ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಆಗಸ್ಟ್ 5, 2013

ವೇದೋಕ್ತ ಜೀವನ ಪಥ: ಚತುರ್ವಿಧ ಪುರುಷಾರ್ಥಗಳು: ೪. ಮೋಕ್ಷ

     ಕೊನೆಗೆ ಚತುರ್ಥ ಪುರುಷಾರ್ಥ. ಅದನ್ನು ಮೋಕ್ಷವೆಂದು ಕರೆಯುತ್ತಾರೆ. ದೇವರ ವಿಷಯದಲ್ಲಿ ಮತ್ತು ಧರ್ಮದ ವಿಷಯದಲ್ಲಿ ಜನರಿಗೆ ಹೇಗೆ ಭ್ರಾಂತ ಕಲ್ಪನೆಗಳಿವೆಯೋ ಹಾಗೆಯೇ ಈ ಮೋಕ್ಷದ ವಿಷಯದಲ್ಲಿಯೂ ಇದೆ. ತಾವು ನಂಬಿರುವ ಶಿವನೋ, ವಿಷ್ಣುವೋ, ಜೆಹೋವನೋ, ಅಲ್ಲಾನೋ ಯಾವುದೋ ಒಂದು ತಮ್ಮದೇ ಆದ ಲೋಕದಲ್ಲಿದ್ದಾರೆ. ತಮ್ಮ ಮತೀಯ ನಂಬಿಕೆಯಂತೆ ನಡೆದುಕೊಂಡು ಸತ್ತರೆ, ಅಲ್ಲಿಗೆ ಹೋಗಿ ಆನಂದದಿಂದ ಸದಾಕಾಲಕ್ಕೂ ಇದ್ದುಬಿಡಬಹುದು -  ಎಂದು ಜನ ನಂಬಿದ್ದಾರೆ. ಕೆಲವು ಮತೀಯರಿಗಂತೂ ಮಧ್ಯಗಾರರ ಶಿಫಾರಸಿನಲ್ಲಿಯೂ ನಂಬಿಕೆಯಿದೆ. ಆದರೆ, ಹಿಂದಿನ ಅಧ್ಯಾಯಗಳಲ್ಲಿ ಹೇಳಿರುವಂತೆ ಭಗವಂತ ಯಾವುದೋ ಒಂದು ಲೋಕದಲ್ಲಿ ಸಾಕಾರನಾಗಿ ಕುಳಿತಿಲ್ಲ. ಅವನು ನಿರಾಕಾರನಾಗಿ ಅಣು ಅಣುವಿನಲ್ಲಿಯೂ ವ್ಯಾಪಕನಾಗಿದ್ದಾನೆ. 
     ಮೋಕ್ಷ ಎನ್ನುವುದು ಯಾವ ನಿಶ್ಚಿತವಾದ ಸ್ಥಳ ಅಥವಾ ಲೋಕವೂ ಅಲ್ಲ. ಅದು ಜೀವಾತ್ಮನ ಒಂದು ಸ್ಥಿತಿ ಮಾತ್ರ. ಆ ಸ್ಥಿತಿಯಲ್ಲಿ ಅವನು, ಅವಳು, ಇಂದ್ರಿಯಗಳು-ಮನಸ್ಸು-ಬುದ್ಧಿಗಳ ಹಿಡಿತದಿಂದ, ದೇಹ ಬಂಧನದಿಂದ ಬಿಡುಗಡೆ ಹೊಂದಿ ಅಶರೀರನಾಗಿರುತ್ತಾನೆ. ಅಧಿದೈವಿಕ, ಅಧಿಭೌತಿಕ ಮತ್ತು ಅಧ್ಯಾತ್ಮಿಕ - ಎಂದರೆ, ಪ್ರಾಕೃತಿಕ ಪ್ರಕೋಪಗಳಿಂದ, ಬೇರೆ ಪ್ರಾಣಿಗಳಿಂದ ಮತ್ತು ತನ್ನ ಸ್ವಂತ ಅಜ್ಞಾನದಿಂದ ಉಂಟಾಗುವ ತಾಪಗಳಿಂದ ಬಿಡುಗಡೆ ಹೊಂದಿ, ಕೇವಲ ಬ್ರಹ್ಮಾನಂದವನ್ನು