್ಟಿಯಲ್ಲಿ ಸಂಪೂರ್ಣ ಭೂಮಂಡಲವೇ ಒಂದು ರಾಷ್ಟ್ರ. ಆದರೆ ಇಂದಿನ ಮಾನವಸಮಾಜ ಇನ್ನೂ ಇಷ್ಟು ವಿಶಾಲವಾದ ತತ್ತ್ವವನ್ನು ಸ್ವೀಕರಿಸುವಷ್ಟು ಮುಂದೆ ಹೋಗಿಲ್ಲ. ಈ ದೊಡ್ಡ ಆದರ್ಶ ದೂರದಲ್ಲಿದ್ದರೂ, ನಮ್ಮ ಕೈಯಲ್ಲಿರುವ ಭಾರತವನ್ನಾದರೂ ನಾವು ವೇದೋಕ್ತವಾದ ರೀತಿಯಲ್ಲಿ ಆಳಬಲ್ಲೆವಾದರೂ ಜಗತ್ತಿಗೆ ಒಂದು ಉನ್ನತ ಮಾದರಿಯನ್ನು ಹಾಕಿಕೊಡಬಹುದು.
     ರಾಷ್ಟ್ರ, ನಿಜವಾಗಿ ಸಮೃದ್ಧವಾಗಬೇಕಾದರೆ, ಶಾಸಕರಲ್ಲಿಯೂ, ಪ್ರಜೆಗಳಲ್ಲಿಯೂ ಭೋಗವಿಲಾಸದ ಮತ್ತು ಸ್ವಾರ್ಥಸಾಧನೆಯ ಅಭಿಲಾಷೆಯಳಿದು, ಸಾತ್ವಿಕ ಜೀವನ ಹಾಗೂ ತ್ಯಾಗಭಾವನೆ ಮೂಡಿಬರಬೇಕು. ಅಥರ್ವವೇದ ಬಲಿಷ್ಠವಾದ ರಾಷ್ಟ್ರದ ನಿರ್ಮಾಣಕ್ಕೆ ದಾರಿ ತೋರಿಸುತ್ತದೆ:-
ಭದ್ರಮಿಚ್ಛಂತ ಋಷಯಃ ಸ್ವರ್ವಿದಸ್ತಪೋ ದೀಕ್ಷಾಮುಪನಿಷೇದುರಗ್ರೇ |
ತತೋ ರಾಷ್ಟ್ರಂ ಬಲಮೋಜಶ್ಚ ಜಾತಂ ತದಸ್ಮೈ ದೇವಾ ಉಪಸಂನಮಂತು || (ಅಥರ್ವ.೧೯.೪೧.೧.)
    [ಸ್ವರ್ವಿದಃ] ಸುಖಪ್ರಾಪ್ತಿಯ ಮಾರ್ಗವನ್ನು ಬಲ್ಲ, [ಅಗ್ರೇ] ಅಗ್ರಗಾಮಿಗಳಾದ, [ಋಷಯಃ] ಪ್ರಗತಿಶೀಲ ತತ್ತ್ವದರ್ಶಿಗಳು [ಭದ್ರಂ ಇಚ್ಛಂತಃ] ಎಲ್ಲರಿಗೂ ಕಲ್ಯಾಣವನ್ನು ಬಯಸುತ್ತಾ, [ತಪೋದೀಕ್ಷಾಮ್] ತಪಸ್ಸಿನ ಕಷ್ಟಸಹಿಷ್ಣುತೆಯ ದೀಕ್ಷೆಯನ್ನು [ಉಪನಿಷೇದುಃ] ವಹಿಸುತ್ತಾ ಬಂದರು. [ತತಃ] ಅದರಿಂದ, [ರಾಷ್ಟ್ರಮ್] ರಾಷ್ಟ್ರವೂ [ಬಲಮ್] ಶಕ್ತಿಯೂ, [ಚ] ಮತ್ತು [ಓಜಃ] ಓಜಸ್ಸು, [ಜಾತಮ್] ಉತ್ಪನ್ನವಾಯಿತು. [ತತ್] ಆ ಕಾರಣದಿಂದ, [ದೇವಾಃ] ರಾಷ್ಟ್ರವಿಜಯಾಭಿಲಾಷಿಗಳೂ, ಸತ್ಯಮಯರೂ, ಉದಾರಾತ್ಮರೂ, ಆದ ವಿದ್ವಾಂಸರು, [ಅಸ್ಮೈ] ಈ ತಪೋ [ದೀಕ್ಷಾ] ಕರ್ಮಕ್ಕೆ [ಉಪಸಂನಮಂತು] ಕ್ರಿಯಾತ್ಮಕವಾಗಿ ಗೌರವ ಸಲ್ಲಿಸಲಿ.
