ಇಷ್ಟೆಲ್ಲಾ ತಿಳಿದ ಮೇಲೆ, ಕೊನೆಗೆ ಒಂದು ಪ್ರಶ್ನೆ ಹಾಕೋಣ. ಮಾನವಜೀವನದ ಉದ್ದೇಶ್ಯವೇನು? ವೈದಿಕ ಧರ್ಮದ ದೃಷ್ಟಿಯಲ್ಲಿ, ನಾಲ್ಕು ಪುರುಷಾರ್ಥಗಳನ್ನು ಸಾಧಿಸುವುದೇ ಮಾನವಜೀವನದ ಉದ್ದೇಶ್ಯ. ಋಗ್ವೇದ ಹೇಳುತ್ತದೆ:-
ಏಕಂ ಚಮಸಂ ಚತುರಃ ಕೃಣೋತನ ತದ್ ವೋ ದೇವಾ ಅಬ್ರುವನ್ ತದ್ ವ ಆಗಮಮ್ |
ಸೌಧನ್ವನಾ ಯದ್ಯೇವಾ ಕರಿಷ್ಯಥ ಸಾಕಂ ದೇವೈರ್ಯಜ್ಞಿಯಾಸೋ ಭವಿಷ್ಯಥ || (ಋಕ್.೧.೧೬೧.೨.)
[ಏಕಂ ಚಮಸಮ್] ಆತ್ಮನಿಗೆ ಜೀವನಸಾರವನ್ನು ಬಡಿಸುವ ಒಂದು ಉದ್ದೇಶ್ಯವನ್ನು, [ಚತುರಃ ಕೃಣೋತನ] ನಾಲ್ಕಾಗಿ ವಿಂಗಡಿಸಿರಿ. [ದೇವಾಃ] ಪ್ರಕಾಶವಂತರೂ, ಉದಾರರೂ, ಶುಭಗುಣವಿಶಿಷ್ಟರೂ ಆದ ವಿದ್ವಾಂಸರು, [ವಃ ತತ್ ಅಬ್ರುವನ್] ನಿಮಗೆ ಅದನ್ನೇ ನಿರ್ದೇಶಿಸುತ್ತಾರೆ. [ತತ್] ಅದನ್ನೇ [ಆಗಮಮ್] ತಂದಿದ್ದೇನೆ. [ಸೌಧನ್ವನಾಃ] ಭೂಮಾತೆಯ ಸುಪುತ್ರರೇ! [ಯದಿ ಏವಾ ಕರಿಷ್ಯಥಃ] ಹೀಗೆ ಮಾಡುವಿರಾದಲ್ಲಿ, [ದೇವೈಃ ಸಾಕಮ್] ದಿವ್ಯಗುಣ ವಿಶಿಷ್ಟರಾದ ವಿದ್ವಾಂಸರೊಂದಿಗೆ, [ಯಜ್ಞಿಯಾಸಃ ಭವಿಷ್ಯಥ] ನೀವೂ ಆದರಣೀಯರಾಗುವಿರಿ.
'ಚಮಸ' ಎಂದರೆ ಬಡಿಸುವ ಸಾಧನ. ಆತ್ಮನಿಗೆ ಜೀವನದ ಸಾರವನ್ನು ಬಡಿಸುವ ಉದಾತ್ತವಾದ ಆದರ್ಶ ಅಥವಾ ಶ್ರೇಷ್ಠವಾದ ಉದ್ದೇಶ್ಯವೇ. ಈ ಒಂದು ಉದ್ದೇಶ್ಯವನ್ನು ನಾಲ್ಕಾಗಿ ವಿಂಗಡಿಸಿ, ಒಂದೊಂದು ಅರ್ಥವನ್ನೂ ಸಾಧಿಸಿಕೊಳ್ಳುತ್ತಾ ಹೋಗಬೇಕು. ಪುರುಷನಿಂದ ಸಾಧಿಸಲ್ಪಡಬೇಕಾದ ಈ ನಾಲ್ಕನ್ನೂ 'ನಾಲ್ಕು ಪುರುಷಾರ್ಥಗಳು' ಎನ್ನುತ್ತಾರೆ. ಧರ್ಮ, ಅರ್ಥ, ಕಾಮ, ಮೋಕ್ಷ - ಇವೇ ಆ ನಾಲ್ಕು ಪುರುಷಾರ್ಥಗಳು.