ಅನುಭವಿಸುತ್ತಾ ಇರುತ್ತಾನೆ. ಈ ಸ್ಥಿತಿಯಲ್ಲಿ, ಎಲ್ಲಿ ಬೇಕಾದರೂ ಹೋಗುವನು, ಆದರೆ ಭೌತಿಕಜಗತ್ತಿನ ಸಂಪರ್ಕ ಮಾತ್ರ ಅವನಿಗಿರುವುದಿಲ್ಲ. ಅವನು ಆ ಸ್ಥಿತಿಯನ್ನು ಮುಟ್ಟಬೇಕಾದರೆ ಜ್ಞಾನ-ಕರ್ಮ-ಉಪಾಸನಾಯುಕ್ತವಾದ ಧಾರ್ಮಿಕಜೀವನವನ್ನು ಪೂರ್ಣತಃ ಪಾಲಿಸಬೇಕು. ಕೊನೆಗೆ ಅಧ್ಯಾತ್ಮಿಕಸಾಧನಾಪಥದಲ್ಲಿ ನಡೆದು ಪರಮಾತ್ಮನ ಸಾಕ್ಷಾತ್ಕಾರವನ್ನೂ ಮಾಡಿಕೊಳ್ಳಬೇಕು. ಪರಮಾತ್ಮನ ಸ್ವರೂಪಜ್ಞಾನಾಭೂತಿಯಿಲ್ಲದೆ ಮೋಕ್ಷ ಅಥವಾ ಮುಕ್ತಿಯ ಪ್ರಾಪ್ತಿ ಸಂಭವವೇ ಅಲ್ಲ. ನಾವು ಮಾಡುವ ಸತ್ಕರ್ಮಗಳು ಮತ್ತು ಉಪಾಸನೆ ಪರಮಾತ್ಮನ ಜ್ಞಾನದಲ್ಲಿ ಸಮಾಪ್ತವಾದಾಗಲೇ ಮೋಕ್ಷ. ಅದಕ್ಕೆ ಬೇರಾವ ಮಾರ್ಗವೂ ಇಲ್ಲ. ಭಗವದ್ವಾಣಿ ಯಜುರ್ವೇದ ಹೇಳುತ್ತಲಿದೆ:-
ವೇದಾಹಮೇತಂ ಪುರುಷಂ ಮಹಾಂತಮಾದಿತ್ಯವರ್ಣಂ ತಮಸಃ ಪರಸ್ತಾತ್ | 
ತಮೇವ  ವಿದಿತ್ಯಾತಿ ಮೃತ್ಯುಮೇತಿ ನಾನ್ಯಃ ಪಂಥಾ ವಿದ್ಯತೇsಯನಾಯ || (ಯಜು.೩೧.೧೮.)
     [ಅಹಮ್] ನಾನು [ತಮಸಃ ಪರಸ್ತಾತ್] ಅಜ್ಞಾನಾಂಧಕಾರದಿಂದ ಮೇಲೆದ್ದು, [ಏತಮ್] ಈ [ಆದಿತ್ಯವರ್ಣಂ] ಪ್ರಾಮಾಣಿಕರಾದ ಅಖಂಡ ಸತ್ಯವಂತರಾದ ಜನರಿಂದ ವರಿಸಲ್ಪಡುವ, ಸ್ವೀಕರಿಸಲ್ಪಡುವ ಅಥವಾ ಅಖಂಡ ತೇಜಸ್ವಿಯಾದ, [ಪುರುಷಮ್] ಬ್ರಹ್ಮಾಂಡವೆಂಬ ಪುರದಲ್ಲಿ ವ್ಯಾಪಕನಾಗಿರುವ ಪರಮಾತ್ಮನನ್ನು [ವೇದ] ತಿಳಿದಿದ್ದೇನೆ. [ತಂ ಏವ ವಿದಿತ್ವಾ] ಅವನನ್ನೇ ತಿಳಿದುಕೊಂಡು ಮಾನವನು, [ಮೃತ್ಯುಂ ಅತಿ ಏತಿ] ಸಾವನ್ನು ಅಥವ ಮರ್ತ್ಯ ಲೋಕವನ್ನು ದಾಟಿ ಹೋಗುತ್ತಾನೆ. [ಅಯನಾಯ] ಆತ್ಮನ ಸದ್ಗತಿಗೆ [ಅನ್ಯಃ ಪಂಥಾ] ಬೇರೆ ಮಾರ್ಗವು [ನ ವಿದ್ಯತೇ] ಇರುವುದೇ ಇಲ್ಲ. 