     ಇದಕ್ಕಿಂತ ಹೆಚ್ಚೇನನ್ನು ಹೇಳಲು ಸಾಧ್ಯವಿದೆ? ಈ ಅಧ್ಯಾಯದಲ್ಲಿ ಹೇಳಿರುವುದೆಲ್ಲಾ ರಾಷ್ಟನಿರ್ಮಾಣದ ಮೂಲಭೂತ ತತ್ತ್ವಗಳು. ಇದಕ್ಕನುಸಾರವಾಗಿ ನಡೆದಲ್ಲಿ ರಾಷ್ಟ್ರೋತ್ಥಾನವಾಗುವುದರಲ್ಲಿ ಏನೇನೂ ಸಂದೇಹವಿಲ್ಲ. ಒಂದು ಮಹತ್ವಪೂರ್ಣ ಮಂತ್ರದೊಂದಿಗೆ ಈ ಅಧ್ಯಾಯವನ್ನು ಕೊನೆಮುಟ್ಟಿಸೋಣ.
ಸತ್ಯಂ ಬೃಹದೃತಮುಗ್ರಂ ದೀಕ್ಷಾ ತಪೋ ಯಜ್ಞಃ ಪೃಥಿವೀಂ ಧಾರಯಂತಿ |
ಸಾ ನೋ ಭೂತಸ್ಯ ಭವ್ಯಸ್ಯ ಪತ್ನ್ಯುರುಂ ಲೋಕಂ ಪೃಥಿವೀ ನಃ ಕೃಣೋತು || (ಅಥರ್ವ.೧೨.೧.೧.)
     [ಸತ್ಯಮ್] ಸತ್ಯ, [ಬೃಹತ್] ಮನೋವೈಶಾಲ್ಯ, [ಋತಮ್] ನ್ಯಾಯ, [ಉಗ್ರಮ್] ಪರಾಕ್ರಮ, [ದೀಕ್ಷಾ] ವ್ರತನಿಷ್ಠೆ, [ತಪಃ] ಕಷ್ಟಸಹಿಷ್ಣುತೆ, [ಬ್ರಹ್ಮ] ವೇದಜ್ಞಾನ ಮತ್ತು [ಯಜ್ಞಃ] ತ್ಯಾಗಭಾವಸಂಪನ್ನ ಸತ್ಕರ್ಮ ಇವು ಮತ್ತು [ಪೃಥಿವೀಮ್] ಪೃಥಿವಿಯನ್ನು, [ಧಾರಯಂತಿ] ಉದ್ಧರಿಸುತ್ತವೆ. [ನಃ] ನಮ್ಮ [ಭೂತಸ್ಯ ಭವಸ್ಯ ಪತ್ನೀ] ಅತೀತದ ಮತ್ತು ಭವಿಷ್ಯದ ಪಾಲಿಕೆಯಾದ, [ಸಾ ಪೃಥಿವೀಮ್] ಆ ಪೃಥಿವಿಯು, [ನಃ] ನಮಗಾಗಿ [ಉರುಂ ಲೋಕಮ್] ವಿಶಾಲವಾದ ರಾಷ್ಟ್ರವನ್ನು [ಕೃಣೋತು] ಉಂಟುಮಾಡಲಿ. 
     ನಾವು ಮೇಲೆ ಹೇಳಿದ ಎಂಟು ತತ್ತ್ವಗಳನ್ನು ರೂಢಿಸಿಕೊಂಡಾಗ, ದೇಶದ ಏಕತೆಗೆ ಭಂಗ ತರುವ ಈ ಭಾಷಾವಾರು ಪ್ರಾಂತ್ಯರಚನೆಯ ಸಂಕುಚಿತ ಮನೋಭಾವನೆ ನಾಶವಾಗಿ, ಆಡಳಿತದಲ್ಲಿ ಭಾರತದಾದ್ಯಂತ ಒಂದೇ ನಿಯಮ ಜಾರಿಗೆ ಬಂದು, ರಾಜನೀತಿಯ ಭ್ರಷ್ಠಾಚಾರ ನಿರ್ಮೂಲವಾಗಿ, ಪ್ರಜೆಗಳೆಲ್ಲರೂ ಸುಖವನ್ನನುಭವಿಸಬಹುದು. ಈ ರೀತಿಯಿಂದ ಸರ್ವಸಮಾನತೆಯ ಉದಾತ್ತವಾದ ರಾಜನೀತಿಯ ಪರಿಚಯವನ್ನು ಜಗತ್ತಿಗೆ ಮಾಡೋಣ.
-ಪಂ. ಸುಧಾಕರ ಚತುರ್ವೇದಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