ಪ್ರಥಮ ಪುರುಷಾರ್ಥ ಧರ್ಮ. ಧರ್ಮದ ವಿಷಯವನ್ನು ಪಾಠಕರು ಈ ಮೊದಲೂ ಓದಿದ್ದಾರೆ. ಆತ್ಮನ ಧಾರಕ ತತ್ತ್ವಗಳೇ ಒಟ್ಟು ಸೇರಿ 'ಧರ್ಮ' ಎನಿಸುತ್ತದೆ. ಆ ಧರ್ಮದ ಮೂರು ಅಭಿನ್ನ ಅಂಗಗಳು ಜ್ಞಾನ, ಕರ್ಮ, ಉಪಾಸನಾ ಎಂದು ಮೊದಲೇ ತಿಳಿದಿದ್ದೇವೆ. ಈ ಧರ್ಮ ಎಂಬ ಧಾರಕತ್ತ್ವವನ್ನು ಸಾಧಿಸಿಕೊಂಡರೆ ಮಾನವನ ರೂಪ ಹೇಗಿರುವುದೆಂದು ಋಗ್ವೇದ ಹೇಳುತ್ತಲಿದೆ:-
ಧರ್ಮಣಾ ಮಿತ್ರಾವರುಣಾ ವಿಪಶ್ಚಿತಾ ವ್ರತಾ ರಕ್ಷೇಥೇ ಅಸುರಸ್ಯ ಮಾಯಯಾ | ಋತೇನ ವಿಶ್ವಂ ಭುವನಂ ವಿ ರಾಜಥಃ ಸೂರ್ಯಮಾ ಧತ್ಥೋ ದಿವಿ ಚಿತ್ರ್ಯಂ ರಥಮ್ || (ಋಕ್.೫.೬೩.೭.)
[ಮಿತ್ರಾವರುಣಾ] ಸ್ನೇಹಪರ ನರ ಹಾಗೂ ವರಣೀಯಳಾದ ನಾರಿ! [ದರ್ಮಣಾ] ಧರ್ಮದಿಂದ [ವಿಪಶ್ಚಿತಾ] ಜ್ಞಾನಿಗಳಾಗುತ್ತೀರಿ. [ಅಸುರಸ್ಯ] ಪ್ರಾಣದಾಯಕನಾದ ಪರಮಾತ್ಮನ [ಮಾಯಯಾ] ಪ್ರಜ್ಞೆಯಿಂದ, ವೇದಜ್ಞಾನದಿಂದ [ವ್ರತಾ ರಕ್ಷೇಥೇ] ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ವ್ರತಗಳನ್ನು ರಕ್ಷಿಸುತ್ತೀರಿ. [ಋತೇನ] ಯಜ್ಞ ಮತ್ತು ನ್ಯಾಯದಿಂದ [ವಿಶ್ವಂ ಭುವನಮ್] ಸಮಸ್ತ ಪ್ರಪಂಚವನ್ನೂ, [ವಿರಾಜಥಃ] ಸಿಂಗರಿಸುತ್ತೀರಿ. [ದಿವಿ] ಜ್ಞಾನಮಯವಾದ ಸ್ಥಿತಿಯಲ್ಲಿ, [ಚಿತ್ರ್ಯಮ್] ಅದ್ಭುತ [ರಥಮ್] ಗತಿದಾತೃವಾದ [ಸೂರ್ಯಮ್] ಬ್ರಹ್ಮಾಂಡದ ಸಂಚಾಲಕನಾದ ಭಗವಂತನನ್ನು [ಆ ದತ್ಥಃ] ಎಲ್ಲಡೆಯಿಂದಲೂ ಜೀವನಗತವಾಗಿ ಮಾಡಿಕೊಳ್ಳುತ್ತೀರಿ. 'ವಿಪಶ್ಚಿತಾ' ಎಂಬ ಶಬ್ದ ಜ್ಞಾನವನ್ನು, 'ವ್ರತಾ' ಎಂಬ ಶಬ್ದ ಕರ್ಮವನ್ನೂ, 'ಸೂರ್ಯ ಆಧತ್ಥಃ' ಎಂಬ ಶಬ್ದಗಳು ಉಪಾಸನೆಯನ್ನೂ ಸೂಚಿಸುತ್ತವೆ. ಧಾರ್ಮಿಕರು ಜಗತ್ತಿನಲ್ಲಿ ಸುಖ-ಶಾಂತಿಗಳನ್ನು ಪಸರಿಸಿ, ಜಗತ್ತನ್ನು ಶೃಂಗರಿಸುತ್ತಾರೆ. ಇದು ಪ್ರಥಮ ಪುರುಷಾರ್ಥ.
-ಪಂ. ಸುಧಾಕರ ಚತುರ್ವೇದಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