     ಇದು ಸತ್ಯ, ಪೂರ್ಣ ಸತ್ಯ, ಸಾರ್ವಕಾಲಿಕ ಸತ್ಯ. ತನಗೂ ಭಗವಂತನಿಗೂ ಭೇಟಿಯನ್ನೇರ್ಪಡಿಸುವ ಮಧ್ಯಸ್ಥರಿದ್ದಾರೆಂದು ನಂಬಿ ಕುಳಿತರೆ, ಕೊನೆಗೆ ದುರ್ಗತಿಯೇ ಸಿದ್ಧ. ಸದ್ರೂಪಿಣಿಯಾದ ಪ್ರಕೃತಿಯ ಬಂಧನವನ್ನು ಕಡಿದುಹಾಕಿ, ಸಚ್ಚಿದ್ರೂಪನಾದ ಜೀವಾತ್ಮನು, ಸಚ್ಚಿದಾನಂದ ಸ್ವರೂಪನಾದ ಪರಮಾತ್ಮನನ್ನು ಕಂಡುಕೊಳ್ಳಬೇಕು. ಈ ರೀತಿ ಮಾಡಬೇಕಾದರೆ, ತ್ರಿಕರಣಗಳೂ ಪೂರ್ಣತಃ ಪವಿತ್ರವಾಗಿರಬೇಕು. ಜ್ಞಾನ-ಕರ್ಮೋಪಾಸನೆಗಳು ಸರಿಯಾದ ದಾರಿಯಲ್ಲಿ ನಡೆಯಬೇಕು. ಧರ್ಮಾಂಗತ್ರಯದಿಂದ ನಿರ್ಮಲವಾದ ಕರಣತ್ರಯಗಳು ನಿಜವಾದ ಅರ್ಥದಲ್ಲಿ ಅಮಾನವಜೀವನವನ್ನು ಮಾನವಜೀವನವನ್ನಾಗಿ ಮಾಡುತ್ತವೆ, ಆಗ, ತಾಪತ್ರಯಗಳ ವಿಮೋಚನೆ ಮತ್ತು ಬ್ರಹ್ಮಾನಂದಪ್ರಾಪ್ತಿಗೆ ಮಾನವ ಅರ್ಹನಾಗುತ್ತಾನೆ.
     ಮೋಕ್ಷವೆಂಬ ಸ್ಥಿತಿಯ ಸ್ವರೂಪವೇನು? ಈ ಪ್ರಶ್ನೆಗೆ ಋಗ್ವೇದ ಉತ್ತರವನ್ನು ಕೊಡುತ್ತದೆ:-
ಯತ್ರ ಕಾಮಾ ನಿಕಾಮಾಶ್ಚ ಯತ್ರ ಬ್ರದ್ನಸ್ಯ ವಿಷ್ಟಪಮ್ | 
ಸ್ವಧಾ ಚ ಯತ್ರ ತೃಪ್ತಿಶ್ಚ ತತ್ರ ಮಾಮಮೃತಂ ಕೃಧೀಂದ್ರಾಯೇಂದೋ ಪರಿ ಸ್ರವಃ || (ಋಕ್.೯.೧೧೩.೧೩.)
