ಈಗ ತೃತೀಯ ಪುರುಷಾರ್ಥ. ಅದನ್ನು ಕಾಮ ಎನ್ನುತ್ತಾರೆ. ಈ ಶಬ್ದವನ್ನು ಕೇಳಿದ ಕೂಡಲೇ ಸ್ತ್ರೀ-ಪುರುಷರ ಸಂಬಂಧಕ್ಕೆ ಸೇರಿದುದು ಇದು ಎಂಬ ಭಾವನೆ ಸಹಜವಾಗಿಯೇ ಜನಮನಕ್ಕೆ ಬರುತ್ತದೆ. ಆದರೆ, ವೇದಗಳಲ್ಲಿ ಈ ಶಬ್ದ ಇದೊಂದೇ ಅರ್ಥದಲ್ಲಿ ಬರುವುದಿಲ್ಲ. ಕಾಮ ಎಂದರೆ ಇಚ್ಛೆ ಎಂದರ್ಥ. ಇಚ್ಛೆಗಳು ಅನೇಕ ರೂಪಗಳಲ್ಲಿರುತ್ತವೆ. ಆತ್ಮನಿಗೆ ಉತ್ಕರ್ಷ ತರುವ ಕಾಮನೆಗಳೂ ಇರುತ್ತವೆ, ಅವನನ್ನು ದುರ್ಗತಿಗೆ ತರುವ ಕಾಮನೆಗಳೂ ಇರುತ್ತವೆ. ನಿಷ್ಕಾಮ ಎಂಬ ಪದವನ್ನು ಜನ ಲೀಲಾಜಾಲವಾಗಿ ಉಪಯೋಗಿಸುತ್ತಾರೆ. ಆದರೆ, ಯಾವ ಚೇತನವೂ ಪೂರ್ಣ ನಿಷ್ಕಾಮವಾಗಲಾರದು. ಏನೂ ಬೇಡವೆಂದರೂ ಶಾಂತಿ ಬೇಕು, ಆತ್ಮವಿಕಾಸವಾಗಬೇಕು - ಎಂಬ ಕಾಮನೆಗಳಾದರೂ ಇದ್ದೇ ಇರುತ್ತವೆ.
ಮಾನವಜನ್ಮವೆತ್ತಿ ಬರುವುದು, ಕೇವಲ ಮರದ ಕೊರಡಿನಂತೆ ಯಾವ ಕಾಮನೆಗಳೂ, ಆಕಾಂಕ್ಷೆಗಳೂ ಇಲ್ಲದೆ ಜಡವಾಗಿ ಬಿದ್ದಿರುವುದಕ್ಕಲ್ಲ. ಪರಲೋಕಸಾಧನೆಗೆ ತನ್ನನ್ನು ಪಾತ್ರನನ್ನಾಗಿ ಮಾಡಿಕೊಳ್ಳಬೇಕಾದರೆ, ಮಾನವನು ಇಹದಲ್ಲಿಯೂ ಮಾಡಲೇಬೇಕಾದ ಅನೇಕ ಕರ್ತವ್ಯಗಳಿರುತ್ತವೆ. ಆದುದರಿಂದ, ಧರ್ಮಕ್ಕನುಸಾರವಾಗಿ ತಾನು ಸಂಪಾದಿಸಿದ ಅರ್ಥವನ್ನು, ಆತ್ಮನಿಗೆ ಘಾತಕವಾಗದಂತೆ, ಇತರರಿಗೂ ಕಷ್ಟವಾಗದಂತೆ, ಎಲ್ಲರಿಗೂ ಹಿತವಾಗುವಂತೆ ಉಪಯೋಗಿಸುವುದೇ ತೃತೀಯ ಪುರುಷಾರ್ಥವಾದ ಕಾಮ. ಕಾಮ ಒಂದು ಪ್ರಬಲವಾದ ಶಕ್ತಿ. ಅದನ್ನು ವಶದಲ್ಲಿಟ್ಟುಕೊಂಡರೆ, ನಾವು ಶತ್ರುರಹಿತರಾಗಿ ಜಗತ್ತಿನಲ್ಲಿ ಬಾಳಬಲ್ಲೆವು. ಈ ಕಾಮದ ಪರಿಧಿಯಲ್ಲಿ, ಗೃಹಸ್ಥಾಶ್ರಮದಲ್ಲಿ ಮಾಡುವ ಸ್ತ್ರೀ-ಪುರುಷರ ಪರಸ್ಪರ ದೇಹಸಂಬಂಧದ ಇಚ್ಛೆಯೂ ಅಡಕವಾಗಿದೆ. ಶಾಸ್ತ್ರೀಯ ಮರ್ಯಾದೆಗನುಸಾರವಾಗಿ ಸ್ತ್ರೀ-ಪುರುಷರ ಲೈಂಗಿಕಜೀವನ ನಡೆದಲ್ಲಿ, ಅದು ಮೋಕ್ಷಕ್ಕೆ ಬಾಧಕವೇನೂ ಅಲ್ಲ. ಕಾಮ, ಉಚ್ಛೃಂಖಲವಾಗಿ ಹೋದರೆ ಮಾತ್ರ ಅಪಾಯ. ಅದೇ ಕಾರಣದಿಂದ ಅಥರ್ವವೇದದಲ್ಲಿ ಹೇಳಿದೆ:-
ಯಾಸ್ತೇ ಶಿವಾಸ್ತನ್ವಃ ಕಾಮ ಭದ್ರಾ ಯಾಭಿಃ ಸತ್ಯಂ ಭವತಿ ಯದ್ವೃಣೇಷೇ |
ತಾಭಿಷ್ಟ್ಯಮಸ್ಮಾನ್ ಅಭಿಸಂವಿಶಸಾ sನ್ಯತ್ರ ಪಾಪೀರಪ ವೇಶಯಾ ಧಿಯಃ || (ಅಥರ್ವ.೯.೨.೨೫.)
[ಕಾಮ] ಓ ಕಾಮ, [ತೇ ಯಾಃ ತನ್ವಃ] ನಿನ್ನ ಯಾವ ವಿಸ್ತಾರಗಳು ಅಥವಾ ರೂಪಗಳು [ಶಿವಾಃ ಭದ್ರಾಃ] ಮಂಗಳಕರವೂ, ಕಲ್ಯಾಣಕಾರಿಯೂ ಆಗಿವೆಯೋ [ಯತ್ ವೃಣೇಷೇ] ಯಾವುದನ್ನು ನೀನು ಬಯಸುತ್ತೀಯೋ [ಸತ್ಯಮ್] ಆ ಸತ್ಯವು [ಯಾಭಿಃ ಭವತಿ] ಯಾವ ನಿನ್ನ ರೂಪಗಳಿಂದ ಲಭಿಸುತ್ತದೆಯೋ [ತಾಭಿಃ] ಆ ರೂಪಗಳೊಂದಿಗೆ [ನಃ ಅಭಿ ಸಂವಿಶಸ್ವ] ನಮ್ಮಲ್ಲಿ ಪ್ರವೇಶ ಮಾಡು. [ಧಿಯಃ ಪಾಪೀಃ] ಬುದ್ಧಿಯಲ್ಲಿ ಹುಟ್ಟುವ ಪಾಪದ ರೂಪವುಳ್ಳ ನಿನ್ನ ವಿಸ್ತಾರಗಳನ್ನು [ಅನ್ಯತ್ರ ಅಪವೇಶಯ] ಬೇರೆಕಡೆಗೆ ಅಟ್ಟಿಬಿಡು.
ಭಾವ ಸ್ಪಷ್ಟ. ಐಹಿಕ ಜೀವನವನ್ನು ಸರಸ ಸುಂದರವಾಗಿ, ಸುಖ-ಶಾಂತಿಮಯವಾಗಿ ಮಾಡಲು ಬೇಕಾದ ಇಚ್ಛೆಗಳು ಜೀವನಕ್ಕಿಳಿದು ಬರಲಿ. ಪಾಪಮಯವಾದ ಇಚ್ಛೆಗಳಿಗೆ ತೃತೀಯ ಪುರುಷಾರ್ಥ ಕಾಮದಲ್ಲಿ ಎಡೆಯಿಲ್ಲ.
-ಪಂ. ಸುಧಾಕರ ಚತುರ್ವೇದಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