     [ಯತ್ರ] ಯಾವ ಸ್ಥಿತಿಯಲ್ಲಿ, [ಕಾಮಾಃ] ಕಾಮನೆಗಳೆಲ್ಲಾ [ನಿಕಾಮಾ] ತೀರಿಹೋದ ಕಾಮನೆಗಳಾಗಿವೆಯೋ [ಚ] ಮತ್ತು [ಯತ್ರ] ಯಾವ ಸ್ಥಿತಿಯಲ್ಲಿ [ಬ್ರದ್ನಸ್ಯ] ಜಗದ್ಬಂಧುವಾದ ನಿನ್ನ, [ವಿಷ್ಟಪಮ್] ತಾಪರಹಿತವಾದ ಇರುವಿಕೆಯಿದೆಯೋ, [ಚ] ಮತ್ತು [ಯತ್ರ] ಯಾವ ಸ್ಥಿತಿಯಲ್ಲಿ [ಸ್ವಧಾ] ಆತ್ಮನನ್ನು ಎತ್ತಿಹಿಡಿಯುವ ಆನಂದ, [ಚ] ಮತ್ತು [ತೃಪ್ತಿಃ] ತೃಪ್ತಿ ಇರುವುವೋ, [ತತ್ರ] ಆ ಸ್ಥಿತಿಯಲ್ಲಿ [ಅಮೃತಂ ಮಾ ಕೃಧಿ] ಅಮರನಾದ ನನ್ನನ್ನು ಇಡು. [ಇಂದೋ] ಬಾಳನ್ನು ಸರಸಗೊಳಿಸುವ ಸ್ವಾಮಿ, [ಇಂದ್ರಾಯ] ಇಂದ್ರಿಯವಂತನಾದ ಜೀವನಿಗಾಗಿ [ಪರಿ ಸ್ರವ] ಹರಿದು ಬಾ, ಸುರಿದು ಬಾ. ಭೌತಿಕ ಕಾಮನೆಗಳ ಮತ್ತು ತಾಪಗಳ ಸಮಾಪ್ತಿ, ಆಧ್ಯಾತ್ಮಿಕ ಆನಂದ ಮತ್ತು ತೃಪ್ತಿಯ ಪ್ರಾಪ್ತಿ - ಇದೀಗ ಮೋಕ್ಷಾವಸ್ಥೆ. 
     ಪಾಠಕರು ನೆನಪಿಡಬೇಕಾದ ಮತ್ತೊಂದು ಮುಖ್ಯಾಂಶವಿದೆ. ಸಾಧಾರಣವಾಗಿ ಸರ್ವ ಮತೀಯರೂ ತಮ್ಮ ಕಲ್ಪನೆಯ ಮೋಕ್ಷ ಅನಂತ, ಮುಕ್ತಿ ಪಡೆದ ಜೀವರು ಮರಳಿ ಹಿಂದಿರುಗಿ ಬರುವುದೇ ಇಲ್ಲ ಎಂದು ನಂಬುತ್ತಾರೆ. ಆದರೆ ವೈದಿಕ ಧರ್ಮ ಪೂರ್ಣತಃ ವೈಜ್ಞಾನಿಕ ಹಾಗೂ ಬುದ್ಧಿ ಸಂಗತ. ಈ ಮೋಕ್ಷ ಪ್ರಾಪ್ತಿಗಾಗಿ, ಜೀವರು ಮಾಡಿದ ಸಾಧನೆ, ಮೋಕ್ಷವಾದ ಕೂಡಲೇ ಸಮಾಪ್ತವಾಗಿ ಹೋಗುತ್ತದೆ. ಅಂದರೆ, ಆ ಸಾಧನೆ ಅನಂತವಲ್ಲ, ಸಾಂತ. ಸಾಂತ ಸಾಧನೆಯಿಂದ ಅನಂತ ಮೋಕ್ಷವೆಂತು ಸಿಕ್ಕೀತು? ಎರಡನೆಯದಾಗಿ, ಅಲ್ಪಜ್ಞರಾದ ನಮ್ಮ ಎಣಿಕೆಗೆ ಅಂದದಿದ್ದರೂ ಜೀವಾತ್ಮರುಗಳ ಒಂದು ನಿಶ್ಚಿತ ಸಂಖ್ಯೆಯಿದೆ. ಜೀವರೆಲ್ಲಾ ಅನಾದಿ ಅನಂತರಾಗಿರುವುದರಿಂದ ಅವರು ಸಾಯುವಂತಿಲ್ಲ. ಹೊಸ ಜೀವಾತ್ಮರುಗಳು ಹುಟ್ಟುವಂತೆಯೂ ಇಲ್ಲ. ಹೀಗಾಗಿ ಯಾವುದೋ ಒಂದು ಅತಿ ಸುದೂರ ಭವಿಷ್ಯದಲ್ಲಿ - ಆ ಕಾಲ ಮಾತ್ರ ನಮ್ಮ ಬುದ್ಧಿಗೆ ಅಂದದಿರಬಹುದು -  ಎಲ್ಲಾ ಜೀವರೂ ಮುಕ್ತರಾಗುವ ಸಂಭವವಿದ್ದೇ ಇದೆ. ಸಂಭವವೇಕೆ? ನಿಶ್ಚಯವೇ ಆಗಿದೆ. ಮುಕ್ತಿಪ್ರಾಪ್ತ ಜೀವರು ಹಿಂದಿರುಗುವುದಿಲ್ಲವೆಂದರೆ ಆಮೇಲೆ ಪರಮಾತ್ಮ ಸೃಷ್ಟಿ -ಸ್ಥಿತಿ-ಲಯಗಳನ್ನು ಮಾಡದೆ ಅನಂತಕಾಲಕ್ಕೂ ನಿಷ್ಕ್ರಿಯನಾಗಿ ಕೂಡುವನೇ? ಅದು ವಿಶ್ವಚೇತನದ ಲಕ್ಷಣವೇ? ಹೀಗೆ ಆಲೋಚಿಸಿದಲ್ಲಿ, ಪ್ರಾರಂಭವಾದ ಮೋಕ್ಷ, ಸಮಾಪ್ತವೂ ಆಗಲೇಬೇಕು.
     ವೈದಿಕ ಸಿದ್ಧಾಂತಾನುಸಾರ ಪ್ರತಿಯೊಬ್ಬ ಜೀವಾತ್ಮನ ಮೋಕ್ಷಾವಸ್ಥೆ ಒಂದು ಪರಾಂತ ಕಾಲದವರೆಗಿರುತ್ತದೆ. ಅಂದರೆ, ನಲವತ್ತನೂರು ಲಕ್ಷ ಇಪ್ಪತ್ತು ಸಾವಿರ ವರ್ಷಗಳಿಗೆ (೪೩,೨೦,೦೦೦) ಒಂದು ಚತುರ್ಯುಗ. ಎರಡು ಸಾವಿರ ಚತುರ್ಯುಗಗಳಿಗೆ ಒಂದು ಅಹೋರಾತ್ರಿ. ಇಂತಹ ಮೂವತ್ತು ಅಹೋರಾತ್ರಿಗಳಿಗೆ ಒಂದು ಮಾಸ. ಇಂತಹ ಹನ್ನೆರಡು ಮಾಸಗಳಿಗೆ ಒಂದು ವರ್ಷ. ಇಂತಹ ನೂರು ವರ್ಷಗಳಿಗೆ ಒಂದು ಪರಾಂತಕಾಲ (೩,೧೧,೦೪೦,೦೦,೦೦,೦೦೦ ವರ್ಷ). ಇದು ಒಂದು ಪರಾಂತಕಾಲ. ಇಷ್ಟು ದೀರ್ಘಕಾಲ ಮುಕ್ತಾಷಸ್ಥೆಯಲ್ಲಿರುವುದು ಸಾಮಾನ್ಯ ವಿಷಯವೇ? 
     ಈ ರೀತಿ ವೈದಿಕ ಜೀವನಪಥದ ದ್ವಾದಶ ಅಧ್ಯಾಯಗಳನ್ನು ವಿವರಿಸಿದ್ದೇವೆ. ಇಷ್ಟು ಬುದ್ಧಿಸಂಗತವಾದ ಮಾರ್ಗ ಬೇರಾವುದೂ ಇಲ್ಲವೆಂಬುದು ಖಚಿತ. ಈ ಕೃತಿ ಪಾಠಕರ ಜಿಜ್ಞಾಸೆಯನ್ನು ಕೆರಳಿಸಿ, ಅವರಿಗೆ ವೇದಾಧ್ಯಯನ ಮಾಡಬೇಕು ಎಂಬ ಅಭಿಲಾಷೆಯನ್ನುಂಟುಮಾಡಿದರೆ ನಮ್ಮ ಶ್ರಮ ಸಫಲವಾದಂತೆ.
|| ಓಂ ಶಾಂತಿಃ ಶಾಂತಿಃ ಶಾಂತಿಃ ||
-ಪಂ. ಸುಧಾಕರ ಚತುರ್ವೇದಿ.

2 ಕಾಮೆಂಟ್‌ಗಳು: